Tag: cloud seeding

  • ದುಬೈ ಕಾಡಿದ ಮಳೆ; ಕೃತಕ ಮಳೆಯೋ, ಹವಾಮಾನ ಬದಲಾವಣೆ ಪರಿಣಾಮವೋ?

    ದುಬೈ ಕಾಡಿದ ಮಳೆ; ಕೃತಕ ಮಳೆಯೋ, ಹವಾಮಾನ ಬದಲಾವಣೆ ಪರಿಣಾಮವೋ?

    ರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಸದಾ ಬಿಸಿಲನ್ನೇ ಕಾಣುತ್ತಿದ್ದ ದುಬೈನಲ್ಲಿ (Dubai Rain) ವರುಣನ ಆರ್ಭಟಿಸಿತು. ಎಲ್ಲೆಲ್ಲೂ ನೀರು.. ನೀರು.. ರಸ್ತೆಗಳಲ್ಲಿ ಚರಂಡಿಗಳಂತೆ ನೀರು ಹರಿದಿದೆ. ವಿಮಾನ ನಿಲ್ದಾಣ ತೊರೆಯಂತಾಗಿದೆ. ತಿಳಿ ನೀಲಿ ಬಣ್ಣದಿಂದ ಕೂಡಿರುತ್ತಿದ್ದ ಆಕಾಶದಲ್ಲಿ ಕಪ್ಪನೆ ಕಾಮೋಡವಾಗಿ, ಬರಬರುತ್ತಾ ಹಸಿರು ಬಣ್ಣಕ್ಕೆ ತಿರುಗಿ ಕೆಲ ದಿನಗಳಿಂದ ಎಡಬಿಡದೆ ಮಳೆ ಸುರಿಯಿತು. ವಿಶ್ವದ ಅತಿ ಎತ್ತರದ ಬುರ್ಜ್ ಖಲೀಫಾ ಚುಂಬಿಸುವಂತೆ ಬರುತ್ತಿದ್ದ ಮಿಂಚು ಭೀತಿ ಹುಟ್ಟಿಸುವಂತಿತ್ತು. ಅಪಾರ ಪ್ರಮಾಣದ ಮಳೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ.

    ಶುಷ್ಕ ಅರೇಬಿಯನ್ ಪೆನಿನ್ಸುಲಾ ದೇಶವಾಗಿರುವ ಯುಎಇಯಲ್ಲಿ ಭಾರೀ ಮಳೆಯಾಗುವುದು ತೀರ ಅಸಾಮಾನ್ಯ. ಸಾಮಾನ್ಯವಾಗಿ ತಂಪಾದ ಚಳಿಗಾಲದ ತಿಂಗಳುಗಳಲ್ಲಿ ಸಾಂದರ್ಭಿಕವಾಗಿ ಈ ಪ್ರದೇಶದಲ್ಲಿ ಮಳೆಯಾಗುತ್ತದೆ. ಆದರೆ ಈ ಬಾರಿ 75 ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. 1949 ರಲ್ಲಿ ದಾಖಲೆಯ ಮಳೆಯಾಗಿತ್ತು. ಇದನ್ನೂ ಓದಿ: ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್‌ಲೈನ್ ತಂಡ!

    ಮರುಭೂಮಿ ರಾಷ್ಟ್ರದಲ್ಲಿ ಈ ಪ್ರಮಾಣದ ಮಳೆಯೆಂದರೆ ಅಚ್ಚರಿಯಾಗುವುದು ಸಹಜ. ಅಷ್ಟಕ್ಕೂ ದುಬೈನಲ್ಲಿ ಏನಾಗುತ್ತಿದೆ? ಭಾರೀ ಪ್ರಮಾಣದಲ್ಲಿ ಮಳೆಯಾಗಲು ಕಾರಣವೇನು? ಇದು ಮೋಡ ಬಿತ್ತನೆಯಿಂದಾಗಿದ್ದೋ ಅಥವಾ ಹವಾಮಾನ ಬದಲಾವಣೆಯ ಪರಿಣಾಮವೋ? ದುಬೈನ ಪ್ರವಾಹದ ಮಳೆಗೆ ಅಸಲಿ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.

    ದುಬೈನಲ್ಲಿ ಏನಾಯಿತು?
    ಸೋಮವಾರ (ಏ.15) ರಾತ್ರಿ ಗುಡುಗು ಸಹಿತ ಮಳೆ ಪ್ರಾರಂಭವಾಯಿತು. ಮಂಗಳವಾರ ಸಂಜೆಯ ವೇಳೆಗೆ 142 ಮಿಲಿಮೀಟರ್ (ಮಿಮೀ) ಗಿಂತ ಹೆಚ್ಚಿನ ಮಳೆ ಮರುಭೂಮಿ ನಗರ ದುಬೈನಲ್ಲಿ ಸುರಿದಿದೆ. ಸಾಮಾನ್ಯವಾಗಿ, ನಗರವು ಒಂದೂವರೆ ವರ್ಷದಲ್ಲಿ ಇಷ್ಟು ಮಳೆಗೆ ಸಾಕ್ಷಿಯಾಗಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭಾರೀ ಪ್ರಮಾಣದ ಮಳೆಯಾಗಿದೆ. ಪರಿಣಾಮವಾಗಿ ವಿಮಾನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕೆಲ ದಿನಗಳವರೆಗೂ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು.

    ವಾಹನಗಳಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿಗಳು
    ದಾಖಲೆಯ ಮಳೆಗೆ ದುಬೈನಾದ್ಯಂತ ಮನೆಗಳು ಜಲಾವೃತಗೊಂಡವು. ವಾಹನ ಸಂಚಾರಕ್ಕೆ ತೊಡಕಾಯಿತು. ದುಬೈ ಮಾಲ್ ಮತ್ತು ಮಾಲ್ ಆಫ್ ದಿ ಎಮಿರೇಟ್ಸ್ನಂತಹ ಜನಪ್ರಿಯ ಖರೀದಿ ಕೇಂದ್ರಗಳು ಜಲಾವೃತಗೊಂಡಿವೆ. ನೀರನ್ನು ತೆರವುಗೊಳಿಸಲು ಟ್ಯಾಂಕರ್ ಲಾರಿಗಳನ್ನು ರಸ್ತೆ ಮತ್ತು ಹೆದ್ದಾರಿಗಳಿಗೆ ಇಳಿಸಲಾಗಿದೆ. ದುಬೈನಿಂದ ಸುಮಾರು 130 ಕಿಮೀ ದೂರದಲ್ಲಿರುವ ಅಲ್ ಐನ್ ನಗರವು 254 ಮಿಮೀ ದಾಖಲೆಯ ಮಳೆಯನ್ನು ಕಂಡಿದೆ. ಯುಎಇಯ ಪೂರ್ವ ಕರಾವಳಿಯಲ್ಲಿರುವ ಫುಜೈರಾದಲ್ಲಿ ಮಂಗಳವಾರ 145 ಮಿಮೀ ಮಳೆಯಾಗಿದೆ. ಪರಿಣಾಮವಾಗಿ ಯುಎಇಯಾದ್ಯಂತ ಕೆಲ ದಿನ ಶಾಲೆಗಳನ್ನು ಮುಚ್ಚಲಾಯಿತು. ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿತು. ಯುಎಇ ನೆರೆಯ ಒಮಾನ್‌ನಲ್ಲಿಯೂ ತೀವ್ರವಾದ ಮಳೆ ಬಿದ್ದಿತು. ಮಳೆ ಹೊಡೆತಕ್ಕೆ 18 ಮಂದಿ ಬಲಿಯಾದರು. ಅವರ ಪೈಕಿ 10 ಶಾಲಾ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ವಾಹನಗಳಲ್ಲೇ ಕೊಚ್ಚಿ ಹೋದರು. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ

    ದುಬೈನಲ್ಲಿ ಭಾರೀ ಮಳೆಗೆ ಕಾರಣವೇನು?
    ಮಳೆಗೆ ಚಂಡಮಾರುತ ಕಾರಣ ಎಂದು ತಜ್ಞರು ಹೇಳಿದ್ದಾರೆ. ಚಂಡಮಾರುತವು ಅರೇಬಿಯನ್ ಪರ್ಯಾಯ ದ್ವೀಪದ ಮೂಲಕ ಹಾದುಹೋಗುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಆದರೆ ಹವಾಮಾನ ವಿಜ್ಞಾನ ಕಾಲಿನ್ ಮೆಕಾರ್ಥಿ, ಭಾರೀ ಮಳೆಗೆ ಪರ್ಷಿಯನ್ ಕೊಲ್ಲಿಯ ಬೆಚ್ಚಗಿನ ನೀರಿನಿಂದ ರೂಪುಗೊಂಡ ಅನೇಕ ಸುತ್ತಿನ ತೀವ್ರವಾದ ಗುಡುಗುಗಳು ಕಾರಣವೆಂದು ಹೇಳಿದ್ದಾರೆ. ಹವಾಮಾನ ಬದಲಾವಣೆ ಮಳೆಗೆ ಕಾರಣವಾಗಿದೆ ಎಂದು ಮತ್ತೊಬ್ಬ ತಜ್ಞ ಫ್ರೆಡೆರಿಕ್ ಒಟ್ಟೊ ವಿಶ್ಲೇಷಿಸಿದ್ದಾರೆ. ಇನ್ನೂ ಕೆಲವರು ಮೋಡ ಬಿತ್ತನೆಯು ದುಬೈನಲ್ಲಿ ಭಾರೀ ಮಳೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ಮೋಡ ಬಿತ್ತನೆ ಎಂದರೇನು?
    ಯುಎಇ 2000 ರ ದಶಕದಲ್ಲಿ ನೀರಿನ ಅಭಾವದ ಸಮಸ್ಯೆ ಪರಿಹರಿಸಲು ಮೋಡ ಬಿತ್ತನೆ ಕಾರ್ಯಾಚರಣೆ ಆರಂಭಿಸಿತು. ಈ ಬಾರಿ ಮಳೆಗಾಗಿ ಅಲ್ ಐನ್ ವಿಮಾನ ನಿಲ್ದಾಣದಿಂದ ವಿಮಾನಗಳ ಮೂಲಕ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹವಾಮಾನಶಾಸ್ತ್ರಜ್ಞ ಅಹ್ಮದ್ ಹಬೀಬ್ ತಿಳಿಸಿದ್ದಾರೆ.

    ಮೋಡ ಬಿತ್ತನೆಯು ಒಂದು ರೀತಿಯ ಹವಾಮಾನ ಮಾರ್ಪಾಡು ಪ್ರಕ್ರಿಯೆಯಾಗಿದೆ. ಅದು ಮಳೆ ಅಥವಾ ಹಿಮವನ್ನು ಹೆಚ್ಚಿಸುತ್ತದೆ. ಮೋಡದ ಹನಿಗಳು ಸ್ವಯಂಪ್ರೇರಿತವಾಗಿ ರೂಪುಗೊಳ್ಳುವುದಿಲ್ಲ. ತೇವಾಂಶವನ್ನು ಸಾಂದ್ರೀಕರಿಸಲು, ಅದಕ್ಕೆ ಅಂಟಿಕೊಳ್ಳುವ ಮೇಲ್ಮೈ ಅಗತ್ಯವಿದೆ. ಮೋಡದೊಳಗೆ ಗಾಳಿಯಲ್ಲಿ ಘನೀಕರಣ ನ್ಯೂಕ್ಲಿಯಸ್ ಎಂದು ಕರೆಯಲ್ಪಡುವ ಕಣಗಳಿವೆ. ಇದು ತೇವಾಂಶವನ್ನು ಒಂದುಗೂಡಿಸುವ ಆಧಾರವಾಗಿದೆ. ನ್ಯೂಕ್ಲಿಯಸ್ ಕಣಗಳನ್ನು ಶೂಟ್ ಮಾಡಲು ವಿಮಾನಗಳನ್ನು ಬಳಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಹನಿಗಳು ವಿಲೀನಗೊಂಡ ನಂತರ ಅವು ಭಾರವಾಗುತ್ತವೆ. ಆಗ ಮಳೆ ಭೂಮಿಗೆ ಬೀಳುತ್ತದೆ. ಧೂಳು ಮತ್ತು ಕೊಳೆಯಂತಹ ಸಣ್ಣ ಸಣ್ಣ ಕಣಗಳು ತೇವಾಂಶ ಘನೀಕರಿಸಲು ಪೂರಕವಾಗಿ ಮೋಡ ರಚನೆ ಮತ್ತು ಮಳೆಯಾಗಲು ಪ್ರಮುಖ ಪಾತ್ರ ವಹಿಸುತ್ತವೆ. ಸಿಲ್ವರ್ ಅಯೋಡೈಡ್ ಅದೇ ಕಾರ್ಯ ನಿರ್ವಹಿಸುತ್ತದೆ. ಡ್ರೈ ಐಸ್‌ನಂತಹ ಇತರ ವಸ್ತುಗಳನ್ನು ಸಹ ಇದೇ ಉದ್ದೇಶಗಳಿಗೆ ಬಳಸಬಹುದು.

    ದುಬೈನಲ್ಲಿ ಹವಾಮಾನ ಬದಲಾವಣೆ ಪರಿಣಾಮವೇನು?
    ಸಮುದ್ರ ಮಟ್ಟ: ಯುಎಇ ಸುಮಾರು 1,300 ಕಿಮೀ ಕರಾವಳಿಯನ್ನು ಹೊಂದಿದೆ. ಸುಮಾರು 85% ಜನಸಂಖ್ಯೆ ಮತ್ತು ಯುಎಇ 90% ಕ್ಕಿಂತ ಹೆಚ್ಚು ಮೂಲಸೌಕರ್ಯವು ಸಮುದ್ರಕ್ಕೆ ಹೊಂದಿಕೊಂಡಂತೆ ಇದೆ. ಸ್ಟಾಕ್‌ಹೋಮ್ ಎನ್ವಿರಾನ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಯುಎಸ್ ಸೆಂಟರ್ ವರದಿ ಪ್ರಕಾರ, ಯುಎಇಯು ತನ್ನ ಅಭಿವೃದ್ಧಿ ಹೊಂದಿದ ಕರಾವಳಿಯ 6% ಪಾಲನ್ನು ಈ ಶತಮಾನದ ಅಂತ್ಯದ ವೇಳೆಗೆ ಏರುತ್ತಿರುವ ಸಮುದ್ರ ಮಟ್ಟಗಳಿಂದ ಕಳೆದುಕೊಳ್ಳಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಮರುಭೂಮಿ ದೇಶ ದುಬೈನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ವಿಮಾನ ನಿಲ್ದಾಣ

    ನೀರಿನ ವಿಪತ್ತು: ಜಾಗತಿಕ ತಾಪಮಾನವು ನೀರಿನ ಬೇಡಿಕೆ ಮತ್ತು ಲಭ್ಯತೆಯ ನಡುವಿನ ಅಂತರವನ್ನು ಹೆಚ್ಚಿಸಬಹುದು. ಯುಎಇಯ ಕೆಲವು ಸ್ಥಳಗಳು ಆಗಾಗ್ಗೆ ಪ್ರವಾಹಕ್ಕೆ ಸಾಕ್ಷಿಯಾಗುತ್ತವೆ. ಇತರೆ ಪ್ರದೇಶ ಬರ ಮತ್ತು ನೀರಿನ ಕೊರತೆಯನ್ನು ಅನುಭವಿಸುತ್ತವೆ.

    ಕೃಷಿ: ಹೆಚ್ಚಿನ ತಾಪಮಾನ, ಹೆಚ್ಚಿದ ಕಳೆಗಳು ಮತ್ತು ಹಾನಿಕಾರಕ ಕೀಟಗಳು ಕೃಷಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತವೆ. ಜಾಗತಿಕ ತಾಪಮಾನವು ಜಾಗತಿಕವಾಗಿ ಆಹಾರದ ಕೊರತೆಗೆ ಕಾರಣವಾಗಬಹುದು. ಯುಎಇ ಹೆಚ್ಚು ಉಪ್ಪು ನೀರು ಕೂಡ ಕೃಷಿ ಮೇಲೆ ಪರಿಣಾಮ ಬೀರುತ್ತದೆ.

    ಮಾಲಿನ್ಯ ಮತ್ತು ವಿದ್ಯುತ್ ಸರಬರಾಜು: ಜಾಗತಿಕ ತಾಪಮಾನವು ಚಳಿಗಾಲದಲ್ಲಿ ಹೀಟರ್‌ಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ಆದರೆ ಬೇಸಿಗೆಯಲ್ಲಿ ಎಸಿಗಳ ಅಗತ್ಯವನ್ನು ಹೆಚ್ಚಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯ ಸಮಯದಲ್ಲಿ ಬೃಹತ್ ಮಾಲಿನ್ಯವೂ ಹೆಚ್ಚಾಗಬಹುದು. ಯುಎಇ ಹಸಿರುಮನೆ ಅನಿಲ ಇಂಗಾಲದ ಡೈಆಕ್ಸೈಡ್‌ನ ತಲಾ 80 ಟನ್ ಹೊರಸೂಸುವಿಕೆಯನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಹವಾನಿಯಂತ್ರಣಗಳು, ಡಸಲೀಕರಣ ಘಟಕಗಳು ಮತ್ತು ವಿದ್ಯುತ್ ಕೇಂದ್ರಗಳು ಇಂಗಾಲ-ಆಧಾರಿತ ಇಂಧನದಿಂದ ಉತ್ಪತ್ತಿಯಾಗುವ ಶಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ಇದು ಮಾನವರಿಗೆ ಕೆಲವು ಹಂತಗಳಲ್ಲಿ ವಿಷಕಾರಿಯಾಗಿದೆ.

    ದುಬೈ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವೇ?
    ಕಳೆದ ಭಾನುವಾರ ಮತ್ತು ಸೋಮವಾರ ಮಾತ್ರ ದುಬೈನಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು. ಆ ಎರಡು ದಿನಗಳ ಬಳಿಕ ದೇಶದಲ್ಲಾಗಿರುವ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವಲ್ಲ ಎಂದು ಬ್ಲೂಮ್‌ಬರ್ಗ್‌ನ ವರದಿಗಳು ತಿಳಿಸಿವೆ. ದುಬೈನಲ್ಲಿ ಈ ಮಟ್ಟದ ಪ್ರವಾಹಕ್ಕೆ ಚಂಡಮಾರುತ ಕಾರಣ ಎಂದು ಹೇಳಲಾಗುತ್ತಿದೆ.

  • ಮೋಡ ಬಿತ್ತನೆಗೆ ಸರ್ಕಾರ ಹಣ ಕೊಡದಿದ್ರೆ ನಾನೇ ಮಾಡಿಸ್ತೀನಿ: ಪ್ರಕಾಶ್ ಕೋಳಿವಾಡ

    ಮೋಡ ಬಿತ್ತನೆಗೆ ಸರ್ಕಾರ ಹಣ ಕೊಡದಿದ್ರೆ ನಾನೇ ಮಾಡಿಸ್ತೀನಿ: ಪ್ರಕಾಶ್ ಕೋಳಿವಾಡ

    ಬೆಳಗಾವಿ: ಮೋಡ ಬಿತ್ತನೆಗೆ (Cloud Seeding) ಸರ್ಕಾರ ಹಣ ಕೊಡದಿದ್ದರೆ, ನಾನೇ ಹಣ ಹಾಕಿ ಮೋಡ ಬಿತ್ತನೆ ಮಾಡಿಸುತ್ತೇನೆ ಎಂದು ಶಾಸಕ ಪ್ರಕಾಶ್ ಕೋಳಿವಾಡ (Prakash Koliwad) ಹೇಳಿದ್ದಾರೆ.

    ಅಧಿವೇಶನದ (Session) ಶೂನ್ಯವೇಳೆಯಲ್ಲಿ ಸರ್ಕಾರದ ಗಮನ ಸೆಳೆದ ಅವರು, ಮುಂದಿನ ನಾಲ್ಕು ದಿನಗಳ ಕಾಲ ಉತ್ತಮ ಮೋಡಗಳು ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮೋಡ ಬಿತ್ತನೆ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಮಳೆ ತರಿಸಿ ರೈತರಿಗೆ ಅನುಕೂಲ ಮಾಡಬಹುದು. ಅದಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

    ಇದಕ್ಕೆ ಉತ್ತರ ನೀಡಿದ ಸಚಿವ ಹೆಚ್.ಕೆ ಪಾಟೀಲ್, ಅತ್ಯಂತ ಗಂಭೀರ ಹಾಗೂ ಮಹತ್ವದ ವೈಜ್ಞಾನಿಕ ವಿಚಾರ ಎತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಬಹುದು. ಈ ಬಗ್ಗೆ ಉಪಮುಖ್ಯಮಂತ್ರಿಗಳು ಹೆಚ್ಚು ಮಾಹಿತಿ ಕೊಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಇನ್ನೊಂದು ತಿಂಗಳಲ್ಲಿ ಬಂಗಲೆ ಖಾಲಿ ಮಾಡ್ಬೇಕು – ವಿಧಾನಸಭೆಯಲ್ಲಿ ಗೆದ್ದ ಸಂಸದರಿಗೆ ಸೂಚನೆ

    ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಈ ಹಿಂದೆ ಹೆಚ್.ಕೆ ಪಾಟೀಲ್ ಈ ಕಾರ್ಯವನ್ನು ಮಾಡಿದ್ದರು. ಹಣಕಾಸು ಇಲಾಖೆಯವರ ಜೊತೆ ಮೋಡ ಬಿತ್ತನೆ ಬಗ್ಗೆ ಮಾತಾಡಿ ನಿರ್ಧಾರ ಮಾಡುತ್ತೇನೆ. ಸುಮಾರು 50 ಲಕ್ಷದಿಂದ 1 ಕೋಟಿ ರೂ. ವೆಚ್ಚ ಆಗಬಹುದು. ಹಣ ಬಿಡುಗಡೆ ಮಾಡಿದರೆ ಸಿಎಜಿಯವರು ಹಾಗೂ ವಿಪಕ್ಷಗಳು ಗಲಾಟೆ ಮಾಡಬಹುದು. ಚರ್ಚೆ ಮಾಡಿ ಮುಂದಿನ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರೆ. ಈ ವೇಳೆ, ಸರ್ಕಾರ ಹಣ ಕೊಡದಿದ್ರೆ ನಾನೇ ನನ್ನ ಸ್ವತಃ ಹಣದಿಂದ ಮಾಡುತ್ತೇನೆ ಎಂದು ಪ್ರಕಾಶ್ ಕೋಳಿವಾಡ ಅವರು ಹೇಳಿದ್ದಾರೆ. ಇದನ್ನೂ ಓದಿ: ಮುರುಘಾ ಮಠದ ಉಸ್ತುವಾರಿ ವಿರುದ್ಧ 24 ಲಕ್ಷ ರೂ. ದುರ್ಬಳಕೆ ಆರೋಪ- ವೈರಲಾಯ್ತು ನೋಟಿಸ್

  • ಹುಬ್ಬಳ್ಳಿ, ಗದಗಿನಲ್ಲಿ ಇಂದು ಮೋಡ ಬಿತ್ತನೆ ಸಾಧ್ಯತೆ

    ಹುಬ್ಬಳ್ಳಿ, ಗದಗಿನಲ್ಲಿ ಇಂದು ಮೋಡ ಬಿತ್ತನೆ ಸಾಧ್ಯತೆ

    ಹುಬ್ಬಳ್ಳಿ: ಮಹಾರಾಷ್ಟ್ರದ ಮಳೆಯಿಂದಾಗಿ ಉತ್ತರ ಕರ್ನಾಟಕದ 5 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಉಳಿದಂತೆ ಇತರೆ ಜಿಲ್ಲೆಗಳಲ್ಲಿ ಬರ ಕಾಣಿಸುತ್ತಿದೆ. ಹೀಗಾಗಿ, ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿದ್ದು, ಮೋಡ ಬಿತ್ತನೆ ತಂತ್ರಜ್ಞಾನ ಹೊಂದಿರುವ ವಿಮಾನ (ಬೀಚ್ ಕ್ರಾಫ್ಟ್) ಹುಬ್ಬಳ್ಳಿಗೆ ಬಂದಿಳಿದಿದೆ.

    ರಾಜ್ಯ ಸರ್ಕಾರ ವಿದೇಶದಿಂದ ತರಿಸಿದ ಮೋಡ ಬಿತ್ತನೆಯ ಈ ತಂತ್ರಜ್ಞಾನ ಹೊಂದಿರುವ ವಿಮಾನ ಗುರುವಾರ ಬೆಳಗ್ಗೆ ಹುಬ್ಬಳ್ಳಿಗೆ ಬಂದಿಳಿದಿತ್ತು. ಗುರುವಾರ ಮಧ್ಯಾಹ್ನ ವಿಶೇಷ ತಂತ್ರಜ್ಞಾನ ಒಳಗೊಂಡ ಮೋಡ ಬಿತ್ತನೆಯ ವಿಮಾನಕ್ಕೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಗದಗ ಕೇಂದ್ರದಿಂದ 200 ಕಿ.ಮೀ ವ್ಯಾಪ್ತಿಯಲ್ಲಿನ ಮೋಡಗಳಲ್ಲಿ ನೀರಿನ ಸಾಂದ್ರತೆ, ತೇವಾಂಶಗಳನ್ನು ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ರಾಡಾರ್ ನೀಡಲಿದ್ದು, ವಿಮಾನ ಪೈಲಟ್ ಆ ಮಾಹಿತಿ ಆಧರಿಸಿ ಮೋಡ ಬಿತ್ತನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬಾಗಲಕೋಟೆ, ಗದಗಿನಲ್ಲಿ ಮೋಡಗಳು ಪತ್ತೆಯಾಗಿವೆ ಈ ಹಿನ್ನೆಲೆಯಲ್ಲಿ ಇಂದಿನಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.

    ಹುಬ್ಬಳ್ಳಿ ಏರ್ ಪೋರ್ಟಿನಿಂದ ಮುಂದಿನ 90 ದಿನಗಳ ಕಾಲ ಮೋಡ ಬಿತ್ತನೆ ಆಗಲಿದೆ. ಕಳೆದ ತಿಂಗಳ 25 ರಿಂದ ಮೋಡ ಬಿತ್ತನೆ ಆರಂಭಗೊಳ್ಳಬೇಕಿತ್ತು. ಆದರೆ ಸರ್ಕಾರದಿಂದ ಅಧಿಕೃತ ಆದೇಶ ತಡವಾಗಿ ಕೈ ಸೇರಿದ ಕಾರಣ ಬಿತ್ತನೆ ಪ್ರಕ್ರಿಯೆ ಕೊಂಚ ತಡವಾಗಿದೆ. ಈ ನಿಟ್ಟಿನಲ್ಲಿ ಒಂದು ವಿಮಾನ ಈಗಾಗಲೇ ಬಂದಿಳಿದಿದ್ದು ಮತ್ತೊಂದು ಶೀಘ್ರದಲ್ಲೇ ಬರಲಿದೆ.

    ರಾಜ್ಯದಲ್ಲಿ ಮೂರು ಕಡೆ ರೆಡಾರ್ಸ್ ಗಳನ್ನು ಅಳವಡಿಸಲಾಗಿದ್ದು, ಬೆಂಗಳೂರು, ಗದಗ ಹಾಗೂ ಯಾದಗಿರಿಯ ಶೋರಾಪುರದಲ್ಲಿ ರೆಡಾರ್ಸ್ ಗಳನ್ನು ಅಳವಡಿಸಲಾಗಿದೆ. ಅವುಗಳ ಸೂಚನೆಯ ಮೇರೆಗೆ ಯಾವ ಭಾಗದಲ್ಲಿ ಮೋಡ ಕಾಣುತ್ತೋ ಅಲ್ಲಿ ಇಂದು ಬಿತ್ತನೆ ಕಾರ್ಯ ನಡೆಯಲಿದೆ.

  • ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಮೋಡ ಬಿತ್ತನೆ

    ಉತ್ತರ ಕರ್ನಾಟಕ ಭಾಗದಲ್ಲಿ ಇಂದಿನಿಂದ ಮೋಡ ಬಿತ್ತನೆ

    ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆಯಾಗಿದ್ದರೂ ಸಹ ಸಮರ್ಪಕವಾಗಿ ಆಗಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕೈಗೊಂಡಿದ್ದು, ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಇಂದಿನಿಂದ ಮೋಡ ಬಿತ್ತನೆ ಕಾರ್ಯ ಆರಂಭಗೊಂಡಿದೆ.

    ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವರ್ಷಧಾರೆ ಯೋಜನೆಯಡಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಇಂದು ಮೋಡ ಬಿತ್ತನೆಗೆ ಚಾಲನೆ ನೀಡಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನ ಟೇಕ್ ಆಫ್ ಆಗಿದ್ದು, ಉತ್ತರ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.

    ಕೆಲವೆಡೆ ಮಳೆಯಾದರೂ ಸಹ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗದ ಕೆಲ ಪ್ರದೇಶಗಳಲ್ಲಿ ಮಳೆ ಕೊರತೆಯುಂಟಾಗಿತ್ತು. ಅಲ್ಲದೆ ಕೆಲ ಪ್ರದೇಶಗಳಲ್ಲಿ ತೀವ್ರ ಬರ ಆವರಿಸಿತ್ತು. ಹೀಗಾಗಿ ಮೋಡ ಬಿತ್ತನೆ ಕಾರ್ಯ ಪ್ರಾರಂಭಿಸಲಾಗಿದ್ದು, ಪ್ರಾಥಮಿಕ ಹಂತದಲ್ಲಿ ಧಾರವಾಡ ಮತ್ತು ಗದಗ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.

    ತೀವ್ರ ಬರದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಮೋಡ ಬಿತ್ತನೆಯಿಂದಾದರೂ ಮಳೆ ಬರುತ್ತಾ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಕೆಲವೆಡೆ ಮುಂಗಾರು ಮಳೆ ಕೈಕೊಟ್ಟಿದ್ದು, ಕೆಲವೆಡೆ ಮುಂಗಾರು ತಡವಾಗಿ ಆಗಮಿಸಿ ಬೆಳೆಯನ್ನು ನಾಶ ಪಡಿಸಿದೆ. ಹೀಗಾಗಿ ಮೋಡ ಬಿತ್ತನೆಯಿಂದ ಬೆಳೆಗಳಿಗೆ ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಮಣ್ಣಿನಲ್ಲಿರುವ ತೇವಾಂಶ ಕುರಿತು ಉಪಗ್ರಹಗಳು ಕಳುಹಿಸುವ ಚಿತ್ರವನ್ನು ಆಧರಿಸಿ ಎಲ್ಲಿ ಮೋಡ ಬಿತ್ತನೆ ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಹಳದಿ ಮತ್ತು ಕಿತ್ತಳೆ ಬಣ್ಣ ಚಿತ್ರಗಳು ಸಿಗುವ ಕಡೆಗಳಲ್ಲಿ ಮಳೆ ಕೊರತೆ ಇದೆ ಎಂದು ಪರಿಗಣಿಸಿ ಅಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ.

    ಮೋಡಗಳ ಕೆಳಗೆ ಸಂಚರಿಸುವ ವಿಮಾನ ತಾನು ಹೊತ್ತು ತಂದಿರುವ ಸೋಡಿಯಂ ಕ್ಲೋರೈಡ್ ಮತ್ತು ಪೊಟಾಷಿಯಂ ಕ್ಲೋರೈಡ್ ಮಿಶ್ರಿತ ಹೊಗೆಯನ್ನು ಮೋಡಗಳ ಮೇಲೆ ಚಿಮ್ಮಿಸುತ್ತದೆ. ಆ ಮೋಡ ಕರಗಿ ಮಳೆ ಬರುತ್ತದೆ. ಮೋಡ ಬಿತ್ತನೆಗಾಗಿ ಸರ್ಕಾರ 45 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ.

  • ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಆರಂಭ: ಶಿವಶಂಕರರೆಡ್ಡಿ

    ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಆರಂಭ: ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಜೂನ್ 15ರಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಾಡಿಕೆಗಿಂತಲೂ ಈ ಬಾರಿ ಕಡಿಮೆ ಮಳೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ತೀವ್ರ ಬರಗಾಲ, ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದೆ. ಅಂತರ್ಜಲಮಟ್ಟವೂ ಕುಸಿಯುತ್ತಿದ್ದು, ಹಲವು ಕಡೆ ಕೊಳವೆಬಾವಿ ಕೊರೆದರೂ ನೀರು ಸಿಗದೇ ಇರುವ ಪರಿಸ್ಥಿತಿ ಇದೆ. ಮಳೆ ಕೊರತೆಯಿಂದಾಗಿ ದನ ಕರುಗಳಿಗೆ ಮೇವು ಸಿಗುತ್ತಿಲ್ಲ ಎಂದು ತಿಳಿಸಿದರು.

    ವಿಧಾನಸಭಾ ಚುನಾವಣೆ ಹಿನ್ನೆಲೆ ಕಳೆದ ವರ್ಷ ಮೋಡ ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಮೋಡ ಬಿತ್ತನೆಗೆ ಎಲ್ಲಾ ರೀತಿಯ ತಯಾರಿಗಳು ನಡೆದಿವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಹುಬ್ಬಳ್ಳಿ ಹಾಗೂ ಬೆಂಗಳೂರು ಕೇಂದ್ರಗಳ ಮೂಲಕ ಮೋಡ ಬಿತ್ತನೆ ಕಾರ್ಯವು ಜೂನ್ 15ರಿಂದ ಆರಂಭವಾಗಲಿದೆ ಎಂದರು.

    ಇದೇ ವೇಳೆ ಸಚಿವರು ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳೊಂದಿಗೆ ಬರ ಸಮಸ್ಯೆಗಳ ಕುರಿತು ಸಭೆ ನಡೆಸಿದರು.

  • ಒಂದೆರಡು ದಿನ ನೋಡಿ ಮೋಡ ಬಿತ್ತನೆಗೆ ಕ್ರಮ: ಪ್ರಿಯಾಂಕ್ ಖರ್ಗೆ

    ಒಂದೆರಡು ದಿನ ನೋಡಿ ಮೋಡ ಬಿತ್ತನೆಗೆ ಕ್ರಮ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಒಂದೆರಡು ದಿನಗಳ ಕಾಲ ನೋಡಿ ಮೋಡ ಬಿತ್ತನೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಮಾಜಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದು, ಈ ಬಾರಿ ಶೇ. 65 ರಿಂದ ಶೇ.70 ರಷ್ಟು ಮಳೆ ಕೊರತೆ ಕಂಡುಬಂದಿದೆ. ಅಲ್ಲದೇ ಹವಾಮಾನ ಇಲಾಖೆಯವರು ಮಳೆಯಾಗುತ್ತದೆ ಎನ್ನುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಒಂದುವೇಳೆ ಇದೇ ರೀತಿ ಮುಂದುವರಿದರೆ ಮೋಡ ಬಿತ್ತನೆ ಕುರಿತು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

    ಈ ಕುರಿತು ಕೃಷಿ ಸಚಿವರಾದ ಕೃಷ್ಣ ಭೈರೆಗೌಡರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕಲಬುರಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಸುರಿಯುತ್ತಿರುವ ಮಹಾಮಳೆಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದು, ರಾಜ್ಯದ ಬಹುತೇಕ ನದಿಗಳು ಅಪಾಯದಮಟ್ಟ ಮೀರಿ ಹರಿಯುತ್ತಿವೆ. ಈ ಬಾರಿ ರಾಜ್ಯದ ಎಲ್ಲಾ ಜಲಾಶಯಗಳು ಅವಧಿಗೂ ಮುನ್ನವೇ ತುಂಬಿವೆ. ಆದರೆ ಪ್ರಕೃತಿಯ ಆಟಕ್ಕೆ ಕಲಬುರಗಿ ಜಿಲ್ಲೆಯ ಜನರು ಕನಿಷ್ಠ ವರ್ಷಧಾರೆಯನ್ನು ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೆಲಮಂಗಲ ಸುತ್ತಮುತ್ತ ಮೋಡ ಬಿತ್ತನೆಗೆ ವಿಮಾನ ಹಾರಾಟ

    ನೆಲಮಂಗಲ ಸುತ್ತಮುತ್ತ ಮೋಡ ಬಿತ್ತನೆಗೆ ವಿಮಾನ ಹಾರಾಟ

    ಬೆಂಗಳೂರು: ಮಳೆಗಾಗಿ ಎರಡನೇ ದಿನವಾದ ಇಂದು ಮೋಡ ಬಿತ್ತನೆ ಮಾಡುತ್ತಿರುವ ವಿಶೇಷ ವಿಮಾನ ಬೆಂಗಳೂರು ಹೊರವಲಯ ನೆಲಮಂಗಲ ಸುತ್ತಮುತ್ತ ಹಾರಾಟ ನಡೆಸಿದೆ.

    ಇಂದು ನೆಲಮಂಗಲ ಸುತ್ತಮುತ್ತ ದಟ್ಟವಾದ ಮೋಡಗಳಿದ್ದ ಕಾರಣ ಮೋಡ ಬಿತ್ತನೆಯ ವಿಶೇಷ ವಿಮಾನ ಹಾರಟ ನಡೆಸುತ್ತಿದೆ. ನೆಲಮಂಗಲ ತಾಲೂಕಿನಾದ್ಯಂತ ಇಂದುಮ ಮೋಡಗಳು ಆವರಿಸಿಕೊಂಡಿದ್ದು, ಮೋಡ ಬಿತ್ತನೆ ಯಶಸ್ವಿಯಾಗುವ ಸಾಧ್ಯತೆಗಳಿವೆ.

    ಸೋಮವಾರ ರಾಮನಗರದ ಮಾಗಡಿ ಹಾಗೂ ಇನ್ನಿತರ ಭಾಗದಲ್ಲಿ ವಿಮಾನ ಹಾರಾಟ ನಡೆಸಿದ್ದು, ದಟ್ಟವಾದ ಮೋಡಗಳಿಲ್ಲದ ಕಾರಣ ಮೊದಲ ದಿನದ ಮೋಡ ಬಿತ್ತನೆ ಪ್ರಯತ್ನ ವಿಫಲವಾಗಿತ್ತು.

    ಇದನ್ನೂ ಓದಿ:  ಮೋಡ ಬಿತ್ತನೆಗೆ ಆರಂಭದಲ್ಲೇ ವಿಘ್ನ! ಮೊದಲ ದಿನ ಏನಾಯ್ತು?

    ಇದನ್ನೂ ಓದಿ: ಮಳೆಯಾಗ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ- ಇಂದಿನಿಂದ 2 ತಿಂಗಳು ಬಿತ್ತನೆ ಕಾರ್ಯ 

  • ಮೋಡ ಬಿತ್ತನೆಗೆ ಆರಂಭದಲ್ಲೇ ವಿಘ್ನ! ಮೊದಲ ದಿನ ಏನಾಯ್ತು?

    ಮೋಡ ಬಿತ್ತನೆಗೆ ಆರಂಭದಲ್ಲೇ ವಿಘ್ನ! ಮೊದಲ ದಿನ ಏನಾಯ್ತು?

    ಬೆಂಗಳೂರು: ರಾಜ್ಯದ ಹಲವೆಡೆ ಮಳೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಮೋಡಬಿತ್ತನೆ ಕಾರ್ಯ ಆರಂಭಿಸಿದೆ. ರಾಡರ್ ಸಮಸ್ಯೆಯಿಂದ ಮೋಡದ ಕ್ಲಿಯರ್ ಚಿತ್ರ ಸಿಗದಿದ್ದರೂ ಇವತ್ತೇ ಮೋಡ ಬಿತ್ತನೆ ಮಾಡಿದ್ದಾರೆ.

    ಮೊದಲಿಗೆ ವಿಶೇಷ ವಿಮಾನ ಜಕ್ಕೂರಿನಿಂದ ಮಾಗಡಿ ಕಡೆ ತೆರಳಿತ್ತು. ಆದರೆ ಅಲ್ಲಿ ಮೋಡ ಇಲ್ಲದಿದ್ದ ಕಾರಣ ಬಿತ್ತನೆ ಮಾಡಲಾಗಲಿಲ್ಲ. ಬಳಿಕ ಬಿಡದಿ, ಆನೇಕಲ್, ರಾಮನಗರ, ನೆಲಮಂಗಲ ಭಾಗದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮೋಡ ಬಿತ್ತನೆ ಮಾಡಲಾಯ್ತು.

    ಬಳಿಕ ಹೊಸೂರಿನಲ್ಲಿ ಡೆಮೋ ಮಾಡುವಾಗ ಕೂಡಲೇ ಮಳೆ ಸುರಿದಿದೆ ಅಂತ ವಿಮಾನದಲ್ಲೇ ಮೋಡ ಬಿತ್ತನೆ ವೀಕ್ಷಣೆ ಮಾಡಿರುವ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಇವತ್ತು ಕಣ್ಣು ಗುರುತಿನ ಮೇಲೆ ಪ್ರಾಯೋಗಿಕ ಬಿತ್ತನೆ ಮಾಡಲಾಗಿದ್ದು, ನಾಳೆಯಿಂದ ರಾಡರ್ ಸಮೀಕ್ಷೆ ಮೇಲೆ ಮೋಡ ಬಿತ್ತನೆ ಮಾಡುವುದಾಗಿ ಸಚಿವರು ಹೇಳಿದ್ದಾರೆ.

    ಜಕ್ಕೂರಿನಲ್ಲಿ ಮೋಡ ಬಿತ್ತನೆ ಕಾರ್ಯಕ್ಕೆ ಸಚಿವರಾದ ಎಚ್‍ಕೆ ಪಾಟೀಲ್, ಸೀತಾರಾಂ ಹಾಗೂ ಕೃಷ್ಣಭೈರೇಗೌಡ ಚಾಲನೆ ಕೊಟ್ಟರು. ಆದರೆ ಹಾರಾಟಕ್ಕೆ ಕ್ಲಿಯರೆನ್ಸ್ ಸಿಗದ ಕಾರಣ ಮೋಡ ಬಿತ್ತನೆಯ ವಿಮಾನ ಹಾರಾಟ ಎರಡು ಗಂಟೆ ತಡ ಆಯಿತು.ಈ ವೇಳೆ ಸಚಿವರು ಎರಡು ಗಂಟೆಗಳ ಕಾಲ ವಿಮಾನದಲ್ಲೇ ಲಾಕ್ ಆಗಿದ್ದರು.

    ಮಂಗಳವಾರದಿಂದ ಎಚ್‍ಎಎಲ್‍ನಿಂದ ವಿಮಾನ ಹಾರಾಟ ನಡೆಸಲಿದೆ. 60 ದಿನಗಳ ಕಾಲ ನಡೆಯಲಿರುವ ಮೋಡ ಬಿತ್ತನೆಗೆ 35 ಕೋಟಿ ರೂಪಾಯಿ ವೆಚ್ಚವಾಗಲಿದೆ. ಅತ್ತ ಯಾದಗಿರಿಯ ಸುರಪುರದಲ್ಲಿ ಇನ್ನೂ ರಾಡರ್ ಅಳವಡಿಸಿಲ್ಲ, ಟವರ್ ಸ್ಥಾಪಿಸಿಲ್ಲ. ಹೀಗಾಗಿ ನಾಲ್ಕೈದು ದಿನ ತಡವಾಗಲಿದೆ. ಗದಗದಲ್ಲಿ ಇವತ್ತು ನಡೆಯಬೇಕಿದ್ದ ಬಿತ್ತನೆ ಕಾರ್ಯ 24ಕ್ಕೆ ಮುಂದೂಡಿಕೆಯಾಗಿದೆ.

     

    https://youtu.be/dBZN0I2Sv3M

  • ಮಳೆಯಾಗ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ- ಇಂದಿನಿಂದ 2 ತಿಂಗಳು ಬಿತ್ತನೆ ಕಾರ್ಯ

    ಮಳೆಯಾಗ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ- ಇಂದಿನಿಂದ 2 ತಿಂಗಳು ಬಿತ್ತನೆ ಕಾರ್ಯ

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರೋ ಕಾರಣ ರಾಜ್ಯದಲ್ಲಿ ನಾಲ್ಕೈದು ದಿನ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇದನ್ನೇ ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ, ಮೋಡ ಬಿತ್ತನೆ ಮಾಡ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ.

    ನಿತ್ಯ ಸಂಜೆ ಆಯ್ತು ಅಂದ್ರೆ ವರುಣದೇವನ ಲೀಲೆ ಶುರುವಾಗಿರುತ್ತೆ. ರಾಜ್ಯದ ಹಲವೆಡೆ ಮಳೆರಾಯ ಧೋ ಅಂತಾ ಸುರೀತಿದ್ದಾನೆ. ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗ್ತಿರೋ ಈ ಹೊತ್ತಲ್ಲಿ ರಾಜ್ಯ ಸರ್ಕಾರ ಮೋಡಬಿತ್ತನೆ ಹೆಸ್ರಲ್ಲಿ ಕೋಟಿ ಕೋಟಿ ಹಣವನ್ನು ನೀರಲ್ಲಿ ಹೋಮ ಮಾಡಲು ಮುಂದಾಗಿದೆ.

     ಇಂದಿನಿಂದ ರಾಜ್ಯದಲ್ಲಿ ಮೋಡಬಿತ್ತನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮಧ್ಯಾಹ್ನ 12 ಗಂಟೆಗೆ ಜಕ್ಕೂರ್ ವಾಯುನೆಲೆಯಿಂದ ಟೇಕ್ ಆಫ್ ಆಗಲಿರುವ ಅಮೆರಿಕದ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತದೆ.

    ಮೋಡಬಿತ್ತನೆ ಸಲುವಾಗಿಯೇ ಜಿಕೆವಿಕೆ ಅಂಗಳದಲ್ಲಿ ರಡಾರ್ ಹಾಗು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಮೊದಲು ದಕ್ಷಿಣ ಕರ್ನಾಟಕ ಭಾಗ ಅಂದ್ರೆ ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶ, ತುಂಗಭದ್ರಾ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಬರೋಬ್ಬರಿ 33 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಹೊಯ್ಸಳ ಸಂಸ್ಥೆಗೆ ಮೋಡಬಿತ್ತನೆಯ ಪ್ರಾಜೆಕ್ಟ್ ಸಿಕ್ಕಿದೆ. ಇನ್ನು 2- 3 ದಿನಗಳ ಅಂತರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೂ ಮೋಡಬಿತ್ತನೆ ಕಾರ್ಯ ಆರಂಭವಾಗಲಿದೆ ಎನ್ನಲಾಗಿದೆ.

    ಹೇಗೆ ನಡೆಯುತ್ತೆ ಮೋಡ ಬಿತ್ತನೆ?: ಮಳೆ ಮೋಡಗಳ ಮೇಲೆ ನಿಗಾ ಇಡುವ ರಡಾರ್ 360 ಡಿಗ್ರಿ ಸುತ್ತಳತೆಯ 200 ಕಿಲೋಮೀಟರ್ ದೂರದ ಮೋಡಗಳ ಮೇಲೆ ಕೇಂದ್ರೀಕರಿಸಲಾಗುತ್ತೆ. ಮೋಡದ ಸಾಂದ್ರತೆಯ ತೀವ್ರತೆ ಮತ್ತು ಮೋಡ ಚದುರಿವಿಕೆ ಸಾಮಥ್ರ್ಯವನ್ನು ಚಿತ್ರದ ಮೂಲಕ ನಿಯಂತ್ರಣ ಕೊಠಡಿಯ ಕಂಪ್ಯೂಟರ್‍ಗೆ ರಡಾರ್ ರವಾನಿಸುತ್ತೆ. ಅಲ್ಲಿಂದ ವಿಹೆಚ್‍ಪಿ ಸಂಪರ್ಕ ವಾಹಕದ ಮೂಲಕ ಮೋಡ ಬಿತ್ತನೆಯ ಪೈಲಟ್‍ಗೆ ಸಂದೇಶ ರವಾನೆಯಾಗುತ್ತೆ. ತಾಂತ್ರಿಕ ಟೀಮ್‍ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ತಕ್ಷಣ ಮೋಡ ಬಿತ್ತನೆ ಕಾರ್ಯ ಶುರುವಾಗುತ್ತದೆ.

    ಒಟ್ಟು ಎರಡು ತಿಂಗಳ ಕಾಲ ಈ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಆದ್ರೆ ಇದುವರೆಗೆ ಮೋಡ ಬಿತ್ತನೆ ಯಶಸ್ವಿಯಾದ ಉದಾಹರಣೆಗಳೇ ಇಲ್ಲ.

     

  • 60 ದಿನಗಳಲ್ಲಿ ಮೋಡ ಬಿತ್ತನೆ, ರಿಯಲ್ ಎಸ್ಟೇಟ್ ಕಾಯ್ದೆಗೆ ಅಸ್ತು – ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ

    60 ದಿನಗಳಲ್ಲಿ ಮೋಡ ಬಿತ್ತನೆ, ರಿಯಲ್ ಎಸ್ಟೇಟ್ ಕಾಯ್ದೆಗೆ ಅಸ್ತು – ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ

    – 5 ಕಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

    ಬೆಂಗಳೂರು: ರಿಯಲ್ ಎಸ್ಟೇಟ್ ದಂಧೆಗೆ ಬ್ರೇಕ್ ಹಾಕುವ ಕರ್ನಾಟಕ ರಿಯಲ್ ಎಸ್ಟೇಟ್ ರೂಲ್ಸ್ ಕಾಯ್ದೆಯನ್ನ ಜಾರಿಗೆ ತರಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಮೋಡ ಬಿತ್ತನೆ ಕಾರ್ಯಕ್ಕೂ ಅಸ್ತು ಎಂದಿದೆ.

    ಕಾವೇರಿ, ಮಲಪ್ರಭಾ, ತುಂಗಭದ್ರಾ ಜಲಾನಯನ ವ್ಯಾಪ್ತಿಯಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ 60 ದಿನಗಳೊಳಗೆ ಮೋಡ ಬಿತ್ತನೆಗೆ ಹೊಯ್ಸಳ ಕಂಪನಿಗೆ ಗುತ್ತಿಗೆ ನೀಡಲು ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ. ಕೆಲ ಸಚಿವರು ವಿರೋಧದ ನಡುವೆಯೂ RERA(Real Estate Regulation Act) ಕಾಯ್ದೆ ಜಾರಿಗೆ ಸಂಪುಟದಲ್ಲಿ ನಿರ್ಧರಿಸಲಾಗಿದೆ.

    ಇದಲ್ಲದೆ ಕ್ಯಾಬಿನೆಟ್‍ನಲ್ಲಿ ಹಲವು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ:
    * ರೇರಾ ಕಾಯ್ದೆ – 2016 ಜಾರಿಗೆ ಕ್ಯಾಬಿನೆಟ್ ಅಸ್ತು.
    * ಕಾವೇರಿ, ಮಲಪ್ರಭಾ, ತುಂಗಭದ್ರಾ ಜಲಾನಯನ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ.
    * ಕ್ಷೀರ ಭಾಗ್ಯ ಯೋಜನೆ ವಿಸ್ತರಣೆ- ವಾರದಲ್ಲಿ 5 ದಿನ ಮಕ್ಕಳಿಗೆ ಹಾಲು.
    * ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸುವಾಸಿತ ಹಾಲು ವಿತರಣೆ.
    * ಬಿಎಸ್‍ಎನ್‍ಎಲ್ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ವೈ-ಫೈ ಸೇವೆ.
    * ಬಳ್ಳಾರಿಯ ವಿಮ್ಸ್, ಹುಬ್ಬಳಿಯ ಕಿಮ್ಸ್‍ನಲ್ಲಿ 160 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
    * ದಾವಣಗೆರೆ, ಕನಕಪುರ, ತುಮಕೂರು, ವಿಜಯಪುರ, ಕೋಲಾರಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
    * ಬಿಸಿಯೂಟ ತಯಾರಿಕರು, ಅಡುಗೆ ಸಹಾಯಕರಿಗೆ 200 ಗೌರವ ಧನ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ.
    * ರೇಷ್ಮೆ ನೂಲು ಬಿಚ್ಚಣಿಕೆದಾರರಿಗೆ 3 ಲಕ್ಷ ರೂ ವರಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ.

    60 ದಿನದಲ್ಲಿ ಮೋಡ ಬಿತ್ತನೆ ಮಾಡ್ತೀವಿ ಅಂತಿದ್ದಾರೆ. ಆದರೆ ಮಳೆ ಅವಶ್ಯಕತೆ ಇರೋದು ಈಗ. ಈಗ ಬಿಟ್ಟು 2 ತಿಂಗಳಾದ್ಮೇಲೆ ಮೋಡ ಬಿತ್ತನೆ ಮಾಡಿದ್ರೆ ಏನ್ ಪ್ರಯೋಜನ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ.