ಬಳ್ಳಾರಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಬ್ಯಾಟಿಂಗ್ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕಷ್ಟಪಟ್ಟು ದುಡಿದು, ಪಕ್ಷವನ್ನು ಕಟ್ಟಿದ್ದಾರೆ. ಅವರನ್ನು ಮುಂದುವರಿಸಿದರೆ ತೊಂದರೆ ಏನು? ಇನ್ನೂ 2 ವರ್ಷ ಅವರೇ ಇದ್ರೆ ಉತ್ತಮ ಆಡಳಿತ ಕೊಡೋಕೆ ಸಾಧ್ಯ. ಅಲ್ಲದೆ ಯಾವ ರಾಜ್ಯದಲ್ಲೂ ನಮ್ಮಂತಹ ಸಿಎಂ ಇಲ್ಲ, ಅವರನ್ನ ಭೇಟಿ ಮಾಡೋದು ತುಂಬ ಸುಲಭ. ಭೇಟಿ ಮಾಡಿದಾಗ ಅಭಿವೃದ್ಧಿ ವಿಚಾರ ಮಾತ್ರ ಮಾತನಾಡುತ್ತಾರೆ. ಅವರ ಮನೆಗೆ ಹೋದ ಶಾಸಕರಿಗೆ ಊಟ, ತಿಂಡಿ ಕೊಟ್ಟು ಜೊತೆಯಲ್ಲೇ ಕುಳಿತು ಮಾತಾಡ್ತಾರೆ. ಈ ರೀತಿಯ ಸಿಎಂ ನನಗೆ ಬೇರೆಲ್ಲೂ ಸಿಗಲ್ಲ ಎಂದಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ಹಗ್ಗ ಜಗ್ಗಾಟ ವಿಚಾರಕ್ಕೆ ಸೊಮಶೇಖರ ರೆಡ್ಡಿ ವ್ಯಂಗ್ಯವಾಡಿದ್ದು. ಕಾಂಗ್ರೆಸ್ ಯಾವಾಗ್ಲೂ ಅಷ್ಟೇ ಅವರ ಪಕ್ಷದಲ್ಲಿ ಇರೋದೇ ಆ ರೀತಿಯ ನಡುವಳಿಕೆ, ಒಂದು ಬಾರಿ ಅಧಿಕಾರಕ್ಕೆ ಬಂದರೆ ಐದು ಮಂದಿ ಚೇಂಜ್ ಮಾಡ್ತಾರೆ, ಸಿದ್ದರಾಮಯ್ಯನವರು ಪುಣ್ಯಕ್ಕೆ ಐದು ವರ್ಷ ಸಿಎಂ ಆಗಿ ರೆಕಾರ್ಡ್ ಮಾಡಿದ್ದು ಬಿಟ್ಟರೆ ಯಾವಾಗಲೂ ಕೇವಲ ಚೇಂಜ್ ಮಾಡ್ತಾನೆ ಇರ್ತಾರೆ. ಕಾಂಗ್ರೆಸ್ ನಲ್ಲಿ ಒಬ್ಬರ ಕಾಲು ಇನ್ನೊಬ್ಬರು ಎಳೆಯುತ್ತಾರೆ, ಅವರು ಕಾಲು ಎಳೆದು ಇವರು ಸಿಎಂ ಆಗ್ತೇನೆ ಅಂದ್ರೆ, ಇನ್ನೊಬ್ಬರು ಆಗೋದಕ್ಕೆ ಮತ್ತೊಬ್ಬರ ಕಾಲು ಎಳೆಯುತ್ತಾರೆ ಎಂದು ವೆಂಗ್ಯವಾಡಿದ್ದಾರೆ.
ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಸಚಿವ ಜಿ.ಮಾದೇಗೌಡರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಗಾಂಧಿವಾದಿಯಾಗಿ, ಗಾಂಧೀಜಿಯವರ ತತ್ವ, ಆದರ್ಶಗಳನ್ನು ಜೀವನದುದ್ದಕ್ಕೂ ಪಾಲಿಸಿದ ಮಾದೇಗೌಡರು, ಕಾವೇರಿ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ರೈತ ಹೋರಾಟಗಳಲ್ಲಿ ಅವರು ಸಕ್ರಿಯರಾಗಿ ಅಪಾರ ಜನಮನ್ನಣೆ ಗಳಿಸಿದ್ದರು. ಕಿರುಗಾವಲು ವಿಧಾನಸಭಾ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದರು.
ಅವರ ನಿಧನದಿಂದ ರೈತ ಹಾಗೂ ಜನಪರ ಹೋರಾಟಗಾರರೊಬ್ಬರನ್ನು ನಾಡು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದ ಸದಸ್ಯರು ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಹ ಸಂತಾಪ ಸೂಚಿಸಿದ್ದು, ಕಾವೇರಿ ನದಿ ನೀರು ಮತ್ತು ಕನ್ನಡ ನಾಡಿನ ನೆಲ, ಜಲದ ವಿಚಾರದಲ್ಲಿ ರಾಜೀರಹಿತ ಹೋರಾಟ ನಡೆಸುತ್ತಿದ್ದ ರೈತ ಮತ್ತು ಶ್ರಮಿಕರ ಒಡನಾಡಿ ಜಿ.ಮಾದೇಗೌಡ ಅವರು ನನ್ನ ಅತ್ಯಂತ ಆತ್ಮೀಯರು. ಇವರ ನಿಧನ ನನಗೆ ಅಪಾರ ದುಃಖ ತಂದಿದೆ. ಜಿ.ಮಾದೇಗೌಡರು ತಮ್ಮ 94 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಉಸಿರಿರುವವರೆಗೂ ಹೋರಾಟ ಮನೋಭಾವವನ್ನು ಬಿಟ್ಟಿರಲಿಲ್ಲ ಎಂದು ಸ್ಮರಿಸಿದ್ದಾರೆ.
ಕಾವೇರಿ ಹೋರಾಟಕ್ಕೆ ಬದುಕನ್ನು ಅರ್ಪಿಸಿಕೊಂಡಿದ್ದ ಮಾಜಿ ಸಂಸದ ಜಿ.ಮಾದೇಗೌಡರ ನಿಧನದಿಂದಾಗಿ ಹಳೆ ತಲೆಮಾರಿನ ಅಪರೂಪದ ರಾಜಕೀಯ ಹೋರಾಟಗಾರರೊಬ್ಬರನ್ನು ಕಳೆದುಕೊಂಡು ನಾಡು ಬಡವಾಗಿದೆ.
ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/rQtd8NtxUj
ತಮ್ಮ ಬದುಕಿನ ಕೊನೆಯವರೆಗೂ ಕ್ರಿಯಾಶೀಲರಾಗಿದ್ದ ಮಾದೇಗೌಡರು, ಜಿಲ್ಲೆಯ ರೈತರ ಹಿತಕ್ಕೆ ದಕ್ಕೆ ಬಂದಾಗೆಲ್ಲ ಪ್ರತಿಭಟನೆಯ ಧ್ವನಿಯಾಗಿದ್ದರು. ಅಗತ್ಯ ಬಿದ್ದಾಗಲೆಲ್ಲಾ ಸರ್ಕಾರಕ್ಕೆ ಸಲಹೆಗಳನ್ನೂ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಮೈಷುಗರ್ ಕಾರ್ಖಾನೆಯ ಖಾಸಗೀಕರಣದ ಪ್ರಸ್ತಾಪದ ವಿರುದ್ಧ ನಿರಂತರವಾಗಿ ಹೋರಾಟಗಾರರ ಜೊತೆ ನಿಂತಿದ್ದರು ಮತ್ತು ಇಳಿ ವಯಸ್ಸಿನಲ್ಲಿಯೂ ಅನೇಕ ಪ್ರತಿಭಟನೆಗಳಲ್ಲಿ ಖುದ್ದು ಭಾಗವಹಿಸಿದ್ದರು.
ಹಿಡಿದ ಕೆಲಸವನ್ನು ಸಾಧಿಸುವ ಹಠವಾದಿಯಾಗಿದ್ದ ಮಾದೇಗೌಡರು, ಕೆ.ಎಂ.ದೊಡ್ಡಿಯಲ್ಲಿ ಭಾರತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತಮ್ಮ ನೆಲೆಯಲ್ಲೇ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದರು. ಸದಾ ಜಿಲ್ಲೆಯ ರೈತರ ಧ್ವನಿಯಾಗಿದ್ದ ಮಾದೇಗೌಡರ ಸಾವು ಜಿಲ್ಲೆಯ ಜನಪರ ಹೋರಾಟಗಳಿಗೆ ಮತ್ತು ರಾಜಕಾರಣಕ್ಕೆ ಆದ ಬಹುದೊಡ್ಡ ನಷ್ಟ. ಇವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತಲೇ ಜಿಲ್ಲೆಯ ರೈತ ಸಮುದಾಯಕ್ಕೆ, ಕುಟುಂಬವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಮುತ್ಸದ್ಧಿ ರಾಜಕಾರಣಿ, ರೈತ ಹೋರಾಟಗಾರ ಜಿ.ಮಾದೇಗೌಡರ ನಿಧನ ಸಂಗತಿ ತೀವ್ರ ನೋವುಂಟುಮಾಡಿದೆ. ಕಾವೇರಿ ರಕ್ಷಣೆ, ರೈತರ ಹಿತಕ್ಕಾಗಿ ಶ್ರಮಿಸಿದ್ದವರು ಮಾದೇಗೌಡರು. ಅವರ ನಿಧನದಿಂದ ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಅವರು ಗುಣವಾಗುವ ವಿಶ್ವಾಸ ಹುಸಿಯಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಮುತ್ಸದ್ಧಿ ರಾಜಕಾರಣಿ, ರೈತ ಹೋರಾಟಗಾರ G. ಮಾದೇಗೌಡರ ನಿಧನ ಸಂಗತಿ ತೀವ್ರ ನೋವುಂಟುಮಾಡಿದೆ. ಕಾವೇರಿ ರಕ್ಷಣೆ, ರೈತರ ಹಿತಕ್ಕಾಗಿ ಶ್ರಮಿಸಿದ್ದವರು ಮಾದೇಗೌಡರು. ಅವರ ನಿಧನದಿಂದ ಮಂಡ್ಯ ತನ್ನ ಹೆಮ್ಮೆಯ ಪುತ್ರನನ್ನು ಕಳೆದುಕೊಂಡಿದೆ. ಇತ್ತೀಚೆಗಷ್ಟೇ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಬಂದಿದ್ದೆ. ಅವರು ಗುಣವಾಗುವ ವಿಶ್ವಾಸ ಹುಸಿಯಾಗಿದೆ. pic.twitter.com/jOP9pPXWjF
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಹ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ದಶಕಗಳ ಜನಪರ ಚಳುವಳಿಗಳ ಮೂಲಕ ಮಂಡ್ಯ ಜಿಲ್ಲೆಯ, ಕಾವೇರಿ ನದಿಯ ಹಾಗೂ ರಾಜ್ಯದ ಅಸ್ಮಿತೆ ಎತ್ತಿ ಹಿಡಿಯುವ ಕಾರ್ಯವನ್ನು ಜಿ.ಮಾದೇಗೌಡರು ಮಾಡಿದ್ದರು. ಅದರಲ್ಲೂ ಕಾವೇರಿ ನದಿ ನೀರು ಹೋರಾಟಗಳಲ್ಲಿ ಅವರ ಪಾತ್ರ ಮಹತ್ವದ್ದು. ಅವರ ಅಕಾಲಿಕ ನಿಧನದಿಂದ ರಾಜ್ಯ ಮತ್ತು ದೇಶ ಜನಪರ ಕಾಳಜಿಯ ನಾಯಕರನ್ನು ಕಳೆದುಕೊಂಡಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಅಪಾರ ಬಂಧುಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಹ ತೀವ್ರ ಶೋಕ ವ್ಯಕ್ತಪಡಿಸಿದ್ದು, ಮಂಡ್ಯ ನೆಲದ ಅಪ್ಪಟ ಹೋರಾಟಗಾರ ಜಿ.ಮಾದೇಗೌಡರು, ತಮ್ಮ ಜನಪರ ಹೋರಾಟಗಳಿಂದ ಸಾಮಾಜಿಕ ಜೀವನದಲ್ಲಿ ಅಪಾರ ಗೌರವ ಗಳಿಸಿದವರು. ದಶಕಗಳ ನಿರಂತರ ಹೋರಾಟ, ಅಭಿವೃದ್ಧಿ ಬಗ್ಗೆ ಚಿಂತನೆ, ಜನಪರ ಚಳುವಳಿಗಳ ಮೂಲಕ ಬದುಕು ಸಾರ್ಥಕಗೊಳಿಸಿ ಕೊಂಡ ಮಾದೇಗೌಡರು, ಗಾಂಧಿವಾದವನ್ನು ನಂಬಿದವರು ಹಾಗೂ ಬದುಕಿನುದ್ದಕ್ಕೂ ಅದನ್ನು ಪಾಲಿಸಿದವರು. ಮಂಡ್ಯದಲ್ಲಿ ಗಾಂಧಿ ಭವನ, ಗಾಂಧಿ ಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಸ್ಥಾಪನೆಗೆ ಕಾರಣರಾದವರು.
ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ, ಒಂದು ಬಾರಿ ಸಚಿವರಾಗಿ ಅಗಾಧ ಅನುಭವ ಪಡೆದವರು. ರೈತರ ಸಂಕಷ್ಟಕ್ಕೆ ಸದಾ ಮಿಡಿಯುತ್ತಿದ್ದರು. ರೈತ ಚಳುವಳಿ ಹಾಗೂ ಕಾವೇರಿ ಹೋರಾಟಗಳಲ್ಲಿ ಅವರು ವಹಿಸಿದ ಪಾತ್ರ ಇತಿಹಾಸದಲ್ಲಿ ಉಳಿಯುವಂತಹದ್ದು, ಅವರ ನಿಧನದಿಂದ ಕರ್ನಾಟಕ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅದ್ಭುತ ಜನಪರ ನಾಯಕನನ್ನು ಕಳೆದುಕೊಂಡಿದೆ ಎಂದು ಸಚಿವ ಅರವಿಂದ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ 2021-22 ನೇ ಸಾಲಿನ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯ ಸಭೆ ಇಂದು ಅನುಮೋದನೆ ನೀಡಿತು.
ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ 134 ಕಾಮಗಾರಿಗಳ ಪೈಕಿ ಈವರೆಗೆ 76 ಕಾಮಗಾರಿಗಳು ಪೂರ್ಣಗೊಂಡಿದ್ದು, 58 ಕಾಮಗಾರಿಗಳು ಬಾಕಿ ಇರುತ್ತವೆ. ಒಟ್ಟು 500 ಕೋಟಿ ರೂ ವೆಚ್ಚದ ಅನುಭವ ಮಂಟಪ ಯೋಜನೆಗೆ ಸರ್ಕಾರ 200 ಕೋಟಿ ರೂ ಹಂಚಿಕೆ ಮಾಡಿದೆ. 101 ಎಕರೆ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಹನ್ನೊಂದು ಎಕರೆ 25 ಗುಂಟೆ ಉಚಿತವಾಗಿ ಲಭ್ಯವಿದ್ದು, 69 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. ಈ ಭೂಮಿಯ ಮಾಲೀಕರು ಹೆಚ್ಚು ಪರಿಹಾರ ಬಯಸಿದ್ದು, ಮಾರುಕಟ್ಟೆ ದರದಲ್ಲಿ ಪರಿಹಾರ ಕೇಳುತ್ತಿದ್ದಾರೆ. ಆದುದರಿಂದ ಭೂಸ್ವಾಧೀನ ಪ್ರಕ್ರಿಯೆಗೆ ತೊಂದರೆಯಾಗಿದೆ. ಪರಸ್ಪರ ಸಂದಾನ ನಡೆಸಿ ರೈತರ ಸಮ್ಮತಿ ಪಡೆದು ಭೂ ಸ್ವಾಧೀನ ಪ್ರಕ್ರಿಯೆ ಜರುಗಿಸುವಂತೆ ಮುಖ್ಯಮಂತ್ರಿಗಳು ಸಲಹೆ ಮಾಡಿದರು. ಈ ವರ್ಷ ಬಜೆಟ್ ನಲ್ಲಿ ಲಭ್ಯವಿರುವ 10 ಕೋಟಿ ರೂ ಸೇರಿಸಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಯಿತು.
ಪ್ರಸ್ತುತ ಲಭ್ಯವಿರುವ ಭೂಮಿಯಲ್ಲಿ ಮಣ್ಣಿನ ಪರೀಕ್ಷೆ ಮತ್ತು ಇತರ ಕಾಮಗಾರಿಗಳು ನಡೆದಿವೆ. ಭೂಸ್ವಾಧೀನ ಪ್ರಕ್ರಿಯೆ ಜೊತೆಜೊತೆಗೆ ಡಿಪಿಆರ್ ಹಾಗೂ ಇತರೆ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು. ಇದನ್ನೂ ಓದಿ:ಚೀಪ್ ಮೆಂಟಾಲಿಟಿ ಕೆಲಸ ಮಾಡಬೇಡಿ, ನಾನು ಜಗ್ಗಲ್ಲ – ರಾಕ್‍ಲೈನ್
ಇನ್ನು ಮುಂದೆ ಬಸವಕಲ್ಯಾಣ ಸಭೆಗೆ ಬೀದರ್ ಜಿಲ್ಲೆಯ ಜಿಲ್ಲಾ ಶಾಸಕರನ್ನು ಆಹ್ವಾನಿಸುವಂತೆ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ನೀಡಿದ ಸಲಹೆಗೆ ಮುಖ್ಯಮಂತ್ರಿಗಳು ಸಮ್ಮತಿ ವ್ಯಕ್ತಪಡಿಸಿದರು. ರೈತರ ಒಪ್ಪಿಗೆ ಮೇರೆಗೆ ಭೂಸ್ವಾಧೀನ ಪಡಿಸಿಕೊಳ್ಳವ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದಲ್ಲಿ ಸಭೆಯೊಂದನ್ನು ಆಯೋಜಿಸಲು ತೀರ್ಮಾನಿಸಲಾಯಿತು. ಇದನ್ನೂ ಓದಿ: ಭರವಸೆ ಮೂಡಿಸಿದ ಹೈಕೋರ್ಟ್ ತೀರ್ಪು: ಸುರೇಶ್ ಕುಮಾರ್
ಬೆಂಗಳೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ನಾಡಿನ ರೈತರಿಗಾಗಿ ಆರಂಭಿಸಿದ ಮೈಶುಗರ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡದಿದ್ದರೆ ಭಾರೀ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಎಪಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡರವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಕಾಳೇಗೌಡರವರು, ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವುದಿಲ್ಲ, ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ವಿಧಾನಸಭಾ ಅಧಿವೇಶನದಲ್ಲಿ ಸಿ.ಎಂ.ಯಡಿಯೂರಪ್ಪನವರು ಹೇಳಿದ್ದರು. ಆದರೆ ಈಗ ಅವರೇ ಉಲ್ಟಾ ಹೊಡೆದಿದ್ದಾರೆ. ಯಡಿಯೂರಪ್ಪನವರ ಮಕ್ಕಳು, ಮೊಮ್ಮಕಳು ಆಂಧ್ರ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ್ದು, ಖಾಸಗೀಕರಣದ ನಂತರ ಭಾರೀ ಪ್ರಮಾಣದ ಕಪ್ಪುಹಣವನ್ನು ಇದರಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದಾರೆ. ಮೈಶುಗರ್‍ಗಾಗಿ ಎಎಪಿಯು 2016ರಲ್ಲೇ ಬೃಹತ್ ರ್ಯಾಲಿ ನಡೆಸಿದ್ದು, ಈಗ ಅದರ ಖಾಸಗೀಕರಣವನ್ನು ನೋಡಿ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಒಡೆಯರ್‍ರವರು ವಿಶೇಷ ಶ್ರಮವಹಿಸಿ 1933ರಲ್ಲಿ ಮೈಶುಗರ್ ಕಾರ್ಖಾನೆಯನ್ನು ಆರಂಭಿಸಿದರು. ಇದನ್ನು ರಾಜ್ಯದ ಮೊದಲ ಕಾರ್ಖಾನೆ ಎಂದು ಗೌರವದಿಂದ ಕಾಣಲಾಗುತ್ತದೆ. ಸ್ವಾತಂತ್ರ್ಯ ಬಂದು 73 ವರ್ಷವಾದರೂ ರಾಜ್ಯವನ್ನು ಆಳಿದ ಯಾವ ಮುಖ್ಯಮಂತ್ರಿಗೂ ಇಂತಹ ಮತ್ತೊಂದು ಕಾರ್ಖಾನೆಯನ್ನು ಆರಂಭಿಸಲು ಸಾಧ್ಯವಾಗಿಲ್ಲ. ನಾಡಿನ ರೈತರ ಬದುಕನ್ನು ಸುಧಾರಿಸುವುದರಲ್ಲಿ ಮೈಶುಗರ್ ಪಾತ್ರ ಮಹತ್ವದ್ದಾಗಿದೆ. ಕಾರ್ಖಾನೆಯ ನೌಕರರು ಹಾಗೂ ಕಬ್ಬು ಬೆಳೆಗಾರರು ಮೈಶುಗರ್ ಸಂಸ್ಥೆಯೊಂದಿಗೆ ಆರ್ಥಿಕ ಸಂಬಂಧ ಮಾತ್ರವಲ್ಲದೇ ಭಾವನಾತ್ಮಕ ಸಂಬಂಧವನ್ನೂ ಹೊಂದಿದ್ದಾರೆ ಎಂದು ಕಾಳೇಗೌಡರವರು ತಿಳಿಸಿದರು. ಇದನ್ನೂ ಓದಿ: ಮೈಶುಗರ್ ಆರಂಭಕ್ಕೆ ಆಸಕ್ತಿ ತೋರಿಸದ ಸರ್ಕಾರದ ವಿರುದ್ಧ ಆಕ್ರೋಶ
ಪ್ರತಿದಿನವೂ 5 ಟನ್ ಸಕ್ಕರೆ ಅರೆಯುವ ಸಾಮರ್ಥ್ಯವನ್ನು ಮೈಶುಗರ್ ಕಾರ್ಖಾನೆ ಹೊಂದಿದೆ. 14 ಸಾವಿರಕ್ಕೂ ಹೆಚ್ಚು ರೈತರು ಇದರ ಷೇರುದಾರರಾಗಿದ್ದಾರೆ. ಈ ಹಿಂದೆ 18ಕ್ಕೂ ಹೆಚ್ಚು ವರ್ಷಗಳ ಕಾಲ ಮೈಶುಗರ್ ಕಂಪನಿಯು ಶೇ. 20ರಿಂದ ಶೇ. 30ರಷ್ಟು ಡಿವಿಡೆಂಡ್ ನೀಡಿದ ಕೀರ್ತಿ ಹೊಂದಿದೆ. 14ಕ್ಕೂ ಹೆಚ್ಚು ಫಾರ್ಮ್‍ಗಳು, ವಿದ್ಯಾಸಂಸ್ಥೆಗಳು ಮತ್ತು ರೈತ ಸಮುದಾಯ ಭವನಗಳು ಸೇರಿ 207 ಎಕರೆಗಿಂತ ಹೆಚ್ಚಿನ ಭೂಮಿಯು ಮೈಶುಗರ್ ಸಂಸ್ಥೆಯ ಬಳಿಯಲ್ಲಿದೆ. ಇಷ್ಟು ಸಮೃದ್ಧವಾದ ಇತಿಹಾಸ ಹೊಂದಿರುವ ಸಂಸ್ಥೆಯು ಸರ್ಕಾರದ ನಿರ್ಲಕ್ಷ್ಯದಿಂದಾಗಿ ಸ್ಥಗಿತಗೊಂಡಿದೆ. ಸರ್ಕಾರವು ಬಂಡವಾಳ ಹೂಡಿ ಸಂಸ್ಥೆಯನ್ನು ಆಧುನೀಕರಣಗೊಳಿಸಬೇಕೇ ಹೊರತು ಖಾಸಗೀಕರಣದ ಹೆಸರಿನಲ್ಲಿ ಮಾರಾಟ ಮಾಡಬಾರದು ಎಂದು ನಂಜಪ್ಪ ಕಾಳೇಗೌಡ ಹೇಳಿದರು. ಇದನ್ನೂ ಓದಿ:ಮೈಶುಗರ್ ಕಾರ್ಖಾನೆ ಖಾಸಗೀಕರಣಕ್ಕೆ ರಾಜವಂಶಸ್ಥ ಯದುವೀರ್ ಬೆಂಬಲ
ಕಲಬುರಗಿ: ಅನ್ನದಾತರ ಬದುಕು ಹಸನಗೊಳಿಸಲು ಹತ್ತಾರು ರೈತಾಪಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಎಂ.ಎಸ್.ಕೆ ಮಿಲ್ ವಾಣಿಜ್ಯ ಬಡಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ಅನುದಾನದಡಿ, 2 ಎಕರೆ ಪ್ರದೇಶದಲ್ಲಿ ಸುಮಾರು 26.30 ಕೋಟಿ ರೂ. ವೆಚ್ಚದಲ್ಲಿ ನೂತನ ಮಾದರಿಯ ತರಕಾರಿ ಮಾರುಕಟ್ಟೆ ಸಂಕೀರ್ಣಕ್ಕೆ ಶನಿವಾರ ಅಡಿಗಲ್ಲು ಹಾಕಿ ಅವರು ಮಾತನಾಡಿದರು.
ಅನ್ನದಾತರ ಬೆಳೆಗೆ ಸೂಕ್ತ ಮಾರುಕಟ್ಟೆ ದೊರಕಬೇಕು ಎಂಬ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚಿನ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಹೂವು ಬೆಳೆಗಾರರು ಹಾಗೂ ತರಕಾರಿ ಮಾರಾಟಗಾರರು ಸೂಕ್ತ ಮಾರುಕಟ್ಟೆ ಸಿಗದೆ ಕಷ್ಟ ಅನುಭವಿಸಿದ್ದರು. ಇದನ್ನರಿತ ಕೇಂದ್ರ ಸರ್ಕಾರ ದೂರದ ಪ್ರದೇಶದಲ್ಲಿಯೂ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಲು ಸಾಗಾಣಿಕೆಗೆ ಕಿಸಾನ್ ರೈಲು ಯೋಜನೆ ಜಾರಿಗೆ ತಂದಿದ್ದು, ರೈತರಿಗೆ ತುಂಬಾ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 20 ಕೊಟಿ ರೂ. ಹಾಗೂ ಕಲಬುರಗಿ ನಾಗರಾಭಿವೃದ್ಧಿ ಪ್ರಾಧಿಕಾರದಿಂದ 6.30 ಕೋಟಿ ರೂ. ಹೀಗೆ ಒಟ್ಟು 26.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ತರಕಾರಿ ಮಾರುಕಟ್ಟೆ ಸಂಕೀರ್ಣ ರಾಜ್ಯದ ಇತಿಹಾಸದಲ್ಲೇ ಮೊದಲ ಕಟ್ಟಡವಾಗಿದ್ದು, ತುಂಬಾ ಸಂತೋಷದಿಂದ ಅಡಿಗಲ್ಲು ನೆರವೇರಿಸಿದ್ದೇನೆ. ಈ ತರಹದ ಮಾದರಿ ತರಕಾರಿ ಮಾರುಕಟ್ಟೆ ನಿರ್ಮಾಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲಾಗುವುದು ಎಂದರು.
ನೂತನ ತರಕಾರಿ ಮಾರುಕಟ್ಟೆಯಿಂದ ಈ ಭಾಗದ ರೈತರ ಹಾಗೂ ಜನರ ಬಹುದಿನಗಳ ಕನಸು ನನಸಾಗಲಿದ್ದು, ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದ ಮತ್ತು ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದ ರೈತಾಪಿ ವರ್ಗಕ್ಕೆ ಇದರಿಂದ ನೆಮ್ಮದಿ ಸಿಕ್ಕಿದೆ. ರಸ್ತೆಯುದ್ದಕ್ಕೂ ಜನ ಗುಂಪಾಗಿ ಸೇರುವ ಕಾರಣ ಅಪಘಾತವಾಗುವ ಸಾಧ್ಯತೆಗಳನ್ನು ಮನಗಂಡು ನೂತನ ತರಕಾರಿ ಮಾರುಕಟ್ಟೆ ಸ್ಥಾಪಿಸಲಾಗುತ್ತಿದೆ. ಇದರಿಂದ ಪ್ರದೇಶದಲ್ಲಿನ ಮುಕ್ತ ಸಂಚಾರಕ್ಕೂ ಅನುವಾಗಲಿದೆ ಎಂದರು.
ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ವೈಜ್ಞಾನಿಕವಾಗಿ ಬೆಲೆ ದೊರಕಿಸುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಕೃಷಿ ನಮ್ಮ ಆದ್ಯತಾ ವಲಯವಾಗಿದ್ದು, ಕೃಷಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡಿದೆ. ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‍ಗೆ ತಲಾ 10,000 ರೂ. ಗಳಂತೆ 20 ಸಾವಿರ ರೈತರಿಗೆ ಪರಿಹಾರ ನೀಡಲಾಗಿದೆ. ಅದೇ ರೀತಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಗರಿಷ್ಠ 1 ಹೆಕ್ಟೇರ್‍ಗೆ ತಲಾ 10,000 ರೂ. ಗಳಂತೆ 69,000 ಸಾವಿರ ರೈತರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.
ಕಟ್ಟಡದ ವಿಶೇಷತೆ
ನೂತನ ತರಕಾರಿ ಮಾರುಕಟ್ಟೆ ಕಾಂಪ್ಲೆಕ್ಸ್ ಬೇಸ್‍ಮೆಂಟ್ ಮಹಡಿ, ನೆಲ ಮಹಡಿ ಹಾಗೂ ಮೊದಲನೇ ಮಹಡಿ ಒಳಗೊಂಡಿದೆ. ಬೇಸ್‍ಮೆಂಟ್ ಮಹಡಿಯಲ್ಲಿ ವಾಹನ ನಿಲುಗಡೆ, ಲಿಫ್ಟ್, ಸ್ಟೇರ್‍ಕೇಸ್, ಸಂಪ್ ಟ್ಯಾಂಕ್, ಎಲೆಕ್ಟ್ರೀಕಲ್ ಕೋಣೆ ಇರಲಿದೆ. ನೆಲ ಮಹಡಿಯಲ್ಲಿ 62 ಅಂಗಡಿಗಳು, ತರಕಾರಿ ಮಾರಾಟಕ್ಕೆ 192 ಮಳಿಗೆ, ಸಗಟು ವ್ಯಾಪಾರ ಹರಾಜು ಪ್ರಕ್ರಿಯೆಗೆ ಪ್ಲಾಟ್‍ಫಾರ್ಮ್, ಘನತ್ಯಾಜ್ಯ ಸಂಗ್ರಹಣೆಗೆ ಸ್ಥಳ, ಕೋಲ್ಟ್ ಸ್ಟೋರೇಜ್ ಕೋಣೆ ಹಾಗೂ ಶೌಚಾಲಯ ಇರಲಿವೆ. ಮೊದಲನೇ ಮಹಡಿಯಲ್ಲಿ 47 ಅಂಗಡಿಗಳು, ಇತರೆ ಕಾರ್ಯಾಲಯ, ಬ್ಯಾಂಕ್ ಇರಲಿದ್ದು, ಒಟ್ಟಾರೆ ಸಂಕೀರ್ಣದಲ್ಲಿ 301 ಅಂಗಡಿಗಳಿರಲಿವೆ ಎಂದು ಸಿ.ಎಂ. ಯಡಿಯೂರಪ್ಪನವರು ಹೇಳಿದ್ದಾರೆ.
ಚೆನೈ: ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರ, ಯೋಜನೆಗೆ ಅಡ್ಡಿವುಂಟು ಮಾಡಲು ಹೊಸ ಪ್ರಯತ್ನವೊಂದನ್ನು ಆರಂಭಿಸಿದೆ. ಆಣೆಕಟ್ಟು ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ ಬೆನ್ನಲ್ಲೇ ಸರ್ವ ಪಕ್ಷಗಳ ಸಭೆ ಕರೆಯಲು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ನಿರ್ಧರಿಸಿದ್ದಾರೆ.
ಜುಲೈ 12ರಂದು ಎಂ.ಕೆ.ಸ್ಟಾಲಿನ್ ಸರ್ವಪಕ್ಷ ಸಭೆ ಕರೆದಿದ್ದು, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಸಭೆಯ ಉದ್ದೇಶ ಎಂದು ಹೇಳಾಗಿದೆ. ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಚಿಂತಿಸಿವೆ.
ಕಳೆದ ಎರಡು ದಿನಗಳ ಹಿಂದೆ ತಮಿಳುನಾಡು ಜಲ ಸಂಪನ್ಮೂಲ ಸಚಿವ ದೊರೈ ಮುರುಗನ್ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಮೇಕೆದಾಟು ಯೋಜನೆಗೆ ತಡೆವೊಡ್ಡಂತೆ ಸಿಎಂ ಬಿಎಸ್‍ವೈ ಬರೆದಿದ್ದ ಪತ್ರಕ್ಕೂ ಸಿಎಂ ಎಂ.ಕೆ.ಸ್ಟಾಲಿನ್ ಖಾರವಾಗಿ ಪ್ರತಿಕ್ರಿಯಿಸಿದ್ದರು.
ತಮಿಳುನಾಡಿನ ಸರ್ಕಾರದ ವಿರೋಧದ ನಡುವೆಯೇ ರಾಜ್ಯ ಸರ್ಕಾರ ಮೇಕೆದಾಟು ಆಣೆಕಟ್ಟು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಈ ಹಿನ್ನಲೆ ಸರ್ವ ಪಕ್ಷ ಸಭೆ ನಡೆಸುವ ಮೂಲಕ ಒಮ್ಮತದ ನಿರ್ಧಾರ ಕೈಗೊಂಡು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ತಮಿಳುನಾಡು ಸರ್ಕಾರ ಪ್ಲ್ಯಾನ್ ಮಾಡಿದೆ.
ಬೆಂಗಳೂರು: ಅನ್‍ಲಾಕ್ ಬಳಿಕ ಸೋಂಕಿನ ಪ್ರಮಾಣ ಏರುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ಬಿಗಿಕ್ರಮದ ಬಗ್ಗೆ ಮಾತು ಆಡಿದ್ದಾರೆ. ಒಂದು ವೇಳೆ ಕೋವಿಡ್ ನಿಯಮಗಳನ್ನು ಪಾಲಿಸದೇ ಹೋದರೆ ಈಗ ನೀಡಲಾಗಿರುವ 15 ದಿನಗಳ ವಿನಾಯ್ತಿಯನ್ನು ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಜುಲೈ 3ರಂದು 15 ದಿನಗಳವರೆಗೆ ಅಂದರೆ ಜುಲೈ 19ರವರೆಗೆ ಅನ್‍ಲಾಕ್ ಘೋಷಣೆ ಮಾಡಿದ್ದಾಗಲೂ ಕೋವಿಡ್ ನಿಯಮ ಪಾಲಿಸಿಲ್ಲ ಎಂದರೆ ಮತ್ತೆ ಬಿಗಿಕ್ರಮದ ಎಚ್ಚರಿಕೆ ನೀಡಿದ್ದರು. ಈಗ ರಾಜ್ಯದಲ್ಲಿ ಮತ್ತೆ ಸೋಂಕು ಏರಿಕೆ ಆಗ್ತಿರುವ ಹಿನ್ನೆಲೆಯಲ್ಲಿ ಸಿಎಂ ಮಾತು ಮಹತ್ವ ಪಡೆದಿದೆ.
ಬುಧವಾರ ರಾಜ್ಯದಲ್ಲಿ 2,743 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 75 ಮಂದಿ ಸಾವನ್ನಪ್ಪಿದ್ದಾರೆ. 3,081 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 39,603 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.1.64 ಮತ್ತು ಮರಣ ಪ್ರಮಾಣ ಶೇ.2.73ರಷ್ಟು ದಾಖಲಾಗಿದೆ. ಇದುವರೆಗೆ ರಾಜ್ಯದಲ್ಲಿ 35,601 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 28,62,338ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಮದ್ಯದಂಗಡಿ ಮುಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಬುಧವಾರದ ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 2, ಬಳ್ಳಾರಿ 22, ಬೆಳಗಾವಿ 120, ಬೆಂಗಳೂರು ಗ್ರಾಮಾಂತರ 70, ಬೆಂಗಳೂರು ನಗರ 611, ಬೀದರ್ 6, ಚಾಮರಾಜನಗರ 47, ಚಿಕ್ಕಬಳ್ಳಾಪುರ 28, ಚಿಕ್ಕಮಗಳೂರು 151, ಚಿತ್ರದುರ್ಗ 29, ದಕ್ಷಿಣ ಕನ್ನಡ 304, ದಾವಣಗೆರೆ 46, ಧಾರವಾಡ 20, ಗದಗ 6, ಹಾಸನ 220, ಹಾವೇರಿ 15, ಕಲಬುರಗಿ 14, ಕೊಡಗು 148, ಕೋಲಾರ 73, ಕೊಪ್ಪಳ 15, ಮಂಡ್ಯ 95, ಮೈಸೂರು 248, ರಾಯಚೂರು 7, ರಾಮನಗರ 34, ಶಿವಮೊಗ್ಗ 149, ತುಮಕೂರು 112, ಉಡುಪಿ 101, ಉತ್ತರ ಕನ್ನಡ 40, ವಿಜಯಪುರ 3 ಮತ್ತು ಯಾದಗಿರಿಯಲ್ಲಿ 7 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಅಮಿತ್ ಶಾಗೆ ಸಹಕಾರ, ಶೋಭಾ ಕರಂದ್ಲಾಜೆಗೆ ಕೃಷಿ – ಯಾರಿಗೆ ಯಾವ ಖಾತೆ?
ದೊಡ್ಡಬಳ್ಳಾಪುರ: ಕೊರೊನಾ ತುರ್ತು ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತಾಯಿ, ಮಗು ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ 100 ಹಾಸಿಗೆಯ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಜುಲೈ 7ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾ ಉಸ್ತುವಾರಿ ಸಚಿವ ನಾಗರಾಜು(ಎಂ.ಟಿ.ಬಿ) ಕಂದಾಯ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಲೆನೊವೊ, ಗೋಲ್ಡ್ ಮ್ಯಾನ್ ಸ್ಯಾಚಸ್ ಕಂಪನಿಗಳು ತಮ್ಮ ಸಿ.ಎಸ್.ಆರ್ ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಮಾಡ್ಯುಲಸ್ ಸಂಸ್ಥೆಯವರು ಸಿದ್ಧಪಡಿಸಿರುವ ವಿನ್ಯಾಸದಂತೆ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣಗೊಂಡಿದೆ. ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಕ ಕಾರ್ಯಕರ್ತರ ವಲಯ, ಸ್ಕ್ರೀನಿಂಗ್ ಮತ್ತು ವೀಕ್ಷಣಾ ವಲಯ, ಪ್ರತ್ಯೇಕ ವಾರ್ಡ್ ವಲಯ, ಐಸಿಯು ವಾರ್ಡ್ ವಲಯ ಎಂದು ನಾಲ್ಕು ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಈ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ 70 ಆಕ್ಸಿಜನ್ ಬೆಡ್ ಗಳು, 20 ಐ.ಸಿ.ಯು (ತೀವ್ರ ನಿಗಾ ಘಟಕ)ಬೆಡ್ ಗಳು, 10 ವೆಂಟಿಲೇಟರ್ ಬೆಡ್ ಗಳು ಹಾಗೂ 2 ಕೆ.ಎಲ್. ಆಕ್ಸಿಜನ್ ಜನರೇಟರ್ ವ್ಯವಸ್ಥೆಯನ್ನು ಹೊಂದಿದೆ. ಈ ಆಸ್ಪತ್ರೆಯ ಲೇಔಟ್ ನಿರ್ಮಾಣ ಕಾಮಗಾರಿಯನ್ನು ದೊಡ್ಡಬಳ್ಳಾಪುರದ ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್ ನಿರ್ವಹಿಸಿದೆ. ಈ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ, ಅಮೆರಿಕನ್ ಇಂಡಿಯಾ ಫೌಂಡೇಶನ್ ಮತ್ತು ಯು.ಎನ್.ಡಿ.ಪಿ ಸಂಸ್ಥೆಗಳು ನಿರ್ವಹಿಸಿವೆ.
ಸುಸಜ್ಜಿತ ಎಲ್‍ಇಡಿ ಲೈಟ್‍ಗಳು 2×2 ಅಡಿ, 40 ವ್ಯಾಟ್ಸ್, ಕ್ಯಾಬಿನ್ ಫ್ಯಾನ್ ಗಳು, 12 ಇಂಚು-80 ವ್ಯಾಟ್ಸ್, ಎಕ್ಸಾಸ್ಟ್ ಫ್ಯಾನ್ ಗಳು 250 ಎಂಎಂ ಸ್ವೀಪ್ 25 ವ್ಯಾಟ್ಸ್, ಸಾಕೆಟ್ ಗಳು ಮತ್ತು ಪ್ಲಗ್ ಪಾಯಿಂಟ್ ಗಳು 5 ಆ್ಯಂಪ್ ಮತ್ತು 15 ಆ್ಯಂಪ್ (ವೈದ್ಯಕೀಯ ಉಪಕರಣಗಳ ಪ್ಲಗಿನ್), ವಿತರಣಾ ಬಾಕ್ಸ್- ಸಿಂಗಲ್ ಫೇಸ್ 32 ಆ್ಯಂಪ್-ಎಂಸಿಬಿ, ಎಸಿ ಪ್ಲಗ್ ಪಾಯಿಂಟ್ ಗಳ ಜೊತೆಗೆ 40 ಆ್ಯಂಪ್‍ಗಳು, ಎಸಿ ಸ್ಟೆಬಿಲೈಜರ್ ಗಳು ಇವೆ.
ವೆಸ್ಟರ್ನ್ ಕ್ಲೋಸೆಟ್- ಪ್ರತಿ ಶೌಚಾಲಯಕ್ಕೆ ತಲಾ 1, ವಾಶ್ ಬೇಸಿನ್ ತಲಾ 1, ಎಕ್ಸಾಸ್ಟ್ ಫ್ಯಾನ್‍ಗಳು 150 ಎಂಎಂ ಸ್ವೀಪ್, ಬಿಸಿ ಮತ್ತು ತಣ್ಣೀರು ಸೌಲಭ್ಯದ ಶವರ್ ಹೆಡ್‍ಗಳು, ಬಿಸಿ ನೀರಿನ ಗೀಸರ್- ತಲಾ 1 ಸೇರಿದಂತೆ ಶೌಚಾಲಯಗಳು ಮತ್ತು ಕೊಳಾಯಿ ವ್ಯವಸ್ಥೆಗಳ ಸೌಲಭ್ಯಗಳು ಇದರಲ್ಲಿವೆ.
30 ಎಂಪಿಸಿ ಗ್ರೇಡ್ ನೊಂದಿಗೆ ನೆಲಮಟ್ಟದಿಂದ 9 ಇಂಚಿನಷ್ಟು ಗಟ್ಟಿಯಾದ ಮಣ್ಣು ಪಿಸಿಸಿ ಬಳಕೆ, 15 ಅಡಿ ವ್ಯಾಪ್ತಿಯೊಳಗೆ ವಿದ್ಯುತ್ ಸಂಪರ್ಕ ಸೌಲಭ್ಯ, 15 ಅಡಿ ವ್ಯಾಪ್ತಿಯೊಳಗೆ ನೀರಿನ ಸಂಪರ್ಕ ಸೌಲಭ್ಯ, ಒಳಚರಂಡಿ ವ್ಯವಸ್ಥೆ, ತೆರೆದ ಮೈದಾನ, 40 ಎಫ್‍ಟಿ ಟ್ರೈಲರ್, 5ಟಿ ಕ್ರೇನ್ ಸುಲಭ ಚಲನೆಗೆ ಸ್ಥಳಾವಕಾಶ ಇರಿಸಲಾಗಿದೆ.
– ಸಿಎಂ ಹುದ್ದೆ ದಸರಾದ ಅಂಬಾರಿ ಹೊರುವ ಆನೆ ಇದ್ದಂತೆ, ಶಾಶ್ವತ ಅಲ್ಲ
ಮೈಸೂರು: ಸಿಎಂ ಹುದ್ದೆಯನ್ನು ಮೈಸೂರು ದಸರಾದ ಅಂಬಾರಿ ಹೊರುವ ಆನೆಗೆ ಹೋಲಿಸಿ ಸಚಿವ ಸಿ.ಪಿ.ಯೋಗೇಶ್ವರ್ ನಿಗೂಢವಾಗಿ ಮಾತನಾಡಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಸಿಎಂ ಹುದ್ದೆ ಮೈಸೂರು ದಸರಾದ ಅಂಬಾರಿ ಹೊರುವ ಆನೆ ಇದ್ದಂತೆ, ಅದೇನು ಶಾಶ್ವತ ಅಲ್ಲ. ಅಂಬಾರಿಯನ್ನು, ತಾಯಿ ಚಾಮುಂಡೇಶ್ವರಿಯನ್ನು ನಾವು ಗೌರವಿಸುತ್ತೇವೆ. ಸಿಎಂ ಆದವರು ಸಂವೇದನಾಶೀಲರಾಗಿರಬೇಕು, ಆದರ್ಶ ಆಲೋಚನೆ ಹೊಂದಿರಬೇಕು, ಸಮರ್ಥವಾಗಿರಬೇಕು. ಆನೆ ತೂಕ ಮಾತ್ರ ಪ್ರಾಮುಖ್ಯ ಆಗಲ್ಲ, ಕೊನೆಯ ತನಕ ಯಶಸ್ವಿಯಾಗಿ ಅಂಬಾರಿ ತಲುಪಿಸುವ ಆನೆಯಾಗಬೇಕು. ಸಿಎಂ ಅನ್ನುವುದು ವೈಭವ, ಪ್ರೆಸ್ಟೀಜ್ ಅಲ್ಲ. ಅದು ಜನಪರ ಕಾಳಜಿ ಇರುವ ಸಂವೇದಶೀಲವಾದ ಹುದ್ದೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ. ಬಿ.ಎಸ್.ಯಡಿಯೂರಪ್ಪನವರಿಗೆ ಟಾಂಗ್ ನೀಡಿದ್ದಾರೆ.
ಸಿಎಂ ಸ್ಥಾನ ಸಾಕು ಎಂದು ಸಿದ್ದರಾಮಯ್ಯ ಹೇಳಿದ್ದರು, ಈಗ ಬೇಕು ಎನ್ನುತ್ತಿದ್ದಾರೆ. ಅಂಬಾರಿ ಹೊರುವ ಆನೆಯನ್ನು ಆಗಾಗ ಬದಲಾಯಿಸಲಾಗುತ್ತದೆ, ಬದಲಾವಣೆ ಜಗದ ನಿಯಮ. ಅರ್ಜುನ, ಅಭಿಮನ್ಯು, ಬಲರಾಮ ಎಲ್ಲರೂ ಅಂಬಾರಿ ಹೊತ್ತಿದ್ದಾರೆ. ಅರ್ಜುನ ಅಂಬಾರಿ ಹೊತ್ತ ಎಂದು ಮರಿ ಆನೆಗೆ ಅಂಬಾರಿ ಹೊರಿಸಲು ಸಾಧ್ಯವಿಲ್ಲ. ಕರ್ನಾಟಕ ಆನೆ, ಹುಲಿಗಳಿಗೆ ಜಾಸ್ತಿ ಹೆಸರುವಾಸಿ. ಸಮರ್ಥವಾಗಿ ಅಂಬಾರಿ ಹೊರುವ ಆನೆ ಖಂಡಿತ ಸಿಗುತ್ತದೆ. ಇನ್ನೇನು ದಸರಾ ಬರುತ್ತದೆ, ಅಷ್ಟರಲ್ಲಿ ಅಂಬಾರಿ ಹೊರುವ ಆನೆ ಹೈ ಕಮಾಂಡ್‍ಗೆ ಸಿಗಲಿದೆ ಎಂದು ಹೇಳುವ ಮೂಲಕ ಮತ್ತೆ ನಾಯಕತ್ವ ಬದಲಾವಣೆ ಬಗ್ಗೆ ಸಿಪಿವೈ ಮಾತನಾಡಿದ್ದಾರೆ.
ಸರ್ಕಾರದಲ್ಲಿ ನನಗೆ ಈಗಲೂ ಅಸಮಾಧಾನ ಇದೆ. ಇದು ನನ್ನ ಸರ್ಕಾರ ಎನ್ನುವ ಭಾವನೆ ಬರುತ್ತಿಲ್ಲ. ನನಗೆ ಆಗುತ್ತಿರುವ ನೋವು, ಚಿತ್ರಹಿಂಸೆಯನ್ನು ಹೇಳುತ್ತಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರ ಇದ್ದರೂ ವಿರೋಧ ಪಕ್ಷದವರ ಕೈ ಮೇಲಾಗುತ್ತಿದೆ. ಜಿ.ಪಂ., ತಾ.ಪಂ., ಮೀಸಲಾತಿ ಸಹ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ ರೀತಿ ಆಗಿದೆ. ಈ ರೀತಿ ಚಿತ್ರಹಿಂಸೆ ಸಾಕಷ್ಟು ಬಾರಿ ಆಗಿದೆ. ಅವರ ಅನುಕೂಲಕ್ಕೆ ತಕ್ಕಂತೆ ವಿಂಗಡನೆ ಮಾಡಿಕೊಂಡಿದ್ದರೆ, ನಾವು ಹೇಗೆ ಸ್ಪರ್ಧೆ ಮಾಡೋದು? ಈ ಸರ್ಕಾರದಲ್ಲಿ ಜನರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಆಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರ ಜೊತೆ ಸಿಎಂ ಯಡಿಯೂರಪ್ಪ ಹೊಂದಾಣಿಕೆ ಸದಾ ಇದೆ. ವಿರೋಧ ಪಕ್ಷಗಳೇ ರಾಜ್ಯದಲ್ಲಿ ಸತ್ತು ಹೋಗಿವೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಕೆಲವರು ಅದನ್ನು ಅದುಮುವ ಕೆಲಸ ಮಾಡಿದ್ದಾರೆ. ಆದರೆ ನನ್ನ ಪರಿಸ್ಥಿತಿ ದೇವಸ್ಥಾನದ ಗೋಪುರದ ಅಡಿಗಲ್ಲಿನಂತೆ ಆಗಿದೆ. ಬಂದವರೆಲ್ಲ ಚಪ್ಪಲಿ ಬಿಟ್ಟು, ಕೈ ಮುಗಿದು ಹೋಗುತ್ತಿದ್ದಾರೆ. ಯಾರಿಗೂ ನಾನು ಮಾಡಿದ ಕೆಲಸ ಕಾಣುತ್ತಿಲ್ಲ ಎಂದು ಸಚಿವ ಸಿ.ಪಿ.ಯೋಗೇಶ್ವರ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನಾನು ವಿಜಯೇಂದ್ರ ವಿರುದ್ಧ ಮಾತನಾಡಲ್ಲ, ಯಾಕೆಂದರೆ ಅವರಿಗೆ ಸರ್ಕಾರದಲ್ಲಿ ಅಧಿಕೃತ ಹುದ್ದೆ ಇಲ್ಲ. ಸೂಕ್ಷ್ಮವಾಗಿ ನನ್ನ ವಿಚಾರವನ್ನು ಹೇಳಿದ್ದೇನೆ. ನಾನೇನು ಸರ್ಕಾರ ಅಥವಾ ಪಕ್ಷದ ವಿರುದ್ಧ ಇಲ್ಲ. ನನ್ನನ್ನು ಸಿಎಂ ಯಡಿಯೂರಪ್ಪ ಅವರ ವಿಲನ್ ರೀತಿ ಬಿಂಬಿಸಬೇಡಿ. ನನ್ನನ್ನು ಅವರು ಸರ್ಕಾರದಲ್ಲಿ ಮಂತ್ರಿ ಮಾಡಿಕೊಂಡಿದ್ದಾರೆ ಎಂದರು.
ಸಚಿವ ಶ್ರೀರಾಮುಲು ಪಿಎ ಬಂಧನ, ಬಿಡುಗಡೆ ಕುರಿತು ಮಾತನಾಡಿದ ಅವರು, ಇದರ ಸರಿ, ತಪ್ಪು ಚರ್ಚೆ ನಾನು ಮಾಡಲ್ಲ. ಏನು ಮಾತನಾಡಿದರು ವಿವಾದವಾಗುತ್ತದೆ. ಈಗ ಆಗಿದ್ದನ್ನು ನಾನು ಒಪ್ಪಲ್ಲ, ಈ ಬಗ್ಗೆ ಕರೆದು ಕೇಳಬಹುದಿತ್ತು. ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂದು ಯೋಗೇಶ್ವರ್ ಮಾಧ್ಯಮದವರನ್ನೇ ಪ್ರಶ್ನಸಿದ್ದಾರೆ.
ರಮೇಶ್ ಜಾರಕಿಹೊಳಿ ಷಡ್ಯಂತರಕ್ಕೆ ಬಲಿಯಾಗಿದ್ದಾರೆ, ಅವರಿಗೆ ಸಿಗುವ ನ್ಯಾಯ ಸಿಕ್ಕಿಲ್ಲ. ದುರುದ್ದೇಶದಿಂದಲೇ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ. ಈ ನೋವು, ಚಡಪಡಿಕೆ ಅವರಿಗೆ ಇದೆ, ಅವರು ಸಮಯಕ್ಕೆ ಕಾಯುತ್ತಿದ್ದಾರೆ. ಷಡ್ಯಂತರಕ್ಕೆ ಒಳಗಾಗಿದ್ದಾರೆ ಅನ್ನೋದು ಜಗಜ್ಜಾಹೀರಾಗಿದೆ ಎಂದರು. ನಿಮ್ಮ ಪಕ್ಷದವರಿಂದಲೇ ಷಡ್ಯಂತರ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸದೆ ತೆರಳಿದರು.
ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿನ ಮನೆಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಭೇಟಿ ಮಾಡಿದ ಸಚಿವ ಸಿ.ಪಿ.ಯೋಗೇಶ್ವರ್, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಇಬ್ಬರೂ ನಾಯಕರು ಪ್ರತ್ಯೇಕ ಮಾತುಕತೆ ನಡೆಸಿದರು.
ಬೆಂಗಳೂರು: ಬೆಳ್ಳಂದೂರು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಂಕಷ್ಟ ಎದುರಾಗಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ನ್ನು ಲೋಕಾಯುಕ್ತ ಕೋರ್ಟ್ ತಿರಸ್ಕರಿಸಿದ್ದು, ಮರು ತನಿಖೆಗೆ ಆದೇಶಿಸಿದೆ.
ಸಮಯ ವ್ಯರ್ಥ ಮಾಡದೇ ತನಿಖೆ ನಡೆಸುವಂತೆ ತನಿಖಾಧಿಕಾರಿ, ಲೋಕಾಯುಕ್ತ ಡಿವೈಎಸ್‍ಪಿ ಗೆ ಕೋರ್ಟ್ ಸೂಚನೆ ನೀಡಿದೆ. ಹೈಕೋರ್ಟ್ ಆದೇಶ ಪರಿಗಣಿಸಿ ತನಿಖೆ ನಡೆಸಿ, ಬಳಿಕ ಅಂತಿಮ ವರದಿ ಸಲ್ಲಿಸಲು ಸೂಚನೆ ನೀಡಿದೆ. ವಾಸುದೇವ ರೆಡ್ಡಿ ಸಲ್ಲಿಕೆ ಮಾಡಿದ್ದ ದೂರಿನ ಅನ್ವಯ ಕೋರ್ಟ್ ತನಿಖೆಗೆ ಆದೇಶಿಸಿದೆ. ತನಿಖೆಯ ನೆಪದಲ್ಲಿ ಸಮಯ ವ್ಯರ್ಥ ಮಾಡದೇ ಬೇಗ ತನಿಖೆ ನಡೆಸುವಂತೆ ತನಿಖಾಧಿಕಾರಿಗೆ ಕೋರ್ಟ್ ಸೂಚನೆ ನೀಡಿದೆ. ಈ ಪ್ರಕರಣದ ದೂರನ್ನು ವಾಸುದೇವ ರೆಡ್ಡಿ ಸಲ್ಲಿಕೆ ಮಾಡಿದ್ದರು.
ಪ್ರಕರಣದ ಹಿನ್ನೆಲೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುವಂತೆ 2015ರ ಫೆ.18ರಂದು ಲೋಕಾಯುಕ್ತ ಕೋರ್ಟ್ ಆದೇಶಿಸಿತ್ತು. 2019ರ ಜ.25ಕ್ಕೆ ಯಡಿಯೂರಪ್ಪ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಏ.2ರಂದು ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ನಡುವಿನ ನಾಲ್ಕು ವರ್ಷದಲ್ಲಿ ಪ್ರಕರಣದ ತನಿಖೆ ನಡೆಸುವುದಕ್ಕೆ ಯಾವುದೇ ನ್ಯಾಯಾಲಯದಿಂದಲೂ ತಡೆಯಾಜ್ಞೆ ಇರಲಿಲ್ಲ. ಆದರೂ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಿಲ್ಲ.
ತನಿಖೆ ನಡೆಸದಿರುವುದಕ್ಕೆ ಮತ್ತು ಅರ್ಜಿ ಕುರಿತು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಆಕ್ಷೇಪಣೆ ಒಪ್ಪುವಂತಹದಲ್ಲ. ಉನ್ನತ ಹುದ್ದೆಯಲ್ಲಿರುವವರ ವಿರುದ್ಧದ ಪ್ರಕರಣಗಳು ತನಿಖೆ ಪ್ರಗತಿ ಕಾಣದಿದ್ದರೆ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ-ವಿಶ್ವಾಸವನ್ನು ಸಾರ್ವಜನಿಕರು ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟ ಹೈಕೋರ್ಟ್, ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ನಡೆಸುವಂತೆ ಲೋಕಾಯುಕ್ತ ಕೋರ್ಟ್‍ಗೆ ನಿರ್ದೇಶಿಸಿದೆ.