Tag: clp meeting

  • ಇಂದು ಸಿಎಲ್‍ಪಿ ಸಭೆ – ಹಾಜರಾಗ್ತಾರಾ ಅತೃಪ್ತ ಶಾಸಕರು?

    ಇಂದು ಸಿಎಲ್‍ಪಿ ಸಭೆ – ಹಾಜರಾಗ್ತಾರಾ ಅತೃಪ್ತ ಶಾಸಕರು?

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್‍ಪಿ) ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ.

    ಬೆಳಗ್ಗೆ 9.30ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಅತೃಪ್ತರು ಹಾಜರಾಗ್ತಾರಾ ಅಥವಾ ಇಲ್ವಾ ಅನ್ನೋದೇ ಕುತೂಹಲಕಾರಿಯಾಗಿದೆ. ಬಂಡಾಯದ ಬಾವುಟ ಹಾರಿಸಿ ಹೊರಟಿರುವ ಶಾಸಕರ ವಿರುದ್ಧ ಈಗಾಗಲೇ ಸ್ಪೀಕರ್‌ಗೆ ದೂರು ನೀಡಲಾಗಿದೆ.

    ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಇಂದಿನ ಸಭೆಗೋಸ್ಕರ ಕಳೆದ ರಾತ್ರಿಯೇ ಕಾಂಗ್ರೆಸ್ ಪಾಳಯ ತಮ್ಮ ಅತೃಪ್ತ ಶಾಸಕರನ್ನ ಬೆದರಿಸುವ ತಂತ್ರಕ್ಕೆ ಮೊರೆಹೋಗಿತ್ತು. ಇಂದಿನ ಸಿಎಲ್‍ಪಿಗೆ ಸಂಭವನೀಯ ಬಂಡಾಯಗಾರರು ಗೈರಾಗಬಾರದು ಎಂದು ಸ್ಪೀಕರ್ ಅನುಪಸ್ಥಿತಿಯಲ್ಲಿ ಸ್ಪೀಕರ್ ಕಾರ್ಯದರ್ಶಿಗೆ ದೂರು ನೀಡಿದೆ.

    ರಾಜೀನಾಮೆ ಕೊಡದೆ ಇರುವವರಲ್ಲಿ ಯಾರ್ಯಾರು ಗೈರಾಗಬಹುದು ಎಂಬ ಕುತೂಹಲವು ಇದೆ. ಇದರ ಮಧ್ಯದಲ್ಲಿ ಶಾಸಕರನ್ನ ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವಾದರೆ ಕಾಂಗ್ರೆಸ್ ಶಾಸಕರನ್ನ ರೆಸಾರ್ಟ್ ಗೆ ಶಿಫ್ಟ್ ಮಾಡುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಮಾಡಲಿದ್ದಾರೆ.

    ಕೊನೆ ಕ್ಷಣದ ಕಾನೂನು ಆಟ
    ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ನಾಯಕರಿಂದ ಕಾನೂನು ಆಟ ಶುರುವಾಗಿದೆ. ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಮತ್ತು ತಮಿಳುನಾಡು ಪ್ರಕರಣದ ಆಧರಿಸಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಮೊದಲಿಗೆ ಕೆಪಿಸಿಸಿ ಮೂಲಕ ಎಲ್ಲಾ ಅತೃಪ್ತ ಶಾಸಕರಿಗೆ ಮಾಹಿತಿ ರವಾನಿಸಲಾಗಿದೆ. ಆದರೂ ಇಂದಿನ ಸಿಎಲ್‍ಪಿ ಸಭೆಗೆ ಗೈರಾಗದೇ ಇರಲಿ ಎಂದು ಮುನ್ನೆಚ್ಚರಿಕೆಯಾಗಿ ಸಿದ್ದರಾಮಯ್ಯ ದೂರು ನೀಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಸಿಎಲ್‍ಪಿ ಸಭೆಯಲ್ಲಿ ಜಾರ್ಜ್ ಗೆ ಸೋಮಶೇಖರ್ ಕ್ಲಾಸ್

    ಸಿಎಲ್‍ಪಿ ಸಭೆಯಲ್ಲಿ ಜಾರ್ಜ್ ಗೆ ಸೋಮಶೇಖರ್ ಕ್ಲಾಸ್

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಶಿಸ್ತಿನ ವಿಚಾರ ಪ್ರಸ್ತಾಪಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಬಿಜೆಪಿ ಶಾಸಕರಲ್ಲಿ ಶಿಸ್ತು ಇದೆ. ನಮ್ಮ ಶಾಸಕರು ಹಾದಿ ಬೀದಿಯಲ್ಲಿ ನಿಂತು ಮಾತನಾಡುತ್ತಾರೆ ಎಂದು ಹೇಳಿದರಂತೆ. ಆಗ ಸಚಿವರ ವಿರುದ್ಧ ತಿರುಗಿ ಬಿದ್ದ ಎಸ್.ಟಿ.ಸೋಮಶೇಖರ್ ಅವರು, ನಮ್ಮ ಕಷ್ಟ ನಮಗೆ ಗೊತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಮ್ಮನ್ನ ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಶಾಸಕರನ್ನು ಮೊದಲು ಕೇಳಿ, ಆಮೇಲೆ ಮಾತಾಡಿ ಎಂದು ಕಿಡಿಕಾರಿದರು ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ನೀವು ಸಚಿವರಾಗಿ ಅರಾಮಾಗಿ ಓಡಾಡಿಕೊಂಡು ಇದ್ದೀರಿ. ನಿಮಗೆ ನಮ್ಮ ಕಷ್ಟ ಎಲ್ಲಿ ಅರ್ಥ ಆಗುತ್ತದೆ. ಸುಮ್ಮನೆ ಮಾತಾಡಬೇಡರೀ ಜಾರ್ಜ್. ನಾನು ಹೇಳಿದ್ದು ಅರ್ಥವಾಯಿತಾ ಎಂದು ಸೋಮಶೇಖರ್ ಅಸಮಾಧಾನ ಹೊರ ಹಾಕಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಬ್ಬರನ್ನೂ ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.

    ಇನ್ನುಮುಂದೆ ಸಿಎಂ ಕುಮಾರಸ್ವಾಮಿ ಅವರು ಎಲ್ಲಾ ಶಾಸಕರಿಗೂ ಸಿಗುತ್ತಾರೆ. ಜಿಲ್ಲಾವಾರು ಶಾಸಕರ ಸಭೆ ಮಾಡಿ ಸಮಸ್ಯೆ ಆಲಿಸುತ್ತಾರೆ. ಯಾವುದಾದರು ಶಾಸಕರಿಗೆ ಸಿಎಂ ಸಿಗದಿದ್ದರೆ ನನ್ನ ಗಮನಕ್ಕೆ ತನ್ನಿ, ಭೇಟಿ ಮಾಡಿಸಿ ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಭೆಯಲ್ಲಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

  • ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    – ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಶ್ರೀಲಂಕಾ ಮಾಜಿ ರಾಷ್ಟ್ರಪತಿ

    ಬೆಂಗಳೂರು: ಅತೃಪ್ತ ಶಾಸಕರು ಕಳೆದ ಮೂರು ಸಿಎಲ್‍ಪಿ ಸಭೆಗೂ ಹಾಜರಾಗಲಿಲ್ಲ. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಅಂತ ಅನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಶ್ರೀಲಂಕಾ ಮಾಜಿ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಸಿಎಲ್‍ಪಿ ಸಭೆಗೆ ಗೈರಾದ ಶಾಸಕರ ಅನರ್ಹತೆ ಮಾಡುವ ಕುರಿತು ಈಗಾಗಲೇ ತೀರ್ಮಾನ ಮಾಡಲಾಗಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಅವರನ್ನು ಹೊರತುಪಡಿಸಿ ಬೇರೆ ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ತಿಳಿಸಿದರು.

    ಅತೃಪ್ತ ಶಾಸಕರನ್ನು ಹೊರತಾಗಿ ನಮ್ಮ ಪಕ್ಷದ ಬೇರೆ ಶಾಸಕರ ಜೊತೆಗೆ ಬಿಜೆಪಿಯವರು ಮಾತನಾಡಿರಬಹುದು. ಆದರೆ ಅವರಲ್ಲಿ ಪಕ್ಷಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಅತೃಪ್ತರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಬಂದು ಏನು ಕ್ರಮ ಕೈಗೊಳ್ಳಬೇಕು ಅಂತ ತಿಳಿಸಲಿದ್ದಾರೆ ಎಂದರು.

    ಶ್ರೀಲಂಕಾ ಮಾಜಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಮಹಿಂದಾ ರಾಜಪಕ್ಸೆ ಅವರು ಐಟಿ ಹಾಗೂ ಸ್ಟಾರ್ಟ್ ಅಪ್‍ಗಳ ಬಗ್ಗೆ ಮಾಹಿತಿ ಪಡೆದರು. ಇದನ್ನು ಬಿಟ್ಟು ಬೇರೆ ಯಾವುದೇ ರಾಜಕೀಯ ಅಥವಾ ಒಪ್ಪಂದಗಳ ಕುರಿತು ಚರ್ಚೆ ಮಾಡಲಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಭಾರತದೊಂದಿಗೆ ಶ್ರೀಲಂಕಾ ಕೂಡ ವೇಗವಾಗಿ ಬೆಳವಣಿಗೆ ಹೊಂದಬೇಕು ಎನ್ನುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದರು.

    ನನ್ನ ಅಧಿಕಾರ ಅವಧಿಯಲ್ಲಿ ಹಲವು ಯೋಜನೆ ಜಾರಿಗೆ ತಂದಿದ್ದೆ. ಆದರೆ ಈಗ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಅಂತ ಮಹಿಂದಾ ರಾಜಪಕ್ಸೆ ಬೇಸರ ವ್ಯಕ್ತಪಡಿಸಿದರು. ಅವರು ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ವಿಶ್ವಾಸವಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

    ಹೆಬ್ಬಾಳ ಪ್ಲೈ ಓವರ್ ನಿರ್ಮಾಣ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತಿದ್ದೇವೆ. ಪ್ಲಾನ್ ಸಿದ್ಧವಾದ ಮೇಲೆ ಸಾರ್ವಜನಿಕರು ಹಾಗೂ ಆ ಭಾಗದ ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಕೆಲವರು ವಿರೋಧ ಮಾಡುತ್ತಾರೆ ಅಂದ್ರೆ ಯೋಜನೆಯನ್ನು ಬಿಡುವುದಕ್ಕೆ ಆಗಲ್ಲ. ಯೋಜನೆಯಲ್ಲಿ ಲೋಪ ಇದ್ದರೆ ಹೇಳಲಿ ಸರಿಪಡಿಸುತ್ತೇವೆ. ಈ ಯೋಜನೆಯನ್ನು ಅನೇಕರು ಸ್ಟೀಲ್ ಬ್ರಿಡ್ಜ್ ಅಂತ ಕರೆಯುತ್ತಿದಾರೆ. ಆದರೆ ಅದು ಸ್ಟೀಲ್ ಬ್ರೀಡ್ಜ್ ಅಲ್ಲ. ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳ ಸಂಪರ್ಕಿಸುವ ಪ್ಲೈ ಓವರ್ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ಬಜೆಟ್ ಬಗ್ಗೆ ಬಿಸಿ ಪಾಟೀಲ್ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್ ಅವರು, ನಾವು ಬಜೆಟ್‍ನಲ್ಲಿ 224 ಕ್ಷೇತ್ರಕ್ಕೂ ಯೋಜನೆ ಹಂಚುವುದಿಲ್ಲ. ಕಾರ್ಯಕ್ರಮ ಘೋಷಿಸುತ್ತೇವೆ ಅವರ ಕ್ಷೇತ್ರಕ್ಕೆ ಅನ್ವಯವಾಗುತ್ತದೆ. ರಸ್ತೆ ಕೆರೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಘೋಷಿಸಿದ್ದಾರೆ. ಅದು ಅವರ ಕ್ಷೇತ್ರಕ್ಕೂ ಅನ್ವಯವಾಗಲಿದೆ. ಎಲ್ಲನ್ನೂ ಬಜೆಟ್‍ನಲ್ಲೇ ಘೋಷಿಸಬೇಕಂತ ಏನು ಇಲ್ಲ. ಯಾವುದೇ ಶಾಸಕರಿಗೆ ಅಸಮಧಾನವಿದ್ದರೆ ನಮಗೆ ಹೇಳಲಿ. ಅವರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡುವುದಕ್ಕೆ ಸಂಪ್ಲಿಮೆಂಟರಿ ಬಜೆಟ್‍ನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

    ಎನ್‍ಜಿಟಿ ಬಫರ್ ಜೋನ್ ವಿಚಾರವಾಗಿ ಮಾತನಾಡಿ ಅವರು, ಎನ್‍ಜಿಟಿ ಆದೇಶ ಪಾಲಿಸುವುದು ಕಷ್ಟ. ಕೆರೆ ಹಾಗೂ ರಾಜಕಾಲುವೆಯಿಂದ 75 ಮೀಟರ್ ಜಾಗ ಬಿಟ್ಟು ಮನೆ ಕಟ್ಟಿಕೋಬೇಕು. ಇಡೀ ದೇಶದಲ್ಲಿ ಬೆಂಗಳೂರಿಗೆ ಮಾತ್ರ ಎನ್‍ಜಿಟಿ ಆದೇಶ ನೀಡಲಾಗಿದ್ದು, ಇದರಿಂದಾಗಿ 36 ಸಾವಿರ ಮನೆಗಳನ್ನು ಒಡೆಯಬೇಕಾಗುತ್ತದೆ. ಆದೇಶ ಪಾಲನೆ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

    ಬಫರ್ ಜೋನ್ ನಿಯಮ ಬದಲಾಯಿಸುವ ಅಗತ್ಯವಿದೆ. ಕೆರೆಗಳಿಗೆ ಹಾಗೂ ರಾಜಕಾಲುವೆಗೆ ಬೇರೆ ಬೇರೆ ನಿಯಮ ಮಾಡುವ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಲ್‍ಪಿ ಸಭೆಗೆ ಗೈರಾಗುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ಶಿಫಾರಸ್ಸು: ಸಿದ್ದರಾಮಯ್ಯ

    ಸಿಎಲ್‍ಪಿ ಸಭೆಗೆ ಗೈರಾಗುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‌ಗೆ ಶಿಫಾರಸ್ಸು: ಸಿದ್ದರಾಮಯ್ಯ

    – ಪಕ್ಷದ ಶಾಸಕ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ ದಿನೇಶ್ ಗುಂಡೂರಾವ್

    ಬೆಂಗಳೂರು: ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ಮತ್ತೊಂದು ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‍ಪಿ) ಸಭೆಯನ್ನು ಫೆಬ್ರವರಿ 8ರಂದು ಮಾಜಿ ಸಿಎಂ ಸಿದ್ದರಾಮಯ್ಯ ಕರೆದಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ, ಈ ಬಾರಿಯ ಸಿಎಲ್‍ಪಿ ಸಭೆಗೆ ಎಲ್ಲಾ ಶಾಸಕರು ಹಾಜರಾಗಲೇಬೇಕು. ಒಂದು ವೇಳೆ ಸಭೆಗೆ ಗೈರಾದರೆ ಅಂತಹ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಿಫಾರಸ್ಸು ಸಲ್ಲಿಸುತ್ತೇವೆ ಎಂದು ಖಡಕ್ ಸಂದೇಶ ನೀಡಿದ್ದಾರೆ.

    ನಿನ್ನೆ ಪಕ್ಷದ ಶಾಸಕರೊಬ್ಬರ ಮನೆಗೆ 30 ಕೋಟಿ ರೂ. ಹಣದೊಂದಿಗೆ ಬಿಜೆಪಿಯ ನಾಯಕರುಗಳು ಬಂದಿದ್ದರು. ಆದರೆ ನಮ್ಮ ಶಾಸಕರು ಹಣವನ್ನು ತಗೆದುಕೊಳ್ಳದೆ ವಾಪಾಸ್ ಕಳುಹಿಸಿದ್ದಾರೆ. ಈ ಕುರಿತು ಶಾಸಕರು ನನ್ನ ಬಳಿ ಇಂದು ಹೇಳಿಕೊಂಡಿದ್ದಾರೆ ಎಂದು ಹೆಸರನ್ನು ಹೇಳದೆ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದರು.

    ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಮೈತ್ರಿ ಸರ್ಕಾರದಲ್ಲಿ ಜವಾಬ್ದಾರಿಯಿಂದ ಹೇಳಿಕೆ ಕೊಡಬೇಕು. ಶಿಸ್ತು ಮೀರಿ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಣದ ಶಾಸಕರು ಹಾಗೂ ಅತೃಪ್ತ ಶಾಸಕರ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.

    ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು. ಬಡವರ ಪರ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡುವುದು ಹಾಗೂ ಪಕ್ಷದ ಪ್ರಧಾನಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ನೇಮಕವಾಗಿದ್ದಕ್ಕೆ ಅಭಿನಂದನೆ ಸಲ್ಲಿಸುವ ಠರಾವುಗಳನ್ನು ಸಭೆಯಲ್ಲಿ ಮಂಡಿಸಿದ್ದೇವೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆ ಜೆಡಿಎಸ್ ಜೊತೆಗೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿದೆ. ಪಕ್ಷದ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿಯೇ ಚುನಾವಣೆ ಎದುರಿಸುತ್ತೇವೆ. ಇದನ್ನು ಕಾರ್ಯಕರ್ತರು ಅರಿತುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

    ಲೋಕಸಭಾ ಚುನಾವಣೆ ಹಿನ್ನೆಲೆ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಜನಸಂಪರ್ಕ ಅಭಿಯಾನವು ಫೆಬ್ರವರಿ 15 ರಿಂದ ಆರಂಭವಾಗಲಿದೆ. ಅಷ್ಟೇ ಅಲ್ಲದೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಶಿಬಿರ ಆಯೋಜನೆ ಮಾಡಲಾಗಿದೆ. ಈ ಮೂಲಕ ಬಿಜೆಪಿಯ ಸಿದ್ಧಾಂತಗಳನ್ನು ಸಮರ್ಪಕವಾಗಿ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಹಲೋ…, ಎಲ್ಲಿದ್ದೀಯಾ ನಾರಾಯಣರಾವ್ ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು’ ಅಂದ್ರು ಸಿದ್ದರಾಮಯ್ಯ, ಏರ್ ಪೋರ್ಟಿಂದ ಓಡೋಡಿ ಬಂದ್ರು ನಾರಾಯಣ ರಾವ್!

    ‘ಹಲೋ…, ಎಲ್ಲಿದ್ದೀಯಾ ನಾರಾಯಣರಾವ್ ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು’ ಅಂದ್ರು ಸಿದ್ದರಾಮಯ್ಯ, ಏರ್ ಪೋರ್ಟಿಂದ ಓಡೋಡಿ ಬಂದ್ರು ನಾರಾಯಣ ರಾವ್!

    ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಹಲವು ಹಾಸ್ಯಮಯ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಇಂದು ವಿಧಾನಸಭೆಯಲ್ಲಿ ನಡೆದ ಶಾಸಕಾಂಗ ಸಭೆಗೆ ಆರಂಭದಲ್ಲಿ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಆಗಮಿಸಿರಲಿಲ್ಲ. ತಮ್ಮ ನಿರೀಕ್ಷಿತ ಶಾಸಕರೆಲ್ಲಾ ಬರ್ತಾರೋ ಇಲ್ವೋ ಎಂಬ ಆತಂಕದಲ್ಲೇ ಎಲ್ಲಾ ನಾಯಕರು ಇದ್ದರು. ಇದೇ ವೇಳೆ ಸಭೆಗೆ ಬಂದ ಶಾಸಕರ ದೃಶ್ಯಾವಳಿಗಳನ್ನು ಚಿತ್ರೀಕರಿಸಲು ಕೊಠಡಿಯೊಳಗೆ ಮಾಧ್ಯಮಗಳಿಗೆ ಪ್ರವೇಶ ನೀಡಲಾಯಿತು.

    ಮಾಧ್ಯಮ ಪ್ರತಿನಿಧಿಗಳು ವೀಡಿಯೋ ಶೂಟ್ ಮಾಡುತ್ತಿದ್ದ ವೇಳೆಯಲ್ಲಿಯೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಯವರು ತಮ್ಮದೇ ಜಿಲ್ಲೆಯವರಾದ ಬಸವಕಲ್ಯಾಣ ಶಾಸಕರಾದ ನಾರಾಯಣ ರಾವ್ ಅವರಿಗೆ ಫೋನ್ ಮಾಡಿದ್ದಾರೆ. ಈ ವೇಳೆ ಖಂಡ್ರೆಯವರು ಸಿದ್ದರಾಮಯ್ಯ ಅವರಿಗೆ ಫೋನ್ ನೀಡಿದ್ದಾರೆ. ಫೋನ್ ಕೈಗೆತ್ತಿಕೊಂಡ ಸಿದ್ದರಾಮಯ್ಯನವರು ತಮ್ಮ ಎಂದಿನ ಶೈಲಿಯಲ್ಲಿ, ಹಲೋ…… ನಾರಾಯಣರಾವ್ ಎಲ್ಲಿದ್ದೀಯಾ, ಆ….. ಜಲ್ದಿ ಬಂದ್ಬಿಡು, ಜಲ್ದಿ ಬಂದ್ಬಿಡು ಎಂದು ಹೇಳಿದ್ದಾರೆ.

    ಸರ್, ಹೈದ್ರಾಬಾದ್‍ನಿಂದ ಬರೋದು ಲೇಟಾಯ್ತು. ಈಗ ಬೆಂಗಳೂರು ಏರ್ ಪೋರ್ಟ್‍ಗೆ ಬಂದಿದ್ದೇನೆ. ಬರ್ತಿದ್ದೇನೆ ಸರ್ ಎಂದು ಸಿದ್ದರಾಮಯ್ಯ ಅವರಿಗೆ ಉತ್ತರಿಸಿದರು. ಅಷ್ಟೊತ್ತಿಗಾಗಲೇ ನಾರಾಯಣರಾವ್ ಅವರು ಹೈದರಾಬಾದ್‍ನಿಂದ ವಿಮಾನದಲ್ಲಿ ಆಗಮಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗಿಳಿದು ವಿಧಾನಸೌಧ ತಲುಪಬೇಕು ಅನ್ನೋ ಧಾವಂತದಲ್ಲಿ ಹೊರಬರುತ್ತಿದ್ದರು.

    ಈ ವೇಳೆ ಅಲ್ಲಿಯೂ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು. ಸಿದ್ದರಾಮಯ್ಯ ಫೋನ್ ಕಾಲ್ ರಿಸೀವ್ ಮಾಡಿದ ನಾರಾಯಣರಾವ್ ಅವರು, ಓಡೋಡುತ್ತಾ ಬಂದು ಕೆಂಪು ಬಣ್ಣದ ಕಾರು ಹತ್ತಿ ಏರ್ ಪೋರ್ಟಿಂದ ಹೊರಟೇ ಬಿಟ್ರು. ಈ ವೇಳೆ ಅವರ ಜೊತೆ ಬಂದಿದ್ದವರಲ್ಲಿ ಯಾಕೆ ಲೇಟ್ ಎಂದು ಕೇಳಿದಾಗ, ವಿಮಾನ ಬರುವುದು ವಿಳಂಬವಾಯಿತು ಎಂಬ ಸ್ಪಷ್ಟನೆ ನೀಡಿದರು.

    ಹೆಬ್ಬಾರ್ ಇವ್ರೇ…!: ಅತೃಪ್ತ ಬಣದಲ್ಲಿದ್ದಾರೆ ಎಂಬ ಗುಮಾನಿಯಲ್ಲೇ ಇದ್ದ ಶಿವರಾಮ್ ಹೆಬ್ಬಾರ್ ಅವರು ಕೂಡಾ ಇಂದಿನ ಸಭೆಗೆ ಆಗಮಿಸಿದ್ದರು. ಅವರ ಬಳಿ ಹೋಗ್ತಿದ್ದಂತೆ ಅವರ ಅಕ್ಕಪಕ್ಕದಲ್ಲಿ ಕುಳಿತಿದ್ದ ಶಾಸಕರು, ನೋಡ್ರಪ್ಪಾ ಇಲ್ಲಿ…. ಹೆಬ್ಬಾರ್ ಇವ್ರೇ… ಅಂತಾ ಬೆರಳು ತೋರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಮೇಶ್ ಜಾಧವ್ ಮೊಬೈಲ್‍ಗೆ ಬಂದ್ವು ನೂರಾರು ಕಾಲ್!

    ಉಮೇಶ್ ಜಾಧವ್ ಮೊಬೈಲ್‍ಗೆ ಬಂದ್ವು ನೂರಾರು ಕಾಲ್!

    – ಶಾಸಕರನ್ನು ಸಂಪರ್ಕಿಸಲು ಕೈ ನಾಯಕರು ಹೈರಾಣು!

    ಕಲಬುರಗಿ: ಕಾಂಗ್ರೆಸ್‍ನ ಅತೃಪ್ತ ಶಾಸಕರ ಪಟ್ಟಿಯಲ್ಲಿರುವ ಉಮೇಶ್ ಜಾಧವ್ ಅವರಿಗೆ ಪಕ್ಷ ಬಿಡದಂತೆ ಕೈ ನಾಯಕರು ಕರೆ ಮಾಡಿದ್ದಾರೆ. ಆದರೆ ಮೊಬೈಲ್ ಶಾಸಕರ ಸಹೋದರ ಬಳಿ ಇದಿದ್ದರಿಂದ ಸಂಪರ್ಕ ಸಾಧ್ಯವಾಗಿಲ್ಲ.

    ಮಾಜಿ ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಹಾಗೂ ಬೃಹತ್ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಧ್ಯಕ್ಷ ಈಶ್ವರ ಖಂಡ್ರೆ, ಗೃಹ ಸಚಿವ ಎಂ.ಬಿಪಾಟೀಲ್ ಅವರು ಶಾಸಕ ಉಮೇಶ್ ಜಾಧವ್ ಸಂಪರ್ಕಕ್ಕೆ ಯತ್ನಿಸಿ ಹೈರಾಣ ಆಗಿದ್ದಾರೆ.

    ಈ ಮೂಲಕ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಸೇರಿದಂತೆ, ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಗೋಕಾಕ್ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅಥಣಿ ಶಾಸಕ ಮಹೇಶ್ ಕಮಟಳ್ಳಿ ಸಿಎಲ್‍ಪಿ ಸಭೆಗೆ ಗೈರು ಆಗಿದ್ದಾರೆ. ಇತ್ತ ಸಭೆಗೆ ಹಾಜರಾಗಿದ್ದ ಶಾಸಕರನ್ನು ಕೈ ನಾಯಕರು ರೆಸಾರ್ಟ್ ಗೆ ಶಿಫ್ಟ್ ಮಾಡಿದ್ದಾರೆ.

    ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯರಿಗೆ ಪತ್ರವೊಂದನ್ನು ರವಾನಿಸಿರುವ ಉಮೇಶ್ ಜಾಧವ್, ಅನಾರೋಗ್ಯ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿಸಿದ್ದಾರೆ. ಪತ್ರವನ್ನು ಮಾಧ್ಯಮಗಳಿಗೆ ತೋರಿಸಿದ ಸಿದ್ದರಾಮಯ್ಯನವರು ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಉಳಿದಂತೆ ಗೈರಾದವರಿಗೆ ನೋಟಿಸ್ ಕಳುಹಿಸಲಾಗುತ್ತದೆ. ಮುನ್ನೆಚ್ಚರಿಕೆಯಾಗಿ ಎಲ್ಲರನ್ನು ಕರೆದುಕೊಂಡು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ತೆರಳಿ ಸಭೆ ನಡೆಸಲಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಲ್‍ಪಿ ಸಭೆಗೆ ಕೌರವ ಬಿಸಿ ಪಾಟೀಲ್ ಗೈರು

    ಸಿಎಲ್‍ಪಿ ಸಭೆಗೆ ಕೌರವ ಬಿಸಿ ಪಾಟೀಲ್ ಗೈರು

    ಬೆಂಗಳೂರು: ರಾಜಕೀಯ ಹೈಡ್ರಾಮದ ನಡುವೆ ಇಂದು ಆಯೋಜನೆಗೊಂಡಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಶಾಸಕ ಬಿಸಿ ಪಾಟೀಲ್ ಗೈರು ಹಾಜರಿ ಹಾಕಿದ್ದಾರೆ.

    ಮಗಳ ಮದುವೆ ನಿಗದಿಯಾಗಿದೆ. ಹೀಗಾಗಿ ಇಂದಿನ ಸಭೆಯಿಂದ ವಿನಾಯಿತಿ ನೀಡಬೇಕೆಂದು ಕೈ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದರು. ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಬಿಸಿ ಪಾಟೀಲ್ ಗೈರು ಹಾಜರಿ ಹಾಕಿದ್ದಾರೆ.

    ಇಂದಿನ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಹಾಜರಾಗದೇ ಇದ್ದರೆ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಹೀಗಾಗಿ ಬಂಡಾಯ ಎದ್ದಿರುವ ಶಾಸಕರ ನಡೆ ಏನು ಎನ್ನುವುದು ಇಂದಿನ ಸಭೆಯಲ್ಲಿ ಸ್ಪಷ್ಟವಾಗಲಿದೆ.

    ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
    ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

    ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನ ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

    ವಿಪ್ ಜಾರಿಮಾಡಬಹುದೇ?
    ಅಧಿವೇಶನ ನಡೆಯುವ ವೇಳೆ ಮಸೂದೆಯ ಪರ, ವಿರೋಧ ಮತ ಹಾಕಲು ಪಕ್ಷಗಳು ಶಾಸಕರಿಗೆ/ ಸಂಸದರಿಗೆ ವಿಪ್ ಜಾರಿಗೊಳಿಸುತ್ತದೆ. ಆದರೆ ಶಾಸಕಾಂಗ ಸಭೆಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿದರೆ ಅದನ್ನು ವಿಪ್ ಎಂದು ಪ್ರಶ್ನಿಸಬಹುದೇ ಎನ್ನುವ ಪ್ರಶ್ನೆ ಎದ್ದಿದೆ.

    1994ರ ರವಿನಾಯಕ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪಕ್ಷಾಂತರ, ವಿಪ್ ಉಲ್ಲಂಘನೆ ಮಾತ್ರವಲ್ಲದೇ ಶಾಸಕರ ನಡವಳಿಕೆಯನ್ನು ಸಹ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಂತಹ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. ಕ್ರಮ ಕೈಗೊಂಡ ಬಳಿಕ ಶಾಸಕರ ನಡೆ ಪಕ್ಷ ವಿರೋಧಿಯಾಗಿತ್ತು ಎಂದು ಹೇಳಲು ಪಕ್ಷ ಸಾಕ್ಷಾಧಾರವನ್ನು ನೀಡಿ ಆರೋಪವನ್ನು ಸಾಬೀತುಪಡಿಸಬೇಕಾಗುತ್ತದೆ.

    ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು, ಹಾಜರಾಗದೇ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರೂ ಶಾಸಕರು ಹಾಜರಾಗಲಿಲ್ಲ. ಈ ಕಾರಣಕ್ಕೆ ಇದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ ಎನ್ನುವ ಅಂಶವನ್ನು ಮುಂದಿಟ್ಟು ಅತೃಪ್ತರ ವಿರುದ್ಧ ಕ್ರಮ ಜರುಗಿಸಬಹುದು ವಿಶ್ವಾಸದಲ್ಲಿ  ಕಾಂಗ್ರೆಸ್ ನಾಯಕರು ಇದ್ದಾರೆ ಎನ್ನಲಾಗಿದೆ.

  • ಆರಂಭದಲ್ಲಿ ಸಿಎಲ್‍ಪಿ ಸಭೆಗೆ ಬರ್ತೀನಿ ಎಂದಿದ್ದ ಸಿಎಂ ಗೈರಾಗುತ್ತಿರೋದು ಯಾಕೆ?

    ಆರಂಭದಲ್ಲಿ ಸಿಎಲ್‍ಪಿ ಸಭೆಗೆ ಬರ್ತೀನಿ ಎಂದಿದ್ದ ಸಿಎಂ ಗೈರಾಗುತ್ತಿರೋದು ಯಾಕೆ?

    ಬೆಳಗಾವಿ: ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ(ಸಿಎಲ್‍ಪಿ) ನಡೆಯಲಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಗೈರಾಗಲಿದ್ದಾರೆ.

    ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ಅತೃಪ್ತಿ ಹಿನ್ನೆಲೆಯಲ್ಲಿ ಸಿಎಂ ಮುಂದೆಯೇ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಅಂತ ಸಿದ್ದರಾಮಯ್ಯ ಈ ಸಭೆ ಕರೆದಿದ್ದಾರೆ. ಮೊದಲಿಗೆ ಸಭೆಗೆ ಬಂದು ಶಾಸಕರ ಕಷ್ಟ ಕೇಳುತ್ತೇನೆ ಎಂದಿದ್ದ ಸಿಎಂ ಕುಮಾರಸ್ವಾಮಿ ಕೊನೇ ಘಳಿಗೆಯಲ್ಲಿ ಕೈ ಎತ್ತಿದ್ದಾರೆ. ತಿರುಪತಿ ಪ್ರವಾಸದ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆಗೆ ಬರಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೇ ಸಿದ್ದರಾಮಯ್ಯ ತಾವೇ ಶಾಸಕರ ಕಷ್ಟ ಆಲಿಸಲು ನಿರ್ಧರಿಸಿದ್ದಾರೆ.

    ಪ್ರಮುಖವಾಗಿ ಇಂದಿನ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ, ಶಾಸಕರ ಕ್ಷೇತ್ರಗಳಲ್ಲಿ ಅನುದಾನದ ಕೊರತೆ, ಕೆಲಸಗಳು ಸ್ಥಗಿತಗೊಂಡಿರುವ ಬಗ್ಗೆ ಚರ್ಚೆ ನಡೆಯಲಿದೆ. ಈ ಮಧ್ಯೆ ಇಂದು ರಾತ್ರಿ ಸರ್ವಪಕ್ಷ ಶಾಸಕರಿಗೆ ಡಿಕೆ ಶಿವಕುಮಾರ್ ಭೋಜನಕೂಟ ಆಯೋಜಿಸಿದ್ದಾರೆ. ಇಷ್ಟು ವರ್ಷ ಬೆಳಗಾವಿ ಅಧಿವೇಶನ ನಡೆದಾಗ ಜಾರಕಿಹೊಳಿ ಸಹೋದರರು ಭೋಜನಕೂಟ ಏರ್ಪಡಿಸುತ್ತಿದ್ದರು. ಆದರೆ ಈ ಬಾರಿ ಡಿಕೆ ಶಿವಕುಮಾರ್ ಆಯೋಜಿಸಿದ್ದು, ಅದಕ್ಕೆ ಜಾರಕಿಹೊಳಿ ಸಹೋದರರು ಹೋಗ್ತಾರಾ ಇಲ್ವಾ ಎನ್ನುವ ಚರ್ಚೆ ಶುರುವಾಗಿದೆ.

    ತಿರುಪತಿಯಲ್ಲಿ ಸಿಎಂ:
    ದೇವೇಗೌಡರ ಕುಟುಂಬ ನಸುಕಿನ ಜಾವವೇ ವೈಕುಂಠ ಏಕಾದಶಿ ಪೂಜೆಯಲ್ಲಿ ಪಾಲ್ಗೊಂಡಿದೆ. ವೈಕುಂಠ ಏಕಾದಶಿಯಂದು ಮೊದಲ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಎನ್ನುವ ನಂಬಿಕೆ. ಈ ಹಿನ್ನೆಲೆಯಲ್ಲಿ ತಿರುಪತಿಯಲ್ಲಿ ಬೆಳಗ್ಗೆ 3-30ಕ್ಕೆ ವೈಕುಂಠ ಏಕಾದಶಿಯ ಮೊದಲ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ತಿಮ್ಮಪ್ಪನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

    ಸೋಮವಾರ ಕಾಂಗ್ರೆಸ್ ಮುಖ್ಯಮಂತ್ರಿಗಳ ಪ್ರಮಾಣವಚನದಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ ಮತ್ತು ದೇವೇಗೌಡರು ಭೋಪಾಲ್ ನಿಂದ ತಿರುಪತಿಗೆ ಆಗಮಿಸಿದ್ದರು. ಇತ್ತ ಎರಡು ವಿಶೇಷ ವಿಮಾನದಲ್ಲಿ ಕುಟುಂಬದ ಉಳಿದ ಸದಸ್ಯರು ತಿರುಪತಿಗೆ ತೆರಳಿದ್ದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಕಾಂಗ್ರೆಸ್ ಸಿಎಲ್‍ಪಿ ಸಭೆ: ಏನೇನು ಚರ್ಚೆ ಆಯ್ತು? ಇನ್‍ಸೈಡ್ ಸ್ಟೋರಿ ಇಲ್ಲಿದೆ

    ಬೆಂಗಳೂರು: ವಿಧಾನಸೌಧದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಈ ವೇಳೆ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಶಾಸಕರು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮೊದಲ ಸಿಎಲ್‍ಪಿ ಸಭೆ ಇಂದು ನಡೆದಿದ್ದು, ಸಭೆಯಲ್ಲಿ ಬಜೆಟ್ ಮಂಡನೆಯಿಂದಾದ ಗೊಂದಲದ ಜೊತೆಗೆ ಸಭಾಪತಿ ಸ್ಥಾನ ಜೆಡಿಎಸ್‍ಗೆ ಬಿಟ್ಟುಕೊಡುವ ವಿಚಾರ, ಸಂಪುಟ ವಿಸ್ತರಣೆ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ನಿಗಮ ಮಂಡಳಿ ನೇಮಕ, ಪೆಟ್ರೋಲ್, ವಿದ್ಯುತ್ ದರ ಏರಿಕೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

    ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ನೀವು ತಲೆ ಅಲ್ಲಾಡಿಸುತ್ತೀರಿ. ಡಿಸಿಎಂ ಹುದ್ದೆ, ಅಧಿಕಾರ ಬರುತ್ತೆ ಹೋಗುತ್ತೆ. ಆದ್ರೆ ನಮಗೆ ಪಕ್ಷ ಮುಖ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಬುಡ ಅಲುಗಾಡದಂತೆ ನೋಡಿಕೊಳ್ಳಿ ಎಂದು ಕೈ ಶಾಸಕರು ಪರಮೇಶ್ವರ್ ಅವರನ್ನು ಪ್ರಶ್ನಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ವಿಷಯ ಪ್ರಸ್ತಾಪಕ್ಕೆ ಮಾಡದ್ದಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದರಿಂದ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಬಜೆಟ್ ಉತ್ತರದಲ್ಲಿ ಇದನ್ನ ಸರಿಪಡಿಸಬೇಕು. ಕಾಂಗ್ರೆಸ್ ನಾಯಕರ ಜೊತೆಗೆ ಸಮಾಲೋಚನೆ ಮಾಡದೇ ಪೆಟ್ರೋಲ್ ಸೆಸ್ ಏರಿಕೆ ಮಾಡಿದ್ದಾರೆ. ಪೆಟ್ರೋಲ್ ಬೆಲೆ ಏರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಹೀಗಿರುವಾಗ ನಮ್ಮ ಸರ್ಕಾರದಲ್ಲೇ ಸೆಸ್ ಬೆಲೆ ಏರಿಕೆಗೆ ಸಮ್ಮತಿ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸರ್ಕಾರಕ್ಕೆ ಪೆಟ್ರೋಲ್ ಮೇಲಿನ ಸೆಸ್ ಗೆ ಸಾವಿರ ಕೋಟಿ ಹೊರೆಯಾಗಬಹುದು. ಹಾಗಂತ ಪೆಟ್ರೋಲ್ ಬೆಲೆ ಏರಿಕೆ ಮಾಡಿದ್ದು ಸರಿಯಿಲ್ಲ. ಇದನ್ನು ವಾಪಾಸ್ ಪಡೆಯಬೇಕು. ಈ ಬಗ್ಗೆ ಸಿಎಂ ಗಮನ ಸೆಳೆಯಲು ಕಾಂಗ್ರೆಸ್ ನಾಯಕರು ತೀರ್ಮಾನಿಸಬೇಕು. ಇನ್ನೂ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ಇದ್ದ ಏಳು ಕೆಜಿ ಅಕ್ಕಿಯನ್ನು ಕೊಡಬೇಕು. ಎರಡು ಕೆಜಿ 700 ಕೋಟಿ ರೂಪಾಯಿ ಹೆಚ್ಚಳವಾಗುತ್ತದೆ. ಅದು ಸರ್ಕಾರಕ್ಕೆ ಅಷ್ಟೊಂದು ಹೊರೆಯಾಗೋದಿಲ್ಲ. ಐದು ಕೆಜಿ ಯಿಂದ ಎರಡು ಕೆಜಿ ಗೆ ಇಳಿಸಿರೋದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗೆ ಈ ರೀತಿ ಕತ್ತರಿ ಹಾಕಿದ್ದು ಸರಿಯೇ ಎಂದು ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಶಾಸಕರು ಪ್ರಶ್ನಿಸಿದ್ದಾರೆ. ನಾಳೆ ಬಜೆಟ್ ಮೇಲೆ ಸಿಎಂ ಉತ್ತರ ಕೊಡುವಾಗ ಇವೆಲ್ಲವನ್ನು ಹೇಳಬೇಕು. ಈ ಬಗ್ಗೆ ಕಾಂಗ್ರೆಸ್ ನಾಯಕರು ಒಟ್ಟಾಗಿ ಸಿಎಂ ಗಮನಕ್ಕೆ ತರಬೇಕು ಅಂತ ಶಾಸಕರು ಆಗ್ರಹಿಸಿದ್ದಾರೆ.

    ಈ ವೇಳೆ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದ ಶಾಸಕರಿಂದ ಅಸಮಾಧಾನ ವ್ಯಕ್ತವಾಗಿದೆ. ಪೆಟ್ರೋಲ್ ಏರಿಕೆ ಬಗ್ಗೆ ನಾವೇ ಕೇಂದ್ರ ಸರ್ಕಾರದ ಹೋರಾಟ ಮಾಡಿದ್ವಿ. ಈಗ ನಾವೇ ಹೆಚ್ಚಳ ಮಾಡಿದ್ರೆ ನಾವು ಹೇಗೆ ಮುಂದೆ ಹೋರಾಟ ಮಾಡೋದು? ಜನ ಸಾಮಾನ್ಯರಿಗೆ ಹೊರೆ ಆಗುವಂತೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದು ಸರಿಯಲ್ಲ. ಹಿಂಗೆ ಆದ್ರೆ ನಾವು ಜನರ ಬಳಿ ಹೋಗೋದು ಹೇಗೆ ಅಂತ ಶಾಸಕರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

    ಸಭೆಯ ಮಧ್ಯೆ ಕೆಪಿಸಿಸಿ ಅಧ್ಯಕ್ಷ, ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೊರನಡೆದಿದ್ದರು.

    ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಕೆ ಪಾಟೀಲ್, ಸಿಎಂ ಹಾಗೂ ಸಿದ್ದರಾಮಯ್ಯಗೆ ಬರೆದ ಪತ್ರದ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಆಗಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕ ಹಾಗೂ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿರುವ ಬಗ್ಗೆ ತಿಳಿಸಿದ್ದೇನೆ. ನನ್ನ ಅನಿಸಿಕೆಯನ್ನ ಸಭೆಯಲ್ಲಿ ತಿಳಿಸಿದ್ದು, ಅದನ್ನು ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಂಪೂರ್ಣ ಕರ್ನಾಟಕಕ್ಕೆ ಒಳ್ಳೆಯಾದಾಗುವ ಕುರಿತು ನಿರ್ಧಾರ ಮಾಡ್ತಾರೆ ಅನ್ನೋ ಭರವಸೆ ಇದೆ. ನನ್ನ ಅನಿಸಿಕೆಯನ್ನು ಬಹುತೇಕ ಶಾಸಕರು ಕೂಡ ಒಪ್ಪಿಕೊಂಡ್ರು. ರೈತರ ಸಾಲಮನ್ನಾ ಎಲ್ಲಾ ಭಾಗದ ರೈತರಿಗೂ ಆಗಬೇಕು ಅನ್ನೊ ವಿಚಾರವನ್ನ ತಿಳಿಸಿದ್ದೇನೆ. ಪೆಟ್ರೋಲ್, ಡೀಸಲ್ ಬೆಲೆ ಹೆಚ್ಚಳ ವಿಚಾರವನ್ನೂ ಪ್ರಸ್ತಾಪ ಮಾಡಿದ್ದು, ಅದನ್ನ ಕಡಿಮೆ ಮಾಡಬೇಕು ಅಂತ ತಿಳಿಸಿದ್ದೇವೆ ಅಂತ ಹೇಳಿದ್ರು.

    ಮುಂದಿನ ಚುನಾವಣೆಗೆ ಶಿಸ್ತಿನಿಂದ ಕೆಲಸ ಮಾಡಲು ಸೂಚನೆ ಮಾಡಲಾಗಿದೆ. ಪರಿಷತ್ ಸಭಾಪತಿ ಸ್ಥಾನ ಬೇಗ ಮಾಡಬೇಕು ಅನ್ನೋದನ್ನ ಕೆಲವರು ಹೇಳಿದ್ದಾರೆ. ನಮ್ಮ ರಾಷ್ಟ್ರೀಯ ಕಾರ್ಯದರ್ಶಿ ಬಂದಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡ್ತಾರೆ. ಮುಂದಿನ ಚುನಾವಣೆಗೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಅಂತ ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ಆರ್ ವಿ ದೇಶಪಾಂಡೆ, ಕೆ ಜೆ ಜಾರ್ಜ್, ಪುಟ್ಟರಂಗಶೆಟ್ಟಿ, ಹ್ಯಾರೀಸ್, ತನ್ವೀರ್ ಸೇಠ್, ಎಚ್ ಎಂ ರೇವಣ್ಣ,ಸೋಮಶೇಖರ್ ರಾಜಶೇಖರ್ ಪಾಟೀಲ್, ಸಚಿವೆ ಜಯಮಾಲ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ, ಬಿಸಿ ಪಾಟೀಲ್, ಎಸ್ ಆರ್ ಪಾಟೀಲ್, ಶಿವಶಂಕರ್ ರೆಡ್ಡಿ, ಪ್ರಿಯಾಂಕ ಖರ್ಗೆ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.