Tag: CM Jagan Mohan Reddy

  • ಭಾರೀ ಮಳೆಗೆ ಕಟ್ಟಡ ಕುಸಿತ – ಇಬ್ಬರು ಮಕ್ಕಳ ಸಾವು

    ಭಾರೀ ಮಳೆಗೆ ಕಟ್ಟಡ ಕುಸಿತ – ಇಬ್ಬರು ಮಕ್ಕಳ ಸಾವು

    ಹೈದರಾಬಾದ್: ಭಾರೀ ಮಳೆಯಿಂದಾಗಿ ಮೂರು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ನಡೆದಿದೆ.

    ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಕಟ್ಟಡ ಕುಸಿದಿದ್ದು, ಕಟ್ಟಡ ಅವಶೇಷಗಳ ಅಡಿಯಲ್ಲಿ ಕೆಲವು ನಿವಾಸಿಗಳು ಸಿಲುಕಿಕೊಂಡಿದ್ದಾರೆ. ಇದೀಗ ಆರು ಮಂದಿಯನ್ನು ರಕ್ಷಿಸಲಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿ, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ

    ಶುಕ್ರವಾರ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಮೂರು ರಾಯಲಸೀಮಾ ಜಿಲ್ಲೆಗಳು ಮತ್ತು ಆಂಧ್ರಪ್ರದೇಶದ ಒಂದು ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ 20 ಸೆಂ.ಮೀ ರಷ್ಟು ಭಾರೀ ಮಳೆ ಸುರಿದಿದೆ. ಅಲ್ಲದೇ ಶುಕ್ರವಾರ ಸುರಿದ ಭಾರೀ ಮಳೆಗೆ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ರಾಜ್ಯದ ಪರಿಸ್ಥಿತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ರಾಜ್ಯಕ್ಕೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಜಗನ್ ಮೋಹನ್ ರೆಡ್ಡಿ ಅವರು ಶನಿವಾರ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ ಎಂದು  ಹೇಳಲಾಗುತ್ತಿದೆ.

  • ಎಸ್‍ಪಿಬಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಜಗನ್ ಒತ್ತಾಯ

    ಎಸ್‍ಪಿಬಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗೆ ಸಿಎಂ ಜಗನ್ ಒತ್ತಾಯ

    ನವದೆಹಲಿ: ಗಾನ ಗಂಧರ್ವ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

    ಭಾರತದ ಸಿನಿ ರಂಗಕ್ಕೆ ಎಸ್‍ಪಿಬಿ ಅವರು ನೀಡಿರುವ ವಿಶೇಷ ಸೇವೆಗಳನ್ನು ಗುರುತಿಸಿ ಭಾರತ್ನ ರತ್ನ ಪ್ರಶಸ್ತಿ ನೀಡುವಂತೆ ಜಗನ್ ಪತ್ರದಲ್ಲಿ ಮನವಿ ಮಾಡಿದ್ದಾರೆ.

    ನಮ್ಮ ರಾಜ್ಯದ ನೆಲ್ಲೂರು ಜಿಲ್ಲೆ ಎಸ್‍ಪಿಬಿ ಅವರ ಹುಟ್ಟೂರಾಗಿರುವುದು ನಮ್ಮ ಪುಣ್ಯ. ಅವರ ಅಗಲಿಕೆಯಿಂದ ರಾಜ್ಯ, ದೇಶಕ್ಕೆ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಸಂಗೀತ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಅವರು 40 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಆರು ಬಾರಿ ರಾಷ್ಟ್ರ ಪ್ರಶಸ್ತಿ, 25 ಬಾರಿ ಆಂಧ್ರ ಪ್ರದೇಶದ ನಂದಿ ಪ್ರಶಸ್ತಿ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ ಹಲವು ಪ್ರಶಸ್ತಿಗಳನ್ನೂ ಅವರು ಗಳಿಸಿದ್ದಾರೆ. ಅವರಿಗೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಪ್ರದಾನವಾಗಿದೆ. ಈ ಹಿಂದೆ ಹಲವು ಖ್ಯಾತ ಗಾಯಕರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದ್ದು, ಸಂಗೀತ ಕ್ಷೇತ್ರದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿರುವ ಎಸ್‍ಪಿಬಿ ಅವರಿಗೂ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಿದೆ ಎಂದು ಸಿಎಂ ಜಗನ್ ತಿಳಿಸಿದ್ದಾರೆ.

    ಎಸ್‍ಪಿಬಿ ಅವರ ಅಂತ್ಯಸಂಸ್ಕಾರದ ವೇಳೆ ಹಾಜರಾಗಿದ್ದ ಆಂಧ್ರ ಪ್ರದೇಶ ಜಲಸಂಪನ್ಮೂಲ ಸಚಿವ ಅನಿಲ್ ಕುಮಾರ್ ಯಾದವ್ ಅವರು, ಎಸ್‍ಪಿಬಿ ಅವರು ಜನಿಸಿದ್ದ ನೆಲ್ಲೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಸೋಮವಾರ ಚೆನ್ನೈನಲ್ಲಿ ಮಾತನಾಡಿದ್ದ ಎಸ್‍ಪಿಬಿ ಪುತ್ರ ಚರಣ್ ಅವರು, ತಂದೆಯವರ ಸೇವೆಗಳನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿ ನೀಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೂಡ ಎಸ್‍ಪಿಬಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂಬ ಕೂಗು ಜೋರಾಗಿದೆ. ಇದರ ನಡುವೆಯೇ ಸಿಎಂ ಜಗನ್ ಪತ್ರ ಬರೆದಿದ್ದಾರೆ.

  • ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಟೋಲ್ ಕಿರಿಕಿರಿ- ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಿಸಿದ ಭೂಪ

    ಹೈದರಾಬಾದ್: ಟೋಲ್ ಅಥವಾ ಪಾರ್ಕಿಂಗ್ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಅನೇಕ ವಾಹನ ಸವಾರರು ಪೊಲೀಸ್, ಪ್ರೆಸ್, ನ್ಯಾಯಾಧೀಶರು ಅಥವಾ ಶಾಸಕರ ಸ್ಟಿಕ್ಕರ್ ಗಳನ್ನು ಬಳಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಐಡಿಯಾ ನೋಡಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

    ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿ ಎಂ.ಹರಿ ರಾಕೇಶ್, ಟೋಲ್ ಶುಲ್ಕ ಕಟ್ಟುವುದನ್ನು ತಪ್ಪಿಸಿಕೊಳ್ಳಲು ತನ್ನ ಕಾರ್ ನಂಬರ್ ಪ್ಲೇಟನ್ನೇ ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ. ಕೇವಲ ಕಾರ್ ಮೇಲೆ ಸ್ಟಿಕ್ಕರ್ ಮಾತ್ರ ಅಂಟಿಸಿಕೊಂಡಿಲ್ಲ. ಬದಲಿಗೆ ಮುಂಭಾಗ ಹಾಗೂ ಹಿಂಭಾಗದ ನಂಬರ್ ಪ್ಲೇಟನ್ನು ‘ಎಪಿ ಸಿಎಂ ಜಗನ್’ ಎಂದು ಬದಲಾಯಿಸಿಕೊಂಡಿದ್ದಾನೆ.

    ಜಡಿಮೆಟ್ಲಾದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಈತ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಪೊಲೀಸರು ಈತನನ್ನು ವಿಚಾರಣೆ ನಡೆಸಿದ್ದು, ಟೋಲ್ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆಯಲು ಹಾಗೂ ಸಂಚಾರಿ ಪೊಲೀಸರ ತಪಾಸಣೆಯಿಂದ ತಪ್ಪಿಸಲು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾನೆ.

    ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದು, ರಾಕೇಶ್ ವಿರುದ್ಧ ಮೋಸ ಹಾಗೂ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

  • ‘ಪ್ರಜಾ ವೇದಿಕಾ’ ಕಟ್ಟಡ ಒಡೆದು ಹಾಕಲು ಅಧಿಕೃತ ಆದೇಶ ನೀಡಿದ ಸಿಎಂ ಜಗನ್

    ‘ಪ್ರಜಾ ವೇದಿಕಾ’ ಕಟ್ಟಡ ಒಡೆದು ಹಾಕಲು ಅಧಿಕೃತ ಆದೇಶ ನೀಡಿದ ಸಿಎಂ ಜಗನ್

    ಅಮರಾವತಿ: ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ನಡುವಿನ ರಾಜಕೀಯ ದ್ವೇಷ ಹೆಚ್ಚಾಗುತ್ತಿದ್ದು, ಕೃಷ್ಣಾ ನದಿ ತೀರದ ಸಮೀಪ ಸಭೆ ನಡೆಸುವ ಉದ್ದೇಶದಿಂದ ನಾಯ್ಡು ನಿರ್ಮಿಸಿದ್ದ `ಪ್ರಜಾ ವೇದಿಕೆ’ ಸರ್ಕಾರಿ ಕಟ್ಟಡವನ್ನು ಒಡೆದು ಹಾಕುವಂತೆ ಇಂದು ಅಧಿಕೃತ ಆದೇಶ ನೀಡಿದ್ದಾರೆ.

    2017ರಲ್ಲಿ ನಾಯ್ಡು ಮನೆ ಸಮೀಪದಲ್ಲೇ 5 ಕೋಟಿ ರೂ. ವೆಚ್ಚದಲ್ಲಿ ಈ ವೇದಿಕೆ ನಿರ್ಮಿಸಿದ್ದರು. ಮುಖ್ಯಮಂತ್ರಿ ಆದ ನಂತರ ಜಗನ್ ಮೊದಲ ಬಾರಿಗೆ ಪ್ರಜಾ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದರು. ಈ ವೇಳೆ, ಇದೇ ಕೊನೇ ಸಭೆ. ಪಾರದರ್ಶಕತೆ ನಿಟ್ಟಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಈ ಕಟ್ಟಡವನ್ನು ಧ್ವಂಸಗೊಳಿಸಬೇಕು ಎಂದು ಹೇಳಿದ್ದರು.

    ಕೆಲ ವಾರಗಳ ಹಿಂದೆಯಷ್ಟೇ ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಸರ್ಕಾರ ವಾಪಸ್ ಪಡೆಯಲಾಗಿತ್ತು. ಇತ್ತ ಜೂನ್ 4 ರಂದು ಪ್ರಜಾ ವೇದಿಕಾ ಬಳಿ ಇರುವ ಮನೆಯಲ್ಲೇ ಇರಲು ಅವಕಾಶ ಕೊಡುವಂತೆ ನಾಯ್ಡು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ ‘ಪ್ರಜಾ ವೇದಿಕಾ’ ಹಾಲ್ ಅನ್ನು ಪಕ್ಷದ ಕಾರ್ಯಗಳನ್ನು ನಡೆಸಲು ಬಳಕೆ ಮಾಡಲು ನೀಡಬೇಕೆಂದು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದರು.

    ಇತ್ತ ಜಗನ್ ಸರ್ಕಾರ ಕೃಷ್ಣ ನದಿಯ ತಟದಲ್ಲಿ ನಿರ್ಮಾಣ ಮಾಡಿರುವ ಈ ಮನೆಯೂ ಕೂಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದೆ. ಉಳಿದಂತೆ ಮೇ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಜಗನ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಮನವಿ ಮಾಡಿದ್ದರು. 2014ರಿಂದಲೂ ಆಂಧ್ರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರ ಬಳಿ ವಿಶೇಷ ಸ್ಥಾನಮಾನಕ್ಕಾಗಿ ಒತ್ತಡ ಹಾಕುತ್ತಲೇ ಇದೆ. ಇದೇ ವಿಚಾರವಾಗಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಎನ್‍ಡಿಎ ಒಕ್ಕೂಟವನ್ನು ತೊರೆದು ಬಂದಿದ್ದರು.

  • ಐಷಾರಾಮಿ ಮನೆ ಖಾಲಿ ಮಾಡಬೇಕಾ? – ಚಂದ್ರಬಾಬು ನಾಯ್ಡುಗೆ ಎದುರಾಯ್ತು ಸಂಕಟ

    ಐಷಾರಾಮಿ ಮನೆ ಖಾಲಿ ಮಾಡಬೇಕಾ? – ಚಂದ್ರಬಾಬು ನಾಯ್ಡುಗೆ ಎದುರಾಯ್ತು ಸಂಕಟ

    ಅಮರಾವತಿ: ಆಂಧ್ರಪ್ರದೇಶದಲ್ಲಿ ಜಗನ್ ವರ್ಸಸ್ ಚಂದ್ರಬಾಬು ನಾಯ್ಡು ಸಮರ ಜೋರಾದಂತೆ ಕಾಣುತ್ತಿದ್ದು, ಇದೀಗ ನದಿ ತಟದ ಮನೆಯಲ್ಲಿ ವಾಸಿಸುತ್ತಿರುವ ಉಂದವಳ್ಳಿ ‘ಪ್ರಜಾ ವೇದಿಕಾ’ ನಿವಾಸವನ್ನು ಖಾಲಿ ಮಾಡುವ ಸಂದರ್ಭ ಎದುರಾಗಿದೆ.

    ಕಳೆದ 5 ದಿನಗಳ ಹಿಂದೆ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬುರನ್ನ ತಡೆದು ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಘಟನೆ ಚಂದ್ರಬಾಬು ನಾಯ್ಡು ವರ್ಸಸ್ ಎಂದೇ ಜಗನ್ ಎಂದೇ ಸಾಕಷ್ಟು ಸುದ್ದಿಯಾಗಿತ್ತು. ಸದ್ಯ ಗುಂಟೂರು ಜಿಲ್ಲೆಯ ಉಂಡವಳ್ಳಿ ಬಳಿಯ ಕೃಷ್ಣ ನದಿ ತಟದಲ್ಲಿರುವ ‘ಪ್ರಜಾ ವೇದಿಕಾ’ ಎಂಬ ನಿವಾಸದಲ್ಲಿ ಚಂದ್ರಬಾಬು ನಾಯ್ಡು ಅವರು ವಾಸ ಮಾಡುತ್ತಿದ್ದು, 5 ವರ್ಷಗಳ ಹಿಂದೆಯಷ್ಟೇ ಈ ನಿವಾಸಕ್ಕೆ ಚಂದ್ರ ಬಾಬು ಆಗಮಿಸಿದ್ದರು.

    ಅಧಿಕೃತವಾಗಿ ಈ ನಿವಾಸ ಉದ್ಯಮಿಯೊಬ್ಬರ ಹೆಸರಿನಲ್ಲಿ ಇದ್ದು, ರಾಜ್ಯ ಸರ್ಕಾರ ಈ ಸ್ಥಳವನ್ನು ಸಿಎಂ ಅಧಿಕೃತ ನಿವಾಸವಾಗಿ ಮಾಡಲು ಲೀಸ್‍ಗೆ ಪಡೆದಿತ್ತು. ಆದರೆ ಸದ್ಯ ಚಂದ್ರಬಾಬು ನಾಯ್ಡು ಅವರು ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಮನೆಯಲ್ಲಿ ವಾಸವಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಈ ಹಿಂದೆಯೇ ಕಾನೂನು ಹೋರಾಟವನ್ನು ಕೂಡ ನಡೆಸಲಾಗಿದೆ. ಕೃಷ್ಣ ನದಿಯ ಮೇಲೆ ನಿರ್ಮಾಣ ಮಾಡಲಾಗಿರುವ ಈ ಮನೆಯನ್ನು ಕಾನೂನಿನ ನಿಯಮಗಳ ಅಡಿ ತೆರವು ಮಾಡಲಾಗುವುದು, ಕೇವಲ ಈ ಮನೆ ಮಾತ್ರವಲ್ಲ ಆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ಮನೆಗಳ ಮೇಲೆ ಕೋರ್ಟ್ ಆದೇಶದಂತೆ ಕ್ರಮ ಜರುಗಿಸುತ್ತೇವೆ ಎಂದು ಸ್ಥಳೀಯ ಶಾಸಕ ರಾಮಕೃಷ್ಣ ರೆಡ್ಡಿ  ತಿಳಿಸಿದ್ದಾರೆ.

    ಕೆಲ ದಿನಗಳ ಹಿಂದೆ ಈ ಮನೆಯಲ್ಲೇ ಇರಲು ಅವಕಾಶ ಕೊಡುವಂತೆ ನಾಯ್ಡು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ ಪ್ರಜಾ ವೇದಿಕಾ ಎಂಬ ಹೆಸರಿನ ಮನೆಯ ಹಾಲ್ ಅನ್ನ ಪಕ್ಷದ ಕಾರ್ಯಗಳನ್ನು ನಡೆಸಲು ಬಳಕೆ ಮಾಡಲು ನೀಡಬೇಕೆಂದು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದರು.

    ನದಿಯ ತಟದಲ್ಲಿ ಈ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಈ ವೇಳೆ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ರಾಮಕೃಷ್ಣ ರೆಡ್ಡಿ, ಕಾನೂನಿನ ನಿಯಮಗಳಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರ ಪತ್ರಕ್ಕೆ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನಿಖಿಲ್ ಕುಮಾರಸ್ವಾಮಿಯಿಂದ ಆಂಧ್ರ ಸಿಎಂ ಭೇಟಿ

    ನಿಖಿಲ್ ಕುಮಾರಸ್ವಾಮಿಯಿಂದ ಆಂಧ್ರ ಸಿಎಂ ಭೇಟಿ

    ಬೆಂಗಳೂರು: ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರನ್ನು ಸಿಎಂ ಎಚ್‍ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಜಗನ್‍ರನ್ನ ಭೇಟಿ ಮಾಡಿರುವ ನಿಖಿಲ್ ಕುಮಾರಸ್ವಾಮಿ ಅವರ ಫೋಟೋಗಳನ್ನು ಆಂಧ್ರ ಸಿಎಂ ಟ್ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

    ಆಂಧ್ರ ಪ್ರದೇಶದ ನೂತನ ಸಿಎಂ ಆಗಿ ಜಗನ್ ಮೋಹನ್ ರೆಡ್ಡಿ ಮೇ 30 ರಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅಭೂತಪೂರ್ವ ಜನಾದೇಶ ಪಡೆದ ಜಗನ್, ತೆಲುಗು ದೇಶಂ ಪಕ್ಷದ ಮಾಜಿ ಸಿಎಂ ಚಂದ್ರಬಾಬು ನಾಯ್ಡುರನ್ನು ಸೋಲಿಸಿ ಹೊಸ ಅಲೆ ಸೃಷ್ಟಿಸಿದ್ದರು.

    ಚಂದ್ರಬಾಬು ನಾಯ್ಡು ಅವರು ಜೆಡಿಎಸ್ ಪಕ್ಷದ ನಾಯಕರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯ ವೇಳೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರವಾಗಿ ನಾಯ್ಡು ಅವರು ಪ್ರಚಾರ ನಡೆಸಿದ್ದರು. ಅಲ್ಲದೇ ಜೆಡಿಎಸ್ ವರಿಷ್ಠರಾದ ಎಚ್‍ಡಿಡಿ ಅವರು ಚಂದ್ರಬಾಬು ನಾಯ್ಡು ಪರ ರಾಷ್ಟ್ರಮಟ್ಟದಲ್ಲಿ ಬೆಂಬಲಿಸಿದ್ದರು.

    ಇತ್ತ ತಮ್ಮ ತಂದೆ, ಆಂಧ್ರಪ್ರದೇಶ ಮಾಜಿ ಸಿಎಂ ವೈಎಸ್ ರಾಜಶೇಜರ ರೆಡ್ಡಿ ಅವರನ್ನು ಕಳೆದುಕೊಂಡ ಬಳಿಕ ಕಾಂಗ್ರೆಸ್ ನಿಂದ ಬಂಡಾಯವಾಗಿ ಪಕ್ಷ ತೊರೆದಿದ್ದ ಯುವನಾಯಕ, ವೈ.ಎಸ್. ಜಗನ್ ಮೋಹನ್ ರೆಡ್ದಿ ಅವರು 10 ವರ್ಷಗಳ ಕಾಲ ರಾಜಕೀಯದಲ್ಲಿ ಪಕ್ಷವನ್ನು ಕಟ್ಟಲು ಪಾದಯಾತ್ರೆಗಳನ್ನು ಕೈಗೊಂಡಿದ್ದರು. ಆ ಮೂಲಕ ಜನರ ಮನ ಗೆದ್ದು ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದರು.

    ಸಿಎಂ ಜಗನ್ ರನ್ನ ವಿಜಯವಾಡಾದಲ್ಲಿ ಭೇಟಿಯಾಗಿದ್ದ ನಿಖಿಲ್ ಅವರು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೇ ಹತ್ತು ವರ್ಷಗಳಿಗೂ ಹೆಚ್ಚು ಸುದೀರ್ಘ ಕಾಲದ ಅವರ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಕರ್ನಾಟಕದ ರಾಜಕಾರಣವನ್ನು ಕೂಡ ಚೆನ್ನಾಗಿ ತಿಳಿದಿದ್ದು, ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳಿದ್ದಾರೆ. ಸಾರ್ವಜನಿಕ ಜೀವನದಲ್ಲಿ, ಯಾವುದಕ್ಕೂ ಹಿಂಜರಿಯದೆ ಜನಸೇವೆಯೊಂದನ್ನೇ ಗುರಿಯಾಗಿಟ್ಟುಕೊಂಡು ಮುಂದುವರಿಯುವಂತೆ ನನಗೆ ಸಲಹೆ ನೀಡಿದರು ಎಂದು ನಿಖಿಲ್ ಹೇಳಿಕೊಂಡಿದ್ದಾರೆ.

  • ಆಂಧ್ರಕ್ಕೆ ಐವರು ಡಿಸಿಎಂ, ಎಲ್ಲ ಜಾತಿಗೂ ಅಧಿಕಾರ – ಭಾರತದಲ್ಲಿ ಜಗನ್ ದಾಖಲೆ

    ಆಂಧ್ರಕ್ಕೆ ಐವರು ಡಿಸಿಎಂ, ಎಲ್ಲ ಜಾತಿಗೂ ಅಧಿಕಾರ – ಭಾರತದಲ್ಲಿ ಜಗನ್ ದಾಖಲೆ

    ಅಮರಾವತಿ: ಮೇ 30 ರಂದು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಜಗನ್ ಮೋಹನ್ ರೆಡ್ಡಿ ತಮ್ಮ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿದ್ದಾರೆ.

    ಇಂದು ಸಿಎಂ ಜಗನ್ ತಮ್ಮ ಪಕ್ಷದ ಶಾಸಕಾಂಗ ಸಭೆಯನ್ನು ನಡೆಸಿದ್ದು, ಈ ವೇಳೆ ಎಲ್ಲಾ ಜಾತಿಗಳಿಗೆ ಪ್ರತಿನಿತ್ಯ ನೀಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಅಂದಹಾಗೇ ಈ ನಿರ್ಧಾರ ದಾಖಲೆ ಆಗಲಿದ್ದು, ಮೊಟ್ಟ ಮೊದಲ ಬಾರಿಗೆ ಐವರು ಡಿಸಿಎಂ ಗಳನ್ನು ನೇಮಿಸಿದ ಸಿಎಂ ಎನಿಸಿಕೊಳ್ಳಲಿದ್ದಾರೆ.

    ಸಿಎಂ ಜಗನ್ ಕ್ಯಾಬಿನೆಟ್ ನಲ್ಲಿ 25 ಸಚಿವರು ನೇಮಕವಾಗಿದ್ದು, ಶನಿವಾರ ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇತ್ತ ಜಗನ್ ಆಯ್ಕೆ ಮಾಡಿರುವ ಡಿಸಿಎಂಗಳಲ್ಲಿ ಪರಿಶಿಷ್ಟ ಪಂಗಡ, ಪ.ಜಾತಿ, ಹಿಂದುಳಿದ ವರ್ಗಗಗಳು, ಅಲ್ಪ ಸಂಖ್ಯಾತರು ಹಾಗೂ ಕಾಪು ಸಮುದಾಯದ ನಾಯಕರಿಗೆ ಡಿಸಿಎಂ ಸ್ಥಾನ ನೀಡಲಾಗಿದೆ.

    ಆಂಧ್ರ ಸರ್ಕಾರದಲ್ಲಿ ರೆಡ್ಡಿ ಸಮುದಾಯಕ್ಕೆ ಸಿಂಹಪಾಲು ಸಿಗಲಿದೆ ಎಂಬ ನಿರೀಕ್ಷೆಗಳು ಹಾಗೂ ರಾಜಕೀಯ ಲೆಕ್ಕಾಚಾರಗಳು ತಲೆಕೆಳಗಾಗಿದೆ. ದುರ್ಬಲ ವರ್ಗಗಳ ಸಮುದಾಯದ ನಾಯಕರು ತನ್ನ ಕ್ಯಾಬಿನೆಟ್ ಸದಸ್ಯರಾಗಿರುತ್ತಾರೆ ಎಂದು ಜಗನ್ ತಿಳಿಸಿದ್ದಾರೆ. ಅಲ್ಲದೇ ಸಚಿವರ ಕಾರ್ಯ ಸಾಧನೆ ಮೇಲೆ ಮುಂದಿನ ಹಂತದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳು ಇದೆ ಎಂದು ತಿಳಿಸಿದ್ದಾರೆ.

    46 ವರ್ಷದ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ರಾಜಶೇಖರ್ ರೆಡ್ಡಿ ಪಕ್ಷ ಆಂಧ್ರಪ್ರದೇಶ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಗಳಿಸಿತ್ತು. 175 ವಿಧಾನಸಭಾ ಸ್ಥಾನಗಳ ಪೈಕಿ 151 ಸ್ಥಾನಗಳನ್ನು ಪಕ್ಷ ಪಡೆದಿತ್ತು. ಅಲ್ಲದೇ 25 ಲೋಕಸಭಾ ಸ್ಥಾನಗಳಲ್ಲಿ 22 ರಲ್ಲಿ ಗೆಲುವು ಪಡೆದಿತ್ತು. ಈ ಹಿಂದೆ ಆಂಧ್ರಪ್ರದೇಶ ಸಿಎಂ ಆಗಿದ್ದ ತೆಲುಗು ದೇಶಂ ಪಕ್ಷದ ಚಂದ್ರಬಾಬುನಾಯ್ಡು ಸರ್ಕಾರದಲ್ಲಿ ಇಬ್ಬರು ಡಿಸಿಎಂಗಳನ್ನು ನೇಮಕ ಮಾಡಲಾಗಿತ್ತು. ಒಬ್ಬರು ಕಾಪು ಸಮುದಾಯದ ನಾಯಕರಾಗಿದ್ದರೆ, ಮತ್ತೊಬ್ಬರು ಹಿಂದುಳಿದ ವರ್ಗಗಳಿಂದ ನೇಮಕವಾಗಿದ್ದರು.

  • ಸಿಬಿಐ ಹಾದಿ ಸುಗಮ – ಚಂದ್ರಬಾಬು ನಾಯ್ಡು ಆದೇಶ ರದ್ದು ಪಡಿಸಿದ ಸಿಎಂ ಜಗನ್

    ಸಿಬಿಐ ಹಾದಿ ಸುಗಮ – ಚಂದ್ರಬಾಬು ನಾಯ್ಡು ಆದೇಶ ರದ್ದು ಪಡಿಸಿದ ಸಿಎಂ ಜಗನ್

    ಅಮರಾವತಿ: ಆಂಧ್ರ ಪ್ರದೇಶದ ಯಾವುದೇ ಹಗರಣವನ್ನು ಸಿಬಿಐ ತನಿಖೆ ಮಾಡುವಂತ್ತಿಲ್ಲ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿವಾದಿತ ಆದೇಶವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ರದ್ದು ಮಾಡಿದ್ದಾರೆ.

    ಆಂಧ್ರ ಪ್ರದೇಶ ಸಿಎಂ ಆಗಿ ಮೇ 30 ರಂದು ಅಧಿಕಾರ ವಹಿಸಿಕೊಂಡ ಜಗನ್ ಮೋಹನ್ ರೆಡ್ಡಿ ಸರ್ಕಾರದ ಪರ ಹಲವು ಜನಪರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೆ ಸಿಬಿಐಗೆ ರಾಜ್ಯದಲ್ಲಿ ತನಿಖೆ ನಡೆಸುವ ಹಾದಿಯನ್ನ ಸುಗಮಗೊಳಿಸಿದ್ದಾರೆ. ಸಿಎಂ ಕಾರ್ಯದರ್ಶಿ ಈ ಆದೇಶವನ್ನು ಪ್ರಕಟಿಸಿದ್ದಾರೆ.

    ಕಳೆದ ವರ್ಷ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರವೂ ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಹಿಂತೆಗೆದುಕೊಂಡು ಆದೇಶ ನೀಡಿದ್ದರು. ಆ ಮೂಲಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದರು. ಇದನ್ನು ಓದಿ: ಆಂಧ್ರ ರೈತರ ಖಾತೆಗೆ ಬೀಳಲಿದೆ ವಾರ್ಷಿಕ 12,500 ರೂ.

    ದೆಹಲಿ ವಿಶೇಷ ಪೊಲೀಸ್ ಸಂಸ್ಥೆಯ ಕಾಯಿದೆ (1946) ಅಡಿಯಲ್ಲಿ ಬರುವ ಸೆಕ್ಷನ್ 6ರ ಅನುಸಾರ ರೂಪಿಸಲಾಗಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಿಬಿಐ ಗೆ ನೀಡಿದ್ದ ಅಧಿಕಾರವನ್ನು ಅಂದು ಹಿಂಪಡೆಯಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ಯಾವುದೇ ರೀತಿಯ ತನಿಖೆ, ದಾಳಿ ನಡೆಸಿದರೂ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯವುದು ಕಡ್ಡಾಯವಾಗಿತ್ತು. ಸದ್ಯ ಸಿಎಂ ಜಗನ್ ಆದೇಶವನ್ನು ರದ್ದು ಪಡಿಸಿರುವುದರಿಂದ ಸಿಬಿಐ ಆಂಧ್ರಪ್ರದೇಶದಲ್ಲಿ ತನಿಖೆ ನಡೆಸಬಹುದಾಗಿದೆ.