Tag: CM H.D.Kumaraswamy

  • ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾದ್ರೆ ಏನ್ ಮಾಡ್ತೀಯಾ: ನಾಲಿಗೆ ಹರಿಬಿಟ್ಟ ಕೆ.ಎಸ್.ಈಶ್ವರಪ್ಪ

    ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾದ್ರೆ ಏನ್ ಮಾಡ್ತೀಯಾ: ನಾಲಿಗೆ ಹರಿಬಿಟ್ಟ ಕೆ.ಎಸ್.ಈಶ್ವರಪ್ಪ

    ಹುಬ್ಬಳ್ಳಿ: ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾಗಿದ್ದರೆ ಏನ್ಮಾಡ್ತೀಯಾ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾರೆ.

    ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು. ಈ ಘಟನೆಯಿಂದ ನನಗೆ ತುಂಬಾ ದುಃಖ ತಂದಿತ್ತು. ನನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾದಷ್ಟು ನೋವಾಗಿತ್ತು. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಏನ್ ಮಾಡಬೇಕು ಈವಾಗ ಅಂದಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

    ಯಾರು ನಿನ್ನನ್ನು ಮಣ್ಣಿನ ಮಗ ಎಂದು ಕರೆದರು? ನಾವೇನು ಕಲ್ಲಿನ ಮಕ್ಕಳಾ? ಸಾಲಮನ್ನಾ ಹೆಸರಲ್ಲಿ ದ್ರೋಹ ಮಾಡಿದವರು ಮಣ್ಣಿನ ಮಕ್ಕಳಲ್ಲ. ನಿಜವಾದ ಮಣ್ಣಿನ ಮಗ ಬಿ.ಎಸ್. ಯಡಿಯೂರಪ್ಪ ಅವರು. ಪ್ರಧಾನಿ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡುವ ಇವರ ನಾಲಿಗೆ ಬೀಳಬೇಕು ಎಂದು ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಗುಡುಗಿದರು.

    ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಿಂಗಾಯತರು. ಅವನ ಗ್ರಹಚಾರಕ್ಕೆ ಈಗ ಏನು ಹೇಳುತ್ತಾರೆ. ಕುರುಬ, ಲಿಂಗಾಯತ, ಒಕ್ಕಲಿಗರ ಹೆಸರಿನಲ್ಲಿ ಮತ ಕೇಳುವ ಇವರು ಜಾತಿವಾದಿಗಳಲ್ವಾ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಟಾಂಗ್ ಕೊಟ್ಟರು.

    ಪ್ರಧಾನಿ ಮೋದಿ ಬಗ್ಗೆ ಮಾತನಾಡುವವರಿಗೆ ಮಗನೆ ಬಾ ನಿಂಗೆ ಒದೆಯುತ್ತೇವೆ ಅಂತ ಹೇಳಿ. ಕ್ಷೇತ್ರ ಅಭಿವೃದ್ಧಿ ಮಾಡುವುದಾಗಿ ಪ್ರಮಾಣ ಮಾಡಿ, ಸಿ.ಎಸ್.ಶಿವಳ್ಳಿ ಅವರ ಆತ್ಮಕ್ಕೆ ನಾವು ಶಾಂತಿ ನೀಡುತ್ತೇವೆ. ಪುಲ್ವಾಮಾ ದಾಳಿಯಾದ ಹನ್ನೊಂದನೇ ದಿನಕ್ಕೆ ಉಗ್ರರನ್ನು ಬಲಿ ತೆಗೆದುಕೊಂಡ ದೇಶಭಕ್ತರು ನಾವು. ಸಿದ್ದರಾಮಯ್ಯ ನಮಗೆ ಯಾವ ಲೆಕ್ಕಾರಿ ಎಂದು ಪ್ರಶ್ನಿಸಿದರು.

    ಮಣ್ಣಿನ ಮಗನ ಹೋಮದಿಂದ ಬಿ.ಎಸ್.ಯಡಿಯೂರಪ್ಪ ಸಿಎಂ ಆಗುತ್ತಾರೆ. ರಾವಣ ಹೋಮ ಮಾಡಿದಾಗಲೂ ದೇಶಕ್ಕೆ ಒಳ್ಳೇದಾಯಿತು ಎಂದು ರೇವಣ್ಣ ಅಲ್ಲ ರಾವಣ ಎಂದು ವ್ಯಂಗ್ಯವಾಡಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವುದು ಆಗಲ್ಲ ಅಂತ ಹೇಳುತ್ತಾರೋ ಅದೇ ಆಗುತ್ತದೆ. ನರೇಂದ್ರ ಮೋದಿ ಪ್ರಧಾನಿ ಆಗಲ್ಲ, ಕುಮಾರಸ್ವಾಮಿ ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದಿದ್ದರು. ಆದರೆ ಅವರ ಮಾತು ಸುಳ್ಳಾಯಿತು ಎಂದು ಹೇಳಿದರು.

  • ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ಭಾಗ್ಯ: ಸಚಿವ ಸಂಪುಟದಲ್ಲಿ ನಿರ್ಧಾರ

    ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ಭಾಗ್ಯ: ಸಚಿವ ಸಂಪುಟದಲ್ಲಿ ನಿರ್ಧಾರ

    – ಪೊಲೀಸ್ ಸೇವೆಯಲ್ಲಿ ಮಹಿಳೆಯರ ಪ್ರಮಾಣ ಶೇ 25 ರಷ್ಟು ಏರಿಕೆ ತೀರ್ಮಾನ

    ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೆ ಸೈಕಲ್ ಭಾಗ್ಯ ಸಿಕ್ಕಿದ್ದು, ಈ ಮೂಲಕ 5 ಲಕ್ಷ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

    ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಿತು. ಈ ವೇಳೆ ಸೈಕಲ್ ವಿತರಣೆ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

    ಸಂಪುಟ ಸಭೆ ಬಳಿಕ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಸಚಿವ ಕೃಷ್ಣ ಭೈರೇಗೌಡ ಅವರು, 189 ಕೋಟಿ ರೂ. ವೆಚ್ಚದಲ್ಲಿ 2019-20ನೇ ಸಾಲಿನ 5 ಲಕ್ಷ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅಷ್ಟೇ ಅಲ್ಲದೆ ಪೊಲೀಸ್ ಸೇವೆಯಲ್ಲಿ ಮಹಿಳೆಯರ ಪ್ರಮಾಣವನ್ನು ಶೇ 25 ರಷ್ಟು ಏರಿಸಲು ನಿರ್ಧಾರ ಮಾಡಲಾಗಿದೆ. ಅದರಲ್ಲಿ ಶೇ 25 ರಷ್ಟು ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಶೇ 25 ರಷ್ಟು ನೇಮಕಾತಿ ಮಾಡಲಾಗುವುದು. ನೇರ ನೇಮಕಾತಿ ಅಡಿ ಎಲ್ಲಾ ಹುದ್ದೆ ನೇಮಕಾತಿಗೆ ಸರ್ಕಾರ ತೀರ್ಮಾನಿಸಿದೆ. ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರಿಗೆ ಉದ್ಯೋಗ ನೀಡಲು ಕಾಯ್ದೆ ಮಾಡಲಾಗಿದೆ ಎಂದರು.

    2018ರ ಕರ್ನಾಟಕ ಔದ್ಯೋಗಿಕ ಕೈಗಾರಿಕಾ ಉದ್ಯೋಗಗಳ ನಿಯಮಾವಳಿ ತಿದ್ದುಪಡಿ ವಿಧೇಯಕ ಜಾರಿಗೆ ಅನುಮೋದನೆ ಸಿಕ್ಕಿದೆ. ಸರ್ಕಾರದಿಂದ ಸಹಾಯ, ರಿಯಾಯಿತಿ ಪಡೆಯುವ ಖಾಸಗಿ ಕಾರ್ಖಾನೆಯಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಮೇರೆಗೆ ಉದ್ಯೋಗ ನೀಡಬೇಕು ಎನ್ನುವ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

     

    ಬಳ್ಳಾರಿಯ ವಿಜಯನಗರ ಮೆಡಿಕಲ್ ಸಂಸ್ಥೆಯಲ್ಲಿ ಹಾಸ್ಟೆಲ್ ಮತ್ತು ಸಲಕರಣೆಗೆ 65 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ. ವಿಕಲಚೇತನ ಹಕ್ಕುಗಳ ಕರಡು ಅಧಿನಿಯಮ 2019ರ ಅಡಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೇ 5 ವಸತಿ ವ್ಯವಸ್ಥೆ, ಶೇ 5 ರಷ್ಟು ಸರ್ಕಾರಿ ಸವಲತ್ತು. ಶೇ 4ರಷ್ಟು ಸರ್ಕಾರಿ ನೇಮಕಾತಿ ಅವಕಾಶ ನೀಡುವ ನಿಯಮಗಳಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಚಾಮರಾಜನಗರದಲ್ಲಿ ಸರ್ಕಾರಿ ಕಾನೂನು ವಿದ್ಯಾಲಯ ಸ್ಥಾಪನೆಗೆ ಅನುಮತಿ ದೊರಕಿದೆ ಎಂದು ಮಾಹಿತಿ ನೀಡಿದರು.

    ಉನ್ನತ ವ್ಯಾಸಂಗ, ಸಂಶೋಧಕ ವಿದ್ಯಾರ್ಥಿಗಳು ಸರ್ಕಾರದ ಹಲವು ಇಲಾಖೆಗಳಲ್ಲಿ ಇಂಟರ್ನ್‍ಶಿಪ್ ಮಾಡಬಹುದು. ಈ ನಿಟ್ಟಿನಲ್ಲಿ 27 ವಿಷಯಗಳನ್ನು ನಿಗದಿ ಮಾಡಲಾಗಿದೆ. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅನುಮೋದನೆ. ಬ್ರಾಹ್ಮಣ ಅಭಿವೃದ್ದಿ ಮಂಡಳಿಗೆ 25 ಕೋಟಿ ರೂ.ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಬಳ್ಳಾರಿ ಅಕ್ರಮ ಗಣಿಗಾರಿಕೆ ಅಕ್ರಮ ಕುರಿತು ಎಸ್‍ಐಟಿ ನಡೆದುತ್ತಿದ್ದ ತನಿಖೆಯ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ಹೆಚ್ಚುವರಿಯಾಗಿ ವಿಸ್ತರಣೆ ಮಾಡಲಾಗಿದೆ ಎಂದ ಅವರು, ಆಪರೇಷನ್ ಕಮಲ ಆಡಿಯೋ ಸಿಡಿ ಪ್ರಕರಣ ಎಸ್‍ಐಟಿ ತನಿಖೆ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ. ಸಿಎಂ ಕುಮಾರಸ್ವಾಮಿ ಅವರು ಎಸ್‍ಐಟಿ ತಂಡ ರಚನೆಯ ಪೂರ್ಣಾಧಿಕಾರ ಹೊಂದಿದ್ದಾರೆ. ಇದರಿಂದಾಗಿ ಅದನ್ನು ಸಚಿವ ಸಂಪುಟದ ಗಮನಕ್ಕೆ ತರಲೇಬೇಕು ಎಂಬ ಕಡ್ಡಾಯ ನಿಯಮವೇನಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ವಿದೇಶ ಪ್ರವಾಸ ಕೈಗೊಂಡ್ರೇ ಅದೇನು ದೊಡ್ಡ ಅಪರಾಧವಲ್ಲ: ಸಚಿವ ಶಿವಶಂಕರರೆಡ್ಡಿ

    ಸಿಎಂ ವಿದೇಶ ಪ್ರವಾಸ ಕೈಗೊಂಡ್ರೇ ಅದೇನು ದೊಡ್ಡ ಅಪರಾಧವಲ್ಲ: ಸಚಿವ ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ಸಿಎಂ ಕುಮಾರಸ್ವಾಮಿ ಎರಡು ದಿನ ಪ್ರವಾಸ ಕೈಗೊಂಡರೆ ಅದೇನು ದೊಡ್ಡ ಅಪರಾಧವಲ್ಲ, ಆರೋಗ್ಯ ದೃಷ್ಟಿ ಹಾಗೂ ಬೇರೆ ಬೇರೆ ಕಾರಣಕ್ಕೆ ಹೋಗಿರಬಹುದು. ಆದರೆ ಇದಕ್ಕೆ ವಿರೋಧ ಪಕ್ಷಗಳು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ದಿಬ್ಬೂರು ಗ್ರಾಮದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ನಿರ್ವಹಣೆ ಸಂಬಂಧ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತಿದೆ. ಆದರೆ ವಿಪಕ್ಷದವರು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

    ಸಮ್ಮಿಶ್ರ ಸರ್ಕಾರದಲ್ಲಿ ಕೆಲ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಸಾಮಾನ್ಯ, ಪಕ್ಷದ ನಾಯಕರೇ ಆಗಲಿ, ಮಂತ್ರಿಗಳೇ ಆಗಲಿ ಕೂತು ಬಗೆ ಹರಿಸಿಕೊಳ್ಳಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಹತ್ತಿಕ್ಕಲು ನಾವು ದೇಶ-ರಾಜ್ಯದ ಹಿತದೃಷ್ಟಿಯಿಂದ ಒಂದಾಗಿ ಹೋಗಬೇಕಿದೆ. ಹೀಗಾಗಿ ಯಾರೂ ಕೂಡ ಯಾವುದೇ ಭಿನ್ನಾಭಿಪ್ರಾಯಗಳು ಬಂದಾಗ ಮಿತಿ ಮೀರಿ ಮಾತನಾಡುವುದು ಸರಿಯಲ್ಲ ಎಂದರು.

    ಇದೇ ವೇಳೆ ಚಿಕ್ಕಬಳ್ಳಾಪುರ ಶಾಸಕ ಡಾ ಕೆ. ಸುಧಾಕರ್‍ಗೆ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ ಎನ್ನಲಾದ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಅದರದ್ದೇ ಆದ ಮಾನದಂಡಗಳಿವೆ, ಈ ವಿಷಯವನ್ನು ನಾನು ಸಹ ಮಾಧ್ಯಮದಲ್ಲಿ ಗಮನಿಸಿದೆ, ಪಿಸಿಬಿ ಅಧ್ಯಕ್ಷರಾಗಲು ಅದರದ್ದೇ ಆದ ವಿದ್ಯಾಭ್ಯಾಸದ ಅರ್ಹತೆ ಇರಬೇಕು ಜೊತೆಗೆ ಪರಿಸರದ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು ಅಂತಿದೆ. ಹೀಗಾಗಿ ಪಿಸಿಬಿ ಸ್ಥಾನ ತಪ್ಪಿರಬೇಕೇ ಹೊರತು ಬೇರೆ ಯಾವ ಉದ್ದೇಶಗಳಿಂದಲ್ಲ ಎಂಬುದು ನನ್ನ ಭಾವನೆ ಅಂತ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯ ರಾಜಕೀಯದಲ್ಲಿ ತೊಡಗಿ ಕೊಡಗು ಸಂತ್ರಸ್ತರನ್ನು ಮರೆತ ಜನನಾಯಕರು!

    ರಾಜ್ಯ ರಾಜಕೀಯದಲ್ಲಿ ತೊಡಗಿ ಕೊಡಗು ಸಂತ್ರಸ್ತರನ್ನು ಮರೆತ ಜನನಾಯಕರು!

    ಮಡಿಕೇರಿ: ಕೊಡಗು ಜಲಪ್ರಳಯಕ್ಕೆ ತತ್ತರಿಸಿ ಹೋಗಿ ಈಗಾಗಲೇ ಎರಡೂವರೆ ತಿಂಗಳು ಕಳೆದಿದೆ. ದುರಂತದಲ್ಲಿ ಮನೆಯನ್ನು ಕಳೆದುಕೊಂಡವರು ಸಾವಿರಾರು ಮಂದಿ ಇದ್ದಾರೆ. ಇವರಿಗೆಲ್ಲಾ ಆದಷ್ಟು ಶೀಘ್ರವೇ ಮನೆಗಳನ್ನು ಕಟ್ಟಿಕೊಡುವ ಭರವಸೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಎಲ್ಲರಿಂದಲೂ ಸಿಕ್ಕಿತ್ತು.

    ಆಗಿದ್ದು ಆಗಿ ಹೋಯಿತು, ಇನ್ನೇನು ಕೆಲವೇ ತಿಂಗಳಲ್ಲಿ ನಮಗೆಲ್ಲಾ ಸೂರು ಸಿಗುತ್ತೆ ಅಂದು ಕೊಂಡಿದ್ದ ಮಂದಿಗೆ ಇದೀಗ ನಿರಾಸೆ ಆಗುತ್ತಿದೆ. ಯಾಕೆಂದರೆ ಸರ್ಕಾರ ಇನ್ನೂ ಮಾದರಿ ಮನೆಗಳನ್ನು ಫೈನಲ್ ಮಾಡುವ ಕೆಲಸಕ್ಕೆ ಕೈ ಹಾಕಿಲ್ಲ.

    ಮನೆ ನಿರ್ಮಾಣಕ್ಕೆ ಪೂರಕವಾಗಿ ಕೆಲಸಗಳು ಕೂಡ ಮೊದ ಮೊದಲು ಭರದಿಂದಲೇ ಸಾಗಿದವು. ಈಗಾಗಲೇ ಮಾದರಿ ಮನೆಗಳ ಕೆಲಸ ಕೂಡ ಪೂರ್ಣಗೊಳ್ಳುವ ಹಂತದಲ್ಲಿದೆ. ಇನ್ನೇನು ಬೇಗನೆ ಮನೆಗಳನ್ನು ಕಟ್ಟುತ್ತಾರೆ ಅಂತಾ ಸಂತ್ರಸ್ತರು ಅಂದುಕೊಂಡಿದ್ದರು. ಆದರೆ ಸದ್ಯದ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ರಾಜಕೀಯದಲ್ಲೇ ಹೆಚ್ಚು ತಲೆಕೆಡಿಸಿಕೊಂಡಿರುವ ರಾಜಕೀಯ ನಾಯಕರು ನಮ್ಮ ಕಡೆ ಗಮನ ಹರಿಸಿಲ್ಲ ಅಂತಾ ಸಂತ್ರಸ್ತರು ಬೇಸರ ವ್ಯಕ್ತಪಡಿಸಿದ್ದಾರೆ.

    ಮನೆಗಳನ್ನು ಕಳೆದುಕೊಂಡ ನಿರಾಶ್ರಿತರು ಇನ್ನೂ ಆಶ್ರಯ ಕೇಂದ್ರಗಳಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಬಾಡಿಗೆ ಮನೆಗೆ ತೆರಳುವ ಜನರಿಗೆ ಜಿಲ್ಲಾಡಳಿತವೇ ಬಾಡಿಗೆ ಹಣ ಪಾವತಿಸುತ್ತದೆ ಅಂತಾ ಹೇಳಿತ್ತು. ಆದರೂ ಇದು ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು ಜಿಲ್ಲಾಡಳಿತವು ಮೌನವಾಗಿ ಉಳಿದಿದೆ. ಇನ್ನೂ ನಾವು ಎಷ್ಟು ದಿವಸ ಇದೇ ರೀತಿಯ ಜೀವನವನ್ನು ನಡೆಸಬೇಕು? ಮೊದಮೊದಲು ತೋರಿದ ಆಸಕ್ತಿ ಈಗ ಯಾಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

    ಜಿಲ್ಲೆಯ ಜನರು ಜಲಪ್ರಳಯದಲ್ಲಿ ಸಿಕ್ಕಿದ್ದಾಗ ರಾಜ್ಯ ಸರ್ಕಾರ ಸ್ಪಂದಿಸಿದ ರೀತಿ ಎಲ್ಲರಿಗೂ ಖುಷಿ ತಂದಿತ್ತು. ಕೊನೆಪಕ್ಷ ನಮ್ಮ ಕಷ್ಟಕ್ಕೆ ಮಿಡಿಯುವ ಮಂದಿ ಇದ್ದಾರೆ ಎನ್ನುವ ಸಮಾಧಾನ, ಸೂರುಗಳನ್ನು ಕಳೆದುಕೊಂಡ ಜನರಲ್ಲಿತ್ತು. ಆದರೆ ಎರಡೂವರೆ ತಿಂಗಳು ಕಳೆದರೂ ನಮಗೆ ಸೂರು ಸಿಗುತ್ತಿಲ್ಲ ಎಂದು ಸಂತ್ರಸ್ತರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಿಂದುತ್ವದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ನಾವು ಮುಂದಿದ್ದೇವೆ: ಸಿಎಂ

    ಹಿಂದುತ್ವದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ನಾವು ಮುಂದಿದ್ದೇವೆ: ಸಿಎಂ

    ಉಡುಪಿ: ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ. ಹಿಂದುತ್ವದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ನಾವಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಜಿಲ್ಲೆಯ ಬೈಂದೂರು ತಾಲೂಕು ತ್ರಾಸಿಯಲ್ಲಿ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಸರ್ಕಾರದ ಯೋಜನೆಗಳಿಗೆ ಬೇಕಾಗುವಷ್ಟು ಹಣ ನಮ್ಮಲ್ಲಿದೆ. ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ- ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ. ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಡುತ್ತ ಬಿಜೆಪಿಯವರು ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

    ನಾನು ದೈವಪ್ರೇರಿತ ಮುಖ್ಯಮಂತ್ರಿ. ಬಿಜೆಪಿ ನಾಯಕರು ಸರ್ಕಾರ ಬೀಳುವ ಕನಸಲ್ಲಿದ್ದಾರೆ. ನಮಗೆ ದೈವ ಪ್ರೇರಣೆ ಇದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರಬೇಕಂತ ದೇವರು ತೀರ್ಮಾನಿಸ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

    ಉಪಚುನಾವಣೆ ನಂತರ ನಾನು ಮನೆಗೆ ಹೋಗಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದಂತೆ ಯಾವುದೂ ಆಗಲ್ಲ. ಚುನಾವಣೆ ನಂತರ ಬಡವರ ಮನೆಗೆ ಬಂದು ಚರ್ಚೆ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಅಪ್ಪ-ಮಕ್ಕಳನ್ನು ಸೋಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv