Tag: CM BS Yediyurappa

  • ಬಿಎಸ್‍ವೈ ಕಾರ್ಯವೈಖರಿಗೆ ಅಮಿತ್ ಶಾ ಬಹುಪರಾಕ್

    ಬಿಎಸ್‍ವೈ ಕಾರ್ಯವೈಖರಿಗೆ ಅಮಿತ್ ಶಾ ಬಹುಪರಾಕ್

    – ಬಿಎಸ್‍ವೈ ಕುರ್ಚಿ ಬಗ್ಗೆ ಇನ್ನೂ ಸಸ್ಪೆನ್ಸ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯವೈಖರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹುಪರಾಕ್ ಹೇಳಿದ್ದಾರೆ.

    ಸಂಜೆ ವಿಧಾನಸೌಧದಲ್ಲಿ ಗೃಹ ಇಲಾಖೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಮಾಡಿದೆ, ಅವರಿಗೆ ಅಭಿನಂದನೆ. ಯಡಿಯೂರಪ್ಪ ನೇತ್ರತ್ವದ ಸರ್ಕಾರ ಕರ್ನಾಟಕದಲ್ಲಿ ಕೊರೊನಾ ಸಂಕಷ್ಟದಲ್ಲಿ ಬಹಳ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಿಎಂ ಯಡಿಯೂರಪ್ಪಗೆ ಅಮಿತ್ ಶಾ ಬಹುಪರಾಕ್ ಹೇಳಿದ್ದಾರೆ.

    ಕಾಂಗ್ರೆಸ್‍ಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪೂರ್ಣಾವಧಿ ಪೂರೈಸಲಿದೆ, ಮುಂದೆಯೂ ಐದು ವರ್ಷ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಮಾಡಿದೆ. ಕಾಂಗ್ರೆಸ್‍ನವರಿಗೆ ಬಿಜೆಪಿಯಲ್ಲಿ ಯಾವ ದೋಷಗಳೂ ಸಿಗಲ್ಲ. ಕರ್ನಾಟಕ ಸರ್ಕಾರಕ್ಕೆ ಕೇಂದ್ರದ ಬೆಂಬಲ ಸದಾ ಇರಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಎರಡೂ ಸೇರಿ ರಾಜ್ಯದ ವಿಕಾಸ ಮಾಡ್ತೇವೆ. ಯಡಿಯೂರಪ್ಪ ಉತ್ತಮ ಕಾರ್ಯ ಮಾಡುತ್ತಿದ್ದಾರೆ, ಅವರಿಗೆ ಅಭಿನಂದನೆ ಎಂದರು. ಆದರೆ ಬಿಜೆಪಿ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಹೇಳಿದರೇ ಹೊರತು ಯಡಿಯೂರಪ್ಪ ಉಳಿದ ಅವಧಿಗೂ ಸಿಎಂ ಆಗಿರುತ್ತಾರೆ ಎಂದು ಹೇಳಲಿಲ್ಲ. ಹೀಗಾಗಿ ಈ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

    ಕೊರೊನಾ ಸಮಯದಲ್ಲಿ ರಾಜ್ಯದ ಪೋಲಿಸರು, ಅದರಲ್ಲೂ ಬೆಂಗಳೂರು ಪೋಲಿಸರು ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಆದರೆ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಸಿಎಂ ಕೊಠಡಿಗೆ ಭೇಟಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಯಿತು. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ವಿಧಾನಸೌಧದಿಂದ ನೇರವಾಗಿ ಖಾಸಗಿ ಹೊಟೇಲಿಗೆ ತೆರಳಿದರು.

  • ಜಮೀರ್ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ – ಸಿಎಂ ಸ್ಪಷ್ಟನೆ

    ಜಮೀರ್ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ – ಸಿಎಂ ಸ್ಪಷ್ಟನೆ

    ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರತಿಕ್ರಿಯೆ ನೀಡಿದ್ದು, ಜಮೀರ್ ಕ್ಷೇತ್ರಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

    ಶಾಸಕ ಜಮೀರ್ ಅಹ್ಮದ್ ಖಾನ್ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ. ಈ ವಿಷಯ ಸತ್ಯಕ್ಕೆ ದೂರವಾದ ಮಾತು. ಇದುವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜಮೀರ್‌ ಕ್ಷೇತ್ರಕ್ಕೆ ದಿಢೀರ್‌ 200 ಕೋಟಿ ಅನುದಾನ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌

    ಪಬ್ಲಿಕ್ ಟಿವಿ ಸುದ್ದಿ ಏನಿತ್ತು?
    ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದ್ದರು. ಈ ಮನವಿಗೆ ಒಪ್ಪಿಗೆ ನೀಡಿದ ಸಿಎಂ ಈ ಪತ್ರವನ್ನು ಹಣಕಾಸು ಇಲಾಖೆಗೆ ರವಾನಿಸಿದ ಬಗ್ಗೆ ವರದಿ ಮಾಡಿತ್ತು.

  • ಜಮೀರ್‌ ಕ್ಷೇತ್ರಕ್ಕೆ ದಿಢೀರ್‌ 200 ಕೋಟಿ ಅನುದಾನ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌

    ಜಮೀರ್‌ ಕ್ಷೇತ್ರಕ್ಕೆ ದಿಢೀರ್‌ 200 ಕೋಟಿ ಅನುದಾನ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌

    – ಸಿಎಂ ಪಕ್ಷಪಾತಕ್ಕೆ ಶಾಸಕರ ತೀವ್ರ ಅಸಮಾಧಾನ
    – ದಿಢೀರ್ ಜಮೀರ್ ಕ್ಷೇತ್ರಕ್ಕೆ ಇಷ್ಟೊಂದು ಅನುದಾನ ಯಾಕೆ?

    ಬೆಂಗಳೂರು: ಸಂಪುಟ ವಿಸ್ತರಣೆ, ಸಿಡಿ ಗದ್ದಲ, ಸೋತ ಸಿ.ಪಿ.ಯೋಗೇಶ್ವರ್‌ಗೆ ಮಂತ್ರಿಗಿರಿ ಕೊಟ್ಟಿರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನ ತಾರಕಕ್ಕೇರಿರೋ ಬೆನ್ನಲ್ಲೇ, ಈದೀಗ ಅನುದಾನ ತಾರತಮ್ಯದ ವಿಚಾರ ಮುನ್ನೆಲೆಗೆ ಬಂದಿದೆ.

    ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಕ್ಷೇತ್ರಕ್ಕೆ 200 ಕೋಟಿ ರೂ. ದಯ ಪಾಲಿಸಿರೋದು ವಿವಾದಕ್ಕೀಡುಮಾಡಿದೆ. ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡೋದು ಸಾಮಾನ್ಯ. ಆದರೆ ತಮ್ಮ ಕ್ಷೇತ್ರಗಳಿಗೆ ಕೇವಲ 20 ಕೋಟಿ ರೂ. ಕೇಳಿದರೂ ಆರ್ಥಿಕ ಕೊರತೆಯ ಸಬೂಬು ಹೇಳುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈಗ ದಿಢೀರನೇ ಜಮೀರ್ ಅಹ್ಮದ್ ಕ್ಷೇತ್ರಕ್ಕೆ 200 ಕೋಟಿ ರೂ. ಅನುದಾನ ಮಂಜೂರು ಮಾಡಿರುವುದು ಯಾಕೆ ಎಂದು ಕೆಲ ಬಿಜೆಪಿ ಶಾಸಕರು ಸಿಟ್ಟಾಗಿದ್ದಾರೆ.

    ಸ್ವಪಕ್ಷದ ಶಾಸಕರಿಗಿಂತ ಮುಖ್ಯಮಂತ್ರಿಗಳಿಗೆ ಪರ ಪಕ್ಷದ ಶಾಸಕರ ಮೇಲೇ ಹೆಚ್ಚು ಪ್ರೀತಿನಾ ಎಂದು ಬಿಜೆಪಿಯ ಕೆಲ ಉತ್ತರ ಕರ್ನಾಟಕ ಶಾಸಕರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಮೇಲಿನ ಪ್ರೀತಿಗೆ ನಿನ್ನೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದ `ಆ’ ಮಾತೇ ನಿಜನಾ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಲ ಆರ್‍ಎಸ್‍ಎಸ್ ನಾಯಕರೂ ಮುಖ್ಯಮಂತ್ರಿಗಳ `ಪರ ಪಕ್ಷದ’ ಮೇಲಿನ ಪ್ರೀತಿಗೆ ಅಸಮಾಧಾನಗೊಂಡಿದ್ದಾರೆ. ನಾಳೆ ಬೆಂಗಳೂರಿಗೆ ಭೇಟಿ ಕೊಡುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಗಮನಕ್ಕೂ ತರಲು ಬಯಸಿದ್ದಾರೆ ಎನ್ನಲಾಗಿದೆ.

    ಅನುದಾನದ ವಿವರ
    ಜಮೀರ್ ಕ್ಷೇತ್ರಕ್ಕೆ ಒಟ್ಟು 200 ಕೋಟಿ ರೂ. ಅನುದಾನ ನೀಡಲಾಗಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಕಳೆದ ಡಿಸೆಂಬರ್ 9ರಂದು ಸಿಎಂಗೆ ಜಮೀರ್ ಪತ್ರ ಬರೆದಿದ್ದಾರೆ. ಜಮೀರ್ ಬರೆದ ಪತ್ರಕ್ಕೆ ಕೇವಲ ಎಂಟೇ ದಿನದಲ್ಲಿ ಸಿಎಂ ಸಹಿ ಹಾಕಿದ್ದಾರೆ. ಡಿ.16ರಂದು 200 ಕೋಟಿ ಮಂಜೂರಿಗೆ ಸಿಎಂ ಸಹಿ ಹಾಕಿದ್ದಾರೆ. ಹಣಕಾಸು ಇಲಾಖೆಗೆ ಡಿ.18ರಂದು ಸಿಎಂ ಶಿಫಾರಸ್ಸು ಪತ್ರ ರವಾನಿಸಲಾಗಿದೆ.

    ಬಿಜೆಪಿ ಶಾಸಕರ ಪ್ರಶ್ನೆ ಏನು?
    ಸಿಎಂ ಈ ಪರ ಪಕ್ಷ ಶಾಸಕರ ಪ್ರೇಮವನ್ನು ಪ್ರಶ್ನಿಸಿ ಉತ್ತರ ಕರ್ನಾಟಕದ ಕೆಲ ಶಾಸಕರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಮಂತ್ರಿಗಿರಿಯಲ್ಲೂ ಬೆಂಗಳೂರಿಗೆ ಅಗ್ರ ತಾಂಬೂಲ, ನಮಗೆ ಬಿಡಿಗಾಸು, ಕಾಂಗ್ರೆಸ್ ಶಾಸಕನ ಕ್ಷೇತ್ರಕ್ಕೆ ಬಂಪರ್, ಬಿಜೆಪಿ ಶಾಸಕರ ಅನುದಾನ ಕಡತಗಳು ಏಕೆ ಪಾಸ್ ಆಗುತ್ತಿಲ್ಲ? ಅನುದಾನ ಪಡೆಯಲು, ನಿಮ್ಮ ಪ್ರೀತಿ ಗಳಿಸಲು ನಾವು ಏನು ಮಾಡಬೇಕು? ಉತ್ತರ ಕರ್ನಾಟಕದ ಶಾಸಕರ ಮೇಲೆ ಮಲತಾಯಿ ಧೋರಣೆ ಸರಿಯೇ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎನ್ನಲಾಗಿದೆ.

    ಆರ್‍ಎಸ್‍ಎಸ್ ಪ್ರಶ್ನೆ?
    ಅನುದಾನಕ್ಕಾಗಿಯೇ ಬಿಜೆಪಿ ಶಾಸಕರು ನಿಮ್ಮನ್ನ ಪ್ರಶ್ನಿಸಿದ್ದು ಮರೆತುಹೋಯಿತೇ? ಬಿಜೆಪಿ ಶಾಸಕರಿಗೆ ಹೆಚ್ಚು ಅನುದಾನಕ್ಕೆ 2 ವರ್ಷ ಕಾಯಿರಿ ಎಂದಿದ್ದು ನೆನಪಿದ್ಯಾ, ನಮ್ಮ ಶಾಸಕರಿಗೆ ಕಾಸಿಲ್ಲ ಅಂದವರಿಗೆ ಈಗ ಕಾಸು ಎಲ್ಲಿಂದ ಬಂತು, ವಾಚ್‍ಮೆನ್ ಆಗ್ತೀನಿ ಅಂತ ಚಾಲೆಂಜ್ ಮಾಡಿದವರ ಮೇಲೆ ಏಕೆ ಪ್ರೀತಿ? ಯಾರ, ಯಾವುದರ ಒತ್ತಡಕ್ಕೆ ಮಣಿದ್ರಿ ಯಡಿಯೂರಪ್ಪನವರೇ ಎಂದು ಆರ್‌ಎಸ್‌ಎಸ್‌ ಪ್ರಶ್ನಿಸಿದೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.

  • ಯತ್ನಾಳ್‍ಗೆ ನೀಡಿದ್ದ ಭದ್ರತೆ ವಾಪಸ್ – ಸಿಎಂ ವಿರುದ್ಧ ಮತ್ತೆ ಆಕ್ರೋಶ

    ಯತ್ನಾಳ್‍ಗೆ ನೀಡಿದ್ದ ಭದ್ರತೆ ವಾಪಸ್ – ಸಿಎಂ ವಿರುದ್ಧ ಮತ್ತೆ ಆಕ್ರೋಶ

    – ನಿಮ್ಮ ಭದ್ರತೆ ನಂಬಿ ಹೋರಾಟ ಮಾಡುತ್ತಿಲ್ಲ ಎಂದು ಕಿಡಿ

    ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ್ದ ವಿಶೇಷ ವೈಯಕ್ತಿಕ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯತ್ನಾಳ್ ವಿರುದ್ಧ ಸೇಡಿನ ರಾಜಕಾರಣ ಶುರು ಮಾಡಿದ್ದಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ಗೆ ನೀಡಿದ್ದ ವಿಶೇಷ ವೈಯಕ್ತಿಕ ಭದ್ರತೆಯನ್ನು ಸರ್ಕಾರ ವಾಪಸ್ ಪಡೆದಿದೆ. ಇಂದಿನಿಂದ ಭದ್ರತೆ ವಾಪಸ್ ಪಡೆಯಲಾಗಿದ್ದು, ಸರ್ಕಾರದ ಕ್ರಮಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಕೆಂಡಾಮಂಡಲವಾಗಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಯಿಂದ ಕುಟುಂಬ ರಾಜಕಾರಣ – ಯತ್ನಾಳ್ ಕಿಡಿ

    ಈ ಬಗ್ಗೆ ಸಿಎಂ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪೊಲೀಸ್ ಆಯುಕ್ತರಿಗೆ ಪತ್ರ ಖಾರವಾಗಿ ಪತ್ರ ಬರೆದಿದ್ದಾರೆ.

    ನಾನು ಸಿಎಂ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದೀರಿ, ನಿಮ್ಮ ಹಳೆಯ ಸೇಡಿನ ರಾಜಕೀಯಕ್ಕೆ ಈ ಕ್ರಮ ವಹಿಸಿದ್ದೀರಿ. ಇದು ನಿಮ್ಮ ಹಳೆ ಚಾಳಿ, ವಿಕೃತ ಮನಸ್ಥಿತಿ ಬಿಂಬಿಸುತ್ತದೆ. ನಾನು ಪ್ರಖರ ಹಿಂದುತ್ವವಾದಿ, ನನ್ನ ಮೇಲೆ ಸಾಕಷ್ಟು ಬಾರಿ ದಾಳಿಗೆ ಸಂಚು ನಡೆದಿತ್ತು. ನನ್ನ ಜನಪರ ನಿಲುವಿನ ಹೋರಾಟಕ್ಕೆ ಕೆಲವರು ದಾಳಿಗೆ ಸಂಚು ರೂಪಿಸಿದ್ದರು. ಇದನ್ನು ಅರಿತ ಸರ್ಕಾರ ಅಂದು ನನಗೆ ಭದ್ರತೆ ನೀಡಿತ್ತು. ಆದರೆ ಬಿಎಸ್‍ವೈ ತಮ್ಮ ವಿರುದ್ಧ ಹೇಳಿಕೆ ನೀಡಿರುವ ಕಾರಣಕ್ಕೆ ವಾಪಸ್ ಪಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.

    ನಾನು ನಿಮ್ಮ ಭದ್ರತೆಯನ್ನು ನಂಬಿಕೊಂಡು ಹೋರಾಟ ಮಾಡುತ್ತಿಲ್ಲ. ನಿಮ್ಮ ಈ ಕ್ರಮದಿಂದ ನನ್ನ ಹೋರಾಟ ನಿಲ್ಲುವುದಿಲ್ಲ. ಮುಂದೆ ನನ್ನ ಮೇಲೆ ಏನೇ ಅಹಿತಕರ ಘಟನೆಗಳಾದಲ್ಲಿ ನೀವೇ ಹೊಣೆ ಎಂದು ಪತ್ರದಲ್ಲಿ ಖಾರವಾಗಿಯೇ ಯತ್ನಾಳ್ ಬರೆದಿದ್ದಾರೆ.

    ನಿನ್ನೆಯಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದರು. ಸಿಡಿ ವಿಚಾರ ಹಾಗೂ ಕುಟುಂಬ ರಾಜಕಾರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದರು.

  • ಸಿಡಿ ಬಗ್ಗೆ ಗೊತ್ತಿಲ್ಲ, ರಾಜಕಾರಣದ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರ್ತವೆ: ಜಾರಕಿಹೊಳಿ

    ಸಿಡಿ ಬಗ್ಗೆ ಗೊತ್ತಿಲ್ಲ, ರಾಜಕಾರಣದ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರ್ತವೆ: ಜಾರಕಿಹೊಳಿ

    ಬೆಳಗಾವಿ: ಸಿಡಿ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಹ ಪ್ರತಿಕ್ರಿಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸಚಿವರಿಗೆ ಶುಭಾಶಯ ಕೋರಿದ್ದಾರೆ. ಸಂಪುಟ ವಿಸ್ತರಣೆಯಲ್ಲಿ ಸಿಎಂ ತೆಗೆದುಕೊಂಡ ನಿರ್ಣಯಕ್ಕೆ ಬೆನ್ನಲುಬಾಗಿ ನಿಲ್ಲುತ್ತೇವೆ. ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ ಅದನ್ನ ಪಕ್ಷದವರು ಸರಿ ಪಡಿಸುತ್ತಾರೆ ಎಂದರು. ಇದೇ ವೇಳೆ ಸಿಡಿ ಬಾಂಬ್ ಕುರಿತು ಮಾತನಾಡಿದ ಅವರು, ಸಿಡಿ ಇದೆಯೋ, ಇಲ್ಲವೋ ಗೊತ್ತಿಲ್ಲ. ಈ ರೀತಿಯ ಸಿಡಿಗಳು ಬರ್ತವೆ ಹೋಗುತ್ತವೆ. ರಾಜಕಾರಣದಲ್ಲಿ, ವೈಯಕ್ತಿಕ ಜೀವನದಲ್ಲಿ ಈ ರೀತಿ ಮಾತನಾಡಬಾರದು. ಏನು ಸಿಡಿ ಇವೆ ಗೊತ್ತಿಲ್ಲ, ರಾಜಕಾರಣದ ಅವರ ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳು ಇರುತ್ತವೆ. ಅದರ ಬಗ್ಗೆ ಮಾತಾಡಬಾರದು ಎಂದರು.

    ಕಷ್ಟದಲ್ಲಿರುವ ರಾಜಕಾರಣಿಗಳಿಗೆ ನೈತಿಕ ಸ್ಥೈರ್ಯ ನೀಡಬೇಕು. ಅವರನ್ನು ಡ್ಯಾಮೇಜ್ ಮಾಡಬಾರದು, ಬರೀ ರಾಜಕಾರಣ ಮಾಡಬೇಕು. ಯಡಿಯೂರಪ್ಪನವರು ಬ್ಲ್ಯಾಕ್ ಗೆ ಹೆದರುವ ರಾಜಕಾರಣಿ ಅಲ್ಲ. ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದ ಮನುಷ್ಯ. ಯಾವ ಸಿಡಿ ಇಲ್ಲ, ಎನೂ ಇಲ್ಲ ಎಂದು ತಿಳಿಸಿದರು.

    ಅಸಮಾಧಾನಿತ ಕೆಲ ಶಾಸಕರು ಗೃಹ ಸಚಿವ ಅಮಿತ್ ಶಾಗೆ ದೂರು ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸೋತವರಿಗೆ ಕೊಡ್ತಾರೆ, ಬಿಡ್ತಾರೆ ಗೊತ್ತಿಲ್ಲ. ಯೋಗೇಶ್ವರ್ ಗೆ ಅಂದು ನಮ್ಮನ್ನ ಒಗ್ಗೂಡಿಸುವುದು ಯಾಕೆ ಬೇಕಿತ್ತು, ಕಷ್ಟಪಟ್ಟು ಆರೋಗ್ಯ ಹಾಳು ಮಾಡಿಕೊಂಡು, ಸಾಲ ಮಾಡಿಕೊಂಡು ಮಾಡುವುದು ಯಾಕೆ ಬೇಕಿತ್ತು? ಬಿಜೆಪಿ ಸರ್ಕಾರ ರಚಿಸಲು ತಮ್ಮ ಮನೆಯ ಮೇಲೆ 9 ಕೋಟಿ ರೂ. ಸಾಲ ಮಾಡಿಕೊಂಡಿದ್ದಾರೆ. ಎಂಟಿಬಿ ನಾಗರಾಜ್ ಕಡೆಯಿಂದ ಸಿ.ಪಿ.ಯೋಗೇಶ್ವರ್ ಅಂದು ಸಾಲ ತಂದಿದ್ದರು. ಈಗ ಮಾತನಾಡುವವರು ಆಗ ಎಲ್ಲಿದ್ದರು ಎಂದು ರಮೇಶ್ ಅಸಮಾಧಾನಿತ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಕ್ಕಿರುವುದು ಸರಿಯಾಗಿದೆ. ಈ ಸರ್ಕಾರದ ರಚನೆಯಲ್ಲಿ ಯೋಗೇಶ್ವರ್ ಪಾತ್ರ ಬಹಳ ದೊಡ್ಡದಿದೆ ಎಂದು ಯೋಗೇಶ್ವರ್ ಪರ ರಮೇಶ್ ಬ್ಯಾಟಿಂಗ್ ಮಾಡಿದರು. ಅಲ್ಲದೆ ಭ್ರಷ್ಟರಿಗೆ ರಮೇಶ್ ಸಾಥ್ ಕೊಡುತ್ತಿದ್ದಾರೆ ಎಂಬ ವಿಶ್ವನಾಥ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಮಾತಾಡಿರುವುದು ನಮಗೆ ಆಶೀರ್ವಾದ, ಅದರ ಬಗ್ಗೆ ನೋ ಕಮೆಂಟ್ಸ್ ಎಂದಿದ್ದಾರೆ.

    ನಾಯಕತ್ವ ಬದಲಾವಣೆ ಆದರೆ ನಿಮ್ಮ ನಿಲುವೇನು ಎಂಬುದರ ಕುರಿತು ಉತ್ತರಿಸಿದ ಅವರು, ನಾವು ಯಡಿಯೂರಪ್ಪ ಪರವಾಗಿ ಇರುತ್ತೇವೆ. ಹಾದಿ ಬೀದಿಯಲ್ಲಿ ಮಾತನಾಡಲು ಆಗಲ್ಲ, ಎಲ್ಲಿ ಮಾತಾಡಬೇಕು ಅಲ್ಲಿ ಮಾತನಾಡುತ್ತೇವೆ. ಯೋಗೇಶ್ವರ್ ಮುಖ್ಯವಾಗಿದ್ದವರು ಎಂದಿದ್ದಾರೆ.

    ಶಾಸಕ ಮುನಿರತ್ನ ನೂರಕ್ಕೆ ನೂರರಷ್ಟು ಪ್ರಮಾಣ ವಚನ ಸ್ವೀಕರಿಸುತ್ತಾರೆ ಅಂದುಕೊಂಡದ್ದೆ. ಮುನಿರತ್ನ ಈಗ ನರ್ವಸ್ ಆಗಬಾರದು ಮುಂದಿನ ದಿನಗಳಲ್ಲಿ ಹೈಕಮಾಂಡ್ ಜತೆಗೆ ಮಾತನಾಡಿ ಮಂತ್ರಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅವರ ಪರವಾಗಿ ಪ್ರಯತ್ನ ಮಾಡುತ್ತೇವೆ. ಮುನಿರತ್ನ ಜೊತೆ ಫೋನ್ ಮಾಡಿ ಮಾತನಾಡಿದ್ದೇನೆ. ನಾನು ಬಾಂಬ್ ಟೀಮ್ ನ ಕ್ಯಾಪ್ಟನ್ ಅಲ್ಲ, ಕೊನೆಯ ಹದಿನೇಳನೆಯವನು. ಮುನಿರತ್ನ ಮತ್ತು ನಾಗೇಶ್ ಡ್ರಾಪ್ ಆಗ್ತಾರೆ ಎಂದು ನನಗೆ ಕಲ್ಪನೆ ಇರಲಿಲ್ಲ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

    ಸಿ.ಪಿ.ಯೋಗೇಶ್ವರ್ ಹದಿನೈದು ದಿನ ಕುಟುಂಬ ಬಿಟ್ಟು ನಮ್ಮ ಜತೆಗಿದ್ದರು. 2023ರ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗೆದ್ದು ಆಗ ಅವರ ಹಕ್ಕು ಚಲಾಯಿಸಿ ಸರಿಯಾಗಿ ಸಚಿವರಾಗುವುದು ಒಳ್ಳೆಯದು. ಈಗಿನ ಸಂದರ್ಭಗಳನ್ನ ನೋಡಿ ತಿಳಿದುಕೊಳ್ಳಬೇಕು ಎಂದು ಅಸಮಾಧಾನ ಶಾಸಕರಿಗೆ ಟಾಂಗ್ ನೀಡಿದ್ದಾರೆ.

    ಜಿ.ಪಂ, ತಾ.ಪಂ ಚುನಾವಣೆ ಆದ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಹೈಕಮಾಂಡ್ ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ. ಬೆಳಗಾವಿ, ಬೆಂಗಳೂರಿಗೆ ಸರ್ಕಾರ ಸೀಮಿತವಾಗಿದೆ ಎಂಬ ರೇಣುಕಾಚಾರ್ಯ ಹೇಳಿಕೆ ವಿಚಾರದ ಕುರಿತು ಮಾತನಾಡಿ, ರೇಣುಕಾಚಾರ್ಯ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಇಟ್ಟುಕೊಂಡು ಕೂರುವ ಬದಲು ಬಿಡುಗಡೆ ಮಾಡಿದರೆ ಒಳ್ಳೆಯದು. ಸಿಎಂ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆಯುತ್ತಾರೆ ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ.

  • ಬಿಎಸ್‍ವೈಯಿಂದ ಕುಟುಂಬ ರಾಜಕಾರಣ – ಯತ್ನಾಳ್ ಕಿಡಿ

    ಬಿಎಸ್‍ವೈಯಿಂದ ಕುಟುಂಬ ರಾಜಕಾರಣ – ಯತ್ನಾಳ್ ಕಿಡಿ

    ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಗುಡುಗಿದ್ದಾರೆ.

    ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಅಸಮಾಧಾನಿತರ ವಿರುದ್ಧ ಗರಂ ಆಗೋಕೆ ರಮೇಶ್ ಜಾರಕಿಹೊಳಿ ಯಾರು? ಅವರು ತಮ್ಮ ತ್ಯಾಗ ಮಾಡಿದ್ದಕ್ಕೆ ಪಕ್ಷ ಅಧಿಕಾರಕ್ಕೆ ಬಂದಿದೆ, ಅದನ್ನು ಸ್ವಾಗತಿಸುತ್ತೇನೆ. ಆದರೆ ಯಾವ ಶಾಸಕರೂ ಮಾತನಾಡಬಾರದೆಂದು ಅವರ ಬಾಯಿಗೆ ಕೀಲಿ ಹಾಕೋಕೆ ಸಾಧ್ಯವಿಲ್ಲ ಎಂದು ತಿಳಿಸಿದರು.

    ಸಚಿವ ಸ್ಥಾನಕ್ಕೆ ಬ್ಲಾಕ್ ಮೇಲ್ ಮಾಡಿದ್ದಾರೆಂದು ನಾನೊಬ್ಬನೇ ಆರೋಪ ಮಾಡಿಲ್ಲ. ಎಲ್ಲ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದಾರೆ. ಕುಟುಂಬ ರಾಜಕಾರಣ ಅಂತ್ಯ ಮಾಡಬೇಕೆಂದು ಪ್ರಧಾನಿ ಮೋದಿ ಪರದಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಸಿಎಂ ಬಿಎಸ್‍ವೈ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಅವರ ಮಗ ಸಂಸದ, ಇನ್ನೂಬ್ಬ ಮಗ ಪಕ್ಷದ ಉಪಾಧ್ಯಕ್ಷ, ಮಗಳು ಸಂಘಟನಾ ಅಧ್ಯಕ್ಷೆ, ಮೊಮ್ಮಗನನ್ನು ಕಾರ್ಯದರ್ಶಿ ಮಾಡಿದ್ದಾರೆ. ಆಳಿಯನನ್ನು ನಿಗಮದ ಅಧ್ಯಕ್ಷ ಮಾಡಿದ್ದಾರೆ. ದೇಶದಲ್ಲಿ ಕುಟುಂಬ ರಾಜಕಾರಣ ಮಾಡಿದವರು ಅಂತ್ಯವಾಗಿದ್ದಾರೆ. ಅದೇ ರೀತಿ ನಿಮ್ಮ ಕುಟುಂಬವೂ ಅಂತ್ಯವಾಗ ಬಾರದೆಂದರೆ ನೀವು ಒಬ್ಬರೇ ಹುದ್ದೆಯಲ್ಲಿರಿ. ಇಡೀ ಕಾವೇರಿ ನಿವಾಸವೇ ಬಿಎಸ್‍ವೈ ಕುಟುಂಬದಿಂದ ತುಂಬಿದೆ ಎಂದು ಆರೋಪಿಸಿದ್ದಾರೆ.

    ಬಿಜೆಪಿಯನ್ನು ಯಡಿಯೂರಪ್ಪ ಮಾತ್ರ ಕಟ್ಟಿಲ್ಲ. ನಾವು ಯಡಿಯೂರಪ್ಪ ಕಾರಿಗೆ ಡಿಸೇಲ್ ಹಾಕಿಸಿ ಪಕ್ಷವನ್ನ ಕಟ್ಟಿದ್ದೇವೆ. ನಾವು ಬಿಎಸ್‍ವೈ ಕುಟುಂಬಕ್ಕಾಗಿ ಪಕ್ಷವನ್ನ ಕಟ್ಟಿಲ್ಲ. ಸಮುದಾಯದ ಸಲುವಾಗಿ, ರೈತರ ಸಲುವಾಗಿ, ದೀನ ದಲಿತರ ಸಲುವಾಗಿ ಪಕ್ಷವನ್ನು ಕಟ್ಟಿದ್ದೇವೆ. ಯಡಿಯೂರಪ್ಪ ಅವರು ಸಿಎಂ ಆಗಿ ಇರಲು ನಮ್ಮ ಅಭ್ಯಂತರವಿಲ್ಲ. ಆದರೆ ಅವರ ಇಡೀ ಕುಟುಂಬವೇ ಹುದ್ದೆಯಲ್ಲಿರುವುದು ನಮಗೆ ಒಪ್ಪಿಗೆ ಇಲ್ಲ ಎಂದರು.

    ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದಾಗ ಅಸಮಾಧಾನಿತ ಶಾಸಕರು ದೂರು ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಸಮಾಧಾನಿತ ಶಾಸಕರು ದೂರು ನೀಡಲಿ, ತಪ್ಪೇನಿದೆ. ನಾವೂ ಹೋಗಿ ದೂರು ಕೊಡ್ತೇವೆ. ಎಲ್ಲ ಶಾಸಕರು ರೆಡಿ ಆಗಬೇಕು. ಎಲ್ಲ ಶಾಸಕರಿಗೂ ಅನ್ಯಾಯವಾಗುತ್ತಿದೆ. ಬಹಳ ನೋವಾಗಿದೆ. ನಮಗೆಲ್ಲ ಧೈರ್ಯ ಬಂದಿದೆ. ರಾಜಕೀಯ ಸ್ಥಾನಮಾನ ಸೇರಿ ನಮಗೆ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷರಿಗೇ ಬೆಲೆ ಇಲ್ಲ. ಬೇಕಾಬಿಟ್ಟಿಯಾಗಿ ನಿಗಮ ಮಂಡಳಿ ಸ್ಥಾನ ನೀಡುತ್ತಿದ್ದಾರೆ ಎಂದರು.

  • ಕಣ್ಣಿನಿಂದ ನೋಡಲಾರದ ದೃಶ್ಯಗಳು ಸಿಡಿಯಲ್ಲಿದೆ, ಸಿಬಿಐ ತನಿಖೆ ನಡೆಯಲಿ: ಯತ್ನಾಳ್

    ಕಣ್ಣಿನಿಂದ ನೋಡಲಾರದ ದೃಶ್ಯಗಳು ಸಿಡಿಯಲ್ಲಿದೆ, ಸಿಬಿಐ ತನಿಖೆ ನಡೆಯಲಿ: ಯತ್ನಾಳ್

    – ಡಿಕೆಶಿ ಬಳಿ ಸಿಡಿ ಇದೆ
    – ನನ್ನ ಬಳಿ ಸಿಡಿ ಇದ್ದರೆ ಡಿಸಿಎಂ ಆಗ್ತಿದ್ದೆ
    – ಬಿಜೆಪಿ ಶಾಸಕರಿಗಿಂತ ಕೈ ಶಾಸಕರಿಗೆ ಹೆಚ್ಚಿನ ಅನುದಾನ

    ಬಾಗಲಕೋಟೆ: ರಾಜ್ಯ ರಾಜಕೀಯದಲ್ಲಿ ಸಿಡಿ ಕುರಿತು ಭಾರೀ ಚರ್ಚೆ ನಡೆಯುತ್ತಿದ್ದು, ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಡಿ ಕುರಿತು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

    ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಕಣ್ಣಿನಿಂದ ನೋಡಲಾಗದಂತಹ ದೃಶ್ಯಗಳು ಸಿಡಿಯಲ್ಲಿದೆ. ಈ ಕುರಿತು ಕಾಲಕ್ರಮೇಣ ಇದು ತಿಳಿಯಲಿದೆ. ಈ ಕುರಿತು ಮುಕ್ತ ತನಿಖೆಯಾಗಬೇಕಾದಲ್ಲಿ ಸಿಬಿಐಗೆ ವಹಿಸಬೇಕು. ಹಿಂದೆ ಇದ್ದದ್ದೇ ಆ ಸಿಡಿ, ಯಾರೊಂದಿಗೆ ಇದೆ ಅಂತ ಎಲ್ಲರಿಗೂ ಗೊತ್ತೇ ಇದೆ. ನಾನು ಆ ಬಗ್ಗೆ ಏನೂ ಹೇಳಬೇಕಿಲ್ಲ. ಆ ಸಿಡಿಯನ್ನೇ ಮೂವರು ನನ್ನ ಬಳಿ ತೆಗೆದುಕೊಂಡು ಬಂದಿದ್ದರು. ಅದರಲ್ಲಿ ಇಬ್ಬರು ಈಗ ಸಚಿವರಾಗಿದ್ದಾರೆ. ನನ್ನ ಬಳಿ ಆ ಸಿಡಿ ಇದ್ದಿದ್ದರೆ ನಾನೇ ಉಪಮುಖ್ಯಮಂತ್ರಿ ಆಗಿರುತ್ತಿದ್ದೆ. ಆ ಸಿಡಿಯನ್ನ ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ. ಆ ಸಿಡಿ ಡಿಕೆಶಿ ಬಳಿಯೂ ಇದೆ. ನಿಜವಾಗಲೂ ವಿರೋಧ ಪಕ್ಷ ಆಗಿದ್ದರೆ ಸಿಡಿ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

    ಡಿಕೆಶಿ ಮಾತನಾಡೋ ದಾಟಿಯಲ್ಲೇ ಅವರ ಬಳಿ ಸಿಡಿ ಇದೆ ಅನ್ನೋದು ಗೊತ್ತಾಗುತ್ತದೆ. ಸಿಡಿ ಕುರಿತು ಸಿಬಿಐ ತನಿಖೆ ಆಗಲಿ. ಸಿದ್ದರಾಮಯ್ಯ, ಕೆ.ಜೆ.ಜಾರ್ಜ್, ಜಮೀರ್ ಅಹ್ಮದ್, ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗೋದೆ ಆ ಸಿಡಿ ಬ್ಲ್ಯಾಕ್ ಮೇಲ್‍ನಿಂದ ಎಂದು ಆರೋಪಿಸಿದರು.

    ಸಿಡಿ ಅಂತೂ ಇದೆ. ಅದನ್ನು ಇನ್ನೂ ಕೆಲವರು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಾರೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತೆ. ಕಾರ್ಯದರ್ಶಿ ಬಳಿ ಸಿಡಿಯಿದೆ ಎಂದು ಈ ಹಿಂದೆ ಡಿಕೆ ಶಿವಕುಮಾರ್ ಹಿಂದೆ ಹೇಳಿದ್ದರು. ಮೊದಲು ಅವರ ಮನೆಯೆ ಸ್ವಚ್ಛ ಇಲ್ಲ. ಹೀಗಾಗಿ ತನಿಖೆ ಮಾಡಲು ಅವರೇನು ಹೇಳುತ್ತಾರೆ. ನೀವು ವಿರೋಧ ಪಕ್ಷದ ನಾಯಕರಂತೆ ಕೆಲಸ ಮಾಡಿ, ನಿಮ್ಮ ಬಳಿಯಿರುವ ಸಿಡಿಯನ್ನು ಬಿಡುಗಡೆ ಮಾಡಿ ಎಂದು ನಾನು ಡಿಕೆಶಿಯವರನ್ನು ಅಗ್ರಹಿಸುತ್ತೇನೆ ಎಂದರು.

    ಯುವರಾಜ್ ಪ್ರಕರಣ ಮುಚ್ಚಿಹಾಕಲಾಗಿದೆ: ಯುವರಾಜ್ ಬಂಧನವಾದ ಬಳಿಕ ಹಲವು ಸಚಿವರ ಜೊತೆ ಫೋಟೋ ತೆಗೆಸಿಕೊಂಡಿದ್ದನ್ನು ಬಿಡುಗಡೆ ಮಾಡಲಾಗಿದೆ. ಸಚಿವ ಸಂಪುಟ ವಿಸ್ತರಣೆ ಹೊತ್ತಲ್ಲೇ ಫೋಟೋ ಯಾಕೆ ಬಿಡುಗಡೆ ಮಾಡಿದಿರಿ. ಸಿಸಿಬಿ ದುರ್ಬಳಕೆ ಮಾಡಿಕೊಂಡು ಬಿಜೆಪಿ ನಾಯಕರ ಜೊತೆ ಯುವರಾಜ್ ಇದ್ದ ಫೋಟೋ ಬಿಡುಗಡೆ ಮಾಡಿದ್ದೀರಿ ಎಂದು ಯತ್ನಾಳ್ ಆರೋಪಿಸಿದ್ದಾರೆ. ಅಲ್ಲದೆ ಯುವರಾಜ್ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತಿದೆ ಎಂದಿದ್ದಾರೆ.

    ದಲಿತ ಶಾಸಕನ ಮನೆ ಸುಡುವ ವಿಚಾರವಾಗಿ ಪ್ರತಿಯೊಂದು ವಿಷಯದಲ್ಲೂ ನೀವು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೀರಿ. ನಿಮ್ಮ ನಾಯಕಿ ಸೋನಿಯಾ ಬಗ್ಗೆ ನಿಮಗೆ ಗೌರವಯಿದ್ದರೆ ನಿಮ್ಮ ಬಳಿ ಇರುವ ಸಿಡಿಯನ್ನು ತಕ್ಷಣವೇ ಬಿಡುಗಡೆಮಾಡಿ. ಆ ಸಿಡಿ ತೋರಿಸಿಯೇ ನೀವು ಬಿಎಸ್‍ವೈ ಬಳಿ ಹೆಚ್ಚಿನ ಕೆಲಸ ಮಾಡಿಸಿಕೊಳ್ಳುತ್ತಿದ್ದೀರಿ. ಬಿಜೆಪಿ ಶಾಸಕರಿಗಿಂತ ಕಾಂಗ್ರೆಸ್ ಶಾಸಕರಿಗೆ ಹೆಚ್ಚು ಅನುದಾನ ಬಿಡುಗಡೆ ಅಗುತ್ತಿದೆ. ಬೆಳಗಾವಿಯಲ್ಲಿ ಅಭಯ ಪಾಟೀಲ್ ಅವರಿಗಿಂತ ಬೇರೆ ಪಕ್ಷದ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗಿದೆ. ಇದರ ಜೊತೆ ನೀವು ಶಿಕಾರಿಪುರ ಸೇರಿದಂತೆ ಕೆಲವೇ ಜಿಲ್ಲೆಗಳಿಗೆ ಸಿಎಂ ಅಗಿದ್ದೀರಿ. ನಿಮ್ಮನ್ನು ಸಿಎಂ ಸ್ಥಾನದಿಂದ ತೆಗೆಯುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದ್ದಂತೆ ಕೊಡಲ ಸಂಗಮಕ್ಕೆ 500 ಕೋಟಿ ರೂಪಾಯಿ ಘೋಷಣೆ ಮಾಡತ್ತೀರಿ. ದುಡ್ಡು ಎಲ್ಲಿದೆ, ಸುಮ್ಮನೆ ಘೋಷಣೆ ಮಾಡುತ್ತಾ ಹೋಗುತ್ತೀರಿ. ವಿಜಯಪುರ ವಿಮಾನ ನಿಲ್ದಾಣಕ್ಕೆ ಹಣ ನೀಡಿಲ್ಲ. ಅದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅನುದಾನ ನೀಡುತ್ತೀರಿ. ಸಿಎಂ ಅಗಿ ಈ ರೀತಿ ತಾರತ್ಯಮ ಮಾಡುವುದು ಸರಿನಾ ಎಂದು ಪ್ರಶ್ನಿಸಿದ್ದಾರೆ.

  • ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್, ಕ್ರಿಮಿನಲ್ ಕೇಸ್ ಹಾಕುವ ಧೈರ್ಯ ಸಿಎಂಗೆ ಇದೆಯೇ- ಸಿದ್ದು ಪ್ರಶ್ನೆ

    ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್, ಕ್ರಿಮಿನಲ್ ಕೇಸ್ ಹಾಕುವ ಧೈರ್ಯ ಸಿಎಂಗೆ ಇದೆಯೇ- ಸಿದ್ದು ಪ್ರಶ್ನೆ

    ಬೆಂಗಳೂರು: ಸಿಡಿ ತೋರಿಸಿ ಮುಖ್ಯಮಂತ್ರಿಗಳಿಗೆ ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬ ಆರೋಪದ ಕುರಿತು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಹರಿಹಾಯ್ದಿದ್ದಾರೆ.

    ಸರಣಿ ಟ್ವೀಟ್ ಮಾಡಿರುವ ಅವರು, ಸಿಡಿ ತೋರಿಸಿ ಸಿಎಂ ಬೆದರಿಸಿ, ಕೆಲವರು ಮಂತ್ರಿ ಹುದ್ದೆ ಪಡೆದಿದ್ದಾರೆ ಎಂದು ಬಿಜೆಪಿ ಶಾಸಕರೇ ಆರೋಪಿಸುತ್ತಿದ್ದಾರೆ. ಬ್ಲಾಕ್‍ಮೇಲ್ ಮಾಡಿದವರು ಯಾರೇ ಆಗಿರಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಧೈರ್ಯ ಮುಖ್ಯಮಂತ್ರಿಗಳಿಗಿದೆಯೇ ಎಂದು ಪ್ರಶ್ನಿಸಿದ್ದಾರೆ.

    ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿ ನಾಯಕರಿಗೆ ತಡವಾಗಿ ಜ್ಞಾನೋದಯವಾಗಿದೆ. ಯಡಿಯೂರಪ್ಪ ನಾಮಕಾವಸ್ತೆ ಮುಖ್ಯಮಂತ್ರಿ, ನಿಜವಾದ ಅಧಿಕಾರ ಚಲಾಯಿಸುತ್ತಿರುವುದು ಅವರ ಮಗ ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಕೆಲವರಿಗೆ ಈಗೀಗ ಸತ್ಯ ಗೊತ್ತಾಗ್ತಿದೆ ಎಂದು ಮತ್ತೊಂದು ಟ್ವೀಟ್‍ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸಿಎಂ ಯಡಿಯೂರಪ್ಪ ಅವರ ಕುರ್ಚಿ ಗಟ್ಟಿಯಾಗಿದ್ದರೆ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಬಳಿ ಗೋಗರೆಯುವ, ಕೈಕಾಲು ಹಿಡಿಯುವ ಅಗತ್ಯವಿರುತ್ತಿರಲಿಲ್ಲ. ಕೆಲವರಿಗೆ ಮಂತ್ರಿ ಸ್ಥಾನ ಕೊಡಲು ಕಾನೂನಿನ ತೊಡಕಿದೆ ಅಂತ ಗೊತ್ತಿದ್ರೂ ಸುಳ್ಳು ವಾಗ್ದಾನ ನೀಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಸೇರಿದ ಕೆಲವರು ಬಾಯಿ ಬಡ್ಕೊತಿರೋದು ಎಂದು ಆರೋಪಿಸಿದ್ದಾರೆ.

  • ಮಕರ ಸಂಕ್ರಾಂತಿ – ಗೋ ಪೂಜೆ ನೆರೆವೇರಿಸಿದ ಸಿಎಂ

    ಮಕರ ಸಂಕ್ರಾಂತಿ – ಗೋ ಪೂಜೆ ನೆರೆವೇರಿಸಿದ ಸಿಎಂ

    ಬೆಂಗಳೂರು: ಮಕರ ಸಂಕ್ರಾಂತಿಯ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಗೋಪೂಜೆ ನೆರವೇರಿಸಿದರು. ಉಪಮುಖ್ಯಮಂತ್ರಿ  ಸಿ.ಎನ್.ಅಶ್ವತ್ಥ್ ನಾರಾಯಣ್ ಉಪಸ್ಥಿತರಿದ್ದರು.

    ನಾಡಿಗೆ ಆವರಿಸಿರುವ ಸಾಂಕ್ರಾಮಿಕದ ಕರಿಛಾಯೆ ದೂರಸರಿಯಲಿ, ಸಂತಸ, ಸಮೃದ್ಧಿಗಳ ಹೊಂಗಿರಣ ಎಲ್ಲೆಡೆ ಪಸರಿಸಲಿ. ಈ ಸುಗ್ಗಿಕಾಲವು ಎಲ್ಲರಿಗೂ ಆರೋಗ್ಯ, ಯಶಸ್ಸು, ನಲಿವುಗಳನ್ನು, ವಿಶೇಷವಾಗಿ ಅನ್ನದಾತ ರೈತನಿಗೆ ನೆಮ್ಮದಿಯನ್ನು ಹೊತ್ತು ತರಲಿ, ನಾಡು ಪ್ರಗತಿ ಪಥದಲ್ಲಿ ಮುನ್ನಡೆಯಲಿ ಎಂದು ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳನ್ನ ಸಿಎಂ ತಿಳಿಸಿದ್ದಾರೆ.

    ಇಂದು ಬೆಳಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಿಎಸ್‍ವೈ, ಅಸಮಾಧಾನ ಇದ್ದವರು ಬೇಕಾದ್ರೆ ದೆಹಲಿಗೆ ಹೋಗಿ ವರಿಷ್ಠರ ಜೊತೆ ಮಾತಾಡೋದಕ್ಕೆ ನನ್ನ ಅಭ್ಯಂತರವಿಲ್ಲ. ಸಚಿವ ಸ್ಥಾನ ವಂಚಿತರು ಹಗುರವಾಗಿ ಮಾತನಾಡೋದು ಬೇಡ. ಯಾವುದೇ ಶಾಸಕರು ವಿರೋಧ ಇದ್ರೆ ದೆಹಲಿಗೆ ಹೋಗಲಿ. ವರಿಷ್ಠರಿಗೆ ದೆಹಲಿಗೆ ಹೋಗಿ ದೂರು ಕೊಡಲಿ. ಇಲ್ಲಿ ಮಾತಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಶಾಸಕರು ಮಾಡೋದು ಬೇಡ. ವರಿಷ್ಠರು ಸರಿ ತಪ್ಪು ಯಾವುದು ಅಂತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು.

  • ಹೈಕಮಾಂಡ್ ಎದುರು ಸಿಎಂ ಯಡಿಯೂರಪ್ಪಗೆ ಭಾರೀ ಮುಖಭಂಗ!

    ಹೈಕಮಾಂಡ್ ಎದುರು ಸಿಎಂ ಯಡಿಯೂರಪ್ಪಗೆ ಭಾರೀ ಮುಖಭಂಗ!

    – ಮಾರ್ಚ್ ನಲ್ಲಿ ಸಿಎಂ ಬದಲಾಗ್ತಾರಾ?

    ಬೆಂಗಳೂರು: ಹೈಕಮಾಂಡ್ ಮುಂದೆ ಸಿಎಂಗೆ ಭಾರೀ ಮುಖಭಂಗವಾಗಿದ್ದು, ಯಡಿಯೂರಪ್ಪ ಕೊಟ್ಟ ಪಟ್ಟಿಯಲ್ಲಿ ಮೂವರಿಗೆ ಮಾತ್ರ ಸ್ಥಾನ ನೀಡಲಾಗಿದೆ ಎಂದು ತಿಳಿದು ಬಂದಿದೆ. ಉಳಿದ ನಾಲ್ವರ ಹೆಸರನ್ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೀಡಿದ ಪಟ್ಟಿಯಿಂದ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

    ಸಿಎಂ ತಮ್ಮ ಪಟ್ಟಿಯಲ್ಲಿ ಶಾಸಕರಾದ ಮುನಿರತ್ನ ಮತ್ತು ರೇಣುಕಾಚಾರ್ಯರ ಹೆಸರನ್ನ ಶಿಫಾರಸ್ಸು ಮಾಡಿದ್ದರು. ಆದ್ರೆ ಸಿಎಂ ನೀಡಿದ ಏಳು ಹೆಸರಲ್ಲಿ ಕೇವಲ ಮೂವರನ್ನ ಮಾತ್ರ ಹೈಕಮಾಂಡ್ ಅಂತಿಮ ಮಾಡಿದೆ. ಹೈಕಮಾಂಡ್ ಮುಂದೆ ಯಡಿಯೂರಪ್ಪ ವೀಕ್ ಆದ್ರಾ ಅನ್ನೋ ಮಾತುಗಳ ಜೊತೆ ಮಾರ್ಚ್ ನಲ್ಲಿ ಸಿಎಂ ಬದಲಾವಣೆ ಆಗುತ್ತೆ ಎಂಬ ವದಂತಿಗಳಿಗೆ ಇಂದಿನ ಬೆಳವಣಿಗೆ ಪುಷ್ಠಿ ನೀಡುತ್ತಿವೆ.

    ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.