Tag: CM Dashboard

  • ಪ್ರಧಾನಿ ಕಚೇರಿ ಮಾದರಿಯಲ್ಲಿ ಸಿಎಂ ಡ್ಯಾಶ್ ಬೋರ್ಡ್‍ಗೆ ಚಾಲನೆ

    ಪ್ರಧಾನಿ ಕಚೇರಿ ಮಾದರಿಯಲ್ಲಿ ಸಿಎಂ ಡ್ಯಾಶ್ ಬೋರ್ಡ್‍ಗೆ ಚಾಲನೆ

    – ಮೊದಲ ದಿನವೇ ಆರು ಇಲಾಖೆಗಳ ಪ್ರಗತಿ ಪರಿಶೀಲನೆ

    ಬೆಂಗಳೂರು: ಪ್ರಧಾನಿ ಕಚೇರಿ ಮಾದರಿಯಲ್ಲಿ ಮುಖ್ಯಮಂತ್ರಿಗೆ ಡಿಜಿಟಲ್ ವೇದಿಕೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿ ನೀಡುವ ಸಿಎಂ ಡ್ಯಾಶ್ ಬೋರ್ಡ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

    ಮುಖ್ಯಮಂತ್ರಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಗತಿಯಲ್ಲಿ ಇರುವ ಯೋಜನೆಗಳ ಸ್ಥಿತಿಗತಿ ಕುರಿತು ಸಿಎಂ ಡ್ಯಾಶ್ ಬೋರ್ಡ್ ಸಮಗ್ರ ಮಾಹಿತಿ ನೀಡಲಿದೆ. ಇಂದು ಡ್ಯಾಶ್ ಬೋರ್ಡ್ ಗೆ ಚಾಲನೆ ನೀಡಿ, ಕಂದಾಯ, ಬಿಬಿಎಂಪಿ, ಇಂಧನ, ಶಿಕ್ಷಣ, ವಸತಿ, ಗ್ರಾಮೀಣಾಭಿವೃದ್ಧಿ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.


    ವಿವಿಧ ಇಲಾಖೆಗಳ ಪ್ರಮುಖ ಕಾರ್ಯಕ್ರಮಗಳ ಕುರಿತು ಪ್ರತಿ ದಿನದ ಮಾಹಿತಿಯನ್ನು ಡ್ಯಾಶ್ ಬೋರ್ಡಿನಲ್ಲಿ ದಾಖಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಈ ಮಾಹಿತಿ ದಾಖಲಿಸುವಲ್ಲಿ ಸ್ಪಷ್ಟತೆ, ನಿಖರತೆ ಇರಬೇಕು. ಯಾವುದೇ ಗೊಂದಲಕ್ಕೆಡೆಮಾಡಬಾರದು. ನೋಡಲ್ ಅಧಿಕಾರಿಗಳು ಹಾಗೂ ಸರ್ಕಾರದ ಹಂತದಲ್ಲಿ ಇಲಾಖಾ ಮುಖ್ಯಸ್ಥರು ಈ ಮಾಹಿತಿಯ ಕುರಿತು ವಿಶೇಷ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ

    ಕಾರ್ಯಕ್ರಮ ರೂಪಿಸುವಷ್ಟೇ ಪ್ರಾಮುಖ್ಯತೆಯನ್ನು ಅನುಷ್ಠಾನಕ್ಕೆ ತರಲು ನೀಡಬೇಕು. ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸದಿದ್ದರೆ ತಳ ಹಂತದ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಆದ್ದರಿಂದ ಇಲಾಖಾ ಮುಖ್ಯಸ್ಥರು ಕಾರ್ಯಕ್ರಮದ ಫಲಾನುಭವಿಗೆ ಸೌಲಭ್ಯ ತಲುಪಿಸುವ ವರೆಗೂ ಖಾತರಿಪಡಿಸಬೇಕು. ಯೋಜನೆಗಳ ಪರಿಣಾಮಕಾರಿ ಅನುಷ್ಠಾನವಾದಾಗ ಜನರಿಗೆ ಈ ವ್ಯವಸ್ಥೆ ನಮ್ಮದು, ನಮಗಾಗಿ ಸ್ಪಂದಿಸುವವರು ಇದ್ದಾರೆ ಎಂಬ ಭಾವನೆ ಬರುವುದು. ಈ ಭಾವ ಮೂಡಿಸಲು ನಾವು ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.


    ಇದೊಂದು ಉತ್ತಮ ಆರಂಭ. ಈ ಡ್ಯಾಶ್ ಬೋರ್ಡ್ ನಿಮ್ಮ ಇಲಾಖೆಯ ಕಾರ್ಯನಿರ್ವಹಣೆ ಕುರಿತು ನಿಮಗೂ ಕನ್ನಡಿ ಹಿಡಿಯುತ್ತದೆ. ಎಲ್ಲರೂ ಜೊತೆಯಾಗಿ ನಮ್ಮ ಜವಾಬ್ದಾರಿ ನಿರ್ವಹಿಸೋಣ. ಆಯವ್ಯಯದಲ್ಲಿ ನಿಗದಿ ಪಡಿಸಿದ ಗುರಿಯನ್ನು ಸಕಾಲದಲ್ಲಿ ತಲುಪುವ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಮುಖ್ಯಮಂತ್ರಿಗಳು, ದಸರಾ ನಂತರ ಮತ್ತೊಂದು ಸಭೆ ನಡೆಸುವುದಾಗಿ ತಿಳಿಸಿದರು.


    ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.