Tag: CM Yedyurappa

  • ಪ್ರಜಾಪ್ರಭುತ್ವಕ್ಕೆ ಅರ್ಥ ಗೊತ್ತಿಲ್ಲದ ಪಕ್ಷ ಕಾಂಗ್ರೆಸ್: ಸಚಿವ ಸುಧಾಕರ್

    ಪ್ರಜಾಪ್ರಭುತ್ವಕ್ಕೆ ಅರ್ಥ ಗೊತ್ತಿಲ್ಲದ ಪಕ್ಷ ಕಾಂಗ್ರೆಸ್: ಸಚಿವ ಸುಧಾಕರ್

    -ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡ್ತಿಲ್ಲ

    ಚಿಕ್ಕಬಳ್ಳಾಪುರ: ಪ್ರಜಾಪ್ರಭುತ್ವಕ್ಕೆ ಅರ್ಥವೇ ಗೊತ್ತಿಲ್ಲದ ಪಕ್ಷ ಅಂದ್ರೆ ಅದು ಕಾಂಗ್ರೆಸ್ ಎಂದು ಕೈ ನಾಯಕರ ವಿರುದ್ಧ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಾಗ್ದಾಳಿ ನಡೆಸಿದರು.

    ಚಿಕ್ಕಬಳ್ಳಾಪುರ ನಗರದಲ್ಲಿ ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯ ಕಿರು ಹೊತ್ತಿಗೆ ಬಿಡುಗಡೆ ಕಾರ್ಯಕ್ರಮ ನಡೆಸಿ ನಂತರ ಮಾತನಾಡಿದ ಸಚಿವ ಸುಧಾಕರ್, ರಾಜಸ್ಥಾನ ಸರ್ಕಾರ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಗೊತ್ತಿರದ ಪಕ್ಷ ಕಾಂಗ್ರೆಸ್. ಇತ್ತೀಚೆಗೆ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಧಕ್ಕೆ ಬರ್ತಿದೆ ಎಂದು ಟೀಕಿಸಿದರು.

    ಹಲವು ಸವಾಲುಗಳ ಏಳು ಬೀಳುಗಳ ನಡುವೆ ಸಿಎಂ ಯಡಿಯೂರಪ್ಪ ಯಶಸ್ವಿಯಾಗಿ ಒಂದು ವರ್ಷದ ಆಡಳಿತ ನಡೆಸಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನ ನೀಡಿ ಕೊರೊನಾ ಮಣಿಸಲು ಅವಕಾಶ ಕೊಟ್ಟ ಸಿಎಂ ಯಡಿಯೂರಪ್ಪನವರಿಗೆ ಧನ್ಯವಾದಗಳನ್ನ ಅರ್ಪಿಸಿದರು. ಖಾಸಗಿ ಆಸ್ಪತ್ರೆಗೆಳು ಕೊರೊನಾ ವಿಚಾರವಾಗಿ ಸಂಪೂರ್ಣ ಸಹಕಾರ ಕೊಡ್ತಿಲ್ಲ. ಸಾಧ್ಯವಾದರೆ ಖಾಸಗಿ ಆಸ್ಪತ್ರೆಗಳ ಕೊರೊನಾ ಚಿಕಿತ್ಸಾ ದರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದರು.

  • ‘ರಾಜ್ಯವನ್ನು ಸಂಪೂರ್ಣ ಶಟ್ ಡೌನ್ ಮಾಡಿ’- ಸಿಎಂಗೆ ವೈದ್ಯರ ಸಲಹೆ

    ‘ರಾಜ್ಯವನ್ನು ಸಂಪೂರ್ಣ ಶಟ್ ಡೌನ್ ಮಾಡಿ’- ಸಿಎಂಗೆ ವೈದ್ಯರ ಸಲಹೆ

    – ಕೊರೊನಾ ಸಂಬಂಧ ವೈದ್ಯರ ಜೊತೆ ಸಿಎಂ ಸಭೆ
    – ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ನಿಗಾ ಇಡುವುದೇ ಸಮಸ್ಯೆ

    ಬೆಂಗಳೂರು: ಕೊರೊನಾ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸಿಎಂ ಯಡಿಯೂರಪ್ಪ ಅವರು ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ಸಭೆ ನಡೆಸಿದ್ದಾರೆ.

    ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರನ್ನು ಸಿಎಂ ಮನವಿ ಮಾಡಿದರು. ಈ ವೇಳೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್‍ನಲ್ಲಿ ಇಡುವುದೇ ದೊಡ್ಡ ಸವಾಲು. ಹೀಗಾಗಿ ಸಂಪೂರ್ಣ ಶಟ್ ಡೌನ್ ಮಾಡುವುದೇ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಇದೇ ವೇಳೆ ವೈದ್ಯರು, ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ 30 ಫಿವರ್ ಕ್ಲಿನಿಕ್‍ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಯವರು ಶೇ. 50ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. 100ಕ್ಕೂ ಹೆಚ್ಚು ವೆಂಟಿಲೇಟರ್‍ಗಳನ್ನು ಒದಗಿಸಲು ಮುಂದೆ ಬಂದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಪ್ರತ್ಯೇಕ ಬ್ಲಾಕ್ ಗುರುತಿಸುವ ಜೊತೆಗೆ ಖಾಸಗಿ ಆಸ್ಪತ್ರೆಯೊಂದನ್ನು ಸಹ ಗುರುತಿಸಲು ಸಹಕರಿಸುವುದಾಗಿ ತಿಳಿಸಿದ್ದಾರೆ.

    ಜನರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು “ಮನೆಯಲ್ಲೇ ಇದ್ದು, ಸೋಂಕು ಮುಕ್ತರಾಗಿರಿ” ಎಂಬ ಘೋಷವಾಕ್ಯವನ್ನು ಪಾಲಿಸಬೇಕಾಗಿದೆ. ಕೊರೊನಾ ತಡೆಯಲು, ಸರ್ಕಾರ-ಖಾಸಗಿ ಸಹಭಾಗಿತ್ವವನ್ನು ಬಲಪಡಿಸಲು ತೀರ್ಮಾನಿಸಲಾಯಿತು. ಸರ್ಕಾರ ಕೊರೊನಾ ತಡೆಯುವುದರೊಂದಿಗೆ ಸೋಂಕಿತರ ಚಿಕಿತ್ಸೆಗೂ ಪೂರ್ವ ಸಿದ್ಧತೆ ನಡೆಸುತ್ತಿದೆ. ಸರ್ಕಾರವು ಜನರಿಗೆ ಈ ಸೋಂಕಿನ ಗಂಭೀರತೆಯನ್ನು ಅರಿವು ಮೂಡಿಸಲು ತೀರ್ಮಾನಿಸಿದೆ. ನಗರ ಪ್ರದೇಶದಲ್ಲಿ ವಾಸವಾಗಿರುವ ಜನರು ದಯವಿಟ್ಟು ಇನ್ನೂ ಕೊರೊನಾ ಸೋಂಕು ಮುಕ್ತವಾಗಿರುವ ಹಳ್ಳಿಗಳಿಗೆ ತೆರಳಬಾರದು. ಕೊರೊನಾ ಹರಡುವುದನ್ನು ತಡೆಯಲು ಸಹಕರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

    ಸಭೆಯ ತೀರ್ಮಾನಗಳು
    1. ರಾಜ್ಯಾದ್ಯಂತ ಮಾರ್ಚ್ 31ರ ವರೆಗೆ ಮೊನ್ನೆ ತಿಳಿಸಿದ 9 ಜಿಲ್ಲೆಗಳಲ್ಲಿ ಸೆಕ್ಷನ್ 144ನ್ನು ಮುಂದುವರಿಸಲಾಗುವುದು. ಎಲ್ಲ ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.
    2. ಸಾರಿಗೆ ಮತ್ತು ಗೃಹ ಇಲಾಖೆಯ ಸಭೆ ನಡೆಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಲಾಗಿದೆ. ಹೋಮ್ ಕ್ವಾರಂಟೈನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲು ತೀರ್ಮಾನ
    3. ಜೀವನೋಪಾಯಕ್ಕೆ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಒದಗಿಸಲಾಗುವುದು.
    4. ಬೆಂಗಳೂರು ಕರಗ ಉತ್ಸವ ನಡೆಸಲು ಅವಕಾಶ ಇಲ್ಲ. ದೇವಾಲಯ, ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ.
    5. ಟೆಲಿಕನ್ಸಲ್ಟೇಶನ್ ಗೆ ಅವಕಾಶ. ಚಿಕಿತ್ಸೆ – ಸಲಹೆಗೆ ಹೊರಬರುವ ಅಗತ್ಯ ಇಲ್ಲ.

  • ವಾಕಿಂಗ್ ಮಾಡಿದ್ರೆ ಸೋಂಕು ಹರಡಲ್ಲ- ಯಾಕ್ರಿ ಪಾರ್ಕ್ ಬಂದ್ ಮಾಡ್ತಿರಿ?

    ವಾಕಿಂಗ್ ಮಾಡಿದ್ರೆ ಸೋಂಕು ಹರಡಲ್ಲ- ಯಾಕ್ರಿ ಪಾರ್ಕ್ ಬಂದ್ ಮಾಡ್ತಿರಿ?

    ಬೆಂಗಳೂರು: ನಗರದ ಪಾರ್ಕ್‌ಗಳಲ್ಲಿ ವಾಕ್ ಮಾಡಿದರೆ ಕೊರೊನಾ ಸೊಂಕು ಹರಡುತ್ತಾ? ಯಾಕ್ರಿ ಪಾರ್ಕ್‌ಗಳನ್ನು ಬಂದ್ ಮಾಡುತ್ತೀರಿ ಎಂದು ಸಿಎಂ ಯಡಿಯೂರಪ್ಪ ಅವರ ಆದೇಶದ ವಿರುದ್ಧ ಲಾಲ್ ಬಾಗ್‍ನಲ್ಲಿ ವಾಯುವಿಹಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

    ಪಾರ್ಕ್‌ಗಳಲ್ಲಿ ಜನ ಸಂದಣಿ ಇರುತ್ತೆ. ಹೀಗಾಗಿ ಸೋಂಕು ಹರಡಬಹುದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ, ಪಾರ್ಕ್‌ಗಳನ್ನು ಬಂದ್ ಮಾಡಿ ಎಂದು ಸಿಎಂ ಆದೇಶ ಮಾಡಿದ್ದಾರೆ. ಆದರೆ ಸಿಎಂ ಆದೇಶಕ್ಕೆ ಕಿಮ್ಮತ್ತು ನೀಡದ ಲಾಲಾ ಬಾಗ್ ತೋಟಗಾರಿಕೆ ಆಡಳಿತ ಮಂಡಳಿ, ಪಾರ್ಕ್ ಅನ್ನು ಶುರು ಮಾಡಿದೆ. ಹೀಗಾಗಿ ನಿತ್ಯ ಸಾವಿರಾರು ವಾಕರ್ಸ್ ಮಾಸ್ಕ್ ಧರಿಸದೇ ಲಾಲ್ ಬಾಗ್ ಉದ್ಯಾನವನಕ್ಕೆ ಬರುತ್ತಿದ್ದಾರೆ.

    ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಾರ್ಕ್ ನಲ್ಲಿ ಸೂಚನಾ ಫಲಕಗಳನ್ನು ಕೂಡ ಹಾಕಿಲ್ಲ. ಇನ್ನೂ ಸಿಎಂ ಆದೇಶದ ಕ್ರಮವನ್ನು ಕೆಲ ವಾಯು ವಿಹಾರಿಗಳು ಸ್ವಾಗತಿಸಿದರೆ, ಇನ್ನೂ ಕೆಲವರು ಪಾರ್ಕ್ ಗಳಲ್ಲಿ 30-40 ವರ್ಷದಿಂದ ವಾಕ್ ಮಾಡುತ್ತಿದ್ದೇವೆ. ಏಕಾಏಕಿ ಬಂದ್ ಮಾಡಿದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತೆ. ಎರಡ್ಮೂರು ಗಂಟೆಯಾದರೂ ಪಾರ್ಕ್ ಓಪನ್ ಇದ್ದರೆ ವಾಕರ್ಸ್‍ಗೆ ಅನುಕೂಲವಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟರು.

  • ದೆಹಲಿಯಲ್ಲಿ ಹಿಂಸಾಚಾರ ನಡೆಸಿದವರು ಕ್ರೂರಿಗಳು: ಸಚಿವ ಸುಧಾಕರ್

    ದೆಹಲಿಯಲ್ಲಿ ಹಿಂಸಾಚಾರ ನಡೆಸಿದವರು ಕ್ರೂರಿಗಳು: ಸಚಿವ ಸುಧಾಕರ್

    ಚಿಕ್ಕಬಳ್ಳಾಪುರ: ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆಸಿದವರು ಕ್ರೂರಿಗಳು ಎಂದು ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಹಿಂಸಚಾರಕ್ಕೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳೇ ಕಾರಣ ಎನ್ನುವುದು ಗೋಡೆಯ ಮೇಲೆ ಬರೆದ ಹಾಗೆ ಸ್ಪಷ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ರಿಗೆ ಈ ದೇಶದ ಮೇಲೆ ಪ್ರೀತಿ ಹಾಗೂ ಅಭಿಮಾನವಿಲ್ಲ. ಹಿಂಸಾಚಾರ ನಡೆಸಿದ ಹಲವರು ಹತ್ಯೆಗೆ ಕಾರಣರಾದವರು ಕ್ರೂರಿಗಳು ಎಂದರು.

    ಇದೇ ವೇಳೆ ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಬಹಳ ಸಂತಸದಾಯಕ. ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ಸಿಕ್ಕಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಕೇಂದ್ರ ಹಾಗೂ ರಾಜ್ಯದ ನೀರಾವರಿ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

    ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈಗಾಗಲೇ 39 ಜನರು ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

  • ರಾಜಕೀಯ ಅಂದ್ರೆ ಕಾಲೆಳೆಯೋ ಕಬಡ್ಡಿ- ಕಟೀಲ್ ಮಾತಿನ ಹಿಂದಿನ ಮರ್ಮವೇನು?

    ರಾಜಕೀಯ ಅಂದ್ರೆ ಕಾಲೆಳೆಯೋ ಕಬಡ್ಡಿ- ಕಟೀಲ್ ಮಾತಿನ ಹಿಂದಿನ ಮರ್ಮವೇನು?

    ಉಡುಪಿ: ರಾಜಕೀಯ ಒಂದು ಕಬಡ್ಡಿ ಆಟ. ಅಂಕಣದಲ್ಲಿ ಎಲ್ಲರೂ ಕಾಲು ಎಳೆಯುವವರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾರ್ಮಿಕವಾಗಿ ಮಾತನಾಡಿದರು. ನೂತನ ಬಿಜೆಪಿ ರಾಜ್ಯಾಧ್ಯಕ್ಷರ ಕುಯಿಲಾಡಿ ಸುರೇಶ್ ನಾಯಕ್ ಪದಗ್ರಹಣ ಸಂದರ್ಭ ಮಾತನಾಡಿದರು.

    ಅಧಿಕಾರದ ಮದ ತಲೆಗೆ ಹತ್ತಬಾರದು. ಹೆಗಲಲ್ಲಿ ಜವಾಬ್ದಾರಿ ಹೊತ್ತು ಸಾಗಬೇಕು. ಯಡಿಯೂರಪ್ಪ ಸಿಎಂ ಆದ ಕೂಡಲೇ ನನಗೆ ಅಧಿಕಾರ ಕೊಟ್ಟರು. ಅವರು ಕಾಮಧೇನು ಇದ್ದಂತೆ ರಾಜ್ಯದಲ್ಲಿ ಅವರ ಬಳಿ ಬಂದವರಿಗೆ ಇಲ್ಲ ಎಂಬ ಉತ್ತರ ಸಿಗಲ್ಲ ಎಂದರು.

    ಕಾಂಗ್ರೆಸ್ ಇನ್ನೂ ರಾಜ್ಯ ಅಧ್ಯಕ್ಷರನ್ನು ನೇಮಿಸಿಲ್ಲ. ಕಾಂಗ್ರೆಸ್ ನಾವೀಕನಿಲ್ಲದ ನೌಕೆಯಾಗಿದೆ. ದೇಶದಲ್ಲಿ ಕಾಂಗ್ರೆಸ್ಸಿನ ದೋಣಿ ಮುಳುಗುತ್ತಿದೆ. ಕಾಂಗ್ರೆಸ್ ಗ್ರಾಮ ಪಂಚಾಯತ್ ಗೆಲ್ಲದ ಪರಿಸ್ಥಿತಿಯಲ್ಲಿದೆ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ನಡುವೆ ತಿಕ್ಕಾಟ ಜೋರಾಗಿದೆ. ಒಬ್ಬರಿಗೆ ಅಧಿಕಾರ ಕೊಟ್ಟರೂ ಕಾಂಗ್ರೆಸ್ ಒಡೆದ ಮನೆ ಆಗುತ್ತದೆ. ಯಾರು ಅಧ್ಯಕ್ಷರಾದರೂ ಪಕ್ಷ ಮೂರು ಹೋಳಾಗಿ ಒಡೆಯುತ್ತದೆ ಎಂದರು. ಕಾಂಗ್ರೆಸ್ಸಿನಿಂದ ದೇಶ, ರಾಜ್ಯ ನಡೆಸಲು ಸಾಧ್ಯವಿಲ್ಲ ಎಂದರು.

  • 109 ಅಡಿ ಎತ್ತರದ ಬಸವೇಶ್ವರ ಮೂರ್ತಿ ಸ್ಥಾಪನೆ – ಫೆ. 22ರಂದು ಸಿಎಂ ಅಡಿಗಲ್ಲು

    109 ಅಡಿ ಎತ್ತರದ ಬಸವೇಶ್ವರ ಮೂರ್ತಿ ಸ್ಥಾಪನೆ – ಫೆ. 22ರಂದು ಸಿಎಂ ಅಡಿಗಲ್ಲು

    ಚಿಕ್ಕೋಡಿ/ಬೆಳಗಾವಿ: 109 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಸ್ಥಾಪನೆಯ ಅಡಿಗಲ್ಲು ಪೂಜೆಯನ್ನು ಫೆಬ್ರವರಿ 22ರಂದು ಸಿಎಂ ಯಡಿಯೂರಪ್ಪ ನೆರವೇರಿಸಲಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಲ್ಯಾಣ ಹೆಬ್ಬಾಳದಲ್ಲಿ ಇದೇ ತಿಂಗಳ 21, 22, 23ಕ್ಕೆ ಬಸವ ಉತ್ಸವ ನಡೆಯಲಿದ್ದು, ಈ ಉತ್ಸವದಲ್ಲಿ ಸಚಿವರು, ಕೇಂದ್ರ ಮಂತ್ರಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಈ ಕುರಿತು ಹೆಬ್ಬಾಳ ಗ್ರಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಸವ ಉತ್ಸವ ಸಮಿತಿಯ ನೇತೃತ್ವ ವಹಿಸಿರುವ ಬಸವ ದೇವರು ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.

    ಮೂರು ದಿನದ ಬಸವ ಉತ್ಸವದಲ್ಲಿ ನಾಡಿನ ಅನೇಕ ಮಠಾಧೀಶರು ಹಾಗೂ ಸಮಾಜದ ವಿವಿಧ ಸ್ಥರದ ಎಲ್ಲಾ ಜನಾಂಗದ ಮುಖ್ಯಸ್ಥರು ಭಾಗಿಯಾಗಲಿದ್ದಾರೆ. 22ರಂದು ಕಲ್ಯಾಣ ಹೆಬ್ಬಾಳ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಆಗಮಿಸಲಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲ್ಯಾಣ ಹೆಬ್ಬಾಳದಲ್ಲಿ ಪ್ರತಿಷ್ಠಾಪಿಸಲಿಚ್ಛಿಸಿರುವ 109 ಅಡಿ ಉದ್ಧದ ಬಸವ ಮೂರ್ತಿ ಅಡಿಗಲ್ಲು ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

    ಯಡಿಯೂರಪ್ಪ ಅವರ ಜೊತೆ ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ್ ಜೊಲ್ಲೆ, ಸೇರಿದಂತೆ ಕೇಂದ್ರ ಸಚಿವರಾದ ಸುರೇಶ ಅಂಗಡಿ ಹಾಗೂ ಪ್ರಹ್ಲಾದ ಜೋಶಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಪಂಡಿತ, ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷಾ ಶಂಕರ ಗುಡಸ, ಎಸ್ ವಾಯ್ ಹಂಜಿ ಸಾಹಿತಿ ಚಿಕ್ಕೋಡಿ, ಬಿ.ಎಲ್ ಖೋತ, ಮಹಾಂತೇಶ ಚೌಗಲ, ಸಿದ್ದು ಪಾಟೀಲ್, ಮಹೇಶ ಕಾಡಗಿ ಸೇರಿದಂತೆ ಇತರರು ಹಾಜರಿದ್ದರು.

  • ತೊಗರಿ ಕಣಜದಲ್ಲಿ ಕನ್ನಡದ ಹಬ್ಬ – ಕಲಬುರಗಿಯಲ್ಲಿ ಅಕ್ಷರ ಜಾತ್ರೆಗೆ ಕ್ಷಣಗಣನೆ

    ತೊಗರಿ ಕಣಜದಲ್ಲಿ ಕನ್ನಡದ ಹಬ್ಬ – ಕಲಬುರಗಿಯಲ್ಲಿ ಅಕ್ಷರ ಜಾತ್ರೆಗೆ ಕ್ಷಣಗಣನೆ

    – ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಮುಖ್ಯಮಂತ್ರಿಯಿಂದ ಉದ್ಘಾಟನೆ

    ಕಲಬುರಗಿ: ಇಂದಿನಿಂದ ತೊಗರಿ ಕಣಜ ಕಲಬುರಗಿಯಲ್ಲಿ ಕನ್ನಡದ ಕಂಪು ಮೇಳೈಸಲಿದ್ದು, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ.

    ಕಲಬುರಗಿ ವಿಶ್ವವಿದ್ಯಾಲಯದ 35 ಎಕರೆ ಪ್ರದೇಶದಲ್ಲಿ ಭವ್ಯವಾದ ಮಂಟಪ ನಿರ್ಮಿಸಲಾಗಿದ್ದು, ಮಹಾದ್ವಾರಕ್ಕೆ ಕಡಕೋಳ ಮಡಿವಾಳೇಶ್ವರರ ಹೆಸರಿಡಲಾಗಿದೆ. ಕನ್ನಡ ಹಬ್ಬಕ್ಕಾಗಿ ಕಲಬುರಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಡೆಯೂ ನಾಡಧ್ವಜಗಳು ರಾರಾಜಿಸ್ತಿವೆ.

    ಮುಖ್ಯಬೀದಿಗಳು ರಂಗೋಲಿ, ತಳಿರು ತೋರಣ, ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಬೆಳಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಧ್ವಜಾರೋಹಣ ಮಾಡಲಿದ್ದಾರೆ.

    ಬೆಳಗ್ಗೆ 8.30ಕ್ಕೆ ಸಮ್ಮೇಳಾನಾಧ್ಯಕ್ಷರೂ ಆಗಿರುವ ಕವಿ ಹೆಚ್ ಎಸ್ ವೆಂಕಟೇಶ್‍ಮೂರ್ತಿ ಅವರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆದುಕೊಂಡು ಬರಲಾಗುತ್ತದೆ. ಬೆಳಗ್ಗೆ 11.20ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.

  • ನನಗೂ ಸಚಿವ ಸ್ಥಾನ ಬೇಕು: ಶಾಸಕ ಕುಮಾರಸ್ವಾಮಿ

    ನನಗೂ ಸಚಿವ ಸ್ಥಾನ ಬೇಕು: ಶಾಸಕ ಕುಮಾರಸ್ವಾಮಿ

    ಚಿಕ್ಕಮಗಳೂರು: ಬಿಜೆಪಿ ಪಕ್ಷದಲ್ಲಿ ನಮ್ಮ ಜನಾಂಗದವರು ಯಾರೂ ಮಂತ್ರಿಯಾಗಿಲ್ಲ. ಹಾಗಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಸಾಲದಕ್ಕೆ ನಾನು ಸಿಎಂ ಯಡಿಯೂರಪ್ಪನವರ ನೆಚ್ಚಿನ ಶಿಷ್ಯ. ನನಗೂ ಸಚಿವ ಸ್ಥಾನ ಬೇಕೆಂದು ಜಿಲ್ಲೆಯ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಸಚಿವ ಸ್ಥಾನಕ್ಕೆ ಎರಡನೇ ಬಾರಿ ಕಲ್ಲು ಬೀಸಿದ್ದಾರೆ.

    ಬಲಗೈ ಸಮುದಾಯಕ್ಕೆ ಸಚಿವ ಸ್ಥಾನ ಬೇಕೆಂದು ನಮ್ಮ ಜನಾಂಗದ ಮುಖಂಡರು ಸಿಎಂಗೆ ಒತ್ತಾಯಿಸಿದ್ದಾರೆ. ಬೇರೆ ಪಕ್ಷದಲ್ಲಿ ನಮ್ಮ ಜನಾಂಗದವರು ರಾಷ್ಟ್ರೀಯ ನಾಯಕರಾಗಿದ್ದಾರೆ. ನಾವು ಈ ಪಕ್ಷದಲ್ಲಿ ಬೆಳೆಯುತ್ತಿದ್ದೇವೆ. ನಮ್ಮ ಪಕ್ಷದಲ್ಲಿ ಯಾರೂ ಸಚಿವರಾಗಿಲ್ಲ. ನನಗೆ ಸಚಿವ ಸ್ಥಾನ ಬೇಕೆಂದು ಸಿಎಂ ಬಳಿ ಕೇಳಿದ್ದೇನೆ. ಮುಂದೆ ನೋಡೋಣ ಎಂದಿದ್ದಾರೆ. ಆದರೆ ನನಗೂ ಸಚಿವ ಸ್ಥಾನ ಬೇಕು ಕೊಟ್ಟರೆ ನಿಭಾಯಿಸ್ತಿನಿ ಎಂದು ತಿಳಿಸಿದ್ದಾರೆ.

    ಎಲ್ಲರಿಗೂ ಆಸೆ ಇರುತ್ತೆ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಕೇಳಿದ್ದೇನೆ. ಕೊಡೋದು ಬಿಡೋದು ಸಿಎಂಗೆ ಬಿಟ್ಟ ವಿಚಾರ. ಕೊಡದಿದ್ರೂ ಬೇಜಾರಿಲ್ಲ ಎಂದಿದ್ದಾರೆ. ನಮ್ಮ ಸಮುದಾಯದಲ್ಲಿ ಮೂರು ಜನ ಶಾಸಕರಿದ್ದೇವೆ, ಈ ಬಾರಿ ಹೆಚ್ಚು ನಿರೀಕ್ಷೆ ಇದೆ. ನನಗೆ ಸಚಿವ ಸ್ಥಾನ ನೀಡದಿದ್ರು ಪರವಾಗಿಲ್ಲ. ಮುಖ್ಯಮಂತ್ರಿಗಳು ಕರ್ನಾಟಕದಲ್ಲಿ ಹೆಚ್ಚಿರುವ ನಮ್ಮ ಛಲವಾದಿ ಜನಾಂಗದ ಯಾರಿಗಾದರು ಸಚಿವ ಸ್ಥಾನ ನೀಡಲಿ ಎಂದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಮತ್ತೊಮ್ಮೆ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.

  • ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಬೆಂಗಳೂರು: ಸರ್ಕಾರಿ ಕಚೇರಿ, ಶಾಲೆ, ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಕಡ್ಡಾಯಗೊಳಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ.

    ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‍ಗಳನ್ನು ಕಸದೊಂದಿಗೆ ಎಸೆಯುವುದರಿಂದ ಸಾಕಷ್ಟು ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇನ್ನು ಸಾರ್ವಜನಿಕ ಕಟ್ಟಡಗಳಲ್ಲಿ ಶೌಚಾಲಯಕ್ಕೆ ಎಸೆಯುವುದರಿಂದ ತ್ಯಾಜ್ಯ ನೀರು ಹರಿಯುವ ಒಳಚರಂಡಿಗಳು ಕಟ್ಟಿಕೊಳ್ಳುತ್ತವೆ. ಇದರಿಂದಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಸುಡುವ ಇನ್ಸಿನರೇಟರ್ ಯಂತ್ರವನ್ನು ಕಡ್ಡಾಯಗೊಳಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ.

    ಮುಂದಿನ ಬಜೆಟ್‍ನಲ್ಲಿ ಅಗತ್ಯ ಹಣ ತೆಗೆದಿರಿಸುವಂತೆ ಮನವಿ ಮಾಡಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವತಿಯಿಂದ ಸಾಮಾಜಿಕ ಕಾರ್ಯಕರ್ತ ಎಸ್. ಅಮರೇಶ್ ಪತ್ರ ಬರೆದಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಇರುವ ಮಹಿಳಾ ಕಾಲೇಜುಗಳು, ಐಟಿಬಿಟಿ ಕಂಪನಿ, ಗಾರ್ಮೆಂಟ್ಸ್, ಪಿಜಿಗಳು ಹಾಗೂ ಕಾರ್ಖಾನೆಗಳಲ್ಲಿ ಇನ್ಸಿನರೇಟರ್ (incinerators) ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕ್ರಮ ಜಾರಿ ಮಾಡಲು ಮನವಿ ಮಾಡಲಾಗಿದೆ.

    ಈ ಯಂತ್ರದೊಳಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಹಾಕಿದಾಗ, ಇವು ಸುಟ್ಟು ಭಸ್ಮವಾಗುತ್ತವೆ. ಇದರಿಂದ ವಾಯು ಮಾಲಿನ್ಯವಾಗುವುದಿಲ್ಲ. ವಾಸನೆಯೂ ಬರುವುದಿಲ್ಲ. ಅತ್ಯಾಧುನಿಕ ಇನ್ಸಿನರೇಟರ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಮರೇಶ್, ಇತರೆ ಕಸದೊಂದಿಗೆ ಸ್ಯಾನಿಟರಿ ವೇಸ್ಟ್ ಕೂಡ ಮಿಶ್ರವಾಗುತ್ತಿದೆ. ಇದನ್ನು ವಿಂಗಡಿಸಲಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಉದ್ಯೋಗ ಮಾಡುವ ಜಾಗದಲ್ಲಿ, ಶಾಲಾ ಕಾಲೇಜುಗಳಲ್ಲಿ ಪರಿಹಾರ ಕಂಡುಕೊಳ್ಳಲು ಈ ಇನ್ಸಿನೇಟರ್ ಬಳಸುವಂತೆ ಮಾಡಲು ಮನವಿ ಮಾಡಲಾಗಿದೆ ಎಂದರು.

  • ಸಿಎಂ ಮನೆಯ ವಾಚ್ ಮ್ಯಾನ್- ಜಮೀರ್ ಫೋಟೋ ವೈರಲ್

    ಸಿಎಂ ಮನೆಯ ವಾಚ್ ಮ್ಯಾನ್- ಜಮೀರ್ ಫೋಟೋ ವೈರಲ್

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಮೂರೂವರೆ ವರ್ಷ ಆರಾಮಾಗಿ ಸರ್ಕಾರ ನಡೆಯುತ್ತೆ. ಇದೀಗ ಸಮ್ಮಿಶ್ರ ಸರ್ಕಾರ ಆಳ್ವಿಕೆಯಲ್ಲಿದ್ದಾಗ ಸಚಿವರೊಬ್ಬರು ಹೇಳಿದ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ನಾನು ಅವರ ಮನೆ ಮುಂದೆ 24 ಗಂಟೆ ವಾಚ್ ಮ್ಯಾನ್ ಕೆಲಸ ಮಾಡುತ್ತೇನೆ. ಅದೂ ವಾಚ್ ಮ್ಯಾನ್ ಡ್ರೆಸ್ ಹಾಕಿಕೊಂಡು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಹುರುಪಿನಿಂದ ಹೇಳಿದ್ದರು. ಇದೀಗ ಸರ್ಕಾರ ಫುಲ್ ಸೇವ್ ಆಗಿದ್ದು, ಜಮೀರ್ ಅಹ್ಮದ್ ಅವರಿಗೆ ಮೂರು ವರ್ಷ ಕೆಲಸ ಸಿಕ್ಕಿದೆ ಎಂದು ನಾನೊಬ್ಬ ಬಿಜೆಪಿಯ ಹೆಮ್ಮೆಯ ಕಾರ್ಯಕರ್ತ ಎನ್ನುವ ಫೇಸ್‍ಬುಕ್ ಪೇಜ್ ನಿಂದ ಪೋಸ್ಟ್ ಮಾಡಲಾಗಿದೆ. ಜೊತೆಗೆ ಜಮೀರ್ ಅಹ್ಮದ್ ಫೋಟೋ ಕೂಡ ಹಾಕಲಾಗಿದೆ.

    ಜಮೀರ್ ಅಹ್ಮದ್ ಅವರಿಗೆ ವಾಚ್ ಮ್ಯಾನ್ ಡ್ರೆಸ್ ಹಾಕಿ ಬಿಎಸ್‍ವೈ ನಿವಾಸ ಧವಳಗಿರಿ ಮುಂದೆ ನಿಂತಿರುವ ಹಾಗೆ ಫೋಟೋವನ್ನು ಎಡಿಟ್ ಮಾಡಲಾಗಿದೆ. ವಿಶೇಷವೆನೆಂದರೆ ಈ ಪೋಸ್ಟ್ ಅನ್ನು ಈಗಾಗಲೇ 2900 ಜನ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.