Tag: CM BSY

  • ಶಾಲಾ, ಕಾಲೇಜು ಶುಲ್ಕ ಕಡಿತಗೊಳಿಸಿ- ಸಿಎಂ ಬಿಎಸ್‍ವೈಗೆ ನಟ ಕಿರಣ್ ರಾಜ್ ಮನವಿ

    ಶಾಲಾ, ಕಾಲೇಜು ಶುಲ್ಕ ಕಡಿತಗೊಳಿಸಿ- ಸಿಎಂ ಬಿಎಸ್‍ವೈಗೆ ನಟ ಕಿರಣ್ ರಾಜ್ ಮನವಿ

    ಬೆಂಗಳೂರು: ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿ ಇರುವುದರಿಂದ ಶಾಲಾ-ಕಾಲೇಜುಗಳ ಶುಲ್ಕವನ್ನು ಕಡಿಮೆಗೊಳಿಸುವಂತೆ ನಟ ಕಿರಣ್ ರಾಜ್, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾದಿಂದ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ಇದೀಗ ಲಾಕ್‍ಡೌನ್ ಜಾರಿಗೊಳಿಸಲಾಗಿದ್ದು, ಪೋಷಕರು ಜೀವನ ನಡೆಸಲು ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಿರುವಾಗ ಮಕ್ಕಳ ಶಾಲಾ ಕಾಲೇಜಿನ ಪೂರ್ತಿ ಶುಲ್ಕವನ್ನು ಪಾವತಿಸಲು ಪೋಷಕರು ಕಷ್ಟಪಡುತ್ತಿದ್ದಾರೆ. ಅಲ್ಲದೆ ಶಾಲಾ ಆಡಳಿತ ಮಂಡಳಿಗಳು ಶುಲ್ಕ ಪಾವತಿಸುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇಂತಹ ಪೋಷಕರ ಬೆಂಬಲಕ್ಕೆ ಇದೀಗ ನಟ ಕಿರಣ್ ರಾಜ್ ನಿಂತಿದ್ದಾರೆ.

    ಕಿರುತೆರೆಯ ಕನ್ನಡತಿ ಸಿರಿಯಲ್‍ನಲ್ಲಿ ಮಿಂಚುತ್ತಿರುವ ನಟ ಕಿರಣ್ ರಾಜ್ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪತ್ರವೊಂದನ್ನು ಬರೆದಿದ್ದಾರೆ. ‘ಜಗತ್ತಿನೆಲ್ಲೆಡೆ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜನರ ಬದುಕು ಅಲ್ಲೋಲ-ಕಲ್ಲೋಲವಾಗಿದೆ. ಇನ್ನು ಮಕ್ಕಳು ಶಾಲಾ-ಕಾಲೇಜು ಇಲ್ಲದೆ ಆನ್‍ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಲಾ-ಕಾಲೇಜುಗಳ ಶುಲ್ಕವೂ ಸ್ವಲ್ಪವೂ ಕುಗ್ಗಿಲ್ಲ. ದಯವಿಟ್ಟು ಶಾಲಾ-ಕಾಲೇಜುಗಳ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ಈ ಮೂಲಕ ನಿಮ್ಮಲ್ಲಿ, ಎಲ್ಲಾ ಪೋಷಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. ನಮ್ಮ ಈ ವಿನಂತಿಯನ್ನು ನೀವು ಪರಿಗಣಿಸಿ, ಪರಿಶೀಲಿಸಿ ಜನರ ಬೆನ್ನೆಲುಬಾಗಿ ನಿಲ್ಲುವೆರೆಂಬ ವಿಶ್ವಾಸವಿದೆ ಎಂದು ಆಶಾಯ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದ ಜನರು ಒದ್ದಾಡುತ್ತಿದ್ದು, ಹಲವಾರು ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚಿದ್ದಾರೆ. ಈ ಮಧ್ಯೆ ನಟ ಕಿರಣ್ ರಾಜ್ ಕೂಡ ತಮ್ಮ ಫೌಂಡೇಶನ್ ಮೂಲಕ ಅನೇಕ ಮಂದಿಗೆ ಸಹಾಯ ಮಾಡುತ್ತಿದ್ದಾರೆ. ‘ಮಾರ್ಚ್ 22’ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕ ನಟರಾಗಿ ಅಭಿನಯಿಸಿದ್ದಾರೆ.

  • ಪ್ರತಿ ಜಿಲ್ಲೆಯಲ್ಲೂ ಚಿಕ್ಕ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ: ಶಶಿಕಲಾ ಜೊಲ್ಲೆ

    ಪ್ರತಿ ಜಿಲ್ಲೆಯಲ್ಲೂ ಚಿಕ್ಕ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ: ಶಶಿಕಲಾ ಜೊಲ್ಲೆ

    – ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಮಾಡಬೇಕು

    ಚಿಕ್ಕೋಡಿ: ಕೊರೊನಾ ಎರಡನೇ ಅಲೆಯ ನಡುವೆ ಚಿಕ್ಕ ಮಕ್ಕಳಿಗೂ ಮಹಾಮಾರಿ ಹಬ್ಬುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

    ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಹರಡಬಹುದು ಎಂಬ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ. ಹೀಗಾಗಿ ಮಕ್ಕಳ ಕೊವಿಡ್ ಕೇರ್ ಸೆಂಟರ್ ನಿರ್ಮಾಣಕ್ಕಾಗಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳನ್ನು ಗುರುತಿಸಲಾಗಿದೆ. ನಮ್ಮ ಇಲಾಖೆಯ ವಿಶೇಷ ಮಕ್ಕಳ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲು ನಿರ್ಧರಿಸಲಾಗಿದೆ. ಸರ್ಕಾರದ ವತಿಯಿಂದ ಈಗಾಗಲೇ ಅಧಿಕಾರಿ ಮೋಹನರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ಸಹ ಈ ಕಾರ್ಯಕ್ಕೆ ನೇಮಿಸಲಾಗಿದೆ ಎಂದರು.

    ಮಂಡ್ಯ ಮತ್ತು ಚಾಮರಾಜನಗರದಲ್ಲಿ ತಂದೆ ತಾಯಿಗೆ ಪಾಸಿಟಿವ್ ಬಂದು ತೀರಿ ಹೋಗಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಈ ಇಬ್ಬರೂ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆ ಮಕ್ಕಳ ಪಾಲನೆ ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸೌಕರ್ಯ ಮಾಡಲಾಗುವುದು. ಶಾಶ್ವತಗಾಗಿ ಆ ಮಕ್ಕಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾನು ಸಹ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದನೆಯನ್ನ ನೀಡಿದ್ದಾರೆ ಎಂದು ಹೇಳಿದರು.

    ಆ ಮಕ್ಕಳನ್ನ ನೋಡಲು ಯಾರಾದರೂ ಮುಂದೆ ಬಂದರೆ ಸರ್ಕಾರದ ವತಿಯಿಂದ ಅವರಿಗೆ ನಾವು ಎಲ್ಲ ನೆರವು ನೀಡುತ್ತೇವೆ ಎಂದ ಅವರು ಮಕ್ಕಳ ದತ್ತು ವಿಚಾರದಲ್ಲಿ ವಾಟ್ಸಪ್ ಮತ್ತು ಫೇಸ್ಬುಕ್ ನಲ್ಲಿ ಕೆಲವು ಫೇಕ್ ಸುದ್ದಿಗಳು ಹರಿದಾಡುತ್ತಿವೆ. ಮಕ್ಕಳ ದತ್ತು ವಿಚಾರವಾಗಿ ಕೆಲವು ಫೇಕ್ ನಂಬರ್ ಹರಿಬಿಡಲಾಗಿದೆ. ಅಂಥ ನಂಬರ್‍ಗಳಿಗೆ ಕರೆ ಮಾಡಿ ಯಾರೂ ಸಹ ಮೋಸ ಹೋಗಬಾರದು. ಇಲಾಖೆಯ ಅಧಿಕೃತ ಹೆಲ್ಪ್ ಲೈನ್ 1098 ಗೆ ಕರೆ ಮಾಡಿ ಹೇಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇನ್ನೂ ಒಂದು ವಾರಗಳ ಕಾಲ ಕಠಿಣ ಲಾಕ್ ಡೌನ್ ಜಾರಿ ಮಾಡಬೇಕಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆಯವರು ಒತ್ತಾಯಿಸಿದ್ದಾರೆ.

  • ರಾಜ್ಯದಲ್ಲಿ ಸಮರ್ಥ ಮಂತ್ರಿ ಮಂಡಲವಿದೆ: ಶ್ರೀ ರಾಮುಲು

    ರಾಜ್ಯದಲ್ಲಿ ಸಮರ್ಥ ಮಂತ್ರಿ ಮಂಡಲವಿದೆ: ಶ್ರೀ ರಾಮುಲು

    ಚಿತ್ರದುರ್ಗ: ಸಚಿವರ ಖಾತೆ ಬದಲಾವಣೆ ಮಾಡಿದಾಗ ಎಲ್ಲರಿಗೂ ಅಸಮಾಧಾನ ಇದ್ದೇ ಇರುತ್ತೇ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

    ಇಂದು ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಅವರ ಖಾತೆ ಬದಲಾವಣೆಯಿಂದಾಗಿ ಸರ್ಕಾರಕ್ಕೆ ಕಂಟಕ ಎದುರಾಗಬಹುದಾ ಎಂಬ ಪ್ರಶ್ನೆಗೆ, ಈ ವಿಚಾರವಾಗಿ ಸಚಿವರ ಜೊತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾತನಾಡಲಿದ್ದಾರೆ. ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

    ರಾಜ್ಯದ ಅಭಿವೃದ್ಧಿಗಾಗಿ ಸಮರ್ಥ ಮಂತ್ರಿ ಮಂಡಲ ರಚನೆ ಮಾಡುವ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಕೆಲ ಸಚಿವರ ಖಾತೆ ಬದಲಾವಣೆ ಮಾಡಲಾಗಿದೆ. ಸಮರ್ಥರಾದವರಿಗೆ ಖಾತೆ ನೀಡುವುದರಿಂದ ದೇಶ ಬದಲಾವಣೆಯಾಗಲಿದೆ ಎಂದು ಸ್ಪಷ್ಟನೆ ನೀಡಿದರು.

    ಹಾಗೆಯೇ ಸಚಿವರ ಖಾತೆ ಬದಲಾವಣೆಯ ತೀರ್ಮಾನವನ್ನು ಸಿಎಂ ಬಿಎಸ್ ವೈ ಅವರೇ ಮಾಡಲಿದ್ದು, ಭಾರತೀಯ ಜನತಾ ಪಾರ್ಟಿಯಲ್ಲಿ ಯಾರಿಗೂ ಯಾವುದೇ ಅಸಮಾಧಾನವಿಲ್ಲ. ಸದ್ಯ ರಾಜ್ಯದಲ್ಲಿ ಸಮರ್ಥವಾದ ಮಂತ್ರಿ ಮಂಡಲವಿದೆ. ಮಾಧುಸ್ವಾಮಿ ಹಾಗೂ ಆನಂದ್ ಸಿಂಗ್ ಗೆ ಖಾತೆ ವಿಚಾರವಾಗಿ ಸಮಾಧಾನವಾಗಿದ್ದಾರೆ. ಅವರಿಗೆ ಈ ವಿಚಾರವಾಗಿ ಯಾವುದೇ ಅಸಮಾಧಾನವಿಲ್ಲ ಎಂದು ಸಿಎಂ ಮುಂದೆ ಹೇಳಿದ್ದಾರೆ ಎಂದು ತಿಳಿಸುವ ಮೂಲಕ ಸಚಿವ ಸಂಪುಟದ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

  • ಖಾತೆ ಕ್ಯಾತೆಗೆ ತೇಪೆ ಹಚ್ಚಿದ್ದು ಆಯ್ತು – ಈಗ ಬಿಜೆಪಿಯಲ್ಲಿ ಮತ್ತೊಂದು ಕಗ್ಗಂಟು

    ಖಾತೆ ಕ್ಯಾತೆಗೆ ತೇಪೆ ಹಚ್ಚಿದ್ದು ಆಯ್ತು – ಈಗ ಬಿಜೆಪಿಯಲ್ಲಿ ಮತ್ತೊಂದು ಕಗ್ಗಂಟು

    ಬೆಂಗಳೂರು: ಖಾತೆ ಕಗ್ಗಂಟು ಮುಗಿಯುತ್ತಿದ್ದಂತೆ ಇದೀಗ ಬಿಜೆಪಿಯಲ್ಲಿ ಉಸ್ತುವಾರಿ ಫೈಟ್ ಆರಂಭವಾಗಿದೆ.

    ಪ್ರಮುಖ ಜಿಲ್ಲೆಗಳು ಹಾಲಿ ದೊಡ್ಡ ದೊಡ್ಡವರ ಬಳಿ ಇವೆ. ಹಾಗಾದ್ರೆ ಯಡಿಯೂರಪ್ಪ ಹೇಗೆ ಹಂಚಿಕೆ ಮಾಡ್ತಾರೆ..?, ದೊಡ್ಡ ಸಚಿವರ ಜೊತೆ ರಾಜಿ ಸಂಧಾನ ನಡೆಯುತ್ತಾ ಎಂಬ ಪ್ರಶ್ನೆ ಮೂಡಿದ್ದು, ಇದರ ಇನ್‍ಸೈಡ್ ಸ್ಟೋರಿ ನಿಮ್ಮ ಪಬ್ಲಿಕ್ ಟಿವಿಯಲ್ಲಿ ಬಯಲಾಗಿದೆ.

    ಖಾತೆ ಸರಿಯಾಗಿ ಸಿಗಲಿಲ್ಲ, ಜಿಲ್ಲೆಯಾದ್ರೂ ಕೊಡಿ ಎಂದು ಸಿಎಂ ಮುಂದೆ ಸಚಿವ ಎಂಟಿಬಿ, ಶಂಕರ್ ಹೊಸ ಬೇಡಿಕೆ ಇಟ್ಟಿದ್ದಾರೆ. ಈ ಇಬ್ಬರು ಕೇಳುತ್ತಿರುವ ಜಿಲ್ಲೆಗಳು ಹಿರಿಯರ ಕೈಯಲ್ಲಿ ಇವೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಮೇಲೆ ಸಚಿವ ಎಂಟಿಬಿ ಕಣ್ಣಿಟ್ಟಿದ್ದಾರೆ. ಸದ್ಯ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕಂದಾಯ ಸಚಿವ ಆರ್.ಅಶೋಕ್ ಕೈಯಲ್ಲಿದೆ.

    ಹಾವೇರಿ ಜಿಲ್ಲಾ ಉಸ್ತುವಾರಿ ಮೇಲೆ ಸಚಿವ ಶಂಕರ್ ಕಣ್ಣಿಟ್ಟಿದ್ದು, ಸದ್ಯ ಹಾವೇರಿ ಉಸ್ತುವಾರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೈಯಲ್ಲಿದೆ. ಈ ನಡುವೆ ರಾಮನಗರ ಜಿಲ್ಲೆ ಮೇಲೆ ಕಣ್ಣಿಟ್ಟಿರುವ ಸಚಿವ ಸಿ.ಪಿ.ಯೋಗೇಶ್ವರ್ ಅವರು ಹೆಚ್‍ಡಿಕೆ, ಡಿಕೆಶಿ ವಿರುದ್ಧ ಹೋರಾಡಲು ನನಗೆ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸದ್ಯ ರಾಮನಗರ ಜಿಲ್ಲಾ ಉಸ್ತುವಾರಿ ಡಿಸಿಎಂ ಅಶ್ವಥ್‍ನಾರಾಯಣ್ ಕೈಯಲ್ಲಿ ಇದೆ.

    ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಬಿಡಲು ನಾನು ರೆಡಿ ಎಂದು ಅಶೋಕ್ ಒಪ್ಪಿಗೆ ಸೂಚಿಸಿದ್ದಾರೆ. ಹಾವೇರಿ ಉಸ್ತುವಾರಿ ಬದಲಾವಣೆ ಸಿಎಂಗೆ ಬಿಟ್ಟ ನಿರ್ಧಾರ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಆದರೆ ಮೂವರು ಹಿರಿಯ ಸಚಿವರಿಗೆ ಬೇರೆ ಯಾವ ಜಿಲ್ಲೆ ಕೊಡುವುದು ಎಂದು ಸಿಎಂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

  • ಹುಣಸೋಡು ಸ್ಫೋಟ ಪ್ರಕರಣ- 150ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    ಹುಣಸೋಡು ಸ್ಫೋಟ ಪ್ರಕರಣ- 150ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    – 7 ಗ್ರಾಮದ 1,422 ಕುಟುಂಬಗಳಿಗೆ ತೊಂದರೆ
    – 7 ಗ್ರಾಮಗಳಲ್ಲಿ ಕ್ರಷರ್ ಗಳದ್ದೇ ಸಾಮ್ರಾಜ್ಯ

    ಶಿವಮೊಗ್ಗ: ಜಿಲ್ಲೆಯಲ್ಲಿ ಸಂಭವಿಸಿದ ಬ್ಲಾಸ್ಟ್ ನಿಂದಾಗಿ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದು, ಹಲವು ಕಾರ್ಮಿಕರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಐವರ ಮೃತದೇಹಗಳು ಪತ್ತೆಯಾಗಿವೆ. ಸ್ಫೋಟದಿಂದ ಜೀವ ಹಾನಿ ಜೊತೆಗೆ ಆಸ್ತಿ ಪಾಸ್ತಿ ಸಹ ಹಾನಿಯಾಗಿದ್ದು, 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ 1,422 ಕುಟುಂಬಗಳಿಗೆ ತೊಂದರೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಶಿವಮೊಗ್ಗದ ಹುಣಸೋಡು ಗ್ರಾಮದ ಬಳಿ ಭೀಕರ ಸ್ಫೋಟ ಸಂಭವಿಸಿದ್ದು, ಜಿಲ್ಲೆಯ ಅಬ್ಬಲೆಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹೂಣಸೊಂಡ, ಬಸವನಗಂಗೂರು, ಕಲ್ಲುಗಂಗೂರು, ಅಬ್ಬಲಗೆರೆಯಲ್ಲಿ 150 ಕ್ಕು ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಅಬ್ಬಲಗೆರೆ ಸೇರಿ ಒಟ್ಟು 7 ಗ್ರಾಮಗಳಲ್ಲಿ ಕ್ರಷರ್ ಗಳದ್ದೇ ಸಾಮ್ರಾಜ್ಯ ಎನ್ನುವಂತಾಗಿದ್ದು, ಹೂಣಸೊಂಡದಲ್ಲಿ ಆಪಾರ ಪ್ರಮಾಣದ ಹಾನಿ ಸಂಭವಿಸಿದೆ.

    ಕಲ್ಲುಗಂಗೂರು ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ತಗಡಿನ ಶೀಟ್, ಸಿಮೆಂಟ್ ಶೀಟ್ ಹಾಗೂ ಹೆಂಚಿನ ಮನಗೆಳನ್ನು ರಿಪೇರಿ ಮಾಡಲೇಬೇಕು ಎನ್ನುವಷ್ಟರಮಟ್ಟಿಗೆ ಹಾನಿಯಾಗಿವೆ. ಮುರಿದ, ಬಿರುಕು ಬಿಟ್ಟ ಮನೆಗಳಲ್ಲಿ ಭೀತಿಯಲ್ಲೇ ಜನ ವಾಸ ಮಾಡುವ ಅನಿವಾರ್ಯತೆ ಎದುರಾಗಿದೆ. 7 ಗ್ರಾಮದ 1,422 ಕುಟುಂಬಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯಾಗಿದೆ ಎಂದು ಅಂದಾಜಿಸಲಾಗಿದೆ.

    ಇದೀಗ ಅನಧಿಕೃತ ಗಣಿಗಾರಿಕೆಗಳಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಜೆಲ್ ಸ್ಫೋಟಕ ಎಲ್ಲಿಂದ ಬಂತು, ಅದನ್ನು ಎಲ್ಲಿ ಸ್ಟೋರ್ ಮಾಡುತ್ತಾರೆ ಎಂಬುದನ್ನು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೆ ಜಲ್ಲಿ, ಮರಳು ಬೇಕು. ಅದನ್ನು ಕಾನೂನಾತ್ಮಕವಾಗಿ ಮಾಡಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ. ನಮ್ಮ ಸರ್ಕಾರದಲ್ಲಿ ಗಣಿ ಇಲಾಖೆ ಸೇರಿ ಯಾವುದೇ ಇಲಾಖೆಯಲ್ಲಿ ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಿದ್ದರೆ, ಯಾರೇ ತಪ್ಪು ಮಾಡಿದ್ದರೂ ಅದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೆ ಉನ್ನತ ಮಟ್ಟದ ತನಿಖೆ ನಡೆಸಲು ಸಿಎಂ ಸಮಿತಿ ರಚನೆ ಮಾಡಿದ್ದಾರೆ.

    ಈ ಬಗ್ಗೆ ಹುಣಸೋಡಿನಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಇಂತಹ ದುರ್ಘಟನೆ ನಡೆಯಬಾರದಿತ್ತು. ನಡೆದು ಹೋಗಿದೆ. ಘಟನೆಯಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಒಂದು ಸಂಶಯಾಸ್ಪದ ಇದೆ. ರಾಜ್ಯದಲ್ಲಿನ ಎಲ್ಲ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಾಗುವುದು. ಈ ಬಗ್ಗೆ ತನಿಖೆ ನಡೆಸಲು ಶೀಘ್ರವಾಗಿ ಸಮಿತಿ ರಚಿಸಲಾಗುವುದು. ಹುಣಸೋಡು ಘಟನೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ರೀತಿ ಘಟನೆ ರಾಜ್ಯದಲ್ಲಿ ಇನ್ನು ಎಲ್ಲಿಯೂ ನಡೆಯಬಾರದು. ಮೃತ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ ಎಂದರು.

  • ಸಿದ್ದರಾಮಯ್ಯ ಜ್ಯೋತಿಷ್ಯ ಕಲಿಯುತ್ತಿರಬೇಕು : ಎಸ್.ಟಿ. ಸೋಮಶೇಖರ್ ವ್ಯಂಗ್ಯ

    ಸಿದ್ದರಾಮಯ್ಯ ಜ್ಯೋತಿಷ್ಯ ಕಲಿಯುತ್ತಿರಬೇಕು : ಎಸ್.ಟಿ. ಸೋಮಶೇಖರ್ ವ್ಯಂಗ್ಯ

    – ಮಾಡೋ ಕೆಲಸ ಮಾಡಲಿ, ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಡ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷ್ಯ ಹೇಳುವುದಕ್ಕೆ ಶುರು ಮಾಡಿದರೋ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕರಾಗಿರುವ ಕಾರಣ ಕೆಲಸ ಇಲ್ಲದೆ ಜ್ಯೋತಿಷ್ಯ ಕಲಿಯುತ್ತಿರಬೇಕು. ಅದಕ್ಕೆ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಆಗಾಗಾ ಜ್ಯೋತಿಷ್ಯ ಹೇಳುತ್ತಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

    ಸರ್ಟಿಫಿಕೇಟ್ ಬೇಡ: ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಈಗ ಪುರುಸೊತ್ತು ಇರಬೇಕು. ವಿರೋಧ ಪಕ್ಷದ ನಾಯಕರಾಗಿ ಮಾಡಬೇಕಾದ ಕೆಲಸವನ್ನು ಮಾಡುವುದು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಅವರ ಪಕ್ಷದಲ್ಲಾಗುತ್ತಿರುವುದನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ಉಸಾಬರಿ ಏಕೆ? ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನಮಗೆ ಕೇಂದ್ರ ಗೃಹ ಸಚಿವರ ಸರ್ಟಿಫಿಕೇಟ್ ಸಾಕು ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ ಎಂದರು.

    ಅವರು ಪದೇ ಪದೇ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ತಮ್ಮ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಪ್ರಚಾರಕ್ಕಾಗಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಅಷ್ಟೇ. ಮುಖ್ಯಮಂತ್ರಿಗಳು ಕೋವಿಡ್ ಹಾಗೂ ಉಳಿದ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೇ ಹೇಳಿದ್ದಾರೆ. ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಇನ್ನು ಎರಡೂವರೆ ವರ್ಷ ಆಡಳಿತ ನಡೆಸುತ್ತಾರೆ. ಉತ್ತಮ ಮತ್ತು ದಕ್ಷ ಆಡಳಿತ ನೀಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಮಗೆ ಶಾ ಅವರ ಸರ್ಟಿಫಿಕೇಟ್ ಸಾಕು. ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ. ಅದನ್ನು ಅವರೇ ಇಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.

    ರಾಜ್ಯದಲ್ಲಿ ದೊಡ್ಡ ಸುದ್ದಿಯಲ್ಲಿರುವ ಸಿಡಿ ವಿಚಾರದ ಬಗ್ಗೆ ಸಚಿವರು ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ಸಿಡಿ ಬಗ್ಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವುದು ಬೆಂಗಳೂರು ಅಭಿವೃದ್ಧಿಯ ಸಿಡಿ. ಮುಖ್ಯಮಂತ್ರಿಗಳು ಈಗಾಗಲೇ 2 ಸಭೆ ನಡೆಸಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೊಂದು ರೂಪುರೇಷೆ ನೀಡಿ ಸಂಬಂಧಿಸಿದ ಸಿಡಿಯನ್ನು ನಮಗೆ ಕಳುಹಿಸುವುದಾಗಿ ಹೇಳಿದ್ದಾರೆ. ಅದು ಬಿಟ್ಟು ಬೇರೆ ಮಾಹಿತಿ ನನಗೆ ಇಲ್ಲ. ಅದನ್ನು ಹೇಳಿದವರಿಗೇ ಕೇಳಬೇಕು ಎಂದು ಪ್ರತಿಕ್ರಿಯಿಸಿದರು.

    ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ “ಡಬಲ್ ಇಂಜಿನ್” ಅಭಿವೃದ್ಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ರಾಜ್ಯದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದಲ್ಲದೆ, ವೇಗ ಪಡೆದುಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ 8-9 ತಿಂಗಳು ಎಲ್ಲ ಕಡೆಯೂ ಅಭಿವೃದ್ಧಿ ಕುಂಠಿತಗೊಂಡಿತ್ತು. ಆದರೆ ಈಗ ಎಲ್ಲವೂ ಪ್ರಾರಂಭವಾಗಿದೆ. ಒಂದೊಂದು ಕ್ಷೇತ್ರಕ್ಕೆ ಲೋಕೋಪಯೋಗಿಯಿಂದ ಸುಮಾರು 25 ಕೋಟಿ ರೂಪಾಯಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗೆ ಒಂದೊಂದಾಗಿ ಚಾಲನೆ ನೀಡಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

  • 2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    ಉಡುಪಿ: ಬಿಜೆಪಿಯ ಸಚಿವಾಕಾಂಕ್ಷಿಗಳ ಅಸಮಾದನ ಮತ್ತು ಸಿಡಿ ಗದ್ದಲದ ನಡುವೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎರಡು ದಿನ ಕರಾವಳಿಯ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

    ಮುಖ್ಯಮಂತ್ರಿಯಾದ ನಂತರ ಎರಡನೇ ಬಾರಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಿಎಸ್‍ವೈ ಭೇಟಿ ನೀಡುತ್ತಿದ್ದು, ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಠದ ಕಾರ್ಯಕ್ರಮ ನಂತರ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

    ಕರಂಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜೊತೆ ಸಿಎಂ ಬಿಎಸ್‍ವೈ ಆಗಮಿಸಲಿದ್ದಾರೆ. ಕಾಪು ತಾಲೂಕಿನ ಹೆಜಮಾಡಿ ಬಂದರಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿ ಮಧ್ಯಾಹ್ನ ಕುಂದಾಪುರ ತಾಲೂಕು ಕುಂಭಾಸಿ ಆನೆಗುಡ್ಡೆ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

    ಸಿಎಂ ಆದ ನಂತರ ಬಿಎಸ್ ಯಡಿಯೂರಪ್ಪ ಅವರದ್ದು ಇದು ಉಡುಪಿಗೆ ನಾಲ್ಕನೇ ಭೇಟಿ. ಉಡುಪಿ ಜಿಲ್ಲೆಯ ಐದು ಬಿಜೆಪಿ ಶಾಸಕರು, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

  • ಸಿಎಂ ವಿರುದ್ಧ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಸಮಾಧಾನ

    ಸಿಎಂ ವಿರುದ್ಧ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅಸಮಾಧಾನ

    ಬೆಂಗಳೂರು: ಸಚಿವ ಸ್ಥಾನದ ಪಟ್ಟಿ ಫೈನಲ್ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹೆಚ್ ವಿಶ್ವನಾಥ್, ಸತೀಶ್ ರೆಡ್ಡಿ ಹಾಗೂ ರೇಣುಕಾಚಾರ್ಯ ಬೆನ್ನಲ್ಲೇ ಇದೀಗ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೂಡ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಶಾಸಕರು, ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ. ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯೂ ಈ ಮಾರ್ಗ ಹಿಡಿಯುವುದಿಲ್ಲ ಎಂದು ಬರೆದುಕೊಳ್ಳುವ ಮೂಲಕ ಸಿ.ಪಿ ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದ್ದಾರೆ.

    ನಿನ್ನೆಯವರೆಗೆ ಸುನಿಲ್ ಕುಮಾರ್ ಹೆಸರು ಕೂಡ ಸಚಿವ ಸ್ಥಾನದ ಪಟ್ಟಿಯಲ್ಲಿ ಇರುವುದಾಗಿ ಕೇಳಿಬರುತ್ತಿತ್ತು. ಆದರೆ ಇದೀಗ ಅವರ ಹೆಸರನ್ನು ಕೂಡ ಕೈಬಿಡಲಾಗಿದೆ. ಈ ಬೆನ್ನಲ್ಲೇ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಸಿಎಂ, ಇಂದು 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ, ಅವರಿಗೆ ಕೂಡ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

  • ಅನಂತ್ ಕುಮಾರ್ ಇಲ್ಲದಿರುವಿಕೆ ಎದ್ದು ಕಾಣ್ತಿದೆ – ಸಿಎಂ ವಿರುದ್ಧ ಸತೀಶ್ ರೆಡ್ಡಿ ಕೆಂಡಾಮಂಡಲ

    ಅನಂತ್ ಕುಮಾರ್ ಇಲ್ಲದಿರುವಿಕೆ ಎದ್ದು ಕಾಣ್ತಿದೆ – ಸಿಎಂ ವಿರುದ್ಧ ಸತೀಶ್ ರೆಡ್ಡಿ ಕೆಂಡಾಮಂಡಲ

    ಬೆಂಗಳೂರು: ಇಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಭಾರೀ ಹೈಡ್ರಾಮಾ ನಡೆಯುತ್ತಿದೆ. 7 ಮಂದಿ ಸಚುವರಾಗಿ ಪ್ರಮಾಣ ವಚನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಬೆನ್ನಲ್ಲೇ ಸ್ವಪಕ್ಷದವರೇ ಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಈ ಸಂಬಂಧ ಶಾಸಕ ಸತೀಶ್ ರೆಡ್ಡಿ ಟ್ವೀಟ್ ಮಾಡಿ ಬಿಎಸ್‍ವೈ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಇದೇ ವೇಳೆ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ರೀ ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಸಿಎಂ, ಇಂದು 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ, ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

  • ಹೊಸ ವರ್ಷದ ಶುಭಾಶಯದೊಂದಿಗೆ ಜನತೆಯಲ್ಲಿ ಬಿಎಸ್‍ವೈ ಮನವಿ

    ಹೊಸ ವರ್ಷದ ಶುಭಾಶಯದೊಂದಿಗೆ ಜನತೆಯಲ್ಲಿ ಬಿಎಸ್‍ವೈ ಮನವಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯದ ಜೊತೆಗೆ ಮನವಿ ಕೂಡ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ. ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ ಪಾಲನೆ ಮರೆಯದಿರಿ ಎಂದು ತಿಳಿಸಿದ್ದಾರೆ.

    ಹೊಸ ವರ್ಷ ಎಲ್ಲರಿಗೂ ಸುಖ ಸಮೃದ್ಧಿ ತರಲಿ. ಕಳೆದ ವರ್ಷದ ಸಾಲಿನಲ್ಲಿ ಕಳೆದಿದ್ದ ಕೋವಿಡ್ ಸಾಂಕ್ರಾಮಿಕ ರೋಗದ ಕಾರ್ಮೋಡ ಕಳೆದು ಈ ವರ್ಷ ಸಹಜ ಸ್ಥಿತಿಗೆ ಮರಳಲಿ. ಹೊಸ ವರ್ಷ ಸಂಭ್ರಮದಿಂದ ಕೂಡಿರಲಿ ಆಚರಣೆ ಸಹಜವಾಗಿರಲಿ. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸ್ ಮಾಡುವಂತೆ ಜನತೆಯಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.

    ಕೋವಿಡ್ ಎರಡನೇ ಅಲೆ ಹೊಸ ರೂಪದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗವನ್ನ ತಡೆಗಟ್ಟುವ ಕೆಸಲದಲ್ಲಿ ಸರ್ಕಾರದ ಜೊತೆ ಸಹಕರಿಸಬೇಕು ಎಂದು ರಾಜ್ಯದ ಜನತೆಯಲ್ಲಿ ಸಿಎಂ ಮತ್ತೊಮ್ಮೆ ಮನವಿ ಮಾಡಿಕೊಂಡರು.