Tag: CM BS Yediyurappa

  • ಅನಗತ್ಯ ಆತಂಕ ಹುಟ್ಟಿಸಬೇಡಿ- ಬಿಬಿಎಂಪಿ ಆಯುಕ್ತರಿಗೆ ಸಿಎಂ ತರಾಟೆ

    ಅನಗತ್ಯ ಆತಂಕ ಹುಟ್ಟಿಸಬೇಡಿ- ಬಿಬಿಎಂಪಿ ಆಯುಕ್ತರಿಗೆ ಸಿಎಂ ತರಾಟೆ

    ಬೆಂಗಳೂರು: ಕೊರೊನಾ ವಿಚಾರದಲ್ಲಿ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಹುಟ್ಟಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊರೊನಾ ಬಿಗಿ ನಿಯಮಗಳ ಜಾರಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾರ್ಕ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡುವುದು, ಥೀಯೇಟರ್ ಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದು. ವಿವಾಹ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದಂತೆ ಕ್ರಮ ವಹಿಸುವ ಅಗತ್ಯವಿದೆ ಎಂದು ಮಂಜುನಾಥ್ ಪ್ರಸಾದ್ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ಥೀಯೇಟರ್‌ಗಳ ಸಾಮರ್ಥ್ಯ ಶೇ.50ಕ್ಕೆ ಇಳಿಸಿ- ಬಿಬಿಎಂಪಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ

    ಇದಕ್ಕೆ ಸಿಎಂ ಕೆಂಡಾಮಂಡಲವಾಗಿದ್ದು, ಅನಗತ್ಯ ಆತಂಕ ಹುಟ್ಟಿಸೋದು ಯಾಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ನಿಯಮಗಳ ಜಾರಿ ಬಗ್ಗೆ ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಸಭೆ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಕೊರೊನಾ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಖುದ್ದು ಪ್ರಧಾನಿಯವರೇ ಜನರಲ್ಲಿ ಆತಂಕ ಹುಟ್ಟಿಸೋದು ಬೇಡ ಎಂದಿದ್ದಾರೆ. ಈ ಮಧ್ಯೆ ಅನಗತ್ಯ ಹೇಳಿಕೆ ಯಾಕೆ ಕೊಡಬೇಕಿತ್ತು ಎಂದು ಆಯುಕ್ತರಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನೊಂದು ವಾರ ಪರಿಸ್ಥಿತಿ ಅವಲೋಕನ ಮಾಡುವುದಾಗಿ ನಿರ್ಧರಿಸಲಾಗಿದೆ. ಪ್ರಸ್ತಾವನೆ ಕೊಟ್ಟ ಮೇಲೆ ತಜ್ಞರು ಪರಿಸ್ಥಿತಿ ಅವಲೋಕಿಸಿ ವರದಿ ನೀಡುತ್ತಾರೆ. ಅದಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟು ಜನರಲ್ಲಿ ಆತಂಕ ಹುಟ್ಟಿಸುವ ಪ್ರಯತ್ನ ಬೇಡ. ಏನೇ ಇದ್ದರೂ ತಜ್ಞರ ಜೊತೆ ಚರ್ಚಿಸಿ, ತೀರ್ಮಾನಿಸಲಾಗುತ್ತದೆ. ಅನಗತ್ಯ ಆತಂಕ ಹುಟ್ಟಿಸಿ ಜನರನ್ನು ಭೀತಿಗೆ ತಳ್ಳುವುದು ಬೇಡ ಎಂದು ಸಿಎಂ ತಾಕೀತು ಮಾಡಿದ್ದಾರೆ.

  • ಸಿಡಿ ತಯಾರಿಸುವ ಗ್ಯಾಂಗ್‍ಗಳಿವೆ, ಯುವರಾಜ್ ಬಂಧನವಾಗಿದ್ದೂ ಇದೇ ಕಾರಣಕ್ಕೆ: ಯತ್ನಾಳ್

    ಸಿಡಿ ತಯಾರಿಸುವ ಗ್ಯಾಂಗ್‍ಗಳಿವೆ, ಯುವರಾಜ್ ಬಂಧನವಾಗಿದ್ದೂ ಇದೇ ಕಾರಣಕ್ಕೆ: ಯತ್ನಾಳ್

    – ಪರೋಕ್ಷವಾಗಿ ಸಿಎಂ, ವಿಜಯೇಂದ್ರ ವಿರುದ್ಧ ವಾಗ್ದಾಳಿ

    ವಿಜಯಪುರ: ಬೆಂಗಳೂರಿನಲ್ಲಿ ಕೆಲವು ಜನ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಿಡಿ ತಯಾರಿಸುವ ಗ್ಯಾಂಗ್‍ಗಳಿವೆ. ಬ್ಲ್ಯಾಕ್ ಮೇಲ್ ಮಾಡುವುದು ಅವರ ರಾಜಕೀಯ ವಿರೋಧಿಗಳಿಗೆ ನೀಡುವುದು ನಡೆಯುತ್ತಿದೆ. ಯುವರಾಜ್ ಬಂಧನವೂ ಇದೇ ಕಾರಣಕ್ಕಾಗಿ ನಡೆದಿದೆ. ಎಷ್ಟೋ ರಾಜಕಾರಣಿಗಳು ಯುವರಾಜ್ ಗೆ ಎಂಪಿ, ರಾಜ್ಯಸಭೆ ಸದಸ್ಯ, ಸಚಿವರಾಗಲು ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ. ಯುವರಾಜ ಸಿಎಂ ಮನೆಯಲ್ಲಿಯೇ ಇರುತ್ತಿದ್ದ. ಈಗ ನೂರಾರು ಕೋಟಿ ರೂಪಾಯಿ ಮನುಷ್ಯನಾಗಿದ್ದಾನೆ ಎಂದರು.

    ಮನೆಗೆ ಹೋದವರಿಗೆ ಬೆಳ್ಳಿತಟ್ಟೆ, ಬೆಳ್ಳಿ ಗ್ಲಾಸಿನಲ್ಲಿ ಊಟ ಮಾಡಿಸುತ್ತಿದ್ದ ಬ್ಲ್ಯಾಕ್ ಮೇಲರ ಈತ. ಬಿಜೆಪಿ ರಾಷ್ಟ್ರೀಯ ನಾಯಕರ ಜೊತೆಗಿನ ಫೋಟೋಗಳು ವೈರಲ್ ಆಗಿವೆ. ಆದರೆ ಸಿಎಂ, ವಿಜಯೇಂದ್ರ ಜೊತೆಗಿನ ಒಂದೂ ಫೋಟೋ ಹೊರ ಬರಲಿಲ್ಲ ಪರೋಕ್ಷವಾಗಿ ಸಿಎಂ ಹಾಗೂ ವಿಜಯೇಂದ್ರ ವಿರುದ್ಧ ಹರಿಹಾಯ್ದರು.

    ಸಿಡಿ ಬಹಿರಂಗದಲ್ಲಿ ಕಾಂಗ್ರೆಸ್ ಕೈವಾಡದ ಕುರಿತು ಸಚಿವ ಎಸ್.ಟಿ.ಸೋಮಶೇಖರ್ ಮಾತಿನಲ್ಲಿ ನಿಜಾಂಶವಿದೆ. ಅವರು 20-25 ವರ್ಷಗಳ ಅನುಭವದಲ್ಲಿ ಇದನ್ನು ಹೇಳಿದ್ದಾರೆ. ಅವರ ಮಾತು, ಅನುಭವದಲ್ಲಿ ಅಮೃತವಿದೆ ಎಂಬಂತಿದೆ. ಏಕೆಂದರೆ ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಕೆಟ್ಟ ಕೆಲಸ ಮಾಡುವ ಬಗ್ಗೆ ಭಯ ಬಂದಿದೆ. ಕಾಂಗ್ರೆಸ್ ರಾಜ್ಯಕ್ಕೆ ಕೆಟ್ಟ ನಾಯಕತ್ವ ನೀಡಿದ್ದು ದುರ್ದೈವ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು.

    ಸಿಡಿ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳಿವೆ. ರಾಜ್ಯದಲ್ಲಿ ಸಿಡಿ ತಯಾರಿಸುವ ಇಬ್ಬರು ವ್ಯಕ್ತಿಗಳಿ ದ್ದಾರೆ. ಓರ್ವ ಬಿಜೆಪಿಯಲ್ಲಿ ಮತ್ತೋರ್ವ ಕಾಂಗ್ರೆಸ್ಸಿನಲ್ಲಿದ್ದಾರೆ ಎಂದರು.

  • ಸಿಎಂ ಯಡಿಯೂರಪ್ಪ ಸಿಡಿ ಇತ್ತು, ಅದೇನಾಯ್ತು: ವಾಟಾಳ್ ನಾಗರಾಜ್ ಪ್ರಶ್ನೆ

    ಸಿಎಂ ಯಡಿಯೂರಪ್ಪ ಸಿಡಿ ಇತ್ತು, ಅದೇನಾಯ್ತು: ವಾಟಾಳ್ ನಾಗರಾಜ್ ಪ್ರಶ್ನೆ

    ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿ.ಡಿ.ಯು ಇತ್ತು, ಅದೇನಾಯ್ತು? ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಜೆಟ್ ನಲ್ಲಿ ಚಾಮರಾಜನಗರ ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟನೆ ನಡೆಸಿದ ಅವರು, ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಶಾಸನ ಸಭೆಯಲ್ಲೇಕೆ ಚರ್ಚೆ ಆಗಲಿಲ್ಲ? ಸಿಎಂ ಯಡಿಯೂರಪ್ಪ ಶಾಸನ ಸಭೆಯನ್ನು ತಮ್ಮ ಸ್ವಂತ ಮನೆ ಮಾಡಿಕೊಂಡಿದ್ದಾರೆ. ಸ್ಪೀಕರ್ ಸಿಎಂ ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಆಗಿದ್ದಾರೆ. ರಾಜ್ಯದಲ್ಲಿ ಸಮರ್ಥ ವಿರೋಧ ಪಕ್ಷ ಇಲ್ಲ. ಸಿದ್ದರಾಮಯ್ಯ ಪ್ರಬುದ್ಧ ರಾಜಕಾರಣಿ, ಆದರೂ ಸಿಡಿ ವಿಚಾರ ಚರ್ಚೆ ಮಾಡದೆ ಯಾಕೆ ಹಿಂದೇಟು ಹಾಕಿದರು ಎಂದು ಪ್ರಶ್ನಿಸಿದರು.

    ಸಿಡಿ ವಿಚಾರ ಎಸ್.ಐ.ಟಿ ತನಿಖೆ ಬದಲು ಸಿಬಿಐ ಗೆ ಕೊಡಬೇಕಿತ್ತು. ಸಿಡಿ ಎಲ್ಲಿಂದ ಬಂತು, ಯಾರು ಮಾಡಿದರು, ಕಂಪ್ಲೇಂಟ್ ಕೊಟ್ಟು ಯಾಕೆ ಹಿಂಪಡೆದರು? ಈ ಎಲ್ಲ ವಿಚಾರಗಳ ಬಗ್ಗೆ ಶಾಸನ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಬೇಕಿತ್ತು. ಕೋರ್ಟ್ ಗೆ ಹೋಗಿರುವ 6 ಮಂತ್ರಿಗಳಿಗೆ ಸದನಕ್ಕೆ ಕಾಲಿಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

    ತಮಗೆ ಬೇಕಾದ ಜಿಲ್ಲೆಗಳಿಗೆ ಬಜೆಟ್ ನಲ್ಲಿ ಸಿಕ್ಕಾಪಟ್ಟೆ ಹಣ ನೀಡಿ ಚಾಮರಾಜನಗರ ಕಡೆಗಣಿಸುವ ಮೂಲಕ ಈ ಜಿಲ್ಲೆಯ ಜನರಿಗೆ ಅಪಮಾನ ಮಾಡಲಾಗಿದೆ ಎಂದು ವಾಟಾಳ್ ಆರೋಪಿಸಿದರು.

  • ದಂಡಿಯಲ್ಲಿ ಪ್ರಧಾನಿ ಮೋದಿ, ವಿದುರಾಶ್ವತ್ಥದಲ್ಲಿ ಸಿಎಂ ಯಡಿಯೂರಪ್ಪ

    ದಂಡಿಯಲ್ಲಿ ಪ್ರಧಾನಿ ಮೋದಿ, ವಿದುರಾಶ್ವತ್ಥದಲ್ಲಿ ಸಿಎಂ ಯಡಿಯೂರಪ್ಪ

    – ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆರಂಭಕ್ಕೆ ಕ್ಷಣಗಣನೆ

    ಚಿಕ್ಕಬಳ್ಳಾಪುರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ದಂಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಅದೇ ರೀತಿ ರಾಜ್ಯದಲ್ಲಿ ಕರ್ನಾಟಕದ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಹಾಗೂ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ನಾಳೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಎಸ್‍ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಬೆಳಗ್ಗೆ 11 ಗಂಟೆಗೆ ವಿದುರಾಶ್ವತ್ಥಕ್ಕೆ ಸಿಎಂ, ರಾಜ್ಯಪಾಲರು ಸೇರಿದಂತೆ ಸಚಿವರು ಆಗಮಿಸಲಿದ್ದು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದ ಸೇನಾನಿಗಳ ಸವಿನೆನಪಿನ ಸ್ಮಾರಕ ಸ್ಥೂಪಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ನಂತರ ಸ್ವಾತಂತ್ರ್ಯ ಸಂಗ್ರಾಮದ ಪೋಟೋ ಗ್ಯಾಲರಿ ವೀಕ್ಷಣೆ ಮಾಡಿಲಿದ್ದು, ಕೊನೆಗೆ ಮೆಮೋರಿಯಲ್ ಹಾಲ್ ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.

    ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದಂಡಿಯಲ್ಲಿ ಚಾಲನೆ ನೀಡಲಿರುವ ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಆಗಸ್ಟ್ 15, 2022ಕ್ಕೆ 75 ವರ್ಷಗಳಾಗಲಿವೆ. ಹೀಗಾಗಿ ನಾಳೆಯಿಂದ ಆಗಸ್ಟ್ 15, 2022 ರವರೆಗೆ 75 ವಾರಗಳ ಕಾಲ ದೇಶದ ವಿವಿಧ ಸ್ವಾತಂತ್ರ್ಯ ಸಂಗ್ರಾಮದ ಸವಿನೆನೆಪಿನ ತಾಣಗಳಲ್ಲಿ ಈ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಪ್ರತಿ ವಾರ ನಡೆಸಲಾಗುತ್ತದೆ. ನಾಳೆ ಮೊದಲ ವಾರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

  • ಬಿಪಿಎಲ್ ಕಾರ್ಡ್ ಪಡೆದ ಶ್ರೀಮಂತರು ವಾಪಸ್ ನೀಡಬೇಕು: ಸಿಎಂ

    ಬಿಪಿಎಲ್ ಕಾರ್ಡ್ ಪಡೆದ ಶ್ರೀಮಂತರು ವಾಪಸ್ ನೀಡಬೇಕು: ಸಿಎಂ

    ಶಿವಮೊಗ್ಗ: ಬಿಪಿಎಲ್ ಕಾರ್ಡ್ ಬಗ್ಗೆ ಚರ್ಚೆ ಮಾಡುವ ಅಗತ್ಯ ಇಲ್ಲ. 2017ರಲ್ಲಿ ಇದ್ದ ಮಾನದಂಡವೇ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

    ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶ್ರೀಮಂತರು ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಪಡೆಯುತ್ತಿರುವುದು ನಿಲ್ಲಬೇಕು. ಕಾನೂನುಬಾಹಿರವಾಗಿ ಬಿಪಿಎಲ್ ಕಾರ್ಡ್ ಪಡೆದಿರುವವರು ವಾಪಸ್ ಕೊಡಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಅನಗತ್ಯವಾಗಿ ಬಿಪಿಎಲ್ ಕಾರ್ಡ್ ಪಡೆದವರಿಂದ ಹಣ ವಸೂಲಿ ಮಾಡಬೇಕು. ಬಿಪಿಎಲ್ ಕಾರ್ಡ್ ಅಗತ್ಯ ಇಲ್ಲದವರು ಯಾರು ಪಡೆದಿದ್ದಾರೋ ಅವರೇ ಸ್ವಯಂ ಪ್ರೇರಿತರಾಗಿ ಕಾರ್ಡ್ ವಾಪಸ್ ಕೊಡಬೇಕು. ಇದು ಅವರ ದೃಷ್ಟಿಯಿಂದಲೂ ಒಳ್ಳೆಯದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಸೋಗಾನೆ ಬಳಿ ನಿರ್ಮಾಣ ಆಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಶೀಲನೆ ನಡೆಸಿದರು. ಒಟ್ಟು 384 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. ಸದ್ಯ ರನ್ ವೇ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣ ಆಗಬೇಕು. ನೈಟ್ ಲ್ಯಾಂಡಿಂಗ್ ಗೆ ಸಹ ವ್ಯವಸ್ಥೆ ಕೈಗೊಳ್ಳಲಾಗಿದೆ. ಎರಡನೇ ಹಂತದ ಟೆಂಡರ್ ಕರೆಯಲಾಗುತ್ತಿದ್ದು, ಎರಡು ತಿಂಗಳ ನಂತರ ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇನೆ. ಒಂದು ವರ್ಷದೊಳಗೆ ಕೇವಲ ಕಾಮಗಾರಿ ಮುಗಿಯುವುದಲ್ಲ, ವಿಮಾನ ಹಾರಾಟ ಆರಂಭವಾಗಬೇಕು ಎಂದು ತಿಳಿಸಿದರು.

    ರಾಜ್ಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಹಲವು ಸಮುದಾಯಗಳು ಹೋರಾಟ ನಡೆಸುತ್ತಿವೆ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನದ ಇತಿಮಿತಿಯೊಳಗೆ ಯಾರಿಗೂ ತೊಂದರೆ ಆಗದಂತೆ ಏನು ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಬೆಂಗಳೂರಿಗೆ ಹೋದ ನಂತರ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಸಚಿವ ಸಂಪುಟದ ಸಭೆಯಲ್ಲಿ ಸಹ ಈ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡಿ, ಯಾವ ರೀತಿ ಮಾಡಬಹುದು ಎಂಬ ಬಗ್ಗೆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಸಮಾಧಾನ ತರುವ ರೀತಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆ ಎಂದು ಸಿಎಂ ತಿಳಿಸಿದರು.

    ಮೂರು ವಿಧಾನ ಸಭೆ ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ. ಇದಕ್ಕೆ ಬೇಕಾದ ಸಿದ್ಧತೆಗಳು ಆಗಿವೆ. ಈಗಾಗಲೇ ರಾಜ್ಯಾಧ್ಯಕ್ಷರು ಉಪ ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಯಾರು ನೇತೃತ್ವ ವಹಿಸಲಿದ್ದಾರೆ ಎಂಬುದನ್ನು ಸಹ ಪ್ರಕಟಿಸಿದ್ದಾರೆ. ಅವರೆಲ್ಲರೂ ಆದಷ್ಟು ಬೇಗ ಉಪ ಚುನಾವಣೆ ನಡೆಯುವ ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದಾರೆ. ಶೀಘ್ರವಾಗಿ ಚುನಾವಣಾ ಸಮಿತಿ ಸಹ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

    ನ್ಯಾಯಮೂರ್ತಿ ರಾಮಾ ಜೋಯಿಸ್ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ವೈ ಸಂತಾಪ ಸೂಚಿಸಿದ್ದು, ರಾಮಾ ಜೋಯಿಸ್ ಅವರು ನ್ಯಾಯಾಧೀಶರಾಗಿ, ರಾಜ್ಯಸಭೆ ಸದಸ್ಯರಾಗಿ, ರಾಜ್ಯಪಾಲರಾಗಿ ಸಲ್ಲಿಸಿರುವ ಸೇವೆ ಅನನ್ಯವಾದುದು. ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಚಿಂತಕರನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದರು.

  • ಸಂಘರ್ಷ ಒಳ್ಳೆಯದಲ್ಲ, ಒಟ್ಟಾಗಿರೋಣ ಎಂದು ಯತ್ನಾಳ್‍ಗೆ ಹೇಳಿದ್ದೆ: ರೇಣುಕಾಚಾರ್ಯ

    ಸಂಘರ್ಷ ಒಳ್ಳೆಯದಲ್ಲ, ಒಟ್ಟಾಗಿರೋಣ ಎಂದು ಯತ್ನಾಳ್‍ಗೆ ಹೇಳಿದ್ದೆ: ರೇಣುಕಾಚಾರ್ಯ

    ದಾವಣಗೆರೆ: ನಮ್ಮಲ್ಲೇ ಸಂಘರ್ಷ ಒಳ್ಳೆಯದಲ್ಲ, ಒಟ್ಟಾಗಿರೋಣ ಎಂದು ಹೇಳಿದ್ದೇನೆ. ಇದೀಗ ನೋಟೀಸ್ ನೀಡುವ ಕುರಿತು ರಾಜ್ಯಾಧ್ಯಕ್ಷರು ಏನು ಶಿಫಾರಸು ಮಾಡಿದ್ದಾರೆ ಎಂಬುದು ತಿಳಿದಿಲ್ಲ ಎಂದು ಶಾಸಕ ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಮಾತನಾಡಿದ್ದಾರೆ.

    ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರು ನಮ್ಮ ಪಕ್ಷದ ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದವರು. ಅಧಿವೇಶನದ ಸಂದರ್ಭದಲ್ಲಿ ನನ್ನ ಜೊತೆಗೆ ಇದ್ದರು. ನಮ್ಮಲ್ಲಿ ಸಂಘರ್ಷ ಒಳ್ಳೆಯದಲ್ಲ ಎಂದು ಹೇಳಿದ್ದೇನೆ. ರಾಜ್ಯದ ಅಧ್ಯಕ್ಷರು ಏನು ಶಿಫಾರಸು ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ನೋಟಿಸ್ ನೀಡಿರುವುದು ಕೇಂದ್ರದ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.

    ಯತ್ನಾಳ್ ಅವರು ನೋಟಿಸ್‍ಗೆ ಸಮರ್ಪಕರವಾಗಿ ಉತ್ತರ ಕೊಡಬೇಕು. ಆಗಿರುವ ಲೋಪದೋಷ ಸರಿಪಡಿಸಿಕೊಳ್ಳಬೇಕು. ಈ ಬಗ್ಗೆ ರಾಜ್ಯಾಧ್ಯಕ್ಷರು, ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಯತ್ನಾಳ್ ಅವರು ಲೋಪದೋಷಗಳನ್ನು ಸರಿಪಡಿಸಿಕೊಂಡು ನಾವೆಲ್ಲರೂ ಒಟ್ಟಾಗಿ ಇರಬೇಕು ಎಂಬುದು ನಮ್ಮ ವಿನಂತಿ ಎಂದರು.

    ಮೀಸಲಾತಿ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲ ಸಮಾಜದವರೂ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಹಾಲುಮತ ಸಮಾಜ 2ಎ ಇಂದ ಎಸ್ಟಿಗೆ, ಪಂಚಮಸಾಲಿ ಸಮಾಜ 2ಎ ಮೀಸಲಾತಿ ದೇವಾಂಗ, ಉಪ್ಪಾರ ಸಮಾಜದವರು ಎಸ್ಟಿ ಸೇರ್ಪಡೆಗೆ ಆಗ್ರಹಿಸುತ್ತಿದ್ದಾರೆ. ಆಯಾ ಸಮಾಜದ ಶ್ರೀಗಳು ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಮೀಸಲಾತಿ ಕೇಳುವುದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜದ ಶ್ರೀಗಳು ಸಮಾವೇಶ ಮಾಡುವರಿದ್ದಾರೆ. ಅದರ ಬಗ್ಗೆಯೂ ಸಿಎಂ ಚರ್ಚೆ ಮಾಡುತ್ತಾರೆ.

    ಸಿಎಂ ಬಿ.ಎಸ್.ಯಡಿಯೂರಪ್ಪ ಸಮರ್ಥರಿದ್ದಾರೆ. ಪಕ್ಷದ ರಾಷ್ಟ್ರೀಯ ವರಿಷ್ಠರೊಂದಿಗೆ ಚರ್ಚಿಸಿ ಅದನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆ. ಈ ಬಗ್ಗೆ ಈಗಾಗಲೇ ತಜ್ಞರ ಸಮಿತಿಯನ್ನು ಸಹ ರಚಿಸಲಾಗಿದೆ. ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.

  • ಎಲ್ಲವನ್ನೂ ನಿಭಾಯಿಸುತ್ತೇನೆ, ಎಲ್ಲರಿಗೂ ನ್ಯಾಯ ಒದಗಿಸುತ್ತೇನೆ- ಸಿಎಂ

    ಎಲ್ಲವನ್ನೂ ನಿಭಾಯಿಸುತ್ತೇನೆ, ಎಲ್ಲರಿಗೂ ನ್ಯಾಯ ಒದಗಿಸುತ್ತೇನೆ- ಸಿಎಂ

    ಮೈಸೂರು: ಎಲ್ಲವನ್ನೂ ನಿಭಾಯಿಸುತ್ತೇನೆ, ಎಲ್ಲರಿಗು ನ್ಯಾಯ ಒದಗಿಸಿಕೊಡುವುದು ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿಯಾಗಿದೆ. ಆ ಕೆಲಸವನ್ನು ಮಾಡುತ್ತೇನೆ ಎಂದು ವಿವಿಧ ಸಮುದಾಯದವರು ಮೀಸಲಾತಿ ಕೇಳುತ್ತಿರುವ ವಿಚಾರ ಕುರಿತು ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಹೇಳಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ನಿಭಾಯಿಸುತ್ತೇನೆ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತೇನೆ. ತಜ್ಞರ ಜೊತೆ ಚರ್ಚೆ ನಡೆಸಲಾಗುತ್ತಿದೆ. ನನಗೆ ಇಂತಹ ಸವಾಲುಗಳು ಹೊಸದಲ್ಲ. ಸವಾಲುಗಳು ಬಂದಾಗ ಖುಷಿಯಾಗುತ್ತದೆ. ಎದುರಿಸಬೇಕೆಂಬ ಶಕ್ತಿ ಹೆಚ್ಚಾಗುತ್ತದೆ, ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇನೆ. ಎಲ್ಲರೂ ತಮ್ಮ ತಮ್ಮ ಸಮುದಾಯಕ್ಕೆ ನ್ಯಾಯ ಕೇಳುತ್ತಿದ್ದಾರೆ. ಕೇಳುವುದು ಅವರ ಹಕ್ಕು, ಅದನ್ನು ಪರಿಶೀಲಿಸಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಡಕೋಟಾ ಸರ್ಕಾರ ಎಂಬ ವಿರೋಧ ಪಕ್ಷದವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳ ಟೀಕೆಗಳಿಗೆ ಬಜೆಟ್ ನಂತರವೇ ಉತ್ತರ ಸಿಗಲಿದೆ. ಅವರ ಟೀಕೆಗಳಿಗೆ ಈಗ ಉತ್ತರ ನೀಡುವುದಿಲ್ಲ ಎಂದು ತಿಳಿಸಿದರು.

  • ಕ್ಯಾಬಿನೆಟ್ ಸಭೆ ಕರೆದು ಶೀಘ್ರವೇ ವಾಲ್ಮೀಕಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ: ಸಿಎಂ

    ಕ್ಯಾಬಿನೆಟ್ ಸಭೆ ಕರೆದು ಶೀಘ್ರವೇ ವಾಲ್ಮೀಕಿ ಮೀಸಲಾತಿ ಹೆಚ್ಚಳಕ್ಕೆ ಕ್ರಮ: ಸಿಎಂ

    ದಾವಣಗೆರೆ: ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಶೀಘ್ರವೇ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

    ರಾಜನಹಳ್ಳಿಯ ವಾಲ್ಮೀಕಿ ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ತಮ್ಮ ಮನಸ್ಸು, ಶ್ರೀಗಳ ಮಾತನ್ನು ಅರ್ಥೈಸಿಕೊಳ್ಳಲು ಆಗಮಿಸಿದ್ದೇನೆ. ಅವರ ಆಶಯ ಪೂರೈಸೋದು ನಮ್ಮ ಕರ್ತವ್ಯ. ಬಹುದಿನಗಳ ಬೇಡಿಕೆಯಾಗಿರುವ ಎಸ್‍ಟಿ ಮೀಸಲಾತಿ ಪ್ರಮಾಣದ ಹೆಚ್ಚಳದ ಕುರಿತು ವಾಲ್ಮೀಕಿ ಸ್ವಾಮೀಜಿಗಳಿಗೆ ಸತ್ಯಾಗ್ರಹ, ಹೋರಾಟಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ಈಗಾಗಲೇ ನಾಗಮೋಹನ್ ದಾಸ್ ವರದಿ ಸರ್ಕಾರದ ಕೈ ಸೇರಿದೆ. ವರದಿಯನ್ನು ಜಾರಿಗೆ ತರುತ್ತೇವೆ. ಈ ಬಗ್ಗೆ ಸ್ವಾಮೀಜಿ ಯಾವುದೇ ಅತಂಕ ಪಡುವುದು ಬೇಡ, ಹೋರಾಟ ಮಾಡುವುದು ಸಹ ಬೇಡ ಎಂದು ತಿಳಿಸಿದರು. ಭಾಷಣ ಮುಗಿಯುತ್ತಿದ್ದಂತೆ ಸಿಎಂ ಯಡಿಯೂರಪ್ಪ ವೇದಿಕೆಯಿಂದ ಹೊರಟರು.

    ಜಾತ್ರೆಯಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನನಂದಪುರಿ ಸ್ವಾಮೀಜಿ, ಸಚಿವರಾದ ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಆನಂದಸಿಂಗ್, ಭೈರತಿ ಬಸವರಾಜ್, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ತುಕಾರಾಂ, ಜಿ.ಟಿ.ದೇವೇಗೌಡ, ಶಾಸಕರಾದ ರೇಣುಕಾಚಾರ್ಯ, ರಾಮಚಂದ್ರ, ಸಂಸದ ಜಿ.ಎಂ.ಸಿದ್ದೇಶ್ ಭಾಗಿಯಾಗಿದ್ದರು.

  • ಯುಗಾದಿಗೆ ಹೊಸ ಮುಖ್ಯಮಂತ್ರಿ- ಸಿಎಂ ವಿರುದ್ಧ ಯತ್ನಾಳ್ ಮತ್ತೆ ಬಾಂಬ್

    ಯುಗಾದಿಗೆ ಹೊಸ ಮುಖ್ಯಮಂತ್ರಿ- ಸಿಎಂ ವಿರುದ್ಧ ಯತ್ನಾಳ್ ಮತ್ತೆ ಬಾಂಬ್

    ವಿಜಯಪುರ: ಮಂತ್ರಿ ಸ್ಥಾನ ಕೊಡುವ ಜಾಗದಲ್ಲಿ ನಮ್ಮವರೇ ಒಬ್ಬರು ಬರುತ್ತಾರೆ. ಉತ್ತರ ಕರ್ನಾಟಕದವರೇ ಬರುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮೂರು ತಿಂಗಳು ಎಂದು ಹೇಳಿದ್ದೆ. ಅದು ಬೇರೆಯದ್ದಕ್ಕೆ, ಇದೀಗ ಯುಗಾದಿಗೆ ಬದಲಾವಣೆ ಯಾಗುತ್ತೆ. ಹೊಸ ವರ್ಷಕ್ಕೆ ಹೊಸ ಮುಖ್ಯಮಂತ್ರಿ ಆಗುತ್ತಾರೆ ಎಂದರು.

    ಶಿವಮೊಗ್ಗದ ಸ್ಫೊಟದ ಪ್ರಕರಣವನ್ನ ಸಿಬಿಐಗೆ ನೀಡಬೇಕು. ಎಲ್ಲ ರಾಜಕೀಯ ವ್ಯಕ್ತಿಗಳದ್ದೂ ಗಣಿಗಾರಿಕೆ ಇದೆ. ದುರ್ದೈವ ಎಂದರೆ ಗಣಿಗಾರಿಕೆಯಲ್ಲೇ ರಾಜಕಾರಣಿಗಳಿದ್ದಾರೆ. ಹೀಗಾಗಿ ಯಾವ ತನಿಖೆಯೂ ಸಫಲ ಆಗುವುದಿಲ್ಲ. ನೀವು ಕೂಡ ಎರಡು ದಿನ ತೊರಿಸುತ್ತೀರಿ, ನಂತರ ಬೇರೆ ಸುದ್ದಿಗೆ ಹೋಗ್ತೀರಿ. ಶಿವಮೊಗ್ಗ ಘಟನೆ ಭಾರೀ ಭಯಾನಕ ಘಟನೆ. ಒಂದು ವೇಳೆ ಶಿವಮೊಗ್ಗ ನಗರದಲ್ಲೆ ಬ್ಲಾಸ್ಟ್ ಆಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ. ಇದು ಎಲ್ಲಿಂದ ಬರ್ತಿದೆ, ಇದರಲ್ಲಿ ಯಾವ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬುದರ ಬಗ್ಗೆ ಮುಕ್ತವಾಗಿ ತನಿಖೆ ಆಗಬೇಕೆಂದು ಆಗ್ರಹಿಸಿದರು.

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಮಾಡಲು ಬೇರೆ ಕೆಲಸ ಇಲ್ಲ. ತನ್ನ ಸರ್ಕಾರದ ವೈಫಲ್ಯವನ್ನ ಮುಚ್ಚಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಛತ್ತ ಸೇರಿದಂತೆ ಅನೇಕ ಮಹಾರಾಷ್ಟ್ರದ ಹಳ್ಳಿಗಳು ಬೆಳಗಾವಿಗೆ ಸೇರಬೇಕು. ಉಪದ್ಯಾಪಿ ಠಾಕ್ರೆ ಹತಾಶರಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದರು.

    ಎಚ್‍ಡಿಕೆ, ನಾವು ಹಳೆಯ ಮಿತ್ರರು. ನಿನ್ನೆ ಯಾವುದೇ ರಾಜಕೀಯ ಮಾತುಕತೆ ಆಗಿಲ್ಲ. ನೀವು ಒಳ್ಳೆಯ ನಾಯಕರು, ನಿಮ್ಮನ್ನು ಬಿಟ್ಟು ಕೊಟ್ಟು ನಾವು ತಪ್ಪು ಮಾಡಿದೆವು. ಕರ್ನಾಟಕದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ನೀವೇ ಎಂದರು. ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ನನ್ನ ಯಾರೂ ಹೊರಗೆ ಹಾಕಲು ಆಗಲ್ಲ ಎಂದರು.

    ಮೊಬೈಲ್ ಇಡಲು ವಿಧಾನಸಭೆ ಹೊರಗಡೆ ಬಾಕ್ಸ್ ಮಾಡಿದ್ದಾರೆ. ನಾವೆಲ್ಲ ಅಲ್ಲೆ ಇಟ್ಟು ಹೋಗುತ್ತೇವೆ. ನಿನ್ನೆಯ ಪ್ರಕಾಶ ರಾಠೋಡ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು. ಇದನ್ನ ಗಂಭೀರವಾಗಿ ತಗೆದುಕೊಳ್ಳ ಬೇಕು ಎಂದು ಆಗ್ರಹಿಸಿದರು.

  • 7 ಜನರ ಖಾತೆ ಬದಲಾವಣೆ – ಹಠ ಬಿಡದೆ ಖಾತೆ ಬದಲಿಸಿಕೊಂಡ ಸಚಿವರು

    7 ಜನರ ಖಾತೆ ಬದಲಾವಣೆ – ಹಠ ಬಿಡದೆ ಖಾತೆ ಬದಲಿಸಿಕೊಂಡ ಸಚಿವರು

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಲೆನೋವಾಗಿ ಪರಿಣಮಿಸಿತ್ತು. ಕಸರತ್ತು ಮಾಡಿ ಹಂಚಿಕೆಯನ್ನು ಸಹ ಮಾಡಿದ್ದರು. ಆದರೆ ಬಳಿಕ ಕೆಲ ಸಚಿವರು ಅಸಮಾಧಾನ ಹೊರ ಹಾಕಿ ಸಚಿವ ಸಂಪುಟ ಸಭೆಯನ್ನೇ ಬಹಿಷ್ಕರಿಸಿದ್ದರು. ಹೀಗಾಗಿ ಇದೀಗ 7 ಜನರ ಖಾತೆ ಬದಲಾವಣೆ ಮಾಡಲಾಗಿದೆ.

    ಪರಿಷ್ಕೃತ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ರಾಜ್ಯ ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ. ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣದ ಜೊತೆ ಹಜ್ ಮತ್ತು ವಕ್ಫ್ ನೀಡಲಾಗಿದೆ. ಅರವಿಂದ ಲಿಂಬಾವಳಿಯವರಿಗೆ ಅರಣ್ಯ ಖಾತೆ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ, ಸಕ್ಕರೆ, ಆರ್.ಶಂಕರ್‍ಗೆ ತೋಟಗಾರಿಕೆ, ರೇಷ್ಮೆ, ಗೋಪಾಲಯ್ಯನವರಿಗೆ ಅಬಕಾರಿ ಹಾಗೂ ನಾರಾಯಣಗೌಡ ಅವರಿಗೆ ಯುವಜನ ಸೇವೆ ಮತ್ತು ಕ್ರೀಡೆ, ಯೋಜನೆ ಮತ್ತು ಸಾಂಖಿಕ ಇಲಾಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.

    ಸಚಿವರ ಒತ್ತಡಕ್ಕೆ ಮಣಿದು ಸಿಎಂ ಯಡಿಯೂರಪ್ಪ ಮತ್ತೆ ಖಾತೆ ಬದಲಾವಣೆ ಮಾಡಿದ್ದಾರೆ. ಆದರೆ ಡಾ.ಸುಧಾಕರ್ ಗೆ ವೈದ್ಯಕೀಯ ಶಿಕ್ಷಣ ಸಿಕ್ಕೇ ಇಲ್ಲ. ಅರವಿಂದ ಲಿಂಬಾವಳಿಯವರಿಗೆ ಸಹ ಪರಿಸರ ಸಿಗಲಿಲ್ಲ. ಅಲ್ಲದೆ ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣವನ್ನೇ ಉಳಿಸಲಾಗಿದೆ.

    ಹಿಂದೆ ಯಾವ ಖಾತೆ ನೀಡಲಾಗಿತ್ತು?
    ಬಸವರಾಜ ಬೊಮ್ಮಾಯಿಯವರಿಗೆ ಗೃಹ ಜೊತೆಗೆ ಕಾನೂನು ಸಂಸದೀಯ, ಮಾಧುಸ್ವಾಮಿಯವರಿಗೆ ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಮುರುಗೇಶ ನಿರಾಣಿಗೆ ಗಣಿಗಾರಿಕೆ, ಉಮೇಶ್ ಕತ್ತಿಗೆ ಆಹಾರ ಖಾತೆ, ಡಾ.ಕೆ ಸುಧಾಕರ್‍ಗೆ ಆರೋಗ್ಯ ಇಲಾಖೆ, ಎಂಟಿಬಿ ನಾಗರಾಜ್‍ಗೆ ಅಬಕಾರಿ, ಗೋಪಾಲಯ್ಯಗೆ ತೋಟಗಾರಿಕೆ ಮತ್ತು ಸಕ್ಕರೆ, ನಾರಾಯಣ ಗೌಡಗೆ ಯುವಜನ ಸೇವೆ ಮತ್ತು ಕ್ರೀಡೆ, ಹಜ್ ಮತ್ತು ವಕ್ಫ್, ಸಿ.ಪಿ.ಯೋಗೇಶ್ವರ್‍ಗೆ ಸಣ್ಣ ನೀರಾವರಿ, ಅರವಿಂದ ಲಿಂಬಾವಳಿಗೆ ಅರಣ್ಯ, ಆನಂದ್ ಸಿಂಗ್‍ಗೆ ಪ್ರವಾಸೋದ್ಯಮ, ಪರಿಸರ, ಸಿ.ಸಿ.ಪಾಟೀಲ್‍ಗೆ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ, ಕೋಟ ಶ್ರೀನಿವಾಸ ಪೂಜಾರಿಗೆ ಮುಜರಾಯಿ ಜೊತೆಗೆ ಹಿಂದುಳಿದ ವರ್ಗ, ಎಸ್.ಅಂಗಾರಗೆ ಮೀನುಗಾರಿಕೆ, ಬಂದರು, ಆರ್.ಶಂಕರ್‍ಗೆ ಪೌರಾಡಳಿತ, ರೇಷ್ಮೆ, ಪ್ರಭು ಚೌಹಾಣ್‍ಗೆ ಪಶುಸಂಗೋಪನೆ ಖಾತೆಯನ್ನು ನೀಡಲಾಗಿತ್ತು.