ಹುಬ್ಬಳ್ಳಿ: ಹಠ ಮಾಡದೇ ಪ್ರತಿಭಟನೆ ಹಿಂಪಡೆಯಿರಿ. ಸರ್ಕಾರ ಬಿಗಿಯಾದ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರಿಗೆ ನೌಕರರ ಬಳಿ ಮನವಿ ಮಾಡಿದ್ದಾರೆ.
ಬೆಳಗಾವಿ ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ತೆರಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ ಬಿಎಸ್‍ವೈ, ಸಾರಿಗೆ ಸಂಸ್ಥೆಯ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಯಾವುದೇ ಕಾರಣಕ್ಕೂ ಸಾರಿಗೆ ನೌಕರರು ಹಠ ಮಾಡದೇ ನಾಳೆ ಕರೆ ನೀಡಿರುವ ರಾಜ್ಯ ವ್ಯಾಪಿಯ ಮುಷ್ಕರವನ್ನು ಹಿಂಪಡೆಯಬೇಕು ಎಂದರು.
ನಾವೆಲ್ಲಾ ಒಟ್ಟಾಗಿ ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಸರ್ಕಾರ ಬಿಗಿಯಾದ ಕ್ರಮಕೈಗೊಳ್ಳಲು ಅವಕಾಶ ಮಾಡಿಕೊಡಬೇಡಿ. ಮುಷ್ಕರ ಕೈ ಬಿಟ್ಟು ಸರ್ಕಾರಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ ಸಿಎಂ, ನಾಳೆ ನಡೆಯುವ ಮುಷ್ಕರದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಸರ್ಕಾರದಿಂದ ಏನು ಬೇಕು ಅದೆಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವೆ. ಖಾಸಗಿ ವಾಹನ ಸೌಕರ್ಯ, ರೈಲು ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ತಜ್ಞರ ಸಭೆ ಕರೆದಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಒಂದು ತಿಂಗಳಿನಿಂದ ಕೋವಿಡ್ ನಮ್ಮ ಕೈ ಮೀರಿ ಹೋಗುತ್ತಿದೆ. ಪ್ರಕರಣಗಳ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಸದ್ಯದ ಪರಿಸ್ಥಿತಿ ಮುಂದುವರಿಬೇಕಾದ್ರೆ ಜನರು ಸಹಕರಿಸಬೇಕು. ಹಾಗಾಗಿ ಜನರು ಕೊರೊನಾ ನಿಯಮಗಳನ್ನ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು.
ಇನ್ಮುಂದೆ ಮದುವೆ, ಸಮಾರಂಭದಲ್ಲಿ ಎಷ್ಟು ಜನರು ಭಾಗವಹಿಸಬೇಕು ಎಂಬುದರ ತೀರ್ಮಾನಿಸಲಾಗುತ್ತದೆ. ಇಂದು ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ್ದೇನೆ. ಸೋಮವಾರ ಸಂಜೆ 5 ಗಂಟೆಗೆ ತಜ್ಞರ ಸಭೆ ಕರೆಯಲಾಗಿದ್ದು, ಕೊರೊನ ನಿಯಂತ್ರಣದ ಕುರಿತು ಚರ್ಚಿಸಲಾಗುವುದು. ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಲ್ಲಿಯ ಜನರು ರಾಜ್ಯಕ್ಕೆ ಬರೋದನ್ನ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರು: ಜಿಲ್ಲಾ ಪ್ರವಾಸದಿಂದ ಹಿಂದಿರುಗಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ಸರ್ಜರಿ ಕುರಿತಾಗಿ ಸಾಲು ಸಾಲು ಸಭೆ ನಡೆಸಲಿದ್ದಾರೆ. ಇಂದು ಸಂಜೆ ಆಪ್ತ ಸಚಿವರಿಗೆ ಕಾವೇರಿ ನಿವಾಸಕ್ಕೆ ಆಗಮಿಸುವಂತೆ ಸಿಎಂ ಬುಲಾವ್ ನೀಡಿದ್ದಾರೆ. ಇಂದು ಸಂಜೆ ನಡೆಯುವ ಸಭೆಯಲ್ಲಿಯೇ ನೂತನ ಸಚಿವ ಪ್ರಮಾಣ ವಚನಕ್ಕೆ ಮುಹೂರ್ತ ನಿಗದಿಯಾಗಲಿದೆ ಎನ್ನಲಾಗಿದೆ.
ಇಂದು ಸಂಜೆ ಸಭೆಯಲ್ಲಿ ಸಿಎಂ ಲೆಕ್ಕಚಾರದಂತೆ ಎಲ್ಲವೂ ನಡೆದ್ರೆ ಸಂಜೆಯೇ ನೂತನ ಸಚಿವರ ಹೆಸರನ್ನು ಫೈನಲ್ ಮಾಡಿ, ಪದಗ್ರಹಣದ ದಿನಾಂಕವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗಮನಕ್ಕೆ ತರಲಿದ್ದಾರೆ. ಗ್ರೀನ್ ಸಿಗ್ನಲ್ ಸಿಕ್ಕರೆ ನಾಳೆಯೇ ಅಂದ್ರೆ ಶುಭ ಶುಕ್ರವಾರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
ಯಾರಿಗೆ ಕುತ್ತು?: ಸಂಪುಟ ಸರ್ಜರಿ ವೇಳೆ ಕಳಪೆ ಸಾಧನೆ ಮಾಡಿರುವ ಸಚಿವರ ಸ್ಥಾನಕ್ಕೆ ಕುತ್ತು ಬರಲಿದೆ. ಕಳೆದ 5 ತಿಂಗಳ ಸಚಿವರ ರಿಪೋರ್ಟ್ ಕಾರ್ಡ್ ಪಡೆದಿರುವ ಹೈಕಮಾಂಡ್ ಯಾರನ್ನು ಕೈ ಬಿಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ ಎನ್ನಲಾಗಿದೆ. ಇದೀಗ ಅದೇ ಪಟ್ಟಿ ಜೊತೆ ಸಿಎಂ ಅಪ್ತ ಸಚಿವರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಜಾರಕಿಹೊಳಿ ಪ್ಲಾನ್: ಇನ್ನು ಸಚಿವ ರಮೇಶ್ ಜಾರಕಿಹೊಳಿ ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಗೆ ಸಮಯ ಕೇಳಿರುವ ರಮೇಶ್ ಜಾರಕಿಹೊಳಿ, ತಮ್ಮ ಜೊತೆ ಬಿಜೆಪಿಗೆ ಬಂದವರಿಗೆ ಸಚಿವ ಸ್ಥಾನಕ್ಕೆ ಪಟ್ಟು ಹಿಡಿಯುವ ಸಾಧ್ಯತೆಗಳಿವೆ. ಕಳಪೆ ಸಾಧನೆ ಮಾಡಿದವರನ್ನು ಕೈ ಬಿಡುವಂತೆ ಒತ್ತಾಯ ಸಾಧ್ಯತೆಗಳಿದ್ದು, ಸಚಿವ ಶ್ರೀಮಂತ ಪಾಟೀಲ್ ಕೈ ಬಿಟ್ಟು ಕುಮಟಹಳ್ಳಿಗೆ ಮಂತ್ರಿ ಸ್ಥಾನ ಕೇಳಬಹುದು ಎಂಬ ಚರ್ಚೆಗಳು ಜೋರಾಗಿವೆ.
ಬೆಂಗಳೂರು: ನಾಳೆಯ ಕ್ಯಾಬಿನೆಟ್ ಸಭೆ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿ, ಸಂಪುಟ ಸರ್ಜರಿಯ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಎಂ ಪ್ರವಾಸ ಹಿನ್ನೆಲೆ ಮಧ್ಯಾಹ್ನ 12.30ಕ್ಕೆ ನಿಗದಿಯಾಗಿದ್ದ ಸಂಪುಟ ಸಭೆ 10.30ಕ್ಕೆ ಆರಂಭವಾಗಲಿದೆ. ನಾಳೆಯ ಕ್ಯಾಬಿನೆಟ್ ಸಭೆಗೆ ಎಲ್ಲ ಸಚಿವರು ಕಡ್ಡಾಯವಾಗಿ ಹಾಜರಿರಬೇಕೆಂದು ಸಿಎಂ ಸೂಚಿಸುವ ಮೂಲಕ ಕೆಲವರಿಗೆ ಇದೇ ಕಡೆಯ ಸಂಪುಟ ಸಭೆ ಆಗುವ ಬಗ್ಗೆ ಹೇಳುವ ಸಾಧ್ಯತೆಗಳಿವೆ.
ಬಿಹಾರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರವೇ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ನೀಡಲಾಗುವುದು ಎಂಬ ಸಂದೇಶವನ್ನು ಹೈಕಮಾಂಡ್ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿತ್ತು. ಇದೀಗ ಸರ್ಕಾರ ರಚನೆ ಬೆನ್ನಲ್ಲೇ ಸಿಎಂ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಸಂಪುಟ ಸರ್ಜರಿಗೆ ಹೈಕಮಾಂಡ್ ಒಪ್ಪಿಗೆ ನೀಡಿದ್ರೆ ಶುಕ್ರವಾರವೇ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳಿವೆ. ಹಾಲಿ ಮೂರ್ನಾಲ್ಕು ಸಚಿವರಿಗೆ ಕೊಕ್ ನೀಡಲಾಗುತ್ತಿದೆ ಎನ್ನಲಾಗುತ್ತಿದ್ದು, ಮಂತ್ರಿಗಳ ಹೃದಯ ಬಡಿತ ಹೆಚ್ಚಾದಂತೆ ಆಗಿದೆ.
ಬೆಂಗಳೂರು: ಡಿಸಿಎಂ ನಿರೀಕ್ಷೆಯಲ್ಲಿದ್ದ ಸಚಿವ ಶ್ರೀರಾಮುಲು ಅವರಿಗೆ ಸೋಮವಾರ ಸಿಎಂ ಯಡಿಯೂರಪ್ಪ ಬಿಗ್ ಶಾಕ್ ನೀಡಿದ್ದರು. ಎರಡು ಖಾತೆ ಹೋಗಿ ಒಂದು ಖಾತೆ ಬಂದಮೇಲೆ ಶ್ರೀರಾಮುಲು ಅವರ ಮುಂದಿನ ನಡೆ ತೀವ್ರ ಕುತೂಹಲ ಹುಟ್ಟುಹಾಕಿದೆ. ಸಿಎಂ ನಿರ್ಧಾರರಿಂದ ಅಸಮಾಧಾನಗೊಂಡಿರುವ ಶ್ರೀರಾಮುಲು ಹೈಕಮಾಂಡ್ ನಾಯಕರ ಸಂಪರ್ಕಕ್ಕೆ ಮುಂದಾಗಿದ್ದು, ಯಡಿಯೂರಪ್ಪ ಅವರ ಮೇಲೆ ತ್ರಿಮೂರ್ತಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ ಸಿಎಂ ಭೇಟಿ ಬಳಿಕ ಹೈಕಮಾಂಡ್ ನಾಯಕರನ್ನ ಸಂಪರ್ಕಿಸಲು ಶ್ರೀರಾಮುಲು ಪ್ರಯತ್ನಿಸುತ್ತಿದ್ದಾರೆ. ಸಚಿವ ಸ್ಥಾನ ಅದಲು-ಬದಲು ಮಾಡುವ ವಿಷಯ ಕುರಿತು ಸಿಎಂ ವರಿಷ್ಠರ ಜೊತೆ ಚರ್ಚೆ ಮಾಡಿಲ್ಲ ಎಂದು ಹೇಳಲಾಗುತ್ತಿದ್ದು, ಯಡಿಯೂರಪ್ಪ ವಿರುದ್ಧ ದೂರು ಸಲ್ಲಿಕೆಗೆ ಶ್ರೀರಾಮುಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಂಪರ್ಕಿಸಲು ರಾಮುಲು ಯತ್ನಿಸುತ್ತಿದ್ದಾರೆ. ಇಂದು ಸಹ ಮೂವರಿಗೆ ಕರೆ ಮಾಡಿ ರಾಜ್ಯದಲ್ಲಾದ ದಿಢೀರ್ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರಂತೆ. ಹೈಕಮಾಂಡ್ ನಾಯಕರು ಶ್ರೀರಾಮುಲು ಪರ ಬ್ಯಾಟ್ ಬೀಸ್ತಾರಾ ಅಥವಾ ಸಿಎಂ ನಿರ್ಧಾರವನ್ನ ಬೆಂಬಲಿಸ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಬೆಳಗಾವಿ: ದಿವಂಗತ ಸುರೇಶ್ ಅಂಗಡಿಯವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬಿ.ಎಸ್.ಯಡಿಯೂಪ್ಪನವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಇಂದು ಬೆಳಗ್ಗೆ ಬೆಳಗಾವಿಯ ಸದಾಶಿವ ನಗರದಲ್ಲಿರುವ ಮನೆಗೆ ಭೇಟಿ ಮುಖ್ಯಮಂತ್ರಿಗಳು, ದಿ.ಸುರೇಶ್ ಅಂಗಡಿಯವರ ಪತ್ನಿ ಮಂಗಲಾ, ತಾಯಿ ಸೋಮವ್ವಾ, ಪುತ್ರಿಯರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ದಿ.ಸುರೇಶ್ ಅಂಗಡಿ ಒಬ್ಬ ಅಜಾತ ಶತ್ರು, ಸರಳ ಸಜ್ಜನಿಕೆ ಪ್ರಾಮಾಣಿಕ ವ್ಯಕ್ತಿ ಆಗಿದ್ರು. ರೈಲ್ವೆ ಸಚಿವರಾಗಿ ಕೇವಲ ಒಂದೇ ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದ ಕೆಲಸ ಮಾಡಿಕೊಡಲು ಹಗಲು ರಾತ್ರಿ ಕೆಲಸ ಮಾಡಿದವರು. ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಅವರಿಗೆ ಯಾವ ರೀತಿ ಸಾಂತ್ವನ ಹೇಳೋದು ಅಂತಾ ತಿಳಿಯುತ್ತಿಲ್ಲ ಎಂದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಆತ್ಮೀಯ ಸ್ನೇಹಿತ ಸುರೇಶ್ ಅಂಗಡಿ ನಮ್ಮನ್ನ ಅಗಲಿದ್ದಾರೆ ಅನ್ನುವುದನ್ನ ಕಲ್ಪನೆ ಮಾಡಿಕೊಳ್ಳಲು ಆಗುತ್ತಿಲ್ಲ. ನಾಲ್ಕು ಬಾರಿ ಸಂಸದರು, ರೇಲ್ವೆ ಸಚಿವರಾಗಿ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಅಪಾರ. ತಕ್ಷಣ ಸರಿಯಾದ ಚಿಕಿತ್ಸೆ ಪಡೆಯದೇ ದೆಹಲಿಯಲ್ಲಿ ಎರಡು ದಿನ ತಡ ಮಾಡಿದ್ದಾರೆ. ದೆಹಲಿಯಲ್ಲಿ ಸುರೇಶ್ ಅಂಗಡಿ ಸಮಾಧಿ ಇರುವ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮನವಿ ಮಾಡಲಾಗಿದೆ. ಅದು ನಮ್ಮ ಕರ್ತವ್ಯ ಆಗಿದ್ದು, ಈಗಾಗಲೇ ದೆಹಲಿಯಲ್ಲಿರುವ ರಾಜ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನ ಎಂದು ತಿಳಿಸಿದರು.
ಇತ್ತೀಚೆಗೆ ದೈವಾಧೀನರಾದ ಹಿರಿಯ ನಾಯಕರು, ಕೇಂದ್ರ ಸಚಿವರು, ಆತ್ಮೀಯ ಸ್ನೇಹಿತರೂ ಆಗಿದ್ದ ಶ್ರೀ ಸುರೇಶ್ ಅಂಗಡಿಯವರ ಬೆಳಗಾವಿಯ ನಿವಾಸಕ್ಕೆ ಇಂದು ತೆರಳಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ, ಸಂತಾಪ ಸೂಚಿಸಲಾಯಿತು. ಹಿರಿಯ ಸಚಿವರುಗಳು ಜೊತೆಗಿದ್ದರು.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಪುಟ ವಿಸ್ತರಣೆಯೋ? ಪುನಾರಚನೆಯೋ ಎಂಬ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಂಪುಟ ವಿಸ್ತರಣೆ ಬದಲು ಸಂಪುಟ ಪುನಾರಚನೆಗೆ ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎನ್ನಲಾಗಿದೆ. ಈ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಇನ್ನು ಎರಡ್ಮೂರು ದಿನಗಳಲ್ಲಿ ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಏನು ಸಮಸ್ಯೆ ಇಲ್ಲ. ಮೂರು ದಿನದಲ್ಲಿ ದೆಹಲಿಗೆ ಹೊರಡುತ್ತಿದ್ದು, ಅಲ್ಲಿಂದ ಬಂದ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಭಾನುವಾರ ಯಡಿಯೂರಪ್ಪ ಅವರಿಗೆ ಕರೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದರು. ದೆಹಲಿಗೆ ಬನ್ನಿ ಎಂದು ಬುಲಾವ್ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು 10 ದಿನಗಳ ಅವಧಿಯಲ್ಲಿ ಎರಡನೇ ಬಾರಿಗೆ ದೆಹಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ.
ಅಕ್ಟೋಬರ್ 6ರಂದು ಬಿಎಸ್‍ವೈ ಸಂಪುಟ ಪುನಾರಚನೆ ನಡೆಯೋ ಸಾಧ್ಯತೆಗಳು ಹೆಚ್ಚಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹುದ್ದೆಗೆ ಏರಿದ ಸಚಿವ ಸಿಟಿ ರವಿ, ನಾಲ್ಕೈದು ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನು ಹೊಸ ಹೈಕಮಾಂಡ್ ಸೂತ್ರ: ಸದ್ಯ ಆರು ಸಚಿವ ಸ್ಥಾನ ಖಾಲಿ ಇದ್ದು, ನಾಲ್ವರಿಂದ ರಾಜೀನಾಮೆ ಕೊಟ್ಟರೆ ಒಟ್ಟು 10 ಸಚಿವ ಸ್ಥಾನ ಖಾಲಿ ಆಗಲಿದೆ. 10ರ ಪೈಕಿ 2 ಸ್ಥಾನಗಳನ್ನು ಉಳಿಸಿಕೊಂಡು 8 ಸ್ಥಾನ ತುಂಬಲು (ಫಾರ್ಮುಲಾ 2+6 ಅನ್ವಯ) ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗಿದೆ.
ಸಚಿವರಾದ ಸಿಟಿ ರವಿ, ಶಶಿಕಲಾ ಜೊಲ್ಲೆ, ಸಿಸಿ ಪಾಟೀಲ್ ಮತ್ತು ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಕೈ ಬಿಟ್ಟು, ಇಬ್ಬರು ವಲಸಿಗರು ಮತ್ತು ಆರು ಮಂದಿ ಮೂಲ ಬಿಜೆಪಿಗರಿಗೆ ಮಂತ್ರಿಗಿರಿ ಸಂಪುಟದಲ್ಲಿ ಸಿಗುವ ಸಾಧ್ಯತೆಗಳಿವೆ.
ಎಂ.ಟಿ.ಬಿ ನಾಗರಾಜ್ ಮತ್ತು ಆರ್. ಶಂಕರ್‍ಗೆ ಸಚಿವ ಸ್ಥಾನ ಬಹುತೇಕ ಫಿಕ್ಸ್ ಎಂದು ಹೇಳಲಾಗ್ತಿದೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಸ್ ಅಂಗಾರ, ಸುನೀಲ್ ಕುಮಾರ್ ಅಥವಾ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು. ಈ ನಡುವೆ ಎರಡು ಅಚ್ಚರಿಯ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಪ್ಲಾನ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
-ವಿಧೇಯಕದ ಪ್ರತಿ ಹರಿದು ಸಿದ್ದರಾಮಯ್ಯ ಆಕ್ರೋಶ
-ರಾಜ್ಯ ಸರ್ಕಾರಕ್ಕೆ ರೈತರಿಂದ ಹಿಡಿ ಶಾಪ
ಬೆಂಗಳೂರು: ವಾರದ ಹಿಂದೆ ಕೃಷಿ ಬಿಲ್ ಬಿಲ್ ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷ ಸದಸ್ಯರು ಮಸೂದೆ ಪ್ರತಿ ಹರಿದು ಆಕ್ರೋಶ ಹೊರ ಹಾಕಿದ್ದರು. ಇದೀಗ ವಿಧಾನಸಭೆಯಲ್ಲೂ ಇದೇ ರೀತಿಯ ಘಟನೆ ಮರುಕಳಿಸಿದೆ. ವಿಪಕ್ಷ ಸದಸ್ಯರು ಭೂ ಸೂಧಾರಣಾ ತಿದ್ದುಪಡಿ ವಿಧೇಯಕದ ಪ್ರತಿಗಳು ಹರಿದು ಹಾಕಿದರು. ವಿಪಕ್ಷಗಳ ಗದ್ದಲ ಗಲಾಟೆ, ರೈತರ ಪ್ರತಿಭಟನೆಗಳ ನಡುವೆ ಅಧಿವೇಶನದ ಕೊನೆಯ ದಿನವಾದ ಇಂದು ಭೂಸುಧಾರಣಾ ತಿದ್ದುಪಡಿ ವಿಧೇಯಕ ಮತ್ತು ಎಪಿಎಂಸಿ ಬಿಲ್‍ಗಳಿಗೆ ವಿಧಾನಸಭೆಯ ಒಪ್ಪಿಗೆಯನ್ನು ಸರ್ಕಾರ ಪಡೆದುಕೊಂಡಿದೆ.
ಇದಕ್ಕೂ ಮುನ್ನ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಪೋರೇಟ್ ಕಂಪನಿಗಳ ಲಾಬಿಗೆ ಮಣಿದಿರೋ ಸರ್ಕಾರ ಇದನ್ನು ಜಾರಿಗೆ ತರಲು ಮುಂದಾಗುತ್ತಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಇದರಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆಪಾದಿಸಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಈ ಕಾಯ್ದೆಯನ್ನ ತಂದರೆ 1964ರ ಹಿಂದಕ್ಕೆ ಹೋಗ್ತೇವೆ. ಇಲ್ಲಿಯವರೆಗೆ ಉಳುವವನೇ ಭೂ ಒಡೆಯ ಅನ್ನುವಂತಿತ್ತು. ಆದರೆ ಈಗ ಅದು ಉಲ್ಟಾ ಆಗಲಿದೆ. ಎಪಿಎಂಸಿಗಳು ಮುಚ್ಚಬಹುದಾದ ಆತಂಕವಿದೆ ಅಂತಾ ಆಕ್ಷೇಪ ವ್ಯಕ್ತಪಡಿಸಿದರು.
ವಿಪಕ್ಷಗಳಿಗೆ ಸ್ಪಷ್ಟನೆ ಕೊಟ್ಟ ಸಿಎಂ ಬಿ.ಎಸ್.ಯಡಿಯೂರಪ್ಪ, ಸಣ್ಣ ಹಿಡುವಳಿದಾರರ ಹಿತ ಕಾಯಲು ಸರ್ಕಾರ ಬದ್ಧ. ಯಾವುದೇ ಆತಂಕ ನಿಮಗೆ ಬೇಡ ಎಂದರು. ಸಚಿವ ಅಶೋಕ್ ಮಾತನಾಡಿ, ಈ ತಿದ್ದುಪಡಿ ಕಾಯ್ದೆ ತಂದಿದ್ದು ನಾವಲ್ಲ. 2004ರಲ್ಲಿ ಕಂದಾಯ ಸಚಿವರಾಗಿದ್ದವರು ಅಂದ್ರು. ಇನ್ನು ರೈತರನ್ನು ಕೇಳಿ ಎಪಿಎಂಸಿ ಬಿಲ್ ತಂದ್ರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಕೌಂಟರ್ ಕೊಟ್ಟ ಸಚಿವ ಸಿಟಿ ರವಿ, ಲೋಕಸಭೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಸ್ತಾಪಿಸಿದ್ದನ್ನು ಎತ್ತಿ ತೋರಿಸಿದರಿ. ಈ ವೇಳೆ ಭಾರೀ ಗದ್ದಲ ನಡೀತು.
ಅನ್ನದಾತ ರೈತ ಸ್ವಾಭಿಮಾನದಿಂದ 'ನನ್ನ ಬೆಳೆ ನನ್ನ ಹಕ್ಕು' ಎಂದು ಘೋಷಿಸುವಂತಾಗಬೇಕು ಎನ್ನುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇನ್ನು ಮುಂದೆ ನಮ್ಮ ರೈತ ಬಾಂಧವರು ಮಧ್ಯವರ್ತಿಗಳ ಶೋಷಣೆಯಿಂದ, ಒಂದೇ ಮಾರುಕಟ್ಟೆಯ ನಿರ್ಬಂಧದಿಂದ, ದಕ್ಕಿದ ಬೆಲೆಗೆ ಬೆಳೆ ಮಾರಾಟ ಮಾಡುವ ಹೇರಿಕೆ ನಿಯಮದಿಂದ ಸ್ವತಂತ್ರರಾಗಲಿದ್ದಾರೆ. (1/2)
ಸಿದ್ದರಾಮಯ್ಯನವರು ಸೇರಿ ಹಲವರು ವಿಧೇಯಕ ಪ್ರತಿ ಹರಿದು ಹಾಕಿ, ಸಭಾತ್ಯಾಗ ಮಾಡಿದರು. ಇದರ ಮಧ್ಯೆಯೇ ಧ್ವನಿಮತದ ಮೂಲಕ ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯಿತು. ಪರಿಷತ್‍ನಲ್ಲಿಯೂ ಭೂಸುಧಾರಣೆ ಬಿಲ್‍ಗೆ ಸರ್ಕಾರ ಒಪ್ಪಿಗೆ ಪಡೆದಿದೆ. ಎಪಿಎಂಸಿ ಬಿಲ್ ಮೇಲೆ ಚರ್ಚೆ ನಡೆಯುತ್ತಿದೆ.
ಉತ್ತಮ ಬೆಲೆ ಸಿಕ್ಕರೆ ರೈತರು ಎಪಿಎಂಸಿಯಲ್ಲೇ ಬೆಳೆ ಮಾರಬಹುದು, ವ್ಯಾಪಾರಿಗಳಿಗೆ ಮಾರಬಹುದು, ಅಥವಾ ರಾಜ್ಯದ ಹೊರಗಿನ ಮಾರುಕಟ್ಟೆಯಲ್ಲೂ ಮಾರಾಟ ಮಾಡಬಹುದು,ಅದು ರೈತನ ಇಚ್ಛೆ. ಇದರಿಂದಾಗಿ ರೈತನೇ ತನ್ನ ಬೆಳೆಯ ಬೆಲೆ ನಿಯಂತ್ರಿಸುವ ರೂವಾರಿಯಾಗುತ್ತಾನೆ. ಒಂದೊಮ್ಮೆ ರೈತರಿಗೆ ವಂಚನೆಯಾದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ಒದಗಿಸುತ್ತದೆ. (2/2)
ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ತಮ್ಮ ಮೇಲೆ ಆಡಳಿತ ಮತ್ತು ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪ ಮಾಡಿರುವ ಆರೋಪದ ಬಗ್ಗೆ ವಿಜಯೇಂದ್ರ ಎರಡು ಪುಟದ ಪತ್ರದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತ ಶಕ್ತಿಗಳು ನನ್ನ ವಿರುದ್ಧ ಷಢ್ಯಂತ್ರ ರೂಪಿಸಿವೆ. ಆದರೆ ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ ಎಂದಿದ್ದಾರೆ. ನನ್ನ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ಮಾಡಲಾಗುತ್ತಿದೆ. ನಾನು ಯಾವುದೇ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ನನ್ನನ್ನು ನಾನು ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲವರು ಹತಾಷೆ ಮತ್ತು ಅಸೂಯೆಯಿಂದ ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ:ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಭಾಗದ ಜನರ ಪ್ರೀತಿಗೆ ತಲೆಬಾಗಿ ಸಾರ್ವಜನಿಕ ಜೀವನಕ್ಕೆ ಬರಬೇಕಾಯ್ತು. ನನ್ನ ಏಳಿಗೆ ಸಹಿಸಲಾಗದೆ ಕೆಲವರಿಂದ ಪಿತೂರಿ ನಡೆಯುತ್ತಿದೆ. ಪಕ್ಷಕ್ಕೆ ಮುಜುಗರ ಉಂಟು ಮಾಡಲು ಕೆಲವರಿಂದ ಸಂಚು ರೂಪಿಸಲಾಗುತ್ತಿದೆ. ಇದರಿಂದ ನಾನಾಗಲೀ, ಪಕ್ಷವಾಗಲೀ ಎದೆಗುಂದುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ: ಹೆಚ್‍ಡಿಕೆ
ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿಯೇ ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿ ಬಿಎಸ್‍ವೈ ಪುತ್ರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಹಲವು ಬಾರಿ ಯಡಿಯೂರಪ್ಪನವರ ಜೊತೆಗೆ ವಿಜಯೇಂದ್ರ ಕಾಣಿಸಿಕೊಳ್ಳುತ್ತಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಿಜಯೇಂದ್ರ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಜಿಲ್ಲೆಗಳಿಂದ ಬೆಂಗಳೂರಿಗೆ ವಾಪಸ್ ಆಗಿದ್ದು, ಶನಿವಾರ ದೆಹಲಿಗೆ ತೆರಳಿ ಸಂಪುಟ ರಚನೆಯ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಲಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಯಾವ ಯಾವ ಕ್ಷೇತ್ರಗಳಲ್ಲಿ ಅತಿವೃಷ್ಠಿಯಾಗಿದೆ ಅಂತ ಸರ್ವೇ ಮಾಡಲಾಗಿದೆ. ಶುಕ್ರವಾರ ಮಳೆ ಕಮ್ಮಿಯಾಗಿದ್ದು, ರಕ್ಷಣಾ ಕಾರ್ಯ ನಡೆದಿದೆ. ಜಮೀನು, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ಇದನ್ನು ಓದಿ: ಮೊದಲು ಪ್ರವಾಹ ಪರಿಸ್ಥಿತಿ ನಿಭಾಯಿಸಿ, ಆಮೇಲೆ ಸಂಪುಟ ರಚನೆ ಮಾತು – ಬಿಎಸ್‍ವೈಗೆ ಶಾ ಸೂಚನೆ
ಪರಿಹಾರ ಕೇಂದ್ರದಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸಲಾಗಿದೆ. ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಅವರು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಶನಿವಾರ ಭೇಟಿ ನೀಡಲಿದ್ದಾರೆ. ಕೊಡಗು ಜಿಲ್ಲೆಗೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಾರೆ. ಆದರೆ ನಾನು ಅವರೊಂದಿಗೆ ಕೊಡಗು ಜಿಲ್ಲೆಗೆ ಹೋಗುವುದಿಲ್ಲ ಎಂದು ಸಿಎಂ ಹೇಳಿದರು.
ಗದಗ್‍ನಲ್ಲಿ ನಿರಾಶ್ರಿತರ ಮೇಲೆ ಲಾಠಿ ಚಾರ್ಜ್ ವಿಚಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ, ಆ ವಿಚಾರ ಗಮನಕ್ಕೆ ಬಂದಿದೆ. ಹಾಗೆ ಮಾಡದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಅಗತ್ಯ ಬಿದ್ದರೆ ಅವರ ಮೇಲೆ ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ಅವರು ಶನಿವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಳಿಕ ಉತ್ತರ ಕನ್ನಡ ಜಿಲ್ಲೆಗೂ ಭೇಟಿ ನೀಡಿ, ಪರಿಶೀಲನೆ ನಡೆಸಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಲಿಸಲಿದ್ದಾರೆ. ಶನಿವಾರ ರಾತ್ರಿಯೇ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಭಾನುವಾರ ಹಾಗೂ ಸೋಮವಾರ ಹೈಕಮಾಂಡ್ ಭೇಟಿಯಾಗಿ ಸಚಿವರ ಫೈನಲ್ ಲಿಸ್ಟ್ ಹಿಡಿದು ರಾಜ್ಯಕ್ಕೆ ಬರಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.