Tag: CM BS Yediyurappa

  • ಬಿಎಸ್‍ವೈ ಬಳಿಕ ಉತ್ತರ ಕರ್ನಾಟಕದ ವೀರಶೈವರಿಗೆ ಸಿಎಂ ಸ್ಥಾನ ನೀಡಿದ್ರೆ ಸೂಕ್ತ: ಎಚ್.ವಿಶ್ವನಾಥ್

    ಬಿಎಸ್‍ವೈ ಬಳಿಕ ಉತ್ತರ ಕರ್ನಾಟಕದ ವೀರಶೈವರಿಗೆ ಸಿಎಂ ಸ್ಥಾನ ನೀಡಿದ್ರೆ ಸೂಕ್ತ: ಎಚ್.ವಿಶ್ವನಾಥ್

    – ಸಿಎಂ ಸ್ಥಾನಕ್ಕೆ ಮೂವರ ಹೆಸರನ್ನ ಸೂಚಿಸಿದ ವಿಶ್ವನಾಥ್
    – ಯಡಿಯೂರಪ್ಪನವರ ರಾಜೀನಾಮೆ ನಿರ್ಧಾರ ಅನಿರೀಕ್ಷಿತವೇನಲ್ಲ

    ಮೈಸೂರು: ಹೈಕಮಾಂಡ್ ಸೂಚಿಸಿದರೆ ಪದತ್ಯಾಗ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಸರಿ ಇದೆ. ಆದರೆ ಯಡಿಯೂರಪ್ಪನವರ ಬಳಿಕ ಉತ್ತರ ಕರ್ನಾಟಕದ ವೀರಶೈವ ನಾಯಕರೇ ಮುಖ್ಯಮಂತ್ರಿಯಾದರೆ ಸೂಕ್ತ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೀಗ ವೀರಶೈವ ಸಮುದಾಯದ ಮುಖ್ಯಮಂತ್ರಿ ನಿರ್ಗಮಿಸುತ್ತಿರುವುದರಿಂದ ಮತ್ತೆ ಅದೇ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತ. ಅದರಲ್ಲೂ ಉತ್ತರ ಕರ್ನಾಟಕದವರಿಗೇ ನೀಡಬೇಕು. ಬಸವರಾಜ್ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ ಇಲ್ಲವೇ ವೀರಶೈವರಲ್ಲಿ ಯಾವದೇ ನಾಯಕರಿಗೆ ಸಿಎಂ ಸ್ಥಾನ ಕೊಟ್ಟರೂ ಸರಿಯಾಗುತ್ತದೆ ಎಂದರು.

    ಇದು ಯಡಿಯೂರಪ್ಪನವರು ತೆಗೆದುಕೊಂಡಿರುವ ತೀರ್ಮಾನ, ರಾಜೀನಾಮೆ ಕುರಿತು ಸಿ.ಪಿ.ಯೋಗೇಶ್ವರ್ ಇಲ್ಲವೇ ಇನ್ನೊಬ್ಬರಾಗಲಿ ಕೇವಲ ಕಾಕತಾಳೀಯ ಮಾತ್ರ. ಇದು ಯಡಿಯೂರಪ್ಪನವರ ನಿರ್ಧಾರವೇ ಆಗಿದೆ. ಯೋಗೇಶ್ವರ್ ಸೇರಿದಂತೆ ಇನ್ಯಾರಿಗೇ ಆಗಲಿ ಯಡಿಯೂರಪ್ಪನವರನ್ನು ತೆಗೆಯುವ ಶಕ್ತಿ ಇಲ್ಲವೇ ಇಲ್ಲ ಎಂದು ಹೇಳಿದರು.

    ಅನಿರೀಕ್ಷಿತವೇನಲ್ಲ, ನಿರೀಕ್ಷಿತ:
    ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರ ಕುರಿತು ಹೇಳಿಕೆ ನೀಡಿರುವುದು ಅನಿರೀಕ್ಷಿತವೇನಲ್ಲ, ನಿರೀಕ್ಷಿತವೇ. ಹೈ ಕಮಾಂಡ್ ಸೂಚನೆ ನೀಡಿದರೆ ನಾನು ಪದತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿರುವುದು ನಿಜ. ಬಿಜೆಪಿ ಹೈಕಮಾಂಡ್ ಆಧಾರಿತ ಪಕ್ಷ, ಅವರ ಮಾತುಗಳೇ ನಡೆಯುವುದು. ದೆಹಲಿ ಹೈಕಮಾಂಡ್ ಹೇಳಿದ್ದನ್ನು ನಾವು ಕೇಳಲೇಬೇಕು. ಇಂದಿನ ಪರಿಸ್ಥಿತಿಯಲ್ಲಿ ಬಿ.ಎಸ್.ಯಡಿಯೂರಪ್ಪನವರು ತೆಗೆದುಕೊಂಡಿರುವ ನಿರ್ಧಾರ ತುಂಬಾ ಸಮಂಜಸವಾಗಿದೆ. ಕೊರೊನಾ ಅಟ್ಟಹಾಸ, ಆರ್ಥಿಕ ಸಂಕಷ್ಟ, ಅತಿವೃಷ್ಟಿ ಸೇರಿದಂತೆ ನೂರಾರು ಸಂಕಷ್ಟಗಳು ಎದುರಾಗಿವೆ. ಇದೆಲ್ಲದರ ನಡುವೆ ಯಡಿಯೂರಪ್ಪನವರು ಯೋಚಿಸಿರುವುದು ಸರಿ ಇದೆ. ರಾಜ್ಯದ ಶಕ್ತಿ ಪೀಠ ಯಾಕೋ ಮುಸುಕಾಗುತ್ತಿದೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಇದನ್ನೂ ಅರ್ಥೈಸಿಕೊಂಡು ರಾಜ್ಯದ ಅಭಿವೃದ್ಧಿ, ಬಿಜೆಪಿ ಸಂಘಟನೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದು ಸಂತೋಷ ತಂದಿದೆ ಎಂದರು.

    ಪರಿಸ್ಥಿತಿ ತುಂಬಾ ವಿಷಮವಾಗುತ್ತಿದೆ:
    ಹೈಕಮಾಂಡ್ ಒತ್ತಡವೇನಿಲ್ಲ, ತುಂಬಾ ಸೂಕ್ಷ್ಮವಾಗಿ ನಿಭಾಯಿಸುತ್ತಿದೆ. 75 ವರ್ಷಗಳ ನಂತರ ಜವಾಬ್ದಾರಿ ಸ್ಥಾನದಲ್ಲಿ ಇರುವುದು ಬೇಡ ಎಂಬುದು ಪಕ್ಷದ ನಿಯಮ. ಅಡ್ವಾಣಿಯವರಿಗೂ ಇದೇ ರೀತಿ ಗೆರೆ ಹಾಕಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಬೆಳೆಸಿದ ಕೀರ್ತಿ ಯಡಿಯೂರಪ್ಪನವರಿಗೆ ಇದೆ. ಇಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದಕ್ಕೆ ಕಾರಣ ಯಡಿಯೂರಪ್ಪನವರು. ಈ ಎಲ್ಲ ಸಂಶಗಳನ್ನು ಮನಗಂಡು 75 ವರ್ಷಗಳು ಆದರೂ ಪರವಾಗಿಲ್ಲ, ಸಿಎಂ ಆಗಿ ನೀವೇ ಮುಂದುವರಿಯಿರಿ ಎಂದು ಪಕ್ಷ ಹೇಳಿತು. ಆದರೆ ಈಗ ಪರಿಸ್ಥಿತಿ ತುಂಬಾ ವಿಷಮವಾಗುತ್ತಿದೆ. ಅವರ ವಯಸ್ಸು, ಆರೋಗ್ಯ, ಮನಸ್ಸಿನ ಸಂಘರ್ಷ ನಿಭಾಯಿಸುವ ಸ್ಪಿರಿಟ್ ಕಡಿಮೆಯಾಗಿದೆ ಎಂದು ತಮ್ಮ ಅನಿಸಿಕೆ ತಿಳಿಸಿದರು.

    ನಾವೆಲ್ಲ ಪರಿಸ್ಥಿತಿಯ ಶಿಶುಗಳು, ಹೀಗಾಗಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನು ಹೈಕಮಾಂಡ್‍ಗೆ ರವಾನಿಸಿದ್ದಾರೆ. ಎಲ್ಲ ನಾಯಕರಿಗೂ ತಮ್ಮ ತಪ್ಪುಗಳು ಕಾಣುತ್ತವೆ. ಆ ತಪ್ಪುಗಳನ್ನು ಒಪ್ಪಿಕೊಂಡು ಮುಂದುವರಿಯಬೇಕಿರುವುದು ತುಂಬಾ ಮುಖ್ಯ. ಈ ದೊಡ್ಡತನವನ್ನೇ ಯಡಿಯೂರಪ್ಪನವರು ಇಂದು ಪ್ರದರ್ಶಿಸುತ್ತಿದ್ದಾರೆ ಎಂದು ತಿಳಿಸಿದರು.

    ಎಲ್ಲವನ್ನು ಎದುರಿಸುವ ನಾಯಕ ಬರಬೇಕು:
    ಮುಖ್ಯಮಂತ್ರಿಗಳ ಜೊತೆಗೆ ಸಚಿವರೂ ಬದಲಾಗಬೇಕೆಂಬುದು ಹೊಸ ಮುಖ್ಯಮಂತ್ರಿ ಬಂದ ನಂತರದ ವಿಚಾರ. ಮುಂದೆ ಬರುವ ಮುಖ್ಯಮಂತ್ರಿ ಸರಿಯಾದ ಸಚಿವರನ್ನು ಆಯ್ಕೆ ಮಾಡಿಕೊಂಡು ಇಂದು ನಡೆಯುತ್ತಿರುವ ಯುದ್ಧವನ್ನು ಎದುರಿಸಬೇಕು. ಮಲ್ಲಯುದ್ಧಕ್ಕೆ ಯಾರನ್ನು ಬಿಡಬೇಕು, ಬಿಲ್ಲು, ಬಾಣ ಯಾರಿಗೆ ಕೊಡಬೇಕು, ಸೈನಿಕರನ್ನು ಯಾರು ನಿರ್ವಹಿಸಬೇಕು ಎಂಬುದನ್ನು ಕೃಡೀಕರಿಸಿ, ಎಲ್ಲವನ್ನು ಎದುರಿಸುವ ನಾಯಕ ಬರಬೇಕು ಎಂದು ತಿಳಿಸಿದರು.

  • ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

    ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

    ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕದ ವಿನಾಯಿತಿ ಕುರಿತು ಯಾವುದೇ ಪ್ರಸ್ತಾಪವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಈ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ದರ ಏರಿಕೆ ಕುರಿತು ಪ್ರಸ್ತಾಪಿಸಿದರು. ರಾಜ್ಯದಿಂದ ಸುಂಕ ವಿನಾಯಿತಿಯ ಪ್ರಸ್ತಾಪ ಇಲ್ಲ. ಆ ರೀತಿಯ ಯಾವುದೇ ವಿಚಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಮಹಾರಾಷ್ಟ್ರ ಮಾದರಿಯಲ್ಲಿ ಲಾಕ್‍ಡೌನ್ ಸಡಿಲಿಕೆ ಕುರಿತು ಮಾತನಾಡಿದ ಸಿಎಂ, ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಯಾವ ವಿನಾಯಿತಿ ಕೊಡಬೇಕು ಎಂದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಮೂಲಕ ಲಾಕ್‍ಡೌನ್ ಅವಧಿ ಮುಗಿದ ಕೂಡಲೇ ನಾನ್ ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ರಿಲ್ಯಾಕ್ಸೇಷನ್ ಕೊಡುವ ಸುಳಿವು ನೀಡಿದರು. ಇದನ್ನೂ ಓದಿ: ಅನ್‍ಲಾಕ್ ಸುಳಿವು ನೀಡಿದ್ರು ಸಿಎಂ ಯಡಿಯೂರಪ್ಪ

    ಮೈಸೂರು ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ, ಮುಖ್ಯ ಕಾರ್ಯದರ್ಶಿಗಳು ನಿನ್ನೆ ಹೋಗಿ ಚರ್ಚೆ ಮಾಡಿ ಬಂದಿದ್ದಾರೆ. ಈ ಸಂಬಂಧ ಮುಖ್ಯಕಾರ್ಯದರ್ಶಿಗಳು ಮಾಹಿತಿ ಕೊಟ್ಟಿದ್ದಾರೆ. ಮೈಸೂರು ವಿಚಾರದ ಬಗ್ಗೆ ಇಂದು ಸಂಜೆ ಕೂತು ಚರ್ಚೆ ಮಾಡುತ್ತೇವೆ. ಬಳಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಕಟ್ಟಡ ನಿರ್ಮಾಣ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರವು ಇಂದಿನಿಂದ ಲಾಕ್‍ಡೌನ್ ಪರಿಹಾರ ವಿತರಿಸುತ್ತಿದೆ. ಸಿಎಂ ಯಡಿಯೂರಪ್ಪ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಸಾಂಕೇತಿಕವಾಗಿ ಪರಿಹಾರದ ಹಣ ವರ್ಗಾಯಿಸುವ ಮೂಲಕ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಘೋಷಿಸಿದಂತೆ ಸುಮಾರು 25 ಲಕ್ಷ ಕಾರ್ಮಿಕರ ಪೈಕಿ ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಆರ್ಥಿಕ ನೆರವನ್ನು ಇಂದಿನಿಂದ ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಇದಕ್ಕಾಗಿ 749.55 ಕೋಟಿ ಪರಿಹಾರ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಕಾರ್ಮಿಕ ಇಲಾಖೆ ಇಂದು 3.5 ಲಕ್ಷ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರಿಗೆ ಪರಿಹಾರ ವಿತರಣೆ ಮಾಡಿದೆ.

    ಕ್ಷೌರಿಕರು, ಅಗಸರು, ಟೈಲರ್ ಗಳು, ಹಮಾಲರು, ಗೃಹ ಕಾರ್ಮಿಕರು, ಮೆಕ್ಯಾನಿಕ್ ಗಳು, ಚಿಂದಿ ಆಯುವವರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಸೇರಿದಂತೆ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ತಲಾ 2 ಸಾವಿರ ರೂ. ನೆರವು ಘೋಷಿಸಲಾಗಿದ್ದು, ಇದಕ್ಕಾಗಿ ಸೇವಾ ಸಿಂಧುವಿನಡಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 3.3 ಲಕ್ಷ ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ.

  • ಕೇಂದ್ರದಿಂದ 9 ಸಾವಿರ ಅಂಪೋಟೆರಿಸಿನ್ ಬಿ ವೈಯಲ್ಸ್ ಹಂಚಿಕೆ, ಅಗತ್ಯಾನುಸರ ಜಿಲ್ಲೆಗಳಿಗೆ ವಿತರಣೆ: ಸಿಎಂ

    ಕೇಂದ್ರದಿಂದ 9 ಸಾವಿರ ಅಂಪೋಟೆರಿಸಿನ್ ಬಿ ವೈಯಲ್ಸ್ ಹಂಚಿಕೆ, ಅಗತ್ಯಾನುಸರ ಜಿಲ್ಲೆಗಳಿಗೆ ವಿತರಣೆ: ಸಿಎಂ

    ಹುಬ್ಬಳ್ಳಿ: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬ್ಲಾಕ್ ಫಂಗಸ್ ಚಿಕಿತ್ಸೆಗಾಗಿ 9 ಸಾವಿರ ಅಂಪೋಟೆರಿಸಿನ್ ಬಿ ವೈಯಲ್ಸ್ ಹಂಚಿಕೆ ಮಾಡಲಾಗಿದೆ. ಅಗತ್ಯಾನುಸಾರ ಜಿಲ್ಲೆಗಳಿಗೆ ತ್ವರಿತವಾಗಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

    ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಕೋವಿಡ್ ಪ್ರಗತಿ ಪರಿಶೀಲನೆ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ. ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗಾಗಿ 600 ಆಕ್ಸಿಜನ್ ಬೆಡ್‍ಗಳನ್ನು ಮೀಸಲಿರಿಸಿದ್ದಾರೆ. ಕಿಮ್ಸ್‍ನ ತಾಯಿ, ಮಕ್ಕಳ ಆರೈಕೆ (ಎಂ.ಸಿ.ಹೆಚ್) ಆಸ್ಪತ್ರೆಯಲ್ಲಿ 400 ಬೆಡ್ ಕೋವಿಡ್ ಆಸ್ಪತ್ರೆಯನ್ನು ಮಕ್ಕಳಿಗಾಗಿ ನಿರ್ಮಿಸಲಾಗಿದೆ ಎಂದರು.

    ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಮರಣ ದರ ಶೇ.1.70 ಇದೆ. ರಾಜ್ಯದ ಸರಾಸರಿಗೆ ಹೋಲಿಸಿದರೆ ಹೆಚ್ಚಿದೆ, ಜಿಲ್ಲೆಯ ಮರಣ ದರ ತಗ್ಗಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವಂತೆ ನಿರ್ದೇಶನ ನೀಡಿದರು. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ಶೇ.10.66ಕ್ಕೆ ಇಳಿಕೆ- ಇಂದು 16,068 ಹೊಸ ಪ್ರಕರಣ, 364 ಸಾವು

    ಸೋಂಕು ಪತ್ತೆಯಾದ ತಕ್ಷಣ ಸೋಂಕಿತರ ಬಗ್ಗೆ ನಿಗಾ ವಹಿಸಿ ಚಿಕಿತ್ಸೆ ನೀಡಬೇಕು. ಹಳ್ಳಿಗಳಲ್ಲಿನ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ದಾಖಲಿಸಿ. ಮನೆಯಲ್ಲಿ ಇರಲು ಬಿಡಬೇಡಿ. ಗ್ರಾಮೀಣ ಭಾಗದ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಉತ್ತಮ ಆಹಾರ, ವೈದ್ಯಕೀಯ ಚಿಕಿತ್ಸೆ, ಔಷಧೋಪಚಾರ ಮಾಡಬೇಕು. ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಬ್ಲ್ಯಾಕ್ ಫಂಗಸ್ ಸಾವು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕೋವಿಡ್ ಲಸಿಕೆ ನೀಡುವುದನ್ನು ತ್ರೀವ್ರಗೊಳಿಸಬೇಕು. ಧಾರವಾಡ ಜಿಲ್ಲೆಯಲ್ಲಿ ಸದ್ಯ ಕೋವಿಡ್ ಸೋಂಕಿತರ ಖಚಿತ ಪ್ರಮಾಣ ಶೇ.11.9 ಇದೆ. ಇದನ್ನು ಶೇ.5ಕ್ಕೆ ಇಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು. ಕೋವಿಡ್ ಸೋಂಕಿನ ಖಚಿತ ಪ್ರಮಾಣ ಶೇ.5ಕ್ಕೆ ಇಳಿದರೆ ಲಾಕ್‍ಡೌನ್ ನಲ್ಲಿ ವಿನಾಯಿತಿ ನೀಡಲಾಗುವುದು. ಕೋವಿಡ್ ಸೋಂಕು ಹರಡದಂತೆ ತಡೆಯುವುದು ಜನರ ಕೈಯಲ್ಲೇ ಇದೆ. ಇನ್ನೆರಡು ದಿನದಲ್ಲಿ ರಾಜ್ಯಕ್ಕೆ ಅಗತ್ಯ ಕೋವಿಡ್ ವ್ಯಾಕ್ಸಿನ್ ಡೋಸ್ ಬರಲಿವೆ. ಇದರಿಂದ ವ್ಯಾಕ್ಸಿನ್ ಕೊರತೆ ನೀಗಲಿದೆ, ಸರ್ಕಾರದಿಂದಲೇ ಎಲ್ಲರಿಗೂ ಉಚಿತ ವ್ಯಾಕ್ಸಿನ್ ನೀಡಲಾಗುವುದು ಎಂದರು.

    ಪಕ್ಕದ 13 ಜಿಲ್ಲೆಗಳಿಂದ ಕೋವಿಡ್ ಗಂಭೀರ ಸ್ಥಿತಿ ತಲುಪಿದ ರೋಗಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ ಇತರೆ ಆಸ್ಪತ್ರೆ ದಾಖಲಿಸುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿ ಮರಣದ ಪ್ರಮಾಣ ಹೆಚ್ಚಾಗಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಯನ್ನು ಎ.ಬಿ.ಆರ್.ಕೆ ನೀಡಬೇಕು ಎಂದರು.

    ಕಿಮ್ಸ್‍ನಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಪೈಕಿ ಶೇ.65ರಷ್ಟು ಜನರಿಗೆ ಸರ್ಜರಿ ಆಗಿದೆ. ಬೇರೆ ಜಿಲ್ಲೆಗಳಿಂದ ರೋಗಿಗಳು ಸರ್ಜರಿಗೆ ಆಗಮಿಸುತ್ತಾರೆ. ಸರ್ಜರಿ ಅನುಕೂಲವಾಗುವ ವೈದ್ಯಕೀಯ ಪರಿಕರಗಳನ್ನು ಕಿಮ್ಸ್‍ಗೆ ಒದಗಿಸಬೇಕು. ಲಾಕ್‍ಡೌನ್ ಮುಂದುವರಿದರೆ ಆಹಾರ ಪದಾರ್ಥಗಳ ಸರಬರಾಜು ಸರಪಳಿಗೆ ತೊಂದರೆ ಆಗಲಿದೆ. ಹೀಗಾಗಿ ಕಿರಾಣಿ ಅಂಗಡಿಗಳಿಗೆ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಹೆಚ್ಚಿನ ದರ ಪಡೆಯುತ್ತಾರೆ. ಇದಕ್ಕೆ ಕಡಿವಾಣ ಹಾಕುವಂತೆ ಶಾಸಕ ಪ್ರಸಾದ್ ಅಬ್ಬಯ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

    ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಕುಂದಗೋಳ ತಾಲೂಕಿನಲ್ಲಿ ವೈದ್ಯರ ಕೊರತೆ ನೀಗಿಸುವಂತೆ ಕೋರಿದರು.

    ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಸಭೆಯಲ್ಲಿ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ಕಳೆದ ಮೇ ಮೊದಲ ವಾರದಲ್ಲಿ ಕೋವಿಡ್ ಪಾಸಿಟಿವ್ ದರ ಶೇ.39.2 ಕ್ಕೆ ಏರಿತ್ತು. ವ್ಯಾಪಕ ನಿಯಂತ್ರಣ ಕ್ರಮಗಳಿಂದ ಇದೀಗ ಅದು 11.9ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಇದೀಗ 4,385 ಸಕ್ರಿಯ ಪ್ರಕರಣಗಳಿವೆ. 600 ಜನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ, 1,500 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣರಹಿತ ಸೋಂಕಿತರು ಮನೆಗಳಲ್ಲಿ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ 20 ಲಕ್ಷ ಜನಸಂಖ್ಯೆಯಲ್ಲಿ ಸುಮಾರು 9 ಲಕ್ಷ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 10 ದಿನಗಳಲ್ಲಿ ನಗರ ಪ್ರದೇಶದ ಶೇ.41 ಹಾಗೂ ಗ್ರಾಮೀಣ ಪ್ರದೇಶದ ಶೇ.58 ರಷ್ಟು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಆಸ್ಪತ್ರೆಗಳಿಗೆ ರೆಮ್‍ಡಿಸಿವಿರ್ ಹಾಗೂ ಅಂಪೊಟೋರಿಸಿನ್-ಬಿ ಔಷಧಿಗಳನ್ನು ಸಮಪರ್ಕವಾಗಿ ಪೂರೈಸಲಾಗುತ್ತಿದೆ. ಇದುವರೆಗೆ 3,31,717 ಜನರಿಗೆ ಲಸಿಕೆ ಹಾಕಿಸಲಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ 1,215 ಜನರಿಗೆ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಅಡಿ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದಕಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

    ಬ್ಲ್ಯಾಕ್ ಫಂಗಸ್ ಗೆ ರಾಜ್ಯ ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕದಡಿ ಬ್ಲಾಕ್ ಫಂಗಸ್ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಕಿಮ್ಸ್‍ನಲ್ಲಿ ಬ್ಲಾಕ್ ಫಂಗಸ್ ಸರ್ಜರಿಗೆ ಬೇಕಾದ ವೈದ್ಯಕೀಯ ಪರಿಕರಗಳನ್ನು ತಕ್ಷಣವೇ ಖರೀದಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾರಿ ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿ ಮರಣ ಹೊಂದಿದರೆ ಕೋವಿಡ್ ನಂತಹ ಮರಣ ಎಂದೇ ಪರಿಗಣಿಸಲಾಗುವುದು. ಸಾರಿ ಲಕ್ಷಣಗಳಿಂದ ತಂದೆ, ತಾಯಿ ಮೃತಪಟ್ಟರೆ, ಮಕ್ಕಳಿಗೆ ಸರ್ಕಾರದಿಂದ ಎಲ್ಲ ಸವಲತ್ತುಗಳನ್ನು ನೀಡಲಾಗುವುದು. ಅಂಪೋಟೆರಿಸನ್ ಬಿ ಲಸಿಕೆಯನ್ನು ಕಾಳಸಂತೆ ಮಾರಾಟ ಮಾಡಿದರೆ ಐ.ಎಫ್.ಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಉಪಮುಖ್ಯಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗಣಿ ಮತ್ತು ಭೂ ವಿಜ್ಞಾನ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಶಂಕರ್ ಪಾಟೀಲ್ ಮುನೇನಕೊಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮೋಹನ್ ಲಿಂಬಿಕಾಯಿ, ವಾ.ಕ.ರ.ಸಾ.ಸಂ ಅಧ್ಯಕ್ಷ ವಿ.ಎಸ್.ಪಾಟೀಲ್, ಶಾಸಕರಾದ ಶ್ರೀನಿವಾಸ ಮಾನೆ, ಅರವಿಂದ ಚಂದ್ರಕಾತ್ ಬೆಲ್ಲದ್, ಎಸ್.ವಿ.ಸಂಕನೂರ, ಅಮೃತ ದೇಸಾಯಿ, ಸಿ.ಎಂ.ನಿಂಬಣ್ಣವರ, ಪ್ರದೀಪ್ ಶೆಟ್ಟರ್, ಕೃಷಿ ಉತ್ಪನ್ ರಫ್ತು ನಿಗಮದ ಅಧ್ಯಕ್ಷ ಎಸ್.ಐ.ಚಿಕ್ಕನಗೌಡ್ರ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಡಾ.ರವಿಕುಮಾರ್ ಸುರಪುರ, ಜಿ.ಪಂ.ಸಿ.ಇ.ಓ ಡಾ.ಬಿ.ಸುಶೀಲ, ಪೋಲಿಸ್ ಆಯುಕ್ತ ಲಾಬುರಾಮ್, ಪಾಲಿಕೆ ಆಯುಕ್ತ ಡಾ. ಸುರಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಡೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಶವಂತ ಮದನೀಕರ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗ ಅಂಟರಠಾಣಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

  • ಸದ್ಯ ಯಡಿಯೂರಪ್ಪನವರೇ ಸಿಎಂ, ನಾಳೆ ನನಗೆ ಗೊತ್ತಿಲ್ಲ: ಸಿ.ಟಿ.ರವಿ

    ಸದ್ಯ ಯಡಿಯೂರಪ್ಪನವರೇ ಸಿಎಂ, ನಾಳೆ ನನಗೆ ಗೊತ್ತಿಲ್ಲ: ಸಿ.ಟಿ.ರವಿ

    ಮೈಸೂರು: ಸದ್ಯಕ್ಕೆ ಯಡಿಯೂರಪ್ಪನರೇ ಮುಖ್ಯಮಂತ್ರಿ, ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ. ನಾನು ವರ್ತಮಾನದ ಬಗ್ಗೆ ಮಾತ್ರ ಮಾತನಾಡಬಲ್ಲೆ. ನಾಳೆ, ನಾಡಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ.

    ಸಿಎಂ ಬದಲಾವಣೆ ಕುರಿತು ಮಾತನಾಡಿದ ಅವರು, ಬಿಜೆಪಿ ಸರ್ವಾನುಮತದಿಂದ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಈಗ ಯಡಿಯೂರಪ್ಪನವರೇ ಇದ್ದಾರೆ, ಮುಂದೆ ಗೊತ್ತಿಲ್ಲ. ನನ್ನ ಭವಿಷ್ಯವೇ ಭಗವಂತನಿಗೆ ಗೊತ್ತು, ನನಗೆ ಗೊತ್ತಿಲ್ಲ. ಹೀಗಾಗಿ ವರ್ತಮಾನದ ಬಗ್ಗೆ ಮಾತ್ರ ಮಾತನಾಡ ಬಲ್ಲೆ. ಕಾಲ ಕಾಲಕ್ಕೆ ಪಕ್ಷ ನಿರ್ನಯ ಕೈಗೊಳ್ಳುತ್ತದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಬಹುಮತದಿಂದ ಮುಖ್ಯಮಂತ್ರಿ ಆಯ್ಕೆ ಮಾಡಬಹುದು. ಆದರೆ ಸರ್ವಾನುಮತದಿಂದ ಸಾಧ್ಯವಿಲ್ಲ, ನಾವು ಸರ್ವಾನುಮತದಿಂದ ಆಯ್ಕೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ನಾವು ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡಲ್ಲ: ಡಿಕೆಶಿ

    ಯಾರು ದೆಹಲಿಗೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಚಾರ ನನಗೇನು ಗೊತ್ತಿಲ್ಲ, ನನಗೆ ಸಂಬಂಧವಿಲ್ಲ. ವಿಜಯೇಂದ್ರ ಅವರು ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದು ಸಹ ಗೊತ್ತಿಲ್ಲ. ವೈಯಕ್ತಿಕ ಕಾರಣಕ್ಕೂ ಹೋಗಿರಬಹುದು. ಸದ್ಯ ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡುವುದರಿಂದ ಜಾರಿಕೊಂಡರು.

  • ಜೂನ್ 5, 6ರ ಪರಿಸ್ಥಿತಿ ಮೇಲೆ ಲಾಕ್‍ಡೌನ್ ನಿರ್ಧಾರ – ಸಿಎಂ ಬಿಎಸ್‍ವೈ

    ಜೂನ್ 5, 6ರ ಪರಿಸ್ಥಿತಿ ಮೇಲೆ ಲಾಕ್‍ಡೌನ್ ನಿರ್ಧಾರ – ಸಿಎಂ ಬಿಎಸ್‍ವೈ

    ಬೆಂಗಳೂರು: ಲಾಕ್‍ಡೌನ್ ವಿಸ್ತರಣೆ ಮಾಡಿ ಎಂದು ತಜ್ಞರು ಯಾವುದೇ ವರದಿ ಕೊಟ್ಟಿಲ್ಲ. ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ.

    ಇಂದು ಬೆಂಗಳೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಲಾಕ್‍ಡೌನ್ ಕುರಿತಂತೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೂನ್ 5, 6 ರ ವೇಳೆಗೆ ಪರಿಸ್ಥಿತಿ ನೋಡಿಕೊಂಡು, ತಜ್ಞರ ಜತೆ, ಸಚಿವರ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

    ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಜಾಸ್ತಿ ಇದೆ. ಅಲ್ಲದೆ ಲಾಕ್ಡೌನ್ ವಿಸ್ತರಣೆ ಮಾಡಿ ಅಂತ ತಜ್ಞರು ಸದ್ಯ ಯಾವುದೇ ವರದಿ ಕೊಟ್ಟಿಲ್ಲ. ಹೀಗಾಗಿ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

    ಕೇಂದ್ರ ಸರ್ಕಾರ ಕೂಡ ಆಯಾ ರಾಜ್ಯಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಸೂಚಿಸಿದೆ. ಹೀಗಾಗಿ ನಾವು ಸಹ ಇಲ್ಲಿನ ಪರಿಸ್ಥಿತಿ ನೋಡಿಕೊಂಡು ನಿರ್ಧಸುತ್ತೇವೆ. ಸದ್ಯ ಎರಡನೇ ಹಂತದ ಪರಿಹಾರ ಪ್ಯಾಕೇಜ್ ರೆಡಿಯಾಗುತ್ತಿದೆ ಎಂದು ಹೇಳಿದರು.

    ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಇಂದು ಏಳು ವರ್ಷ ತುಂಬಿದ ಹಿನ್ನೆಲೆ ಸಿಎಂ ಯಡಿಯೂರಪ್ಪನವರು ತಮ್ಮ ಕಾವೇರಿ ನಿವಾಸ ಬಳಿ ಪೌರಕಾರ್ಮಿಕರಿಗೆ ಫುಡ್ ಕಿಟ್ ವಿತರಿಸಿದರು.

  • ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದಿದ್ದೆವು- ಯೋಗೆಶ್ವರ್‌ಗೆ ರಾಜೂಗೌಡ ಟಾಂಗ್

    ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದಿದ್ದೆವು- ಯೋಗೆಶ್ವರ್‌ಗೆ ರಾಜೂಗೌಡ ಟಾಂಗ್

    ಯಾದಗಿರಿ: ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮೊದಲೇ ಹೇಳಿದ್ದೆವು. ಆದರೆ ಅವರು ನಮ್ಮನ್ನು ಕೇಳದೆ ಇಂತಹವರನ್ನು ಮಂತ್ರಿ ಮಾಡಿದರು. ಈಗ ಅವರೇ ದೆಹಲಿಗೆ ಹೋಗಿ ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ಶಾಸಕ ರಾಜೂಗೌಡ ಪರೋಕ್ಷವಾಗಿ ಸಿ.ಪಿ.ಯೋಗಶ್ವರ್ ಗೆ ಟಾಂಗ್ ನೀಡಿದರು.

    ಜಿಲ್ಲೆಯ ಹುಣಸಗಿ ತಾಲೂಕಿನ ರಾಜನ್ನಕೊಳ್ಳೂರಿನಲ್ಲಿ ಮಾತನಾಡಿದ ಅವರು, ಸೋತವರನ್ನು ಮಂತ್ರಿ ಮಾಡಿದ್ದಾರೆ, ಅವರಿಗೆ ಕ್ಷೇತ್ರವಿಲ್ಲ, ಜವಾಬ್ದಾರಿ ಇಲ್ಲ. ಅದಕ್ಕೆ ಇಂತಹ ಕೆಲಸ ಮಾಡುತ್ತಿದ್ದಾರೆ. ನಿಮಗೆ ಯಡಿಯೂರಪ್ಪ ಅವರ ಮಂತ್ರಿ ಮಂಡಲ ಬೇಕು, ಕೆಂಪುಗೂಟದ ಕಾರ್ ಬೇಕು ಆದರೆ ಯಡಿಯೂರಪ್ಪ ಬೇಡ ಅಂದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಲವು ನಾಯಕರನ್ನು ಪ್ರಶ್ನಿಸುತ್ತೇನೆ, ಇಂತಹ ಕೊರೊನಾ ಸಂಕಷ್ಟದಲ್ಲಿ ದೆಹಲಿಗೆ ಹೋಗುವ ಅವಶ್ಯಕತೆ ಇದೆಯಾ? ಸಣ್ಣತನದ ರಾಜಕೀಯ ಮಾಡೋಕೆ ನಿಮ್ಮ ಮನಸು ಹೇಗೆ ಒಪ್ಪುತ್ತೆ, ರಾಜ್ಯದ ಬಗ್ಗೆ ಅಷ್ಟು ಕಾಳಜಿ ಇರೋರು ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆ ಇದ್ದಾಗ, ರಾಜ್ಯದಲ್ಲಿ ರೆಮ್‍ಡಿಸಿವಿರ್ ಕೊರತೆ ಇದ್ದಾಗ ದೆಹಲಿಗೆ ಹೋಗಬೇಕಿತ್ತು. ಹೈಕಮಾಂಡ್ ಇಂತಹವರ ಮಾತು ಕೇಳಬಾರದು, ಇಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಪಕ್ಷದ ಮಾನ ಮರ್ಯಾದೆ ಹರಾಜು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಕಳ್ಳ, 420 ಯೋಗೇಶ್ವರ್‌ರನ್ನು ವಜಾ ಮಾಡಬೇಕು, ನಾಯಕತ್ವ ಬದಲಾವಣೆ ಸುಳ್ಳು: ರೇಣುಕಾಚಾರ್ಯ

    ಕಳ್ಳ, 420 ಯೋಗೇಶ್ವರ್‌ರನ್ನು ವಜಾ ಮಾಡಬೇಕು, ನಾಯಕತ್ವ ಬದಲಾವಣೆ ಸುಳ್ಳು: ರೇಣುಕಾಚಾರ್ಯ

    ಬೆಂಗಳೂರು: ಸಚಿವ ಯೋಗೇಶ್ವರ್ 420, ಮೆಗಾ ಸಿಟಿ ಕಳ್ಳ, ಅವರ ರಾಜೀನಾಮೆ ಪಡೆದು, ವಜಾ ಮಾಡಬೇಕು ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ರಾಜ್ಯದ ನಾಯಕರು, ಅಧ್ಯಕ್ಷರು ಆ ರೀತಿ ಇಲ್ಲ. ಕೊರೊನಾ ಸಂದರ್ಭದಲ್ಲಿ ಜನ ಸಾಯುತ್ತಿದ್ದಾರೆ. ಈ ಸಂದರ್ಭದಕಲ್ಲಿ ರಾಜಕೀಯ ಮಾತನಾಡಲು ನನಗೆ ನಾಚಿಕೆಯಾಗುತ್ತದೆ ಎಂದರು.

    ಯಾರೀ 420 ಸಿ.ಪಿ. ಯೋಗೇಶ್ವರ್, ಯಾರೀ ಅವರು ಬಿಜೆಪಿಗೆ, ನಾವು ಮೂಲತಃ ಬಿಜೆಪಿಯವರು ಹೋರಾಟದಿಂದ ಬಂದಿದ್ದೇವೆ. ಇವರು ಕಾಂಗ್ರೆಸ್‍ನಿಂದ ಬಂದು ಅರಣ್ಯ ಸಚಿವರಾದರು, ಲೂಟಿ ಹೊಡೆದರು. ಅಲ್ಲದೆ ಸದಾನಂದಗೌಡರಿಗೂ ಮೋಸ ಮಾಡಿದರು. ಅವರು ಪಕ್ಷಾಂತರ, ಮೆಗಾ ಸಿಟಿ ದೊಡ್ಡ ಕಳ್ಳ. ಮುಖ್ಯಮಂತ್ರಿಗಳು ಅಂದೇ ಕಠಿಣ ನಿರ್ಧಾರ ತೆಗೆದುಕೊಂಡು ಅವನನ್ನು ಹೊರಗೆ ಹಾಕಬಹುದಿತ್ತು. ಈ ರೀತಿ ನಾಟಕ ಆಡುತ್ತಿದ್ದಾರೆ ಎಂದರೆ ಸಹಿಸಲು ಸಾಧ್ಯವಿಲ್ಲ ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

    ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಇವರ ರಾಜೀನಾಮೆ ಪಡೆದು, ವಜಾ ಮಾಡಬೇಕು. ನಾನು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಂಬುಲೆನ್ಸ್, ಬೆಡ್, ಆಹಾರ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡುತ್ತಿದ್ದೇನೆ, ಒಂದು ನಿಮಿಷ ಸಹ ಬಿಡುವಿಲ್ಲ ಎಂದರು.

    ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಲ್.ಸಂತೋಷ್, ಅರುಣ್ ಸಿಂಗ್ ಸೇರಿದಂತೆ ಬಹುತೇಕ ಬಿಜೆಪಿ ನಾಯಕರು ಮುಖ್ಯಮಂತ್ರಿಗಳನ್ನು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೊಗಳಿದ್ದಾರೆ. ಆದರೆ ಇದೀಗ ಇವರು ಪ್ರಹ್ಲಾದ್ ಜೋಷಿ ಹೆಸರು ಹೇಳಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ. ಪ್ರಹ್ಲಾದ್ ಜೋಷಿಯವರನ್ನು ನಾವೂ ಭೇಟಿ ಮಾಡಿದ್ದವು. ನಾನು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 24ಗಂಟೆ ಕೆಲಸ ಮಾಡಿ, ರಾಜ್ಯಕ್ಕೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದೇನೆ, ರಾಜ್ಯ ರಾಜಕಾರಣ ನನಗೆ ಭೇಡ ಎಂದು ಅವರು ನನ್ನ ಬಳಿ ಹೇಳಿದ್ದಾರೆ. ಇದೀಗ ಅವರ ಹೆಸರು ಹೇಳಿಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈಶ್ವರಪ್ಪ ತಮ್ಮ ಇಲಾಖೆ ಬಗ್ಗೆ ಮಾತ್ರ ಪತ್ರ ಬರೆದಿದ್ದರು. ನಾಯಕತ್ವ, ಸಂಘಟನೆ ಬಗ್ಗೆ ಅವರ ತಕರಾರಿಲ್ಲ. ಬಸನಗೌಡ ಪಾಟೀಲ್ ಬೇರೆ ಅವರ ಬಗ್ಗೆ ಮಾತನಾಡುವುದಿಲ್ಲ. ಆದರೆ ಯೋಗೇಶ್ವರ್ ಯಾರೀ 420, ಮೆಗಾ ಸಿಟಿ ಕಳ್ಳರನ್ನು ಮಂತ್ರಿ ಮಾಡಬೇಡಿ ಎಂದು ಹೇಳಿದ್ದೆವು. ಗೇಟ್ ಹತ್ತಿರ ಹೋಗಿ ಫೋಟೋ ತೆಗೆಸಿ, ವೀಡಿಯೋ ಮಾಡಿಕೊಂಡು ಬಿಡುತ್ತಿದ್ದಾರೆ. ಅವರು ಯಾವ ನಾಯಕರನ್ನೂ ಭೇಟಿ ಮಾಡಿರುವುದಿಲ್ಲ. ಅವರಿಗೆ ಯೋಗ್ಯತೆ ಇದೆ ಏನ್ರಿ, ಚೆನ್ನಪಟ್ಟಣ್ಣದಲ್ಲಿ ಸೋತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ನಾವು ದೆಹಲಿಗೆ ಹೋದಾಗ ಬಹುತೇಕ ನಾಯಕರನ್ನು ಭೇಟಿ ಮಾಡಿದ್ದೇವೆ. ನಾಯತ್ವ ಬದಲಾವಣೆ ಸುಳ್ಳು, ಸಾಧ್ಯವಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

    ಕೋವಿಡ್ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾಡಬಾರದು. ನನ್ನ ಕಣ್ಣೆದುರಿಗೇ ಹಲವು ಜನರು ಸಾವನ್ನಪ್ಪುತ್ತಿದ್ದಾರೆ. ಕಣ್ಣಲ್ಲಿ ನೀರು ಬರುತ್ತಿದೆ, ಕ್ಷೇತ್ರದ ಜನತೆಗೆ ವೆಂಟಿಲೇಟರ್, ಆಕ್ಸಿನ್ ಕೊರತೆಯನ್ನು ನೀಗಿಸುತ್ತಿದ್ದೇನೆ. ನಾನು ರಾತ್ರಿ 1 ಗಂಟೆಗೆ ಮಲಗಿ ಈಗ ತಿಂಡಿ ತಿಂದು ಮತ್ತೆ ಕೆಲಸಕ್ಕೆ ತೆರಳುತ್ತಿದ್ದೇನೆ ಎಂದರು.

  • ಗೋಲ್ಡ್ ಮನ್ ಸ್ಯಾಕ್ಸ್ ಕಂಪನಿಯಿಂದ 20 ಕೋಟಿ ರೂ. ವೈದ್ಯಕೀಯ ಸೌಕರ್ಯಗಳ ನೆರವು

    ಗೋಲ್ಡ್ ಮನ್ ಸ್ಯಾಕ್ಸ್ ಕಂಪನಿಯಿಂದ 20 ಕೋಟಿ ರೂ. ವೈದ್ಯಕೀಯ ಸೌಕರ್ಯಗಳ ನೆರವು

    ಬೆಂಗಳೂರು: ಬ್ಯಾಂಕಿಂಗ್, ಸೆಕ್ಯುರಿಟೀಸ್ ಮತ್ತು ಹೂಡಿಕೆ ನಿರ್ವಹಣಾ ಸಂಸ್ಥೆ ಗೋಲ್ಡ್ ಮನ್ ಸ್ಯಾಕ್ಸ್ ನ ಪ್ರತಿನಿಧಿಗಳು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿಯಾಗಿ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆ ಮತ್ತು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ. ಮೌಲ್ಯದ ವಿವಿಧ ವೈದ್ಯಕೀಯ ಸೌಕರ್ಯಗಳ ನೆರವು ನೀಡುವುದಾಗಿ ತಿಳಿಸಿದರು.

    ಗೋಲ್ಡ್ ಮನ್ ಸ್ಯಾಕ್ಸ್ ವತಿಯಿಂದ ಬೆಂಗಳೂರಿನ 4 ಆಸ್ಪತ್ರೆಗಳಲ್ಲಿ ಒಟ್ಟು 250 ಆಧುನಿಕ ಸೌಕರ್ಯಗಳ ಹಾಸಿಗೆಗಳು, ಸೈಂಟ್ ಜಾನ್ಸ್ ಆಸ್ಪತ್ರೆಗೆ 50 ಐಟಿಯು ಹಾಸಿಗೆಗಳು, ಪ್ರಕ್ರಿಯಾ ಆಸ್ಪತ್ರೆಯಲ್ಲಿ 5 ಐಸಿಯು ಬೆಡ್ ಸೇರಿದಂತೆ ಕೋವಿಡ್ ಆರೈಕೆ ಕೇಂದ್ರಕ್ಕೆ 50 ಹಾಸಿಗೆಗಳು, ಹೆಚ್.ಎ.ಎಲ್ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದ ಕಾರ್ಯಗಳಿಗೆ ಪೂರಕವಾಗಿ 50 ಹಾಸಿಗೆಗಳು ಮತ್ತು ನಾರಾಯಣ ಹೆಲ್ತ್ ಆಸ್ಪತ್ರೆಗೆ 120 ಎಚ್‍ಡಿಯು ಹಾಸಿಗೆಗಳನ್ನು ನೀಡಲಾಗುತ್ತಿದೆ. ಸುಮಾರು 7 ಕೋಟಿ ರೂ. ವೆಚ್ಚದ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ರಾಜ್ಯಾದ್ಯಂತ ವಿತರಿಸುವುದಾಗಿ ಸಂಸ್ಥೆ ತಿಳಿಸಿದೆ.

    ಗೋಲ್ಡ್ ಮನ್ ಸ್ಯಾಕ್ಸ್ ಸರ್ವೀಸಸ್ ಇಂಡಿಯಾದ ಮುಖ್ಯಸ್ಥ ಗುಂಜನ್ ಸಂತಾನಿ ಮತ್ತು ಮುಖ್ಯ ಆಡಳಿತಾಧಿಕಾರಿ ರವಿ ಕೃಷ್ಣನ್, ಮುಖ್ಯಮಂತ್ರಿಗಳ ಸಲಹೆಗಾರ ಪ್ರಶಾಂತ್ ಪ್ರಕಾಶ್ ಮತ್ತು ನೋಡಲ್ ಅಧಿಕಾರಿ ಮತ್ತು ಡಿಐಪಿಆರ್ ಆಯುಕ್ತ ಡಾ.ಪಿ.ಎಸ್. ಹರ್ಷ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಶಾಸಕಾಂಗ ಸಭೆ ಕುರಿತು ಚರ್ಚೆ ನಡೆದಿಲ್ಲ, ನಾಯಕತ್ವ ಬದಲಾವಣೆ ಸತ್ಯಕ್ಕೆ ದೂರವಾದ ಮಾತು: ಅಶ್ವಥ್ ನಾರಾಯಣ್

    ಶಾಸಕಾಂಗ ಸಭೆ ಕುರಿತು ಚರ್ಚೆ ನಡೆದಿಲ್ಲ, ನಾಯಕತ್ವ ಬದಲಾವಣೆ ಸತ್ಯಕ್ಕೆ ದೂರವಾದ ಮಾತು: ಅಶ್ವಥ್ ನಾರಾಯಣ್

    – ಯಡಿಯೂರಪ್ಪನವರೇ ನಮ್ಮ ನಾಯಕರು

    ಬೆಂಗಳೂರು: ಹೈ ಕಮಾಂಡ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಸೂಚಿಸಿಲ್ಲ. ನಾಯಕತ್ವ ಬದಲಾವಣೆ ಆಗುವುದು ಸತ್ಯಕ್ಕೆ ದೂರವಾದ ಮಾತು ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

    ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜೂನ್ 7ರಂದು ಹೈ ಕಮಾಂಡ್ ಶಾಸಕಾಂಗ ಪಕ್ಷದ ಸಭೆ ಕರೆಯಲು ಸೂಚಿಸಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಹೈಕಮಾಂಡ್ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಸೂಚಿಸಿಲ್ಲ. ನಾಯಕತ್ವ ಬದಲಾವಣೆ ಆಗುವುದು ಸತ್ಯಕ್ಕೆ ದೂರವಾದ ಮಾತು. ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಆರ್.ಎಸ್.ಎಸ್. ನಾಯಕರು ಚರ್ಚೆ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಶಾಸಕಾಂಗ ಸಭೆ ಕರೆಯುವ ಬಗ್ಗೆ ಹೈ ಕಮಾಂಡ್‍ನಿಂದ ಯವುದೇ ಸೂಚನೆ ಬಂದಿಲ್ಲ. ಈ ಸುದ್ದಿ ಹೇಗೆ ತಿಳಿಯಿತು ಎಂಬುದು ನನಗೆ ಗೊತ್ತಿಲ್ಲ. ಕೆಲವರು ದೆಹಲಿಗೆ ಹೋಗಿದ್ದಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಆದರೆ ಆ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ ನಾಯಕತ್ವ ಬದಲಾವಣೆ ಕುರಿತು ಮಾಹಿತಿ, ಸೂಚನೆಯಾಗಲಿ ನಮಗೆ ಬಂದಿಲ್ಲ. ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ, ಕೋವಿಡ್ ನಿರ್ವಹಣೆಯಲ್ಲಿ ಇಡೀ ನಮ್ಮ ವ್ಯವಸ್ಥೆ ಕೆಲಸ ಮಾಡುತ್ತಿದೆ.

    ಸಂಘ ಪರಿವಾರದವರು ಅಭಿವೃದ್ಧಿ ಕೆಲಸದ ಕುರಿತು ಮಾತ್ರ ಚರ್ಚಿಸುತ್ತಾರೆ. ರಾಜಕೀಯ, ರಾಜಕೀಯದ ಬದಲಾವಣೆ ಕುರಿತು ಯಾವುದೇ ರೀತಿ ಚರ್ಚೆ ನಡೆಯುವುದಿಲ್ಲ. ಕೋವಿಡ್ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಯಾವ ರೀತಿ ಉತ್ತಮವಾಗಿ ಕೆಲಸ ಮಾಡಬಹುದು, ನಾವು ಹೇಗೆ ಮಾಡಿದ್ದೇವೆ ಎಂಬುದನ್ನು ಮಾತ್ರ ಆರ್‍ಎಸ್‍ಎಸ್ ನಾಯಕರು ತಿಳಿಸುತ್ತಾರೆ. ಇದೀಗ ನಮ್ಮ ಕಾರ್ಯಕರ್ತರು ನಾಯಕರು ಸಂಪೂರ್ಣವಾಗಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದು, ಮನೆ ಮನೆಗಳಿಗೆ ಜನರ ಸೇವೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ, ನಮ್ಮ ಸಂಘಟನೆ ಎಲ್ಲವೂ ಸಂಪೂರ್ಣವಾಗಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿದ್ದೇವೆ ಎಂದರು.

  • ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ 5 ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಿ- ಸಿಎಂಗೆ ಸೋಮಶೇಖರ್ ಪತ್ರ

    ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ 5 ವರ್ಷ ಗ್ರಾಮೀಣ ಸೇವೆ ಕಡ್ಡಾಯ ಮಾಡಿ- ಸಿಎಂಗೆ ಸೋಮಶೇಖರ್ ಪತ್ರ

    ಬೆಂಗಳೂರು: ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಎಸ್.ಟಿ.ಸೋಮಶೇಖರ್ ಪತ್ರ ಬರೆದಿದ್ದಾರೆ.

    ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪಡೆಯುವವರಿಗೆ ಕನಿಷ್ಟ 5 ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

    ಈ ಹಿಂದೆ ಸಹ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಸರ್ಕಾರಿ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಮಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ವೈದ್ಯಕೀಯ ಪದವಿ ಪಡೆಯುವವರಿಗೆ ಇಂಟರ್ನ್‍ಶಿಪ್ ಅಥವಾ ಇಂತಿಷ್ಟು ವರ್ಷಗಳ ಕಾಲ ಗ್ರಾಮೀಣ ಸೇವೆ ಕಡ್ಡಾಯ ಮಾಡಬೇಕು ಎಂದು ಹಲವರು ಧ್ವನಿ ಎತ್ತಿದ್ದರು. ಇದಕ್ಕೆ ಕೆಲವರು ವಿರೋಧ ಸಹ ವ್ಯಕ್ತಪಡಿಸಿದ್ದರು. ಇದೀಗ ಸಚಿವ ಎಸ್.ಟಿ.ಸೋಮಶೇಖರ್ ಅವರು ಸಿಎಂಗೆ ಪತ್ರ ಬರೆಯುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

    ಪತ್ರದಲ್ಲಿ ಏನಿದೆ?
    ನಮ್ಮ ರಾಜ್ಯದಲ್ಲಿ ಪ್ರತಿಭಾವಂತರಿಗೇನೂ ಕೊರತೆ ಇಲ್ಲ. ಹಾಗೇ ರಾಜ್ಯ ಸರ್ಕಾರ ಸಹ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ಸಹಕಾರವನ್ನು ನೀಡುತ್ತಾ ಬಂದಿದೆ. ಇದಕ್ಕೆ ವೈದ್ಯಕೀಯ ಶಿಕ್ಷಣ ರಂಗವೂ ಹೊರತಾಗಿಲ್ಲ. ಪ್ರತಿ ವರ್ಷ ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರ ಅಗಾಧವಾಗಿ ಖರ್ಚು ಮಾಡುತ್ತಾ ಬಂದಿದೆ. ಸರ್ಕಾರಿ ಕೋಟಾದಲ್ಲಿ ಓದುವ ಒಬ್ಬ ವೈದ್ಯಕೀಯ ವಿದ್ಯಾರ್ಥಿ ವಿದ್ಯಾಭ್ಯಾಸ ಅವಧಿಯನ್ನು ಮುಗಿಸುವ ಹೊತ್ತಿಗೆ ಸರ್ಕಾರದಿಂದ 40 ರಿಂದ 50 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಸರ್ಕಾರ ಇಷ್ಟೆಲ್ಲಾ ವೆಚ್ಚ ಮಾಡಿದರೂ ನಮ್ಮ ಪ್ರತಿಭೆಗಳು ನಮಗೆ ದಕ್ಕುತ್ತಿಲ್ಲ. ಕೆಲವು ವೈದ್ಯರು ನಮ್ಮ ಸೌಲಭ್ಯವನ್ನು ಪಡೆದು, ಕಲಿತು ವಿದೇಶಗಳಿಗೆ ಹೋಗಿ ಅಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹೀಗಾಗಿ ನಮ್ಮ ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗುತ್ತಿದೆ. ತಮ್ಮ ಕಾಲಾವಧಿಯಲ್ಲಿ ಇಂಥದ್ದೊಂದು ಪ್ರಕ್ರಿಯೆಗೆ ಕಡಿವಾಣ ಬೀಳಬೇಕಿದೆ. ನಮ್ಮ ಪ್ರತಿಭೆಗಳು ನಮ್ಮಲ್ಲಿಯೇ ಸೇವೆ ಸಲ್ಲಿಸುವಂತಾಗಬೇಕು. ಪ್ರತಿಭಾ ಪಲಾಯನ ನಿಲ್ಲುವಂತಾಗಬೇಕು.

    ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಈ ಮೂಲಕ ನಮ್ಮ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಸಹ ನುರಿತ ತಜ್ಞ ವೈದ್ಯರ ಸೇವೆ ಲಭಿಸಬೇಕು. ಇಂದು ಹಳ್ಳಿ ಎಂದರೆ ಮೂಗು ಮುರಿಯುವ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಹಳ್ಳಿ ಸಶಕ್ತವಾಗಿದ್ದರೆ, ಆರೋಗ್ಯವಾಗಿದ್ದರೆ ದೇಶದ ಅಭಿವೃದ್ಧಿ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಿದೆ. ಹಳ್ಳಿಗಳಲ್ಲಿ ಕೆಲಸ ಮಾಡುವ ಮನೋಭಾವಕ್ಕೆ ನಾವು ಪ್ರೋತ್ಸಾಹ ನೀಡಬೇಕಿದ್ದು, ಇದಕ್ಕೊಂದು ಸೂಕ್ತ ಕಾನೂನು ಚೌಕಟ್ಟು ನಿರ್ಮಾಣ ಮಾಡುವುದು ಮುಖ್ಯವಾಗುತ್ತದೆ.

    ಹೀಗಾಗಿ ನಮ್ಮ ರಾಜ್ಯದ ಸಕಲ ಸೌಕರ್ಯವನ್ನು ಪಡೆದು ವೈದ್ಯರಾಗಿ ಹೊರ ಬರುವ ಪ್ರತಿಯೊಬ್ಬರೂ ಸಹ ರಾಜ್ಯದಲ್ಲಿ 5 ವರ್ಷ ಕಡ್ಡಾಯವಾಗಿ ವೃತ್ತಿಯನ್ನು ಸಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಕಾನೂನೊಂದನ್ನು ತಾವು ರೂಪಿಸಬೇಕು. ಈಗಾಗಲೇ ಹೀಗೆ ಸೇವೆ ಮಾಡುವ ವೈದ್ಯರಿಗೆ ಅತಿ ಹೆಚ್ಚಿನ ವೇತನವನ್ನು ನೀಡುತ್ತೇವೆ. ಸೌಲಭ್ಯಗಳನ್ನು ಕೊಡುತ್ತೇವೆಂದರೂ ವೈದ್ಯರು ಮುಂದೆ ಬರುತ್ತಿಲ್ಲ. ಹೀಗಾಗಿ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ಕಲ್ಪಿಸಿಕೊಡುವ ಮೂಲಕ ಹಳ್ಳಿಗಳಿಗೂ ಉತ್ತಮ ವೈದ್ಯಕೀಯ ಸೇವೆ ಲಭಿಸುವಂತೆ ಮಾಡಬೇಕಿದೆ. ಈ ಮೂಲಕ ನಮ್ಮ ರಾಜ್ಯದ ಹಣವನ್ನು ಬಳಸಿ ವೈದ್ಯರಾದವರ ಸೇವೆಯನ್ನು ನಮ್ಮ ರಾಜ್ಯದ ನಾಗರಿಕರಿಗೇ ಲಭಿಸುವಂತಾಗಬೇಕು.

    ಈಗ ಕೊರೊನಾ ಸಂಕಷ್ಟ ಕಾಲವಾಗಿರುವುದರಿಂದ ಇಂಥದ್ದೊಂದು ನಿಲುವಿನ ಅಗತ್ಯವಿದೆ. ಜೊತೆಗೆ ಸರ್ಕಾರಿ ಸೌಲಭ್ಯ ಪಡೆಯುವ ಪ್ರತಿಯೊಬ್ಬರಲ್ಲೂ ಇಂತಹ ಮನೋಭಾವ ಬರಬೇಕಿದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ಸಿಗಬೇಕೆಂದರೆ ಕಠಿಣವಾದ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ, ಸದನದಲ್ಲಿ ಮಂಡಿಸಿ ಜಾರಿಗೊಳಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ಮೂಲಕ ಪ್ರತಿಭಾ ಪಲಾಯನಕ್ಕೆ ತಡೆ ಹಾಕಬೇಕಿದೆ.

    ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಕಟ್ಟುನಿಟ್ಟಿನ ನೀತಿಯನ್ನು ಸರ್ಕಾರದಿಂದ ರಚಿಸಬೇಕಿದ್ದು, ವೈದ್ಯಕೀಯ ಶಿಕ್ಷಣ ಓದಿಗೆ ಅವರು ಮುಂದಾಗುವಾಗಲೇ ಸರ್ಕಾರಿ ಕೋಟಾದ ಲಾಭ ಪಡೆಯಬೇಕೆಂದಿದ್ದರೆ, ಅವರ ಮೆರಿಟ್ ಆಧಾರದ ಜೊತೆಗೆ ರಾಜ್ಯದಲ್ಲಿ 5 ವರ್ಷ ಸೇವೆ ಸಲ್ಲಿಸುತ್ತೇವೆಂಬ ಕರಾರಿಗೆ ಮೊದಲೇ ಸಹಿ ಹಾಕಿಸಿಕೊಳ್ಳುವಂತಹ ನಿಟ್ಟಿನಲ್ಲಿ ಕಾನೂನು ರೂಪಿಸಿದರೆ ಪರಿಹಾರ ದೊರಕಬಹುದು ಎಂಬುದು ನನ್ನ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ತಾವುಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವಂತೆ ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇನೆ.