Tag: CM BS Yediyurappa

  • ಮತ್ತೆ 14 ದಿನ ಲಾಕ್‍ಡೌನ್ ಘೋಷಣೆ, ಬೆಳಗ್ಗೆ 10 ಗಂಟೆ ಬಳಿಕ ಓಡಾಡಿದ್ರೆ ಶಿಸ್ತು ಕ್ರಮ: ಸಿಎಂ

    ಮತ್ತೆ 14 ದಿನ ಲಾಕ್‍ಡೌನ್ ಘೋಷಣೆ, ಬೆಳಗ್ಗೆ 10 ಗಂಟೆ ಬಳಿಕ ಓಡಾಡಿದ್ರೆ ಶಿಸ್ತು ಕ್ರಮ: ಸಿಎಂ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಷ್ಟೇನು ಇಳಿಮುಖವಾಗದ ಹಿನ್ನೆಲೆ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

    ಕೋವಿಡ್ ಪರಿಸ್ಥಿತಿ ಮತ್ತು ಲಾಕ್‍ಡೌನ್ ವಿಸ್ತರಣೆ ಕುರಿತು ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಆರ್.ಅಶೋಕ್, ಶಾಸಕ ಎಸ್.ಆರ್.ವಿಶ್ವನಾಥ್, ಸಿಎಸ್ ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಆರೋಗ್ಯ ಇಲಾಖೆ ಎಸಿಎಸ್ ಜಾವೇದ್ ಅಖ್ತರ್ ಭಾಗಿಯಾಗಿದ್ದರು.

    ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಲಾಕ್‍ಡೌನ್‍ನಿಂದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಜನರ ಹಿತದೃಷ್ಟಿಯಿಂದ ಮತ್ತೆ ಲಾಕ್‍ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ, ಜನ ಸಹಕರಿಸಬೇಕು. ಕೊರೊನಾ ನಿಯಂತ್ರಣಕ್ಕೆ ಮತ್ತೆ ಎರಡು ವಾರಗಳ ಕಾಲ ಲಾಕ್‍ಡೌನ್ ವಿಧಿಸಲಾಗುತ್ತಿದ್ದು, ಮೇ 24 ರಿಂದ ಜೂನ್ 7ರ ವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ. ಈ ಹಿಂದಿನ ಲಾಕ್‍ಡೌನ್ ಮಾರ್ಗಸೂಚಿಗಳೇ ಮುಂದುವರಿಯುತ್ತವೆ ಎಂದು ಲಾಕ್‍ಡೌನ್ ಮಾರ್ಗಸೂಚಿಗಳ ಕುರಿತು ಸಿಎಂ ಸ್ಪಷ್ಟಪಡಿಸಿದ್ದಾರೆ.

    ಬೆಳಗ್ಗೆ 10 ಗಂಟೆ ನಂತರ ಸಹ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದಾರೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, 9 ಗಂಟೆಗೆ ಮನೆಗೆ ಸೇರಬೇಕು, 10 ಗಂಟೆ ಬಳಿಕ ಯಾರೂ ಸಂಚರಿಸಕೂಡದು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆ ಬಳಿಕ ಯಾರೇ ಓಡಾಡಿದರೂ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಈ ಕುರಿತು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.

  • ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು

    ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು

    ಬೆಂಗಳೂರು: ಬೆಡ್ ಸಿಗದೆ ಜನ ನರಳಾಡುತ್ತಿದ್ದಾರೆ, ಏನೇ ಕಸರತ್ತು ಮಾಡಿದರೂ ಜನ ಸಾಮಾನ್ಯರಿಗೆ ಬೆಡ್ ಸಿಗುತ್ತಿಲ್ಲ. ಈ ಹಿನ್ನೆಲೆ ಜನ ರೋಸಿ ಹೋಗಿದ್ದಾರೆ. ಅದೇ ರೀತಿ ಕೊರೊನಾ ಸೋಂಕಿತ ಪತಿಗೆ ಬೆಡ್ ಸಿಗದ್ದಕ್ಕೆ ಪತ್ನಿ ಗೋಳಾಡುತ್ತಿದ್ದು, ಸಿಎಂ ಮನೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆರಂಭದಲ್ಲಿ ಅವರನ್ನು ಸಾಗಾಹಾಕಲು ಪೊಲೀಸರು ಸಮಯ ವ್ಯರ್ಥ ಮಾಡಿದ್ದು, ಮಾಧ್ಯಮದವರು ಆಗಮಿಸುತ್ತಿದ್ದಂತೆ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಸೋಂಕಿತ ಸಾವನ್ನಪ್ಪಿದ್ದಾರೆ.

    ಬೆಡ್ ಸಿಗುತ್ತಿಲ್ಲವೆಂದು ಅಂಬುಲೆನ್ಸ್ ನಲ್ಲಿ ಕೋವಿಡ್ ಸೋಂಕಿತ ಪತಿಯನ್ನು ಕರೆದುಕೊಂಡು ಬಂದು ಪತ್ನಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಿ ಹೋದರೂ ಬೆಡ್ ಸಿಗುತ್ತಿಲ್ಲ ಎಂದು ಸಿಎಂ ನಿವಾಸ ಕಾವೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರಾಮೋಹಳ್ಳಿಯ ಸತೀಶ್ (45) ಅವರಿಗೆ ಕೋವಿಡ್ ಬಂದಿದೆ. ಸಿಎಂ ನಿವಾಸ ಮುಂದೆ ಆಗಮಿಸಿ ನಮಗೆ ಬೆಡ್ ಬೇಕು ಎಂದು ಅಳಲು ತೊಡಿಕೊಂಡಿದ್ದಾರೆ. ರೋಗಿ ಸತೀಶ್ ಪತ್ನಿ ಸಿಎಂ ನಿವಾಸದ ಮುಂದೆ ಗೇಟ್ ಬಳಿ ಕೂತು ಕಣ್ಣೀರು ಹಾಕಿದ್ದಾರೆ.

    ಹೋಮ್ ಐಸೋಲೇಷನ್ ನಲ್ಲಿದ್ದ ಪಾಸಿಟಿವ್ ರೋಗಿ ಸತೀಶ್ ಗೆ ರಾತ್ರಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ರಾತ್ರಿ 1 ಗಂಟೆಯಿಂದ ಕುಟುಂಬಸ್ಥರು ಹತ್ತು ಆಸ್ಪತ್ರೆ ಸುತ್ತಿದ್ದು, ಎಲ್ಲೂ ಬೆಡ್ ಸಿಕಿಲ್ಲ ಎಂದು ರಾಜ್ಯದ ದೊರೆ ಮನೆ ಮುಂದೆಯೇ ಬಂದು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಕೆಲಸ ನಾವು ಮಾಡಬೇಕು ಎಂದು ರೋಗಿ, ರೋಗಿ ಕುಟುಂಬಸ್ಥರನ್ನು ಸಾಗ ಹಾಕಲು ಪೊಲೀಸರು ಮುಂದಾಗಿದ್ದಾರೆ. ಬೆಡ್ ಸಿಗದ ಹೊರತು ಇಲ್ಲಿಂದ ಹೋಗಲ್ಲ ಎಂದು ರೋಗಿ ಬಾಮೈದ ಪಟ್ಟು ಹಿಡಿದಿದ್ದಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿ ಪೊಲೀಸರು ಅವರನ್ನು ಕಳುಹಿಸಲು ಮುಂದಾಗಿದ್ದಾರೆ. ಮಾಧ್ಯಮದವರು ಪ್ರಶ್ನೆ ಮಾಡಿದ ಬಳಿಕ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ.

    ತಕ್ಷಣವೇ ರೋಗಿಯನ್ನು ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ. ರಾಮನಗರ ಜಿಲ್ಲೆ ಚಿಕ್ಕಲ್ಲೂರಿನ ಸತೀಶ್ ಹಾಗೂ ಅವರ ಪತ್ನಿ ಮಂಜುಳಾ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ದಾರಿ ಮಧ್ಯೆಯೇ ರೋಗಿ ಸತೀಶ್ ಸಾವನ್ನಪ್ಪಿದ್ದಾರೆ. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಾಗ ರೋಗಿ ಸತ್ತಿರುವ ಕುರಿತು ವೈದ್ಯರು ತಿಳಿಸಿದ್ದಾರೆ. ಈ ಸಾವಿಗೆ ಯಾರು ಹೊಣೆ ಎಂದು ಕುಟುಂಬಸ್ಥರು ಪ್ರಶ್ನಿಸುತ್ತಿದ್ದಾರೆ.

  • ಸಿಎಂ ಬಿಎಸ್‍ವೈಗೆ ಹೆಚ್‍ಡಿಡಿ ಫೋನ್

    ಸಿಎಂ ಬಿಎಸ್‍ವೈಗೆ ಹೆಚ್‍ಡಿಡಿ ಫೋನ್

    ಹಾಸನ: ಕೊರೊನಾ ಸಂಕಷ್ಟದಲ್ಲಿ ಜನತೆಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕೆಂದು ಸಿಎಂ ಯಡಿಯೂರಪ್ಪ ಅವರಿಗೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡರು ಕರೆ ಮಾಡಿ ಮಾತನಾಡಿದ್ದಾರೆ.

    ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ಸೋಕಿಂತರಿಗೆ ನಿಗದಿಯಾಗಿರುವ ಹಾಸಿಗೆಗಳು ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಯಡಿಯೂರಪ್ಪನವರ ಜೊತೆಯಲ್ಲಿ ದೂರವಾಣಿಯಲ್ಲಿ ದೇವೇಗೌಡರು ಮಾತನಾಡಿದರು. ಜಿಲ್ಲೆಯ ಜನೆತೆಗೆ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸಬೇಕೆಂದು ಮನವಿ ಮಾಡಿದ್ದಾರೆ .

    ಮುಖ್ಯಮಂತ್ರಿಗಳು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಯಾವುದೇ ಸಮಸ್ಯೆಯಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವರ ಜೊತೆಯಲ್ಲಿ ದೇವೇಗೌಡರು ಸತತವಾಗಿ ದೂರವಾಣಿ ಸಂಪರ್ಕದಲ್ಲಿದ್ದಾರೆ. ಜಿಲ್ಲಾಧಿಕಾರಿಗಳ ಜೊತೆಯಲ್ಲಿ ದೂರವಾಣಿ ಸಂಪರ್ಕದಲ್ಲಿ ಸತತವಾಗಿದ್ದು ಪ್ರತಿ ದಿನದ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

  • ಕೊರೊನಾ ತಗುಲಿ ಪ್ರಾಣ ಬೇಕಾದರೂ ಹೋಗಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡ್ತೀನಿ: ರೇವಣ್ಣ

    ಕೊರೊನಾ ತಗುಲಿ ಪ್ರಾಣ ಬೇಕಾದರೂ ಹೋಗಲಿ ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡ್ತೀನಿ: ರೇವಣ್ಣ

    – ದುಡ್ಡಿಗಾಗಿ ಬಿಜೆಪಿ ಸರ್ಕಾರ ಏನು ಬೇಕಾದ್ರೂ ಮಾಡುತ್ತೆ

    ಹಾಸನ: ಕೊರೊನಾ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯವನ್ನು ಖಂಡಿಸಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾನಾಡಿದ ಅವರು, ನಾಳೆ ಬೆಳಗ್ಗೆ 9 ರಿಂದ 10 ಗಂಟೆಯವರೆಗೂ ಧರಣಿ ನಡೆಸುತ್ತೇನೆ, 144 ಸೆಕ್ಷನ್ ಇದೆ ಹಾಗಾಗಿ ನಾನೋಬ್ಬನೇ ಧರಣಿ ಕೂರುತ್ತೇನೆ. ಅರೆಸ್ಟ್ ಮಾಡೋದಾದರೆ ಮಾಡಲಿ, ಕೊರೊನಾ ಬರೋದಾದರೆ ಬರಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

    ದುಡ್ಡಿಗಾಗಿ ಬಿಜೆಪಿ ಸರ್ಕಾರ ಏನು ಬೇಕಾದ್ರೂ ಮಾಡುತ್ತೆ. ಹಿಮ್ಸ್ ಆಸ್ಪತ್ರೆಯ ಡಿಎಚ್‍ಒ ಅನ್ನು ಸರ್ಕಾರ ವರ್ಗಾವಣೆ ಮಾಡಿದೆ. ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ನಮ್ಮ ಜನರನ್ನು ಉಳಿಸಿಕೊಳ್ಳಲಾಗದಿದ್ದರೆ ನಾವೇಕೆ ಬದುಕಿರಬೇಕು, ನನ್ನ ಪ್ರಾಣ ಬೇಕಾದ್ರೂ ಹೋಗಲಿ, ನನಗೆ ಕೊರೊನಾದ್ರೂ ಬರಲಿ ನಾನು ಬೆಳಗ್ಗೆ ಸಿಎಂ ಮನೆ ಮುಂದೆ ಹೋಗಿ ಕೂರುತ್ತೇನೆ ಎಂದರು.

    ಜಿಲ್ಲೆಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ, ಒಂದೇ ಒಂದು ರೆಮ್‍ಡಿಸಿವಿರ್ ಇಂಜೆಕ್ಷನ್ ಸಿಗ್ತಿಲ್ಲ, ರಾಜ್ಯದ ಪರಿಸ್ಥಿತಿಯೂ ಹದಗೆಟ್ಟು ಹೋಗಿದೆ. ಉಳ್ಳವರಿಗೆ ಮಾತ್ರ ಚಿಕಿತ್ಸೆ ಸಿಗುವಂತಾಗಿದೆ, ಸರ್ಕಾರದ ವಿಫಲತೆಯನ್ನು ಖಂಡಿಸಿ ನಾನು ಏಕಾಂಗಿಯಾಗಿ ಧರಣಿ ನಡೆಸುತ್ತೇನೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈ ಬಾರಿ ನಮ್ಮಪ್ಪ ಹೇಳಿದರೂ ನಾನು ಕೇಳೋದಿಲ್ಲ, ಪ್ರತಿಭಟನೆ ಮಾಡೇ ಮಾಡುತ್ತೇನೆ. ತರಕಾರಿ ಮಾರುವವನಿಗೆ ದಿಢೀರ್ ತಳ್ಳೋ ಗಾಡಿಯಲ್ಲಿ ಮಾಡಿ ಎಂದಿದ್ದಾರೆ. ದಿಢೀರ್ ಆದೇಶ ಹೊರಡಿಸಿದರೆ ಅವರು ತಳ್ಳೋಗಾಡಿ ಎಲ್ಲಿಂದ ತರುತ್ತಾರೆ. ಜನರನ್ನು ಸಂದಿಗ್ಧ ಪರಿಸ್ಥಿತಿಗೆ ಸರ್ಕಾರ ತಳ್ಳುತ್ತಿದೆ ಎಂದು ಸರ್ಕಾರದ ಕೋವಿಡ್ ಮಾರ್ಗಸೂಚಿಯ ವಿರುದ್ಧ ರೇವಣ್ಣ ಕಿಡಿಕಾರಿದರು.

  • ಹೋಟೆಲ್‍ಗಳನ್ನು ಸ್ಟೆಪ್ ಡೌನ್ ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಸಿಎಂ ಚಿಂತನೆ

    ಹೋಟೆಲ್‍ಗಳನ್ನು ಸ್ಟೆಪ್ ಡೌನ್ ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಸಿಎಂ ಚಿಂತನೆ

    – ಅಂತಿಮ ವರ್ಷದ ವೈದ್ಯಕೀಯ, ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಕೆ
    – ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಿಎಂ ಸಭೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿದ್ದು, ಆಕ್ಸಿಜನ್ ಹಾಗೂ ಬೆಡ್ ಕೊರತೆಯಿಂದ ಜನ ನರಳುತ್ತಿದ್ದಾರೆ. ಇದರ ನಡುವೆ ಸರ್ಕಾರ ಸಭೆಗಳ ಮೂಲಕ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂದು ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದು, ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

    ಇಂದು ಸಿಎಂ ಅಧ್ಯಕ್ಷತೆಯಲ್ಲಿ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರ ಸಮಾಲೋಚನೆ ಸಭೆ ನಡೆಸಲಾಗಿದ್ದು, ಆಕ್ಸಿಜನ್ ಕಾನ್ಸನ್ಟ್ರೇಟರ್ ಗಳನ್ನು ಬಳಸಿಕೊಂಡು ಹೋಟೆಲ್‍ಗಳನ್ನು ಆಕ್ಸಿಜನೇಟೆಡ್ ಬೆಡ್ ಮಾದರಿಯ ಸ್ಟೆಪ್ ಡೌನ್ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದು, ಸೆಂಟ್ರಲೈಸ್ಡ್ ಆಕ್ಸಿಜನೇಷನ್ ವ್ಯವಸ್ಥೆ ಇರುವ ಬೆಡ್ ಗಳನ್ನು ಐಸಿಯು ಬೆಡ್ ಗಳನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ.

    ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗ್ರೇಸ್ ಅಂಕಗಳನ್ನು ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವುದು. ಇದಕ್ಕೆ ಸಹಕಾರಿಯಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೀಗಾಗಿ ಸೂಕ್ತ ಇನ್ಸೆಂಟಿವ್ ನೀಡಿ ನರ್ಸಿಂಗ್, ಫಾರ್ಮಸಿ, ಫಿಜಿಯೋಥೆರಪಿ, ಆಯುಷ್ ವೈದ್ಯ, ದಂತ ವೈದ್ಯಕೀಯ ಹಾಗೂ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವುದು. ವಿದೇಶಗಳಲ್ಲಿ ವೈದ್ಯಕೀಯ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ನೋಂದಣಿ ಮಾಡಿಸಿ ಅವರನ್ನೂ ಬಳಸಿಕೊಳ್ಳಲು ಸಹ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ.

    ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿಲ್ಲದ ರೋಗ ಲಕ್ಷಣ ರಹಿತ ಸೋಂಕಿತರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಇದನ್ನು ಕಡಿಮೆಗೊಳಿಸಲು ಟ್ರಯಾಜಿಂಗ್ ಮಾಡಿ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಲಕ್ಷಣ ರಹಿತ ಸೋಂಕಿತರನ್ನು ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ಮುಂದುವರಿಸುವುದು. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಟೆಲಿ ಮೆಡಿಸಿನ್ ಸೌಲಭ್ಯವನ್ನು ಬಲಪಡಿಸುವ ಕುರಿತು ಚರ್ಚಿಸಲಾಗಿದೆ.

    ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್‍ಗಳನ್ನು ಸಾಮಾನ್ಯ ಬೆಡ್‍ಗಳಿಂದ ಆಕ್ಸಿಜನೇಟೆಡ್ ಬೆಡ್‍ಗಳಾಗಿ ಪರಿವರ್ತಿಸುವುದು, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಅಳವಡಿಸಲು ಸರ್ಕಾರದಿಂದ ಧನ ಸಹಾಯ ನೀಡುವುದು. ಕಡಿಮೆ ಕಾರ್ಯಭಾರವಿರುವ ವೈದ್ಯಕೀಯ ಸಿಬ್ಬಂದಿಯನ್ನು ಗುರುತಿಸಿ ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

    ರೆಮ್‍ಡಿಸಿವಿರ್ ಮತ್ತು ಆಕ್ಸಿಜನ್ ಅನಗತ್ಯವಾಗಿ ಬಳಕೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸೂಕ್ತ ಆಡಿಟ್ ವ್ಯವಸ್ಥೆ ರೂಪಿಸುವುದು. 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ತಜ್ಞರ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ ಕೋವಿಡ್ ಲಸಿಕೆ ಹಾಕುವುದಕ್ಕೆ ವೇಗ ನೀಡಲು ಸಹ ಕ್ರಮ ಕೈಗೊಳ್ಳುವ ಕುರಿತು ಸಹ ಚರ್ಚಿಸಲಾಗಿದೆ.

    ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಇನ್ಸೆಂಟಿವ್ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಸೋಂಕಿತರಾದಲ್ಲಿ ಸರ್ಕಾರಿ ವೆಚ್ಚದಲ್ಲೇ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಂಡಲ್ಲಿ ಅವರಿಗೆ ಆದ್ಯತೆಯ ಮೇಲೆ ಕೋವಿಡ್ ಲಸಿಕೆ ನೀಡಲು ಸಹ ಕ್ರಮ ಕೈಗೊಳ್ಳಲಾಗಿದೆ.

  • ಅರ್ಧ ಲಾಕ್‍ಡೌನ್ ಪ್ರಯೋಜನವಿಲ್ಲ, ಮುಖ್ಯಮಂತ್ರಿಗಳೇ ಫುಲ್ ಲಾಕ್ ಮಾಡಿ: ವಿಶ್ವನಾಥ್

    ಅರ್ಧ ಲಾಕ್‍ಡೌನ್ ಪ್ರಯೋಜನವಿಲ್ಲ, ಮುಖ್ಯಮಂತ್ರಿಗಳೇ ಫುಲ್ ಲಾಕ್ ಮಾಡಿ: ವಿಶ್ವನಾಥ್

    ಮೈಸೂರು: ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅರ್ಧ ಲಾಕ್‍ಡೌನ್ ಮಾಡಿರುವುದರಿಂದ ಕೊರೊನಾ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪೂರ್ತಿ ಲಾಕ್‍ಡೌನ್ ಮಾಡಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ ನೀಡಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ತಡೆಗಟ್ಟುವ ಬದಲು ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಮಾಡಿ. ಬೆಳಗ್ಗೆ 6 ರಿಂದ 10 ಗಂಟೆ ವರೆಗೆ ಅಗತ್ಯ ವಸ್ತುಗಳು, ಮದ್ಯಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಜನರು ಗುಂಪು ಗುಂಪಾಗಿ ಹೊರ ಬರುತ್ತಿದ್ದಾರೆ. ಇದು ಕೊರೊನಾ ಹರಡಲು ಕಾರಣವಾಗುತ್ತಿದೆ. ಕೊರೊನಾ ಕಡಿವಾಣ ಹಾಕಲು ರಾಜ್ಯದಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿಯಾಗಲೇಬೇಕು. ಲಾಕ್‍ಡೌನ್ ಆದರೆ ರೋಗಿಗಳಿಗೆ ಬೇಕಾದ ಅಗತ್ಯ ಸೌಲಭ್ಯ ಮಾಡಿಕೊಂಡು ಕಂಟ್ರೋಲ್ ಮಾಡಬಹುದು ಎಂದರು.

    ಭಾರತದ ಕೊರೊನಾ ಪರಿಸ್ಥಿತಿಯನ್ನು ವಿದೇಶಿ ಮಾಧ್ಯಮಗಳು ಅಣಕು ಮಾಡುತ್ತಿವೆ. ಡಬ್ಲ್ಯೂಎಚ್‍ಓ ಸೇರಿ ವಿವಿಧ ಸಂಸ್ಥೆಗಳು ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿರುವುದು ಸ್ವಾಗತಾರ್ಹ ವಿಚಾರ. ಆದರೆ ಪರಿಸ್ಥಿತಿ ಹೀಗೆ ಬಿಟ್ಟರೆ ಮುಂದೆ ತೊಂದರೆ ಆಗಲಿದೆ. ಮುಖ್ಯಮಂತ್ರಿಗಳೇ ಕೂಡಲೇ ಕರ್ನಾಟಕದಲ್ಲಿ ಲಾಕ್‍ಡೌನ್ ಜಾರಿ ಮಾಡಿ ಎಂದು ವಿಶ್ವನಾಥ್ ಒತ್ತಾಯಿಸಿದ್ದಾರೆ.

  • 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ- ಮೇ ಮೂರನೇ ವಾರದವರಗೆ ವ್ಯಾಕ್ಸಿನ್ ಸಿಗಲ್ಲ: ಸಿಎಂ

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ- ಮೇ ಮೂರನೇ ವಾರದವರಗೆ ವ್ಯಾಕ್ಸಿನ್ ಸಿಗಲ್ಲ: ಸಿಎಂ

    ಬೆಂಗಳೂರು: ಲಸಿಕೆ ದಾಸ್ತಾನು ಇಲ್ಲದಿದ್ದರೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದು, ಮೇ ಮೂರನೇ ವಾರದವರೆಗೆ ಲಸಿಕೆ ಸಿಗುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಲಸಿಕೆ ಸ್ಟಾಕ್ ಇಲ್ಲದಿದ್ದ ಮೇಲೆ ಕಾರ್ಯಕ್ರಮಕ್ಕೆ ಯಾಕೆ ಚಾಲನೆ ನೀಡಬೇಕಿತ್ತು ಎಂಬುದು ಹಲವರ ಪ್ರಶ್ನೆಯಾಗಿದೆ.

    ಶಿವಾಜಿನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಸಿಎಂ ಯಡಿಯೂರಪ್ಪ ಸಾಂಕೇತಿಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಈಗ ಚಾಲನೆ ನೀಡಲಾಗಿದೆ. ಆದರೆ ಲಸಿಕೆ ಹಾಕಿಸಿಕೊಳ್ಳಲು ಮೇ ಮೂರನೇ ವಾರದ ತನಕ ಕಾಯಬೇಕು. ಈಗ ಸಾಂಕೇತಿಕ ಚಾಲನೆ ಮಾತ್ರ ಸಿಕ್ಕಿದೆ. ಕೇಂದ್ರದಿಂದ ಇಂದು ಕೇವಲ 3 ಲಕ್ಷ ಡೋಸ್ ಮಾತ್ರ ಬಂದಿದೆ ಎಂದರು.

    ಈಗಾಗಲೇ 96.36 ಲಕ್ಷ ಜನ ಲಸಿಕೆ ಪಡೆದಿದ್ದಾರೆ. ಲಭ್ಯತೆಯ ಆಧಾರದ ಮೇಲೆ ಲಸಿಕೆ ನೀಡುವ ಪ್ರಕ್ರಿಯೆ ನಡೆಯಲಿದೆ. ಮೂರು ದಿನದಲ್ಲಿ ನಿಮ್ಮ ಅನುಮಾನಕ್ಕೆ ಉತ್ತರ ಸಿಗುತ್ತೆ, ಲಸಿಕೆ ಲಭ್ಯತೆ ಆಧಾರದ ಮೇಲೆ ಬರುತ್ತದೆ. ಈಗ ಇರುವ ಮೂರು ಪ್ಲಸ್ ಒಂದು ಲಕ್ಷ ಸೇರಿ ಒಟ್ಟು ನಾಲ್ಕು ಲಕ್ಷ ಡೋಸ್ ಲಸಿಕೆ ಖಾಲಿ ಆಗುವ ತನಕ 18 ವರ್ಷದ ಮೇಲ್ಪಟ್ಟವರಿಗೆ ನೀಡುತ್ತೇವೆ ಎಂದರು.

    ಹೊರ ದೇಶದಿಂದ ಲಸಿಕೆ ಬರುತ್ತಿದೆ, ಶೀಘ್ರವಾಗಿ ಎಲ್ಲವೂ ಸರಿ ಹೋಗಲಿದೆ. ಇನ್ನೆರಡು ದಿನದಲ್ಲಿ ಎಲ್ಲರ ಅನುಮಾನಕ್ಕೆ ತೆರೆ ಬೀಳಲಿದೆ. ಮೋದಿಯವರು ಸಹಕಾರ ನೀಡುತ್ತಿದ್ದಾರೆ. ಇಂದಿನಿಂದ ನಮ್ಮಲ್ಲಿ ಖಾಲಿಯಾಗೋವರೆಗೂ ಲಸಿಕೆ ನೀಡುತ್ತೇವೆ. ಕಾಳ ಸಂತಯಲ್ಲಿ ಔಷಧಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಮ್ಮ ಗಮನಕ್ಕೆ ತನ್ನಿ, ನಾವು ಕ್ರಮ ಕೈಗೊಳ್ಳುತ್ತೇವೆ. ಸಂಜೆ ಆಸ್ಪತ್ರೆ ಪ್ರಮುಖರ ಜೊತೆ ಸಹ ಸಭೆ ಇದೆ, ಚರ್ಚೆ ಮಾಡುತ್ತೇವ ಎಂದರು.

    ಕೋವಿಡ್ ವಿರುದ್ಧದ ಸಮರದಲ್ಲಿ ಇದು ಮಹತ್ವದ ದಿನ, ಕೇಂದ್ರ ಸರ್ಕಾರದ ಸೂಚನೆಯಂತೆ ಇಂದಿನಿಂದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡುತ್ತಿದೆ. ಕೇಂದ್ರದಿಂದ ಮೂರು ಲಕ್ಷ ಡೋಸ್ ಲಸಿಕೆ ಲಭ್ಯವಾಗಿದೆ, ನಮ್ಮ ಬಳಿ ಒಂದು ಲಕ್ಷ ಡೋಸ್ ಲಭ್ಯವಿದೆ. 4 ಲಕ್ಷ ಡೋಸ್ ಲಸಿಕೆಯನ್ನು ಸದ್ಯ ನೀಡಲಾಗುವುದು. ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದು ಸಮಯೋಚಿತವಾಗಿದೆ. ಪ್ರಧಾನಿ ಮೋದಿಯವರಿಗೆ ಅಭಿನಂದನೆ, ಈ ತಿಂಗಳಲ್ಲಿ ಇನ್ನೊಂದು ಲಸಿಕೆ ಲಭ್ಯವಾಗಲಿದೆ ಎಂದರು.

    ಖಾಸಗಿ ಆಸ್ಪತ್ರೆಯಗಳಲ್ಲಿ ಲಸಿಕೆಗೆ ದರವನ್ನು ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ದರ ತೆಗೆದುಕೊಂಡರೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿ ಪಾಲಿಸಿ, ಜನರು ಸಹಕಾರ ನೀಡಿದರೆ ಕೋವಿಡ್ ನಿಯಂತ್ರಣ ಸಾಧ್ಯ. ಇದೇ ರೀತಿ ಸಹಕಾರ ನೀಡುವಂತೆ ಸಿಎಂ ಜನರಲ್ಲಿ ವಿನಂತಿಸಿದ್ದರೆ.

    ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್ ಭಾಗಿಯಾಗಿದ್ದರು. 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಸಿಎಂ ಸಾಂಕೇತಿಕವಾಗಿ ಚಾಲನೆ ನೀಡಿದರು.

  • ಮೇ 10ರವರೆಗೆ KSRTC, BMTC ಬಸ್, ಮೆಟ್ರೋ ಸಂಚಾರ ಬಂದ್

    ಮೇ 10ರವರೆಗೆ KSRTC, BMTC ಬಸ್, ಮೆಟ್ರೋ ಸಂಚಾರ ಬಂದ್

    – ಹೋಟೆಲ್, ರೆಸ್ಟೋರೆಂಟ್ ಬಂದ್
    – ಕೊರೊನಾ ಕಂಟ್ರೋಲ್‍ಗೆ ಬರದಿದ್ರೆ ಲಾಕ್‍ಡೌನ್ ಮುಂದುವರಿಕೆ

    ಬೆಂಗಳೂರು: ಮಂಗಳವಾರ ರಾತ್ರಿ 9 ಗಂಟೆಯಿಂದ ಇಡೀ ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ. ಲಾಕ್‍ಡೌನ್ ಹಿನ್ನೆಲೆ ಸಾರಿಗೆ ಬಸ್ ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಇದೇ ವೇಳೆ ಮೇ 10ರವರೆಗೆ ಕೊರೊನಾ ನಿಯಂತ್ರಣಕ್ಕೆ ಬರದಿದ್ರೆ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಸಿಎಂ ತಿಳಿಸಿದರು.

    ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10ರವರೆಗೆ ಮಾತ್ರ ಅಗತ್ಯವಸ್ತುಗಳ (ದಿನಸಿ, ತರಕಾರಿ, ಹಾಲು, ಹಣ್ಣು) ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮದ್ಯದಂಗಡಿಗಳಿಗೆ ಸಮಯ ನಿಗದಿ ಪಡಿಸಲು ಸರ್ಕಾರ ಮುಂದಾಗಿದೆ. ಮಾರ್ಗಸೂಚಿ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

    18ರಿಂದ 45 ವರ್ಷದೊಳಗಿನವರಿಗೆ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು. ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಲಾಗಿದೆ. ಕೃಷಿ, ಮೆಡಿಕಲ್ ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ.

    ಇಂದು ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಆರೋಗ್ಯ ಸಚಿವ ಸುಧಾಕರ್, ಬಿಬಿಎಂಪಿ ಅಧಿಕಾರಿಗಳು ಲಾಕ್‍ಡೌನ್ ಅನಿವಾರ್ಯ. ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗದಿದ್ರೆ ಬೆಂಗಳೂರಿನ ಸ್ಥಿತಿ ಕೈ ಮೀರಬಹದು. ತಜ್ಞರು ಸಹ ಲಾಕ್‍ಡೌನ್ ಮಾಡಲು ಸಲಹೆ ನೀಡಿದ್ದಾರೆ ಎಂದು ಸಿಎಂ ಗಮನಕ್ಕೆ ತಂದಿದ್ದರು.

  • ಮತ್ತೆ ಲಾಕ್ ಆಗುತ್ತಾ ಬೆಂಗಳೂರು? – ಇಂದು ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ಚರ್ಚೆ

    ಮತ್ತೆ ಲಾಕ್ ಆಗುತ್ತಾ ಬೆಂಗಳೂರು? – ಇಂದು ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ಚರ್ಚೆ

    ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಮಾಡಿದ್ದ ವೀಕೆಂಡ್ ಲಾಕ್‍ಡೌನ್ ಇಂದು ಬೆಳಗ್ಗೆ 6 ಗಂಟೆಗೆ ಅಂತ್ಯವಾಗಿದೆ. ಬೆಳಗ್ಗೆ 6ರಿಂದ ಯಥಾಸ್ಥಿತಿಗೆ ಅಂದ್ರೆ ಹಾಫ್ ಲಾಕ್‍ಡೌನ್‍ಗೆ ರಾಜ್ಯ ಮರಳಿದೆ. ರಾಜ್ಯಾದ್ಯಂತ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಸಂಚಾರ, ಮೆಟ್ರೋ ಸಂಚಾರ ಎಂದಿನಂತೆ ಆರಂಭಗೊಂಡಿದೆ.

    ಕೊರೋನಾ ಸೋಂಕಿನ ಚೈನ್ ಲಿಂಕ್ ಕಟ್ ಮಾಡಲು ಕೇವಲ ವೀಕೆಂಡ್ ಅಲ್ಲ, ವಾರ ಪೂರ್ತಿ ಲಾಕ್‍ಡೌನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವಾಗಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆಯಲಿದೆ. ಈ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ಅದರ ಹಿಂದಿನ ಎರಡು ದಿನ ಜಾರಿಯಾಗಿದ್ದ ಹಾಫ್ ಲಾಕ್‍ಡೌನ್‍ನಿಂದ ಆಗಿರುವ ಲಾಭ ನಷ್ಟಗಳೇನು ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ. ದೆಹಲಿ ಮಾದರಿಯಲ್ಲಿ ಲಾಕ್‍ಡೌನ್ ಮಾಡಲಾಗುತ್ತಾ ಎಂಬ ಚರ್ಚೆಗಳು ನಡೆದಿವೆ.

    ಕ್ಯಾಬಿನೆಟ್‍ನಲ್ಲಿ ಏನಾಗಬಹುದು?
    ಕಳೆದ 4 ದಿನಗಳಿಂದ ಚೈನ್ ಲಿಂಕ್ ಕಟ್ ಆಗಿದ್ಯಾ? ಇಲ್ವಾ ಎಂಬ ವರದಿ ಪರಿಶೀಲನೆ ನಡೆಸಲಾಗುತ್ತದೆ. ವಾರಾಂತ್ಯದ ಕರ್ಫ್ಯೂನಲ್ಲೇ ಚೈನ್‍ಲಿಂಕ್ ಕಟ್ಟಾಗ್ತಿದೆ ಎಂದಿದ್ರೆ ಈಗಿನ ರೂಲ್ಸ್ ಮುಂದುವರಿಕೆಯಾಗುವ ಸಾಧ್ಯತೆಗಳಿವೆ. ವಾರಾಂತ್ಯದ ಕರ್ಫ್ಯೂ ಜೊತೆ ಇಡೀ ವಾರ ಲಾಕ್‍ಡೌನ್ ಬೇಕು ಎಂದರೇ, ಅದರ ಮೇಲೆ ಚರ್ಚೆ ನಡೆಯಬಹುದು.

    ಲಾಕ್ ಅನಿವಾರ್ಯ ಎಂದಾದರೇ ಮಂಗಳವಾರದಿಂದ 10ರಿಂದ 12 ದಿನಗಳ ಕಾಲ ಬಿಗಿ ಕ್ರಮಕ್ಕೆ ಮುಂದಾಗಬಹುದು. ‘ಲಾಕ್’ಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕರೆ ವೀಕೆಂಡ್ ಕರ್ಫ್ಯೂ ಮಾದರಿ ರೂಲ್ಸ್ ಮುಂದುವರಿಕೆ ಮಾಡಿ ಅಗತ್ಯ ವಸ್ತುಗಳ ಖರೀದಿಗೆ ವೀಕೆಂಡ್‍ನಂತೆಯೇ ಬೆಳಗ್ಗೆ 6ರಿಂದ 10ರ ಸಮಯ ನಿಗದಿಯಾಗುವ ಸಾಧ್ಯತೆಗಳಿವೆ.

    ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಓಡಾಟಕ್ಕೂ ನಿರ್ಬಂಧ ಹಾಕಬಹುದು. ಬೆಂಗಳೂರು ಸೋಂಕು ಗ್ರಾಮೀಣ ಭಾಗಕ್ಕೆ ಹಬ್ಬುವುದನ್ನು ತಡೆಯಲು ಈ ನಿರ್ಬಂಧ ಸಾಧ್ಯತೆ ಇದೆ.18 ವರ್ಷ ಮೇಲ್ಪಟ್ಟ ಸರ್ವರಿಗೂ ಫ್ರೀ ವ್ಯಾಕ್ಸಿನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.

    ಸಚಿವರು ಹೇಳಿದ್ದೇನು?: ರಾಜ್ಯದಲ್ಲಿ ವೀಕೆಂಡ್ ಮಾತ್ರವಲ್ಲ. ಉಳಿದ ದಿನಗಳಲ್ಲಿಯೂ ಕರ್ಫ್ಯೂ ಹೇರಿಕೆ ಬಗ್ಗೆ ಚರ್ಚೆ ನಡೆದಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದು ಹಿರಿಯ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮೇ 4ರವರೆಗೆ ಕಠಿಣ ನಿಯಮ ಇರಲಿದೆ. ಕಟ್ಟುನಿಟ್ಟಿನ ನಿಯಮ ಹಾಕದಿದ್ದರೆ ಕೊರೊನಾ ನಿಯಂತ್ರಣ ಆಗುವುದಿಲ್ಲ ಎಂದಿದ್ದಾರೆ.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತ್ರ, ವಾರಪೂರ್ತಿ ವೀಕೆಂಡ್ ಮಾದರಿಯ ಕರ್ಫ್ಯೂ ಮುಂದುವರೆಸುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಸಿಎಂ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಯಾವುದೇ ಊಹಾಪೋಹ ಬೇಡ. ಸದ್ಯಕ್ಕೆ ಈಗಿರುವ ಮಾರ್ಗಸೂಚಿಗಳೇ ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ನಂಗೇನು ಗೊತ್ತಿಲ್ಲ.ಟ ವಾರಪೂರ್ತಿ ಕರ್ಫ್ಯೂ ವಿಧಿಸೋದನ್ನು ಅಥ್ವಾ ಬಿಡೋದನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಕೇಂದ್ರ ಮಂತ್ರಿ ಡಿವಿ ಸದಾನಂದಗೌಡ ತಿಳಿಸಿದ್ದಾರೆ.

  • ಬೆಂಗಳೂರಿಗೆ ಬಿಗಿ ಕ್ರಮ ತೆಗೆದುಕೊಳ್ಳದೇ ಹೋದರೆ ಕಷ್ಟ: ಸುಧಾಕರ್

    ಬೆಂಗಳೂರಿಗೆ ಬಿಗಿ ಕ್ರಮ ತೆಗೆದುಕೊಳ್ಳದೇ ಹೋದರೆ ಕಷ್ಟ: ಸುಧಾಕರ್

    ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆ ಬೆಂಗಳೂರಿಗೆ ಕೆಲವು ವಿಶೇಷವಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್ಯ ಇದೆ ಎಂದು ವೈದ್ಯಕೀಯ ಶಿಕ್ಷಣ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪರೋಕ್ಷವಾಗಿ ಲಾಕ್‍ಡೌನ್ ಸುಳಿವು ನೀಡಿದ್ದಾರೆ.

    ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಸಿಎಂ ಬಿಎಸ್ ಯಡಿಯೂರಪ್ಪನವರನ್ನು ಇಂದು ಭೇಟಿ ಮಾಡಿ ತಾಂತ್ರಿಕ ಸಮಿತಿಯವರು ನೀಡಿದ ಕೆಲವೊಂದು ವರದಿಗಳ ಕುರಿತಂತೆ ಚರ್ಚೆ ನಡೆಸುತ್ತೇನೆ. ಅಲ್ಲದೆ ನಿನ್ನೆ ಸಂಜೆ ರಾಜ್ಯಪಾಲರನ್ನು ಕೂಡ ಭೇಟಿ ಮಾಡಿ ಚರ್ಚೆ ನಡೆಸಿದ್ದು, ಅವರು ಕೂಡ ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ನುಡಿದರು.

    ಇದೇ ವೇಳೆ ಬೆಂಗಳೂರಿಗೆ ವಿಶೇಷ ಕ್ರಮ ಅವಶ್ಯಕತೆ ಇದೆ. ಅಂತಹ ಅನಿವಾರ್ಯ ಉದ್ಭವವಾಗಿದೆ. ಅಲ್ಲದೆ ಕೊರೊನಾ ಸಮುದಾಯಕ್ಕೆ ಹರಿಡಿದೆ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಸಮುದಾಯಕ್ಕೆ ಕೊರೊನಾ ಹರಡಿದೆ ಎಂದರು.

    ಬೆಂಗಳೂರು ಲಾಕ್‍ಡೌನ್ ಬಗ್ಗೆ ಇಂದು ನಾನು ಸಿಎಂ ಬಿಎಸ್‍ವೈರನ್ನು ಭೇಟಿ ಮಾಡುತ್ತಿದ್ದು, ಬೆಂಗಳೂರಿಗೆ ಬಿಗಿ ಕ್ರಮ ತೆಗೆದುಕೊಳ್ಳದೇ ಹೋದರೆ ನಾವು ಇದನ್ನು ನಿಯಂತ್ರಿಸುವುದು ಅಸಾಧ್ಯ ಎಂದು ಒಬ್ಬ ಆರೋಗ್ಯ ಸಚಿವನಾಗಿ ನಾನು ಕೂಡ ಹೇಳುತ್ತಿದ್ದೇನೆ. ನಾಳೆಯ ಸಭೆಯಲ್ಲಿ ಚರ್ಚೆ ಮಾಡಿ ಕಠಿಣ ನಿರ್ಧಾರ ಪ್ರಕಟ ಮಾಡ್ತೀವಿ ಎಂದು ಹೇಳಿದರು.