Tag: CM Amarinder Singh

  • ಪಾಕಿಸ್ತಾನದಲ್ಲಿ ಗುಂಡಿಕ್ಕಿ ಸಿಖ್ಖರ ಹತ್ಯೆ – ಭಾರತ ತೀವ್ರ ಖಂಡನೆ

    ಪಾಕಿಸ್ತಾನದಲ್ಲಿ ಗುಂಡಿಕ್ಕಿ ಸಿಖ್ಖರ ಹತ್ಯೆ – ಭಾರತ ತೀವ್ರ ಖಂಡನೆ

    ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದ ಉಪನಗರವಾದ ಪೇಶಾವರದ ಸರ್ಬಂದ್ ಪ್ರದೇಶದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಇಬ್ಬರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

    ಗುಂಡಿನ ದಾಳಿಗೆ ಬಲಿಯಾದವರನ್ನು ಸಲ್ಜೀತ್ ಸಿಂಗ್ (42) ಹಾಗೂ ರಂಜೀತ್‌ಸಿಂಗ್ (38) ಎಂದು ಗುರುತಿಸಲಾಗಿದೆ. ಈ ಇಬ್ಬರೂ ತಮ್ಮ ಅಂಗಡಿಯಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆರೋಪಿಗಳನ್ನು ಬಂಧಿಸಲು ಪ್ರದೇಶವನ್ನು ಸುತ್ತುವರಿದಿದ್ದಾರೆ ಎಂದು ಸ್ಥಳೀಯ ಸುದ್ದಿಸಂಸ್ಥೆ ವರದಿ ಮಾಡಿದೆ.

    ಭಾರತ ತೀವ್ರ ಖಂಡನೆ: ಸಿಖ್ ಸಮುದಾಯದ ವ್ಯಾಪಾರಿಗಳ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನೆಯನ್ನೂ ದಾಖಲಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್‌ಮಾನ್, ಮಾಜಿ ಸಿಎಂ ಅಮರಿಂದರ್ ಸಿಂಗ್ ಹಾಗೂ ಭಾರತದ ವಿದೇಶಾಂಗ ಸಚಿವಾಲಯವೂ ತೀವ್ರವಾಗಿ ಖಂಡಿಸಿದೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    ಘಟನೆ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರರು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ಸರಣಿ ಹತ್ಯೆ ಮುಂದುವರಿದಿದೆ. ಈ ಹತ್ಯೆ ಬಗ್ಗೆ ಪಾಕಿಸ್ತಾನ ಸರ್ಕಾರದ ವಿರುದ್ಧ ಬಲವಾದ ಪ್ರತಿಭಟನೆ ದಾಖಲಿಸಿದ್ದೇವೆ. ಈ ವಿಷಯವನ್ನು ಪ್ರಾಮಾಣಿಕವಾಗಿ ತನಿಖೆ ಮಾಡಲು ಹಾಗೂ ಕೃತ್ಯ ಎಸಗಿದ ನೀಚರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಾವು ಕರೆ ನೀಡುತ್ತೇವೆ ಎಂದು ಹೇಳಿದ್ದಾರೆ.

    ಪಾಕಿಸ್ತಾನ ಸರ್ಕಾರವು ತನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ. ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಭದ್ರತೆ ಹಾಗೂ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ – ಭಾರತ ಚಾಂಪಿಯನ್‌, ಇತಿಹಾಸ ಸೃಷ್ಟಿ

    ಪಾಕ್ ಪ್ರಧಾನಿ ಶೆಹಬಾಜ್ ಸಹ ಇದಕ್ಕೆ ಪ್ರತಿಕ್ರಿಯಿಸಿದ್ದು, ಹತ್ಯೆಯ ಹಿಂದಿನ ಸತ್ಯಾಂಶಗಳನ್ನು ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಹಂತಕರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಸಿಖ್ಖರ ಸುರಕ್ಷತೆ ಖಚಿತಪಡಿಸಿಕೊಳ್ಳಿ: ಪಂಜಾಬ್ ಸಿಎಂ ಭಗವಂತ್ ಮಾನ್, ಪಾಕಿಸ್ತಾನದ ಪೇಶಾವರದಲ್ಲಿ ಇಬ್ಬರು ಸಿಖ್ಖರ ಭೀಕರ ಹತ್ಯೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ವಿದೇಶಾಂಗ ಸಚಿವರಿಗೂ ನಾನು ವಿನಂತಿಸುತ್ತೇನೆ. ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದೊಂದಿಗೆ ಮಾತನಾಡಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

    ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಸಹ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನದಲ್ಲಿ ಮತ್ತೆ ಸಿಖ್ಖರ ಹತ್ಯೆಯಾಗಿದೆ. ಇದು ಅತ್ಯಂತ ಖಂಡನೀಯ. ನಾನು ಯಾವಾಗಲೂ ಹೇಳುತ್ತಿದ್ದೆ, ಪಾಕಿಸ್ತಾನ ಸರ್ಕಾರ ಸಿಖ್ಖರ ಭದ್ರತೆಯನ್ನು ಖಾತ್ರಿಪಡಿಸದೇ ಅವರಿಗೆ ಕೇವಲ ಆಶ್ವಾಸನೆ ನೀಡುತ್ತಿದೆ ಎಂಬುದನ್ನು ಪುನರುಚ್ಛರಿಸಿದ್ದಾರೆ.

  • ಪಂಜಾಬ್‍ನಲ್ಲಿ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ

    ಪಂಜಾಬ್‍ನಲ್ಲಿ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ

    – ಬೆಳಗ್ಗೆ 7ರಿಂದ 11ರ ವರೆಗೆ ಮಾತ್ರ ಸಂಚಾರಕ್ಕೆ ಅವಕಾಶ

    ಚಂಡೀಗಢ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡುವುದಕ್ಕೂ ಮುನ್ನವೇ ಪಂಜಾಬ್ ಸರ್ಕಾರ ಲಾಕ್‍ಡೌನ್ ವಿಸ್ತರಣೆ ಕುರಿತು ನಿರ್ಧಾರ ಕೈಗೊಂಡಿದೆ.

    ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದು, ಇನ್ನೂ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಕುರಿತ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಾಗಲಿದ್ದು, ಪ್ರತಿ ದಿನ ಬೆಳಗ್ಗೆ 7ರಿಂದ 11ರ ವರೆಗೆ ಮಾತ್ರ ಜನರ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಈ ಸಮಯದಲ್ಲಿ ಅಂಗಡಿಗಳಿಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಅಂಗಡಿಗಳು ಸಹ ಈ ಸಮಯದಲ್ಲಿ ಮಾತ್ರ ತೆರೆದಿರುತ್ತವೆ ಎಂದು ತಿಳಿಸಿದ್ದಾರೆ.

    ಲಾಕ್‍ಡೌನ್ ವಿಸ್ತರಣೆ ಕುರಿತು ಸಹ ನಿರ್ಧಾರ ಕೈಗೊಂಡಿದ್ದು, ಮೇ 3ರ ನಂತರವೂ ಎರಡು ವಾರಗಳ ಕಾಲ ಲಾಕ್‍ಡೌನ್ ಮುಂದುವರಿಸಲು ನಿರ್ಧರಿಸಲಾಗಿದೆ. ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮರಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಪಂಜಾಬ್‍ನಲ್ಲಿ ಇಂದು 9 ಹೊಸ ಪ್ರಕರಣಗಳು ಸೇರಿ ಈ ವರೆಗೆ ಒಟ್ಟು 322 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 71 ಜನ ಗುಣಮುಖರಾಗಿದ್ದಾರೆ. ಇಂದು ಒಬ್ಬರು ಮೃತಪಟ್ಟಿದ್ದು, ಒಟ್ಟು 19 ಜನ ಸಾವನ್ನಪ್ಪಿದ್ದಾರೆ.

  • ಎಸ್‍ಐ ಹರ್ಜಿತ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ- ವಿಡಿಯೋ ಟ್ವೀಟ್ ಮಾಡಿದ ಪಂಜಾಬ್ ಸಿಎಂ

    ಎಸ್‍ಐ ಹರ್ಜಿತ್ ಸಿಂಗ್ ಆರೋಗ್ಯದಲ್ಲಿ ಚೇತರಿಕೆ- ವಿಡಿಯೋ ಟ್ವೀಟ್ ಮಾಡಿದ ಪಂಜಾಬ್ ಸಿಎಂ

    ಚತ್ತೀಸ್‍ಗಢ: ಕೊರೊನಾ ವಿರುದ್ಧ ಹೋರಾಟದಲ್ಲಿ ದುಷ್ಕರ್ಮಿಗಳ ದಾಳಿಯಿಂದ ಕೈ ಕಳೆದುಕೊಂಡಿದ್ದ ಪೊಲೀಸ್ ಅಧಿಕಾರಿ ಹರ್ಜಿತ್ ಸಿಂಗ್ ಗುಣಮುಖರಾಗುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.

    ಹರ್ಜಿತ್ ಸಿಂಗ್ ಅವರ ಕೈಗೆ ಮಾಡಲಾಗಿರುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಸಂಪೂರ್ಣ ಚೇತರಿಕೆಯಾದ ಬಳಿಕ ಅವರ ಕೈ ಮೊದಲಿನಂತೆ ಕಾರ್ಯನಿರ್ವಹಿಸುವ ವಿಶ್ವಾಸವನ್ನು ಅಮರಿಂದರ್ ಸಿಂಗ್ ವ್ಯಕ್ತಪಡಿಸಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಆದೇಶ ಉಲ್ಲಂಘಿಸಿ ಕಾರಿನಲ್ಲಿ ಅಲೆದಾಡುತ್ತಿದ್ದ ನಿಹಾಂಗ್ ಗುಂಪನ್ನ ಪೊಲೀಸರು ತಡೆದಿದ್ದರು. ಅಂದು ಕರ್ತವ್ಯದಲ್ಲಿದ್ದ ಹರ್ಜಿತ್ ಸಿಂಗ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಿಹಾಂಗ್ ಗುಂಪು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಹರ್ಜಿತ್ ಸಿಂಗ್ ತಮ್ಮ ಕೈ ಕಳೆದುಕೊಂಡಿದ್ದರು.

    ಗಾಯಗೊಂಡಿದ್ದ ಹರ್ಜಿತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೈ ತುಂಡಾಗಿದ್ದ ಕಾರಣ ಸತತ ಏಳುವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರು ಮತ್ತೆ ಕೈ ಜೋಡಿಸಲು ಯಶಸ್ವಿಯಾಗಿದ್ದರು. ಕಳೆದ 2 ವಾರಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸದ್ಯ ಚೇತರಿಸಿಕೊಂಡಿದ್ದಾರೆ.

    ಸದ್ಯ ತಮ್ಮ ಆರೋಗ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಹರ್ಜಿತ್ ಸಿಂಗ್, ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸಿಎಂ ಅಮರಿಂದರ್ ಸಿಂಗ್, ಹರ್ಜಿತ್ ಸಿಂಗ್ ಸದ್ಯ ತಮ್ಮ ಕೈಯನ್ನು ಮತ್ತೆ ಅಲುಗಾಡಿಸಲು ಯಶಸ್ವಿಯಾಗಿದ್ದಾರೆ ಎಂದು ಬರೆದಕೊಂಡು ವಿಡಿಯೋ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಹರ್ಜಿತ್ ಸಿಂಗ್ ಅವರು ತುಂಡಾಗಿದ್ದ ಕೈ ಬೆರಳುಗಳನ್ನು ಯಶಸ್ವಿಯಾಗಿ ಅಲುಗಾಡಿಸಿರುವುದು ಕಾಣಬಹುದಾಗಿದೆ.

  • ‘ನಿಮ್ಮಿಂದ ಆಗದಿದ್ರೆ, ನಮಗೆ ಬಿಡಿ’ – ಇಮ್ರಾನ್ ಖಾನ್ ಹೇಳಿಕೆಗೆ ಪಂಜಾಬ್ ಸಿಎಂ ತಿರುಗೇಟು

    ‘ನಿಮ್ಮಿಂದ ಆಗದಿದ್ರೆ, ನಮಗೆ ಬಿಡಿ’ – ಇಮ್ರಾನ್ ಖಾನ್ ಹೇಳಿಕೆಗೆ ಪಂಜಾಬ್ ಸಿಎಂ ತಿರುಗೇಟು

    ಚಂಡೀಗಢ: ಪುಲ್ವಾಮಾ ದಾಳಿಯಲ್ಲಿ ನಮ್ಮ ಪಾತ್ರ ಯಾವುದೇ ಇಲ್ಲ. ಸಾಕ್ಷ್ಯಾಧಾರಗಳು ಇಲ್ಲದೇ ಭಾರತ ಆರೋಪ ಮಾಡುತ್ತಿದೆ ಎಂದು ಆರೋಪಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ತಿರುಗೇಟು ನೀಡಿದ್ದಾರೆ.

    ಭಯೋತ್ಪಾದಕರನ್ನು ಮಟ್ಟ ಹಾಕಲು ನಿಮ್ಮಿಂದ ಆಗದಿದ್ದರೆ ನಮಗೇ ಬಿಡಿ ನಾವು ಮಟ್ಟ ಹಾಕುತ್ತೇವೆ. ಅದರಲ್ಲೂ ಉಗ್ರ ಮಸೂದ್ ಅಜರ್ ಪಾಕಿಸ್ತಾನದ ಬಹವಾಲ್‍ಪುರದಲ್ಲಿ ಇದ್ದಾನೆ. ಆತನನ್ನು ಸೆರೆಹಿಡಿಯಲು ಆಗದಿದ್ದರೆ ಹೇಳಿ ನಾವೇ ಸೆರೆ ಹಿಡಿಯುತ್ತೇವೆ ಎಂದು ಸವಾಲು ಎಸೆದಿದ್ದಾರೆ.

    ಪುಲ್ವಾಮಾ ದಾಳಿ ನಡೆಸಿರುವ ಕುರಿತು ಜೈಶ್-ಇ-ಮಹಮದ್ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಉಗ್ರ ಸಂಘಟನೆಯ ಸಂಚುಕೋರ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅಲ್ಲಿಯೇ ಆತನನ್ನು ಬಂಧಿಸಿ. ಇಲ್ಲವಾದರೆ ನಮಗೆ ಹೇಳಿ. ಆತ ಐಸಿಸ್ ಸಹಾಯದಿಂದ ಅಲ್ಲಿಂದಲೇ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದ್ದಾನೆ. ಈ ಹಿಂದೆ ಮುಂಬೈ ದಾಳಿ ವೇಳೆ ನೀಡಿದ ಸಾಕ್ಷಿಗಳ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದ್ದು, ಈಗ ಹೇಳಿದ್ದನ್ನ ಮಾಡಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಸಾಕ್ಷ್ಯ ನೀಡಿದ್ರೆ ಕ್ರಮ, ಯುದ್ಧ ನಡೆದರೆ ಉತ್ತರ ಕೊಡ್ತೀವಿ: ಭಾರತವನ್ನು ಕೆಣಕಿದ ಇಮ್ರಾನ್ ಖಾನ್

    ಪಂಜಾಬ್ ಸಿಎಂ ಬೆನ್ನಲ್ಲೇ ಜಮ್ಮು ಕಾಶ್ಮೀರದ ಮಾಜಿ ಸಿಎಂ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೊಹಬೂಬಾ ಮುಫ್ತಿ ಅವರು ಕೂಡ ಇಮ್ರಾನ್ ಖಾನ್ ಹೇಳಿಕೆಗೆ ಕಿಡಿಕಾರಿದ್ದಾರೆ. ದುಃಖದ ಸಮಯದಲ್ಲಿ ನಮ್ಮನ್ನು ಧರ್ಮ, ಗುರುತಿನ ಹೆಸರಿನಲ್ಲಿ ಹಿಂದು ವರ್ಸಸ್ ಮುಸ್ಲಿಂ, ಜಮ್ಮು ವರ್ಸಸ್ ಕಾಶ್ಮೀರ ಎಂದು ವಿಭಜಿಸಲು ಸಾಧ್ಯವಿಲ್ಲ. ಅಂತಿಮವಾಗಿ ಕೊಡಲಿಯನ್ನು ಮರೆಯಬಹುದೇ ವಿನಃ ಮರವನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡೋಪ್ ಟೆಸ್ಟ್‌ಗೆ  ನಾನು ರೆಡಿ- ಆಪ್ ಮುಖಂಡನ ಚಾಲೆಂಜ್ ಸ್ವೀಕರಿಸಿದ ಪಂಜಾಬ್ ಸಿಎಂ

    ಡೋಪ್ ಟೆಸ್ಟ್‌ಗೆ ನಾನು ರೆಡಿ- ಆಪ್ ಮುಖಂಡನ ಚಾಲೆಂಜ್ ಸ್ವೀಕರಿಸಿದ ಪಂಜಾಬ್ ಸಿಎಂ

    ಚಂಡೀಗಢ: ಸರ್ಕಾರಿ ನೌಕರರಿಗೆ ಡೋಪ್ ಟೆಸ್ಟ್ ಕಡ್ಡಾಯಗೊಳಿಸಿ ಆದೇಶ ನೀಡಿದ ಬಳಿಕ ನಾನು ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧ ಎಂದು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿದ್ದಾರೆ.

    ಪಂಜಾಬ್ ರಾಜ್ಯವನ್ನು ಡಗ್ಸ್ ಮುಕ್ತ ರಾಜ್ಯವಾಗಿ ರೂಪಿಸಲು ಪಣತೊಟ್ಟಿರುವ ಸಿಎಂ ಅಮರಿಂದರ್ ಸಿಂಗ್ ಕಳೆದ ಎರಡು ದಿನಗಳ ಹಿಂದೆ ಎಲ್ಲಾ ಸರ್ಕಾರಿ ನೌಕರರಿಗೆ ಡೋಪಿಂಗ್ ಟೆಸ್ಟ್ ಕಡ್ಡಾಯ ಮಾಡಿ ಆದೇಶ ನೀಡಿದ್ದರು. ಆದರೆ ಸರ್ಕಾರದ ಈ ಆದೇಶಕ್ಕೆ ವಿರೋಧ ಪಕ್ಷದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

    ಸದ್ಯ ತಾವು ಡೋಪಿಂಗ್ ಪರೀಕ್ಷೆ ಎದುರಿಸಲು ಸಿದ್ಧ ಎಂದು ವಿರೋಧಿ ಪಕ್ಷಗಳಿಗೆ ಟಾಂಗ್ ನೀಡಿರುವ ಸಿಎಂ ಅಮರಿಂದರ್ ಸಿಂಗ್, ಸರ್ಕಾರಿ ನೌಕರರು ಈ ಪರೀಕ್ಷೆ ಎದುರಿಸಲು ನಾನು ಮೊದಲು ಡೋಪಿಂಗ್ ಪರೀಕ್ಷೆ ಮಾಡಿಕೊಳ್ಳುತ್ತೇನೆ. ಈ ಮೂಲಕ ನೌಕರರಲ್ಲಿ ಇರುವ ಭಾವನೆಯನ್ನು ದೂರ ಮಾಡಲು ಯತ್ನಿಸಲು ಸಿದ್ಧ ಎಂದು ಹೇಳಿದ್ದಾರೆ.

    ಇದೇ ವೇಳೆ ರಾಜ್ಯದ ರಾಜಕೀಯ ಮುಖಂಡರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ಇದುವರೆಗೂ ಯಾವೊಬ್ಬ ರಾಜಕೀಯ ನಾಯಕರು ಸಹ ಸ್ವತಃ ಡೋಪಿಂಗ್ ಪರೀಕ್ಷೆಗೆ ಒಳಗಾಗುವುದಾಗಿ ಕೈ ಎತ್ತಿಲ್ಲ. ನನ್ನ ಬಳಿಕವಾದರೂ ಶಾಸಕರು ಪರೀಕ್ಷೆ ಎದುರಿಸಲು ಸಿದ್ಧವಾದರೆ ಅವರನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಇದಕ್ಕೂ ಮುನ್ನ ಸ್ವತಃ ಡೋಪ್ ಪರೀಕ್ಷೆಗೆ ಒಳಗಾಗಿದ್ದ ಆಪ್ ನಾಯಕ ಅಮನ್ ಆರೋರಾ ನೈತಿಕ ಮೌಲ್ಯದ ಮೇಲೆ ಪರೀಕ್ಷೆ ಎದುರಿಸಿದ್ದೇನೆ. ಸಾಧ್ಯವಾದರೆ ಸಿಎಂ ಹಾಗೂ ಆಡಳಿತ ಪಕ್ಷದ ಶಾಸಕರು ಪರೀಕ್ಷೆ ಎದುರಿಸಲಿ ಎಂದು ಚಾಲೆಂಜ್ ಮಾಡಿದ್ದರು. ಅಲ್ಲದೇ ಸರ್ಕಾರದ ನೀತಿಯ ವಿರುದ್ಧ ನನಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಇದು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಏಕೆ ಅನ್ವಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಏನಿದು ಡೋಪ್ ಟೆಸ್ಟ್ ಆದೇಶ: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ರಾಜ್ಯದಲ್ಲಿ ನಡೆಯುತ್ತಿರುವ ಡ್ರಗ್ಸ್ ಕಳ್ಳಸಾಗಣೆ ಕುರಿತು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿ, ಡ್ರಗ್ಸ್ ಕಳ್ಳಸಾಗಾಣೆ ಮಾಡುವವರಿಗೆ ಮರಣ ದಂಡನೆ ವಿಧಿಸುವ ನಿಯಮವನ್ನು ಜಾರಿಗೆ ತರುವ ಕುರಿತು ಎಚ್ಚರಿಕೆ ನೀಡಿದ್ದರು. ಆದರೆ ಆದಾದ ಬಳಿಕ ಉಂಟಾದ ಬೆಳವಣಿಗೆಯಲ್ಲಿ ಸರ್ಕಾರಿ ನೌಕರರಿಗೆ ಎಲ್ಲರಿಗೂ ಡೋಪಿಂಗ್ ಪರೀಕ್ಷೆ ಕಡ್ಡಾಯಗೊಳಿಸಿದ್ದರು. ಪ್ರಮುಖವಾಗಿ ಸೇವೆಯ ವಿವಿಧ ಹಂತಗಳಲ್ಲಿ ಇದನ್ನು ನಿರಂತವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದರು. ಅಲ್ಲದೇ ಸರ್ಕಾರಿ ಸೇವೆ ಸೇರುವ ಹಾಗೂ ಭಡ್ತಿ ವೇಳೆಯೂ ಡೋಪಿಂಗ್ ಪರೀಕ್ಷೆ ಕಡ್ಡಾಯಗೊಳಿಸಿದ್ದರು.