Tag: CM BS Yediyurappa

  • ಯತ್ನಾಳ್‍ಗಿರೋ ಗಟ್ಸ್ ರಾಜ್ಯ ಬಿಜೆಪಿ ನಾಯಕರಿಗಿಲ್ಲ: ಹೊರಟ್ಟಿ

    ಯತ್ನಾಳ್‍ಗಿರೋ ಗಟ್ಸ್ ರಾಜ್ಯ ಬಿಜೆಪಿ ನಾಯಕರಿಗಿಲ್ಲ: ಹೊರಟ್ಟಿ

    – ಮುಂದೆ ಯತ್ನಾಳ್ ಸಿಎಂ ಆಗಬಹುದು

    ಚಿಕ್ಕಬಳ್ಳಾಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಇರೋ ಗಟ್ಸ್ ರಾಜು ಬಿಜೆಪಿ ನಾಯಕರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೊರಟ್ಟಿ, ಬಿಜೆಪಿ ಹೈಕಮಾಂಡ್ ತನ್ನ ಅಭಿಪ್ರಾಯಗಳನ್ನು ಯತ್ನಾಳ್ ಅವರ ಮೂಲಕ ಹೇಳಿಸುತ್ತಿದೆ. ಹಾಗಾಗಿ ಯತ್ನಾಳ್ ವರಿಗೆ ಬಿಜೆಪಿ ಹೈಕಮಾಂಡ್ ಶ್ರೀರಕ್ಷೆ ಇರುವ ಕಾರಣಕ್ಕೆ ರಾಜ್ಯ ಬಿಜೆಪಿ ನಾಯಕರು ಕ್ರಮ ಕೈಗೊಳ್ಳಲು ಆಗಿಲ್ಲ. ಈ ರೀತಿ ಬೇರೆ ಯಾರಾದ್ರೂ ಮಾತಾಡಿದ್ರೆ ಪಕ್ಷದಿಂದ ಕ್ಷಣಾರ್ಧದಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡುತ್ತಿದ್ದರು. ಇನ್ನು ಈಶ್ವರಪ್ಪ ಸಹ ಹಿಂದೆ ಇದನ್ನೇ ಮಾಡಿದ್ದರು ಎಂದರು.

    ಯಾರ ಬೆಂಬಲವಿಲ್ಲದೇ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡಲು ಬರಲ್ಲ. ಯತ್ನಾಳ್ ಅವರಿಗೆ ಉತ್ತರ ಕರ್ನಾಟಕ ಭಾಗದವರನ್ನೇ ಮುಖ್ಯಮಂತ್ರಿ ಮಾಡಲಾಗುದು ಎಂದು ಹೇಳಿರಬೇಕು. ಹಾಗಾಗಿ ಅಷ್ಟು ಗಟ್ಟಿಯಾಗಿ ಸಿಎಂ ಬದಲಾವಣೆ ಕುರಿತು ಹೇಳಿತ್ತಿದ್ದಾರೆ. ಮುಂದೆ ಯತ್ನಾಳ್ ಅವರೇ ಸಿಎಂ ಅಗಬಹುದು ಎಂದು ಹೊರಟ್ಟಿ ಭವಿಷ್ಯ ನುಡಿದರು. ಇದನ್ನೂ ಓದಿ: ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ-ಮತ್ತೆ ಯತ್ನಾಳ್ ಕಿಡಿ

    ಯತ್ನಾಳ್ ಹೇಳಿದ್ದೇನು?: ಬಿಎಸ್‍ವೈ ಸಿಎಂ ಆಗಿ ಬಹಳ ದಿನ ಉಳಿಯುವುದಿಲ್ಲ. ಕೇಂದ್ರ ಸರ್ಕಾರದವರಿಗೂ ಸಿಎಂ ಬಿಎಸ್‍ವೈ ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗುತ್ತಾರೆ. ಉತ್ತರ ಕರ್ನಾಟಕದವರು 100 ಶಾಸಕರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುತ್ತಾರೆ. ಆದರೆ ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದು ಅವರಲ್ಲೇ ಒಬ್ಬರು ಸಿಎಂ ಆಗುತ್ತಾರೆ. ಹೀಗಾಗಿ ಮುಂದಿನ ಬಾರಿ ಉತ್ತರ ಕರ್ನಾಟಕದವರೇ ಸಿಎಂ ಆಗೋದು ಪಕ್ಕಾ. ಜೊತೆಗೆ ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವ ಭರವಸೆಯನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಇದನ್ನೂ ಓದಿ: ಕಾಲಾಯ ತಸ್ಮೈ ನಮಃ – ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಮಾರ್ಮಿಕ ನುಡಿ

    ಇತ್ತ ಯತ್ನಾಳ್ ಹೇಳಿಕೆ ಬೆನ್ನಲ್ಲೇ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಅವರನ್ನ ಪಕ್ಷದಿಂದ ಉಚ್ಛಾಟಿಸಬೇಕು. ಯತ್ನಾಳ್ ಉತ್ತರನ ಪೌರುಷನಂತೆ ಮೂರ್ಖತನದ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಸಿಎಂ, ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದರು.

  • ಇಂದು, ನಾಳೆ ಭಾರೀ ಮಳೆ – ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ

    ಇಂದು, ನಾಳೆ ಭಾರೀ ಮಳೆ – ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ

    – ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ

    ಬೆಂಗಳೂರು: ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ತೀವ್ರ ಕಟ್ಟೆಚ್ಚರ ವಹಿಸಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಸೂಚನೆ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅವರು, ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಯ ಹಿನ್ನಲೆಯಲ್ಲಿ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಇಂದು ಮತ್ತು ನಾಳೆ ಸಹ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಕಟ್ಟೆಚ್ಚರ ವಹಿಸಿ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ಉತ್ತರ ಕರ್ನಾಟಕದ ಬಳಿಕ ರಣ ಮಳೆ ಈಗ ಬೆಂಗಳೂರನ್ನು ಅಟಕಾಯಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಚಿತ್ತಾ ಮಳೆ ತನ್ನ ಕುರುಡಾಟ ಪ್ರದರ್ಶಿಸುತ್ತಿದೆ. ಯಾವಾಗಂದ್ರೆ ಆಗ ಮಳೆ ಸುರಿದು ನಾನಾ ಅವಾಂತರ ಸೃಷ್ಟಿ ಮಾಡುತ್ತಿದೆ. ಕುರುಡ ಚಿತ್ತನ ಆಟಕ್ಕೆ ಬೆಂಗಳೂರು ಮಂದಿ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸೂರ್ಯ ದರ್ಶನ ಆಗಿರಲಿಲ್ಲ. ಮಧ್ಯಾಹ್ನದವರೆಗೂ ನಗರದಲ್ಲಿ ಮೋಡಗಳ ಆಟ ಜೋರಿತ್ತು. ಬಳಿಕ ನಗರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯಿತು. ಸಂಜೆ ಮಳೆಗೆ ಬೆಂಗಳೂರಿನ ದಕ್ಷಿಣ ಭಾಗದ ಪರಿಸ್ಥಿತಿ ಭೀಕರವಾಗಿತ್ತು.

    ಹೊಸಕೆರೆಹಳ್ಳಿ, ಬಸವನಗುಡಿ, ಕೆಂಗೇರಿ ಸೇರಿ ಹಲವು ಪ್ರದೇಶಗಳು ಹೈದರಾಬಾದ್‍ನ ಪ್ರವಾಹವನ್ನು ನೆನಪಿಸುಂತಾಯಿತು. ಬೋಟ್‍ಗಳಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ. ನೂರಾರು ವಾಹನಗಳು ಆಟಿಕೆಗಳ ರೀತಿಯಲ್ಲಿ ಕೊಚ್ಚಿ ಹೋಗಿವೆ. ವಾಹನ ಸವಾರರು ದಿಕ್ಕೆಟ್ಟಿದ್ದಾರೆ. ನೂರಾರು ಮನೆಗಳು ಮುಳುಗಡೆ ಆಗಿವೆ. ಸಾವಿರಾರು ಜನ ಜಲ ದಿಗ್ಬಂಧನದಲ್ಲಿ ಸಿಲುಕಿದ್ದರು. ಇಂದು ನೀರಿನ ಪ್ರಮಾಣ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದ್ದು ಇಂದು ಸಹ ಮಳೆಯಾದರೆ ಗತಿ ಏನು ಎಂದು ಜನ ಚಿಂತೆಗೀಡಾಗಿದ್ದಾರೆ.

  • ಯೋಗ, ಯೋಗ್ಯತೆ ಇರುವ ಯಾರು ಬೇಕಾದರೂ ಸಿಎಂ ಆಗಬಹುದು: ಸಿ.ಟಿ.ರವಿ

    ಯೋಗ, ಯೋಗ್ಯತೆ ಇರುವ ಯಾರು ಬೇಕಾದರೂ ಸಿಎಂ ಆಗಬಹುದು: ಸಿ.ಟಿ.ರವಿ

    ಕೊಪ್ಪಳ: ಸಮಗ್ರ ಕರ್ನಾಟಕದ ಯೋಗ ಯೋಗ್ಯತೆ ಇದ್ದವರು ಯಾರು ಬೇಕಾದರು ಸಿಎಂ ಆಗಬಹುದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಈ ಮಾತು ಆಡಲು ವಿಶ್ವಾಸ ಬಂದಿದ್ದರೆ ಅದು ಕರ್ನಾಟಕ ಏಕೀಕರಣದಿಂದ ಏಕೀಕರಣ ಆಶಯಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಯತ್ನಾಳರಷ್ಟು ಬುದ್ಧಿವಂತ ನಾನಲ್ಲ, ನಾನು ಪಕ್ಷದ, ಜನರ ನೆಲೆಯಲ್ಲಿ ಕೆಲಸ ಮಾಡುವವನು. ಸಮಗ್ರ ಕರ್ನಾಟಕಕ್ಕೆ ನಾಯಕತ್ವ ಕೊಡುವ ಸಾಮರ್ಥ್ಯ ಉತ್ತರ ಕರ್ನಾಟಕಕ್ಕೆ ಇದೆ. ಮುಖ್ಯಮಂತ್ರಿಗಳು ಯತ್ನಾಳ್ ಜೊತೆ ಮಾತಾಡುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

    ಉಪ ಚುನಾವಣೆ ಪ್ರಚಾರದಲ್ಲಿ ಮೀರ್ ಸಾಧಿಕ್ ಪದ ಬಳಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಒಂದು ಸ್ಥಾನ ಗೆದ್ದಿದೆ. ಒಂದು ಬಂದಿದ್ದಕ್ಕೆ ಸಭೆ ಸೇರಿ ಕಾಂಗ್ರೆಸ್ ಜೊತೆ ಸೇರಿ ಹಾಳಾದ್ವಿ, ಜೆಡಿಎಸ್ ಜೊತೆ ಸೇರಿ ಹಾಳಾದ್ವಿ ಎಂದು ಹೇಳಿದವರು ಯಾರು? ಯಾರು ಮೀರ್ ಸಾಧಿಕ್ ಎನ್ನುವುದು ಅವರಿಗೆ ಬಿಟ್ಟದ್ದು ಎಂದರು.

    ಉತ್ತರ ಕರ್ನಾಟಕದಲ್ಲಾದ ಅನೀರಿಕ್ಷಿತ ಪ್ರವಾಹಕ್ಕೆ ಸರ್ಕಾರ ಸ್ಪಂದಿಸುತ್ತಿದೆ. ಉಸ್ತುವಾರಿ ಸಚಿವರು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ತ್ವರಿತ ಗತಿಯಲ್ಲಿ ಪರಿಹಾರ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಇಂದು ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡುತ್ತಿದ್ದಾರೆ. ಕೆಲವು ಸಚಿವರು ಕೊರೊನಾದಿಂದ ಬಳಲುತ್ತಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಪ್ರವಾಹ ಬಂದಿದೆ ಎಂದರು.

    ಕಾಂಗ್ರೆಸ್ ನವರು ನಿರೀಕ್ಷಿತ ಮಟ್ಟದಲ್ಲಿ ಸರ್ಕಾರ ಪರಿಹಾರ ನೀಡುತ್ತಿಲ್ಲ ಎಂದು ವಿರೋಧಿಸುತ್ತಿದ್ದು, ಕಾಂಗ್ರೆಸ್ ನವರದ್ದು ಗ್ರಾಮೋಫೋನ್ ಕ್ಯಾಸೆಟ್ ಇದ್ದಂಗೆ ಯುಪಿಎ ಕೊಟ್ಟ ಪರಿಹಾರಕ್ಕಿಂದ ನಾಲ್ಕು ಪಟ್ಟು ಹೆಚ್ಚು ಎನ್‍ಡಿಎ ಸರ್ಕಾರ ನೀಡಿದೆ ಎಂದು ತಿರುಗೇಟು ನೀಡಿದರು.

  • ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ- ಮತ್ತೆ ಯತ್ನಾಳ್ ಕಿಡಿ

    ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ- ಮತ್ತೆ ಯತ್ನಾಳ್ ಕಿಡಿ

    ವಿಜಯಪುರ: ಸಚಿವ ಸ್ಥಾನದ ಕುರಿತು ಆಗಾಗ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮತ್ತೆ ಹರಿಹಾಯ್ದಿದ್ದು, ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

    ಟ್ವೀಟ್ ಮೂಲಕ ಮತ್ತೆ ಅಸಮಾಧಾನ ಹೊರಹಾಕಿರುವ ಯತ್ನಾಳ್, ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಆತ್ಮಸಾಕ್ಷಿಯಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ. ಅದು ನನ್ನ ಜಾಯಮಾನವೂ ಅಲ್ಲ ಎಂದು ಟ್ವಿಟ್‍ನಲ್ಲಿ ಮತ್ತೆ ನೇರವಾಗಿ ಬರೆದುಕೊಂಡಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಉಳಿಯಲ್ಲ ಎಂದು ಸಿಎಂ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಯತ್ನಾಳ್ ಹೇಳಿಕೆ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಿಎಂ ಬಿ.ಎಸ್‍ವೈ ಅವರಿಗೂ ಈ ಹೇಳಿಕೆ ಇರಿಸು ಮುರಿಸು ಉಂಟು ಮಾಡಿತ್ತು.

    ಯತ್ನಾಳ್ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಸಹ ಶಾಸಕರ ಭವನದಲ್ಲಿ ಯತ್ನಾಳ್ ರನ್ನ ಭೇಟಿಯಾಗಿದ್ದರು. ಯತ್ನಾಳ್ ಹೇಳಿಕೆ ಬೆನ್ನಲ್ಲೇ ಯತ್ನಾಳರನ್ನ ಭೇಟಿಯಾಗಿ ಮಾತನಾಡಿದ್ದರು.

    ನಂತರ ಸಿಎಂ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದಾದ ಬೆನ್ನಲ್ಲೇ ರಾತ್ರಿ ಮತ್ತೆ ಟ್ವೀಟ್ ಮಾಡಿ ಯತ್ನಾಳ್ ಸಿಎಂ ಕಾಲೆಳೆದಿದ್ದಾರೆ. ಇದೀಗ ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಸಿಎಂ ಸಹ ತಲೆಕೆಡಿಸಿಕೊಂಡಿದ್ದಾರೆ.

  • ದಪ್ಪ ಚರ್ಮದ, ಕಿವಿ, ಕಣ್ಣು, ಹೃದಯ ಇಲ್ಲದ ಸರ್ಕಾರ ಇದು- ಈಶ್ವರ್ ಖಂಡ್ರೆ ವಾಗ್ದಾಳಿ

    ದಪ್ಪ ಚರ್ಮದ, ಕಿವಿ, ಕಣ್ಣು, ಹೃದಯ ಇಲ್ಲದ ಸರ್ಕಾರ ಇದು- ಈಶ್ವರ್ ಖಂಡ್ರೆ ವಾಗ್ದಾಳಿ

    – ರೈತರು ಸತ್ತ ಮೇಲೆ ಪರಿಹಾರ ಕೊಡತ್ತಾರಾ?

    ಬೀದರ್: ದಪ್ಪ ಚರ್ಮದ, ಕಿವಿ, ಕಣ್ಣು, ಹೃದಯ ಇಲ್ಲದ ಸರ್ಕಾರ ಇದು. ಇಲ್ಲಿಯವರೆಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾದವರಿಗೆ ಇಲ್ಲಿಯವರೆಗೆ ಸ್ಪಂದನೆ ಇಲ್ಲ. ರಾಜ್ಯದಲ್ಲಿ ಸರ್ಕಾರ ಇದೆಯಾ, ಯಾವಾಗ ಪರಿಹಾರ ಬಿಡುಗಡೆ ಮಾಡುತ್ತಾರೆ, ರೈತರು ಸತ್ತ ಮೇಲೆ ಪರಿಹಾರ ಕೊಡತ್ತಾರಾ? ಇದರಲ್ಲೂ ರಾಜಕೀಯ ಮಾಡೋದು ಬಿಡಿ. ಎಲ್ಲರೂ ಉಪ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ನಾಟಕ ಮಾಡುತ್ತಿದೆ. ಪ್ರತಿ ಎಕರೆಗೆ 50 ಸಾವಿರ ರೂ. ವಿಶೇಷ ಪ್ಯಾಕೇಜ್ ಕೊಡಬೇಕು ಎಂದು ಖಂಡ್ರೆ ಆಗ್ರಹಿಸಿದರು.

    ಪ್ರವಾಹ ಪೀಡಿತ ಪ್ರದೇಶದಲ್ಲಿ ಅ.21 ರಂದು ಸಿಎಂ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿಯಲ್ಲಿ ಮಾತ್ರ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ವೈಮಾನಿಕ ಸಮೀಕ್ಷೆ ಪಟ್ಟಿಯಲ್ಲಿ ಬೀದರ್ ಜಿಲ್ಲೆ ಯಾಕೆ ಇಲ್ಲ? ಸಿಎಂ ಬೀದರ್ ಜಿಲ್ಲೆಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಸಿಎಂಗೆ ಒತ್ತಾಯ ಮಾಡುತ್ತೇನೆ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ಮಾಡಿ, ಜೊತೆಗೆ ಪ್ರಗತಿ ಪರಿಶೀಲನೆ ಮಾಡಿ, ಪರಿಹಾರ ಘೋಷಿಸಿ ಎಂದು ಅವರು ಒತ್ತಾಯಿಸಿದರು.

    ಜಿಲ್ಲೆಯಲ್ಲಿ 2.47 ಸಾವಿರ ರೂ. ಬೆಳೆ ಹಾನಿ ಸಂಭವಿಸಿದೆ. ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಭೀಕರ ಅತಿವೃಷ್ಟಿಯಾಗಿದೆ. ಇಷ್ಟಾದರೂ ಸರ್ಕಾರ ರಾಜಕೀಯ ಮಾಡುತ್ತಿದೆ. ಪ್ರವಾಹ ಸಂತ್ರಸ್ತರ ರಕ್ಷಣೆಗೆ ಬರುತ್ತಿಲ್ಲ. ಜನ ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮೈಸೂರು ದಸರಾಗೆ ಡಾ.ಮಂಜುನಾಥ್ ಚಾಲನೆ- ಸಿಎಂ ಉಪಸ್ಥಿತಿ

    ಮೈಸೂರು ದಸರಾಗೆ ಡಾ.ಮಂಜುನಾಥ್ ಚಾಲನೆ- ಸಿಎಂ ಉಪಸ್ಥಿತಿ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಜಯದೇವ ಆಸ್ಪತ್ರೆ ನಿರ್ದೇಶಕ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಚಾಲನೆ ನೀಡಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಚಾಮುಂಡಿ ಬೆಟ್ಟದಲ್ಲಿ 410ನೇ ಮೈಸೂರು ದಸರಾ ಉದ್ಘಾಟನೆ ನೆರವೇರಿದೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ ದಸರಾ ಉದ್ಘಾಟಿಸಿದ್ದಾರೆ. ಈ ಬಾರಿ ಕೊರೊನಾ ವಾರಿಯರ್ಸ್‍ಗೆ ಆದ್ಯತೆ ನೀಡಲಾಗಿದ್ದು, ವೈದ್ಯರಿಂದ ದಸರಾ ಉದ್ಘಾಟಿಸಲಾಗಿದೆ. ಅಲ್ಲದೆ ಕೊರೊನಾ ವಾರಿಯರ್ಸ್ ಸನ್ಮಾನ ಸಹ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆ ಅತ್ಯಂತ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ.

    ಈ ಮೂಲಕ ಮೈಸೂರು ದಸರಾ 2020ಕ್ಕೆ ವೈಭವದ ಚಾಲನೆ ದೊರೆತಂತಾಗಿದ್ದು, ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ. ಉದ್ಘಾಟಕರಿಗೆ ಸಿಎಂ ಯಡಿಯೂರಪ್ಪ ಹಾಗೂ ಸಚಿವರು ಜೊತೆಯಾಗಿದ್ದಾರೆ. ಶುಭ ತುಲಾ ಲಗ್ನದಲ್ಲಿ ದಸರಾ 2020 ಉದ್ಘಾಟನೆಗೊಂಡಿದೆ. ಮೊದಲು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ಸ್ವಾಗತವಿಲ್ಲದೆ ನೇರವಾಗಿ ದೇವಾಲಯಕ್ಕೆ ಸಿಎಂ ತೆರಳಿದರು. ಪ್ರತಿಬಾರಿ ಪೂರ್ಣಕುಂಭ ಸ್ವಾಗತದೊಂದಿಗೆ ಸಿಎಂ ಹಾಗೂ ಉದ್ಘಾಟಕರು ದೇವಾಲಯ ಪ್ರವೇಶಿಸುತ್ತಿದ್ದರು. ಆದರೆ ಈ ಬಾರಿ ಪೂರ್ಣಕುಂಭ ಸ್ವಾಗತ ಮಾಡಲಾಗಿಲ್ಲ.

    ವೇದಿಕೆಯಲ್ಲಿ ಕೊರೊನಾ ವಾರಿಯರ್ಸ್‍ಗೆ ಸನ್ಮಾನ ಸಹ ಮಾಡಲಾಗಿದ್ದು, ಮರಗಮ್ಮ (ಪೌರಕಾರ್ಮಿಕರು), ಡಾ.ನವೀನ್ (ಆರೋಗ್ಯ ಇಲಾಖೆ ಮೇಡಿಕಲ್ ಆಫಿಸರ್), ರುಕ್ಮಿಣಿ (ಸ್ಟಾಫ್ ನರ್ಸ್), ನೂರ್ ಜಾನ್ (ಆಶಾ ಕಾರ್ಯಕರ್ತೆ), ಕುಮಾರ್ (ಮೈಸೂರು ನಗರ ಪೊಲೀಸ್ ಪೇದೆ), ಅಯೂಬ್ ಅಹಮದ್ (ಸಾಮಾಜಿಕ ಕಾರ್ಯಕರ್ತ) ಇವರಿಗೆ ದಸರಾ ವೇದಿಕೆಯಲ್ಲಿ ಸನ್ಮಾನ ಮಾಡಿ ಕೊರೊನಾ ಸಂದರ್ಭದಲ್ಲಿನ ಇವರ ಸೇವೆಯನ್ನು ಸ್ಮರಿಸಲಾಗಿದೆ.

    ಅರಮನೆಯಲ್ಲಿ ಖಾಸಗಿ ದರ್ಬಾರ್
    ವಿಶ್ವವಿಖ್ಯಾತ ಮೈಸೂರು ದಸರಾ 2020ಕ್ಕೆ ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್‍ಗೆ ಕ್ಷಣಗಣನೆ ಆರಂಭವಾಗಿದ್ದು, ಈ ಮೂಲಕ ಅರಮನೆ ಒಳಾಂಗಣ ಪಾರಂಪರಿಕ ದಸರಾ ಕಾರ್ಯಕ್ರಮಗಳ ಆರಂಭಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 6.15 ರಿಂದ 6.30ರ ಶುಭ ಮಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಕಂಕಣಧಾರಣೆ ನೆರವೇರಿತು.

    ಯದುವಂಶದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‍ಗೆ ಕಂಕಣಧಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಗೆ ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ನೆರವೇರಲಿದೆ. ನಂತರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಕೊರೊನಾ ಕಾರಣಕ್ಕೆ ಖಾಸಗಿ ದರ್ಬಾರ್ ಗೆ ಮಾಧ್ಯಮದವರಿಗೂ ನಿರ್ಬಂಧ ಹೇರಲಾಗಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರಿಂದ ಪೂಜೆ ನೆರವೇರಿಸಲಾಗಿದೆ.

  • ಉಪ ಚುನಾವಣೆ- ಮುನಿರತ್ನ ಬೆನ್ನಿಗೆ ನಿಂತ ಬಿಎಸ್‍ವೈ

    ಉಪ ಚುನಾವಣೆ- ಮುನಿರತ್ನ ಬೆನ್ನಿಗೆ ನಿಂತ ಬಿಎಸ್‍ವೈ

    ಬೆಂಗಳೂರು: ಬಿಜೆಪಿಯಲ್ಲಿ ಉಪಚುನಾವಣೆ ಕಾವು ಜೋರಾಗಿದ್ದು, ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಮಾಜಿ ಶಾಸಕ ಮುನಿರತ್ನಗೆ ಟಿಕೆಟ್ ನೀಡಲೇಬೇಕೆಂದು ಇಂದು ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

    ಬಿಜೆಪಿ ಕೋರ್ ಕಮಿಟಿ ಸಬೆಯಲ್ಲಿ ಮಾತನಾಡಿರುವ ಅವರು, ಸರ್ಕಾರ ರಚಿಸಲು ನಾವು ಮುನಿರತ್ನ ಬೆಂಬಲ ಪಡೆದಿದ್ದೇವೆ. ಹೀಗಾಗಿ ಅವರಿಗೆ ಕೊಟ್ಟ ಮಾತಿನಂತೆ ಟಿಕೆಟ್ ನೀಡಲೇಬೇಕು. ಬೇರೆ ದಾರಿ ಇಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.

    ತುಳಸಿ ಮುನಿರಾಜು ಗೌಡ ಅವರಿಗೆ ನಿಗಮ ಮಂಡಳಿ ಕೊಟ್ಟರೂ ಬೇಡ ಎನ್ನುತ್ತಿದ್ದಾರೆ. ಇದಕ್ಕೆ ಏನು ಮಾಡುವುದೋ ತಿಳಿಯದಾಗಿದೆ ಎಂದು ಸಿಎಂ ಹೇಳಿದ್ದಾರೆ. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಚುನಾವಣಾ ಸಮಿತಿಗೆ ಇಬ್ಬರ ಹೆಸರೂ ಕಳುಹಿಸೋಣ. ಅಲ್ಲಿಯೇ ತೀರ್ಮಾನ ಆಗಲಿ ಎಂದರು. ಹೀಗಾಗಿ ಇಬ್ಬರ ಹೆಸರನ್ನು ದೆಹಲಿಗೆ ಕಳುಹಿಸಲು ಕೋರ್ ಕಮಿಟಿ ಸಭೆ ತೀರ್ಮಾನಿಸಿತು. ಮೂಲಗಳ ಪ್ರಕಾರ ಮುನಿರತ್ನ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ.

    ಶಿರಾ ಅಭ್ಯರ್ಥಿಯಾಗಲು ಪಕ್ಷದಲ್ಲಿ ಪೈಪೋಟಿ ಹೆಚ್ಚಿದ್ದು, ಮೂವರ ಹೆಸರನ್ನು ಹೈಕಮಾಂಡ್‍ಗೆ ಕಳಿಸಲು ನಿರ್ಧರಿಸಲಾಗಿದೆ. ಇನ್ನು ಆರು ಕ್ಷೇತ್ರಗಳ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಆರ್‍ಆರ್ ನಗರ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾಗಿ ಸಚಿವರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಆರ್.ಅಶೋಕ್, ಎಸ್.ಆರ್.ವಿಶ್ವನಾಥ್, ಅರವಿಂದ ಲಿಂಬಾವಳಿಯವರನ್ನು ಕೋರ್ ಕಮಿಟಿ ಸಭೆ ನಿರ್ಧರಿಸಿದೆ. ಶಿರಾ ಕ್ಷೇತ್ರಕ್ಕೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ, ಎಂಎಲ್‍ಸಿ ರವಿ ಕುಮಾರ್, ಸಂಸದ ಪಿ.ಸಿ.ಮೋಹನ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್‍ಗೆ ಉಸ್ತುವಾರಿ ನೀಡಲಾಗಿದೆ.

  • ಮುಂದಿನ ಅವಧಿವರೆಗೂ ಸಿಎಂ ಆಗಿ ಬಿಎಸ್‍ವೈ ಮುಂದುವರಿಕೆ: ಸವದಿ

    ಮುಂದಿನ ಅವಧಿವರೆಗೂ ಸಿಎಂ ಆಗಿ ಬಿಎಸ್‍ವೈ ಮುಂದುವರಿಕೆ: ಸವದಿ

    ಚಿಕ್ಕೋಡಿ/ಬೆಳಗಾವಿ: ಮುಂದಿನ ಅವಧಿ ವರೆಗೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರೇ ಮುಂದುವರಿಯುವ ತೀರ್ಮಾನ ಆಗಿದೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.

    ಜಿಲ್ಲೆಯ ಅಥಣಿಯಲ್ಲಿ ಸಿಎಂ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಎಂಬುದು ಊಹಾಪೋಹ, ಬರಿ ಗಾಳಿಮಾತು ಅಷ್ಟೆ. ಮುಂದಿನ ಅವಧಿವರೆಗೆ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಕುರಿತು ಈಗಾಗಲೇ ನಿರ್ಧಾರವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಿಂದ ಮುಖ್ಯಮಂತ್ರಿ ನೇಮಕಾತಿ ವಿಚಾರದ ಕುರಿತು ಪ್ರಸ್ತಾಪವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ರಾಜ್ಯದ ಅಭಿವೃದ್ಧಿ ಹಾಗೂ ಕೇಂದ್ರ ಸರ್ಕಾರದ ಹಣಕಾಸಿನ ಬಿಡುಗಡೆ ಬಗ್ಗೆ ಸಮಾಲೋಚನೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ಸಚಿವರನ್ನು ಭೇಟಿ ಮಾಡಲಿದ್ದಾರೆ. ಇದು ರಾಜ್ಯದ ಅಭಿವೃದ್ಧಿ ಹಾಗೂ ಹೆಚ್ಚಿನ ಹಣಕಾಸು ಬಿಡುಗಡೆಗೆ ನಡೆಯುವ ಸಾಮನ್ಯ ಪ್ರಕ್ರಿಯೆ. ಅಲ್ಲದೆ ರಾಷ್ಟ್ರೀಯ ನಾಯಕರ ಜೊತೆ ಚರ್ಚೆ ನಡೆಸಿ, ಒಪ್ಪಿಗೆ ಪಡೆದು ರಾಜ್ಯದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ತೀರ್ಮಾನ ಮಾಡಲಿದ್ದಾರೆ. ಮುಖ್ಯಮಂತ್ರಿಯವರ ಯಾವುದೇ ತೀರ್ಮಾನಕ್ಕೆ ನಮ್ಮೆಲ್ಲರ ಸಹಮತ ಇದೆ ಎಂದು ತಿಳಿಸಿದರು.

    ಸಚಿವ ರಮೇಶ್ ಜಾರಕಿಹೊಳಿ ಮಹರಾಷ್ಟ್ರದ ಬಿಜೆಪಿ ಮುಖಂಡರ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡಿರಬಹುದು. ಮಹಾರಾಷ್ಟ್ರದಲ್ಲಿ ಆಪರೇಶನ್ ಕಮಲದ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಇದೇ ವೇಳೆ ಹೇಳಿದರು.

  • ಕೋವಿಡ್-19 ಕರ್ತವ್ಯದಲ್ಲಿದ್ದ ಕೆಎಎಸ್ ಅಧಿಕಾರಿ ಗಂಗಾಧರಯ್ಯ ಹೃದಯಾಘಾತದಿಂದ ಸಾವು

    ಕೋವಿಡ್-19 ಕರ್ತವ್ಯದಲ್ಲಿದ್ದ ಕೆಎಎಸ್ ಅಧಿಕಾರಿ ಗಂಗಾಧರಯ್ಯ ಹೃದಯಾಘಾತದಿಂದ ಸಾವು

    ಬೆಂಗಳೂರು: ಕೆಎಎಸ್ ಅಧಿಕಾರಿ ಎಚ್.ಗಂಗಾಧರಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನೋಡೆಲ್ ಅಧಿಕಾರಿಯಾಗಿ(ಕೆಎಎಸ್) ಕೋವಿಡ್-19 ಕರ್ತವ್ಯದಲ್ಲಿದ್ದ ಎಚ್.ಗಂಗಾಧರಯ್ಯ ಅವರು ಹೃದಯಾಘಾತದಿಂದ ಮರಣ ಹೊಂದಿದ್ದು, ಸಪ್ತಗಿರಿ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಕರ್ತವ್ಯದ ವೇಳೆ ಕುಸಿದು ಬಿದ್ದು ಗಂಗಾಧರಯ್ಯ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ.ಗಳ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಸೇರಿದಂತೆ ಪೋಲೀಸ್ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

    ದಕ್ಷ ಅಧಿಕಾರಿಯಾಗಿದ್ದ ಗಂಗಾಧರಯ್ಯ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

  • ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮ: ಸಚಿವ ಆರ್.ಅಶೋಕ್

    ಪ್ರವಾಹ ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮ: ಸಚಿವ ಆರ್.ಅಶೋಕ್

    – ಪರಿಹಾರ ಕಾರ್ಯಕ್ಕೆ ಹಣ ಕೊರತೆ ಇಲ್ಲ
    – ನನ್ನ ವರದಿ ನೆಗೆಟಿವ್ ಬಂದಿದೆ

    ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದ್ದು, ಪ್ರವಾಹದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಿಎಂ ನಿರ್ದೇಶನ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, ನಿನ್ನೆಯೇ 8 ಜಿಲ್ಲಾಧಿಕಾರಿಗಳ ಜೊತೆ ಸಭೆ ಮಾಡಿ ಅಗತ್ಯ ಕ್ರಮಕ್ಕೆ ನಿರ್ದೇಶನ ಕೊಡಲಾಗಿದೆ. ಗೃಹ ಇಲಾಖೆ ಜೊತೆಗೂ ಸಭೆ ಮಾಡಿದ್ದೇ. ಇಂದಿನ ಸಭೆಗೆ ಸಚಿವರಾದ ಸೋಮಣ್ಣ, ಸಿಟಿ ರವಿ ಅವರು ಭಾಗಿಯಾಗಿದ್ದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸೋಮಣ್ಣ ಅವರು ಜಿಲ್ಲೆಗೆ ಭೇಟಿ ನೀಡುತ್ತಾರೆ. ನಾನು ರಾಜ್ಯದ ಹಲವು ಭಾಗಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

    ಹಣ ಕೊರತೆ ಇಲ್ಲ: ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕೊರೊನಾ ನಿಯಂತ್ರಣ ಸೇರಿದಂತೆ ಪ್ರವಾಹ ಕ್ರಮಗಳನ್ನು ಕೈಗೊಳ್ಳಲು ಅಗತ್ಯ ಹಣವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಸಿಎಂ ಕೂಡ ಸೂಚನೆ ನೀಡಿದ್ದಾರೆ. ಕೊರೊನಾ ಮತ್ತು ಪ್ರವಾಹ ನಿರ್ವಹಣೆಗೆ ಪ್ರತ್ಯೇಕ ಹಣ ಬಿಡುಗಡೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಧಾರವಾಡ, ಮೈಸೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡದಲ್ಲಿ ಮಳೆ ಆಗಿದೆ. ಕೊಡಗಿನಲ್ಲಿ ಗುಡ್ಡ ಕುಸಿದು ಐವರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದರು.

    ಮಳೆಯಿಂದ ಮನೆ ಕಳೆದುಕೊಂಡವರಿಗೆ ತಕ್ಷಣದ 10 ಸಾವಿರ ರೂ. ನೀಡಲು ತಿಳಿಸಿದ್ದೇವೆ. ದನ, ಕರು, ಕುರಿ ಸತ್ತಿದ್ದರೆ ಕೂಡಲೇ ಪರಿಹಾರ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. 30 ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 1,268 ಕೋಟಿ ರೂ. ಹಣವಿದೆ. ಅಗತ್ಯ ಮುಂಜಾಗ್ರತಾ ಸಾಮಗ್ರಿ ಖರೀದಿಗೆ ಜಿಲ್ಲಾಧಿಕಾರಿಗಳಿಗೆ ಸೂಚನಡ ನೀಡಿದ್ದೇವೆ. ಕಳೆದ ಬಾರಿಯಂತೆ ಯಾವುದೇ ಅನಾಹುತ ಆಗಲು ಬಿಡುವುದಿಲ್ಲ. ಜಲಾಶಯಗಳಲ್ಲಿ ಅಗತ್ಯ ನೀರಿಗಿಂತ ಹೆಚ್ಚಿನ ಪ್ರಮಾಣದ ನೀರು ಉಳಿಸಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

    ನೆಗೆಟಿವ್ ರಿಪೋರ್ಟ್: ಸಿಎಂ ಅವರಿಗೆ ಪಾಸಿಟಿವ್ ಬಂದ ಬಳಿಕ 8 ದಿನ ಕ್ವಾರಂಟೈನ್ ಆಗಿದ್ದೆ. ಮೆಟ್ರೋ ಕಾಮಗಾರಿ ಚಾಲನೆ ವೇಳೆ ಅವರೊಂದಿಗಿದ್ದೆ. ಇಂದು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಆದ್ದರಿಂದ ಪ್ರವಾಹ ನಿರ್ವಹಣೆ ಹಾಗೂ ಕೊರೊನಾ ಕೆಲಸದಲ್ಲಿ ತೊಡಗಿಸಿಕೊಳುತ್ತಿದ್ದೇನೆ ಎಂದು ಅವರು ತಿಳಿಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿ, ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಆಯುಕ್ತರು ಮಾತ್ರ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಅಂಜುಂ ಪರ್ವೇಜ್ ಅವರನ್ನು ಕಳೆದ 10 ದಿನಗಳ ಹಿಂದೆಯೇ ನೇಮಕ ಮಾಡಲಾಗಿದೆ. ಅವರು ಈ ಬಗ್ಗೆ ಕಾರ್ಯನಿರ್ವಹಿಸುತ್ತಾರೆ. ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿ ಮಾತ್ರ ನೋಡಿಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಗೊಂದಲ ಬೇಡ ಎಂದರು.