Tag: CM Vijay Roopani

  • ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

    ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

    ಗಾಂಧಿನಗರ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಕಡಿತಗೊಳಿಸಿದೆ.

    ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿದ್ದು, ಈ ಬಗ್ಗೆ ಚರ್ಚೆ ನಡೆಸಿ ಕೆಲ ದಂಡದ ಮೊತ್ತಗಳನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಗುಜರಾತ್ ಸರ್ಕಾರದ ಹೊಸ ನಿಯಮಗಳಂತೆ ಹೆಲ್ಮೆಟ್ ಧರಿಸದಿದ್ದರೆ 500 ರೂ. ದಂಡವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ್ದ ಹೊಸ ತಿದ್ದುಪಡಿ ಕಾಯ್ದೆಯ ಅನ್ವಯ ಈ ಮೊತ್ತ 1 ಸಾವಿರ ರೂ. ಇತ್ತು. ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ಬದಲಾಗಿ 500 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ 2 ಸಾವಿರ ರೂ., ಉಳಿದ ವಾಹನಗಳಿಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ. ಆದರೆ ಲೈಸನ್ಸ್, ಆರ್ ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ಇದನ್ನು ಓದಿ: ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಮಾಲಿನ್ಯ ಪ್ರಮಾಣ ಪತ್ರ ಪಡೆಯದ ವಾಹನಗಳಿಗೆ ನಿಗದಿ ಮಾಡಿದ್ದ 10 ಸಾವಿರಗಳನ್ನು ಸಣ್ಣ ವಾಹನಗಳಿಗೆ 1 ಸಾವಿರ ರೂ. ಭಾರೀ ವಾಹನಗಳಿಗೆ 3 ಸಾವಿರ ರೂ.ಗೆ ಇಳಿಸಲಾಗಿದೆ.

    ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯನ್ನು ಜಾರಿ ಮಾಡಿದ ಸಂದರ್ಭದಿಂದ ಇದುವರೆಗೂ ಭಾರೀ ಮೊತ್ತ ದಂಡ ಪಾವತಿಸಿದ್ದ ಸುದ್ದಿಗಳು ಸಾಕಷ್ಟು ಸದ್ದು ಮಾಡಿದ್ದವು. ಅಲ್ಲದೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಾನು ಕೂಡ ನಿಯಮ ಉಲ್ಲಂಘಿಸಿದ ಪರಿಣಾಮ ದಂಡ ಪಾವತಿ ಮಾಡಿದ್ದೇನೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿ ಅಪಘಾತದಿಂದ ಮೃತಪಟ್ಟ ವ್ಯಕ್ತಿ ಕುಟುಂಬದವರನ್ನು ನೀವು ಕೇಳಿ ನೋಡಿ. ಅವರ ನೋವು ಏನು ಎನ್ನುವುದು ಗೊತ್ತಾಗಬೇಕು. ಹೊಸ ನೀತಿಯಿಂದ ಹಿಂದೆ ಸರಿಯುವುದಿಲ್ಲ, ಕಠಿಣ ನಿಯಮಗಳು ಜಾರಿಯಾದರೆ ಮಾತ್ರ ಶಿಸ್ತು ಉಂಟಾಗಲು ಸಾಧ್ಯ ಅಭಿಪ್ರಾಯ ಪಟ್ಟಿದ್ದರು. ಆದರೆ ನಿತಿನ್ ಗಡ್ಕರಿ ಅವರು ಹೇಳಿಕೆ ಬೆನ್ನಲ್ಲೇ ಗುಜರಾತ್ ಸರ್ಕಾರವೇ ದಂಡ ಮೊತ್ತಕ್ಕೆ ಕತ್ತರಿ ಹಾಕಿದೆ. ಇದನ್ನು ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘನೆ- ಬೈಕಿಗೆ 23, 24 ಸಾವಿರ ರೂ, ಆಟೋಗೆ 32 ಸಾವಿರ ರೂ. ದಂಡ