Tag: CM Nitish Kumar

  • ಪ್ರವಾಹಕ್ಕೆ ನಲುಗಿದ ಬಿಹಾರ- 13 ಸಾವು, ಸಂಕಷ್ಟದಲ್ಲಿ 18 ಲಕ್ಷ ಮಂದಿ

    ಪ್ರವಾಹಕ್ಕೆ ನಲುಗಿದ ಬಿಹಾರ- 13 ಸಾವು, ಸಂಕಷ್ಟದಲ್ಲಿ 18 ಲಕ್ಷ ಮಂದಿ

    ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆಗೆ ನದಿಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು ರಾಜ್ಯದ 9 ಜಿಲ್ಲೆಗಳು ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಈವರೆಗೆ 13 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಸುಮಾರು 18 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗಿದೆ.

    ಅರೇರಿಯಾ, ಕಿಶನ್‍ಗಂಜ್, ಶಿಯೋಹರ್, ಸೀತಮಾರ್ಹಿ, ಪೂರ್ವ ಚಂಪಾರನ್, ಸುಪಾಲ್, ಮಧುಬನಿ, ದರ್ಭಂಗಾ ಮತ್ತು ಮುಜಾಫರ್‍ಪುರ ಜಿಲ್ಲೆಗಳು ಪ್ರವಾಹಕ್ಕೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಈ ಜಿಲ್ಲೆಗಳ ಸುಮಾರು 18 ಲಕ್ಷ ಮಂದಿ ಪರದಾಡುತ್ತಿದ್ದಾರೆ. ಈವರೆಗೆ ಪ್ರವಾಹಕ್ಕೆ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಕಾಣೆಯಾಗಿದ್ದಾರೆ.

    ವರದಿಯಾಗಿರುವ ಮೃತರಲ್ಲಿ 9 ಮಂದಿ ಅರೇರಿಯಾ ಜಿಲ್ಲೆಯ ನಿವಾಸಿಗಳು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಬೈದ್ಯನಾಥ ಯಾದವ್ ತಿಳಿಸಿದ್ದಾರೆ. ಜೊತೆಗೆ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನೂ ಕೂಡ ಘೋಷಿಸಲಾಗಿದೆ.

    ಸೀತಾಮರ್ಹಿ ಜಿಲ್ಲಾಡಳಿತ ಅಧಿಕಾರಿಗಳ ಪ್ರಕಾರ, ಪ್ರವಾಹಕ್ಕೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ, ನಾಲ್ವರು ನಾಪತ್ತೆಯಾಗಿದ್ದಾರೆ. ಆದರೆ ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತವು ಸರಿಯಾದ ಕ್ರಮ ಕೈಗೊಂಡಿಲ್ಲ. ಸಹಾಯವಾಣಿಗಾಗಿ ಸ್ಥಾಪಿಸಲಾದ ದೂರವಾಣಿ ಮಾರ್ಗವೂ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಅರೇರಿಯಾದಲ್ಲಿ ಸ್ಥಾಪಿಸಲಾದ ನಿಯಂತ್ರಣ ಕೊಠಡಿಯಲ್ಲಿ ಅಧಿಕಾರಿಗಳು ವಿಪತ್ತು ನಿರ್ವಹಣೆಯನ್ನು ಹೊರತುಪಡಿಸಿ ಇತರೆ ಕೆಲಸಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.

    ಸಾಮಾನ್ಯ ಜನರು ಕಂಟ್ರೋಲ್ ರೂಮ್‍ಗೆ ಕರೆ ಮಾಡಬೇಕಾದರೆ ಮೊದಲು ಸ್ಥಳೀಯ ಮುಖಂಡರನ್ನು ಅವರು ಸಂಪರ್ಕಿಸಬೇಕು. ಆ ನಂತರ ಕಟ್ರೋಲ್ ರೂಮ್‍ಗೆ ಕರೆ ಕನೆಕ್ಟ್ ಮಾಡಲಾಗುತ್ತದೆ. ಹೀಗಾಗಿ ಅಧಿಕಾರಿಯೊಬ್ಬರು ತಮ್ಮ ವೈಯಕ್ತಿಕ ಫೋನ್ ನಂಬರ್ ಕೆಲವು ಸ್ಥಳೀಯ ಪಂಚಾಯತ್ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಪ್ರವಾಹದಿಂದ ತತ್ತರಿಸಿರುವ ಬಿಹಾರದ ಕುರಿತು ಸಿಎಂ ನಿತೀಶ್ ಕುಮಾರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಆದರೆ ಸಿಎಂ ಅವರ ಈ ನಡೆಗೆ ವಿರೋಧ ಪಕ್ಷದ ಕೆಲ ನಾಯಕರು ವಿರೋಧಿಸಿದ್ದು, ರಾಷ್ಟ್ರೀಯ ಲೋಕ ಸಮತ ಪಕ್ಷದ ನಾಯಕ ಉಪೇಂದ್ರ ಖುಷ್ವಾಹ ಅವರು ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.

    ಈ ರೀತಿ ಪ್ರತಿ ವರ್ಷ ರಾಜ್ಯದಲ್ಲಿ ಪ್ರವಾಹ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಿ ಸಿಎಂ ವ್ಯರ್ಥ ಮಾಡುತ್ತಿದ್ದಾರೆ. ಇದರ ಬದಲು ಪ್ರವಾಹದ ಕುರಿತು ಕ್ರಮ ಕೈಗೊಂಡು, ಜನರನ್ನು ಪ್ರವಾಹದ ಸಂಕಷ್ಟದಿಂದ ದೂರ ಮಾಡುವ ಕೆಲಸ ಮಾಡಬೇಕು. ಸರ್ಕಾರ ಪ್ರವಾಹ ಬಂದಾಗ ಜನರು ಎದುರಿಸುವ ಸಮಸ್ಯೆಗೆ ಪರಿಹಾರ ಬಿಡುಗಡೆ ಮಾಡುವಲ್ಲಿ ಸೋತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಎಂದಿಗೂ ಕ್ಯಾಬಿನೆಟ್ ಸ್ಥಾನ ಕೇಳಲ್ಲ: ನಿತೀಶ್ ಕುಮಾರ್

    ಎಂದಿಗೂ ಕ್ಯಾಬಿನೆಟ್ ಸ್ಥಾನ ಕೇಳಲ್ಲ: ನಿತೀಶ್ ಕುಮಾರ್

    ಪಾಟ್ನಾ: ನರೇಂದ್ರ ಮೋದಿ ಸರ್ಕಾರ ಸಚಿವ ಸ್ಥಾನ ಹಂಚಿಕೆ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯಕ್ಕೆ ಜೆಡಿಯು ನಾಯಕ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತೆರೆ ಎಳೆದಿದ್ದಾರೆ.

    ಸಚಿವ ಸ್ಥಾನ ಹಂಚಿಕೆ ಭಿನ್ನಾಭಿಪ್ರಾಯದ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾವು ಎಂದಿಗೂ ಕ್ಯಾಬಿನೆಟ್ ಸ್ಥಾನ ಕೇಳಲ್ಲ. ಆದರೆ ಎನ್‍ಡಿಎ ಮೈತ್ರಿ ಪಕ್ಷವಾಗಿ ಇರುವುದಕ್ಕೆ ಹೆಚ್ಚು ಸಂತೋಷವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? 

    ಬಿಜೆಪಿ ನಾಯಕರು ಜೆಡಿಯು ಪಕ್ಷಕ್ಕೂ ಒಂದು ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು. ಒಂದು ಸ್ಥಾನದ ಅವಶ್ಯಕತೆ ನಮಗಿಲ್ಲ, ಈ ಕುರಿತು ಪಕ್ಷದ ಮುಖಂಡರ ಸಲಹೆ ಪಡೆಯಬೇಕಿದೆ ಎಂದು ತಿಳಿಸಿದ್ದೆ. ಅದೇ ರೀತಿ ಪಕ್ಷದ ಸಲಹೆ ಕೇಳಿದಾಗ, ಎನ್‍ಡಿಎ ಒಕ್ಕೂಟದಲ್ಲಿ ಇರೋಣ ಹಾಗೂ ನಮಗೆ ಸಚಿವ ಸ್ಥಾನ ಬೇಡ ಎಂಬ ಒಮ್ಮತದ ಅಭಿಪ್ರಾಯ ಬಂದಿದೆ. ಎನ್‍ಡಿಎ ಮೈತ್ರಿ ಕೂಟದ ಜೊತೆಗೆ ಸಾಗುತ್ತೇವೆ, ನಮ್ಮಲ್ಲಿ ಯಾವುದೇ ಮುನಿಸು ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕಕ್ಕೆ ಬಂಪರ್: ಡಿವಿಎಸ್, ಜೋಶಿ, ಅಂಗಡಿಗೆ ಖಾತೆ ಹಂಚಿಕೆ

    ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಎನ್‍ಡಿಎ ಮೈತ್ರಿಕೂಟದ ಪಕ್ಷಗಳಿಗೆ ತಲಾ ಒಂದು ಮಂತ್ರಿ ಸ್ಥಾನ ನೀಡಲು ಬಿಜೆಪಿ ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಜೆಡಿಯು ಪಕ್ಷದ ಸಂಸದ, ನಿತೀಶ್ ಕುಮಾರ್ ಅವರ ಆಪ್ತ ರಾಮಚಂದ್ರ ಪ್ರತಾಪ್ ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಲು ಎನ್‍ಡಿಎ ಮುಂದಾಗಿತ್ತು. ಕೇವಲ ಒಂದು ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮೋದಿ ಸಂಪುಟದಿಂದ ಹೊರಗುಳಿಯಲು ನಿರ್ಧರಿಸಿತ್ತು. ನರೇಂದ್ರ ಮೋದಿ ಹಾಗೂ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಅರ್ಧಗಂಟೆ ಮುನ್ನ ಪಕ್ಷದ ವರಿಷ್ಠ ನಿತೀಶ್ ಕುಮಾರ್ ಅವರು ಈ ವಿಷಯ ಪ್ರಕಟಿಸಿದ್ದರು.

    ನಮಗೆ ಸಂಪುಟದಲ್ಲಿ ಅತಿ ಕಡಿಮೆ ಪ್ರಾತಿನಿಧ್ಯ ನೀಡಲಾಗಿದೆ. ಅದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಆದರೆ ಎನ್‍ಡಿಎ ಜೊತೆಗೆ ನಮ್ಮ ಬಾಂಧವ್ಯ ಮುಂದುವರಿಯಲಿದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದರು.

  • ನೀವು ಹೇಳಿದವರಿಗೆ ನಿಮ್ಮ ಪತಿ ಮತ ಹಾಕದಿದ್ರೆ ಊಟ ಕೊಡಬೇಡಿ: ನಿತೀಶ್ ಕುಮಾರ್

    ನೀವು ಹೇಳಿದವರಿಗೆ ನಿಮ್ಮ ಪತಿ ಮತ ಹಾಕದಿದ್ರೆ ಊಟ ಕೊಡಬೇಡಿ: ನಿತೀಶ್ ಕುಮಾರ್

    ಪಾಟ್ನಾ: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮಹಿಳೆಯರಿಗೆ ವಿಚಿತ್ರ ಸಲಹೆ ನೀಡಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

    ಬಿಹಾರದ ಮಧುಬಾನಿಯಲ್ಲಿ ಬುಧವಾರ ನಡೆದ ಪ್ರಚಾರದ ವೇಳೆ ಮಾತನಾಡಿದ ಅವರು, ಪತಿ ಹಾಗೂ ಮನೆಯಲ್ಲಿರುವ ಪುರುಷರು ನೀವು ಹೇಳಿದ ಪಕ್ಷಕ್ಕೆ ವೋಟ್ ಹಾಕಿದರೇ ಮಾತ್ರ ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿ. ಒಂದು ವೇಳೆ ಅವರು ನಿಮ್ಮ ಮಾತು ಮೀರಿ ಬೇರೆ ಪಕ್ಷಕ್ಕೆ ಮತಹಾಕಿದರೆ ಅವರನ್ನ ಒಂದು ದಿನ ಉಪವಾಸವಿಡಿ ಎಂದು ಸಮಾವೇಶದಲ್ಲಿ ಸೇರಿದ್ದ ಮಹಿಳೆಯರಿಗೆ ತಿಳಿಸಿದ್ದಾರೆ.

    ನಿತೀಶ್ ಕುಮಾರ್ ಅವರು ಬಿಜೆಪಿಯ ಹಾಲಿ ಸಂಸದ ಹುಕುಮ್‍ದೇವ್ ನಾರಾಯಣ ಅವರ ಪುತ್ರ, ಮಧುಬಾನಿ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಅಶೋಕ್ ಯಾದವ್ ಪರ ನಿನ್ನೆ ಭರ್ಜರಿ ಪ್ರಚಾರ ಮಾಡಿದರು. ಈ ಮೂಲಕ ಅಶೋಕ್ ಯಾದವ್ ಅವರಿಗೆ ಮತ ಹಾಕುವಂತೆ ಮಹಿಳೆಯರಿಗೆ ಮನವಿ ಮಾಡಿಕೊಂಡಿದ್ದಾರೆ.

    ಜೆಡಿಯು ಬಿಜೆಪಿ ನೇತೃತ್ವದ ಎನ್‍ಡಿಎ ಭಾಗವಾಗಿದೆ. ಮಹಿಳೆಯರಿಗೆ ಅವಕಾಶ ನೀಡುವ ಉದ್ದೇಶದಿಂದ ಕವಿತಾ ಸಿಂಗ್ ಅವರಿಗೆ ಬಿಹಾರದ ಸಿವನ್ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ರಮಾ ದೇವಿ ಅವರು ಶೋಹರ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಲೋಕ ಜನಶಕ್ತಿ ಪಾರ್ಟಿ (ಎಲ್‍ಜೆಪಿ) ವೀಣಾ ಸಿಂಗ್ ಅವರು ವೈಶಾಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

  • ಸಿಎಂ ನಿತೀಶ್ ಕುಮಾರ್‍ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಸಿಎಂ ನಿತೀಶ್ ಕುಮಾರ್‍ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಪಾಟ್ನಾ: ಬಿಹಾರದ ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ಸಿಎಂ ನೀತಿಶ್ ಕುಮಾರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಹಾಡಿ ಹೊಗಳಿದ್ದಾರೆ.

    ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಂಡ ನಂತರ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. ಇಂದು ಮುಂಜಾನೆ ಪ್ರಧಾನಿ ಮೋದಿಯವರನ್ನು ಸ್ವತಃ ನಿತೀಶ್ ಕುಮಾರ್ ಅವರೇ ಕೆಂಪು ಗುಲಾಬಿಯನ್ನು ನೀಡಿ ಸ್ವಾಗತಿಸಿದರು.

    ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪಟ್ನಾ ವಿವಿ ಉತ್ತಮ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಿದ್ದು. ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುತ್ತಿದೆ. ವಿವಿಯಲ್ಲಿ ಮತ್ತಷ್ಟು ಹೊಸ ಅವಿಷ್ಕಾರಗಳನ್ನು ಕೈಗೊಳ್ಳ ಬೇಕಿದೆ ಎಂಬ ಸಲಹೆಯನ್ನು ನೀಡಿದರು. ನಂತರ ಪಟ್ನಾ ವಿವಿಯನ್ನು ಕೇಂದ್ರಿಯ ವಿಶ್ವವಿದ್ಯಾಲಯವಾಗಿ ಘೋಷಣೆ ಮಾಡಿರುವ ಕುರಿತು ಮಾಹಿತಿ ನೀಡಿದರು.

    ಸಿಎಂ ನೀತಿಸ್ ಕುಮಾರ್ ರಾಜ್ಯದ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳ ಕುರಿತು ಪ್ರಸ್ಥಾಪಿಸಿದ ಅವರು 2022ರ 75 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ದೇಶದ ಅಭಿವೃದ್ಧಿ ಹೊಂದಿರುವ ರಾಜ್ಯವಾಗಿ ಬಿಹಾರ ರೂಪುಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ವಿಶ್ವವಿದ್ಯಾಲಯ ಶತಮಾನೋತ್ಸವ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿಯವರು ಬಿಹಾರದಲ್ಲಿ 5 ಸಾವಿರ ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗಂಗಾ ಶುದ್ಧಿಕರಣ ಯೋಜನೆಯ ಅಡಿಯಲ್ಲಿ ಗಂಗಾ ನದಿಗೆ 1,200 ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣ ಮಾಡುವ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ವಿವಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರಿಗೂ ಆಹ್ವಾನ ನೀಡಲಾಗಿದ್ದರೂ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇನ್ನು ಶತೃಘ್ನ ಸಿನ್ಹಾ ತಮಗೆ ಯಾವುದೇ ಆಹ್ವಾನವನ್ನು ನೀಡಿರಲಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿದ ವಿವಿ ಉಪಕುಲಪತಿ ರಾಸ್ ಬಿಹಾರಿ ಬೋಸ್ ಆಹ್ವಾನ ಪತ್ರಿಕೆಗಳ ಮುದ್ರಣಾ ತಡವಾಗಿರುವುದರಿಂದ ಈ ರೀತಿಯ ಗೊಂದಲ ಉಂಟಾಗಿದೆ. ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಹಾಗೂ ಯಶವಂತ್ ಸಿನ್ಹಾ ಅವರಿಗೂ ಆಹ್ವಾವನ್ನು ನೀಡಲಾಗಿದೆ ಎಂದು ಸ್ವಷ್ಟೀಕರಣ ನೀಡಿದರು. ವಿವಿಯ ಶತಮಾನೋತ್ಸವನ್ನು ಡಿಸೆಂಬರ್ 10 ರಂದು ವಿಜೃಂಭಣೆಯಿಂದ ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿವಿಯ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಆಹ್ವಾನಿಸುವುದಾಗಿ ತಿಳಿಸಿದರು.

    ಈ ಕಾರ್ಯಕ್ರಮದ ಬಳಿಕ ನರೇಂದ್ರ ಮೋದಿ ಅವರು ಹೊಸದಾಗಿ ನಿರ್ಮಾಣ ಮಾಡಿರುವ ಮ್ಯೂಸಿಯಂಗೆ ಭೇಟಿ ನೀಡಿದರು.