ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‍ಗಳನ್ನು ಮುಚ್ಚಬಾರದು. ಒಂದು ವೇಳೆ ಖಾಸಗಿ ಆಸ್ಪತ್ರೆಗಳು ಮುಚ್ಚಿದರೆ ಆ ವೈದ್ಯರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾದ ಕೊರೊನಾ ನಿಯಂತ್ರಣ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಎಚ್ಚರಿಕೆ ವಹಿಸಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಂದ್ ಆಗಿರುವ ಆಸ್ಪತ್ರೆಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಆಸ್ಪತ್ರೆಯ ಲೈಸೆನ್ಸ್ ಕೂಡ ರದ್ದು ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಶ್ರೀರಾಮುಲು ಸೂಚಿಸಿದ್ದಾರೆ.
ಈ ಕುರಿತು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಕೂಡಲೇ ಸೂಚನೆ ನೀಡಲು ಸಚಿವ ಶ್ರೀರಾಮುಲು ಆದೇಶ ಮಾಡಿದ್ದಾರೆ. ಈ ಮೊದಲೇ ಮಾಹಿತಿ ನೀಡಿ ಎಚ್ಚರಿಸಿದ್ದರೂ ಆಸ್ಪತ್ರೆ ಅಥವಾ ಕ್ಲಿನಿಕ್ ಸ್ಥಗಿತಗೊಳಿಸಿದ್ದರೆ ಯಾವ ಮುಲಾಜಿಲ್ಲದೆ ಆಸ್ಪತ್ರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಜೊತೆಗೆ ಅವರ ಮೇಲೆ ಕ್ರಿಮಿನಲ್ ಕೇಸ್ ಸಹ ಹಾಕಲಾಗುತ್ತದೆ ಎಂದು ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ: ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರೊಬ್ಬರನ್ನು ಕೈ ಕಾಲು ಕಟ್ಟಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲುಕೊಪ್ಪ ಗ್ರಾಮದಲ್ಲಿ ನಡೆದಿದೆ.
ದೀಲಿಪ್ ಕೊಲೆಯಾದ ವೈದ್ಯ. ಮೃತ ದೀಲಿಪ್ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರು. ಶನಿವಾರ ತಡರಾತ್ರಿ ದುಷ್ಕರ್ಮಿಗಳು ವೈದ್ಯರ ಬೈಲುಕೊಪ್ಪ ಗ್ರಾಮದಲ್ಲಿರುವ ಮನೆಗೆ ರೋಗಿಗಳ ವೇಷದಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ಮನೆಯಲ್ಲಿ ನೆಲ ಹಾಗೂ ಗೋಡೆಯ ಮೇಲೆ ಖಾರದ ಪುಡಿ ಕಂಡು ಬಂದಿದೆ. ಅಲ್ಲದೇ ವೈದ್ಯರ ಎರಡೂ ಕೈಗಳನ್ನು ಹಿಂದಕ್ಕೆ ತಿರುಗಿಸಿ ದಾರದಿಂದ ಬಿಗಿದು ಕಟ್ಟಲಾಗಿದೆ. ಬಾಯಿಗೆ ಪ್ಲಾಸ್ಟರ್ ಅಂಟಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಪಿರಿಯಾಪಟ್ಟಣ ವೃತ್ತ ನಿರೀಕ್ಷಕರು ಹಾಗೂ ಮೈಸೂರು ಎಸ್‍ಪಿ ಅಮಿತ್ ಸಿಂಗ್ ಕೂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಮಾರುತೇಶ್ ಹುಣಸನಹಳ್ಳಿ ಬೆಂಗಳೂರು: ನಗರದಾದ್ಯಂತ ನಕಲಿ ವೈದ್ಯರುಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಇಲ್ಲೊಬ್ಬ ಆಸಾಮಿ ಬಿಎಸ್ಸಿ ಮಾಡಿಕೊಂಡು ಡಾಕ್ಟರ್ ಆಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾನೆ.
ಈತ ಓದಿರೋದು ಬಿಎಸ್ಸಿ, ಮಾಡ್ತಿರೋದು ಡಾಕ್ಟರ್ ಕೆಲಸ, ಯಾವ ಎಂಬಿಬಿಎಸ್ ಓದಿರುವ ವೈದ್ಯರಿಗಿಂತ ಕಮ್ಮಿ ಇಲ್ಲದೆ ಈ ನಕಲಿ ವೈದ್ಯ ಚಿಕಿತ್ಸೆ ನೀಡುತ್ತಿದ್ದ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ನಕಲಿ ವೈದ್ಯನ ಬಂಡವಾಳ ಬಟಾಬಯಲಾಗಿದೆ.
ಕೃಷ್ಣ ಅಲಿಯಾಸ್ ಡಾಕ್ಟರ್ ಕೃಷ್ಣ ಎಂಬಾತನೇ ನಕಲಿ ವೈದ್ಯ. ಈತ ನಗರದ ಕುರುಬರಹಳ್ಳಿ ಸರ್ಕಲ್ ಬಳಿ ಕೃಷ್ಣಾ ಕ್ಲಿನಿಕ್ ಅನ್ನು ನಡೆಸಿಕೊಂಡು ಬರುತ್ತಿದ್ದಾನೆ. ತನ್ನ ತಂದೆ ಡಾ. ಗೋಪಾಲ್ ಅವರ ಪ್ರಮಾಣಪತ್ರಗಳನ್ನು ಬಳಸಿ, ತಾನೇ ವೈದ್ಯನೆಂದು ಅಮಾಯಕ ಜನರಿಗೆ ಚಿಕಿತ್ಸೆ ನೀಡುತ್ತಿದ್ದಾನೆ. ಅಲ್ಲದೇ ಜನರಿಗೆ ಇಂಜೆಕ್ಷನ್ ಹಾಗೂ ಮಾತ್ರೆಗಳನ್ನು ಬರೆದುಕೊಡುತ್ತಿದ್ದಾನೆ.
ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾದ ನಕಲಿ ವೈದ್ಯನ ಅಸಲಿಯತ್ತು ನೋಡಿ:
ಸ್ಟಿಂಗ್ ಆಪರೇಷನ್ – 1
ಪಬ್ಲಿಕ್ ಟಿವಿ: ನಿಮ್ದು ಏನ್ ಸರ್ ಕ್ವಾಲಿಫಿಕೇಷನ್..? ನಕಲಿ ವೈದ್ಯ ಕೃಷ್ಣ: ನಂದು ಬಿಎಸ್ಸಿ ಆಗಿದೆ. ಪಬ್ಲಿಕ್ ಟಿವಿ: ಮತ್ತೆ ನೀವು ಟ್ರೀಟ್‍ಮೆಂಟ್ ಮಾಡಬಹುದಾ..? ಇಂಜೆಕ್ಷನ್ ಕೊಡಬಹುದಾ..? ನಕಲಿ ವೈದ್ಯ ಕೃಷ್ಣ: ಅವ್ರು ಹೇಳಿದ್ರು ಕೊಡ್ತೀನಿ. ಪಬ್ಲಿಕ್ ಟಿವಿ: ನೀವು ಸರ್ಟಿಫೈಡ್ ಆಗಿದ್ದೀರಾ..? ಇಲ್ಲಾ ಟ್ರೈನಿಂಗ್ ಏನಾದರೂ ಮಾಡಿದ್ದೀರಾ..? ನಕಲಿ ವೈದ್ಯ ಕೃಷ್ಣ: ಒಂದು ಆರ್‍ಎಂಸಿ ಸರ್ಟಿಫಿಕೇಟ್ ಇದೆ. ಪಬ್ಲಿಕ್ ಟಿವಿ: ನರ್ಸಿಂಗ್ ಟ್ರೈನಿಂಗ್ ಏನಾದ್ರೂ ಆಗಿದ್ಯಾ..? ನಕಲಿ ವೈದ್ಯ ಕೃಷ್ಣ: ಆ ತರಹ ಏನೂ ಇಲ್ಲ. ಪಬ್ಲಿಕ್ ಟಿವಿ: ನಾವು ಎಂತೆಂಥಾ ಡಾಕ್ಟರ್‍ಗಳನ್ನು ತೋರಿಸಿರ್ತೀವಿ ನಿಮಗೆ ಗೊತ್ತಲ್ವಾ..? ಫೇಕ್ ಡಾಕ್ಟರ್ಸ್ ಹೆಂಗೆಗೆ ಟ್ರೀಟ್ ಮಾಡ್ತಾರೆ ಅಂತ..? ನಕಲಿ ವೈದ್ಯ ಕೃಷ್ಣ: ನಾವು ಟ್ರೀಟ್ ಮಾಡಿಲ್ಲ. ಅವ್ರು ಹೇಳಿದ್ದನ್ನ ನಾವ್ ಮಾಡಿದ್ದೀವಿ (ಅಪ್ಪ ಹೇಳಿದ್ದನ್ನು) ಪಬ್ಲಿಕ್ ಟಿವಿ: ಅದು ತಪ್ಪಲ್ವಾ..? ನಕಲಿ ವೈದ್ಯ ಕೃಷ್ಣ: ಅವ್ರು ಹೇಳಿದ್ದನ್ನ ನಾನ್ ಮಾಡಿದ್ದೀನಿ. ಅವ್ರು ಗೈಡ್ ಮಾಡುತ್ತಾರೆ. ನಾನು ಮಾಡಿದ್ದೀನಿ. ಪಬ್ಲಿಕ್ ಟಿವಿ: ಅವ್ರು ಇವತ್ತ್ ಬಂದಿದ್ದಾರೆ, ನಾವು ಬರ್ತೀವಿ ಅಂತ ಅವ್ರನ್ನ ಕರೆಸಿದ್ದೀರೇನೋ ಗೊತ್ತಿಲ್ಲ. ನಕಲಿ ವೈದ್ಯ ಕೃಷ್ಣ: ಇಲ್ಲ.. ಇಲ್ಲ.. ಪಬ್ಲಿಕ್ ಟಿವಿ: ನಮ್ಗೆ ಗೊತ್ತು ನೀವೇ ಇಂಜೆಕ್ಷನ್ ಕೊಡ್ತೀರಾ, ಚೀಟಿ ಬರೆಯೋದು ನೀವೇ.
ಸ್ಟಿಂಗ್ ಆಪರೇಷನ್ – 2
ಪಬ್ಲಿಕ್ ಟಿವಿ: ಇದು ಸಿಕ್ಕಾಪಟ್ಟೆ ನೋವು, ಎರಡೂ ಕಾಲಲ್ಲೂ.. ನಡೆಯೋಕೆ ಆಗಲ್ಲ ಸರ್. ನಕಲಿ ವೈದ್ಯ ಕೃಷ್ಣ: ತೆಗೆಸಿದ್ದೀನಿ ಅಂತೀರಾ, ಅದೇನ್ ಹಂಗೆ ಇದ್ಯಲ್ಲ. ಪಬ್ಲಿಕ್ ಟಿವಿ: ಊರಿಂದ ಬಂದ್ನಲ್ಲ ಅದ್ಕೆ. ನಕಲಿ ವೈದ್ಯ ಕೃಷ್ಣ: ಎಲ್ಲಿ ಯಾವ ಊರು? ಪಬ್ಲಿಕ್ ಟಿವಿ: ತುಮಕೂರು ನಕಲಿ ವೈದ್ಯ ಕೃಷ್ಣ: ತೆಗೆಸಿರೋದು ಸರಿ, ಏನ್ ತೆಗೆದಿದ್ದಾರೆ ಅವ್ರು? ಎಲ್ಲ ಹಂಗೆ ಇದೆಯಲ್ಲ. ಏನ್ ತೆಗೆದಿದ್ದಾರೆ..? ತೆಗೆಯೋದು ಅಂದ್ರೆ ಏನ್ ಗೊತ್ತಾ..? ಇಂಜೆಕ್ಷನ್ ಕೊಟ್ಟು ಅಷ್ಟು ಕಟ್ ಮಾಡಿ ತೆಗೀಬೇಕು. ಅಲ್ನೋಡಿ ಹೆಂಗಿದೆ ಅದು. ಪಬ್ಲಿಕ್ ಟಿವಿ: ಹೂಂ.. ನಕಲಿ ವೈದ್ಯ ಕೃಷ್ಣ: ನೋವಿಗೆ ಬೇಕಾದ್ರೆ ಇಂಜೆಕ್ಷನ್ ಕೊಡಬಹುದು. ಈ ಬ್ಯಾಂಡೆಂಡ್ ತರಹ ಬರುತ್ತೆ. ಅದನ್ನ ಹಚ್ಚಿ. ಮೂರು ದಿನಕ್ಕೆ ಒಂದ್ಸಾರಿ ಚೇಂಜ್ ಮಾಡ್ತಾ ಇರಿ. ಅದು ಮೆತ್ತಗಾಗಿ ಉದುರಿ ಹೋಗುತ್ತೆ. ಅಲ್ಲಿ ತನಕ ಚೇಂಜ್ ಮಾಡಬೇಕು. 15 ಆಗಬಹುದು. 20 ಆಗಬಹುದು. ನೋವಿಗೆ ಬೇಕಿದ್ರೆ ನಾನು ಇಂಜೆಕ್ಷನ್ ಕೊಡ್ತೀನಿ. ಪಬ್ಲಿಕ್ ಟಿವಿ: ನೋವು ಸಿಕ್ಕಾಪಟ್ಟೆ ಇದೆ. ನಕಲಿ ವೈದ್ಯ ಕೃಷ್ಣ: ನೋವಿಗೆ ಮಾತ್ರೆ ಎಲ್ಲಾ ಆಗಲ್ಲ. ಇಂಜೆಕ್ಷನ್ ಕೊಡ್ತೀನಿ. ಪಬ್ಲಿಕ್ ಟಿವಿ: ಇಂಜೆಕ್ಷನ್ ಎಲ್ಲಾ ಬೇಡ ಸರ್. ಮಾತ್ರೆ ಕೊಡಿ ಸಾಕು. ನಕಲಿ ವೈದ್ಯ ಕೃಷ್ಣ: ಬೆಳಗ್ಗೆ ಒಂದು, ರಾತ್ರಿ ಒಂದು ಮಾತ್ರೆ ನೋವಿಗೆ, 50 ರೂಪಾಯಿ ಚೇಂಜ್ ಕೊಡಿ. ಮೆಡಿಸಿನ್ ತಗೊಂಡು ಬಂದು ಕೊಡಿ.
ಈತನ ವಿರುದ್ಧ ರಹಸ್ಯ ಕಾರ್ಯಾಚರಣೆಗಿಳಿದ, ನಮ್ಮ ಕ್ಯಾಮೆರಾಮೆನ್ ಒಬ್ಬರು ಈತನ ಬಳಿಗೆ ಚಿಕಿತ್ಸೆಗೆಂದು ಹೋದರು. ಈ ಮೊದಲು ಅವರು 28 ಸಾವಿರ ಖರ್ಚು ಮಾಡಿ ಪಾದದ ಗೆಡ್ಡೆ ತೆಗೆಸಿಕೊಂಡಿದ್ದರು. ಇದನ್ನು ಪರೀಕ್ಷಿಸಿದ ನಕಲಿ ವೈದ್ಯ ಕೃಷ್ಣ ಸರಿಯಾಗಿ ಆಪರೇಷನ್ ಮಾಡಿಲ್ಲ, ಮತ್ತೆ ಇದನ್ನು ಕಟ್ ಮಾಡ್ಬೇಕು ಅಂತ ಹೇಳಿದ, ಅಲ್ಲದೇ ನೋವಿಗೆ ಇಂಜೆಕ್ಷನ್ ಕೊಡ್ತೀನಿ, ಅಂಥ ಸಿರಿಂಜ್ ತೆಗೆದುಕೊಳ್ಳಲು ಮುಂದಾದ, ಆಗ ಈತನ ಸಹವಾಸ ಬೇಡ ಅಂತ ಕೇವಲ ಮಾತ್ರೆ ಬರೆದುಕೊಡಿ ಸಾಕು ಅಂದ್ವಿ, ಅಲ್ಲದೇ ಬೇರೆ ವೈದ್ಯರ ಸಲಹೆಯನ್ನೂ ಈತನೇ ಬರೆದು ಕೊಡುತ್ತಾನೆ. ನಕಲಿ ವೈದ್ಯನು ಎಲ್ಲದಕ್ಕೂ ಸ್ಟಿರಾಯ್ಡ್ ಕೊಡುತ್ತಾನೆ ಎನ್ನುವ ಆರೋಪವು ಇವನ ಮೇಲಿದೆ. ಈ ಕುರಿತು ಆರೋಗ್ಯ ಸಚಿವರಾದ ಶಿವಾನಂದ ಪಾಟೀಲರು ಈತನ ವಿರುದ್ಧ ಕ್ರಮ ತೆಗೆದುಕೊಳ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ದಾವಣಗೆರೆ: ಕಾನೂನು ಬಾಹಿರವಾಗಿ ಹಾಗೂ ಅವೈಜ್ಞಾನಿಕವಾಗಿ ಮೆಡಿಕಲ್ ತ್ಯಾಜ್ಯವನ್ನು ಸಂಸ್ಕರಣೆ ಮಾಡಿದ್ದಕ್ಕೆ ಆರೋಗ್ಯ ಇಲಾಖೆ ನಗರದಲ್ಲಿ ದಾಳಿ ನಡೆಸಿ ಕೆಲವು ಕ್ಲಿನಿಕ್‍ಗಳಿಗೆ ಬೀಗ ಜಡಿದಿದೆ.
ಖಾಸಗಿ ಕ್ಲಿನಿಕ್ ನಡೆಸುವವರು ಅವೈಜ್ಞಾನಿಕವಾಗಿ ಮೆಡಿಕಲ್ ವೇಸ್ಟ್ ಅನ್ನು ಬೇರ್ಪಡಿಸುವುದು ಅಲ್ಲದೇ ಆ ತ್ಯಾಜ್ಯಗಳನ್ನು ರಸ್ತೆಯ ಪಕ್ಕದಲ್ಲಿ ಹಾಕಿ ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದ್ದರು. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಆರೋಗ್ಯ ಇಲಾಖೆಗೆ ದೂರು ನೀಡಿದ್ದರು.
ವ್ಯಾಪಕವಾಗಿ ದೂರು ದಾಖಲಾದ ಹಿನ್ನೆಲೆಯಲ್ಲಿ ನಗರದ ಪಿ.ಜೆ.ಬಡಾವಣೆಯಲ್ಲಿ ಡಿಹೆಚ್‍ಓ ತ್ರಿಪುಲಾಂಭಾ ಹಾಗೂ ನರ್ಸಿಂಗ್ ಹೋಂ ಅಸೋಸಿಯೇಷನ್ ಅಧ್ಯಕ್ಷ ನಾಗಪ್ರಕಾಶ್ ನೇತೃತ್ವದಲ್ಲಿ ಸುಮಾರು 15 ಕ್ಲಿನಿಕ್‍ಗಳ ಮೇಲೆ ಇಂದು ದಾಳಿ ನಡೆಸಲಾಗಿತ್ತು.
ದಾಳಿ ವೇಳೆ ಖಾಸಗಿ ಕ್ಲಿನಿಕ್ ಗಳಾದ ಗುರುಶ್ರೀ ಕ್ಲಿನಿಕ್, ಎಸ್ ಆರ್ ಎಲ್ ಡಯಾಕ್ನೋಸ್ಟಿಕ್ಸ್, ಗೋಕುಲ್ ಕ್ಲಿನಿಕ್ ಸೇರಿದಂತೆ ಹಲವು ಕ್ಲಿನಿಕ್ ಗಳಲ್ಲಿ ಅವೈಜ್ಞಾನಿಕವಾಗಿ ಮೆಡಿಕಲ್ ವೇಸ್ಟ್ ವಿಲೇವಾರಿ ಕಂಡು ಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ ಗಳ ಪರವಾನಿಗೆ ರದ್ದುಗೊಳಿಸಿ, ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದಾರೆ.