Tag: CM Naveen Patnaik

  • ರೈಲು ದುರಂತದ ಬೆನ್ನಲ್ಲೇ ಕೋಲ್ಕತ್ತಾಗೆ ಉಚಿತ ಬಸ್‌ ಸೇವೆ ಘೋಷಿಸಿದ ಒಡಿಶಾ ಸಿಎಂ

    ರೈಲು ದುರಂತದ ಬೆನ್ನಲ್ಲೇ ಕೋಲ್ಕತ್ತಾಗೆ ಉಚಿತ ಬಸ್‌ ಸೇವೆ ಘೋಷಿಸಿದ ಒಡಿಶಾ ಸಿಎಂ

    ಭುವನೇಶ್ವರ: ಒಡಿಶಾ (Odisha Train Tragedy) ರೈಲು ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ (Naveen Patnaik), ಕೋಲ್ಕತ್ತಾಗೆ (Kolkata) ಉಚಿತ ಬಸ್‌ ಸೇವೆ ಒದಗಿಸಲಾಗಿದೆ ಎಂದು ಘೋಷಿಸಿದ್ದಾರೆ.

    ಪ್ರಯಾಣಿಕರ ಹೆಚ್ಚಿನ ಪ್ರಯೋಜನವನ್ನು ಗಮನದಲ್ಲಿಟ್ಟುಕೊಂಡು ಸಿಎಂ ಪಟ್ನಾಯಕ್, ಇಂದಿನಿಂದ ಪುರಿ, ಭುವನೇಶ್ವರ ಮತ್ತು ಕಟಕ್‌ನಿಂದ ಕೋಲ್ಕತ್ತಾಗೆ ಉಚಿತ ಬಸ್ ಸೇವೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

    ಪ್ರತಿದಿನ ಸುಮಾರು 50 ಬಸ್ಸುಗಳು ಕೋಲ್ಕತ್ತಾ ಮತ್ತು ಒಡಿಶಾದ ನಡುವಿನ ಮೂರು ನಗರಗಳಲ್ಲಿ ಸಂಚಾರ ನಡೆಸಲಿವೆ. ಇದಕ್ಕೆ ತಗಲುವ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು. ಬಾಲಸೋರ್ ಮಾರ್ಗದಲ್ಲಿ ಸಾಮಾನ್ಯ ರೈಲು ಸೇವೆಯನ್ನು ಮರುಸ್ಥಾಪಿಸುವವರೆಗೆ ಈ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಒಡಿಶಾದಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಿಂದಾಗಿ ಈವರೆಗೆ 270 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1,000 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಂದು ಮುಂಜಾನೆ ಮುಖ್ಯಮಂತ್ರಿ ಪಟ್ನಾಯಕ್ ಅವರು, ರಾಜ್ಯದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ರೈಲು ಡಿಕ್ಕಿಯಾದ ಶಬ್ದಕ್ಕೆ ಹೆದರಿ ಬಿಗಿಯಾಗಿ ಕಿಟಕಿ ಸರಳುಗಳನ್ನು ಹಿಡಿದು ಬಚಾವಾದೆ – ದುರಂತದಲ್ಲಿ ಬದುಕುಳಿದವನ ಮಾತು

  • ನವೀನ್ ಪಟ್ನಾಯಕ್ ಅದ್ಭುತ ಕೆಲಸ ಮಾಡಿದ್ದಾರೆ: ಮೋದಿ ಪ್ರಶಂಸೆ

    ನವೀನ್ ಪಟ್ನಾಯಕ್ ಅದ್ಭುತ ಕೆಲಸ ಮಾಡಿದ್ದಾರೆ: ಮೋದಿ ಪ್ರಶಂಸೆ

    – ಒಡಿಶಾದಲ್ಲಿ ಪ್ರಧಾನಿಯಿಂದ ವೈಮಾನಿಕನ ವೀಕ್ಷಣೆ

    ಭುವನೇಶ್ವರ್: ಫೋನಿ ಚಂಡಮಾರುತದ ಉಂಟಾಗಬಹುದಾಗಿದ್ದ ಭಾರೀ ಹಾನಿಯನ್ನು ತಡೆಗಟ್ಟುವಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವೈಮಾನಿಕ ವೀಕ್ಷಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಪ್ರಧಾನಿ ಅವರು, ಒಡಿಶಾದ ಜನತೆ, ಅದರಲ್ಲೂ ಮೀನುಗಾರರು ಸರ್ಕಾರದ ಮುನ್ಸೂಚನೆಯನ್ನು ಪಾಲಿಸಿದ್ದಾರೆ. ಹೀಗಾಗಿ ಪ್ರಾಣಹಾನಿ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರದ ಸೂಚನೆಯನ್ನು ಪಾಲಿಸಿದ ಜನತೆಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.

    ಸಂತ್ರಸ್ತರಿಗೆ ಆಹಾರ, ವಸತಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ನಡೆಯುತ್ತಿದೆ. ಒಡಿಶಾ ಸರ್ಕಾರಕ್ಕೆ ಕೇಂದ್ರದಿಂದ ಈಗಾಗಲೇ 1 ಸಾವಿರ ಕೋಟಿ ರೂ. ಸಹಾಯ ನೀಡಲಾಗಿದೆ. ಹೆಚ್ಚುವರಿಯಾಗಿ 1 ಸಾವಿರ ಕೋಟಿ ರೂ. ನೀಡಲಾಗುತ್ತದೆ. ರಕ್ಷಣಾ ಪಡೆ ಸೇರಿದಂತೆ ಎಲ್ಲ ರೀತಿಯ ಸಹಾಯವನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು, ಒಡಿಶಾ ರಾಜ್ಯಪಾಲ ಗಣೇಶಿ ಲಾಲ್, ಸಿಎಂ ನವೀನ್ ಪಟ್ನಾಯಕ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ರಾಜ್ಯ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು.

    ಫೋನಿ ಚಂಡಮಾರುತದ ಅಬ್ಬರಕ್ಕೆ ಒಡಿಶಾ ಕರಾವಳಿ ಪ್ರದೇಶದಲ್ಲಿ ಭಾರೀ ಹಾನಿಯಾಯಾಗಿದ್ದು, 30 ಜನರು ಮೃತಪಟ್ಟಿದ್ದಾರೆ. ಪುರಿ ಜಿಲ್ಲೆಯೊಂದರಲ್ಲಿಯೇ 21 ಮಂದಿ ಸಾವನ್ನಪ್ಪಿದ್ದಾರೆ.

    ಫೋನಿ ಚಂಡಮಾರುತವು ಪ್ರತಿ ಗಂಟೆಗೆ 175 ಕಿ.ಮೀ ವೇಗ ಬೀಸಿತ್ತು. ಈ ಮೂಲಕ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಕೂಡ ಆಗಿದೆ. ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಅಪ್ಪಳಿಸಿದ ಅತ್ಯಂತ ಪ್ರಬಲ ಚಂಡಮಾರುತ ಇದಾಗಿದೆ.

    ಒಡಿಶಾದ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಕ್ಕೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಹಾಗೂ ತಮಿಳುನಾಡು ಸರ್ಕಾರವು ತಲಾ 10 ಕೋಟಿ ರೂ. ಪರಿಹಾರ ಘೋಷಣೆ ಮಾಡಿದೆ.