Tag: CM BS Yediyurappa

  • ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೌಣ: ಸೋಮಣ್ಣ

    ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೌಣ: ಸೋಮಣ್ಣ

    ಚಿತ್ರದುರ್ಗ: ಈ ಸಂದರ್ಭದಲ್ಲಿ ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಗೌಣ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಜಿಲ್ಲೆಯ ಹಿರಿಯೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬಿಸಿಎಂ ಇಲಾಖೆಯಿಂದ 4,500 ಫಲಾನುಭವಿಗಳಿಗೆ ವಸತಿ ನಿರ್ಮಾಣದ ಕಾರ್ಯ ಆದೇಶ ಪತ್ರ ವಿತರಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿಯ ಕೆಲ ಅತೃಪ್ತ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ವಿರೋಧ ಪಕ್ಷದವರು ಏನು ಹೇಳುತ್ತಾರೆ ಎನ್ನುವುದಕ್ಕಿಂತ ಎರಡು ವರ್ಷ ಸರ್ಕಾರ ಬಿಗಿಯಾಗಿ ಇರಲಿದೆ ಎಂದರು.

    ಸಿಎಂ ಯಡಿಯೂರಪ್ಪ ರಾಜ್ಯದ ಪ್ರಶ್ನಾತೀತ ನಾಯಕರಾಗಿದ್ದಾರೆ. ಉಳಿದ ಅವಧಿಗೂ ಬಿಎಸ್‍ವೈ ಅವರೇ ಸಿಎಂ ಆಗಿರುತ್ತಾರೆ. ಈ ಸಂದರ್ಭದಲ್ಲಿ ಬಿಜೆಪಿಗೆ ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದೆಲ್ಲವೂ ಗೌಣ. ಆದರೆ ಉತ್ತಮ ಕೆಲಸ ಮಾಡುತ್ತಿರುವ ಈ ಸರ್ಕಾರದ ಅಸ್ಥಿರಕ್ಕೆ ಯಾರು ಕೈ ಹಾಕಬಾರದು. ಈ ವಯಸ್ಸಿನಲ್ಲೂ ಯಡಿಯೂರಪ್ಪ ನಮ್ಮನ್ನು ಬಡಿದೆಬ್ಬಿಸುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

  • ವೈದ್ಯರಿಗೆ ತಕ್ಷಣ ವೇತನವನ್ನು ನೀಡಿ ಗೌರವಯುತವಾಗಿ ನಡೆದುಕೊಳ್ಳಿ: ಡಾ. ವಿಶ್ವನಾಥ್ ಆಗ್ರಹ

    ವೈದ್ಯರಿಗೆ ತಕ್ಷಣ ವೇತನವನ್ನು ನೀಡಿ ಗೌರವಯುತವಾಗಿ ನಡೆದುಕೊಳ್ಳಿ: ಡಾ. ವಿಶ್ವನಾಥ್ ಆಗ್ರಹ

    ಬೆಂಗಳೂರು: ಕರ್ನಾಟಕದ್ಯಾಂತ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿರುವ ವೈದ್ಯರಿಗೆ ನಾಲ್ಕು ತಿಂಗಳಿಂದ ವೇತನವನ್ನು ನೀಡದೆ ಕರ್ನಾಟಕದ ಸರ್ಕಾರ ಸತಾಯಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ವೇತನ ನೀಡದೆ ವೈದ್ಯರಿಗೆ ಹಿಂಸೆ ನೀಡುತ್ತಿರುವ ಸರ್ಕಾರದ ಈ ನಡೆ ಅಮಾನವೀಯ ಎಂದು ಆಮ್ ಆದ್ಮಿ ಪಾರ್ಟಿಯ ವೈದ್ಯಕೀಯ ಘಟಕದ ಅಧ್ಯಕ್ಷ ಮತ್ತು ವೈದ್ಯ ಡಾ. ವಿಶ್ವನಾಥ್ ಟೀಕಿಸಿದರು.

    ಕರ್ನಾಟಕ ಅಸೋಸಿಯೇಷನ್ ಫಾರ್ ರೆಸಿಡೆಂಟ್ ಡಾಕ್ಟರ್ಸ್ ಈ ಕುರಿತು ಒಂದು ಪಟ್ಟಿಯನ್ನು ನೀಡಿತ್ತು. ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 16 ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ 53 ಆಸ್ಪತ್ರೆಗಳ ವೈದ್ಯರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ. ಇವರು ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಒಂದು ವಾರದ ಒಳಗೆ ವೇತನವನ್ನು ನೀಡುವುದಾಗಿ ಹೇಳಿಕೆ ನೀಡಿದ್ದರೂ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಡಾ. ವಿಶ್ವನಾಥ್ ಆರೋಪಿಸಿದರು.

    ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಯನಗರ ಅಸೆಂಬ್ಲಿಯ ಅಧ್ಯಕ್ಷ ಮಂಜುನಾಥ್ ಆರ್ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಾರ್ಟಿ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಸೇವೆ ಮಾಡಿ ಮಡಿದ ವೈದ್ಯರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡುತ್ತಿದೆ. ಕರ್ನಾಟಕ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ಪಿಪಿಇ ಕಿಟ್ ಕೂಡ ನೀಡಿರಲಿಲ್ಲ. ಅಲ್ಲದೇ ವೇತನವನ್ನೇ ನೀಡದೆ ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ ಟೀಕಿಸಿದರು.

    ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಆಮ್ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಡಾ. ರಮೇಶ್ ವೈದ್ಯರ ಕರ್ತವ್ಯದ ಮಧ್ಯೆ ಮೂಗು ತೋರಿಸದೆ ಅವರಿಗೆ ಗೌರವ ನೀಡಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಅಕ್ರಮ ಹಣ ಮಾಡಲು BDA ಅಧ್ಯಕ್ಷರಿಂದ ಹೊಸ ಹೊಸ ಯೋಜನೆ: ಆಪ್

    ಆಸ್ಪತ್ರೆಗಳಲ್ಲಿ ವೈದ್ಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ರೋಗಿಗಳು, ಅವರ ಕುಟುಂಬಸ್ಥರು, ಸ್ಥಳೀಯ ರಾಜಕೀಯ ನಾಯಕರು ವೈದ್ಯರ ಮೇಲೆ ಕೆಲಸದ ಸಮಯದಲ್ಲಿ ನಡೆಸುತ್ತಿರುವ ಹಲ್ಲೆಗಳು ವರದಿಯಾಗುತ್ತಿವೆ. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಪ್ರಕಾರ 70% ವೈದ್ಯರು ಈ ಸಮಸ್ಯೆಗಳನ್ನು ಎದುರಿಸುತ್ತಾರೆ. ವೈದ್ಯರಿಗೆ ಗೌರವಯುತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡುವುದೇ ಅವರಿಗೆ ವೈದ್ಯರ ದಿನದಂದು ನೀಡುವ ಗೌರವ ಎಂದು ಕೆ ಆರ್ ಪುರಂ ನ ಆಮ್ ಆದ್ಮಿ ಪಾರ್ಟಿಯ ಉಸ್ತುವಾರಿ ಡಾ. ಕೇಶವ್ ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ಶ್ರೀ ವಸಿಷ್ಠ ಬ್ಯಾಂಕ್ ಕೇಸ್ ಆರೋಪಿಗಳನ್ನು ರವಿ ಸುಬ್ರಹ್ಮಣ್ಯ ರಕ್ಷಿಸುತ್ತಿದ್ದಾರೆ – ಆಪ್

    ಕರ್ನಾಟಕ ಸರ್ಕಾರ ಕೊರೊನಾ ಸಂದರ್ಭದಲ್ಲಿ ಪ್ರಾಣವನ್ನು ಪಣಕ್ಕಿಟ್ಟು ಸೇವೆ ಮಾಡುತ್ತಿರುವ ವೈದ್ಯರಿಗೆ ತಕ್ಷಣ ವೇತನವನ್ನು ನೀಡಬೇಕು. ದೆಹಲಿ ಸರ್ಕಾರ ನೀಡುವಂತೆ ಕರ್ನಾಟಕದಲ್ಲಿ ಕೊರೊನ ಸೇವೆಯಲ್ಲಿ ಮಾಡಿದ ವೈದ್ಯರಿಗೆ ಪರಿಹಾರ ನೀಡಿ. ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.

  • ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡ್ತಿದ್ದಾರೆ: ಡಿ.ಕೆ.ಶಿವಕುಮಾರ್

    ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡ್ತಿದ್ದಾರೆ: ಡಿ.ಕೆ.ಶಿವಕುಮಾರ್

    ಬೆಂಗಳೂರು: ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡ್ತಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟ ಸಹೋದ್ಯೋಗಿಗಳು ಇಡೀ ರಾಜ್ಯ ಸುತ್ತಿ ಜನರ ಸಂಕಷ್ಟ ಆಲಿಸಬೇಕು. ಇಡೀ ರಾಜ್ಯ ಆಗದಿದ್ದರೂ ಕನಿಷ್ಟ ಪಕ್ಷ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿಯ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ಕಷ್ಟ ಕೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

    ನಮ್ಮ ಧ್ವನಿ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ನಮ್ಮ ಜನರ ನೋವು ಅದಕ್ಕೆ ಕಾಣುತ್ತಿಲ್ಲ. ನಮಗೆ ಹಾಗೂ ನ್ಯಾಯಾಲಯಗಳಿಗೆ ಕಾಣುತ್ತಿವೆ. ಈ ನಿಟ್ಟಿನಲ್ಲಿ ನ್ಯಾಯಾಲಯ ನಿರಂತರವಾಗಿ ಜನಪರ ಆದೇಶ ನೀಡುತ್ತಲೇ ಇದೆ. ನಿನ್ನೆ ಕೂಡ ಸುಪ್ರೀಂ ಕೋರ್ಟ್ ಪರಿಹಾರ ವಿಚಾರವಾಗಿ 6 ತಿಂಗಳ ಸಮಯಾವಕಾಶ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗದ ವರದಿಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿ ಜನರ ಪರವಾಗಿ ನಿಂತಿದೆ. ಅದಕ್ಕಾಗಿ ರಾಜ್ಯದ ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.

    ಈ ಸರ್ಕಾರ ಯಾಕಿರಬೇಕು?:
    ಚಾಮರಾಜನಗರ ದುರಂತದಲ್ಲಿ 36 ಜನ ಸತ್ತಿದ್ದರೂ ಸರ್ಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ಕೊಟ್ಟಿದೆ. ಈ ಘಟನೆಗೆ ಇದುವರೆಗೂ ಯಾರನ್ನೂ ಹೊಣೆ ಮಾಡಿಲ್ಲ. ನೀವು ತಪ್ಪು ಮಾಡಿಲ್ಲ ಅಂದಮೇಲೆ ನೀವ್ಯಾಕೆ ಜನರ ಬಳಿ ಹೋಗಿ ಅವರನ್ನು ಮಾತನಾಡಿಸುತ್ತಿಲ್ಲ. ಅವರ ಗೋಳು ಕೇಳದಿದ್ದ ಮೇಲೆ ಈ ಸರ್ಕಾರ ಯಾಕಿರಬೇಕು? ಮುಖ್ಯಮಂತ್ರಿಗಳೇ ಹೋಗಬೇಕು ಅಂತಾ ಇಲ್ಲ, ಯಾರಾದರೂ ಮಂತ್ರಿ ಹೋಗಬಹುದಲ್ಲ. ಯಾಕೆ ಆ ಕೆಲಸ ಆಗಿಲ್ಲ?

    ನ್ಯಾಯಾಲಯವೇ ಈ ಸಾವುಗಳು ಆಕ್ಸಿಜನ್ ಕೊರತೆಯಿಂದ ಆಗಿವೆ ಎಂದ ಮೇಲೆ ಇವು ಸಹಜ ಸಾವೋ, ಕೊಲೆಯೋ ನೀವೇ ನಿರ್ಧರಿಸಿ. ಅಲ್ಲಿ ಆಕ್ಸಿಜನ್ ಕೊರತೆ ಇದೆ ಅಂತ ಅಧಿಕಾರಿಗಳಿಂದ ಮಂತ್ರಿಗಳವರೆಗೂ ಎಲ್ಲರಿಗೂ ಮೊದಲೇ ಗೊತ್ತಿತ್ತು. ಆದರೂ ಆಕ್ಸಿಜನ್ ಪೂರೈಸಲು ಕ್ರಮ ತೆಗೆದುಕೊಳ್ಳಲಿಲಿಲ್ಲ. ಕೊರತೆ ಇದ್ದ ಕಾರಣ ಒಂದೇ ಆಕ್ಸಿಜನ್ ಪೈಪ್ ಅನ್ನು ಒಬ್ಬರಾದ ಮೇಲೆ ಮತ್ತೊಬ್ಬರಿಗೆ ಐದೈದು ನಿಮಿಷದಂತೆ ನೀಡಲಾಗಿದೆ.

    ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ:
    ನಾನು ಚಾಮರಾಜನಗರ ನಗರಕ್ಕೆ ಹೋದಾಗ ಅಲ್ಲಿನ ಜನ ತಮ್ಮ ಗೋಳು ತೋಡಿಕೊಂಡಾಗ ಮನಸಿಗೆ ಬಹಳ ಬೇಸರವಾಯಿತು. ರಾಷ್ಟ್ರೀಯ ಮಟ್ಟದ ಶೂಟರ್ ಮಡಿಲಿನಲ್ಲೇ ತಾಯಿ ವಿಲಿವಿಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ. ಕೆಲವು ಕಡೆ ವೈದ್ಯರು, ನರ್ಸ್ ಗಳು ಇರಲಿಲ್ಲ. 36 ಜನರೂ ಪ್ರಾಣಿಗಳಂತೆ ನರಳಾಡಿ ಸತ್ತಿದ್ದಾರೆ. ಜನರಿಗೆ ಗೊತ್ತಾಗಬಾರದು ಎಂದು ಸತ್ತವರನ್ನು ಅಲ್ಲಿಂದ ಬೆರೆ ಕಡೆಗೆ ಸಾಗಿಸಿದ್ದಾರೆ.

    36 ಮೃತರ ಪೈಕಿ 80% ರಷ್ಟು ಜನ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಒಬ್ಬನಿಗೆ ಮದುವೆಯಾಗಿ 3 ತಿಂಗಳಾಗಿದೆ. ಮತ್ತೊಬ್ಬನಿಗೆ ಮದುವೆ ನಿಶ್ಚಯವಾಗಿತ್ತು. ಎಲ್ಲರೂ ಅವರವರ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರು. ಎಲ್ಲ ವಿಚಾರವನ್ನು ನಾನು ಇಲ್ಲಿ ಮಾತನಾಡುವುದಿಲ್ಲ, ಅಧಿವೇಶನದಲ್ಲಿ ಮಾತನಾಡುತ್ತೇನೆ. ಮೆಡಿಕಲ್ ಟೂರಿಸಂಗೆ ಹೆಸರುವಾಸಿಯಾಗಿರುವ ನಮ್ಮ ರಾಜ್ಯದಲ್ಲೇ, ವೈದ್ಯರು, ಡೀನ್ ಗಳು ಇರುವ ಆಸ್ಪತ್ರೆಯಲ್ಲೇ ಈ ಪರಿಸ್ಥಿತಿಯಾದರೆ ಇನ್ನು ಬೇರೆ ಕಡೆ ಹೇಗಿರಬೇಡ?

    ಒಬ್ಬ ಯುವಕನ ದೇಹವನ್ನು ಬೇರೆಯವರಿಗೆ ನಿಮ್ಮ ಕಡೆಯವರು ತೆಗೆದುಕೊಂಡು ಹೋಗಿ ಎಂದು ಬಲವಂತ ಮಾಡಿದ್ದಾರೆ. ಆಮೇಲೆ ಅವರು ನಮ್ಮವರಲ್ಲ ಎಂದು ಮತ್ತೆ ವಾಪಸ್ ತಂದುಕೊಟ್ಟಿದ್ದಾರೆ. ನಂತರ ಆತನನ್ನು ಅವನ ಸ್ನೇಹಿತರು ಗುರುತಿಸಿ, ಆತನ ತಾಯಿಗೆ ಶವ ಹಸ್ತಾಂತರ ಮಾಡಿದ್ದಾರೆ.

    ಸೋಂಕಿತನಿಗೆ ಅತ್ತೆ, ಮಗಳ ಸಾವಿನ ಸುದ್ದಿಯೇ ಗೊತ್ತಿಲ್ಲ:
    ನಾನು ಹೋಗುವ ದಿನದವರೆಗೂ ಸೋಂಕಿತನಾಗಿದ್ದ ವ್ಯಕ್ತಿಗೆ ತನ್ನ ಮಗಳು ಹಾಗೂ ಅತ್ತೆ ಸತ್ತಿದ್ದಾಳೆ ಎನ್ನುವ ವಿಷಯವೇ ಗೊತ್ತಿರಲಿಲ್ಲ. ಗಂಡನನ್ನು ಕಳೆದುಕೊಂಡ ಮತ್ತೊಂದು ಹೆಣ್ಣು ಮಗಳಿಗೆ ಚಿಕ್ಕ ಮಕ್ಕಳು ಹಾಗೂ ಅತ್ತೆ, ಮಾವನ ಜವಾಬ್ದಾರಿ ಇದೆ. ಆಕೆಗೆ ಗಂಡನ ಮರಣ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ. ಹೀಗಾಗಿ ಪರಿಹಾರವೂ ಸಿಕ್ಕಿಲ್ಲ. ಆಕ್ಸಿಜನ್ ನೀಡದೇ ಕೊಂದು ಹಾಕಿ, ಸಹಜ ಸಾವು ಅಂತಾ ಮರಣ ಪತ್ರ ನೀಡುತ್ತಿದ್ದಾರೆ.

    ಸರ್ಕಾರ ಪರಿಹಾರ ನೀಡ್ತಿಲ್ಲ ಯಾಕೆ?:
    ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸತ್ತವರಿಗೆ ಪರಿಹಾರ ನೀಡಬೇಕು ಅಂತಾ ಕೋರ್ಟ್ ಹಾಗೂ ನಾವು ಒತ್ತಾಯ ಮಾಡಿದ್ದೇವೆ. ನಾನು ಹಾಗೂ ನಮ್ಮ ನಾಯಕರು ಚಾಮರಾಜನಗರಕ್ಕೆ ಹೋಗಿ ಅವರಿಗೆ ತಲಾ 1 ಲಕ್ಷ ರುಪಾಯಿ ಪರಿಹಾರವನ್ನು ಪಕ್ಷದ ವತಿಯಿಂದ ಕೊಟ್ಟಿದ್ದೇವೆ. ಸಂತ್ರಸ್ತ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ ನೀಡುತ್ತಿಲ್ಲ. ಹಾಗಾದರೆ ಅವರು ಈಗ ಹೇಗೆ ಅರ್ಜಿ ಹಾಕಬೇಕು? ಅವರಿಗೆ ಪರಿಹಾರ ಹೇಗೆ ಸಿಗಬೇಕು? ಇಂತಹ ಸಮಯದಲ್ಲಿ ನಾನು ಚೆಕ್ ಬುಕ್ ತೆಗೆದುಕೊಂಡು ಹೋಗಿ, ಸಂಬಂಧಪಟ್ಟವರನ್ನು ಮಾತನಾಡಿಸಿ, ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ಪರಿಹಾರ ನೀಡಿದ್ದೇನೆ. ಅದೇ ರೀತಿ ಸರ್ಕಾರಕ್ಕೆ ಯಾಕೆ ನೀಡಲು ಆಗುತ್ತಿಲ್ಲ.

    ಸರ್ಕಾರಿ ವೆಬ್ಸೈಟ್ ನಲ್ಲಿ ಜೂನ್ 13 ರವರೆಗೂ 3,27,985 ಜನ ಕೋವಿಡ್ ನಿಂದ ಸತ್ತಿದ್ದಾರೆ. ಆದರೆ ಸರ್ಕಾರ ಹೇಳುತ್ತಿರೋದು 30 ಸಾವಿರ ಮಾತ್ರ. ಹಾಗಾದರೆ ಉಳಿದವರಿಗೆ ಪರಿಹಾರ ನೀಡುವವರು ಯಾರು? ಪರಿಹಾರದಿಂದ ಅವರು ಬದುಕುವುದಿಲ್ಲ ಎನ್ನುವುದು ಬೇರೆ ಮಾತು. ಆದರೆ ನಿಮ್ಮ ಜತೆ ಸರ್ಕಾರ ಇದೆ ಅಂತಾ ಧೈರ್ಯ ಹೇಳಬಹುದಲ್ಲವೇ?

    ಒಂದು ತಿಂಗಳ ಜನ ಸಂಪರ್ಕ ಅಭಿಯಾನ:
    ಆಸ್ಪತ್ರೆಗೆ ಸೇರುವಾಗಲೂ ಹಣ, ಸತ್ತ ಮೇಲೆ ಹೆಣ ಪಡೆಯಲು ಹಣ. ರಾಜ್ಯಕ್ಕೆ ಇದೇನು ಗ್ರಹಚಾರ ಬಂತು ಮುಖ್ಯಮಂತ್ರಿಗಳೇ? ಆರೋಗ್ಯ ಸಚಿವರೇ? ನಾನು ಮಂತ್ರಿಗಳನ್ನು ಕಳಿಸಿ ಎಂದು ಹೇಳಿದ ನಂತರ ಮಂತ್ರಿಗಳನ್ನು ಕಳಿಸುತ್ತೀರಿ. ಅಲ್ಲಿಯವರೆಗೂ ಯಾರೂ ಹೋಗುವುದಿಲ್ಲ? ದೊಡ್ಡವರು ಸತ್ತರೆ, ಅವರ ಮನೆಗೆ ಹೋಗಿ ನಿಮ್ಮ ಜತೆ ಇದ್ದೇವೆ ಎಂದು ಹೇಳುತ್ತೀರಿ. ಆದರೆ ಬಡವರು ಸತ್ತಾಗ, ಯಾರೂ ಹೋಗಿ ನೋಡುವುದಿಲ್ಲ. ಸರ್ಕಾರಕ್ಕೆ ಜವಾಬ್ದಾರಿ ಬೇಡವೇ? ಇದನ್ನು ಕೇಳುವುದು ತಪ್ಪಾ? ನಾವು ರಾಜಕೀಯ ಮಾಡುತ್ತಿಲ್ಲ, ಅದರ ಅಗತ್ಯವಿಲ್ಲ. ಹೀಗಾಗಿ ಕೋವಿಡ್ ಸಂತ್ರಸ್ತರು, ರೈತರು, ಕಾರ್ಮಿಕರನ್ನು ಭೇಟಿ ಮಾಡಿ, ಅವರಿಗೆ ಕಷ್ಟ ಆಲಿಸಿ, ಪರಿಹಾರ ದೊರಕಿಸಿಕೊಡಲು ನೆರವಾಗುವಂತೆ ನಮ್ಮ ನಾಯಕರು, ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ. ಕೋವಿಡ್ ಸಂತ್ರಸ್ತರ ಪರವಾಗಿ ನಾವು ಹೋರಾಟ ಮಾಡಬೇಕಿದೆ. ವಿರೋಧ ಪಕ್ಷದ ಜವಾಬ್ದಾರಿ ಅದು. ಇದಕ್ಕಾಗಿ ನಾವು ನಮ್ಮ ಮುಖಂಡರು ಸೇರಿ ಒಂದು ತಿಂಗಳ ಜನ ಸಂಪರ್ಕ ಅಭಿಯಾನ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸೂಚನೆ, ದಾಖಲೆ ಕಳುಹಿಸಿಕೊಟ್ಟಿದ್ದೇನೆ.

    ಕೋವಿಡ್ ಡೆತ್ ಆಡಿಟ್ ಆಗಿಲ್ಲ. ಅದು ಆಗಬೇಕು. ಸತ್ತಿರುವ ಎಲ್ಲರಿಗೂ ಹೈಕೋರ್ಟ್ ಸೂಚನೆಯಂತೆ ಪರಿಹಾರ ಸಿಗಬೇಕು. ರಾಜ್ಯದಲ್ಲಿ ಕೋವಿಡ್ ನಿಂದ ಸತ್ತಿರುವ ಎಲ್ಲ 3 ಲಕ್ಷ ಜನರಿಗೂ ಕೋರ್ಟ್ ಆದೇಶದಂತೆ ಪರಿಹಾರ ಸಿಗಬೇಕು. ಇದು ಜನರ ಹಕ್ಕು, ಸರ್ಕಾರದ ಜವಾಬ್ದಾರಿ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕೋವಿಡ್ ವಾರಿಯರ್ ಗಳನ್ನು ನೇಮಕ ಮಾಡಿ, ಪ್ರತಿ ಮನೆ ಮನೆಗೂ ಹೋಗಿ ಸಂತ್ರಸ್ತರಿಗೆ ಸಾಂತ್ವನ ಹೇಳಲು ಸೂಚಿಸಲಾಗಿದೆ. ಅವರಿಗೆ ಸಹಾಯ ಹಸ್ತ ನೀಡಬೇಕು, ಅವರಿಂದ ಮಾಹಿತಿ ಪಡೆದು ನಮಗೆ ಕಳುಹಿಸಿಕೊಡಬೇಕು.

    ಇದು ಜನರ ಕಾರ್ಯಕ್ರಮ:
    ಇದರ ಮೇಲ್ವಿಚಾರಣೆಗೆ ಒಂದೊಂದು ಜಿಲ್ಲೆಗೂ ನಾಯಕರನ್ನು ನೇಮಿಸುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರನ್ನು ನೇಮಿಸುತ್ತಿದ್ದು, ಅವರು ಅಲ್ಲಿ ಹೋಗಿ ಸಭೆ ಮಾಡಬೇಕು. ಜುಲೈ 7 ರಂದು ಬೆಲೆ ಏರಿಕೆ ವಿರುದ್ಧ ಸೈಕಲ್ ಜಾಥಾ ಮಾಡಲಾಗುತ್ತದೆ. ನಂತರ ಕೋವಿಡ್ ವಿಚಾರವಾಗಿ ಸಭೆ ಮಾಡುತ್ತಾರೆ. ನಾನು ನಮ್ಮ ನಾಯಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭೆ ಮಾಡುತ್ತೇವೆ. ಇದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕ್ರಮ ಅಲ್ಲ. ಇದು ಜನರ ಕಾರ್ಯಕ್ರಮ. ಜನರ ನೋವಿಗೆ ಸ್ಪಂದಿಸುವ ಕಾರ್ಯಕ್ರಮ. ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸದಿದ್ದಾಗ, ನಾವು ಈ ಕಾರ್ಯಕ್ರಮ ಮಾಡುತ್ತಿದ್ದೇವೆ.

    ಸುಮೋಟೋ ಕೇಸ್ ದಾಖಲಿಸಿ:
    ಚಾಮರಾಜನಗರ ದುರಂತದಲ್ಲಿ 36 ಮಂದಿ ಸತ್ತಿದ್ದರೂ ಇದರ ಹೊಣೆಯನ್ನು ಯಾರೂ ಹೊತ್ತಿಲ್ಲ. ಸುಮೋಟೋ ಕೇಸ್ ದಾಖಲಿಸಿ ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಷ್ಟು ದೊಡ್ಡ ದುರಂತ ನಡೆದರೂ ಯಾರ ಮೇಲೂ ಕ್ರಮ ಇಲ್ಲ. ಇವರನ್ನು ರಕ್ಷಣೆ ಮಾಡಲು ಸರ್ಕಾರ ಮುಂದಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೂ ಸರ್ಕಾರ ಸುಳ್ಳು ಹೇಳುತ್ತಿದೆ.

    ಸತ್ತವರ ಜೇಬಿನಲ್ಲಿ ಇದ್ದ ವಸ್ತುಗಳನ್ನು ತೆಗೆದುಕೊಂಡಿದ್ದಾರೆ, ಎಷ್ಟೋ ಹೆಣ್ಣು ಮಕ್ಕಳ ತಾಳಿ ಎಳೆದುಕೊಂಡಿದ್ದಾರೆ. ಕಿವಿ ಒಲೆ, ಮೂಗು ಬೊಟ್ಟುಗಳನ್ನು ಚರ್ಮಸಮೇತ ಕಿತ್ತು ಹಾಕಿದ್ದಾರೆ ಎಂದು ಜನ ನಮ್ಮ ಬಳಿ ನೋವು ಹೇಳಿಕೊಂಡರು. ಆ 36 ಕುಟುಂಬದ ನೋವು ನೋಡಿದರೆ ಕರಳು ಕಿತ್ತು ಬರುತ್ತದೆ. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇದೆಯೋ, ಇಲ್ಲವೋ ಅನಿಸುತ್ತದೆ. ಮುಖ್ಯಮಂತ್ರಿಗಳೇ ಈಗಲಾದರೂ ನೀವು ಅಥವಾ ನಿಮ್ಮ ಮಂತ್ರಿಗಳು ರಾಜ್ಯ ಪ್ರವಾಸ ಮಾಡಬೇಕು. ರಾಜ್ಯ ಪ್ರವಾಸ ಮಾಡಲು ಆಗದಿದ್ದರೆ ಕನಿಷ್ಟ ಪಕ್ಷ ಆ 36 ಮಂದಿ ಅತ್ತವರ ಕುಟುಂಬಗಳನ್ನಾದರೂ ಭೇಟಿ ಮಾಡಿ, ಅವರ ನೋವು ಕೇಳಿ ಎಂದು ಕೇಳಿಕೊಳ್ಳುತ್ತೇನೆ. ಆಗಲಾದರು ನೀವು ಆ ಜನರ ಪರ ಕಾರ್ಯಕ್ರಮ ಹಾಕಿಕೊಳ್ಳಲು ಅವಕಾಶವಾಗುತ್ತದೆ.

    ಅರ್ಹರಿಗೆ ಪರಿಹಾರ ತಲುಪಿದೆಯಾ?
    ನೀವು ಕಾರ್ಮಿಕರಿಗೆ 2 ಸಾವಿರ ಕೊಟ್ಟ ಮಾತ್ರಕ್ಕೆ ಅವರ ಜೀವನ ಸುಧಾರಿಸುತ್ತದೆಯಾ? ಅರ್ಹರಿಗೆ ಪರಿಹಾರ ತಲುಪಿದೆಯಾ? ರೈತರಿಗೆ ಹೆಕ್ಟೇರ್ ಗೆ 10 ಸಾವಿರ ಎಂದರೆ ಅರ್ಧ ಎಕರೆ, ಸಣ್ಣ ಜಮೀನು ಇರುವವರು ಅದಕ್ಕೆ ಅರ್ಜಿ ಹಾಕುತ್ತಾರಾ? ಕೂಲಿ ಕಾರ್ಮಿಕ ಪರಿಹಾರ ಪಡೆಯಲು ಅಧಿಕಾರಿಯಿಂದ ಪ್ರಮಾಣ ಪತ್ರ ಬೇಕಂತೆ. ಅದನ್ನು ಪಡೆಯಲು ಕೂಲಿ ಕಾರ್ಮಿಕ ಲಂಚ ಕೊಡಬೇಕಾ? ಇಂದು ಸಂಜೆ ಒಳಗೆ ನಿಮ್ಮ ಸಚಿವರಿಗೆ ಹೇಳಿ, ಎಷ್ಟು ಜನ ಅರ್ಜಿ ಹಾಕಿದ್ದಾರೆ ಅಂತಾ ಹೇಳಿಸಿ. 2 ಸಾವಿರ ಭಿಕ್ಷೆ ಬೇಡಲು ಜನ ನಿಮ್ಮ ಬಳಿ ಬರುವುದಿಲ್ಲ. ಅವರ ಸ್ವಾಭಿಮಾನದ ಬದುಕಿಗೆ ಕೊಳ್ಳಿ ಇಡಬೇಡಿ. ಸರ್ಕಾರ ಅಧಿವೇಶನ ಕರೆಯಲಿ ಅಂತಾ ಕಾಯುತ್ತಿದ್ದೇವೆ. ಅವರು ಕರೆಯಲಿ, ನಾವು ನಮ್ಮ ಹೋರಾಟ ಮಾಡುತ್ತೇವೆ.’

    ಈಶ್ವರ್ ಖಂಡ್ರೆ ಮಾತು
    ಈ ವೇಳೆ ಮಾತನಾಡಿದ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಅವರು, ‘ಸರ್ಕಾರ ಸಾವಿನಲ್ಲಿ ಸುಳ್ಳು ಲೆಕ್ಕ ಕೊಡುತ್ತಿದೆ. ಬೀದರ್ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ 557 ಜನ ಸತ್ತಿದ್ದಾರೆ. ಆ ಪಟ್ಟಿ ನನ್ನ ಬಳಿ ಇದೆ. ಆದರೆ ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ 141 ಜನ ಸತ್ತಿದ್ದಾರೆ ಎಂದು ಸುಳ್ಳು ಲೆಕ್ಕ ಕೊಟ್ಟಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತವರು ಹೊರತುಪಡಿಸಿ, ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಒಂದು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಇದು ಕೇವಲ ಬೀದರ್ ಜಿಲ್ಲೆಯ ಲೆಕ್ಕ. ಇಡೀ ರಾಜ್ಯದ ಲೆಕ್ಕ ಪರಿಗಣಿಸಿದರೆ, ನಮ್ಮ ಅಧ್ಯಕ್ಷರು ಹೇಳಿದಂತೆ 3 ಲಕ್ಷಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ’ ಎಂದರು.

  • ಸಿಎಂ ಭೇಟಿ ಮಾಡಿದ ಕೃಷಿ ಕುಲಪತಿಗಳ ನಿಯೋಗ – ಮಾನವ ಸಂಪನ್ಮೂಲಗಳ ಕೊರತೆ ನೀಗಿಸುವಂತೆ ಮನವಿ

    ಸಿಎಂ ಭೇಟಿ ಮಾಡಿದ ಕೃಷಿ ಕುಲಪತಿಗಳ ನಿಯೋಗ – ಮಾನವ ಸಂಪನ್ಮೂಲಗಳ ಕೊರತೆ ನೀಗಿಸುವಂತೆ ಮನವಿ

    ಬೆಂಗಳೂರು: ಕೃಷಿ ವಿಶ್ವವಿದ್ಯಾಲಯಗಳಲ್ಲಿರುವ ಮಾನವ ಸಂಪನ್ಮೂಲಗಳ ಕೊರತೆಯನ್ನು ತುಂಬುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲರ ನೇತೃತ್ವದಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮಂಗಳವಾರ ಸಂಜೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗ, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ.45 ರಷ್ಟು ಶಿಕ್ಷಕರ ಹುದ್ದೆಗಳು, ಶೇ.55 ರಷ್ಟು ಶಿಕ್ಷಕೇತರ ಹುದ್ದೆ ಕೊರತೆಯಿದೆ. ವಿಶ್ವವಿದ್ಯಾಲಯ ಶಿಕ್ಷಣ ಮತ್ತು ಸಂಶೋಧನೆಗೆ 2016-17 ರಿಂದೀಚೆಗೆ ಶೇ.65 ರಷ್ಟು ಅನುದಾನ ಕಡಿತಗೊಂಡಿದೆ. ಗುಣಮಟ್ಟದ ಹಾಗೂ ಪರಿಣಾಮಕಾರಿ ಶಿಕ್ಷಣಕ್ಕೆ ಮಾನವ ಸಂಪನ್ಮೂಲಗಳ ಅಗತ್ಯತೆಯಿದೆ. ಆದರೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಹುದ್ದೆಗಳು ಖಾಲಿಯಿರುರುವುದರಿಂದ ಈಗಿರುವ ಸಿಬ್ಬಂದಿಗಳೇ ಹೇಗೋ ಸರಿದೂಗಿಸಿಕೊಂಡು ಹೆಚ್ಚುವರಿ ಜವಾಬ್ದಾರಿಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಮಾನವ ಸಂಪನ್ಮೂಲಗಳ ಕೊರತೆಯಿಂದಾಗಿ ಕೆಲವೆಡೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಮಾನವ ಸಂಪನ್ಮೂಲಗಳ ಕೊರತೆ ವಿದ್ಯಾರ್ಥಿಗಳ ಕಲಿಕೆಯ ಮೇಲೂ ಪರಿಣಾಮ ಬೀರುತ್ತಿದ್ದು, ಅಲ್ಲದೇ ಹೆಚ್ಚುವರಿ ಜವಾಬ್ದಾರಿಯಿಂದಾಗಿ ಸಿಬ್ಬಂದಿಗಳ ಮೇಲೂ ಸಹ ಪರಿಣಾಮವುಂಟಾಗುತ್ತಿದೆ ಎಂದು ಕೃಷಿ ಸಚಿವರು ಭೇಟಿ ವೇಳೆ ಸಿಎಂಗೆ ಮನವರಿಕೆ ಮಾಡಿಕೊಟ್ಟು ಮಾನವಸಂಪನ್ಮೂಲಗಳ ಹೆಚ್ಚಳಕ್ಕೆ ಮನವಿ ಮಾಡಿದರು.

    ಭೇಟಿಗೂ ಮುನ್ನ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದ ಕಚೇರಿಯಲ್ಲಿ ಕುಲಪತಿಗಳ ಸಮನ್ವಯ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಕೃಷಿ ಅನುಸಂಧಾನ ಪರಿಷತ್ತಿನ ಎಐಸಿಆರ್ ಪಿ ಯೋಜನೆಗಳಲ್ಲಿ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದಿಂದ ಶೇ.80 ಹಾಗು ಶೇ.100 ರಷ್ಟು ಅನುದಾನ ಬರುತ್ತಿರುವುದರಿಂದ ಕೆವಿಕೆ ಹಾಗೂ ಐಸಿಆರ್ ಪೋಸ್ಟ್ ಗಳ ನೇಮಕಾತಿ ಮಾಡಲು ಕೂಡಲೇ ಅನುಮತಿ ಗೆ ಸಚಿವರಿಗೆ ಕುಲಪತಿಗಳು ಮನವಿ ಮಾಡಿದರು. ಅಲ್ಲದೇ ಶಿವಮೊಗ್ಗದ ನೂತವಾಗಿ ನಿರ್ಮಾಣಗೊಂಡಿರುವ ಇರುವಕ್ಕಿ ಕೃಷಿ ಮತ್ತು ತೋಟಗಾರಿಗೆ ವಿಶ್ವವಿದ್ಯಾಲಯದ ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸುವ ಬಗ್ಗೆಯೂ ಚರ್ಚಿಸಲಾಯಿತು.

    ಕೃಷಿ ಶಿಕ್ಷಣ ಎಂದಮೇಲೆ ಎಲ್ಲಾ ವಿಶ್ವವಿದ್ಯಾಲಯಗಳು ಒಂದೇಯಾಗಿದ್ದು, ಯಾವುದೇ ವಿಶ್ವವಿದ್ಯಾಲಯಗಳು ಬೇರೆಬೇರೆ ಎಂದು ಭಾವಿಸಬಾರದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ಕಲಿಕೆಯ ಹಿತದೃಷ್ಟಿಯಿಂದ ಸಮಾನವಾಗಿ ಕೆಲಸ ಮಾಡಬೇಕು. ಅಲ್ಲದೇ ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಇಲಾಖೆಯ ಜೊತೆ ನಿರಂತರ ಸಂಪರ್ಕ ಸಾಧಿಸುತ್ತಿರಬೇಕು. ಕೃಷಿಯಲ್ಲಿ ನವೀನತೆ ಹಾಗೂ ಕೃಷಿ ಇಲಾಖೆಯ ಅಭಿವೃಧ್ಧಿಗೆ ವಿಶ್ವವಿದ್ಯಾಲಯಗಳ ಸಹಭಾಗಿತ್ವವೂ ಮುಖ್ಯವಾಗಿದೆ. ಹೀಗಾಗಿ ವಿಶ್ವವಿದ್ಯಾಲಯಗಳು ತಾವು ಬೇರೆ ಎಂದು ಭಾವಿಸದೇ ಇಲಾಖೆ ಜೊತೆ ಸಂಪರ್ಕ ಸಾಧಿಸಬೇಕು. ಅಲ್ಲದೇ ಕೃಷಿ ಇಲಾಖೆಯೂ ಸಹ ವಿಶ್ವವಿದ್ಯಾಲಯಗಳಲ್ಲಿ ಆಗುತ್ತಿರುವ ಹೊಸಹೊಸ ಕೃಷಿ ಆವಿಷ್ಕಾರಗಳ ಬಗ್ಗೆ ವಿಜ್ಞಾನಿಗಳ ಜೊತೆ ಸಹಕರಿಸಬೇಕೆಂದು ಕೃಷಿ ಸಚಿವರು ಸಲಹೆ ನೀಡಿದರು.

  • ಕಲ್ಯಾಣ ಮಂಟಪ, ಹೋಟೆಲ್ ಪಾರ್ಟಿ ಹಾಲ್, ರೆಸಾರ್ಟ್ ಆರಂಭಕ್ಕೆ ಗ್ರೀನ್ ಸಿಗ್ನಲ್

    ಕಲ್ಯಾಣ ಮಂಟಪ, ಹೋಟೆಲ್ ಪಾರ್ಟಿ ಹಾಲ್, ರೆಸಾರ್ಟ್ ಆರಂಭಕ್ಕೆ ಗ್ರೀನ್ ಸಿಗ್ನಲ್

    ಬೆಂಗಳೂರು: ಕಲ್ಯಾಣ ಮಂಟಪ, ಹೋಟೆಲ್ ಪಾರ್ಟಿ ಮತ್ತು ರೆಸಾರ್ಟ್ ಆರಂಭಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.

    ಇಂದು ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೋವಿಡ್ ಸಂಬಂಧಿತ ಸಚಿವರೊಂದಿಗೆ ಸಭೆ ನಡೆಸಲಾಯ್ತು. ಸಭೆಯ ಆರಂಭದಲ್ಲಿ ಕೋವಿಡ್ ನಿಯಮಗಳನ್ನು ಸಡಿಲಗೊಳಿಸುವ ಕುರಿತ ಪ್ರಸ್ತಾಪವನ್ನು ಇರಿಸಲಾಯ್ತು.

    ಕಲ್ಯಾಣ ಮಂಟಪ ಹೋಟೆಲ್ ಪಾರ್ಟಿ ಹಾಲ್ ಮತ್ತು ರೆಸಾರ್ಟ್ ಗಳಲ್ಲಿ 40 ಜನ ಕ್ಕೆ ಸೀಮಿತಗೊಳಿಸಿ ಅನುಮತಿ ತೆಗೆದುಕೊಂಡು ವೈಯಕ್ತಿಕ ಪಾಸ್ ಗಳೊಂದಿಗೆ ಸೋಮವಾರದಿಂದ ಜಾರಿಗೆ ಬರುವಂತೆ ಮದುವೆ ಸಮಾರಂಭಗಳಿಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ. ಕಲ್ಯಾಣ ಮಂಟಪಗಳು, ಪಾರ್ಟಿ ಹಾಲ್ ಮತ್ತು ರೆಸಾರ್ಟ್ ಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದು, 40 ಜನರಿಗೆ ಸೀಮಿತವಾಗಿ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗಿದೆ. ಮದುವೆ, ಪಾರ್ಟಿ ಹಾಲ್ ಗೆ ಹೋಗೋರು ವೈಯಕ್ತಿಕ ಪಾಸ್ ತಗೋಬೇಕು ಎಂದು ಷರತ್ತು ವಿಧಿಸಲಾಗಿದೆ.

    ಕೋವಿಡ್ 19 ರ ರೂಪಾಂತರಿ ಡೆಲ್ಟಾ ಬಗ್ಗೆ ರಾಜ್ಯದಲ್ಲಿರುವ ಪ್ರಸ್ತುತ ಇರುವ ಪರಿಸ್ಥಿತಿ ಯ ಬಗ್ಗೆ ಪರಾಮರ್ಶೆ ನಡೆಸಲಾಯಿತು. ರಾಜ್ಯದಲ್ಲಿ ಡೆಲ್ಟಾ ವೈರಸ್ ಸಧ್ಯಕ್ಕೆ ಹತೋಟಿಯಲ್ಲಿದ್ದು ವೈರಸ್ ಬಗ್ಗೆ ತೀವ್ರ ನಿಗಾ ಇಡಲು ಮುಖ್ಯಮಂತ್ರಿಗಳು ಸೂಚಿಸಿದರು. ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಲ್ಟಾ ವೈರಸ್ ಕಂಡುಬರುತ್ತಿದೆ ಬಾರ್ಡರ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಯಿತು. ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಬಗ್ಗೆನು ಸಹ ತೀವ್ರ ನಿಗಾ ಇಟ್ಟು ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಸಿಎಂ ಸೂಚಿಸಿದ್ದಾರೆ.

    ಕೇರಳ ಹಾಗು ಮಹಾರಾಷ್ಟ್ರದಲ್ಲಿ ಎರಡನೇ ಅಲೆಯ ತೀವ್ರತೆ ಕಡಿಮೆಯಾಗದಿರುವ ಆತಂಕ ವ್ಯಕ್ತಪಡಿಸಿ ರಾಜ್ಯದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಗೊಳಿಸಿದರು ಎಚ್ಚರಿಕೆಯಿಂದ ಇರುವಂತೆ ರಾಜ್ಯದ ಜನರಿಗೆ ಮನವಿ ಮಾಡಲಾಯಿತು.

    ಮೂರನೇ ಅಲೆ ಆತಂಕ ಹಿನ್ನೆಲೆಯಲ್ಲಿ ಅಪೌಷ್ಟಿಕತೆ ಇರೋ ಮಕ್ಕಳ ಮೇಲೆ ತೀವ್ರ ನಿಗಾ ಇರಿಸಬೇಕು. ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ಪೌಷ್ಟಿಕ ಆಹಾರ, ಸೂಕ್ತ ಆರೋಗ್ಯ ತಪಾಸಣೆಗೆ ಸಿಎಂ ಸೂಚನೆ ನೀಡಿದ್ದಾರೆ.

  • ರಾಜ್ಯದಲ್ಲಿ ಮುಂಗಾರು ಪ್ರಾರಂಭ – ಡಿಸಿಗಳ ಜೊತೆ ಸಿಎಂ ಸಭೆ

    ರಾಜ್ಯದಲ್ಲಿ ಮುಂಗಾರು ಪ್ರಾರಂಭ – ಡಿಸಿಗಳ ಜೊತೆ ಸಿಎಂ ಸಭೆ

    ಬೆಂಗಳೂರು: ರಾಜ್ಯಕ್ಕೆ ಮುಂಗಾರು ಆಗಮನ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಜಿಲ್ಲೆಗಳಲ್ಲಿ ಸಿದ್ಧತೆ ಕುರಿತು ಜಿಲ್ಲಾಧಿಕಾರಿಗಳ ಜೊತೆ ನಾಳೆ ಸಭೆ ನಡೆಸುತ್ತಿದ್ದಾರೆ. ಉತ್ತರ ಒಳನಾಡು, ಮಲೆನಾಡು, ಕರಾವಳಿ ಭಾಗದ 20 ಜಿಲ್ಲೆಗಳ ಡಿಸಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

    ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ, ಧಾರವಾಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತಗಳ ಜೊತೆ ಮುಂಗಾರು ಸಿದ್ಧತೆ, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಡಿಸಿಗಳ ಸಭೆಯಲ್ಲಿ ಚರ್ಚೆ ನಡೆಯಲಿದ್ದಾರೆ. ಇದನ್ನೂ ಓದಿ: ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು

    ಇಂದೂ ಕೂಡ ಸಿಎಂ ಮುಂಗಾರು ಕುರಿತ ಅಧಿಕಾರಿಗಳ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಗಾರು ಪ್ರಾರಂಭ ಆಗಿದೆ. ಉತ್ತಮವಾಗಿ ಮಳೆ ಆಗುತ್ತಿದೆ. ರೈತರು ಕೂಡ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿತ್ತನೆಗೆ ಬೇಕಾದ ಬೀಜಗಳು, ಗೊಬ್ಬರ ಯಾವುದಕ್ಕೂ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಅಂತ ಸ್ಪಷ್ಟಪಡಿಸಿದರು.

  • ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್

    ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ಉತ್ತಮ ಕೆಲಸವಾಗುತ್ತಿದೆ: ಅರುಣ್ ಸಿಂಗ್

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತರ ಕೆಲಸಗಳಾಗುತ್ತಿವೆ. ನಾನು ಇದನ್ನು ಪ್ರತಿ ಬಾರಿ ಹೇಳಿದ್ದೇನೆ. ಈ ಬಗ್ಗೆ ಹೆಚ್ಚು ಪ್ರಶ್ನಿಸುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು.

    ಕುಮಾರ ಕೃಪಾ ಗೆಸ್ಟ್ ಹೌಸ್‍ನಲ್ಲಿ ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಉತ್ತರ ಕೆಲಸಗಳಾಗುತ್ತಿವೆ. ನಾನು ಇದನ್ನು ಪ್ರತಿ ಬಾರಿ ಹೇಳಿದ್ದೇನೆ. ಈ ಬಗ್ಗೆ ಹೆಚ್ಚು ಪ್ರಶ್ನಿಸುವ ಅಗತ್ಯವಿಲ್ಲ. ಬಿಜೆಪಿ ಸಚಿವರು, ಶಾಸಕರು, ನಾಯಕರು ಒಟ್ಟಾಗಿದ್ದಾರೆ. ಅಲ್ಲದೆ ಯಾರೂ ಸಹ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಮಾತನಾಡಬಾರದು. ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅರುಣ್ ಸಿಂಗ್ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರಿಗೆ ಸೂಚಿಸಿದರು.

    ಅಲ್ಲದೆ ಪಕ್ಷದ ಸಂಘಟನೆ, ಕಾರ್ಯಕರ್ತರ ಬಗ್ಗೆ ಚರ್ಚಿಸಲಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಸಾಕಷ್ಟು ಸೇವೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಯೋಗ ದಿನದ ಕುರಿತು ಸಹ ಚರ್ಚಿಸಬೇಕಿದೆ ಎಂದು ತಿಳಿಸಿದರು.

    ಸಿಎಂ ಬದಲಾವಣೆ ಬಗ್ಗೆ ಮುಂದೆ ತಿಳಿಸ್ತೇನೆ
    ಇದಕ್ಕೂ ಮೊದಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತು ಮುಂದೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆ ಕುರಿತು ಮಾಹಿತಿ ನೀಡಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿರಾಕರಿಸಿದ್ದಾರೆ.

    ಕೋವಿಡ್ ಸಂಕಷ್ಟ ಕಾಲದಲ್ಲಿ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನು ಲೆಕ್ಕಿಸದೆ, ಸಾರ್ವಜನಿಕರ ಸೇವೆ ಮಾಡಿದ್ದಾರೆ, ಸೇವೆಯೇ ಸಂಘಟನೆ ಎಂಬ ಮನೋಭಾವದಿಂದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸೇವೆ ಮಾಡುವುದು ನಮ್ಮ ಪರಮ ಕರ್ತವ್ಯವಾಗಿದೆ. ಆದರೆ ಇಂತಹ ಕಠಿಣ ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದವರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ. ಜೆಡಿಎಸ್‍ನವರು ಇಂತಹ ಸಂದರ್ಭದಲ್ಲಿ ಕ್ವಾರಂಟೈನ್‍ನಲ್ಲಿ ಉಳಿದಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಏನ್ ಹೇಳ್ಬೇಕೋ ಅದನ್ನು ಕರ್ನಾಟಕದಲ್ಲೇ ಹೇಳ್ತೀನಿ: ಅರುಣ್ ಸಿಂಗ್

    ಅವರು ಜನತೆಯ ಸೇವೆಯನ್ನು ಮಾಡುತ್ತಿಲ್ಲ, ಆದರೆ ಬಿಜೆಪಿ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಜನತೆಗೆ ತಿಳಿದಿದೆ ಸಹ, ಅವರ ಕಾರ್ಯದ ಕುರಿತು ಸಮೀಕ್ಷೆ ಮಾಡಬೇಕಿದೆ. ಈ ಮೂಲಕ ಸೇವೆಯ ಮುಂದೆ ಹೇಗೆ ನಡೆಸಬೇಕು ಎಂಬುದರ ಕುರಿತು ಸಹ ನೋಡಬೇಕಿದೆ. ಬಿಜೆಪಿ ಕಾರ್ಯಕರ್ತರು ಗಿಡ ನೆಡುವುದು, ಒನ್ ಟೈಪ್ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ಅಲ್ಲದೆ ಮುಂದೆ ಯೋಗ ದಿನಾಚರಣೆಯನ್ನು ಸಹ ಅದ್ಧೂರಿಯಾಗಿ ಮಾಡಬೇಕಿದೆ. ಈ ಕಾರ್ಯಕ್ರಮಗಳ ಕುರಿತು ಸಹ ಕಾರ್ಯಕರ್ತರೊಂದಿಗೆ ಹಾಗೂ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ವಿವರಿಸಿದರು.

    ಅರುಣ್ ಸಿಂಗ್ ಸ್ವಾಗತಕ್ಕೆ ದೆಹಲಿ ವಿಶೇಷ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಆಗಮಿಸಿದ್ದರು. ಜೊತೆಗೆ ಸಾಕಷ್ಟು ಬಿಜೆಪಿ ಕಾರ್ಯಕರ್ತರು ಸಹ ಆಗಮಿಸಿದ್ದರು. ಅಲ್ಲದೆ ಹವಾಮಾನದ ವೈಪರೀತ್ಯ ಹಿನ್ನೆಲೆ ವಿಮಾನ 25 ನಿಮಿಷ ತಡವಾಗಿ ವಿಮಾನ ಲ್ಯಾಂಡ್ ಆಯಿತು. 3.55ಕ್ಕೆ ಏರ್ಪೋರ್ಟ್ ಗೆ ಆಗಮಿಸಲಿರುವ ಅರುಣ್ ಸಿಂಗ್, ಕಾರ್ಯಕರ್ತರೊಂದಿಗೆ ನಡೆದರು. ಈ ವೇಳೆ ಸಾಮಾಜಿಕ ಅಂತರ ಕಾಪಾಡದ್ದಕ್ಕೆ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

  • ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಸಿಎಂ ಬಿ.ಎಸ್.ಯಡಿಯೂರಪ್ಪ

    ಕೋವಿಡ್ ಮೂರನೇ ಅಲೆ ಎದುರಿಸಲು ಎಲ್ಲಾ ಮುಂಜಾಗರೂಕತಾ ಕ್ರಮ: ಸಿಎಂ ಬಿ.ಎಸ್.ಯಡಿಯೂರಪ್ಪ

    ಶಿವಮೊಗ್ಗ: ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸರ್ಕಾರ ಎಲ್ಲಾ ಮುಜಾಗರೂಕತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಜನರು ಭೀತಿಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

    ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಕೋವಿಡ್ ನಿರ್ವಹಣೆ ಹಾಗೂ ವಿವಿಧ ಅಭಿವೃದ್ದಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಮೂರನೇ ಅಲೆ ಕುರಿತು ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸರ್ಕಾರ ಡಾ.ದೇವಿಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ಈಗಾಗಲೇ ರಚಿಸಿದೆ. ಈ ಸಮಿತಿ ಮೂರ್ನಾಲ್ಕು ದಿನಗಳಲ್ಲಿ ವರದಿಯನ್ನು ಸಲ್ಲಿಸಲಿದ್ದು, ಸಮಿತಿಯ ವರದಿಯ ಆಧಾರದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂರನೇ ಅಲೆಯಿಂದ ಮಕ್ಕಳಿಗೆ ತೊಂದರೆಯಾಗಲಿದೆ ಎಂಬ ವರದಿಗಳಿದ್ದು, ಕೋವಿಡ್‍ನಿಂದ ಮಕ್ಕಳನ್ನು ರಕ್ಷಿಸಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 75 ಮಕ್ಕಳ ಐಸಿಯು ಬೆಡ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

    1,780 ವೈದ್ಯರ ನೇಮಕಾತಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕೆಳಗೆ ಇಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ವೈದ್ಯಕೀಯ ಸೇವೆ ಉತ್ತಮಪಡಿಸಲು ಸರ್ಕಾರ ಹಲವು ದಿಟ್ಟ ಹೆಜ್ಜೆ ಇರಿಸಿದೆ. ಇದೇ ಮೊದಲ ಬಾರಿಗೆ 1,780 ವೈದ್ಯರನ್ನು ರಾಜ್ಯದಲ್ಲಿ ನೇರ ನೇಮಕಾತಿ ಮೂಲಕ ಪಡೆದುಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲೆಗೆ 83 ವೈದ್ಯರ ನೇಮಕ ಮಾಡಲಾಗಿದ್ದು, ಇದರಲ್ಲಿ 29 ಮಂದಿ ತಜ್ಞ ವೈದ್ಯರಿದ್ದಾರೆ. ಜಿಲ್ಲೆಯ ವೈದ್ಯಕೀಯ ಕ್ಷೇತ್ರದ ಸುಧಾರಣೆ ಕುರಿತು ಪರಿಶೀಲನೆ ನಡೆಸಲು ಜಿಲ್ಲೆಗೆ ಮತ್ತೊಮ್ಮೆ ಭೇಟಿ ನೀಡಲು ಆರೋಗ್ಯ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

    ತಜ್ಞರ ಸಮಿತಿಯಿಂದ ಆಡಿಟ್: ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಸಾವುಗಳ ಕುರಿತು ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಆಡಿಟ್ ನಡೆಸಿ ವರದಿಯನ್ನು ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಮರಣ ಪ್ರಮಾಣ ಹೆಚ್ಚಾಗಿರಲು ಕಾರಣವನ್ನು ಕಂಡುಕೊಳ್ಳಲು ಬೆಂಗಳೂರಿನಿಂದ ತಜ್ಞರ ಸಮಿತಿಯನ್ನು ಕಳುಹಿಸಲಾಗುವುದು. ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾದ 72ಗಂಟೆಯೊಳಗೆ ಸಾವಿಗೀಡಾದವರ ಪ್ರಮಾಣ ಹೆಚ್ಚಾಗಿದ್ದು, ಈ ಕುರಿತು ಸಮಿತಿ ಪರಿಶೀಲನೆ ನಡೆಸಿ ವರದಿಯನ್ನು ನೀಡಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಸಭೆಯಲ್ಲಿ ತಿಳಿಸಿದರು.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು. ಯಾವುದೇ ಕಾರಣಕ್ಕೂ ಹೋಂ ಐಸೋಲೇಷನ್‍ಗೆ ಅವಕಾಶ ನೀಡದರೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿಯೇ ಪೀಡಿತರಿಗೆ ಚಿಕಿತ್ಸೆ ಒದಗಿಸಬೇಕು. ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಬೆಡ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಇದಕ್ಕೆ ಅನುಗುಣವಾಗಿ ವೈದ್ಯರು ಸೇರಿದಂತೆ ಮೂಲಸೌಲಭ್ಯಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರು, ನರ್ಸ್ ಗಳು ಹಾಗೂ ಡಿ ಗ್ರೂಪ್ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆಯಿದ್ದು, ಈ ಕುರಿತು ಆದಷ್ಟು ಬೇಗನೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಜಿಲ್ಲೆಯ ಕೋವಿಡ್ ನಿರ್ವಹಣೆ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುರಿತು ಮಾಹಿತಿಯನ್ನು ನೀಡಿದರು. ನಗರಾಭಿವೃದ್ಧಿ ಸಚಿವ ಬಿ.ಬಸವರಾಜು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

  • ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಕ್ಷಿಪ್ರ ಅನುಷ್ಠಾನಕ್ಕೆ ಆದ್ಯತೆ ನೀಡಿ: ಸಿಎಂ ಬಿಎಸ್‍ವೈ

    ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಕ್ಷಿಪ್ರ ಅನುಷ್ಠಾನಕ್ಕೆ ಆದ್ಯತೆ ನೀಡಿ: ಸಿಎಂ ಬಿಎಸ್‍ವೈ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಜರುಗಿತು.

    ಸಭೆಯ ಪ್ರಮುಖ ಅಂಶಗಳು:
    1. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯ ಅನುಷ್ಠಾನಕ್ಕೆ ಟರ್ಕಿ ಇಸ್ರೇಲ್ ಹಾಗೂ ಸ್ವಿಸ್ ದೇಶಗಳ ಕಂಪನಿಗಳು ಆಸಕ್ತಿ ತೋರಿದ್ದು, ಶೀಘ್ರವಾಗಿ ಟೆಂಡರ್ ಅಂತಿಮಗೊಳಿಸಿ ಸಚಿವ ಸಂಪುಟದ ಅನುಮೋದನೆ ಪಡೆದು ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

    2. ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಡಾ: ಕೆ.ಶಿವರಾಮ ಕಾರಂತ ಬಡಾವಣೆಗಳಲ್ಲಿ ಮೂಲ ಸೌಲಭ್ಯಗಳಾದ ಒಳಚರಂಡಿ, ವಿದ್ಯುತ್ ಸಂಪರ್ಕ ರಸ್ತೆ ಮುಂತಾದ ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡುವಂತೆ ಸೂಚಿಸಿದರು.

    3. ಖಾಲಿ ನಿವೇಶನಗಳು, ಪ್ಲಾಟ್‍ಗಳು ಹಾಗೂ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಪ್ರಾಧಿಕಾರದ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಬಿ.ಡಿ.ಎ ಕಳೆದ ಸಾಲಿನಲ್ಲಿ 2,066.72 ಕೊಟಿ ರೂ.ಗಳ ಆದಾಯ ಗಳಿಸಿದ್ದು, 1,332.44 ಕೋಟಿಗಳು ವೆಚ್ಚವಾಗಿದೆ. ಈ ಬಾರಿ 9,530 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದರು.

    4. ಬಿ.ಡಿ.ಎ ಗೆ ಸೇರಿದ ವಾಣಿಜ್ಯ ಸಂಕೀರ್ಣಗಳನ್ನು ಪಿ.ಪಿ.ಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕುರಿತು ಪರಿಶೀಲಿಸಬೇಕೆಂದರು.

    5. ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಹೂಳೆತ್ತಿ ವಿಲೇವಾರಿ ಮಾಡುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಚಿಕ್ಕಬಾಣಾವರ, ಕೊಮ್ಮ ಘಟ್ಟ ಹಾಗೂ ರಾಮಸಂದ್ರ ಕೆರೆಗಳ ಅಭಿವೃದ್ಧಿಗೂ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

    6. ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಲ್ಯಾಂಡ್ ಆಡಿಟ್ ಸಮೀಕ್ಷೆಯ ವರದಿಯಂತೆ ಪ್ರಾಧಿಕಾರಕ್ಕೆ ಲಭ್ಯವಿರುವ ಒಟ್ಟು ಆಸ್ತಿಯ ಕುರಿತ ಮಾಹಿತಿಯನ್ನು ಒದಗಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

    7. ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 6,431 ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವುದರಿಂದ ಕಾನೂನು ವಿಭಾಗವನ್ನು ಬಲಪಡಿಸಲು ಉತ್ತಮ ವಕೀಲರನ್ನು ನೇಮಿಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

    8. ಪ್ರಾಧಿಕಾರವು ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಕೈಗೆತ್ತಿಕೊಳ್ಳಲಾಗಿರುವ ಗಣಕೀಕರಣ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು.

    ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಬಿ.ಡಿ.ಎ. ಆಯುಕ್ತ ರಾಜೇಶ್ ಗೌಡ ಉಪಸ್ಥಿತರಿದ್ದರು.

  • ಸಿಎಂ ರಾಜೀನಾಮೆ ಇಲ್ಲ, ಅವರ ಹೇಳಿಕೆಯ ಅರ್ಥ ಸ್ಥಾನ ತ್ಯಜಿಸುತ್ತಾರೆಂದಲ್ಲ: ಅಶ್ವಥ್ ನಾರಾಯಣ್

    ಸಿಎಂ ರಾಜೀನಾಮೆ ಇಲ್ಲ, ಅವರ ಹೇಳಿಕೆಯ ಅರ್ಥ ಸ್ಥಾನ ತ್ಯಜಿಸುತ್ತಾರೆಂದಲ್ಲ: ಅಶ್ವಥ್ ನಾರಾಯಣ್

    ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ‘ಅವರು ರಾಜೀನಾಮೆ ನೀಡುತ್ತಾರೆ’ ಅಥವಾ ‘ಸ್ಥಾನ ತ್ಯಜಿಸುತ್ತಾರೆ’ ಎಂದು ಅರ್ಥೈಸುವುದು ಬೇಡ. ನಮ್ಮದು ಶಿಸ್ತಿನ ಪಕ್ಷ ಎಂಬ ಸಂದೇಶವನ್ನಷ್ಟೇ ಅವರು ಪ್ರತಿಪಕ್ಷಗಳಿಗೆ ರವಾನಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

    ಲಗ್ಗೆರೆಯಲ್ಲಿ ಭಾನುವಾರ ಶಾಸಕ ಮುನಿರತ್ನ ಅವರು ಆಯೋಜಿಸಿದ್ದ ಕೋವಿಡ್ ಸಂಕಷ್ಟದಲ್ಲಿರುವ ಜನರಿಗೆ ಒಂದು ಲಕ್ಷ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.

    ಸಿಎಂ ಯಾವ ದೃಷ್ಟಿಯಲ್ಲಿ ಈ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಅವರು ನಮ್ಮ ಅಗ್ರಮಾನ್ಯ ನಾಯಕರು. ನಾನು ಯಾವುದೇ ಕುರ್ಚಿಗೆ ಅಂಟಿಕೊಳ್ಳಲ್ಲ, ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ನಿರ್ಣಯಕ್ಕೆ ನಾನು ಬದ್ಧವಾಗಿರುತ್ತೇನೆ ಅಂತ ಅವರು ಹೇಳಿದ್ದಾರೆ. ಹೀಗೆ ಹೇಳಿದ ತಕ್ಷಣ ಅವರು ಮುಖ್ಯಮಂತ್ರಿ ಹುದ್ದೆ ತ್ಯಜಿಸುತ್ತಾರೆಂದು ಅರ್ಥವಲ್ಲ. ಪಕ್ಷಕ್ಕೆ ಬದ್ಧರಾಗಿರುವ ಸಂದೇಶವನ್ನಷ್ಟೇ ಅವರು ಪ್ರತಿಪಕ್ಷಕ್ಕೆ ನೀಡಿದ್ದಾರೆ ಎಂದರು.

    ಅವರು ಈಗ ನಮ್ಮ ಮುಖ್ಯಮಂತ್ರಿಗಳಾಗಿದ್ದಾರೆ. ಮುಖ್ಯಮಂತ್ರಿಗಳಾಗಿಯೇ ಮುಂದುವರಿಯುತ್ತಾರೆ. ಈ ಬಗ್ಗೆ ಯಾವ ಗೊಂದಲ ಅಥವಾ ಅನುಮಾನ ಬೇಡ ಎಂದು ಡಾ.ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದರು. ಬಿಜೆಪಿ ಕೇಡರ್ ಆಧಾರಿತ ಪಕ್ಷ, ಹೀಗಾಗಿ ಇಂಥ ವಿಷಯಗಳಿಗೆ ಹೆಚ್ಚು ಮಹತ್ವ ಕೊಡುವ ಪದ್ಧತಿ ನಮ್ಮಲ್ಲಿಲ್ಲ ಎಂದರು.