Tag: CM BS Yediyurappa

  • ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಸಿಎಂ

    ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ನೈಟ್ ಕರ್ಫ್ಯೂ ಜಾರಿ: ಸಿಎಂ

    – ವಿಜಯೇಂದ್ರ ಎಂದು ಬಾಯಿ ಬಡ್ಕೊಳ್ತಿದ್ದಾರೆ, ಸಹಿಸಲಾಗುತ್ತಿಲ್ಲ

    ರಾಯಚೂರು: ಮಸ್ಕಿ ಉಪಚುನಾವಣೆಯ ಭರ್ಜರಿ ಪ್ರಚಾರಗಳ ಬೆನ್ನಲ್ಲೇ ಜಿಲ್ಲೆಯಲ್ಲಿ ಕೊರೊನಾ ಶತಕ ಬಾರಿಸಿದ್ದು, ಜನರಲ್ಲಿ ಆತಂಕ ಮೂಡಿದೆ. ಕೊರೊನಾ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಕೆಲವೇ ದಿನಗಳಲ್ಲಿ ಜಿಲ್ಲೆಯಲ್ಲೂ ನೈಟ್ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಎಚ್ಚರಿಸಿದರು.

    ಈ ಕುರಿತು ಲಿಂಗಸುಗೂರಿನ ಮುದಗಲ್ ನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇಂದು 103 ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೆರಡು ದಿನಗಳಲ್ಲಿ ರಾಯಚೂರಿನಲ್ಲೂ ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲೂ ನೈಟ್ ಕರ್ಫ್ಯೂ ಹೇರಲು ಒಂದೆರಡು ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಪ್ರಧಾನಿಯವರು ಎರಡು ಬಾರಿ ಫೋನ್ ಮಾಡಿ ಕೊರೊನಾ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದರು.

    ಕೊರೊನಾ ಹೆಚ್ಚು ಇರುವಲ್ಲಿ ನೈಟ್ ಕರ್ಫ್ಯೂ ಹಾಕಿದ್ದೇವೆ. ನಿಯಂತ್ರಣಕ್ಕೆ ಬಾರದಿದ್ದರೆ ಪ್ರಕರಣ ಹೆಚ್ಚು ಇರುವ ಜಿಲ್ಲೆಗಳಲ್ಲೂ ನೈಟ್ ಕರ್ಫ್ಯೂ ಹಾಕುತ್ತೇವೆ. ನಾಳೆ, ನಾಡಿದ್ದು ಪರಿಸ್ಥಿತಿ ನೋಡಿ ರಾಯಚೂರಿನ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಲಾಕ್ ಡೌನ್ ಮಾಡುವ ಪ್ರಶ್ನೆ ಇಲ್ಲ, ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನ ಮಾಸ್ಕ್ ಹಾಕಬೇಕು, ಜಾಗೃತರಾಗಬೇಕು ಎಂದು ವಿನಂತಿಸುತ್ತೇನೆ ಎಂದರು.

    ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲ್ಲ. ಎಲ್ಲ ಕಡೆ ಬಿಜೆಪಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯನವರ ಪ್ರವಾಸ ಇದ್ದರೂ ಕುರುಬ ಸಮಾಜದ ಹೆಚ್ಚು ಜನ ನಮ್ಮ ಸಭೆಯಲ್ಲಿ ಭಾಗವಹಿಸಿದ್ದರು. 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಬಸವಕಲ್ಯಾಣ, ಬೆಳಗಾವಿಯಲ್ಲೂ ಗೆಲುವು ಸಾಧಿಸುತ್ತೇವೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ನವರಿಗೆ ನೀವು ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲುವುದಿಲ್ಲ ಅಂತ ಸವಾಲು ಹಾಕಿದ್ದೆ. ಮತ್ತೊಮ್ಮೆ ಹೇಳುತ್ತೇನೆ ಮೂರು ಕ್ಷೇತ್ರಗಳಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ದಯನೀಯವಾದ ಸೋಲನ್ನ ನೀವು ಅನುಭವಿಸುತ್ತೀರಿ ಎಂದು ಭರವಸೆ ವ್ಯಕ್ತಪಡಿಸಿದರು.

    ವಿಜಯೇಂದ್ರ ಬಗ್ಗೆ ಸಿದ್ದರಾಮಯ್ಯ ಕುಂಟು ನೆಪ ಹೇಳುತ್ತಾರೆ, ವಿಜಯೇಂದ್ರ, ಭ್ರಷ್ಟಾಚಾರ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಇದೇ ಮೊದಲಲ್ಲ ಹಿಂದಿನಿಂದಲೂ ಈ ರೀತಿ ಆರೋಪ ಮಾಡುತ್ತಿದ್ದಾರೆ. ಆದರೆ ವಿಜಯೇಂದ್ರ ಮನೆ ಮನೆಗೆ ಹೋಗಿ ಜನರ ಮನವೊಲಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸೋಲು ನಿಶ್ಚಿತ ಅನ್ನೋದು ಮನವರಿಕೆಯಾಗಿದೆ. ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಬಗ್ಗೆ ಕ್ಷೇತ್ರದಲ್ಲಿ ಒಲವಿದೆ, ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಾರಿಗೆ ಮುಷ್ಕರಕ್ಕೆ ಹೆದರುವ ಪ್ರಶ್ನೆಯಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ. ಯಾವುದೇ ಮಾತುಕತೆಗೆ ಮುಂದಾಗುವುದಿಲ್ಲ, ಕೂಡಲೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಈಗಾಗಲೇ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.

  • ವಿಜಯೇಂದ್ರರನ್ನ ದುಡ್ಡು ಹಂಚಲು ಚುನಾವಣೆಗೆ ಬಿಟ್ಟಿದ್ದಾರೆ: ಯತ್ನಾಳ್

    ವಿಜಯೇಂದ್ರರನ್ನ ದುಡ್ಡು ಹಂಚಲು ಚುನಾವಣೆಗೆ ಬಿಟ್ಟಿದ್ದಾರೆ: ಯತ್ನಾಳ್

    – ವಿಜಯೇಂದ್ರ ಬಳಿ ನಾಯಕತ್ವ ಗುಣ ಇಲ್ಲ

    ಹಾವೇರಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವ್ಯಾಮೋಹದಿಂದ ತುಂಬಿ ತುಳುಕುತ್ತಿದ್ದಾರೆ. ಹೀಗಾಗಿ ಮಗನನ್ನು ಉಪಚುನಾವಣೆಗೆ ಬಿಟ್ಟಿದ್ದಾರೆ. ವಿಜಯೇಂದ್ರ ಬಳಿ ದುಡ್ಡಿದೆ. ಅದನ್ನು ಹಂಚಲು ಅಲ್ಲಿ ಬಿಟ್ಟಿದ್ದಾರೆ. ವಿಜಯೇಂದ್ರ ಬಳಿ ನಾಯಕತ್ವ ಗುಣವಿಲ್ಲ ಎಂದು ಸ್ವಪಕ್ಷದ ವಿರುದ್ಧವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

    ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಬಳಿ ಸಾವಿರಾರು ಕೋಟಿ ರೂ. ಇದೆ. ಕರ್ನಾಟಕದ ಸಾವಿರಾರು ಕೋಟಿ ರೂ.ಗಳನ್ನು ಅವರು ಲೂಟಿ ಮಾಡಿದ್ದಾರೆ. ಸದ್ಯದಲ್ಲೇ ಫೆಡರಲ್ ಬ್ಯಾಂಕ್ ಹಗರಣ ಹೊರಗೆ ಬರುತ್ತದೆ. ವಿಜಯೇಂದ್ರ ವಿದೇಶದಲ್ಲಿ ಸಾವಿರಾರು ಕೋಟಿ ರೂ. ಇಟ್ಟಿದ್ದಾರೆ. ಯಡಿಯೂರಪ್ಪನವರು ಬಿಜೆಪಿ ಕಟ್ಟುವಾಗ ಹಣ ಹಂಚುವ ಪರಿಸ್ಥಿತಿ ಇರಲಿಲ್ಲ. ನಾವೆಲ್ಲ ಅತೀ ಕಡಿಮೆ ಹಣದಲ್ಲಿ ಎಂಎಲ್‍ಎ, ಎಂಪಿ ಆಗಿದ್ದೇವೆ. ಈಗ ಯಡಿಯೂರಪ್ಪನವರ ಕಾಲದಲ್ಲಿ ಹಣ ಹಂಚುವ ಪರಿಸ್ಥಿತಿ ಬಂದಿದೆ. ಈಗ ಎಂಪಿ ಆಗಬೇಕಾದರೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡುವ ಪರಿಸ್ಥಿತಿ ಬಂದಿದೆ ಎಂದರು.

    ಮೇ ಎರಡರ ಒಳಗೆ ಸಿಎಂ ಬದಲಾವಣೆ ಆಗುತ್ತೆ. ಯತ್ನಾಳ್ ಸಿಎಂ ಆಗುತ್ತಾರೋ ಅಥವಾ ಬೇರೆಯವರು ಆಗುತ್ತಾರೋ ಗೊತ್ತಿಲ್ಲ. ಅದರೆ ಬದಲಾವಣೆಯಂತೂ ಖಚಿತ. ಮೇ ಎರಡರ ಮೇಲಂತೂ ಹೋಗುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

    ಸಾರಿಗೆ ನೌಕರರ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷರು ಹದ್ದು ಮೀರಿ ಮಾತನಾಡುತ್ತಿದ್ದಾರೆ. ಅದು ಅವರಿಗೆ ಸಂಬಂಧವೇ ಇಲ್ಲ. ಹೊರಗಿನರವನ್ನು ತಂದು ಅಧ್ಯಕ್ಷರನ್ನ ಮಾಡಿಕೊಳ್ಳಬೇಡಿ. ಕೆಲವರು ದೇಶ ಹಾಳು ಮಾಡುವವರು ಸೇರಿಬಿಟ್ಟಿದ್ದಾರೆ. ಇದರಿಂದ ಜನರಿಗೆ ಎಷ್ಟು ತೊಂದರೆ ಆಗುತ್ತಿದೆ. ಸಾರಿಗೆ ನೌಕರರದ್ದು ಒಂದು ಸಂಸ್ಥೆ, ಎಲ್ಲರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎನ್ನುತ್ತಾರೆ. ಮುಂದೆ ಎಲ್ಲರಿಗೂ ಐಎಎಸ್, ಐಪಿಎಸ್ ರೀತಿ ಸಂಬಳ ನೀಡಿ ಎನ್ನುತ್ತಾರೆ. ಅದೆಲ್ಲ ಆಗುವುದಿಲ್ಲ, ನಾನೇ ಮುಖ್ಯಮಂತ್ರಿ ಆದರೂ ಆಗುವುದಿಲ್ಲ. ಸಾರಿಗೆ ಸಂಸ್ಥೆ ಸಾವಿರಾರು ಕೋಟಿ ರೂಪಾಯಿ ನಷ್ಟದಲ್ಲಿದೆ. ಹೀಗಿರುವಾಗ ಎಲ್ಲಿಂದ ಸಂಬಳ ಹೆಚ್ಚು ಮಾಡುತ್ತಾರೆ, ಬೋನಸ್ ಕೊಡ್ತಾರೆ ಎಂದು ಪ್ರಶ್ನಿಸಿದರು.

    ಕೋಡಿಹಳ್ಳಿ ಚಂದ್ರಶೇಖರ್ ಅಂಥವರು ಕಾರ್ಮಿಕರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ನಮ್ಮ ಸರ್ಕಾರದಲ್ಲಿ ಇರುವವರು ಇದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಮೂರು ತಿಂಗಳ ಹಿಂದೆಯೇ ಸರ್ಕಾರದವರು ಆರನೇ ವೇತನ ಆಯೋಗ, ಸರ್ಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಬೇಕಿತ್ತು. ಸಂಸ್ಥೆ ಲಾಭದಲ್ಲಿ ಬಂದರೆ ಮಾಡುತ್ತೇವೆ. ಈಗ ಸಣ್ಣಪುಟ್ಟ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಹೇಳಬೇಕಿತ್ತು. ಸಾರಿಗೆ ಸಂಸ್ಥೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಮೊದಲು ಅದನ್ನು ನಿಲ್ಲಿಸಬೇಕು. ವಿರೋಧ ಪಕ್ಷದವರ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಜೊತೆಗೆ ಹೊಂದಾಣಿಕೆ ಇದ್ದಾರೆ. ಬೆಳಗ್ಗೆ ವಿರೋಧ ಪಕ್ಷದವರ ರೀತಿ ವರ್ತಿಸುತ್ತಾರೆ. ರಾತ್ರಿ ವಿಜಯೇಂದ್ರ ಹೋಗಿ ಅವರಿಗೆ ಸಮಾಧಾನ ಮಾಡಿ, ಬಹುಮಾನ ಕೊಡುತ್ತಾರೆ. ಯಡಿಯೂರಪ್ಪ ಸರ್ಕಾರ ನಡೆಸುತ್ತಿಲ್ಲ. ವಿಜಯೇಂದ್ರ ಮತ್ತು ಅವರ ಕುಟುಂಬದವರು ಸರ್ಕಾರ ನಡೆಸುತ್ತಿದ್ದಾರೆ. ಯಡಿಯೂರಪ್ಪನವರು ಸಹಿ ಮಾಡುತ್ತಾರೋ ಇಲ್ಲವೋ ಸಂಶಯವಿದೆ. ವಿಜಯೇಂದ್ರರೇ ಯಡಿಯೂರಪ್ಪನವರ ಸಹಿ ಮಾಡುತ್ತಾರೆ ಎಂಬ ಸಂಶಯವಿದೆ. ಯಡಿಯೂರಪ್ಪನವರಿಗೆ ಸಹಿ ಮಾಡಲು ಕೈ ನಡುಗುತ್ತವೆ, ಸಾವಿರಾರು ಫೈಲ್ ಇವೆ. ವಿಜಯೇಂದ್ರ ಚಿನ್ನದ ಅಂಗಡಿಯಲ್ಲಿ ಲೆಕ್ಕ ಹಾಕಿದಂತೆ ಫೈಲ್ ಲೆಕ್ಕ ಹಾಕುತ್ತಾರೆ. ಅಪ್ಪ ಸಹಿ ಹಾಕುವುದನ್ನು ನೋಡಿ, ಅವರಂತೆಯೇ ಬಿ.ಎಸ್.ಯಡಿಯೂರಪ್ಪ ಎಂದು ವಿಜಯೇಂದ್ರ ಸಹಿ ಮಾಡುತ್ತಾರೆ ಎಂದು ಸಿಎಂ ಹಾಗೂ ಪುತ್ರನ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.

  • 8 ನಗರಗಳಲ್ಲಿ ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ: ಸಿಎಂ ಬಿಎಸ್‍ವೈ

    8 ನಗರಗಳಲ್ಲಿ ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ: ಸಿಎಂ ಬಿಎಸ್‍ವೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಭೆ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಏಪ್ರಿಲ್ 10 ರಿಂದ 20ರವರೆಗೆ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ.

    ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಿಎಸ್‍ವೈ, ಬೆಂಗಳೂರು, ಮೈಸೂರು, ಕಲಬುರಗಿ,  ಮಣಿಪಾಲ, ತುಮಕೂರು, ಬೀದರ್, ಉಡುಪಿ, ಮಂಗಳೂರು ನಗರಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂ ಬರಲಿದೆ. ಅಗತ್ಯ ಸೇವೆಗಳನ್ನ ಹೊರತುಪಡಿಸಿ ಎಲ್ಲ ಕಮರ್ಷಿಯಲ್ ಚಟುವಟಿಕೆಗಳ ಮೇಲೆ ನಿರ್ಬಂಧ ಹಾಕಲಾಗ್ತಿದೆ. ಲಾಕ್‍ಡೌನ್ ಬೇಡ ಅಂದ್ರೆ ಜನರು ಕೊರೊನಾ ನಿಯಮಗಳನ್ನ ಪಾಲಿಸಬೇಕು. ನಾಳೆಯಿಂದ ಮಾಸ್ಕ್ ಧರಿಸದಿದ್ದರೆ ದಂಡಾಸ್ತ್ರ ಪ್ರಯೋಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ಕರ್ಫ್ಯೂ ಅಭಾದಿತ ಆಗಿರುತ್ತೆ. ವಾಹನ ಸಂಚಾರ ಇರಲಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ನಿಯಮಗಳನ್ನ ತರಲಾಗುತ್ತದೆ. ಕೊರೊನಾ ಹೆಚ್ಚಳವಾಗಿರುವ ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದೆ ಎಂದರು.

    ಎಂಟಯ ನಗರಗಳಲ್ಲಿ 10 ದಿನ ಪ್ರಾಯೋಗಿಕವಾಗಿ ಕೊರೊನಾ ಕರ್ಫ್ಯೂವನ್ನ ಸರ್ಕಾರ ಘೋಷಣೆ ಮಾಡಿದೆ. ಕರ್ಫ್ಯೂ ಅವಧಿ ವೇಳೆ ಹೊಟೇಲ್, ಬಾರ್, ಪಬ್, ನೈಟ್ ಪಾರ್ಟಿ, ರೆಸ್ಟೋರೆಂಟ್, ಸಿನಿಮಾಗಳು ಬಂದ್ ಆಗಲಿವೆ ಎನ್ನಲಾಗಿದೆ.

  • ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ವಿಜಯೇಂದ್ರ ಆರ್‌ಟಿಜಿಎಸ್‌ ಮೂಲಕವೇ ತಗೋಳ್ತಾರೆ: ಸಿದ್ದರಾಮಯ್ಯ

    ಯಡಿಯೂರಪ್ಪ ಚೆಕ್ ಮೂಲಕ ಲಂಚ ಪಡೆದರೆ, ವಿಜಯೇಂದ್ರ ಆರ್‌ಟಿಜಿಎಸ್‌ ಮೂಲಕವೇ ತಗೋಳ್ತಾರೆ: ಸಿದ್ದರಾಮಯ್ಯ

    ಕೊಪ್ಪಳ: ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಲೂಟಿ ಹೊಡೆದ ದುಡ್ಡು ತೆಗೆದುಕೊಂಡು ಬಂದು ಕುಳಿತಿದ್ದಾನೆ. ವಿಜಯೇಂದ್ರ ತಂದಿರುವ ದುಡ್ಡು ಯಡಿಯೂರಪ್ಪನವರದ್ದಲ್ಲ, ಲೂಟಿ ಹೊಡೆದ ದುಡ್ಡು ಎಂದು ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹರಿಹಾಯ್ದರು.

    ಮಸ್ಕಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಜಿಲ್ಲೆಯ ತುರ್ವಿಹಾಳ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡರೆ, ಆತನ ಮಗ ವಿಜಯೇಂದ್ರ ಆರ್‌ಟಿಜಿಎಸ್‌ ಮೂಲಕ ಲಂಚ ತೆಗೆದುಕೊಳ್ಳುತ್ತಾನೆ. ಆತ ಏನೂ ಅಲ್ಲ, ಆದರೂ ದುಡ್ಡು ತೆಗೆದುಕೊಂಡು ಬಂದಿದ್ದಾನೆ. ಅದು ಲೂಟಿ ಹೊಡೆದ ದುಡ್ಡು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

    ಈ ಉಪಚುನಾವಣೆ ಅಗತ್ಯವಿರಲಿಲ್ಲ, ಐದು ವರ್ಷಗಳ ಕಾಲ ಪ್ರತಿನಿಧಿಯಾಗಿರಲು ಪ್ರತಾಪಗೌಡರನ್ನು ಗೆಲ್ಲಿಸಿದ್ದರು. ಕಾಂಗ್ರೆಸ್‍ನಲ್ಲಿ ಶಾಸಕರಾಗಿರೋದು ಬಿಟ್ಟು, ತಮ್ಮನ್ನು ತಾವು ಮಾರಿಕೊಂಡು ಬಿಜೆಪಿಗೆ ಹೋಗಿದ್ದಾರೆ. ಇದು ನಿಮಗೆ ಒಪ್ಪಿಗೇನಾ? 30 ಕೋಟಿ ರೂ.ಗಾಗಿ ಪ್ರತಾಪಗೌಡ ಮಾರಾಟವಾಗಿದ್ದಾರೆ. ಮಾನ, ಮರ್ಯಾದೆ ಏನಾದರೂ ಇದೇನಾ? ನಿಮ್ಮ ಸ್ವಾಭಿಮಾನವನ್ನು ಮಾರಾಟ ಮಾಡಿದ್ದಾರೆ. ಸಂತೆಯಲ್ಲಿ ಪ್ರಾಣಿಗಳು ಮಾರಾಟ ಆಗುತ್ತವೆ, ಮನುಷ್ಯರೇ ವ್ಯಾಪಾರ ಆಗುತ್ತಾರೆ. ಒಬ್ಬ ಎಂಎಲ್‍ಎ 30 ಕೋಟಿ ತೆಗೆದುಕೊಂಡು ವ್ಯಾಪಾರ ಆಗುತ್ತಾರೆ ಎಂದರೆ ಏನು ಎಂದು ಪ್ರಶ್ನಿಸಿದರು.

    2018ರಲ್ಲಿ ಪ್ರತಾಪಗೌಡರನ್ನು ಕಾಂಗ್ರೆಸ್‍ಗೆ ಸೇರಿಸಿಕೊಳ್ಳಲು ಬೇಡ ಎಂದಿದ್ದೆ, ಪ್ರತಾಪಗೌಡ ಕಳ್ಳನ ತರಹ ಕಂಡಿದ್ದ. ಮಸ್ಕಿ ಕ್ಷೇತ್ರಕ್ಕೆ 5 ಸಾವಿರ ಕೋಟಿ ರೂ. ಕೊಟ್ಟಿದ್ದೇನೆ. ಇಡೀ ಕ್ಷೇತ್ರದ ಜನ ಬಿಜೆಪಿಗೆ ಹೋಗು ಎಂದಿದ್ದರೆ ಆ ಮಾತು ಬೇರೆ, ಪ್ರತಾಪಗೌಡ ಹೇಳದೆ, ಕೇಳದೆ ಹೋದಿಯಲಪ್ಪ. ನನ್ನನ್ನು, ಕ್ಷೇತ್ರದ ಜನರನ್ನು ಕೇಳಲಿಲ್ಲ. ನಿಮ್ಮೆಲ್ಲರನ್ನೂ ಮಾರಾಟ ಮಾಡಿ, ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಹರಿಹಾಯ್ದರು.

    ಎರಡು ವರ್ಷದಿಂದ ಯಡಿಯೂರಪ್ಪ ಸರ್ಕಾರ ಏನಾದರೂ ಮಾಡಿದೇನಾ ಎಂದು ಪ್ರಶ್ನಿಸಿದ ಸಿದ್ದು, ಮೋದಿ ಮಹಾನ್ ಸುಳ್ಳುಗಾರ, ಅಂತಹ ಸುಳ್ಳು ಹೇಳುವವರನ್ನು ನಾನು ನೋಡಿಯೇ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಕಾರ್ಯರ್ತರು ನೀಡಿದ 25 ಸಾವಿರ ರೂ.ಗಳನ್ನು ಸಿದ್ದರಾಮಯ್ಯನವರು ಬಸನಗೌಡಗೆ ನೀಡಿದರು. ವಿಜಯೋತ್ಸವ ಮಾಡಲು ಬರುತ್ತೇನೆ ಎಂದು ಹೇಳಿದರು.

  • ಈಶ್ವರಪ್ಪನವರನ್ನು ರಾಜಕೀಯಕ್ಕೆ ತಂದಿದ್ದೇ ಯಡಿಯೂರಪ್ಪ- ರೇಣುಕಾಚಾರ್ಯ ಕಿಡಿ

    ಈಶ್ವರಪ್ಪನವರನ್ನು ರಾಜಕೀಯಕ್ಕೆ ತಂದಿದ್ದೇ ಯಡಿಯೂರಪ್ಪ- ರೇಣುಕಾಚಾರ್ಯ ಕಿಡಿ

    – ಯತ್ನಾಳ್‍ರನ್ನು ಪಕ್ಷಕ್ಕೆ ವಾಪಸ್ ಕರೆ ತಂದಿದ್ದಕ್ಕೆ ಈ ಗಿಫ್ಟ್?
    – ಶೀಘ್ರವೇ ಪಕ್ಷದಿಂದ ಯತ್ನಾಳ್ ಉಚ್ಛಾಟನೆ

    ದಾವಣಗೆರೆ: ಸಚಿವ ಈಶ್ವರಪ್ಪನವರನ್ನು ರಾಜಕೀಯಕ್ಕೆ ಕರೆ ತಂದಿದ್ದು ಯಡಿಯೂರಪ್ಪ ಎಂದು ಶಾಸಕ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಈಶ್ವರಪ್ಪ ಯುವಕರಾಗಿದ್ದಾಗ ಅವರನ್ನು ಯುವ ಮೋರ್ಚಾಗೆ ಕರೆತಂದಿದ್ದು ಯಡಿಯೂರಪ್ಪ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷಕಟ್ಟಿದ್ದು ಬಿಎಸ್‍ವೈ-ಅನಂತಕುಮಾರ್ ಜೋಡಿ. ಇಷ್ಟಿದ್ದರೂ ಯಡಿಯೂರಪ್ಪನವರ ವಿರುದ್ಧ ಪತ್ರ ಬರೆದಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಪಕ್ಷದ ಆರಂಭ ಹಂತದಿಂದ ಯಡಿಯೂರಪ್ಪ, ಅನಂತಕುಮಾರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಈಶ್ವರಪ್ಪನವರು ಹಿರಿಯರು, ಅನುಭವಿಗಳು. ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳುವ ಸಮಸ್ಯೆಯನ್ನು ಬೀದಿ ರಂಪ ಮಾಡಿದ್ದು ಸರಿಯಲ್ಲ. ರಾಜ್ಯಪಾಲರ ಬಳಿ ಒಯ್ದಿದ್ದು ತಪ್ಪು, ಅನಗತ್ಯವಾಗಿ ಕಾಂಗ್ರೆಸ್‍ನವರ ಕೈಗೆ ಅಸ್ತ್ರ ಕೊಟ್ಟಂತಾಗಿದೆ. ಉಪಚುನಾವಣೆ ಹೊತ್ತಲ್ಲಿ ಇದು ಸರಿಯಲ್ಲ, ವಿಶೇಷ ಅನುದಾನ ನೀಡುವ ಪರಮಾಧಿಕಾರ ಸಿಎಂಗೆ ಇದೆ. ಈಶ್ವರಪ್ಪ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

    ಪಕ್ಷದ ಜಗಳ ಬೀದಿಗೆ ಬರಬಾರದಿತ್ತು, ಇದರಿಂದ ಕಾರ್ಯಕರ್ತರಿಗೆ ನೋವು, ಮುಜುಗರವಾಗಿದೆ. ಅನುದಾನ ಇಲ್ಲದಾಗ ಸಿಎಂ ಬಳಿ ಹೋಗಿ ಎಂದಿದ್ದರು, ಅದರಂತೆ ಯಡಿಯೂರಪ್ಪ ಆರ್ಥಿಕ ಇಲಾಖೆಯಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿಲ್ಲ ಎಂದರು.

    ವಾಪಸ್ ಕರೆ ತಂದಿದ್ದಕ್ಕೆ ಈ ಗಿಫ್ಟ್?
    ಅವರನ್ನು ಪಕ್ಷಕ್ಕೆ ವಾಪಸ್ ಕರೆತಂದ ತಪ್ಪಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂಥ ಗಿಫ್ಟ್ ಕೊಡುತ್ತಿದ್ದಾರೆ. ಪದೇ ಪದೇ ಸಿಎಂ ಸ್ಥಾನಕ್ಕೆ ಸವಾಲು ಹಾಕುತ್ತಾರೆ. ಪ್ರತಿ ತಿಂಗಳು ಒಂದೊಂದು ಡೇಟ್ ಕೊಡ್ತಾರೆ. ದಿನ ನಿತ್ಯ ಬಟ್ಟೆ ಹಾವು ಬಿಡುತ್ತಾರೆ ಅಷ್ಟೇ, ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ ಎನ್ನುತ್ತಾರೆ. ಆದರೆ ಎಲ್ಲವೂ ಠುಸ್ ಆಗಲಿದೆ, ಯತ್ನಾಳ್ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಜನವರಿ, ಫೆಬ್ರವರಿ, ಮಾರ್ಚ್, ಮೇ ಎಲ್ಲವೂ ಮುಗಿದು ಹೋದವು ಎಂದು ಲೇವಡಿ ಮಾಡಿದರು.

    ಯತ್ನಾಳ್ ಉಚ್ಛಾಟನೆಗೆ ಆಗ್ರಹಿಸಿ 65 ಶಾಸಕರು ಸಹಿ ಹಾಕಿದ್ದಾರೆ. ಶೀಘ್ರದಲ್ಲೇ ಯತ್ನಾಳ್ ಉಚ್ಛಾಟನೆ ಮಾಡುವಂತೆ ವರಿಷ್ಠರಿಗೆ ದೂರು ನೀಡುತ್ತೇವೆ. ಶಾಸಕ ಬಸನಗೌಡ ಯತ್ನಾಳ್ ದುರಂತ, ದುರಹಂಕಾರಿ ನಾಯಕ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

    ಡಿಕೆಶಿಗೆ ಸವಾಲು
    ಮಾಡಬಾರದ್ದನ್ನು ಮಾಡಿ ಜೈಲಿಗೆ ಹೋಗಿದ್ದೀರಿ, ಭ್ರಷ್ಟಾಚಾರ ಮಾಡಿದ್ದೀರಿ, ಎಷ್ಟು ಕೋಟಿ ಹಗರಣ ಮಾಡಿದಿರಿ. ಇನ್ನೂ ನಿಮ್ಮ ಮೇಲೆ ತನಿಖೆ ನಡೆಸಲಾಗುತ್ತಿದೆ. ಯಡಿಯೂರಪ್ಪನವರ ಬಗ್ಗೆ ಯಾಕೆ ಮಾತನಾಡುತ್ತೀರಿ? ರಾಜೀನಾಮೆ ನೀಡಿ ಎಂದು ಹೇಳ್ತಿರಾ? ಎಲ್ಲಿ ಭ್ರಷ್ಟಾಚಾರ ವಾಗಿದೆ ಹೇಳಿ. ಎಲ್ಲಾವೂ ಪಾರದರ್ಶಕ ವಾಗಿದೆ, ನಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿದ್ದಾರೆ. ಇಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. 2023ರ ವರೆಗೂ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದರು.

  • ಜಾರಕಿಹೊಳಿಗೆ ಎಲ್ಲೆಲ್ಲಿ, ಏನೇನು ನೋವಿದೆಯೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್

    ಜಾರಕಿಹೊಳಿಗೆ ಎಲ್ಲೆಲ್ಲಿ, ಏನೇನು ನೋವಿದೆಯೋ ಗೊತ್ತಿಲ್ಲ: ಡಿ.ಕೆ.ಶಿವಕುಮಾರ್

    ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಏನೇನು, ಎಲ್ಲೆಲ್ಲಿ ನೋವಿದೆಯೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

    ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅನಾರೋಗ್ಯದ ನೆಪ ಹೇಳಿ ವಿಚಾರಣೆಗೆ ಗೈರಾದ ಬಗ್ಗೆ ಹೇಳಿದರು. ಪಾಪ ಅವರ ಕಷ್ಟ, ಸುಖ, ಏನೇನು, ಎಲ್ಲೆಲ್ಲಿ ನೋವಿದೆಯೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

    ಒಳ್ಳೆಯ ಪೊಲೀಸ್ ಅಧಿಕಾರಿಗಳಿದ್ದಾರೆ ಯಾಕೆ ಹೀಗೆ ಮಾಡುತ್ತಿದ್ದಾರೆ ತಿಳಿತಿಲ್ಲ. ಈ ಬಗ್ಗೆ ಈಗ ಮಾತನಾಡುವುದು ಬೇಡ. ಯಾವ ದಿಕ್ಕಿನಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಸಮಯ ಬಂದಾಗ ನಾನು ಮಾತನಾಡುತ್ತೇನೆ ಎಂದು ಹೇಳಿದರು.

    ಸಚಿವ ಈಶ್ವರಪ್ಪ ಸಿಎಂ ವಿರುದ್ಧ ಹೈ ಕಮಾಂಡ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಅಧಿಕಾರಿಗಳು ಕೆಲಸ ಮಾಡಲು ಆಗುತ್ತಿಲ್ಲ, 3,6 ತಿಂಗಳಿಗೆ ಅಧಿಕಾರಿಗಳು ಬದಲಾಗುತ್ತಿದ್ದಾರೆ. ಹೀಗಿರುವಾಗ ಆಡಳಿತ ಸುಗಮವಾಗಿ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

  • ಥಿಯೇಟರ್‌ಗಳಲ್ಲಿ ಶೇ.100 ಭರ್ತಿಗೆ ಅವಕಾಶ ನೀಡಿ- ಸಿಎಂಗೆ ಪುನೀತ್ ಮನವಿ

    ಥಿಯೇಟರ್‌ಗಳಲ್ಲಿ ಶೇ.100 ಭರ್ತಿಗೆ ಅವಕಾಶ ನೀಡಿ- ಸಿಎಂಗೆ ಪುನೀತ್ ಮನವಿ

    ಬೆಂಗಳೂರು: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ 8 ಜಿಲ್ಲೆಗಳಲ್ಲಿ ಸರ್ಕಾರ ಶುಕ್ರವಾರದಿಂದ ಕಠಿಣ ನಿಯಮ ಜಾರಿಗೊಳಿಸಿದ್ದು, ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದಕ್ಕೆ ಸ್ಯಾಂಡಲ್‍ವುಡ್ ಗಣ್ಯರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ ನಟ ಪುನೀತ್ ರಾಜ್‍ಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶೇ.100ರಷ್ಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

    ಸಿಎಂ ನಿವಾಸಕ್ಕೆ ತೆರಳಿ ನಟ ಪುನೀತ್ ರಾಜ್‍ಕುಮಾರ್ ಮನವಿ ಮಾಡಿದ್ದು, ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸುತ್ತೇವೆ. ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ತುಂಬಾ ನಷ್ಟವಾಗಲಿದೆ ಎಂದು ಮನವಿ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಗೆ ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಥ್ ನೀಡಿದ್ದಾರೆ.

    ತಜ್ಞರ ಜೊತೆ ಚರ್ಚೆ ಮಾಡುತ್ತೇವೆ. ತಜ್ಞರ ಅಭಿಪ್ರಾಯದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಚಿತ್ರ ತಂಡಕ್ಕೆ ಸಿಎಂ ಭರವಸೆ ನೀಡಿದ್ದಾರೆ.

    ಫಿಲ್ಮ್ ಚೇಂಬರ್ ನ ಅಧ್ಯಕ್ಷ ಜೈರಾಜ್ ಸಹ ಈ ಕುರಿತು ಸಿಎಂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಎಲ್ಲ ನಿಯಮ ಪಾಲನೆ ಮಾಡುತ್ತೇವೆ. ಇದ್ದಕ್ಕಿದ್ದಂತೆ ಶೇ.50 ಸೀಟ್ ಭರ್ತಿಗೆ ಕಡಿತ ಮಾಡಿದರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

    ಇಂದು ಬೆಳಗ್ಗೆಯಿಂದಲೂ ಈ ಬಗ್ಗೆ ಹಲವು ನಟರು ಆಕ್ರೋಶ ವ್ಯಕ್ತಪಡಿಸಿದ್ದು, ಸುದೀಪ್, ಯಶ್, ದುನಿಯಾ ವಿಜಯ್ ಸೇರಿದಂತೆ ಹಲವು ನಟರು ಶೇ.100ರಷ್ಟು ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ಚರ್ಚೆ ನಡೆಯುತ್ತಿದೆ. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ವಿವಿಧೆಡೆ ಪ್ರತಿಭಟನೆ ಮಾಡಿದ್ದಾರೆ.

  • ಈಶ್ವರಪ್ಪ ದೂರಿನಿಂದ ಏನೂ ಪ್ರಯೋಜನವಿಲ್ಲ: ಸಿಸಿ ಪಾಟೀಲ್

    ಈಶ್ವರಪ್ಪ ದೂರಿನಿಂದ ಏನೂ ಪ್ರಯೋಜನವಿಲ್ಲ: ಸಿಸಿ ಪಾಟೀಲ್

    – ಉಪಚುನಾವಣೆ ವೇಳೆ ಪಕ್ಷಕ್ಕೆ ಮುಜುಗರವಾಗಿದೆ

    ಗದಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಹೈ ಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಬಿಎಸ್‍ವೈ ಬಣದ ಸಚಿವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಶ್ವರಪ್ಪನವರ ನಡೆ ಖಂಡಿಸಿ ಇಂದು ಸಚಿವ ಸಿಸಿ ಪಾಟೀಲ್ ಕಿಡಿಕಾರಿದ್ದಾರೆ.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರಪ್ಪನವರು ಹೈ ಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡಬಾರದಿತ್ತು. ಇದರಿಂದ ಏನೂ ಪ್ರಯೋಜನವಿಲ್ಲ. ವಿನಾಕಾರಣ ಚರ್ಚೆಗೆ ಅವಕಾಶ ಮಾಡಿಕೊಟ್ಟಂತಿದೆ. ಇಬ್ಬರೂ ಒಂದೇ ಜಿಲ್ಲೆಯವರು, ಭಿನ್ನಾಭಿಪ್ರಾಯಗಳಿದ್ದರೆ ಇಬ್ಬರೂ ಕೂತು ಬಗೆಹರಿಸಿಕೊಳ್ಳಬೇಕಿತ್ತು. ಇದರಿಂದಾಗಿ ಉಪ ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಮುಜುಗರ ಆಗುತ್ತದೆ, ಇದನ್ನು ಖಂಡಿಸುತ್ತೇನೆ ಎಂದರು.

    ಈಶ್ವರಪ್ಪನವರ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಕ್ಕೆ ಸಿಸಿ ಪಾಟೀಲ್ ತಿರುಗೇಟು ನೀಡಿ, ಕಾಂಗ್ರೆಸ್ ಟೀಕೆ ಮಾಡಿದರೆ ಈಶ್ವರಪ್ಪನಿಗೆ ಮೆದುಳಿಲ್ಲ ಎನ್ನುವುದು, ನಮ್ಮ ಪಕ್ಷದ ಬಗ್ಗೆ ಮಾತನಾಡಿದಾಗ ಶಹಬ್ಬಾಷ್ ಹೇಳುವುದು. ಸಿದ್ದರಾಮಯ್ಯನವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನೀವೇ ತೂಕಮಾಡಿ ಎಂದರು.

    ಈ ವೇಳೆ ಡಿಕೆಶಿ ವಿರುದ್ಧ ಹರಿಹಾಯ್ದ ಅವರು, ಡಿಕೆಶಿ ಮೊದಲು ಸಿಡಿ ಲೇಡಿ ಹಗರಣದ ಬಗ್ಗೆ ಸಮರ್ಪಕವಾದ ಉತ್ತರ ಕೊಡಲಿ. ಸಿಡಿ ಹಗರಣದಲ್ಲಿ ಅವರ ಪಾತ್ರ ಏನು ಎಂಬುದರ ಬಗ್ಗೆ ಉತ್ತರಿಸಲಿ. ಮೊದಲು ಅವರ ಪಕ್ಷ ಭದ್ರ ಮಾಡಿಕೊಳ್ಳಲಿ. ಯಡಿಯೂರಪ್ಪನವರ ಸರ್ಕಾರ ಅತ್ಯಂತ ಸುಭದ್ರ ಇದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಗಮೇಶ ದುಂದೂರ ಇದ್ದರು.

  • ಸಿಎಂ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ಈಶ್ವರಪ್ಪ ದೂರು

    ಸಿಎಂ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ಈಶ್ವರಪ್ಪ ದೂರು

    – ಪ್ರಧಾನಿ ಮೋದಿ, ಅಮಿತ್ ಶಾ, ರಾಜ್ಯಪಾಲರಿಗೆ ಪತ್ರ

    ಬೆಂಗಳೂರು: ಬಿಜೆಪಿಯಲ್ಲಿ ನಿಧಾನವಾಗಿ ಸಿಎಂ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆಯೇ ಎಂಬ ಅನುಮಾನ ಇದೀಗ ಶುರುವಾಗಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಹೇಳಿಕೆ ನೀಡುತ್ತಿರುವಾಗಲೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿ ಸಿಎಂ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ದೂರು ನೀಡಿದ್ದಾರೆ. ಈ ಮೂಲಕ ಬಿಎಸ್‍ವೈ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯ ಪಾಲರಿಗೆ ಮಾತ್ರವಲ್ಲದೆ ಹೈಕಮಾಂಡ್‍ಗೂ ಪತ್ರ ಬರೆದಿದ್ದು, ಗಮನಕ್ಕೆ ತಾರದೇ ನನ್ನ ಇಲಾಖೆಯಲ್ಲಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡಿದ್ದಾರೆ ಎಂದು ಸಿಎಂ ವಿರುದ್ಧ ಲಿಖಿತ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಎರಡು ಪುಟಗಳ ಪತ್ರ ಬರೆದು ಅಸಮಧಾನ ತೋಡಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    ಗಮನಕ್ಕೆ ತರದೇ ನನ್ನ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದ್ದು, ಇಲಾಖೆಯ ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕೆಲ ಪ್ರಮುಖ ನಿರ್ಧಾರಗಳಲ್ಲಿ ಹಿರಿಯ ಸಚಿವರಾದ ನನ್ನನ್ನು ಪರಿಗಣಿಸಿಲ್ಲ. ಸಚಿವರ ಅಧಿಕಾರ ಮೊಟಕುಗೊಳಿಸಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೂಡಲೇ ಮಧ್ಯ ಪ್ರವೇಶ ಮಾಡಿ ಇದಕ್ಕೆ ಬ್ರೇಕ್ ಹಾಕಬೇಕು.

    ಬೆಂಗಳೂರು ನಗರ ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಸಿಎಂ ಯಡಿಯೂರಪ್ಪರಿಗೆ ಬೀಗರೂ ಹೌದು. ಹಣಕಾಸು ಇಲಾಖೆಯ ಪತ್ರದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಪ್ರತಿನಿಧಿಸುವ ದಾಸರಹಳ್ಳಿ ಜಿಲ್ಲಾ ಪಂಚಾಯತ್‍ಗೆ 65 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಸಚಿವರ ಗಮನಕ್ಕೆ ತರುವುದು ಎಂದು ಮರಿಸ್ವಾಮಿ ಸರ್ಕಾರದ ಆದೇಶ ಮಾಡಿಸಿಕೊಂಡಿದ್ದಾರೆ. ಮರಿಸ್ವಾಮಿ ತಮ್ಮ ಸಂಬಂಧಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಪ್ರಮಾಣದ ಹಣ ಅನುದಾನದ ರೂಪದಲ್ಲಿ ಬಿಡುಗಡೆಯಾಗಿದೆ.

    ಜಿ.ಪಂ.ಗಳಿಗೆ 2019-20ರಲ್ಲಿ 1 ಅಥವಾ 2 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಇದೀಗ ರಾಜ್ಯದ ಯಾವುದೇ ಜಿಲ್ಲಾ ಪಂಚಾಯತ್‍ಗೂ ಬಿಡುಗಡೆಯಾಗದ ದೊಡ್ಡ ಪ್ರಮಾಣದ ಅನುದಾನದ ಕೇವಲ ಇದೊಂದೇ ಜಿಲ್ಲಾ ಪಂಚಾಯತ್‍ಗೆ ಬಿಡುಗಡೆಯಾಗಿದೆ. ಹೀಗೆ ಸಾಲು ಸಾಲು ವಿಚಾರಗಳಲ್ಲಿ ಸಿಎಂ ಯಡಿಯೂರಪ್ಪ ನಮ್ಮ ಇಲಾಖೆಯ ಕೆಲಸ, ಕಾರ್ಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ.

    2020-21ರ ವರ್ಷದಲ್ಲಿ ಘೋಷಿತ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆಗಳಿಗೆ ಅನುದಾನ ಕೊಟ್ಟಿಲ್ಲ. ಕಳೆದೊಂದು ವರ್ಷದಲ್ಲಿ ವಿಶೇಷ ಅನುದಾನದ ಹೆಸರಲ್ಲಿ 1,439 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಹಣ ಬಜೆಟ್ ನಲ್ಲಿ ಘೋಷಣೆ ಮಾಡಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಆರ್ಥಿಕ ಇಲಾಖೆಯು 81 ಶಾಸಕರ ಕ್ಷೇತ್ರಗಳಿಗೆ 775 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಹಣವೂ ಬಜೆಟ್‍ನಲ್ಲಿ ಘೋಷಣೆ ಮಾಡಿರಲಿಲ್ಲ.

    ಬಜೆಟ್ ನಲ್ಲಿ ಘೋಷಣೆ ಮಾಡದೇ ಅನುದಾನ ನೀಡಲಾಗಿದ್ದು, ಇದರಿಂದ ಬಜೆಟ್ ಯೋಜನೆಗಳಿಗೆ ತೊಡಕಾಗುತ್ತದೆ. ಶಾಸಕರ ಕ್ಷೇತ್ರಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಅನುದಾನ ಕೊಡಬೇಕಿತ್ತು. ಆದರೆ ಆರ್ಥಿಕ ಇಲಾಖೆ ನೇರವಾಗಿ ಅನುದಾನ ಕೊಟ್ಟಿರುವುದು ಸರಿಯಲ್ಲ. ಕೇವಲ 5 ಲಕ್ಷಕ್ಕೂ ಕಡಿಮೆ ಮೊತ್ತದ ರಸ್ತೆ ಕಾಮಗಾರಿಗಳಿಗೂ ಮನವಿ ಸ್ವೀಕರಿಸಲಾಗಿದೆ. ಇಷ್ಟು ಕಮ್ಮಿ ಮೊತ್ತದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣ ಸಾಧ್ಯವೇ? ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟು 3995.56 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಪೈಕಿ 1600.42 ಕೋಟಿ ರೂ. ಮಾತ್ರ ಬಿಡುಗಡೆ ಆಗಿದೆ. ಉಳಿದ ಹಣ ವಿಶೇಷ ಅನುದಾನದ ರೂಪದಲ್ಲಿ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾಗಿದೆ. ನನ್ನ ಇಲಾಖೆಯಲ್ಲಿ ಆರ್ಥಿಕ ಇಲಾಖೆ ಹಸ್ತಕ್ಷೇಪದಿಂದ ನನಗೆ ಮುಜುಗರವಾಗಿದೆ. ಈ ರೀತಿಯ ಆಡಳಿತ ವ್ಯವಸ್ಥೆ ಸರಿಯಾದುದಲ್ಲ. ಈ ಥರದ ಆಡಳಿತ ಶೈಲಿ ಬದಲಾಯಿಸಿಕೊಡಿ.

  • ಆಪರೇಷನ್ ಕಮಲ ಆಡಿಯೋ ಕೇಸ್‍ಗೆ ರೋಚಕ ತಿರುವು – ಬಿಎಸ್‍ವೈಗೆ ಸಂಕಷ್ಟ

    ಆಪರೇಷನ್ ಕಮಲ ಆಡಿಯೋ ಕೇಸ್‍ಗೆ ರೋಚಕ ತಿರುವು – ಬಿಎಸ್‍ವೈಗೆ ಸಂಕಷ್ಟ

    – ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಎಂ ಅರ್ಜಿ ವಜಾ

    ಯಾದಗಿರಿ: ರಾಯಚೂರು ಜಿಲ್ಲೆಯ ದೇವದುರ್ಗ ಐಬಿಯಲ್ಲಿ ನಡೆದಿದ್ದ ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಇದೀಗ ರೋಚಕ ತಿರುವು ಸಿಕ್ಕಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೆ ಆಡಿಯೋ ಕೇಸ್ ಸಂಕಷ್ಟ ಎದುರಾಗಿದ್ದು, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಎಂ ಅರ್ಜಿ ವಜಾ ಆಗಿದೆ.

    ಜನಪ್ರತಿನಿಧಿಗಳ ವ್ಯಾಜ್ಯ ನ್ಯಾಯಾಲಯ ಜೆಡಿಎಸ್ ಯುವಕ ಘಟಕದ ರಾಜ್ಯ ಉಪಾಧ್ಯಕ್ಷ ಮತ್ತು ಗುರುಮಿಠಕಲ್ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಕಂದಕೂರ ಅವರ ಅರ್ಜಿಯನ್ನು ಎತ್ತಿ ಹಿಡಿದಿದ್ದು, ಸಿಎಂ ಅರ್ಜಿ ವಜಾ ಆಗಿದೆ. ಆಪರೇಷನ್ ಕಮಲ ಆಡಿಯೋ ಪ್ರಕರಣದ ತನಿಖೆಗೆ ಕಲಬುರಗಿ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

    ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ಅವರು ಈ ಪ್ರಕರಣವನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವ್ಯಾಜ್ಯ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ವಜಾ ಮಾಡಿ, ಮರು ತನಿಖೆ ನಡೆಸಲು ಆದೇಶ ನೀಡಿದೆ. ಇದರಿಂದಾಗಿ ಸಿಎಂ ಬಿಎಸೈಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.