Tag: CM H.D Kumaraswami

  • ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    – ಎಚ್‍ಡಿಕೆ ಬೆಂಬಲಿಗರಿಂದ ಕೃತ್ಯ ಎಂದು ಆರೋಪ
    – ಕಾರಿನ ಚಕ್ರದ ಗಾಳಿ ತೆಗೆದ ಬೆಂಬಲಿಗರು

    ರಾಮನಗರ: ಗೋಮಾಳ ಜಮೀನು ಒತ್ತುವರಿ ಸಂಬಂಧ ಗ್ರಾಮಸ್ಥರಿಂದ ಮಾಹಿತಿ ಪಡೆಯಲು ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್ ಹಾಗೂ ಅವರ ಬೆಂಬಲಿಗರಿಗೆ ಕೋಳಿ ಮೊಟ್ಟೆಯಿಂದ ಹೊಡೆದು ಹಲ್ಲೆಗೆ ಯತ್ನಿಸಿರುವ ಘಟನೆ ರಾಮನಗರ ತಾಲೂಕಿನ ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ನಡೆದಿದೆ.

    ತಮ್ಮ ಮೇಲೆ ಹಲ್ಲೆಗೆ ಎಚ್‍ಡಿ ಕುಮಾರಸ್ವಾಮಿ ಅವರ ಬೆಂಬಲಿಗರೇ ಕಾರಣ ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹಿರೇಮಠ್, ಸ್ವರಾಜ್ ಪಕ್ಷದ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

    ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಹಾಗೂ ಅವರ ಬೆಂಬಲಿಗರು ಕೇತಗಾನಹಳ್ಳಿಗೆ ಭೇಟಿ ನೀಡಿದ್ದಾರೆ. ಗ್ರಾಮದ ದಲಿತರೊಬ್ಬರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸುವ ವೇಳೆ ಬಂದ ಕೆಲವು ಗ್ರಾಮಸ್ಥರು ಹಾಗೂ ಎಚ್‍ಡಿಕೆ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ದೂರಿದ್ದಾರೆ.

    ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ ತಮ್ಮಣ್ಣ ಹಾಗೂ ಅವರ ಸಂಬಂಧಿಕರು ಬಿಡದಿ ಸಮೀಪದಲ್ಲಿ ಒಟ್ಟು 196 ಎಕರೆ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಹೈಕೋರ್ಟ್ ನಲ್ಲೂ ಸಹ ಕೇಸ್ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಗ್ರಾಮದಲ್ಲಿ ಭೂಮಿ ಕಳೆದುಕೊಂಡ ಜನರ ಬಳಿ ಮಾಹಿತಿ ಪಡೆಯಲು ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಆಗಮಿಸಿದ್ದರು.

    ಎಸ್.ಆರ್ ಹಿರೇಮಠ್ ಹಾಗೂ ಬೆಂಬಲಿಗರು ಗ್ರಾಮಕ್ಕೆ ಬಂದಿರುವ ಮಾಹಿತಿ ಪಡೆದ ಎಚ್‍ಡಿಕೆ ಬೆಂಬಲಿಗರು ಗಲಾಟೆ ನಡೆಸಿದ್ದಾರೆ. ಅಲ್ಲದೆ ಕೆಲವರ ಮೇಲೆ ಹಲ್ಲೆ ನಡೆಸಿ ಮೊಟ್ಟೆಯಿಂದ ಹೊಡೆದಿದ್ದು ಕಾರಿನ ಚಕ್ರಗಳ ಗಾಳಿಯನ್ನು ಸಹ ತೆಗೆದಿದ್ದಾರೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.

    ಬೇಕೆಂತಲೇ ಎಚ್‍ಡಿಕೆ ಬೆಂಬಲಿಗರು ಹಾಗೂ ಅವರ ಕಡೆಯವರು ಈ ರೀತಿ ಗಲಾಟೆ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಹಿರೇಮಠ್ ಹಾಗೂ ರವಿಕೃಷ್ಣಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಗ್ರಾಮದ ಹನುಮಂತೇಗೌಡ ಹಾಗೂ ಕೆಲವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

  • ಸಿಎಂನದ್ದು ಕಣ್ಣೀರಿನ, ಡಿಸಿಎಂ ಅವರದ್ದು ಬಿಲ್ಡಪ್ ರಾಜಕಾರಣ- ತೇಜಸ್ವಿನಿ ಕಿಡಿ

    ಸಿಎಂನದ್ದು ಕಣ್ಣೀರಿನ, ಡಿಸಿಎಂ ಅವರದ್ದು ಬಿಲ್ಡಪ್ ರಾಜಕಾರಣ- ತೇಜಸ್ವಿನಿ ಕಿಡಿ

    ತುಮಕೂರು: ಸಿಎಂ ಅವರದ್ದು ಕಣ್ಣೀರಿನ ರಾಜಕಾರಣವಾದರೆ ಡಿಸಿಎಂ ಅವರದ್ದು ಬಿಲ್ಡಪ್ ರಾಜಕಾರಣ ಎಂದು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಹರಿಹಾಯ್ದಿದ್ದಾರೆ.

    ತುಮಕೂರಿನಲ್ಲಿ ಬರ ಅಧ್ಯಯನ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೇಜಸ್ವಿನಿ ಅವರು, ಈ ಭಾಗದ ಎತ್ತಿನ ಹೊಳೆ ಯೋಜನೆಗೆ ನಿಗದಿಯಾದ ಹಣವೆಷ್ಟು? ವಿಳಂಬದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟ ಎಷ್ಟು? ಸಮರೋಪಾದಿಯಲ್ಲಿ ಈ ನೀರಾವರಿ ಯೋಜನೆಗಳನ್ನ ಬರಪೀಡಿತ ಪ್ರದೇಶಗಳಲ್ಲಿ, ಮಳೆಯಿಲ್ಲದ ಪ್ರದೇಶದಲ್ಲಿ ಸರ್ಕಾರ ಯಾಕೆ ಮಾಡೋದಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಅಷ್ಟೇ ಅಲ್ಲದೆ ಸಿಎಂ ಮೊದಲು ಕಣ್ಣೀರಿನ ರಾಜಕಾರಣ, ಜಾತಿ ರಾಜಕಾರಣ, ಎತ್ತಿಕಟ್ಟುವ ರಾಜಕಾರಣ ಮಾಡ್ತಾರೆ. ಡಿಸಿಎಂ ಪರಮೇಶ್ವರ್ ಸಾಲು ಸಾಲು ವಾಹನಗಳನ್ನ ತಂದು ಬಿಲ್ಡಪ್ ರಾಜಕಾರಣ ಮಾಡ್ತಾರೆ. ಇದನ್ನೆಲ್ಲ ಬಿಟ್ಟು ಮೊದಲು ಜನರ ಬಗ್ಗೆ ಯೋಚಿಸಿ ಎಂದು ಹೇಳಿದ್ದಾರೆ. ಇನ್ನು ಎಷ್ಟು ಸಚಿವರು ಬರ ಪ್ರವಾಸ ಮಾಡಿದ್ದಾರೆ? ಕೃಷಿ ಸಚಿವರು ಎಲ್ಲಿದ್ದಾರೆ? ಬರಪೀಡಿತ 100 ತಾಲೂಕುಗಳಲ್ಲಿ ಹಸುಗಳೆಷ್ಟಿವೆ? ಮೇವು ಬ್ಯಾಂಕ್ ಎಲ್ಲಿ ಸ್ಥಾಪನೆ ಮಾಡಿದ್ದೀರಾ? ಜನರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಎಲ್ಲಿ ಮಾಡುತ್ತೀರಿ ಎಂದು ಪ್ರಶ್ನಿಸಿ ಸಿಎಂ ಹಾಗೂ ಡಿಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ಜನರ ಸಮಸ್ಯೆಯನ್ನು ಕಾರ್ಯಕ್ರಮಕ್ಕೆ ಆಗಮಿಸಿರುವ ಕೇಂದ್ರ ಸಚಿವ ರಮೇಶ್ ಜಿಗಜಿಗಣಿ ಅವರ ಬಳಿ ಹೇಳಿಕೊಳ್ಳಿ. ಕೇಂದ್ರದಿಂದ ಸಹಾಯ ಮಾಡಲು ನಾವು ಬದ್ಧರಿದ್ದೇವೆ ಎಂದು ಈ ವೇಳೆ ಜನರಿಗೆ ಭರವಸೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv