Tag: Cloudbursts

  • ಉತ್ತರಾಖಂಡದಲ್ಲಿ ಮೇಘಸ್ಫೋಟ – 6 ಜನ ಸಾವು, 11 ಮಂದಿ ನಾಪತ್ತೆ

    ಉತ್ತರಾಖಂಡದಲ್ಲಿ ಮೇಘಸ್ಫೋಟ – 6 ಜನ ಸಾವು, 11 ಮಂದಿ ನಾಪತ್ತೆ

    ಕುಮಾವೂನ್: ಉತ್ತರಾಖಂಡದಲ್ಲಿ (Uttarakhand) ಮೇಘಸ್ಫೋಟದಿಂದ (Cloudbursts) ಭಾರೀ ಮಳೆಯಾಗುತ್ತಿದ್ದು, ಭೂಕುಸಿತದಿಂದ (Landslides) 5 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 11 ಮಂದಿ ನಾಪತ್ತೆಯಾಗಿದ್ದಾರೆ.

    ಉತ್ತರಾಖಂಡದ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರ ಮುಂಜಾನೆ ಭಾರೀ ಮಳೆಯಾಗಿದೆ. ಪರಿಣಾಮ ಭೂಕುಸಿತ ಸಂಭವಿಸಿ ಮನೆಗಳಿಗೆ ಹಾನಿಯಾಗಿದೆ. ಇದರಿಂದ ಹಲವರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ರಸ್ತೆಗಳಿಗೆ ನುಗ್ಗಿದ ನೀರು, ವಿಮಾನ ಕಾರ್ಯಾಚರಣೆಗೂ ಅಡ್ಡಿ

    ರಾತ್ರಿಯಿಡೀ ಸುರಿದ ಅತಿಯಾದ ಮಳೆಯಿಂದ ಬಾಗೇಶ್ವರ ಜಿಲ್ಲೆಯ ಕಪ್‌ಕೋಟ್ ಪ್ರದೇಶದ ಪೌಸಾರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ 6 ಮನೆಗಳು ಹಾನಿಗೊಳಗಾಗಿವೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಕಾಣೆಯಾಗಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

    ಚಮೋಲಿ ಜಿಲ್ಲೆಯ ಮೊಪಾಟಾ ಗ್ರಾಮದಲ್ಲಿ ಭೂಕುಸಿತದಿಂದ ಒಂದು ಮನೆ ಮತ್ತು ದನದ ಕೊಟ್ಟಿಗೆ ಕುಸಿದು ಹೋಗಿದೆ. ಇದರಲ್ಲಿ ದಂಪತಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ.

    ರುದ್ರಪ್ರಯಾಗ ಜಿಲ್ಲೆಯ ಬಸುಕೆದಾರ್ ಪ್ರದೇಶದಲ್ಲಿ ನಿರಂತರ ಮಳೆ ಮತ್ತು ಭೂಕುಸಿತಗಳು 6ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಈ ಪ್ರದೇಶದಲ್ಲಿ ಇಬ್ಬರು ಸಾವನ್ನಪ್ಪಿದ್ದು, 8 ಮಂದಿ ನಾಪತ್ತೆಯಾಗಿದ್ದಾರೆ. ಇನ್ನೂ ಡೆಹ್ರಾಡೂನ್‌ನ ಬಿಂದಾಲ್ ನದಿಯಲ್ಲಿ 10 ವರ್ಷದ ಬಾಲಕನ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಾರೀ ಮಳೆ ಹಾಗೂ ಭೂಕುಸಿತದಿಂದ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ರುದ್ರಪ್ರಯಾಗ ಜಿಲ್ಲೆಯಲ್ಲೂ ಸಹ, ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಸಿರೋಬ್‌ಗಢದಲ್ಲಿ ಮುಚ್ಚಲಾಗಿದೆ.‌ ಯಾತ್ರಿಕರು ರಸ್ತೆಯ ಬಗ್ಗೆ ಮಾಹಿತಿ ಪಡೆದ ಬಳಿಕ ಮಾತ್ರ ಪ್ರಯಾಣ ಆರಂಭಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ರುದ್ರಪ್ರಯಾಗ, ಚಮೋಲಿಯಲ್ಲಿ ಮೇಘಸ್ಫೋಟ – ಹಲವರು ನಾಪತ್ತೆ ಶಂಕೆ

  • ಹಿಮಾಚಲಪ್ರದೇಶ: 17 ದಿನದಲ್ಲಿ 19 ಬಾರಿ ಮೇಘಸ್ಫೋಟ – 82 ಸಾವು, ಬದರೀನಾಥ ಮಾರ್ಗ ಬಂದ್

    ಹಿಮಾಚಲಪ್ರದೇಶ: 17 ದಿನದಲ್ಲಿ 19 ಬಾರಿ ಮೇಘಸ್ಫೋಟ – 82 ಸಾವು, ಬದರೀನಾಥ ಮಾರ್ಗ ಬಂದ್

    – ಮಧ್ಯಪ್ರದೇಶದಲ್ಲಿ 3 ಸಾವಿರ ಮನೆಗಳಿಗೆ ನುಗ್ಗಿದ ನೀರು

    ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಕಳೆದ 17 ದಿನಗಳಲ್ಲಿ 19 ಬಾರಿ ಮೇಘಸ್ಫೋಟ ಸಂಭವಿಸಿದ್ದು, ಒಟ್ಟು 82 ಮಂದಿ ಸಾವನ್ನಪ್ಪಿದ್ದಾರೆ.

    ಜೂನ್ 20 ರಿಂದ ಜುಲೈ 6 ರವರೆಗೆ ಹಿಮಾಚಲ ಪ್ರದೇಶದಲ್ಲಿ 19 ಮೇಘಸ್ಫೋಟಗಳು, 23 ಪ್ರವಾಹ ಅವಘಡಗಳು, 19 ಭೂಕುಸಿತಗಳು ಸಂಭವಿಸಿವೆ. ಒಟ್ಟು 269 ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

    ದೇಶದ ಹಲವೆಡೆ ಮುಂಗಾರು ಅಬ್ಬರ ಜೋರಾಗಿದೆ. ಪರಿಣಾಮವಾಗಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಮಧ್ಯಪ್ರದೇಶದ ಶಹದೋಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 4 ಇಂಚು ಮಳೆಯಾಗಿದೆ. ರಾತ್ರಿಯಿಡೀ 3,000 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡವು. ಆಸ್ಪತ್ರೆಗೆ ನೀರು ನುಗ್ಗಿದ ನಂತರ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಯಿತು. ಹಳಿಗಳು ಮುಳುಗಿದ್ದರಿಂದ ನಾಲ್ಕು ಗಂಟೆಗಳ ಕಾಲ ರೈಲು ಸೇವೆಗಳು ಸ್ಥಗಿತಗೊಂಡವು.

    ಉತ್ತರಾಖಂಡದಲ್ಲಿ ಭಾರೀ ಮಳೆ ಮುಂದುವರೆದಿದೆ. ಉತ್ತರಕಾಶಿಯ ಯಮುನೋತ್ರಿ ಹೆದ್ದಾರಿಯಲ್ಲಿ ಓಜ್ರಿ ಬಳಿ ಸೇತುವೆ ಕುಸಿದು ಹತ್ತಿರದ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶ್ರೀನಗರದಲ್ಲಿ ತೀವ್ರ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಬದರಿನಾಥ್ ಹೆದ್ದಾರಿ ಬಂದ್‌ ಆಗಿದೆ. ಇದನ್ನೂ ಓದಿ: ನಾನು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ – ಮುಂಬೈ ದಾಳಿಯ ಸಂಚುಕೋರ ರಾಣಾ ತಪ್ಪೊಪ್ಪಿಗೆ

    ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯು ನದಿಯು 91.35 ಮೀಟರ್ ತಲುಪಿದೆ. ಎಚ್ಚರಿಕೆ ಮಟ್ಟಕ್ಕಿಂತ ಕೇವಲ 20 ಸೆಂ.ಮೀ. ಕೆಳಗಿದೆ. ಕಳೆದ 24 ಗಂಟೆಗಳಲ್ಲಿ 24 ಸೆಂ.ಮೀ. ಏರಿಕೆ ದಾಖಲಾಗಿದೆ. ಕಾನ್ಪುರದಲ್ಲಿ ಗಂಗಾ ನದಿಯ ತಗ್ಗು ಪ್ರದೇಶಗಳು ಪ್ರವಾಹದ ಅಪಾಯದಲ್ಲಿವೆ.

  • ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಐವರು ಸಾವು, 50 ಮಂದಿ ಕಣ್ಮರೆ

    ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಐವರು ಸಾವು, 50 ಮಂದಿ ಕಣ್ಮರೆ

    ಶಿಮ್ಲಾ: ಉತ್ತರ ಭಾರತದಲ್ಲೂ ರಣಭೀಕರ ಮಳೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ (Himachal Pradesh) ಕುಂಭದ್ರೋಣ ಮಳೆ ಕಾರಣ ಮೇಘಸ್ಫೋಟ ಉಂಟಾಗಿದೆ.

    ಶಿಮ್ಲಾದ ಸಮೇಜ್‌ಖಾಡ್ ಬಳಿಯ ಪಾರ್ವತಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ಎಲ್ಲವೂ ಕೊಚ್ಚಿ ಹೋಗಿದೆ. ಕೆಸರುಮಣ್ಣು ಸಹಿತ ಜಲಸ್ಫೋಟದ ಧಾಟಿಗೆ ಐವರು ಸಾವಿಗೀಡಾಗಿದ್ದು, ಕನಿಷ್ಠ 50 ಮಂದಿ ಕಣ್ಮರೆಯಾಗಿದ್ದಾರೆ. ಇದನ್ನೂ ಓದಿ: Wayanad Landslide | ಪ್ರವಾಸಿಗರ ಸ್ವರ್ಗ ಈಗ ಮರಣ ದಿಬ್ಬ – ಮೃತರ ಸಂಖ್ಯೆ 300ಕ್ಕೆ ಏರಿಕೆ

    ನೋಡನೋಡುತ್ತಲೇ ಕಟ್ಟಡಗಳು ಧರೆಗುರುಳಿವೆ. ಬಿಯಾಸ್ ನದಿ ಅಪಾಯದ ಮಟ್ಟ ಮೀರಿದ ಕಾರಣ ಮಲನಾ ಡ್ಯಾಂ ಹೆಚ್ಚು ಕಡಿಮೆ ನಾಶವಾಗಿದೆ. ಪಂದೋ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ರಿಲೀಸ್ ಮಾಡಲಾಗಿದೆ. ಉತ್ತರಾಖಂಡದಲ್ಲೂ ಮೇಘಸ್ಫೋಟವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತಗಳು ಸಂಭವಿಸಿವೆ.

    ಗೌರಿಕುಂಡ್-ಸೋನ್‌ಪ್ರಯಾಗ್ ನಡುವಿನ ರಸ್ತೆ ಸಂಪೂರ್ಣ ಹಾನಿಗೊಂಡಿದೆ. ಕೇದಾರ್‌ನಾಥದ ಮಾರ್ಗ ಕೊಚ್ಚಿ ಹೋಗಿವೆ. ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ 24 ಮಂದಿ ಬಲಿ ಆಗಿದ್ದಾರೆ. ಮಾರ್ಗ ಮಧ್ಯೆ ಸಿಲುಕಿದ್ದ ಭಕ್ತರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯ ನಡೆದಿದೆ.

    ಉತ್ತರ ಪ್ರದೇಶದಲ್ಲೂ ಭಾರೀ ಮಳೆಯಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪ್ರಯಾಗ್‌ರಾಜ್‌ನಲ್ಲಿ ನೋಡನೋಡುತ್ತಲೇ ಕಾಂಪೌAಡ್ ಒಂದು ವ್ಯಕ್ತಿ ಮೇಲೆ ಕುಸಿದಿದೆ. ಜೈಪುರ ಏರ್‌ಪೋರ್ಟ್ ಜಲಾವೃತವಾಗಿ ಪ್ರಯಾಣಿಕರು ಪರದಾಡಿದ್ದಾರೆ. ಇದನ್ನೂ ಓದಿ: Wayanad landslides – ಕಂಬನಿ… ಖಾಲಿಯಾಗಿದೆ…!