ಲಕ್ನೋ: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಭಾರೀ ಮುಖಭಂಗವಾಗಿದ್ದು, 16 ಮೇಯರ್ ಸ್ಥಾನಗಳ ಪೈಕಿ 14 ಬಿಜೆಪಿ ಪಾಲಾಗಿದೆ.
ಆಡಳಿತರೂಢ ಬಿಜೆಪಿಗೆ 14 ಸ್ಥಾನ ಸಿಕ್ಕಿದರೆ, ಅಚ್ಚರಿ ಫಲಿತಾಂಶ ಎಂಬಂತೆ ಬಹುಜನ ಸಮಾಜವಾದಿ ಪಕ್ಷ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಖಾತೆ ತೆರೆಯಲು ವಿಫಲವಾಗಿದೆ.

ಉತ್ತರ ಪ್ರದೇಶದ 652 ಸ್ಥಳೀಯ ಸಂಸ್ಥೆಗಳ ಚುನಾವಣೆ ನವೆಂಬರ್ 22, 26 ಮತ್ತು 29ರಂದು ಮೂರು ಹಂತಗಳಲ್ಲಿ ನಡೆದಿದ್ದು, ಮತ ಎಣಿಕೆ ಕಾರ್ಯ ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾಯಿತು. ಕಳೆದ 7 ತಿಂಗಳ ಯೋಗಿ ಸರ್ಕಾರದ ಆಡಳಿತಕ್ಕೆ ಜನರು ನೀಡಿದ ಜನಾದೇಶವೆಂದು ಈ ಫಲಿತಾಂಶವನ್ನು ಪರಿಗಣಿಸಲಾಗುತ್ತಿದೆ.
ಇನ್ನು ಕಾಂಗ್ರೆಸ್ ಭದ್ರಕೋಟೆ ಎಂದು ಕರೆಯಲಾಗುತ್ತಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗೆ ಸೋಲಾಗಿದ್ದು, ಬಿಜೆಪಿ ಗೆಲುವು ಕಂಡಿದೆ.
ಫಲಿತಾಂಶವನ್ನು ನೋಡಿ ಸಿಎಂ ಯೋಗಿ ಅದಿತ್ಯನಾಥ್ ಹರ್ಷ ವ್ಯಕ್ತಪಡಿಸಿದ್ದು, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಪರ ಯೋಜನೆಗಳು ಪಕ್ಷದ ಗೆಲುವುವಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಅವರನ್ನು ಟಾರ್ಗೆಟ್ ಮಾಡಿದ ಸಿಎಂ ಯೋಗಿ ಅದಿತ್ಯನಾಥ್ ಗುಜರಾತ್ ಚುನಾವಣೆಗಳ ಕುರಿತು ಮಾತನಾಡುತ್ತಿರುವವರು ಅಮೇಥಿಯಲ್ಲಿ ಖಾತೆ ತೆರೆಯಲು ವಿಫಲರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಚುನಾವಣೆಯಲ್ಲಿ ಸರ್ಕಾರ ಮಾಡಿರುವ ಸಾಧನೆಗೆ ಸಿಎಂ ಯೋಗಿ ಅದಿತ್ಯನಾಥ್ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶ ಸ್ಥಳೀಯ ಚುನಾವಣೆಯಲ್ಲಿ ಗೆಲವು ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ದೇಶದ ಲೋಕಸಭಾ ಚುನಾವಣೆಯಲ್ಲಿ ಹೇಗೆ ಗೆಲುವು ಪಡೆಯುತ್ತಾರೆ ಎಂದು 2014ರಲ್ಲಿ ಅಮೇಥಿಯಲ್ಲಿ ರಾಹುಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಅಮೇಥಿ, ವಾರಾಣಾಸಿ, ಗೋರಖ್‍ಪುರ, ಕಾನ್ಪುರ್, ಘಜಿಯಾಬಾದ್, ಅಲಹಾಬಾದ್, ಲಕ್ನೋ, ಫಿರೋಜಾಬಾದ್, ಅಯೋಧ್ಯಾ, ಮಥುರಾ, ಸಹರಾಣ್‍ಪುರ್ ಮತ್ತು ಮೊರಾದಾಬಾದ್‍ನಲ್ಲಿ ಬಿಜೆಪಿಯ ಮೇಯರ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಆಲಿಘಡ್‍ನಲ್ಲಿ ಬಿಎಸ್‍ಪಿ ಅಭ್ಯರ್ಥಿ ಗೆಲುವು ಪಡೆದಿದ್ದಾರೆ.

ಸಿಎಂ ಯೋಗಿ ಅದಿತ್ಯನಾಥ್ ಕ್ಷೇತ್ರವಾದ ಗೋರಖ್‍ಪುರದ ಗೋರಖ್‍ನಾಥ್ ದೇವಾಲಯ ವಾರ್ಡ್ ನಂ.68 ರಲ್ಲಿ ಪಕ್ಷೇತರ ಅಭ್ಯರ್ಥಿ ನಾಡಿರಾ ಅವರು ಗೆಲುವು ಪಡೆದಿದ್ದು, ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ.
2012ರ ಮೇಯರ್ ಚುನಾವಣೆಯಲ್ಲಿ ಒಟ್ಟು 13 ಸ್ಥಾನಗಳ ಪೈಕಿ 11ರಲ್ಲಿ ಬಿಜೆಪಿ ಜಯಗಳಿಸಿತ್ತು. ನೋಟ್ ನಿಷೇಧ, ಜಿಎಸ್‍ಟಿಯಿಂದಾಗಿ ಈ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಜನರು ಮತ್ತೊಮ್ಮೆ ಕಮಲದ ಕೈ ಹಿಡಿದಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 80 ಸ್ಥಾನಗಳ ಪೈಕಿ 71ರಲ್ಲಿ ಬಿಜೆಪಿ ಜಯಭೇರಿ ಭಾರಿಸಿತ್ತು. 2017ರ ವಿಧಾನಸಭಾ ಚುನಾವಣೆಯ ಒಟ್ಟು 403 ಸ್ಥಾನಗಳ ಪೈಕಿ 302ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಕಂಡಿದ್ದರು.




