Tag: CM Lingappa

  • ಸಂವಿಧಾನ ಮುಗಿಸಿ, ಹಿಂದೂ ರಾಷ್ಟ್ರವನ್ನಾಗಿಸುವುದು ಬಿಜೆಪಿಯ ಹಿಡನ್ ಅಜೆಂಡಾ- ಸಿ.ಎಂ.ಲಿಂಗಪ್ಪ

    ಸಂವಿಧಾನ ಮುಗಿಸಿ, ಹಿಂದೂ ರಾಷ್ಟ್ರವನ್ನಾಗಿಸುವುದು ಬಿಜೆಪಿಯ ಹಿಡನ್ ಅಜೆಂಡಾ- ಸಿ.ಎಂ.ಲಿಂಗಪ್ಪ

    ರಾಮನಗರ: ನಮ್ಮದು ಧರ್ಮ ನಿರಪೇಕ್ಷೆ ದೇಶವಾಗಿದ್ದರೂ ಒಂದು ಧರ್ಮೀಯರ ವಿರುದ್ಧ ಬಿಜೆಪಿ ಹಗೆ ಸಾಧಿಸಲು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ ಎಂದು ಕಾಂಗ್ರೆಸ್ಸಿನ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಕಿಡಿಕಾರಿದರು.

    ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರ ಹಿಡನ್ ಅಜೆಂಡಾ ಸಂವಿಧಾನವನ್ನ ಮುಗಿಸುವುದಾಗಿದೆ. ಈ ಮೂಲಕ ದೇಶದಲ್ಲಿನ ಮುಸ್ಲಿಮರನ್ನ ಹೇಗಾದರೂ ರಾಷ್ಟ್ರದಿಂದ ಹೊರಗೆ ಹಾಕಿ ಹಿಂದೂ ರಾಷ್ಟ್ರವನ್ನ ಸೃಷ್ಟಿ ಮಾಡಬೇಕು, ಒಂದೇ ಸಂಸ್ಕೃತಿ ತರಬೇಕು. ಅಲ್ಲದೆ ಒಂದು ದೇಶ ಒಂದು ಚುನಾವಣೆ ಜಾರಿಗೆ ತರಬೇಕು ಎಂಬ ಗುಪ್ತ ಪ್ರಣಾಳಿಕೆಯನ್ನ ಹೊಂದಿದೆ ಎಂದು ತಿಳಿಸಿದರು.

    ಈಗಾಗಲೇ ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಂಗದ ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿದೆ. ನ್ಯಾಯದ ಪರ ತೀರ್ಪು ಸಿಗಲಿದೆ. ಆದರೆ ಬಿಜೆಪಿಯ ಈ ನಿಲುವು ಜನಾಂಗ ತಾರತಮ್ಯ ಸಂವಿಧಾನ ದೃಷ್ಟಿಯಲ್ಲಿ ಸಾರ್ಥಕವಾಗುವುದಿಲ್ಲ. ಇವರ ವರ್ತನೆ ಇದೇ ರೀತಿ ನಡೆದರೆ ಬೃಹತ್ ಸಂವಿಧಾನ ರಾಷ್ಟ್ರ ಬಹುದಿನ ಉಳಿಯುವುದಿಲ್ಲ ಎಂದರು.

    ಬಾಬಾ ರಾಮ್ ದೇವ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು, ಸ್ವಾಮೀಜಿಯೊಬ್ಬರು ದೇಶಕ್ಕೆ ಒಂದೇ ಭಾಷೆ ಇರಬೇಕು ಅದು ಹಿಂದಿಯಾಗಿರಬೇಕು ಎನ್ನುತ್ತಾರೆ. ಇನ್ನೊಬ್ಬರು ದೇಶಾದ್ಯಂತ ಒಂದೇ ರೇಷನ್ ಕಾರ್ಡ್ ಇರಬೇಕು ಎನ್ನುತ್ತಾರೆ. ಮುಂದೊಂದು ದಿನ ಇವರು ತೊಡುವ ವಸ್ತ್ರವನ್ನೇ ಎಲ್ಲರೂ ತೊಡಬೇಕು ಎಂದೂ ಹೇಳುತ್ತಾರೆ ಎಂದು ಕಿಡಿಕಾರಿದರು.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹುಚ್ಚು ದರ್ಬಾರ್ ನಡೆಸುತ್ತಿದೆ. ಅವರ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.24ರ ಮಂಗಳವಾರ ಪ್ರತಿಭಟನೆ ನಡೆಸುತ್ತೇವೆ. ಶಾಂತಿಯುತವಾಗಿ ನಗರದ ರೈಲ್ವೆ ನಿಲ್ದಾಣದಿಂದ ಡಿಸಿ ಕಚೇರಿ ವರೆಗೆ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ತಲುಪಿಸಲಾಗುವುದು ಎಂದು ತಿಳಿಸಿದರು.

  • ಹೋರಾಟಗಾರ ಅಪ್ಪನಿಗೆ ಹೇಡಿ ಮಗ-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್.ಚಂದ್ರಶೇಖರ್ ವಿರುದ್ಧ ತಂದೆ ವಾಗ್ದಾಳಿ

    ಹೋರಾಟಗಾರ ಅಪ್ಪನಿಗೆ ಹೇಡಿ ಮಗ-ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಎಲ್.ಚಂದ್ರಶೇಖರ್ ವಿರುದ್ಧ ತಂದೆ ವಾಗ್ದಾಳಿ

    – ಬಿಜೆಪಿ ಸೇರಿದ್ದು ಮೊದಲ ತಪ್ಪು, ಚುನಾವಣೆ ವಿಥ್ ಡ್ರಾ ಮಾಡಿದ್ದು ಎರಡನೇ ತಪ್ಪು
    – ಮಗನ ನಿರ್ಧಾರದ ಬಗ್ಗೆ ಮಾತನಾಡಲು ಅಸಹ್ಯ ಆಗ್ತಿದೆ
    – ರಾಜಕೀಯದಲ್ಲಿ ಆತ ಬಲಿಪಶು

    ಬೆಂಗಳೂರು: ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಚಂದ್ರಶೇಖರ್ ಅವರ ತಂದೆ ಹಾಗು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಲಿಂಗಪ್ಪ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಮಗನ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    ಮಗ ಬಿಜೆಪಿ ಸೇರಿದ್ದಾಗಿನಿಂದ ನಾನು ಅವನ ಜೊತೆ ಮಾತನಾಡಿಲ್ಲ. ಅವನು ಚುನಾವಣೆಯಿಂದ ಹಿಂದೆ ಸರಿದಿರುವ ವಿಚಾರವೇ ನನಗೆ ಗೊತ್ತಿರಲಿಲ್ಲ. ಈ ರೀತಿ ಪಲಾಯನ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪುತ್ರನ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

    ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೆಳವಣಿಗೆಯನ್ನು ನಾನು ನೋಡಿಲ್ಲ. ಮತದಾನಕ್ಕೆ ಎರಡು ದಿನ ಮಾತ್ರ ಇದೆ. ನನ್ನ ಮಗ ಆಗಲಿ ಅಥವಾ ಯಾವುದೇ ಅಭ್ಯರ್ಥಿ ಈ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಚುನಾವಣೆ ನಂತರ ತಮ್ಮ ಅಭಿಪ್ರಾಯವನ್ನು ಪಕ್ಷದ ಮುಖಂಡರ ಮುಂದೆ ಹೇಳಬಹುದಿತ್ತು. ಚುನಾವಣೆಯ ಮೊದಲೇ ಹಿಂದೆ ಬಂದಿರೋದು ಆತ ಸೋಲನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದು ಮಗನ ನಿರ್ಣಯದ ಬಗ್ಗೆ ಸಿಎಂ ಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.

    ಇದೊಂದು ರಾಜಕೀಯ ಆತ್ಮಹತ್ಯೆ:
    ನನ್ನ ರಾಜಕೀಯ ಜೀವನದಲ್ಲಿ ರಾಮನಗರಕ್ಕೆ ದೇವೇಗೌಡರು, ಕುಮಾರಸ್ವಾಮಿ ಬಂದರೂ ಅಂತಾ ನಾನು ಎಲ್ಲಿ ಓಡಿ ಹೋಗಲಿಲ್ಲ. ಅಂಬರೀಶ್ ವಿರುದ್ಧ ನಿಂತಾಗಲೂ ಕೊನೆಯವರೆಗೂ ಹೋರಾಡಿದ್ದೇನೆ. ಚುನಾವಣೆಯಲ್ಲಿ ಫಲಿತಾಂಶ ಬರೋವರೆಗೂ ಹೋರಾಡುವುದು ಶೂರನ ಕರ್ತವ್ಯ. ಹೇಡಿಗಳು ಫಲಿತಾಂಶ ಮೊದಲೇ ಪಲಾಯನ ಮಾಡುತ್ತಾರೆ. ಇಂದು ನನ್ನ ಮಗ ತೆಗೆದುಕೊಂಡಿರುವ ನಿರ್ಧಾರ ಆತ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಸಮಾಧಾನ ಹೊರಹಾಕಿದರು.

    ಕಾಂಗ್ರೆಸ್ ಸೇರುವ ನಿರ್ಧಾರದ ಬಗ್ಗೆ ಚಂದ್ರಶೇಖರ್ ನನ್ನ ಜೊತೆ ಚರ್ಚಿಸಿಲ್ಲ. ಒಂದು ವೇಳೆ ಆತ ನನ್ನ ಸಲಹೆ ಪಡೆದಿದ್ದರೆ ಚುನಾವಣೆಯಿಂದ ಹಿಂದೆ ಸರಿಯಲು ಬಿಡುತ್ತಿರಲಿಲ್ಲ. ಬಿಜೆಪಿಗೆ ಹೋಗಬೇಡ ಅಂತಾ ಮನೆಗೆ ಕರೆಸಿ ಹೇಳಿದ್ರೂ ನನ್ನ ಮತು ಕೇಳಲಿಲ್ಲ. ಕಾಂಗ್ರೆಸ್ ನಮಗೆ ರಕ್ತಗತವಾಗಿದ್ದು, ಬೇರೆ ಪಕ್ಷಗಳು ನಮಗೆ ಇಷ್ಟವಾಗಲ್ಲ. ಎರಡು ದಿನದಲ್ಲಿ ಚುನಾವಣೆಯನ್ನು ಮುಂದಿಟ್ಟು ಪಲಾಯನ ಮಾಡುವುದು ಯಾವ ಸಿದ್ಧಾಂತ? ಅವನ ರಾಜಕೀಯ ಸಿದ್ಧಾಂತಗಳು ಏನೆಂಬುವುದು ನನಗೆ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಮಗನನ್ನು ಕರೆಸಿಕೊಂಡು ಆತ ಅನುಸರಿಸುವ ಸಿದ್ಧಾಂತಗಳು ಏನು ಅಂತಾ ಮಾಹಿತಿ ಪಡೆದುಕೊಳ್ಳುತ್ತೇನೆ. ಚುನಾವಣೆಯಿಂದ ಪಲಾಯನ ಆಗುವರರನ್ನು ಶೂರರು ಅಂತಾ ಯಾರು ಕರೆಯಲ್ಲ ಎಂದು ವಾಗ್ದಾಳಿ ನಡೆಸಿದರು.

    ಮಗ ಬಲಿಪಶು:
    ಬಿಜೆಪಿಯವರು ಮಗನನ್ನು ಬಲಿಪಶು ಮಾಡಿದರೋ ಏನೋ ಗೊತ್ತಿಲ್ಲ. ರಾಜಕೀಯ ರಂಗದಲ್ಲಿ ನನ್ನ ಮಗ ಬಲಿಪಶು ಆಗಿದ್ದಾನೆ. ಕಳೆದ 25 ವರ್ಷಗಳಿಂದ ಆತ ರಾಜಕೀಯದಲ್ಲಿ ಇದ್ದಾನೆ. ನನ್ನ ನಡೆಯನ್ನು ಆತ ಗಮನಿಸುತ್ತಾ ಬಂದಿದ್ದಾನೆ. ಒಬ್ಬ ಹೋರಾಟಗಾರ ಅಪ್ಪನಿಗೆ ಆತ ಹೇಡಿ ಮಗ. ಯಾವತ್ತು ಆತ ರಾಜಕೀಯದ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಈ ಬಾರಿ ಟಿಕೆಟ್ ನಿನಗೆ ಕೊಡೋದು, ಎಲೆಕ್ಷನ್ ಗೆ ಸಿದ್ಧವಾಗು ಅಂತಾ ಹೇಳಿದ್ರು. ಆದ್ರೆ ಮಗ ಒಪ್ಪಿಕೊಳ್ಳಲಿಲ್ಲ. ಅನಿವಾರ್ಯವಾಗಿ ರಾಮನಗರ ಟಿಕೆಟ್ ಇಕ್ಬಾಲ್ ಹುಸೇನ್ ಅವರಿಗೆ ಸಿಕ್ಕಿತ್ತು. ಮಗನ ಈ ನಡವಳಿಕೆ ನೋಡಿ ನನಗೆ ಅಸಹ್ಯ ಆಗುತ್ತಿದೆ. ಈ ಕುರಿತು ಹೆಚ್ಚು ಮಾತನಾಡಲು ನನಗೆ ಮುಜುಗರ ಆಗ್ತಿದೆ. ಇಲ್ಲಿ ಕಾಂಗ್ರೆಸ್ ನಾಯಕರ ಯಾವುದೇ ಹಸ್ತಕ್ಷೇಪವಿಲ್ಲ. ಮಗ ಬಿಜೆಪಿಗೆ ಹೋಗಿದ್ದು ಮೊದಲನೇ ತಪ್ಪು, ಇವತ್ತು ಚುನಾವಣೆಯಿಂದ ಹಿಂದೆ ಬಂದಿದ್ದು ಎರಡನೇ ತಪ್ಪು. ಬೇರೆ ಯಾವ ಪಕ್ಷದ ನಾಯಕರ ಬಗ್ಗೆಯೂ ನಾನು ಪ್ರತಿಕ್ರಿಯೆ ನೀಡಲ್ಲ. ಮನೆಯಲ್ಲಿಯೂ ಆತ ನನ್ನ ಜೊತೆ ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದರು.

    ನಾಮಪತ್ರ ಸಲ್ಲಿಸಲು ಹೋಗುವಾಗ ಆತನ ಆಪ್ತರು ನಿಮ್ಮ ತಂದೆಯ ಆಶೀರ್ವಾದ ಪಡೆದುಕೊಂಡು ಬಾ ಅಂತಾ ಸಲಹೆ ನೀಡಿದ್ದರಂತೆ. ಚಂದ್ರಶೇಖರ್ ನನ್ನ ಬಳಿಯೂ ಬರಲಿಲ್ಲ. ಒಂದು ವೇಳೆ ಆತ ಬಂದಿದ್ದರೂ ನನ್ನ ಕಾಲುಗಳನ್ನು ಮುಟ್ಟಲು ಸಹ ನಾನು ಬಿಡುತ್ತಿರಲಿಲ್ಲ ಎಂದು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಕೈ ಎಂಎಲ್‍ಸಿ ಲಿಂಗಪ್ಪ ಪುತ್ರ ಬಿಜೆಪಿಗೆ ಸೇರ್ಪಡೆ

    ರಾಮನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಕೈ ಎಂಎಲ್‍ಸಿ ಲಿಂಗಪ್ಪ ಪುತ್ರ ಬಿಜೆಪಿಗೆ ಸೇರ್ಪಡೆ

    ಬೆಂಗಳೂರು: ರಾಮನಗರದ ರಾಜಕೀಯ ವಾತಾವರಣ ಕ್ಷಣಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ವಿಧಾನ ಪರಿಷತ್ ಸದಸ್ಯ, ರಾಮನಗರ ಕಾಂಗ್ರೆಸ್ ಮುಖಂಡ ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್ ಪಕ್ಷ ತೊರೆದು ಬಿಎಸ್‍ವೈ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಎಸ್ ಯಡಿಯೂರಪ್ಪ ಅವರು ಪಕ್ಷ ಧ್ವಜ ನೀಡುವ ಮೂಲಕ ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಬಿಎಸ್‍ವೈ ಅವರು, ರಾಮನಗರ ಪಕ್ಷದ ಅಭ್ಯರ್ಥಿ ಎಂದು ಅವರು ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. 2 ದಿನಗಳಲ್ಲಿ ರಾಮನಗರದಲ್ಲಿ ಬೃಹತ್ ಸಮಾರಂಭದ ನಡೆಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಇನ್ನು ಹಲವರು ಪಕ್ಷ ಸೇರ್ಪಡೆಯಾಗುತ್ತಾರೆ ಎಂದು ಹೇಳಿದರು. ಚಂದ್ರಶೇಖರ್ ಬಿಜೆಪಿ ಸೇರ್ಪಡೆ ವೇಳೆ ಸಿಪಿ ಯೋಗಿಶ್ವರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

    ಬಿಜೆಪಿ ಸೇರ್ಪಡೆಯಾಗಿ ಮಾತನಾಡಿದ ಚಂದ್ರಶೇಖರ್, ನನ್ನ ಆತ್ಮತೃಪ್ತಿಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ. ನನ್ನೊಂದಿಗೆ ಕ್ಷೇತ್ರ ಹಲವು ಮುಖಂಡರು ಕೂಡ ಸೇರ್ಪಡೆಯಾಗುತ್ತಾರೆ. ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬಲಗೊಳಿಸುವತ್ತ ಗಮನ ಹರಿಸುತ್ತೇನೆ ಎಂದರು.

    ಇದಕ್ಕೂ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತಾಡಿದ ಸಿ.ಎಂ ಲಿಂಗಪ್ಪ, ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಇಲ್ಲ. ಹಾಗಂತ ನಾವು ಬಿಜೆಪಿಗೂ ಬೆಂಬಲ ನೀಡಲ್ಲ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದ್ದರು. ಆದರೆ ಈ ಎಲ್ಲದರ ನಡುವೆ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾಗಿ ಮತ್ತೆ ಟ್ವಿಸ್ಟ್ ನೀಡಿದ್ದಾರೆ.

    ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ನಾವು ಬೆಂಬಲ ನೀಡುವುದಿಲ್ಲ. ಇತ್ತ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಆಲೋಚನೆಯನ್ನು ಕೈಬಿಟ್ಟಿಲ್ಲ ಎಂದು ಹೇಳಿ ರಾಮನಗರ ಮೈತ್ರಿಗೆ ಸಿ.ಎಂ.ಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದರು.

    ಬಿಜೆಪಿಯವರ ನೀತಿ ನಿಯಮಗಳೇ ಬೇರೆ. ನಮಗೆ ಅದು ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಅವರಿಗೆ ಬೆಂಬಲ ನೀಡುವುದಿಲ್ಲ. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಬಿಜೆಪಿಯ ಯಾವುದೇ ನಾಯಕರೂ ನಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಪ್ರಯತ್ನಿಸಿದರೂ ನಿರ್ಧಾರವನ್ನು ಬದಲಿಸುವುದಿಲ್ಲ. ನಾವು ಸ್ಥಳೀಯವಾಗಿ ಪರಿಸ್ಥಿತಿ ನೋಡಬೇಕಿದೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಒಂದು ವೇಳೆ ರಾಮನಗರ ಕ್ಷೇತ್ರವನ್ನು ಸಂಪೂರ್ಣವಾಗಿ ಜೆಡಿಎಸ್‍ಗೆ ಬಿಟ್ಟುಕೊಟ್ಟರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಆಲೋಚನೆ ಮಾಡಿರುವೆ ಎಂದು ಸಿ.ಎಂ.ಲಿಂಗಪ್ಪ ಪ್ರತಿಕ್ರಿಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲ: ಕೈ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ

    ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲ: ಕೈ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ

    ರಾಮನಗರ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿರುವುದು ವಿಧಾನಸಭೆಯಲ್ಲಿ ಮಾತ್ರ ಬೇರೆಲ್ಲೂ ಇಲ್ಲ. ಈ ರಾಜ್ಯ ಸರ್ಕಾರವೇನೂ ನಮ್ಮದಾ? ಇದು ನಮ್ಮ ಸರ್ಕಾರ ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರು ಇಲ್ಲಾ ಎಂದು ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಹೇಳಿಕೆ ನೀಡಿದ್ದಾರೆ.

    ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ವಿಚಾರವಾಗಿ ರಾಮನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂಎಲ್‍ಸಿ ಸಿ.ಎಂ ಲಿಂಗಪ್ಪ ಮಾಧ್ಯಮದವರ ಜೊತೆ ಮಾತನಾಡುತ್ತಾ ಯಾರು ತೈಲ ಬೆಲೆಯನ್ನ ಹೆಚ್ಚಳ ಮಾಡಿದ್ದಾರೋ ಅವರ ವಿರುದ್ಧ ನಮ್ಮ ಹೋರಾಟ. ತೈಲದ ಬೆಲೆ ಏರಿಕೆಯನ್ನು ಕೇಂದ್ರವೇ ಹಾಕಲಿ, ರಾಜ್ಯವೇ ಹಾಕಲಿ ಯಾರೇ ಹಾಕಿದ್ದರು ತಪ್ಪೇ ಎಂದರು.

    ರಾಜ್ಯದಲ್ಲಿರುವುದು ನಮ್ಮ ಸರ್ಕಾರನಾ ಯಾರು ಹೇಳಿದ್ದು ನಮ್ಮ ಸರ್ಕಾರ ಅಂತಾ? ಸಮ್ಮಿಶ್ರ ಸರ್ಕಾರ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ವಿಧಾನಸಭೆಯಲ್ಲಿ ಮತ್ತು ಕಾಂಗ್ರೆಸ್ ಎಂಎಲ್‍ಎಗಳು ಹಾಗೂ ಜೆಡಿಎಸ್ ಎಂಎಲ್‍ಎಗಳ ಮಧ್ಯೆ ಸಮ್ಮಿಶ್ರವಿದೆ. ಬೇರೆಲ್ಲಿದೆ ಯಾವ ತಾಲ್ಲೂಕಿನಲ್ಲಿದೆ ಕೇಳಲೇಬೇಡಿ. ಈ ರಾಜ್ಯ ಸರ್ಕಾರ ನಮ್ಮದು ಅಂತಾ ಹೇಳಿದ್ರೆ ನಮ್ಮಂತಹ ಮುಟ್ಟಾಳರು ಇನ್ನೊಬ್ಬರಿಲ್ಲ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೆಡಿಎಸ್‍ನಿಂದ ಅಂಬಿ ಕಣಕ್ಕಿಳಿದರೆ, ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುವೆ: ಎಂಎಲ್‍ಸಿ ಸಿ.ಎಂ.ಲಿಂಗಪ್ಪ

    ಜೆಡಿಎಸ್‍ನಿಂದ ಅಂಬಿ ಕಣಕ್ಕಿಳಿದರೆ, ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುವೆ: ಎಂಎಲ್‍ಸಿ ಸಿ.ಎಂ.ಲಿಂಗಪ್ಪ

    ರಾಮನಗರ: ಉಪ ಚುನಾವಣೆಯಲ್ಲಿ ರಾಮನಗರ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಅಂಬರೀಶ್ ಕಣಕ್ಕೆ ಇಳಿದರೆ ಕಾಂಗ್ರೆಸ್ಸಿನಿಂದ ನಾನೇ ಸ್ಪರ್ಧಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ.

    ರಾಮನಗರ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಯನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಾನು ಪ್ರಬಲವಾಗಿ ವಿರೋಧ ಮಾಡುತ್ತೇನೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಇಕ್ಬಾಲ್ ಹುಸೇನ್ ಮತ್ತೇ ಸ್ಪರ್ಧಿಸುತ್ತಾರೆ. ಅವರು ಕಣಕ್ಕೆ ಇಳಿಯುವುದಿಲ್ಲ ಅಂತಾ ತಿಳಿಸಿದರೆ ನಾನೇ ಸ್ಪರ್ಧಿಸ್ತೇನೆ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದರು.

    ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಅಭ್ಯರ್ಥಿಯಾಗಿದ್ದು, ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಪಕ್ಷದ ವಿರುದ್ಧ ಸಮರ ಸಾರಲು ಸಿದ್ಧನಿರುವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಜಿಲ್ಲೆಯ ಕಾರ್ಯಕರ್ತರಿಂದ ವಿರೋಧವಿತ್ತು. ಅಲ್ಲದೇ ಮೈತ್ರಿಗೆ ನಮ್ಮ ಆತ್ಮಸಾಕ್ಷಿಯೂ ಒಪ್ಪುವುದಿಲ್ಲ ಎಂದಿದ್ದರು. ಸರ್ಕಾರದ ಒತ್ತಡಕ್ಕೆ ಮಣಿದು ಅಧಿಕಾರಿಗಳು ತಾಲೂಕು ಪಂಚಾಯತ್ ಚುನಾವಣೆಯನ್ನು ರದ್ದು ಮಾಡಲಾಗಿದೆ. ಅಧಿಕಾರಿಗಳು ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

    ಜಿಲ್ಲೆಯ ಕಾಂಗ್ರೆಸ್ ಪ್ರಭಾವಿ ಮುಖಂಡ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಕುಮಾರಸ್ವಾಮಿ ನಿವಾಸಕ್ಕೆ ಹೋಗಬೇಕು. ನಾನು ಕಾಂಗ್ರೆಸ್ಸಿನ ನಿಷ್ಠಾವಂತ ನಾಯಕ, ಹೀಗಾಗಿ ಅಲ್ಲಿಗೆ ಹೋಗುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, ಅಧಿಕಾರಿಗಳ ವರ್ತನೆ ಹೀಗೆ ಮುಂದುವರೆದರೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

  • ಕೈ ಬಂಡಾಯ ಶಾಸಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ

    ಕೈ ಬಂಡಾಯ ಶಾಸಕರಿಗೆ ಹೈಕಮಾಂಡ್ ಖಡಕ್ ಎಚ್ಚರಿಕೆ

    ಬೆಂಗಳೂರು: ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಶಮನ ಮಾಡಲು ಹೈಕಮಾಂಡ್ ಮುಂದಾಗಿದ್ದು ನಾಯಕರಿಗೆ ಖಡಕ್ ಎಚ್ಚರಿಕೆ ನೀಡಿದೆ.

    ಈಗ 15 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಏಳು ಮಂದಿಗೆ ಸಚಿವರಾಗಲು ಅವಕಾಶವಿದೆ. ಇದೇ ರೀತಿಯಾಗಿ ಅಸಮಾಧಾನವನ್ನು ಹೊರಹಾಕಿದರೆ ಖಾಲಿ ಇರುವ ಏಳು ಸಚಿವ ಸ್ಥಾನದಿಂದ ಹಾಗೂ ನಿಗಮ ಮಂಡಳಿ ಸ್ಥಾನ ಹಂಚಿಕೆಯಲ್ಲಿ ಅವಕಾಶ ವಂಚಿತರಾಗುತ್ತಾರೆ. ಇದನ್ನು ಬಂಡಾಯ ಶಾಸಕರಿಗೆ ಗಮನಕ್ಕೆ ತರುವಂತೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸೂಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿ ತಿಳಿಸಿವೆ.

    ಸಚಿವ ಸ್ಥಾನದಿಂದ ವಂಚಿತರಾಗಿರುವ ಅನೇಕ ಹಿರಿಯ ಶಾಸಕರು ಹೋಟೆಲ್ ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದರು. ಅಲ್ಲದೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳು ಸಭೆಯಲ್ಲಿ ಭಾಗವಹಿಸಬಹುದೆಂದು ಆಹ್ವಾನ ನೀಡಿದ್ದರು. ಈ ಬೆಳವಣಿಗೆಯಿಂದ ರಾಜ್ಯ ಸರ್ಕಾರಕ್ಕೆ ಕುತ್ತು ಬರಬಹುದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಹೈಕಮಾಂಡ್ ಈ ಶಾಸಕರಿಗೆ ಎಚ್ಚರಿಕೆ ನೀಡಿದೆ.

    ಹೈಕಂಮಾಡ್ ವಿವಿಧ ಮೂಲಗಳಿಂದ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು, ಪ್ರತ್ಯೇಕ ಸಭೆ ನಡೆಸುವುದು, ಹಾಗೂ ಹೈ ಕಮಾಂಡ್ ವಿರುದ್ಧ ಮಾತನಾಡುವ ಶಾಸಕರ ಮಾಹಿತಿ ಕಲೆ ಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಾ ಶಾಸಕರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

    ಲಿಂಗಪ್ಪಗೆ ಶೋಕಾಸ್ ನೋಟಿಸ್:
    ರಾಮನಗರದಲ್ಲಿ ಮಂಗಳವಾರ ಮಾತನಾಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರು, ರಾಮನಗರ ಕ್ಷೇತ್ರವನ್ನು ಪರಮೇಶ್ವರ್ ಮಾರಾಟಕ್ಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.

    ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಲಿಂಗಣ್ಣ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ.ಘೋರ್ಪಡೆ ಬುಧವಾರ ಶೋಕಾಸ್ ನೋಟಿಸ್ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾಧ್ಯಮಗಳ ಮುಂದೆ ಲಘುವಾಗಿ ಮಾತನಾಡಿ ಪಕ್ಷ ವಿರೋಧಿ ಹೇಳಿಕೆ ನೀಡಿದ್ದೀರಿ. ರಾಮನಗರ ಉಪ ಚುನಾವಣೆಯ ಕುರಿತು ಪಕ್ಷ ಸಭೆಯಲ್ಲಿ ಚರ್ಚಿಸಬಹುದಿತ್ತು. ಆದರೆ ನೀವು ಹಾಗೇ ಮಾಡಲಿಲ್ಲ. ನಿಮ್ಮ ತಪ್ಪಿಗೆ ಏಳು ದಿನಗಳಲ್ಲಿ ಉತ್ತರ ನೀಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ.

  • 38 ಮಂದಿಯನ್ನು ನೀನೇ ಇಟ್ಟುಕೋ, 4 ಶಾಸಕರನ್ನು ನನಗೆ ನೀಡು: ಡಿಕೆಶಿಗೆ ಶಾ ಕರೆ ಮಾಡಿದ್ರಂತೆ

    38 ಮಂದಿಯನ್ನು ನೀನೇ ಇಟ್ಟುಕೋ, 4 ಶಾಸಕರನ್ನು ನನಗೆ ನೀಡು: ಡಿಕೆಶಿಗೆ ಶಾ ಕರೆ ಮಾಡಿದ್ರಂತೆ

    ರಾಮನಗರ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ಕೈ ಶಾಸಕರನ್ನು ನನಗೆ ನೀಡುವಂತೆ ಹೇಳಿದ್ದರು ಎಂದು ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

    ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ಬಂದಿದ್ದಾಗ ಶಾ ಅಮಿತ್ ಶಾ ಅವರು ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಗೆ ದೂರವಾಣಿ ಮೂಲಕ ಕರೆ ಮಾಡಿ ಆಮಿಷ ಒಡ್ಡಿದ್ದರು ಎಂದು ತಿಳಿಸಿದರು.

    ಅಮಿತ್ ಶಾ ಕರೆ ಮಾಡಿ 38 ಜನ ಶಾಸಕರನ್ನ ನೀನೆ ಇಟ್ಟುಕೋ, 4 ಜನರನ್ನ ನನಗೆ ಕೊಡು. ಇದರಿಂದ ನಿನಗೆ ನಾನು ಬಹಳ ದೊಡ್ಡ ಸಹಾಯ ಮಾಡುತ್ತೇನೆ ಎಂದಿದ್ದರು. ಆದರೆ ಅಮಿತ್ ಶಾ ಆಮಿಷಕ್ಕೆ ಡಿ.ಕೆ.ಶಿವಕುಮಾರ್ ಅವರು ಒಪ್ಪಲಿಲ್ಲ. ಬದಲಿಗೆ ನಾನು ಪಕ್ಕಾ ಕಾಂಗ್ರೆಸ್ಸಿಗ, ನನ್ನ ದೇಹದಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಈ ವಿಚಾರದಲ್ಲಿ ನನ್ನ ಕ್ಷಮಿಸಿ ಎಂದು ಹೇಳಿದ್ದಾರೆ. ಈ ಇಬ್ಬರ ನಡುವಿನ ದೂರವಾಣಿ ಸಂಭಾಷಣೆ ಮಾಡುವಾಗ ಶಿವಕುಮಾರ್ ಜೊತೆಗೆ ನಾನೇ ಇದ್ದೆ ಎಂದು ಲಿಂಗಪ್ಪ ಹೇಳಿದರು.

    ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಿಂದ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಕಣಕ್ಕೆ ಇಳಿದಿದ್ದರು. ಈ ವೇಳೆ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದರು. ಡಿಕೆ ಶಿವಕುಮಾರ್ ರೆಸಾರ್ಟ್ ನಲ್ಲಿ ಕೈ ಶಾಸಕರನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಿಕೊಂಡಿದ್ದರು.