Tag: CM BS Yediyurappa

  • ಜಿಲ್ಲೆಗೆ ಅನುದಾನ ನಿರೀಕ್ಷೆ ಮಾಡಿದ್ದೆ, ನಿಗಮ ಮಂಡಳಿ ಅಲ್ಲ: ಶಾಸಕ ಶಿವನಗೌಡ ನಾಯಕ್

    ಜಿಲ್ಲೆಗೆ ಅನುದಾನ ನಿರೀಕ್ಷೆ ಮಾಡಿದ್ದೆ, ನಿಗಮ ಮಂಡಳಿ ಅಲ್ಲ: ಶಾಸಕ ಶಿವನಗೌಡ ನಾಯಕ್

    ರಾಯಚೂರು: ನಿಗಮ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡಲು ನನ್ನನ್ನು ಯಾರೂ ಸಂಪರ್ಕಿಸಿಲ್ಲ, ನಾನು ಆಕಾಂಕ್ಷಿಯೂ ಅಲ್ಲ ಎಂದು ರಾಯಚೂರಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ ನಾನು ಯಾವುದೇ ನಿಗಮ ಮಂಡಳಿ ಕೇಳಿರಲಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಬಾರಿ ಅನುದಾನ ಕೇಳಿದ್ದೇನೆ. ಆದರೆ ಯಾವುದೇ ಪದವಿಯನ್ನು ನಿರೀಕ್ಷೆ ಮಾಡಿಲ್ಲ. ನನ್ನನ್ನು ಕೇಳಿದ್ದರೆ ನಿಗಮ ಮಂಡಳಿಗೆ ಕಾರ್ಯಕರ್ತರ ಹೆಸರು ಸೂಚಿಸುತ್ತಿದ್ದೆ, ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಶಿವನಗೌಡ ನಾಯಕ್ ಕಿಡಿಕಾರಿದ್ದಾರೆ.

    ಜಿಲ್ಲೆಗೆ ವಿಮಾನ ನಿಲ್ದಾಣ, ಏಮ್ಸ್ ಗೆ ಶಿಫಾರಸ್ಸು ಮಾಡುವಂತೆ ಕೇಳಿದ್ದೇನೆ. ಬಜೆಟ್ ನಲ್ಲಿ ಘೋಷಣೆಯಾಗಿರುವ ತಿಂತಿಣಿ ಬ್ರೀಡ್ಜ್ ಜಲಾಶಯಕ್ಕೆ 10 ಸಾವಿರ ಕೋಟಿ ರೂ. ಕೊಡಬೇಕು ಎಂಬುದು ನನ್ನ ಬೇಡಿಕೆ. ಸಿಂ ಬಿ.ಎಸ್.ಯಡಿಯೂರಪ್ಪನವರು ಗೌರವಪೂರ್ವಕವಾಗಿ ಪದವಿ ಕೊಟ್ಟಿರಬಹುದು. ಆದರೆ ನಾನು ಕೇಳಿದ್ದು ಅನುದಾನ ಮಾತ್ರ. ನಾವು ಅಭಿವೃದ್ಧಿ ನಿರೀಕ್ಷೆ ಮಾಡಿದ್ದೇವೆ ಎಂದಿದ್ದಾರೆ.

    ಜಿಲ್ಲೆಗೆ ಕೇಳಿದ್ದ ಅನುದಾನ ಕೊಟ್ಟಿದ್ದರೆ ಸಾಕಿತ್ತು, ಪದವಿ ಕೊಡುವುದು ಬೇಕಿರಲಿಲ್ಲ. ಯಾಕೆ ಪದವಿ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಇದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ಶಿವನಗೌಡ ನಾಯಕ್ ಹೇಳಿದ್ದಾರೆ.

  • ನಾಲ್ವರನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೈ ಬಿಟ್ಟ ಸರ್ಕಾರ

    ನಾಲ್ವರನ್ನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೈ ಬಿಟ್ಟ ಸರ್ಕಾರ

    ಬೆಂಗಳೂರು: ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಈ ಹಿನ್ನೆಲೆ ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಪಟ್ಟಿಯಿಂದ ನಾಲ್ವರ ಹೆಸರನ್ನು ಕೈ ಬಿಡಲಾಗಿದೆ.

    ಅಧಿಕೃತ ಆದೇಶದ ವೇಳೆ ನಾಲ್ವರ ಹೆಸರನ್ನು ಕೈ ಬಿಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದು, ಈ ಹಿನ್ನೆಲೆ ಲಾಲಾಜಿ ಮೆಂಡನ್, ಜಿ.ಎಚ್.ತಿಪ್ಪಾರೆಡ್ಡಿ, ಬಸವರಾಜ್ ದಡೇಸುಗೂರ್ ಮತ್ತು ಪರಣ್ಣ ಮುನವಳ್ಳಿಯಿಂದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ವಾಪಸ್ ಪಡೆದಿದ್ದಾರೆ. ಲಾಲಾಜಿ ಆರ್ ಟಂಡನ್ (ಕಾಪು) ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ತಿಪ್ಪಾರೆಡ್ಡಿ (ಚಿತ್ರದುರ್ಗ) ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಬಸವರಾಜ ದಡೇಸೂರ್ (ಕನಕಗಿರಿ) ರಾಜ್ಯ ಸಮಾಜ ಕಲ್ಯಾಣ ಅಭಿವೃದ್ಧಿ ಮಂಡಳಿ, ಪರಣ್ಣ ಮುನವಳ್ಳಿ (ಗಂಗಾವತಿ) ಯವರನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

    ಅಧಿಕೃತ ಆದೇಶಕ್ಕೂ ಮುನ್ನವೇ ಅಸಮಾಧಾನ ಭುಗಿಲೆದ್ದ ಹಿನ್ನೆಲೆ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ್ಲ ಕಲ್ಲೋಲವಾಗಿದೆ. ಅಲ್ಲದೆ ಕೆಲ ಶಾಸಕರು ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಸಹ ಸಂಪರ್ಕಿಸಿದ್ದಾರೆ ಎನ್ನಲಾಗಿದ್ದು, ನಮಗೇನೂ ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರಂತೆ.

    ತಾಂತ್ರಿಕ ಕಾರಣದಿಂದ ನಾಲ್ವರಿಗೆ ನೀಡಿದ್ದ ನಿಗಮ ಮಂಡಳಿ ವಾಪಸ್ ಪಡೆಯಲಾಗಿದ್ದು, ಸಮಸ್ಯೆ ಸರಿಪಡಿಸಿ ನಿಗಮ ಮಂಡಳಿಗಳನ್ನು ಮರು ಹಂಚಿಕೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿ ಒಂದು ವರ್ಷದ ಸಂಭ್ರಮದಲ್ಲಿರುವಾಗಲೇ ಹೈಕಮಾಂಡ್ ನಾಯಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಾಕ್ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್, ರಾಜ್ಯ ಬಿಜೆಪಿ ಘಟಕಕ್ಕೆ ಗೊತ್ತಿಲ್ಲದೆ ನಿಗಮ ಮಂಡಳಿಗೆ ಶಾಸಕರನ್ನು ಯಡಿಯೂರಪ್ಪ ನೇಮಕ ಮಾಡಿದ್ದಾರೆ. ಪಕ್ಷ, ಸಂಘದ ನಿಷ್ಠಾವಂತ ಕಾರ್ಯಕರ್ತರಿಗೂ ಮಣೆ ಹಾಕದೇ ನೇಮಿಸಿದ್ದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.

    ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪಕ್ಷದ ನಾಯಕರ ಜೊತೆ ಚರ್ಚಿಸಲಾಗುತ್ತದೆ. ಆದರೆ ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚಿಸದೇ ನಿಗಮ ಮಂಡಳಿಗೆ ಯಡಿಯೂರಪ್ಪ ನೇಮಕ ಮಾಡಿದ್ದು ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿರುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ

    ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪನವರ ಪಕ್ಕದಲ್ಲೇ ಕುಳಿತಿದ್ದರು. ಆಗಲೂ ನಿಗಮ ಮಂಡಳಿ ನೇಮಕ ವಿಚಾರ ನಳೀನ್ ಕುಮಾರ್ ಕಟೀಲ್ ಅವರಿಗೆ ಗೊತ್ತಿರಲಿಲ್ಲ. ಆದರೆ ವಿಧಾನಸೌಧದಿಂದ ಹೊರಡುವ ಮೊದಲು ಯಡಿಯೂರಪ್ಪ ನಿಗಮ ಮಂಡಳಿಯ ಪಟ್ಟಿಯನ್ನು ಬಿಡುಗಡೆ ಮಾಡಿ ನಾಯಕರಿಗೆ ಶಾಕ್ ನೀಡಿದ್ದಾರೆ.

  • ಸಿಎಂ ಯಡಿಯೂರಪ್ಪ ಒಬ್ಬರೇ ಸಕ್ರಿಯ, ಉಳಿದ ಸಚಿವರು ಆರಾಮಾಗಿದ್ದಾರೆ: ಕಿಮ್ಮನೆ ರತ್ನಾಕರ್

    ಸಿಎಂ ಯಡಿಯೂರಪ್ಪ ಒಬ್ಬರೇ ಸಕ್ರಿಯ, ಉಳಿದ ಸಚಿವರು ಆರಾಮಾಗಿದ್ದಾರೆ: ಕಿಮ್ಮನೆ ರತ್ನಾಕರ್

    – ಇದಕ್ಕೆ 1,700 ಕೋಟಿ ರೂ. ನೀಡಿ 17 ಶಾಸಕರನ್ನು ಖರೀದಿಸುವ ಅವಶ್ಯವೇನಿತ್ತು?
    – ಬಿಜೆಪಿಯವರು ವಿರೋಧ ಪಕ್ಷಕ್ಕಷ್ಟೇ ಲಾಯಕ್ಕು, ಅಧಿಕಾರ ನಡೆಸುವುದಕ್ಕಲ್ಲ

    ಶಿವಮೊಗ್ಗ: ಜನ ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಪಕ್ಷಕ್ಕಷ್ಟೇ ಲಾಯಕ್ಕು. ಅವರಿಗೆ ಅಧಿಕಾರ ನಡೆಸಲು ಬರುವುದಿಲ್ಲ. ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಜನರು ಬೀದಿ ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಹೀಗಿದ್ದರೂ ಕೊರೊನಾ ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ ಸಚಿವರು ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇಂತಹದ್ದಕ್ಕೆ 1,700 ಕೋಟಿ ರೂ. ಖರ್ಚು ಮಾಡಿ 17 ಶಾಸಕರನ್ನು ಖರೀದಿ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದರು.

  • ಬಿಎಸ್‍ವೈ ಸಿಎಂ ಆಗಲಿ ಎಂದು ಹೊತ್ತಿದ್ದ ಹರಕೆ ತೀರಿಸಿದ ಎಂ.ಪಿ.ಕುಮಾರಸ್ವಾಮಿ

    ಬಿಎಸ್‍ವೈ ಸಿಎಂ ಆಗಲಿ ಎಂದು ಹೊತ್ತಿದ್ದ ಹರಕೆ ತೀರಿಸಿದ ಎಂ.ಪಿ.ಕುಮಾರಸ್ವಾಮಿ

    ಚಿಕ್ಕಮಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿ ಎಂದು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಶಿಶಿಲಗುಡ್ಡದ ಬಳಿಯ ಬೈರಾಪುರ ಗ್ರಾಮದಲ್ಲಿರುವ ಚೌಡೇಶ್ವರಿಗೆ ಹೊತ್ತಿದ್ದರು. ಇಂದು ಆ ಹರಕೆಯನ್ನು ತೀರಿಸಿದ್ದಾರೆ.

    ಕಳೆದ ವರ್ಷ ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದ್ದ ವೇಳೆ ಬೈರಾಪುರದ ಚೌಡೇಶ್ವರಿ ಶಾಸಕ ಕುಮಾರಸ್ವಾಮಿ ಹರಕೆ ಹೊತ್ತಿದ್ದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರೆ ಕುರಿ-ಕೋಳಿ ಬಲಿ ಕೊಡುವುದಾಗಿ ಹರಕೆ ಹೊತ್ತಿದ್ದರು. ಕುಮಾರಸ್ವಾಮಿಯವರ ಹರಕೆಯಿಂದಲೋ ಅಥವಾ ಬಿಜೆಪಿಯವರ ಸರ್ವಪ್ರಯತ್ನದಿಂದಲೋ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಹರಕೆ ತೀರಿಸಿದ್ದಾರೆ.

    ಹರಕೆಗೆ ವರ್ಷ ತುಂಬುತ್ತಿರುವುದರಿಂದ ಶಾಸಕ ಕುಮಾರಸ್ವಾಮಿ ಶಕ್ತಿ ದೇವತೆ ಬೈರಾಪುರದ ಚೌಡೇಶ್ವರಿಗೆ ಹರಕೆ ತೀರಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ತಮ್ಮ ಕಾರ್ಯಕರ್ತರೊಂದಿಗೆ ಬೈರಾಪುರದ ಚೌಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಹರಕೆ ರೂಪದಲ್ಲಿ ಚೌಡೇಶ್ವರಿ ದೇವಿಗೆ ನಾಲ್ಕು ಕುರಿ ಹಾಗೂ ಎಂಟು ಕೋಳಿಯನ್ನು ಬಲಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

    ಮೂಡಿಗೆರೆ ಶಾಸಕ ಕುಮಾರಸ್ವಾಮಿ ಯಡಿಯೂರಪ್ಪನವರ ಆಪ್ತ. ಹಲವು ವಿಚಾರದಲ್ಲಿ ಅವರು ಮುಖ್ಯಮಂತ್ರಿಯನ್ನು ತಮ್ಮ ನಾಯಕರೆಂದು ಪರಿಗಣಿಸಿ ಅವರು ಹೇಳಿದಂತೆ ನಡೆದಿದ್ದಾರೆ. ಅವರು ಹಾಕಿದ್ದ ಗೆರೆ ದಾಟಿಲ್ಲ. ಕೆಲ ಬಾರಿ ಅವರು ಯಡಿಯೂರಪ್ಪನವರ ಮಾನಸ ಪುತ್ರ ಎಂದು ಹೇಳಿದ್ದರು.

  • ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ – ಸಿಎಂ

    ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ – ಸಿಎಂ

    – ಎಂಟಿಬಿಯಂತಹ ಶಾಸಕರು ಆಯ್ಕೆ ಆಗಬೇಕು
    – ಯಾವುದೇ ಕೆಲಸ ಮಾಡಿಕೊಡಲು ಸಿದ್ಧ

    ಬೆಂಗಳೂರು: ಎಂಟಿಬಿ ನಾಗರಾಜ್ ನಿಮಗೆ ಏನು ಬೇಕು ಹೇಳಿ ಕೊಡ್ತೀವಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಭರವಸೆ ನೀಡಿದ್ದಾರೆ.

    ಹೊಸಕೋಟೆಯಲ್ಲಿ ಏತ ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ನಂತರ ಮಾತನಾಡಿದರು. ಕೇವಲ ಎಂಟಿಬಿ ಕ್ಷೇತ್ರ ಮಾತ್ರವಲ್ಲ ಆದ್ಯತೆ ಮೇರೆಗೆ ಎಲ್ಲ ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಲಾಗುವುದು. ಎಂಟಿಬಿಯವರಿಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಕೊಟ್ಟಿದ್ದರೆ ಮೈತ್ರಿ ಸರ್ಕಾರದಲ್ಲಿ ಅವರು ರಾಜೀನಾಮೆ ನೀಡುವ ಪ್ರಸಂಗವೇ ಬರುತ್ತಿರಲಿಲ್ಲ. ಎಂಟಿಬಿ ಯಾವುದೇ ಪಕ್ಷದಿಂದ ನಿಲ್ಲಲಿ ಅಥವಾ ಪಕ್ಷೇತರ ಅಭ್ಯರ್ಥಿಯಾದರೂ ಪರವಾಗಿಲ್ಲ. ಅವರಂತಹ ಶಾಸಕರು ಆಯ್ಕೆ ಆಗಬೇಕು ಎಂದು ಜನರಲ್ಲಿ ಮನವಿ ಮಾಡಿದರು.

    ಇಂತಹ ಪ್ರಮಾಣಿಕ ವ್ಯಕ್ತಿ ಶಾಸಕನಾಗಬೇಕು. ಯಡಿಯೂರಪ್ಪ ಮಾತನಾಡಿದರೆ ಹಿಂದೆ ಸರಿಯುವ ವ್ಯಕ್ತಿ ಅಲ್ಲ. ಎಂಟಿಬಿ ಅವರೇ ಇನ್ನು ಹತ್ತು ಕೆಲಸಗಳನ್ನು ಕೇಳಿ ಎಲ್ಲ ಕೆಲಸಗಳನ್ನು ಮಾಡಿಕೊಡುವೆ. ಇದೇ ವೇಳೆ ಮತ್ತೇನು ಬೇಕಣ್ಣ ಎಂದು ಸಿಎಂ ಸಭಿಕರನ್ನು ಪ್ರಶ್ನಿಸಿದರು. ಸಿಎಂ ಮಾತು ಕೇಳಿ ಕೇಕೆ ಹಾಕಿ ಸಭಿಕರು ಸಂತಸಪಟ್ಟರು. ಶಿಕಾರಿಪುರದಂತೆ ಹೊಸಕೋಟೆ ಕ್ಷೇತ್ರ ಮಾದರಿಯಾಗಬೇಕು. ಇದಕ್ಕೆ ನಾನು ಯಾವುದೇ ಕೆಲಸ ಮಾಡಿಕೊಡಲು ಸಿದ್ಧ ಎಂದು ಭರವಸೆ ನೀಡಿದರು.

    ಹೊಸಕೋಟೆ ನಗರಕ್ಕೆ ಮೆಟ್ರೋ ವಿಸ್ತರಣೆ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮೆಟ್ರೋ ಯೋಜನೆ ವಿಸ್ತರಣೆಗೆ ಅನುಮತಿ ಕೊಡಿಸುತ್ತೇನೆ. ಪುನಃ ಹೊಸಕೋಟೆಗೆ ಬಂದು ಮೆಟ್ರೋ ಯೋಜನೆ ವಿಸ್ತರಣೆಗೆ ಶಂಕುಸ್ಥಾಪನೆ ಮಾಡುತ್ತೇನೆ. ಹೊಸಕೋಟೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರಾತಿಗೆ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ. ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ರಾಜೀನಾಮೆ ನೀಡಿದರೂ ಹೊಸಕೋಟೆ ಅಭಿವೃದ್ಧಿ ಬಗ್ಗೆ ಎಂಟಿಬಿ ನಾಗರಾಜ್ ಗೆ ವಿಶೇಷ ಪ್ರೇಮ ಇದೆ. ನಾಗರಾಜ್ ರವರಿಗೆ ಶಾಸಕ ಸ್ಥಾನಕ್ಕಿಂತ ಕ್ಷೇತ್ರದ ಅಭಿವೃದ್ಧಿ ಮುಖ್ಯ ಅಂತಹವರು. ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಎಂಟಿಬಿ ಶ್ರಮಿಸಿದ್ದಾರೆ. ಬಿಎಸ್‌ವೈ ಮೂರೂವರೆ ವರ್ಷ ಆಡಳಿತ ಮಾಡುತ್ತಾರೆ. ನಮ್ಮದು ಅಲ್ಲಾಡಿಸುವ ಸರ್ಕಾರವಲ್ಲ. ನಾವು ಕನಕಪುರ ಬಂಡೆ ಅಲ್ಲ, ನಾವು ಅಲ್ಲಾಡಲ್ಲ, ಮೂರುವರೆ ವರ್ಷ ಪೂರ್ಣಗೊಳಿಸ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹೊಸಕೋಟೆಯಲ್ಲಿ ಸಿಎಂ ಯಡಿಯೂರಪ್ಪ ಅವರು 150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ವೇಳೆ 800 ಕೆ.ಜಿ. ಬೃಹತ್ ಸೇಬಿನ ಹಾರವನ್ನು ಕ್ರೇನ್ ಮುಖಾಂತರ ಸಿಎಂ ಯಡಿಯೂರಪ್ಪನವರಿಗೆ ಹಾಕಲಾಯಿತು.

    ಸಿಎಂ ಕಾರ್ಯಕ್ರಮಕ್ಕೆ ಪ್ರತಿಭಟನೆ ಬಿಸಿ ತಟ್ಟಿತ್ತು. ಹೊಸಕೋಟೆಗೆ ಕಾವೇರಿ ನೀರು, ಮೆಟ್ರೋ ಮಂಜೂರು ಮಾಡುವಂತೆ ಸ್ಥಳೀಯ ನಿವಾಸಿಗಳಿಂದ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

  • ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಹಸ್ತಾಂತರ

    ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಹಸ್ತಾಂತರ

    ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿ ಅಧಿಕೃತ ಆದೇಶ ಹೊರಡಿಸಿದೆ.

    ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ವಹಿಸಬೇಕು. 2018ರ ಆಗಸ್ಟ್ 1ರಿಂದ ಇಲ್ಲಿಯವರೆಗಿನ ಫೋನ್ ಟ್ಯಾಪಿಂಗ್ ವಿವರಗಳನ್ನು ಸಲ್ಲಿಸಬೇಕು. ಆಡಳಿತ ಮತ್ತು ಪ್ರತಿ ಪಕ್ಷಗಳ ನಾಯಕರು, ಅವರ ಸಹವರ್ತಿಗಳು, ಸರ್ಕಾರಿ ನೌಕರರ ಕರೆ ವಿವರಗಳ ಸಲ್ಲಿಸಬೇಕು ಎಂದು ಗೃಹ ಇಲಾಖೆಯಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.

    ಈ ಸಂಬಂಧ ಸ್ವಯಂ ಪೇರಿತವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 72 ಐಟಿ ಆಕ್ಟ್, ಸೆಕ್ಷನ್ 26 ಇಂಡಿಯನ್ ಟೆಲಿಗ್ರಾಂ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿತ್ತು. ಈಗ ಈ ಪ್ರರಕಣವನ್ನು ರಾಜ್ಯ ಸರ್ಕಾರವು ಸಿಬಿಐಗೆ ಹಸ್ತಾಂತರಿಸಿದೆ.

    ರಾಜಕಾರಣಿಗಳು, ರಾಜಕಾರಣಿಗಳ ಸಂಬಂಧಿಕರು, ಸರ್ಕಾರಿ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಆಗಿರುವ ಬಗ್ಗೆ ದೃಢವಾಗಿದೆ. ಫೋನ್ ಟ್ಯಾಪಿಂಗ್ ಸಂಬಂಧಿಸಿದಂತೆ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಲು ಸಿದ್ಧವೆಂದು ಸೈಬರ್ ಕ್ರೈಂ ರಾಜ್ಯ ಸರ್ಕಾರಕ್ಕೆ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

  • ಉತ್ತರ ಕರ್ನಾಟಕ ಪ್ರವಾಹ – 1 ತಿಂಗಳ ಸಂಬಳ ನೀಡಲು ಜೆಡಿಎಸ್ ಶಾಸಕರ ನಿರ್ಧಾರ

    ಉತ್ತರ ಕರ್ನಾಟಕ ಪ್ರವಾಹ – 1 ತಿಂಗಳ ಸಂಬಳ ನೀಡಲು ಜೆಡಿಎಸ್ ಶಾಸಕರ ನಿರ್ಧಾರ

    ಬೆಂಗಳೂರು: ಉತ್ತರ ಕರ್ನಾಟಕ ನೆರೆ ಹಿನ್ನೆಲೆಯಲ್ಲಿ ಒಂದು ತಿಂಗಳ ಸಂಬಳವನ್ನು ನೀಡಲು ಜೆಡಿಎಸ್ ಶಾಸಕರು ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಎಲ್ಲಾ ಶಾಸಕರ ಒಂದು ತಿಂಗಳ ಸಂಬಳ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಧೈರ್ಯ ತುಂಬಿರುವ ಎಚ್‍ಡಿಕೆ, ಕಷ್ಟದ ಸಂದರ್ಭದಲ್ಲಿ ನಮ್ಮ ಅಣ್ಣ-ತಮ್ಮಂದಿರೊಂದಿಗೆ ನಿಲ್ಲೋಣ. ಬೆಳಗಾವಿ, ರಾಯಚೂರು, ಹಾಸನ, ಕೊಡಗು ಹಾಗೂ ಬಾಗಲಕೋಟೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದಿದ್ದು, ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಹಗಲಿರುಳು ಶ್ರಮ ಪಡುತ್ತಿರುವ ಅಧಿಕಾರಿಗಳು ಹಾಗೂ ವಿವಿಧ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.

    ಜ್ವರದಿಂದ ಬಳಲುತ್ತಿರುವ ಕಾರಣ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ತೆರಳಿ ಜನರ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದು ಎಚ್‍ಡಿಕೆ ತಿಳಿಸಿದ್ದಾರೆ.

    ಪ್ರವಾಹ ಸಂಕಷ್ಟ ಎದುರಿಸುತ್ತಿದ್ದ ಜನರ ನೆರವಿಗೆಬಾರದ ಸಿಎಂ ಯಡಿಯೂರಪ್ಪ ಅವರು ದೆಹಲಿಯಲ್ಲಿ ಇದ್ದಾರೆ ಎಂದು ಟೀಕೆ ಮಾಡಿದ್ದ ಜೆಡಿಎಸ್, ಅತೃಪ್ತ ಶಾಸಕರನ್ನು ಮುಂಬೈಗೆ ಕಳುಹಿಸಲು ವಿಶೇಷ ವಿಮಾನ ಕಲ್ಪಿಸಿದವರು ಬಡ ಜನರು ಪ್ರವಾಹದಲ್ಲಿ ಸಾಯುತ್ತಿದ್ದರೂ ಒಂದು ಹೆಲಿಕಾಪ್ಟರ್ ವ್ಯವಸ್ಥೆ ಕೂಡ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು.

    ಇತ್ತ ಕಳೆದ 2 ದಿನಗಳಿಂದ ಪ್ರವಾಹ ಎದುರಿಸುತ್ತಿರುವ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಕೃಷ್ಣಾ, ಮಲಪ್ರಭಾ, ಘಟಪ್ರಭಾ ತ್ರಿವಳಿ ನದಿಗಳ ಪ್ರವಾಹದ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಅಲ್ಲದೇ ಬಾಗಲಕೋಟೆ ನೆರೆ ಸಂತ್ರಸ್ತರಿಗೆ ಸರ್ಕಾರ ಕಲ್ಪಿಸಿದ್ದ ಪರಿಹಾ ಕೇಂದ್ರಗಳಿಗೆ ಭೇಟಿ ನೀಡಿದ್ದರು.

  • ಬಿಎಸ್‍ವೈ ಭೇಟಿಯಾಗಿ ಶುಭ ಕೋರಿದ ಜೆಡಿಎಸ್ ಶಾಸಕ ಲಿಂಗೇಶ್

    ಬಿಎಸ್‍ವೈ ಭೇಟಿಯಾಗಿ ಶುಭ ಕೋರಿದ ಜೆಡಿಎಸ್ ಶಾಸಕ ಲಿಂಗೇಶ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ಭೇಟಿಯಾಗಿ ಶುಭ ಕೋರಿದ್ದಾರೆ.

    ಪ್ರತಿಷ್ಠಿತ ಪುಷ್ಪಗಿರಿ ಸೋಮಶೇಖರ ಸ್ವಾಮೀಜಿ ನೇತೃತ್ವದಲ್ಲಿ ಶಾಸಕರು ಸಿಎಂ ನಿವಾಸಕ್ಕೆ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಈ ಭೇಟಿಯು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಕೆ.ಎಸ್.ಲಿಂಗೇಶ್ ಅವರು ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    ಈ ಹಿಂದೆ ಆಪರೇಷನ್ ಕಮಲದಲ್ಲಿ ಶಾಸಕ ಲಿಂಗೇಶ್ ಸಿಲುಕಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ಸೋಮಶೇಖರ ಸ್ವಾಮೀಜಿ ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

    ಬಿ.ಎಸ್.ಯಡಿಯೂರಪ್ಪ ಅವರು ಆಪರೇಷನ್ ಕಮಲ ಮುಂದುವರಿಸಿದರಾ? ಶಾಸಕ ಲಿಂಗೇಶ್ ಅವರು ಇದಕ್ಕೆ ಒಳಗಾಗಿದ್ದಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.