Tag: Climate change

  • ಏನಿದು ಇಂಗಾಲ ಟ್ಯಾಕ್ಸ್‌? – ಪ್ರತಿ ಟನ್‌ಗೆ 100 ಡಾಲರ್‌ – ಯಾವಾಗಿಂದ ಜಾರಿ?

    ಏನಿದು ಇಂಗಾಲ ಟ್ಯಾಕ್ಸ್‌? – ಪ್ರತಿ ಟನ್‌ಗೆ 100 ಡಾಲರ್‌ – ಯಾವಾಗಿಂದ ಜಾರಿ?

    ಅಂತಾರಾಷ್ಟ್ರೀಯ ಕಡಲ ಸಂಸ್ಥೆ (IMO) ಹಡಗುಗಳು ಹೊರಸೂಸುವ ಇಂಗಾಲಕ್ಕೆ ತೆರಿಗೆ (Global Carbon Tax) ವಿಧಿಸಲು ಮುಂದಾಗಿದೆ. ಹಸಿರುಮನೆ (Greenhouse) ಪರಿಣಾಮ ಉಂಟು ಮಾಡುವ ಅನಿಲ (GHG) ಹೊರಸೂಸುವಿಕೆಯ ಮೇಲೆ ಇದು ಮೊದಲ ಜಾಗತಿಕ ತೆರಿಗೆಯಾಗಿದೆ. ಜಾಗತಿಕ ಹೊರಸೂಸುವಿಕೆಯಲ್ಲಿ ಸಮುದ್ರ ವಲಯದ 3% ಪಾಲನ್ನು ತಡೆಯುವ ಸಲುವಾಗಿ IMO ಈ ನಿರ್ಧಾರ ಮಾಡಿದೆ.

    ಈ ತೆರಿಗೆ ಯಾವಾಗಿಂದ ಜಾರಿ?
    ಸರಕುಗಳನ್ನು ಸಾಗಿಸುವ ದೊಡ್ಡ ಹಡಗುಗಳು ಅಪಾರ ಪ್ರಮಾಣದ ಇಂಧನ ಬಳಕೆ ಮಾಡುತ್ತವೆ. ಇದರಿಂದ ಕಳೆದ ದಶಕದಲ್ಲಿ ಹಡಗು ಹೊರಸೂಸುವಿಕೆ ಹೆಚ್ಚಾಗಿದ್ದು, ಇದನ್ನು ನಿಯಂತ್ರಿಸಲು ಇಂಗಾಲ ಟ್ಯಾಕ್ಸ್‌ ವಿಧಿಸಲು IMO ಮುಂದಾಗಿದೆ. 2026ರ ಆರಂಭದಲ್ಲಿ ಇಂಗಾಲ ಟ್ಯಾಕ್ಸ್‌ ಅನುಷ್ಠಾನದ ವಿವರಗಳನ್ನು ಪರಿಶೀಲಿಸಿ, ಅಕ್ಟೋಬರ್ ವೇಳೆಗೆ ತಿದ್ದುಪಡಿಗಳನ್ನು ಅಂತಿಮಗೊಳಿಸಲು IMO ಯೋಜನೆ ರೂಪಿಸಿಕೊಂಡಿದೆ.

    ಅಂದ ಹಾಗೆ ಈ ಟ್ಯಾಕ್ಸ್‌ 2028ರಿಂದ ಜಾರಿಗೆ ಬರಲಿದೆ. ಇದರಿಂದ 2030ರ ವೇಳೆಗೆ 40 ಶತಕೋಟಿ ಡಾಲರ್ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಈ ತೆರಿಗೆಯ ಹಣವನ್ನು ಇಂಗಾಲ ಹಾಗೂ ಇನ್ನಿತರೆ ಹಸಿರುಮನೆ ಪರಿಣಾಮ ಉಂಟು ಮಾಡುವ ಅನಿಲಗಳ ಕಡಿಮೆ ಮಾಡುವ ಕ್ರಮಕ್ಕೆ ಬಳಕೆ ಮಾಡಲಾಗುತ್ತದೆ. ಈ ನಿಯಮ ಜಾರಿಯಾದರೆ 2030ರ ವೇಳೆಗೆ ಹಡಗುಗಳ ಹೊರಸೂಸುವಿಕೆಯನ್ನು 10% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು IMO ಹೇಳಿಕೊಂಡಿದೆ.

    ಹಡಗುಗಳ ಕಾರ್ಯ ವಿಧಾನ, ಹೊರಸೂಸುವಿಕೆಯ ತೀವ್ರತೆಯ ಆಧಾರದ ಮೇಲೆ ತೆರಿಗೆ
    ಸಾಂಪ್ರದಾಯಿಕ ಇಂಧನವನ್ನು ಬಳಸುವ ಹಡಗುಗಳು ಹೊರಸೂಸುಸುವ ಅತ್ಯಂತ ಮಾಲಿನ್ಯಕಾರಕ ಅನಿಲಗಳ ಪ್ರತಿ ಟನ್‌ಗೆ 380 ಡಾಲರ್ ಮತ್ತು ಮಿತಿ ಮೀರಿದ ಇಂಗಾಲ ಹೊರಸೂಸುವಿಕೆಯ ಪ್ರತಿ ಟನ್‌ಗೆ 100 ಡಾಲರ್‌ ತೆರಿಗೆ ವಿಧಿಸಲಾಗುತ್ತದೆ.

    ತೆರಿಗೆ ನೀತಿಯ ಪ್ರಮುಖ ತಾಂತ್ರಿಕ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಈ ನೀತಿಯನ್ನು ಅಕ್ಟೋಬರ್ 2025 ರಲ್ಲಿ ಔಪಚಾರಿಕವಾಗಿ ಅಂಗೀಕರಿಸುವ ನಿರೀಕ್ಷೆಯಿದೆ.

    ಯಾಕೆ ಈ ತೆರಿಗೆ ಅಗತ್ಯ?
    ಹೆಚ್ಚುತ್ತಿರುವ ಮಾಲಿನ್ಯದಿಂದ ಹಸಿರುಮನೆ ಪರಿಣಾಮವನ್ನು ಭೂಮಿ ಎದುರಿಸುತ್ತಿದೆ. ಇದರ ಪರಿಣಾಮವಾಗಿ ಹವಾಮಾನದ ಅಪಾಯಗಳನ್ನು ಸಣ್ಣ ದ್ವೀಪ ರಾಷ್ಟ್ರಗಳು ಎದುರಿಸುತ್ತಿವೆ. ಇಂತಹ ದ್ವೀಪ ರಾಷ್ಟ್ರಗಳ ರಕ್ಷಣೆಗೆ ಈ ಟ್ಯಾಕ್ಸ್‌ ಅಗತ್ಯವಾಗಿದ್ದು, ಸಂಗ್ರಹಗೊಂಡ ತೆರಿಗೆಯನ್ನು ಹವಾಮಾನ ಸಂಬಂಧಿತ ಅಪಾಯಗಳನ್ನು ಎದುರಿಸುತ್ತಿರುವ ಪುಟ್ಟ ರಾಷ್ಟ್ರಗಳ ಸಹಾಯಕ್ಕೆ ಒದಗಿಸಲು IMO ನಿರ್ಧರಿಸಿದೆ.

    ಹಡಗಲ್ಲಿ 12 ಶತಕೋಟಿ ಟನ್ ಸರಕು ಸಾಗಾಟ!
    ಜಾಗತಿಕ ವ್ಯಾಪಾರದಲ್ಲಿ ಹಡಗುಗಳು ಪ್ರಮುಖ ಪಾತ್ರವಹಿಸುತ್ತವೆ. ಹಡಗುಗಳನ್ನು ಬಳಸಿ ವಾರ್ಷಿಕವಾಗಿ ಸಮುದ್ರ ಮಾರ್ಗದಲ್ಲಿ 12 ಶತಕೋಟಿ ಟನ್ ಸರಕು ಸಾಗಾಟ ಮಾಡಲಾಗುತ್ತದೆ. ಇದರಿಂದ ಸುಮಾರು 1000 ಮೆಟ್ರಿಕ್‌ ಟನ್‌ ಪ್ರಮಾಣದ ಇಂಗಾಲ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.

    ಇಂಗಾಲ ಟ್ಯಾಕ್ಸ್‌ಗೆ ಭಾರತದ ಬೆಂಬಲ
    ಭಾರತವು ಹಡಗು ಸಾಗಣೆಯ ಮೇಲಿನ ಇಂಗಾಲದ ತೆರಿಗೆಯ ಪರವಾಗಿ ಮತ ಚಲಾಯಿಸಿದೆ. ಈ ಮೂಲಕ ಪರ್ಯಾಯ ಇಂಧನದ ವ್ಯವಸ್ಥೆಯನ್ನು ಭಾರತ ಬೆಂಬಲಿಸಿದೆ. ಇತರ 62 ದೇಶಗಳು ಸಹ ಈ ತೆರಿಗೆಯ ಪರವಾಗಿ ಮತ ಚಲಾಯಿಸಿವೆ. ಅಂತರರಾಷ್ಟ್ರೀಯ ಹವಾಮಾನ ನೀತಿಗೆ ಈ ಒಪ್ಪಂದವ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತಿದೆ. ಆದರೆ ಈ ನೀತಿ ಅಭಿವೃದ್ಧಿಶೀಲ ರಾಷ್ಟ್ರಗಳ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ.

    ಸೌದಿ ಅರೇಬಿಯಾ, ಯುಎಇ, ರಷ್ಯಾ ಮತ್ತು ವೆನೆಜುವೆಲಾ ಸೇರಿದಂತೆ 16 ತೈಲ-ಸಮೃದ್ಧ ರಾಷ್ಟ್ರಗಳು ಈ ತೆರಿಗೆ ನೀತಿಯನ್ನು ವಿರೋಧಿಸುತ್ತಿವೆ. ಅಮೆರಿಕದ ನಿಯೋಗವು ಮಾತುಕತೆಗಳಲ್ಲಿ ಸಹ ಭಾಗವಹಿಸಿಲ್ಲ. ಅಲ್ಲದೇ ಮತದಾನದ ಸಮಯದಲ್ಲಿ ಗೈರಾಗಿತ್ತು. ಇನ್ನೂ ಪೆಸಿಫಿಕ್, ಕೆರಿಬಿಯನ್, ಆಫ್ರಿಕಾ ಮತ್ತು ಮಧ್ಯ ಅಮೆರಿಕದಿಂದ ಬಂದ 60ಕ್ಕೂ ಹೆಚ್ಚು ದೇಶಗಳ ನಿಯೋಗ ಆದಾಯದ ಒಂದು ಪಾಲನ್ನು ಹವಾಮಾನ ಸುಧಾರಣೆಗೆ ಮೀಸಲಿಡಬೇಕು ಎಂದು ಒತ್ತಾಯಿಸಿದ್ದವು.

    ಹಡಗು ಉದ್ಯಮ ಇಂಗಾಲದ ಹೊರಸೂಸುವಿಕೆಯ 3% ರಷ್ಟನ್ನು ಹೊಂದಿದೆ. ಹಡಗುಗಳ ಹೊರಸೂಸುವಿಕೆ ಪ್ಯಾರಿಸ್ ಒಪ್ಪಂದದಲ್ಲಿ ಬರದೇ ಇರುವುದರಿಂದ ಈ ತೆರಿಗೆ ಮಹತ್ವವನ್ನು ಪಡೆದಿದೆ.

    ಏನಿದು ಪ್ಯಾರಿಸ್ ಹವಾಮಾನ ಒಪ್ಪಂದ?
    ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಸಲುವಾಗಿ ಹಲವು ದೇಶಗಳು ಒಪ್ಪಿಕೊಂಡು ಮಾಡಿಕೊಂಡ ಒಪ್ಪಂದವಿದು. 2015ರ ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸುಮಾರು 200ಕ್ಕೂ ಅಧಿಕ ದೇಶಗಳು ಒಗ್ಗೂಡಿ, ಒಪ್ಪಂದವನ್ನು ಅಂಗೀಕರಿಸಿದವು. 2016ರ ನವೆಂಬರ್ 4ರಂದು ಒಪ್ಪಂದವನ್ನು ಜಾರಿಗೆ ತರಲಾಯಿತು.

    ಜಾಗತಿಕ ತಾಪಮಾನವನ್ನು ಮುಂದಿನ 2050ರ ವೇಳೆಗೆ 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಗೆ, 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವುದು ಒಪ್ಪಂದದ ಗುರಿಯಾಗಿದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳುವುದು ಒಪ್ಪಂದದ ಆದ್ಯತೆಯಾಗಿದೆ. ಒಪ್ಪಂದದ ಪ್ರಕಾರ ಪ್ರತಿಯೊಂದು ದೇಶವು ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ನಿರ್ದಿಷ್ಟ ಗುರಿಯನ್ನು ಹೊಂದಿಸಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ಇದರ ಪರಿಶೀಲನೆ ನಡೆಸಬೇಕು. ಶ್ರೀಮಂತ ದೇಶಗಳು ಬಡ ದೇಶಗಳಿಗೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಮಾಡಲು ‘ಹವಾಮಾನ ಹಣಕಾಸು’ ಎಂದು ಕರೆಯಲಾಗುವ ಹಣಕಾಸು ಸಹಾಯವನ್ನು ಒದಗಿಸಬೇಕು ಎಂಬುದು ಒಪ್ಪಂದದ ನಿಯಮವಾಗಿದೆ. ಭಾರತ ಈ ಒಪ್ಪಂದಕ್ಕೆ ಬೆಂಬಲ ಸೂಚಿಸಿದ್ದು, ಅಮೆರಿಕ ಒಪ್ಪಂದದಿಂದ ಹಿಂದೆ ಸರಿದಿದೆ.

  • ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಹೆಚ್ಚಲಿದೆ – ನಾರಾಯಣಮೂರ್ತಿ ಆತಂಕ

    ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಹೆಚ್ಚಲಿದೆ – ನಾರಾಯಣಮೂರ್ತಿ ಆತಂಕ

    – ವಲಸೆ ತಡೆಗೆ ಕ್ರಮ ಕೈಗೊಳ್ಳಿ; ಸರ್ಕಾರಕ್ಕೆ ಸಲಹೆ

    ಪುಣೆ: ಹವಾಮಾನ ಬದಲಾವಣೆ (Climate Change) ಕಾರಣ ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ (Bengaluru) ದೊಡ್ಡ ಪ್ರಮಾಣದ ವಲಸೆ ಇರಲಿದೆ ಎಂದು ಇನ್ಫೋಸಿಸ್‌ (Infosys) ಸಂಸ್ಥಾಪಕ ನಾರಾಯಣಮೂರ್ತಿ (Narayana Murthy) ಆತಂಕವನ್ನು ಹೊರಹಾಕಿದ್ದಾರೆ.

    ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ವಲಸೆಗಳನ್ನು ತಪ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    ಭಾರತ ಸೇರಿ ಹಲವು ದೇಶಗಳಲ್ಲಿ ಇತ್ತೀಚಿಗೆ ದೊಡ್ಡ ಪ್ರಮಾಣದಲ್ಲಿ ಹವಾಮಾನ (Weather) ಬದಲಾಗುತ್ತಿದ್ದು ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ನೋಡುತ್ತಿದ್ದೇವೆ. ಮುಂದಿನ 2 ದಶಕಗಳಲ್ಲಿ ಕೆಲ ದೇಶಗಳು ಭಾರತದ ಕಡೆ ನೋಡುವ ಸಂಭವ ಇದೆ. ಬೆಂಗಳೂರು, ಹೈದರಾಬಾದ್, ಪುಣೆಗೆ ವಲಸೆ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

    ಟ್ರಾಫಿಕ್ ಸಮಸ್ಯೆ, ಮಾಲಿನ್ಯದ ಕಾರಣ ಈ ನಗರಗಳ ಸ್ಥಿತಿ ಹದಗೆಡಬಹುದು. ಹೀಗಾಗಿ ವಲಸೆ ತಡೆಗೆ ಸರ್ಕಾರಗಳು ಅಗತ್ಯ ಕ್ರಮ ತೆಗದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ನಾವು ಭಾರತದಲ್ಲಿ, ವಿಶೇಷವಾಗಿ ಕಾರ್ಪೊರೇಟ್ ಕಾರ್ಪೊರೇಟ್ ಜಗತ್ತು, ರಾಜಕಾರಣಿಗಳು ಮತ್ತು ಅಧಿಕಾರಿಗಳು ತಂಡದ ರೀತಿ ಒಟ್ಟಾಗಿ ಕೆಲಸ ಮಾಡಿದ್ದಲ್ಲಿ ಈ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

     

  • ಹಕ್ಕಿಗಳ ವಲಸೆಯಲ್ಲಿ ವಿಳಂಬ – ಜಾಗತಿಕ ತಾಪಮಾನ ಏರಿಕೆಯ ಪಾತ್ರವೇನು?

    ಹಕ್ಕಿಗಳ ವಲಸೆಯಲ್ಲಿ ವಿಳಂಬ – ಜಾಗತಿಕ ತಾಪಮಾನ ಏರಿಕೆಯ ಪಾತ್ರವೇನು?

    ಭಾರತ (India) ಜೀವವೈವಿಧ್ಯದ ತಾಣವಾಗಿದ್ದು, ವಿದೇಶಿ ಹಕ್ಕಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಇನ್ನೂ ಕರ್ನಾಟಕದಲ್ಲಿ ಗುರುತಿಸಲಾಗಿರುವ 530ಕ್ಕೂ ಹೆಚ್ಚಿನ ಪಕ್ಷಿ ಪ್ರಬೇಧಗಳಲ್ಲಿ ಸುಮಾರು 80ರಷ್ಟು ಪ್ರಬೇಧಗಳು ವಲಸೆ ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 

    ಯೂರೋಪ್, ಮಂಗೋಲಿಯಾ, ಸೈಬೀರಿಯಾ, ರಷ್ಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ ಮುಂತಾದ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬರುವ ಹಕ್ಕಿಗಳ (Migratory Birds) ಸಂಖ್ಯೆ ಹೆಚ್ಚು. ಈ ಹಕ್ಕಿಗಳೆಲ್ಲ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಬರುವ ವಲಸೆ ಹಕ್ಕಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೇ ವಲಸೆಯ ಅವಧಿ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ. 

    ಆಗಸ್ಟ್ 25 ರಂದು ಸುಮಾರು 30,000 ಪಕ್ಷಿ ವೀಕ್ಷಕರ ದತ್ತಾಂಶವನ್ನು ಆಧರಿಸಿ ಬಿಡುಗಡೆಯಾದ ವರದಿಯ ಪ್ರಕಾರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಿ ಪ್ರಭೇದಗಳು ಕ್ಷೀಣಿಸುತ್ತಿವೆ. ಮೌಲ್ಯಮಾಪನ ಮಾಡಲಾದ 942 ಪಕ್ಷಿ ಪ್ರಭೇದಗಳಲ್ಲಿ 142 ಪಕ್ಷಿಗಳು ಕ್ಷೀಣಿಸುತ್ತಿವೆ ಎಂದು ವರದಿಯಾಗಿದೆ. 

    ವಲಸೆ ಅಧ್ಯಯನ ಹೇಗೆ ಮಾಡಲಾಗುತ್ತದೆ?

    ವಲಸೆ ಹಕ್ಕಿಗಳ ಜೀವನಕ್ರಮವನ್ನು ಅಧ್ಯಯನ ಮಾಡಲು ವಿಶ್ವದಾದ್ಯಂತ ವಿಜ್ಞಾನಿಗಳು ನಿರಂತರ ಪ್ರಯತ್ನದಲ್ಲಿದ್ದಾರೆ. ವಿಶ್ವದ ಹಲವಾರು ವೈಜ್ಞಾನಿಕ ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆಗಳು ವಲಸೆ ಅಧ್ಯಯನಕ್ಕಾಗಿ ಸಂಶೋಧನಾ ಉಪಕರಣಗಳನ್ನು ಅಭಿವೃದ್ಧಿ ಪಡಿಸಿವೆ.

    ಇತ್ತೀಚಿನ ವರ್ಷಗಳಲ್ಲಿ ವಲಸೆ ಅಧ್ಯಯನಕ್ಕೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಅದರಲ್ಲಿ ಪ್ರಮುಖವಾದದ್ದು ಉಪಗ್ರಹ-ಆಧಾರಿತ ರೇಡಿಯೋ ಟೆಲಿಮೆಟ್ರಿ. ಇದು ಹಕ್ಕಿಗಳ ಗಾತ್ರ, ಆಕಾರ, ಜೀವನ ಶೈಲಿ, ಹಾರುವ ರೀತಿ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ನಡೆಸುವ ಅಧ್ಯಯನಕ್ಕೆ ಅನುಕೂಲವಾಗಿದೆ.  

    ಹಕ್ಕಿಗಳ ಅಧ್ಯಯನಕ್ಕೆ ಕಾಲಿನಲ್ಲಿ ಅಳವಡಿಸುವ ಕಾಲುಂಗುರದಂತಹ ಮೈಕ್ರೋಚಿಪ್‌, ಕುತ್ತಿಗೆಯಲ್ಲಿ ಅಳವಡಿಸುವ ಪಟ್ಟಿ ಮತ್ತು ಬೆನ್ನಮೇಲೆ ಅಳವಡಿಸುವ ಪುಟ್ಟ ಕ್ಯಾಮೆರಾ ಒಳಗೊಂಡ ಉಪಕರಣಗಳು ಅಭಿವೃದ್ಧಿಗೊಂಡಿವೆ. ಉಪಗ್ರಹಗಳ ಮೂಲಕ ಹಕ್ಕಿಯ ಚಲನವಲನಗಳ ಮಾಹಿತಿ ಪ್ರತಿಕ್ಷಣ ಸಿಗುವಂತಹ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಅಧುನಿಕ ಕಂಪ್ಯೂಟರ್‌ಗಳನ್ನು ಬಳಸಿ ಹಕ್ಕಿಯ ವಲಸೆಯನ್ನು ಅಭ್ಯಸಿಸಲಾಗುತ್ತಿದೆ. ಭಾರತದಲ್ಲಿ ಉಪಗ್ರಹ ಆಧಾರಿತ ರೇಡಿಯೋ ಟೆಲಿಮೆಟ್ರಿ ವಿಧಾನವನ್ನು ಉಪಯೋಗಿಸಿ ನಡೆಸುವ ಅಧ್ಯಯನ ಬಹಳ ಕಡಿಮೆ. 

    ವಲಸೆ ಬರುವ ಹಕ್ಕಿಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು? 

    ಹವಾಮಾನ ವೈಪರೀತ್ಯ (Climate Change), ಭೂ ತಾಪಮಾನ ಏರಿಕೆ. ಮನುಷ್ಯರನ್ನೊಳಗೊಂಡಂತೆ ಬೇಟೆಗಾರ ಪ್ರಾಣಿಗಳು, ಆವಾಸ ಸ್ಥಾನಗಳ ಕೊರತೆ, ಆಹಾರದ ಕೊರತೆ, ಕೃಷಿಭೂಮಿ ಮತ್ತು ಕಾಡನ್ನು ನಾಶ ಮಾಡಿ ನಗರೀಕರಣ, ಕೈಗಾರಿಕೀಕರಣ, ವಲಸೆ ಸಮಯದಲ್ಲಿ ಕೆರೆಗಳಲ್ಲಿ ಮೀನುಗಾರಿಕೆಯಿಂದ ಆಗುವ ತೊಂದರೆಗಳಿಂದ ವಲಸೆ ಬರುವ ಹಕ್ಕಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. 

    ಸಾಮಾನ್ಯವಾಗಿ 80ಕ್ಕೂ ಹೆಚ್ಚು ಜಾತಿಯ ವಲಸೆ ಹಕ್ಕಿಗಳು ಅಕ್ಟೋಬರ್ ವೇಳೆಗೆ  ದೆಹಲಿ ಎನ್‌ಸಿಆರ್ ಪ್ರದೇಶದ ಜೌಗು ಪ್ರದೇಶಗಳಿಗೆ ಈ ಪ್ರದೇಶಕ್ಕೆ ಆಗಮಿಸುತ್ತವೆ. ಸುಮಾರು 40 ಜಾತಿಯ ವಲಸಿಗ ಹಕ್ಕಿಗಳು ಈ ಪ್ರದೇಶದಲ್ಲಿ ತಂಗುತ್ತವೆ. ಆದರೆ ವಾತಾವರಣದ ಬದಲಾವಣೆಯಿಂದ ವಲಸೆ ಹಕ್ಕಿಗಳು ಬರುವುದು ವಿಳಂಬವಾಗುತ್ತಿದೆ. ನವೆಂಬರ್‌ನಲ್ಲೂ ಸಹ ಈ ಜಾಗ ಸಾಕಷ್ಟು ಬೆಚ್ಚಗಿರುತ್ತದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇದು ವಲಸೆ ಹಕ್ಕಿಗಳ ಮೇಲೆ ಪ್ರಭಾವ ಬೀರಿದೆ.

    ಕರ್ನಾಟಕದ ವಲಸೆ ಹಕ್ಕಿಗಳ ತಾಣ

    ರಂಗನತಿಟ್ಟು, ಗುಡವಿ, ಅಂಕಸಮುದ್ರ ಪಕ್ಷಿ ಧಾಮಗಳು, ಹಗರಿಬೊಮ್ಮನ ಹಳ್ಳಿಯ ತುಂಗಭದ್ರಾ, ಕಬನಿ, ಅಲಮಟ್ಟಿ ಹಿನ್ನೀರು ಪ್ರದೇಶಗಳು, ಮಂಗಳೂರು, ಉಡುಪಿ, ಮಲ್ಪೆ, ಕಾರವಾರ ಸಮುದ್ರ ತೀರಗಳು ಅಲ್ಲದೇ ಮೈಸೂರು, ದಾವಣಗೆರೆ, ತುಮಕೂರು, ಬೆಂಗಳೂರಿನ ಕೆರೆಗಳಲ್ಲಿ ವಲಸೆ ಹಕ್ಕಿಗಳು ಹೆಚ್ಚಾಗಿ ಕಂಡುಬರುತ್ತವೆ.

     

    ಕರ್ನಾಟಕದಲ್ಲಿ ದಾಖಲಾಗಿರುವ ವಲಸೆ ಹಕ್ಕಿಗಳೆಂದರೆ ಮಂಗೋಲಿಯಾದ ಪಟ್ಟೆ ಹೆಬ್ಬಾತು, ಯೂರೋಪಿನ ಉಲಿಯಕ್ಕಿಗಳು, ಕಂದು ಬಾತು. ನಾಮದ ಬಾತು. ಬಿಳಿಹುಬ್ಬಿನ ಬಾತು, ಚಲುಕ ಬಾತು, ವಿವಿಧ ಬಗೆಯ ಗೊರವಗಳು, ರಷ್ಯಾದ ಉಲ್ಲಂಕಿಗಳು, ಸೈಬೀರಿಯಾದ ಕಲ್ಲುಚಟಕ ಹಕ್ಕಿ, ಉತ್ತರ ಭಾರತದ ನವರಂಗ, ವಿವಿಧ ನೊಣಹಿಡುಕಗಳು, ಹೆಜ್ಜಾರ್ಲೆ ಮುಂತಾದ ಹಕ್ಕಿಗಳು ಕಂಡು ಬರುತ್ತವೆ.

    ವಲಸೆ ಹಕ್ಕಿಗಳಿಗೆ ದಿಕ್ಕು, ಸ್ಥಳ ಗುರುತಿಸೋಕೆ ಇದೆ ಸೂಪರ್‌ ಪವರ್‌!

    ಹಕ್ಕಿಗಳು ನಕ್ಷತ್ರಗಳು ಕಾಣುವ ದಿಕ್ಕು ಮತ್ತು ಸಮಯವನ್ನು ಅಂದಾಜಿಸಿ ಹಕ್ಕಿಗಳು ಸಂಚರಿಸುತ್ತವೆ. ಕೆರೆ, ನದಿ, ಗುಡ್ಡ, ಬೆಟ್ಟ, ಸಮುದ್ರ ಮುಂತಾದವುಗಳನ್ನು ನೋಡಿ ತಮ್ಮ ಕಣ್ಣಿನ ಅಥವಾ ಮೂಗಿನ ಬುಡದಲ್ಲಿ ವಿಶೇಷವಾದ ಮ್ಯಾಗ್ನಟೈಟ್ ಎಂಬ ಕಬ್ಬಿಣದ ಅಂಶವಿರುವ ಪ್ರೊಟೀನ್ ಅನ್ನು ದಿಕ್ಕೂಚಿಯಂತೆ ಬಳಸಿ ಭೂಮಿಯ ಆಯಸ್ಕಾಂತ ಶಕ್ತಿಯನ್ನು ಗುರುತಿಸಿ ತಾವು ಕ್ರಮಿಸುವ ದಿಕ್ಕನ್ನು ನಿರ್ಧರಿಸುತ್ತವೆ. 

    ಒಡಿಶಾದ ಪ್ರಮುಖ ಪಕ್ಷಿಧಾಮಗಳಿಗೆ ಬಂದ ವಲಸೆ ಹಕ್ಕಿಗಳ ಅಂಕಿ ಅಂಶ

    ಚಿಲಿಕಾ

    2024 – 189 ಜಾತಿಗಳ 11,37,759

    2023 – 1,844 ಜಾತಿಗಳು 11,31,929

    2021-22 – 107 ಜಾತಿಗಳ 10.74 ಲಕ್ಷ

    2020-21 – 111 ಜಾತಿಗಳ 12.04 ಲಕ್ಷ

    2019-20 – 109 ಜಾತಿಗಳ 10.71 ಲಕ್ಷ

    2018-19 – 105 ಜಾತಿಗಳ 10.21 ಲಕ್ಷ

    2017-18 – 95 ಜಾತಿಗಳ 8.68 ಲಕ್ಷ

    2016-17 – 100 ಜಾತಿಗಳ 9.24 ಲಕ್ಷ

    ಭೀತರ್ಕನಿಕಾ 

    2024 – 13,0123 ಪಕ್ಷಿಗಳು

    2023 – 123867

    2021-22 – 144 ಜಾತಿಗಳ 1.38 ಲಕ್ಷ

    2020-21 – 121 ಜಾತಿಗಳಲ್ಲಿ 1.36 ಲಕ್ಷ

    2019-20 – 105 ಜಾತಿಗಳಲ್ಲಿ 1.18 ಲಕ್ಷ

    ಹಿರಾಕುಡ್‌

    2021-22 – 104 ಜಾತಿಗಳ 2.08 ಲಕ್ಷ

    2020-21 – 41 ಜಾತಿಗಳ 1.03 ಲಕ್ಷ

    2019-20 – 93 ಜಾತಿಗಳ 0.98 ಲಕ್ಷ

  • ಭಾರತದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಯಶಸ್ವಿ ಉಡಾವಣೆ

    ಭಾರತದ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ ಯಶಸ್ವಿ ಉಡಾವಣೆ

    – ಜಾಗತಿಕ ತಾಪಮಾನ, ಹವಾಮಾನ ಬದಲಾವಣೆ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸಹಕಾರಿ

    ಚೆನ್ನೈ: ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಕುರಿತು ದತ್ತಾಂಶ ಸಂಗ್ರಹಿಸಲು ಭಾರತವು ತನ್ನ ಮೊದಲ ಮರುಬಳಕೆ ಮಾಡಬಹುದಾದ ಹೈಬ್ರಿಡ್ ರಾಕೆಟ್ ‘RHUMI-1’ (Hybrid Rocket ‘RHUMI-1) ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

    ಶನಿವಾರ ಚೆನ್ನೈನ ತಿರುವಿದಂಧೈನಿಂದ ರಾಕೆಟ್‌ ಉಡಾವಣೆ ಮಾಡಲಾಯಿತು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಸಾಧನೆಗೆ ಇದು ಮತ್ತೊಂದು ಗರಿಯಾಗಿದೆ. ಇದನ್ನೂ ಓದಿ: ಅರ್ಹತೆ ಹೊಂದಿರದ ಸಿಬ್ಬಂದಿ ಬಳಕೆ – ಏರ್ ಇಂಡಿಯಾಗೆ 90 ಲಕ್ಷ ರೂ. ದಂಡ

    ಮಾರ್ಟಿನ್ ಗ್ರೂಪ್‌ನೊಂದಿಗೆ ತಮಿಳುನಾಡು ಮೂಲದ ಸ್ಟಾರ್ಟ್-ಅಪ್ ಸ್ಪೇಸ್ ಝೋನ್ ಇಂಡಿಯಾ ಅಭಿವೃದ್ಧಿಪಡಿಸಿದ ಮೂರು ಕ್ಯೂಬ್ ಉಪಗ್ರಹಗಳು ಮತ್ತು 50 PICO ಉಪಗ್ರಹಗಳನ್ನು ಹೊತ್ತ ರಾಕೆಟ್ ಅನ್ನು ಮೊಬೈಲ್ ಲಾಂಚರ್ ಬಳಸಿ ಉಪಕಕ್ಷೆಯ ಪಥಕ್ಕೆ ಉಡಾವಣೆ ಮಾಡಲಾಯಿತು.

    ಈ ಉಪಗ್ರಹಗಳು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಸಂಶೋಧನಾ ಉದ್ದೇಶಗಳಿಗಾಗಿ ಡೇಟಾ ಮತ್ತು ಮಾಹಿತಿಯನ್ನು ಸಂಗ್ರಹಿಸುತ್ತವೆ. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

    RHUMI-1 ರಾಕೆಟ್ ದಕ್ಷತೆಯನ್ನು ಸುಧಾರಿಸಲು ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ದ್ರವ ಮತ್ತು ಘನ ಇಂಧನ ಪ್ರೊಪೆಲ್ಲಂಟ್ ಸಿಸ್ಟಮ್‌ಗಳು ಅನುಕೂಲಕರವಾಗಿವೆ.

    ISRO ಉಪಗ್ರಹ ಕೇಂದ್ರದ (ISAC) ಮಾಜಿ ನಿರ್ದೇಶಕ ಡಾ. ಮೈಲ್ಸ್ವಾಮಿ ಅಣ್ಣಾದೊರೈ ಅವರ ಮಾರ್ಗದರ್ಶನದಲ್ಲಿ ಸ್ಪೇಸ್‌ ಝೋನ್ ಸಂಸ್ಥಾಪಕ ಆನಂದ್ ಮೇಗಲಿಂಗಂ ಅವರು RHUMI ಮಿಷನ್ ಅನ್ನು ಮುನ್ನಡೆಸಿದ್ದಾರೆ.

    ಸ್ಪೇಸ್ ಝೋನ್ ಇಂಡಿಯಾ ಎಂಬುದು ಚೆನ್ನೈನಲ್ಲಿರುವ ಏರೋ-ಟೆಕ್ನಾಲಜಿ ಕಂಪನಿಯಾಗಿದ್ದು, ಬಾಹ್ಯಾಕಾಶ ಉದ್ಯಮದಲ್ಲಿ ಕಡಿಮೆ-ವೆಚ್ಚದ, ದೀರ್ಘಾವಧಿಯ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.

  • ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

    ಅಳಿವಿನಂಚಿಗೆ ಸಾಗುತ್ತಿದ್ಯಾ ಭೂಮಿ? – ಕೆಂಡದಂತಾದ ಧರಣಿಗೆ ‘ರೆಡ್‌ ಅಲರ್ಟ್‌’; ಹವಾಮಾನ ತಜ್ಞರ ಆತಂಕ!

    – 2014-2023 ವರದಿ ಹೇಳೋದೇನು? – ತಜ್ಞರ ಆತಂಕವೇನು?

    ಮನುಕುನ ಉಳಿಯಬೇಕು ಎಂದಿದ್ದರೆ, ಇನ್ನೂ 100 ವರ್ಷಗಳಲ್ಲಿ ಭೂಮಿ ಬಿಟ್ಟು ಹೊರಡಿ ಎಂದು ವಿಶ್ವವಿಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಆರು ವರ್ಷಗಳ ಹಿಂದೆ ಎಚ್ಚರಿಕೆ ನೀಡಿದ್ದರು. ಅವರ ಮಾತು ನಿಜ ಎನ್ನುವಂತಹ ಒಂದೊಂದು ಸನ್ನಿವೇಶಗಳು ಈ ಭೂಮಿ ಮೇಲೆ ಜರುಗುತ್ತಿವೆ. ಜನಸಂಖ್ಯಾ ಸ್ಫೋಟ, ಭೂಮಿ ಬಿಸಿಯಾಗುತ್ತಿರುವುದು ಮತ್ತು ಮನುಕುಲದ ಭವಿಷ್ಯದ ಬಗ್ಗೆ ಹಾಕಿಂಗ್ ಎಚ್ಚರಿಕೆ ಗಂಟೆ ಬಾರಿಸುತ್ತಲೇ ಇದ್ದರು. ಇದೇ ಹೊತ್ತಿನಲ್ಲಿ ಭೂಮಿ ಕುದಿಯುತ್ತಿರುವ ಸಂಬಂಧ ವರದಿಯೊಂದು ಬಿಡುಗಡೆಯಾಗಿದ್ದು, ಆತಂಕ ಮೂಡಿಸಿದೆ.

    ಮಾನವನ ದುರಾಸೆಗೆ ಭೂಮಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ. ಕಳೆದ ವರ್ಷದ ತಾಪಮಾನವು, ಜಾಗತಿಕ ಶಾಖದ ದಾಖಲೆಯನ್ನೇ ಬ್ರೇಕ್ ಮಾಡಿದೆ ಎಂಬ ಆತಂಕಕಾರಿ ವಿಚಾರವನ್ನು ಯುಎನ್ ಈಚೆಗೆ ದೃಢಪಡಿಸಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆಯು ತನ್ನ ವಾರ್ಷಿಕ ಹವಾಮಾನ ವರದಿಯನ್ನು ಬಿಡುಗಡೆ ಮಾಡಿತು. ‘2023’ ಇದುವರೆಗೆ ದಾಖಲಾದ ಅತ್ಯಂತ ಬಿಸಿಯಾದ ವರ್ಷ ಎಂದು ತಿಳಿಸಿದೆ.

    ಅಳಿವಿನಂಚಿನಲ್ಲಿದೆ ಭೂಮಿ
    ಶಾಖದ ಅಲೆಗಳು ಸಾಗರಗಳಲ್ಲಿ ಹೆಚ್ಚುತ್ತಿದೆ. ಹಿಮನದಿಗಳು ದಾಖಲೆಯ ಪ್ರಮಾಣದಲ್ಲಿ ಕರಗಿ ಹರಿಯುತ್ತಿವೆ. ನಮ್ಮ ಭೂಮಿ ಅಳವಿನಂಚಿನಲ್ಲಿದೆ ಎಂದು ಯುಎನ್ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಭೂಮಿಯು ಸಂಕಷ್ಟದ ಕರೆಯನ್ನು ನೀಡುತ್ತಿದೆ. ಪಳೆಯುಳಿಕೆ ಇಂಧನ ಮಾಲಿನ್ಯವು ಹವಾಮಾನ ಅವ್ಯವಸ್ಥೆಗೆ ಕಾರಣವಾಗಿದೆ. ಬದಲಾವಣೆಗಳು ವೇಗಗೊಳ್ಳುತ್ತಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಅಪಾಯಕಾರಿ 1.5 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಹತ್ತಿರ
    ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ 2015 ರಲ್ಲಿ ‘ಪ್ಯಾರಿಸ್ ಒಪ್ಪಂದ’ವಾಗಿತ್ತು. ಅದರಲ್ಲಿ ಹೇಳಿರುವಂತೆ 1850 ರಿಂದ 1900 ರ ವರೆಗಿನ ಅವಧಿಯಲ್ಲಿ ದಾಖಲಾದ ತಾಪಮಾನದ ಸರಾಸರಿಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿತ್ತು. ಇಷ್ಟಾದರೂ, ಕನಿಷ್ಠಪಕ್ಷ 1.5 ಡಿಗ್ರಿ ಸೆಲ್ಸಿಯನಷ್ಟು ಕಡಿಮೆ ಮಾಡಬೇಕು ಎಂಬ ಆಶಯ ಹೊಂದಲಾಗಿತ್ತು. ಆದರೆ ಈಗಿನ ಹವಾಮಾನ ಬದಲಾವಣೆ ಗಮನಿಸಿದರೆ, 1.5 ಡಿಗ್ರಿಗೆ ಅಪಾಯಕಾರಿ ಹತ್ತಿರದಲ್ಲಿದೆ. ಕಳೆದ ವರ್ಷ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ ಸರಾಸರಿ ಮೇಲ್ಮೈ ತಾಪಮಾನವು 1.45 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಡಬ್ಲ್ಯೂಎಂಒ ತಿಳಿಸಿದೆ. ಅಲ್ಲದೇ, ಪ್ಯಾರಿಸ್ ಒಪ್ಪಂದದ 1.5 ಡಿಗ್ರಿ ಸೆಲ್ಸಿಯಸ್ ಮಿತಿಗೆ ಭೂಮಿ ತಾಪಮಾನ ಯಾವಾಗಲೂ ಹತ್ತಿರ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

    ಭೂಮಿಗೆ ರೆಡ್ ಅಲರ್ಟ್
    ಹವಾಮಾನ ಬದಲಾವಣೆಯನ್ನು ಗಮನಿಸಿದರೆ ಈ ಭೂಮಿಗೆ ರೆಡ್ ಅಲರ್ಟ್ ಘೋಷಣೆಯಾದಂತೆ ಕಾಣುತ್ತಿದೆ ಎಂದು ಆಂಡ್ರಿಯಾ ಸೆಲೆಸ್ಟ್ ಸೌಲೊ ತಿಳಿಸಿದ್ದಾರೆ. ಹವಾಮಾನ ಬದಲಾವಣೆಯೂ ತಾಪಮಾನಕ್ಕಿಂತ ಹೆಚ್ಚು. 2023 ರಲ್ಲಿ ಸಮುದ್ರದ ಉಷ್ಣತೆ ಹೆಚ್ಚಳ, ಹಿಮನದಿ ಕರಗುವಿಕೆ ಮತ್ತು ಅಂಟಾರ್ಕ್ಟಿಕ್ ಸಮುದ್ರದಲ್ಲಿ ಕರಗುತ್ತಿರುವ ಮಂಜುಗಡ್ಡೆಯ ನಿರ್ದಿಷ್ಟ ಕಾಳಜಿಗೆ ಕಾರಣವಾಗಿದೆ ಎಂದಿದ್ದಾರೆ.

    ಕಳೆದ ವರ್ಷ ಸಮುದ್ರದ ಶಾಖದ ಅಲೆಗಳು ಜಾಗತಿಕ ಸಾಗರದ ಸುಮಾರು ಮೂರನೇ ಒಂದು ಭಾಗವನ್ನು ಆವರಿಸಿವೆ ಎಂಬ ವಿಚಾರ ಸಂಶೋಧನೆಯಿಂದ ಬಹಿರಂಗವಾಗಿದೆ. 2023 ರ ಅಂತ್ಯದ ವೇಳೆಗೆ ಸಮುದ್ರದ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಭಾಗವು ಶಾಖದ ಅಲೆ ಪರಿಣಾಮವನ್ನು ಅನುಭವಿಸಿದೆ. ಈ ಶಾಖದ ಅಲೆಗಳು ಸಮುದ್ರ ಪರಿಸರ ವ್ಯವಸ್ಥೆ ಮತ್ತು ಹವಳದ ಬಂಡೆಗಳ ಮೇಲೆ ಪರಿಣಾಮ ಬೀರುತ್ತಿವೆ. ವಿಶ್ವದಲ್ಲೇ ಪ್ರಮುಖ ಹಿಮನದಿಗಳಿರುವ ಪಶ್ಚಿಮ ಉತ್ತರ ಅಮೆರಿಕ ಮತ್ತು ಯೂರೋಪ್ ಎರಡರಲ್ಲೂ ತೀವ್ರವಾದ ಕರಗುವಿಕೆ ಉಂಟಾಗುತ್ತಿದೆ. ಆಲ್ಫೆನ್ಸ್ ಹಿಮನದಿಗಳು ಕಳೆದ 2 ವರ್ಷಗಳಲ್ಲಿ ಶೇ.10 ಕಳೆದುಕೊಂಡಿದೆ. ಅಂಟಾರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯು ದಾಖಲೆ ಪ್ರಮಾಣದಲ್ಲಿ ಕರಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಏರುತ್ತಿದೆ ಸಮುದ್ರ ಮಟ್ಟ
    ಭೂಮಿ ಮೇಲ್ಮೈನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ 1993 ರಿಂದ ಉಪಗ್ರಹಗಳು ಅಧ್ಯಯನ ಮಾಡುತ್ತಿವೆ. ಅದರ ದಾಖಲೆ ಪ್ರಕಾರ, ಹಿಮನದಿಗಳು ಕರಗುತ್ತಿವೆ. ಸಾಗರ ತಾಪಮಾನವೂ ಹೆಚ್ಚುತ್ತಿದೆ. ಈ ಬೆಳವಣಿಗೆಯಿಂದಾಗಿ ಸಮುದ್ರ ಮಟ್ಟ ಏರುತ್ತಿದೆ. ಕಳೆದ ದಶಕದಲ್ಲಿ (2014-2023) ಜಾಗತಿಕ ಸರಾಸರಿ ಸಮುದ್ರ ಮಟ್ಟ ಏರಿಕೆಯು, ಮೊದಲ ದಶಕದಲ್ಲಿನ ಉಪಗ್ರಹ ದಾಖಲೆಗಳ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಸಂಸ್ಥೆ ತಿಳಿಸಿದೆ.

    ಹವಾಮಾನ ಬದಲಾವಣೆಯು ಜಗತ್ತಿನಾದ್ಯಂತ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಒಂದೆಡೆ ಪ್ರವಾಹ ಮತ್ತೊಂದೆಡೆ ಬರ ಪರಿಸ್ಥಿತಿ ಕಾಣಿಸಿಕೊಳ್ಳುತ್ತಿದೆ. ಗುಳೆ ಹೋಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜೀವವೈವಿಧ್ಯ ನಶಿಸಿ ಹೋಗುತ್ತಿದೆ. ಆಹಾರ ಅಭದ್ರತೆ ಹೆಚ್ಚಾಗುತ್ತಿದೆ. ಹವಾಮಾನ ಬಿಕ್ಕಟ್ಟು ಮಾನವೀಯತೆ ಎದುರಿಸುತ್ತಿರುವ ಸವಾಲಾಗಿದೆ. ಅಸಮಾನತೆಯ ಬಿಕ್ಕಟ್ಟಿನೊಂದಿಗೆ ಇದು ನಿಕಟ ಸಂಬಂಧ ಹೊಂದಿದೆ.

    ಆಹಾರ ಬಿಕ್ಕಟ್ಟು
    ಪ್ರಪಂಚದಾದ್ಯಂತ ಜನರನ್ನು ತೀವ್ರವಾಗಿ ಆಹಾರ ಬಿಕ್ಕಟ್ಟು ಕಾಡುತ್ತಿದೆ. ಕೋವಿಡ್ ಸಾಂಕ್ರಾಮಿಕದ ಮೊದಲು ಆಹಾರ ಅಸುರಕ್ಷಿತ ಬಾಧಿತ ಜನರ ಸಂಖ್ಯೆಯು 14.90 ಕೋಟಿಯಷ್ಟಿತ್ತು. 2023 ರ ಕೊನೆಯಲ್ಲಿ ಅದು 33.03 ಕೋಟಿಗೆ ದ್ವಿಗುಣಗೊಂಡಿದೆ.

    ಭರವಸೆಯ ಬೆಳಕು
    ಹವಾಮಾನ ಬದಲಾವಣೆ ಎಫೆಕ್ಟ್‌ ತಗ್ಗಿಸಲು ಯುಎನ್‌ನ ಹವಾಮಾನ ಮತ್ತು ಹವಾಮಾನ ಏಜೆನ್ಸಿಯು ಭರವಸೆಯೊಂದನ್ನು ವ್ಯಕ್ತಪಡಿಸಿದೆ. ನವೀಕರಿಸಬಹುದಾದ ಶಕ್ತಿ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ. ಕಳೆದ ವರ್ಷ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಸೌರ, ಗಾಳಿ ಮತ್ತು ಜಲವಿದ್ಯುತ್‌ನಿಂದ 2022 ರಿಂದ ಸುಮಾರು 50% ನಷ್ಟು ಉತ್ಪಾದನೆಯು ಹೆಚ್ಚಾಗಿದೆ ಎಂದು ಡಬ್ಲ್ಯೂಎಂಒ ಮಾಹಿತಿ ನೀಡಿದೆ.

    ಕಾಲ ಮಿಂಚಿ ಹೋಗಿದೆಯೇ?
    ಭೂಮಿಯ ದೀರ್ಘಾವಧಿಯ ಉಷ್ಣತೆಯ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಮಿತಿಗಿಂತ ಕೆಳಗಿರಿಸಲು ಮತ್ತು ಹವಾಮಾನ ಅವ್ಯವಸ್ಥೆಯಿಂದ ಆಗುತ್ತಿರುವ ಪರಿಣಾಮವನ್ನು ತಪ್ಪಿಸಲು ಜಗತ್ತಿಗೆ ಇನ್ನೂ ಅವಕಾಶವಿದೆ ಎಂದು ಗುಟೆರಸ್ ಒತ್ತಿ ಹೇಳಿದ್ದಾರೆ. ಅದನ್ನು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ ಎಂದಿದ್ದಾರೆ.

  • 2023ರಲ್ಲಿ ಏಷ್ಯಾ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ : WMO ವರದಿ

    2023ರಲ್ಲಿ ಏಷ್ಯಾ ವಿಶ್ವದ ಅತ್ಯಂತ ವಿಪತ್ತು ಪೀಡಿತ ಪ್ರದೇಶ : WMO ವರದಿ

    2023ರಲ್ಲಿ ಏಷ್ಯಾ ಖಂಡದಲ್ಲಿ ಸಂಭವಿಸಿದ ಪ್ರವಾಹಗಳು ಮತ್ತು ಚಂಡಮಾರುತಗಳು ಹೆಚ್ಚಿನ ಸಂಖ್ಯೆಯ ಸಾವು ನೋವುಗಳು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗಿದೆ. ಇದರೊಂದಿಗೆ ಉಷ್ಣದ ಅಲೆಗಳ ಪರಿಣಾಮ ತೀವ್ರಗೊಂಡಿದೆ ಎಂದು ವಿಶ್ವ ಹವಾಮಾನ ಸಂಸ್ಥೆಯ (WMO report) 2023ರ ಏಷ್ಯಾದ ವರದಿ ತಿಳಿಸಿದೆ. 

    ವರದಿಯ ಪ್ರಕಾರ, ಹವಾಮಾನ ವೈಪರಿತ್ಯದಿಂದ (Climate Change) ವಾಯುವ್ಯ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರ-ಮೇಲ್ಮೈ ತಾಪಮಾನ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಆರ್ಕಿಟಿಕ್ ಮಹಾಸಾಗರವು ಸಹ ಸಮುದ್ರದ ಮೇಲ್ಮೈ ಶಾಖದ ಅಲೆಯನ್ನು ಅನುಭವಿಸಿದೆ. ಈ ಪ್ರದೇಶದ ಅನೇಕ ದೇಶಗಳು ಬರ ಮತ್ತು ಶಾಖದ ಅಲೆಗಳು, ಪ್ರವಾಹ (Floods) ಮತ್ತು ಬಿರುಗಾಳಿಯ ಹೊಡೆತದಿಂದ ತತ್ತರಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

    ಹವಾಮಾನ ಸಂಬಂಧಿ ಅವಘಡಗಳ ಅಂಕಿ ಅಂಶಗಳ ಪ್ರಕಾರ, 2023ರಲ್ಲಿ ಜಲ ಹಾಗೂ ಹವಾಮಾನ ಅಪಾಯಗಳಿಗೆ ಸಂಬಂಧಿಸಿದ 79 ವಿಪತ್ತುಗಳು ಏಷ್ಯಾವನ್ನು ಕಾಡಿವೆ. ಪ್ರವಾಹ ಮತ್ತು ಬಿರುಗಾಳಿಗಳು ಪ್ರಕೃತಿ ವಿಕೋಪದ 80% ಕ್ಕಿಂತ ಹೆಚ್ಚಿನ ಅವಘಡಗಳಿಗೆ ಕಾರಣವಾಗಿದೆ. 2,000 ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿವೆ ಮತ್ತು ಒಂಬತ್ತು ದಶಲಕ್ಷ ಜನರ ಮೇಲೆ ಇದು ಪರಿಣಾಮ ಬೀರಿದೆ. ಭಾರತದಲ್ಲಿ 2023ರ ಏಪ್ರಿಲ್‌ನಿಂದ ಜೂನ್‌ನಲ್ಲಿ ತೀವ್ರವಾದ ಶಾಖದ ಅಲೆಗಳು ಸುಮಾರು 110 ಜನರ ಸಾವಿಗೆ ಕಾರಣವಾಗಿದೆ.

    ಜಾಗತಿಕವಾಗಿ ಏನಾಗುತ್ತಿದೆ?: 2015 ಮತ್ತು 2023ರ ನಡುವೆ ದಾಖಲಾದ ತಾಪಮಾನ ಗಮನಿಸಿದರೆ 2023ರಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಇದರೊಂದಿಗೆ ಮೂರು ಪ್ರಮುಖ ಹಸಿರುಮನೆ ಅನಿಲಗಳಾದ ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ನೈಟ್ರಸ್ ಆಕ್ಸೈಡ್ ವಾತಾವರಣದ ಸಾಂದ್ರತೆ ಹೆಚ್ಚಾಗಿದೆ. ಇದು 2022ರಲ್ಲಿ ಗರಿಷ್ಠ ಮಟ್ಟ ತಲುಪಿತ್ತು.  

    1960 ಮತ್ತು 2021ರ ನಡುವೆ ವಾತಾವರಣಕ್ಕೆ ಹೊರಸೂಸಲ್ಪಟ್ಟ ವಾರ್ಷಿಕ ಮಾನವ ನಿರ್ಮಿತ ಇಂಗಾಲದ ಡೈಆಕ್ಸೈಡ್‌ನ ಸುಮಾರು 25% ರಷ್ಟು ಸಾಗರಗಳು ಹೀರಿಕೊಂಡಿದ್ದು, ಸಮುದ್ರದ ಮೇಲಿನ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿದೆ. 

    ಭಾರತ ಸ್ಥಿತಿ ಹೇಗಿದೆ?: 2023ರ ಏಪ್ರಿಲ್‌ನಿಂದ ಜೂನ್‌ ವರೆಗೂ ಭಾರತದಲ್ಲಿ ಬಿಸಿಗಾಳಿಯ ಪರಿಣಾಮ ಸುಮಾರು 110 ಸಾವು ಸಂಭವಿಸಿದೆ. ಆಗಸ್ಟ್ 2023ರಲ್ಲಿ, ಭಾರತವು ದಾಖಲೆಯ-ಹೆಚ್ಚಿನ ಮಾಸಿಕ ಸರಾಸರಿ ತಾಪಮಾನ ಮತ್ತು ಅಸಾಧಾರಣ ಮಳೆಯ ಕೊರತೆಯನ್ನು ಅನುಭವಿಸಿತ್ತು.

    ಉತ್ತರ ಹಿಂದೂ ಮಹಾಸಾಗರದ ಮೇಲಿನ ಉಷ್ಣವಲಯದ ಚಂಡಮಾರುತದ ಚಟುವಟಿಕೆಯು ಸರಾಸರಿಗಿಂತ ಸ್ವಲ್ಪ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಮೈಚಾಂಗ್ ಚಂಡಮಾರುತವು ಡಿಸೆಂಬರ್ 5 ರಂದು ಆಂಧ್ರಪ್ರದೇಶಕ್ಕೆ ಅಪ್ಪಳಿಸಿತ್ತು. ಈ ವೇಳೆ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 

    ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡವು ಆಗಸ್ಟ್ 2023ರಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿತ್ತು. ಇದರಿಂದ ಸುಮಾರು 25 ಜನ ಸಾವನ್ನಪ್ಪಿ, ಮನೆ, ಆಸ್ತಿ ಹಾಗೂ ರಸ್ತೆಗಳು ಹಾನಿ ಸಂಭವಿಸಿತ್ತು.

    ಅಕ್ಟೋಬರ್‌ನಲ್ಲಿ ಸಿಕ್ಕಿಂನಲ್ಲಿ ಗ್ಲೇಶಿಯಲ್ ಸರೋವರದಿಂದ ಉಂಟಾದ ಪ್ರವಾಹದಿಂದ ತೀಸ್ತಾ ಜಲವಿದ್ಯುತ್ ಅಣೆಕಟ್ಟಿನ ಕುಸಿತಕ್ಕೆ ಕಾರಣವಾಯಿತು, ಇದರ ಪರಿಣಾಮವಾಗಿ 100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು ಮತ್ತು ಸಾವಿರಾರು ಜನರು ಇದರಿಂದ ತೊಂದರೆಗೊಳಗಾಗಿದ್ದರು.

    ಮಳೆ: 2023 ರಲ್ಲಿ ಭಾರತದ ಬೇಸಿಗೆ ಮಾನ್ಸೂನ್ ಸರಾಸರಿಗಿಂತ ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ತುರಾನ್ ಲೋಲ್ಯಾಂಡ್ (ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್), ಹಿಂದೂ ಕುಶ್ (ಅಫ್ಘಾನಿಸ್ತಾನ್, ಪಾಕಿಸ್ತಾನ ), ಹಿಮಾಲಯಗಳು, ಗಂಗಾ ಮತ್ತು ಬ್ರಹ್ಮಪುತ್ರ ನದಿಗಳ ಕೆಳಭಾಗದ ಪ್ರದೇಶ (ಭಾರತ ಮತ್ತು ಬಾಂಗ್ಲಾದೇಶ), ಅರಕನ್ ಪರ್ವತಗಳು ಸೇರಿದಂತೆ ಏಷ್ಯಾದ ಇತರ ಹಲವು ಭಾಗಗಳು ( ಮ್ಯಾನ್ಮಾರ್), ಮತ್ತು ಮೆಕಾಂಗ್ ನದಿಯ ಕೆಳಭಾಗದಲ್ಲಿ 2023 ರಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಇದರಿಂದ ನೈಋತ್ಯ ಚೀನಾ ಬರಗಾಲವನ್ನು ಅನುಭವಿಸಿತು.

    ಹಿಮನದಿಗಳು: 2023 ರಲ್ಲಿ ಹಿಮನದಿಗಳು, ಪೂರ್ವ ಹಿಮಾಲಯ ಮತ್ತು ಮಧ್ಯ ಏಷ್ಯಾದ ಟಿಯಾನ್ ಶಾನ್ ಪರ್ವತಗಳಲ್ಲಿನ ಹೆಚ್ಚಿನ ತಾಪಮಾನದಿಂದ ಅಪಾಯದಲ್ಲಿವೆ.

    ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚಳ: ಅರೇಬಿಯನ್ ಸಮುದ್ರ, ಉತ್ತರ ಪೆಸಿಫಿಕ್ ಮಹಾಸಾಗರದ ಜಲಾನಯನ ಪ್ರದೇಶದ ಪಶ್ಚಿಮ ಭಾಗ, ದಕ್ಷಿಣ ಬ್ಯಾರೆಂಟ್ಸ್ ಸಮುದ್ರ, ದಕ್ಷಿಣ ಕಾರಾ ಸಮುದ್ರ ಮತ್ತು ಆಗ್ನೇಯ ಲ್ಯಾಪ್ಟೆವ್ ಸಮುದ್ರವು ಜಾಗತಿಕವಾಗಿ ಸರಾಸರಿ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ಮೂರು ಪಟ್ಟು ಹೆಚ್ಚು ವೇಗವಾಗಿ ಉಷ್ಣಾಂಶ ಹೆಚ್ಚಾಗುತ್ತಿದೆ.

    ನೈಸರ್ಗಿಕ ವಿಕೋಪಗಳು: ಜೂನ್ ಮತ್ತು ಜುಲೈನಲ್ಲಿ, ಪ್ರವಾಹ, ಭೂಕುಸಿತ ಮತ್ತು ಸಿಡಿಲಿನಿಂದ ಭಾರತ, ಪಾಕಿಸ್ತಾನ ಮತ್ತು ನೇಪಾಳದಾದ್ಯಂತ ಸುಮಾರು 600 ಸಾವುಗಳು ಸಂಭವಿಸಿವೆ.

    ಹಾಂಗ್ ಕಾಂಗ್ ಅಬ್ಸರ್ವೇಟರಿ ಹೆಡ್‌ಕ್ವಾರ್ಟರ್ಸ್ ಸೆಪ್ಟೆಂಬರ್ 7 ರಂದು ಗಂಟೆಗೆ 158.1 ಮಿಮೀ ಮಳೆಯನ್ನು ದಾಖಲಿಸಿದೆ. ಇದು 1884ರ ನಂತರದ ಗರಿಷ್ಠ ಮಳೆಯಾಗಿದೆ. ವಿಯೆಟ್ನಾಂ ಕೂಡ ಅಕ್ಟೋಬರ್‌ನಲ್ಲಿ ದಾಖಲೆ ಪ್ರಮಾಣದ ದೈನಂದಿನ ಮಳೆಯಾಗಿತ್ತು. ಇಷ್ಟೇ ಅಲ್ಲದೇ ಯೆಮೆನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಹವನ್ನು ಎದುರಿಸಿದ್ದವು. 

    ವಿಶ್ವ ಹವಾಮಾನ ಸಂಸ್ಥೆಯ ಕೆಲಸ ಏನು?: WMOನ ಕೇಂದ್ರ ಕಛೇರಿಯು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ. ಇದು ಭಾರತ ಸೇರಿದಂತೆ 192 ಸದಸ್ಯ ರಾಷ್ಟ್ರಗಳು ಮತ್ತು ಪ್ರಾಂತ್ಯಗಳ ಸದಸ್ಯತ್ವವನ್ನು ಹೊಂದಿದೆ.  23 ಮಾರ್ಚ್ 1950 ರಂದು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ದಿನಾಂಕವನ್ನು ವಿಶ್ವ ಹವಾಮಾನ ದಿನವಾಗಿ ಆಚರಿಸಲಾಗುತ್ತದೆ. ಇದು ಜನರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ರಾಷ್ಟ್ರೀಯ ಹವಾಮಾನ ಮತ್ತು ಜಲವಿಜ್ಞಾನ ಸೇವೆಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಜಾಗತಿಕ ಚಟುವಟಿಕೆಗಳೊಂದಿಗೆ ಗುರುತಿಸಲ್ಪಟ್ಟಿದೆ.

    ಹವಾಮಾನ ಬದಲಾವಣೆ ತಗ್ಗಿಸುವಿಕೆಗೆ ಭಾರತದ ಕ್ರಮಗಳೇನು?
    * 2030ರ ವೇಳೆಗೆ ಪಳೆಯುಳಿಕೆ ರಹಿತ ಶಕ್ತಿಯ ಸಾಮರ್ಥ್ಯದ 500 GWನ್ನು ತಲುಪುವುದು.
    * 2030ರ ವೇಳೆಗೆ 50% ನವೀಕರಿಸಬಹುದಾದ ಶಕ್ತಿಯ ಬಳಕೆ.
    * 2030 ರವರೆಗೆ ಒಟ್ಟು ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು 100 ಕೋಟಿ ಟನ್‌ಗಳಷ್ಟು ಕಡಿತಗೊಳಿಸುವುದು.
    * 2005ರ ಮಟ್ಟಕ್ಕಿಂತ 2030ರ ಹೊತ್ತಿಗೆ ಆರ್ಥಿಕತೆಯ ಇಂಗಾಲದ ತೀವ್ರತೆಯನ್ನು 45% ರಷ್ಟು ಕಡಿಮೆಗೊಳಿಸುವುದು.
    * 2070ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯನ್ನು ಸಾಧಿಸುವುದು.

  • ದುಬೈ ಕಾಡಿದ ಮಳೆ; ಕೃತಕ ಮಳೆಯೋ, ಹವಾಮಾನ ಬದಲಾವಣೆ ಪರಿಣಾಮವೋ?

    ದುಬೈ ಕಾಡಿದ ಮಳೆ; ಕೃತಕ ಮಳೆಯೋ, ಹವಾಮಾನ ಬದಲಾವಣೆ ಪರಿಣಾಮವೋ?

    ರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಸದಾ ಬಿಸಿಲನ್ನೇ ಕಾಣುತ್ತಿದ್ದ ದುಬೈನಲ್ಲಿ (Dubai Rain) ವರುಣನ ಆರ್ಭಟಿಸಿತು. ಎಲ್ಲೆಲ್ಲೂ ನೀರು.. ನೀರು.. ರಸ್ತೆಗಳಲ್ಲಿ ಚರಂಡಿಗಳಂತೆ ನೀರು ಹರಿದಿದೆ. ವಿಮಾನ ನಿಲ್ದಾಣ ತೊರೆಯಂತಾಗಿದೆ. ತಿಳಿ ನೀಲಿ ಬಣ್ಣದಿಂದ ಕೂಡಿರುತ್ತಿದ್ದ ಆಕಾಶದಲ್ಲಿ ಕಪ್ಪನೆ ಕಾಮೋಡವಾಗಿ, ಬರಬರುತ್ತಾ ಹಸಿರು ಬಣ್ಣಕ್ಕೆ ತಿರುಗಿ ಕೆಲ ದಿನಗಳಿಂದ ಎಡಬಿಡದೆ ಮಳೆ ಸುರಿಯಿತು. ವಿಶ್ವದ ಅತಿ ಎತ್ತರದ ಬುರ್ಜ್ ಖಲೀಫಾ ಚುಂಬಿಸುವಂತೆ ಬರುತ್ತಿದ್ದ ಮಿಂಚು ಭೀತಿ ಹುಟ್ಟಿಸುವಂತಿತ್ತು. ಅಪಾರ ಪ್ರಮಾಣದ ಮಳೆಯಿಂದ ಸ್ಥಳೀಯರು ಹೈರಾಣಾಗಿದ್ದಾರೆ.

    ಶುಷ್ಕ ಅರೇಬಿಯನ್ ಪೆನಿನ್ಸುಲಾ ದೇಶವಾಗಿರುವ ಯುಎಇಯಲ್ಲಿ ಭಾರೀ ಮಳೆಯಾಗುವುದು ತೀರ ಅಸಾಮಾನ್ಯ. ಸಾಮಾನ್ಯವಾಗಿ ತಂಪಾದ ಚಳಿಗಾಲದ ತಿಂಗಳುಗಳಲ್ಲಿ ಸಾಂದರ್ಭಿಕವಾಗಿ ಈ ಪ್ರದೇಶದಲ್ಲಿ ಮಳೆಯಾಗುತ್ತದೆ. ಆದರೆ ಈ ಬಾರಿ 75 ವರ್ಷಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. 1949 ರಲ್ಲಿ ದಾಖಲೆಯ ಮಳೆಯಾಗಿತ್ತು. ಇದನ್ನೂ ಓದಿ: ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್‌ಲೈನ್ ತಂಡ!

    ಮರುಭೂಮಿ ರಾಷ್ಟ್ರದಲ್ಲಿ ಈ ಪ್ರಮಾಣದ ಮಳೆಯೆಂದರೆ ಅಚ್ಚರಿಯಾಗುವುದು ಸಹಜ. ಅಷ್ಟಕ್ಕೂ ದುಬೈನಲ್ಲಿ ಏನಾಗುತ್ತಿದೆ? ಭಾರೀ ಪ್ರಮಾಣದಲ್ಲಿ ಮಳೆಯಾಗಲು ಕಾರಣವೇನು? ಇದು ಮೋಡ ಬಿತ್ತನೆಯಿಂದಾಗಿದ್ದೋ ಅಥವಾ ಹವಾಮಾನ ಬದಲಾವಣೆಯ ಪರಿಣಾಮವೋ? ದುಬೈನ ಪ್ರವಾಹದ ಮಳೆಗೆ ಅಸಲಿ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.

    ದುಬೈನಲ್ಲಿ ಏನಾಯಿತು?
    ಸೋಮವಾರ (ಏ.15) ರಾತ್ರಿ ಗುಡುಗು ಸಹಿತ ಮಳೆ ಪ್ರಾರಂಭವಾಯಿತು. ಮಂಗಳವಾರ ಸಂಜೆಯ ವೇಳೆಗೆ 142 ಮಿಲಿಮೀಟರ್ (ಮಿಮೀ) ಗಿಂತ ಹೆಚ್ಚಿನ ಮಳೆ ಮರುಭೂಮಿ ನಗರ ದುಬೈನಲ್ಲಿ ಸುರಿದಿದೆ. ಸಾಮಾನ್ಯವಾಗಿ, ನಗರವು ಒಂದೂವರೆ ವರ್ಷದಲ್ಲಿ ಇಷ್ಟು ಮಳೆಗೆ ಸಾಕ್ಷಿಯಾಗಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಭಾರೀ ಪ್ರಮಾಣದ ಮಳೆಯಾಗಿದೆ. ಪರಿಣಾಮವಾಗಿ ವಿಮಾನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕೆಲ ದಿನಗಳವರೆಗೂ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು.

    ವಾಹನಗಳಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿಗಳು
    ದಾಖಲೆಯ ಮಳೆಗೆ ದುಬೈನಾದ್ಯಂತ ಮನೆಗಳು ಜಲಾವೃತಗೊಂಡವು. ವಾಹನ ಸಂಚಾರಕ್ಕೆ ತೊಡಕಾಯಿತು. ದುಬೈ ಮಾಲ್ ಮತ್ತು ಮಾಲ್ ಆಫ್ ದಿ ಎಮಿರೇಟ್ಸ್ನಂತಹ ಜನಪ್ರಿಯ ಖರೀದಿ ಕೇಂದ್ರಗಳು ಜಲಾವೃತಗೊಂಡಿವೆ. ನೀರನ್ನು ತೆರವುಗೊಳಿಸಲು ಟ್ಯಾಂಕರ್ ಲಾರಿಗಳನ್ನು ರಸ್ತೆ ಮತ್ತು ಹೆದ್ದಾರಿಗಳಿಗೆ ಇಳಿಸಲಾಗಿದೆ. ದುಬೈನಿಂದ ಸುಮಾರು 130 ಕಿಮೀ ದೂರದಲ್ಲಿರುವ ಅಲ್ ಐನ್ ನಗರವು 254 ಮಿಮೀ ದಾಖಲೆಯ ಮಳೆಯನ್ನು ಕಂಡಿದೆ. ಯುಎಇಯ ಪೂರ್ವ ಕರಾವಳಿಯಲ್ಲಿರುವ ಫುಜೈರಾದಲ್ಲಿ ಮಂಗಳವಾರ 145 ಮಿಮೀ ಮಳೆಯಾಗಿದೆ. ಪರಿಣಾಮವಾಗಿ ಯುಎಇಯಾದ್ಯಂತ ಕೆಲ ದಿನ ಶಾಲೆಗಳನ್ನು ಮುಚ್ಚಲಾಯಿತು. ಸರ್ಕಾರವು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿತು. ಯುಎಇ ನೆರೆಯ ಒಮಾನ್‌ನಲ್ಲಿಯೂ ತೀವ್ರವಾದ ಮಳೆ ಬಿದ್ದಿತು. ಮಳೆ ಹೊಡೆತಕ್ಕೆ 18 ಮಂದಿ ಬಲಿಯಾದರು. ಅವರ ಪೈಕಿ 10 ಶಾಲಾ ವಿದ್ಯಾರ್ಥಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ವಾಹನಗಳಲ್ಲೇ ಕೊಚ್ಚಿ ಹೋದರು. ಇದನ್ನೂ ಓದಿ: ದುಬೈ ಬರೋ ಪ್ಲ್ಯಾನ್ ಇದ್ದರೆ ಮುಂದಕ್ಕೆ ಹಾಕಿ- ಭಾರತದ ರಾಯಭಾರಿ ಸೂಚನೆ

    ದುಬೈನಲ್ಲಿ ಭಾರೀ ಮಳೆಗೆ ಕಾರಣವೇನು?
    ಮಳೆಗೆ ಚಂಡಮಾರುತ ಕಾರಣ ಎಂದು ತಜ್ಞರು ಹೇಳಿದ್ದಾರೆ. ಚಂಡಮಾರುತವು ಅರೇಬಿಯನ್ ಪರ್ಯಾಯ ದ್ವೀಪದ ಮೂಲಕ ಹಾದುಹೋಗುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಆದರೆ ಹವಾಮಾನ ವಿಜ್ಞಾನ ಕಾಲಿನ್ ಮೆಕಾರ್ಥಿ, ಭಾರೀ ಮಳೆಗೆ ಪರ್ಷಿಯನ್ ಕೊಲ್ಲಿಯ ಬೆಚ್ಚಗಿನ ನೀರಿನಿಂದ ರೂಪುಗೊಂಡ ಅನೇಕ ಸುತ್ತಿನ ತೀವ್ರವಾದ ಗುಡುಗುಗಳು ಕಾರಣವೆಂದು ಹೇಳಿದ್ದಾರೆ. ಹವಾಮಾನ ಬದಲಾವಣೆ ಮಳೆಗೆ ಕಾರಣವಾಗಿದೆ ಎಂದು ಮತ್ತೊಬ್ಬ ತಜ್ಞ ಫ್ರೆಡೆರಿಕ್ ಒಟ್ಟೊ ವಿಶ್ಲೇಷಿಸಿದ್ದಾರೆ. ಇನ್ನೂ ಕೆಲವರು ಮೋಡ ಬಿತ್ತನೆಯು ದುಬೈನಲ್ಲಿ ಭಾರೀ ಮಳೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ಮೋಡ ಬಿತ್ತನೆ ಎಂದರೇನು?
    ಯುಎಇ 2000 ರ ದಶಕದಲ್ಲಿ ನೀರಿನ ಅಭಾವದ ಸಮಸ್ಯೆ ಪರಿಹರಿಸಲು ಮೋಡ ಬಿತ್ತನೆ ಕಾರ್ಯಾಚರಣೆ ಆರಂಭಿಸಿತು. ಈ ಬಾರಿ ಮಳೆಗಾಗಿ ಅಲ್ ಐನ್ ವಿಮಾನ ನಿಲ್ದಾಣದಿಂದ ವಿಮಾನಗಳ ಮೂಲಕ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹವಾಮಾನಶಾಸ್ತ್ರಜ್ಞ ಅಹ್ಮದ್ ಹಬೀಬ್ ತಿಳಿಸಿದ್ದಾರೆ.

    ಮೋಡ ಬಿತ್ತನೆಯು ಒಂದು ರೀತಿಯ ಹವಾಮಾನ ಮಾರ್ಪಾಡು ಪ್ರಕ್ರಿಯೆಯಾಗಿದೆ. ಅದು ಮಳೆ ಅಥವಾ ಹಿಮವನ್ನು ಹೆಚ್ಚಿಸುತ್ತದೆ. ಮೋಡದ ಹನಿಗಳು ಸ್ವಯಂಪ್ರೇರಿತವಾಗಿ ರೂಪುಗೊಳ್ಳುವುದಿಲ್ಲ. ತೇವಾಂಶವನ್ನು ಸಾಂದ್ರೀಕರಿಸಲು, ಅದಕ್ಕೆ ಅಂಟಿಕೊಳ್ಳುವ ಮೇಲ್ಮೈ ಅಗತ್ಯವಿದೆ. ಮೋಡದೊಳಗೆ ಗಾಳಿಯಲ್ಲಿ ಘನೀಕರಣ ನ್ಯೂಕ್ಲಿಯಸ್ ಎಂದು ಕರೆಯಲ್ಪಡುವ ಕಣಗಳಿವೆ. ಇದು ತೇವಾಂಶವನ್ನು ಒಂದುಗೂಡಿಸುವ ಆಧಾರವಾಗಿದೆ. ನ್ಯೂಕ್ಲಿಯಸ್ ಕಣಗಳನ್ನು ಶೂಟ್ ಮಾಡಲು ವಿಮಾನಗಳನ್ನು ಬಳಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಹನಿಗಳು ವಿಲೀನಗೊಂಡ ನಂತರ ಅವು ಭಾರವಾಗುತ್ತವೆ. ಆಗ ಮಳೆ ಭೂಮಿಗೆ ಬೀಳುತ್ತದೆ. ಧೂಳು ಮತ್ತು ಕೊಳೆಯಂತಹ ಸಣ್ಣ ಸಣ್ಣ ಕಣಗಳು ತೇವಾಂಶ ಘನೀಕರಿಸಲು ಪೂರಕವಾಗಿ ಮೋಡ ರಚನೆ ಮತ್ತು ಮಳೆಯಾಗಲು ಪ್ರಮುಖ ಪಾತ್ರ ವಹಿಸುತ್ತವೆ. ಸಿಲ್ವರ್ ಅಯೋಡೈಡ್ ಅದೇ ಕಾರ್ಯ ನಿರ್ವಹಿಸುತ್ತದೆ. ಡ್ರೈ ಐಸ್‌ನಂತಹ ಇತರ ವಸ್ತುಗಳನ್ನು ಸಹ ಇದೇ ಉದ್ದೇಶಗಳಿಗೆ ಬಳಸಬಹುದು.

    ದುಬೈನಲ್ಲಿ ಹವಾಮಾನ ಬದಲಾವಣೆ ಪರಿಣಾಮವೇನು?
    ಸಮುದ್ರ ಮಟ್ಟ: ಯುಎಇ ಸುಮಾರು 1,300 ಕಿಮೀ ಕರಾವಳಿಯನ್ನು ಹೊಂದಿದೆ. ಸುಮಾರು 85% ಜನಸಂಖ್ಯೆ ಮತ್ತು ಯುಎಇ 90% ಕ್ಕಿಂತ ಹೆಚ್ಚು ಮೂಲಸೌಕರ್ಯವು ಸಮುದ್ರಕ್ಕೆ ಹೊಂದಿಕೊಂಡಂತೆ ಇದೆ. ಸ್ಟಾಕ್‌ಹೋಮ್ ಎನ್ವಿರಾನ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಯುಎಸ್ ಸೆಂಟರ್ ವರದಿ ಪ್ರಕಾರ, ಯುಎಇಯು ತನ್ನ ಅಭಿವೃದ್ಧಿ ಹೊಂದಿದ ಕರಾವಳಿಯ 6% ಪಾಲನ್ನು ಈ ಶತಮಾನದ ಅಂತ್ಯದ ವೇಳೆಗೆ ಏರುತ್ತಿರುವ ಸಮುದ್ರ ಮಟ್ಟಗಳಿಂದ ಕಳೆದುಕೊಳ್ಳಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ಮರುಭೂಮಿ ದೇಶ ದುಬೈನಲ್ಲಿ ಧಾರಾಕಾರ ಮಳೆ – ಕೆರೆಯಂತಾದ ವಿಮಾನ ನಿಲ್ದಾಣ

    ನೀರಿನ ವಿಪತ್ತು: ಜಾಗತಿಕ ತಾಪಮಾನವು ನೀರಿನ ಬೇಡಿಕೆ ಮತ್ತು ಲಭ್ಯತೆಯ ನಡುವಿನ ಅಂತರವನ್ನು ಹೆಚ್ಚಿಸಬಹುದು. ಯುಎಇಯ ಕೆಲವು ಸ್ಥಳಗಳು ಆಗಾಗ್ಗೆ ಪ್ರವಾಹಕ್ಕೆ ಸಾಕ್ಷಿಯಾಗುತ್ತವೆ. ಇತರೆ ಪ್ರದೇಶ ಬರ ಮತ್ತು ನೀರಿನ ಕೊರತೆಯನ್ನು ಅನುಭವಿಸುತ್ತವೆ.

    ಕೃಷಿ: ಹೆಚ್ಚಿನ ತಾಪಮಾನ, ಹೆಚ್ಚಿದ ಕಳೆಗಳು ಮತ್ತು ಹಾನಿಕಾರಕ ಕೀಟಗಳು ಕೃಷಿ ಬೆಳೆಗಳ ಮೇಲೆ ಪರಿಣಾಮ ಬೀರುತ್ತವೆ. ಜಾಗತಿಕ ತಾಪಮಾನವು ಜಾಗತಿಕವಾಗಿ ಆಹಾರದ ಕೊರತೆಗೆ ಕಾರಣವಾಗಬಹುದು. ಯುಎಇ ಹೆಚ್ಚು ಉಪ್ಪು ನೀರು ಕೂಡ ಕೃಷಿ ಮೇಲೆ ಪರಿಣಾಮ ಬೀರುತ್ತದೆ.

    ಮಾಲಿನ್ಯ ಮತ್ತು ವಿದ್ಯುತ್ ಸರಬರಾಜು: ಜಾಗತಿಕ ತಾಪಮಾನವು ಚಳಿಗಾಲದಲ್ಲಿ ಹೀಟರ್‌ಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ಆದರೆ ಬೇಸಿಗೆಯಲ್ಲಿ ಎಸಿಗಳ ಅಗತ್ಯವನ್ನು ಹೆಚ್ಚಿಸುತ್ತದೆ. ಜಾಗತಿಕ ತಾಪಮಾನ ಏರಿಕೆಯ ಸಮಯದಲ್ಲಿ ಬೃಹತ್ ಮಾಲಿನ್ಯವೂ ಹೆಚ್ಚಾಗಬಹುದು. ಯುಎಇ ಹಸಿರುಮನೆ ಅನಿಲ ಇಂಗಾಲದ ಡೈಆಕ್ಸೈಡ್‌ನ ತಲಾ 80 ಟನ್ ಹೊರಸೂಸುವಿಕೆಯನ್ನು ಹೊಂದಿದೆ. ಹೆಚ್ಚಿನ ಸಂಖ್ಯೆಯ ಹವಾನಿಯಂತ್ರಣಗಳು, ಡಸಲೀಕರಣ ಘಟಕಗಳು ಮತ್ತು ವಿದ್ಯುತ್ ಕೇಂದ್ರಗಳು ಇಂಗಾಲ-ಆಧಾರಿತ ಇಂಧನದಿಂದ ಉತ್ಪತ್ತಿಯಾಗುವ ಶಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ಇದು ಮಾನವರಿಗೆ ಕೆಲವು ಹಂತಗಳಲ್ಲಿ ವಿಷಕಾರಿಯಾಗಿದೆ.

    ದುಬೈ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವೇ?
    ಕಳೆದ ಭಾನುವಾರ ಮತ್ತು ಸೋಮವಾರ ಮಾತ್ರ ದುಬೈನಲ್ಲಿ ಮೋಡ ಬಿತ್ತನೆ ಮಾಡಲಾಗಿತ್ತು. ಆ ಎರಡು ದಿನಗಳ ಬಳಿಕ ದೇಶದಲ್ಲಾಗಿರುವ ಪ್ರವಾಹಕ್ಕೆ ಮೋಡ ಬಿತ್ತನೆ ಕಾರಣವಲ್ಲ ಎಂದು ಬ್ಲೂಮ್‌ಬರ್ಗ್‌ನ ವರದಿಗಳು ತಿಳಿಸಿವೆ. ದುಬೈನಲ್ಲಿ ಈ ಮಟ್ಟದ ಪ್ರವಾಹಕ್ಕೆ ಚಂಡಮಾರುತ ಕಾರಣ ಎಂದು ಹೇಳಲಾಗುತ್ತಿದೆ.

  • ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?

    ಪ್ರವಾಹದಿಂದ ರಕ್ಷಿಸಿಕೊಳ್ಳಲು ತೇಲುವ ಮನೆ ನಿರ್ಮಿಸಿದ ಜಪಾನ್ – ಏನಿದರ ವಿಶೇಷತೆ?

    ಟೋಕಿಯೊ: ಒಂದು ದೇಶ ಅಭಿವೃದ್ಧಿ ಹೊಂದಿರಲಿ, ಹೊಂದದಿರಲಿ, ಪ್ರವಾಹ ಮಾತ್ರ ಯಾವುದೇ ರಿಯಾಯಿತಿ ತೋರಿಸುವುದಿಲ್ಲ. ಒಮ್ಮೆಲೆ ಅಬ್ಬರಿಸಿದರೆ ನೂರಾರು ಜೀವಗಳು ಬಲಿಯಾಗುತ್ತವೆ. ಸಾವಿರಾರು ಮನೆಗಳನ್ನು ಆಹುತಿ ಪಡೆಯುತ್ತದೆ. ವಿಶ್ವದಲ್ಲೇ ಅತಿಹೆಚ್ಚು ಬಾರಿ ಪ್ರವಾಹಕ್ಕೆ ತುತ್ತಾಗಿರುವ ದೇಶ ಜಪಾನ್ ಆಗಿದೆ.

    https://twitter.com/LeeTyler/status/1540145698309431296?ref_src=twsrc%5Etfw%7Ctwcamp%5Etweetembed%7Ctwterm%5E1540145698309431296%7Ctwgr%5E%7Ctwcon%5Es1_&ref_url=https%3A%2F%2Fwww.udayavani.com%2Fnews-section%2Fnational-news%2Fjapanese-company-invents-floating-house-calls-it-flood-proof

    ಜಪಾನ್ ಎಷ್ಟು ಬಾರಿ ಪ್ರವಾಹಕ್ಕೆ ತುತ್ತಾದರೂ ಮತ್ತೆ – ಮತ್ತೆ ಪುಟಿದು ನಿಲ್ಲುತ್ತದೆ. ಇದೀಗ ಪ್ರವಾಹದೊಂದಿಗೇ ಬದುಕಲು ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗು­ವವರಿಗಾಗಿಯೇ ಜಪಾನಿನ ಇಚಿಜೋ ಕೊಮುಟೆನ್ ಹೌಸ್ ಡೆವಲಪರ್ ಕಂಪೆನಿ ತೇಲುವ ಮನೆಯನ್ನು ನಿರ್ಮಿಸಿದೆ. ಇದನ್ನೂ ಓದಿ: ಅಪಾಯವನ್ನು ಲೆಕ್ಕಿಸದೇ ಡೇಂಜರ್ ಟ್ರಾಕ್ಟರ್ ಗೇಮ್

    ಹೌದು.. ಜಪಾನ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಮನೆ ಪ್ರವಾಹ ಬಂದಾಗ ತೇಲಲು ಆರಂಭಿಸುತ್ತದೆ. ನೀರಿನ ಮಟ್ಟ ಕರಗಿದಾಗ ಮತ್ತೆ ನೆಲಕ್ಕೆ ಬಂದು ನಿಲ್ಲುತ್ತದೆ. ಇದನ್ನು ಒಂದು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕವೂ ಕಂಪನಿ ತೋರಿಸಿದ್ದು, ಜನರನ್ನು ಅಚ್ಚರಿಗೊಳಿಸಿದೆ. ಇದನ್ನೂ ಓದಿ: ಪತಿಯೊಂದಿಗೆ ವಾಸಿಸಲು 30 ಬಾರಿ ಅವಳಿ ಸಹೋದರಿಯ ಪಾಸ್‍ಪೋರ್ಟ್ ಬಳಕೆ

    ಹೇಗೆ ಇರಲಿದೆ?
    ನೀರು ನುಗ್ಗಲು ಶುರುವಾದ ಕೂಡಲೇ ನಿಧಾನವಾಗಿ ಮನೆ ಭೂಸ್ಪರ್ಶದಿಂದ ಮೇಲೆ ಬರಲು ಪ್ರಾರಂಭಿಸುತ್ತದೆ. ಗರಿಷ್ಠ 5 ಮೀಟರ್ ವರೆಗೆ ಮಲೆ ಮೇಲೆದ್ದು ತೇಲುತ್ತದೆ. ಮನೆಯ ಸುತ್ತ ಬಲವಾದ ಕಬ್ಬಿಣದ ಸಲಾಕೆಯಂತಿರುವ ಕಂಬಗಳನ್ನು ಹೊಂದಿರುತ್ತದೆ. ಅವು ಪಿಲ್ಲರ್‌ಗಳಂತೆ ಮನೆಗಳಿಗೆ ಭದ್ರತೆ ಒದಗಿಸುತ್ತವೆ. ಜೊತೆಗೆ ಈ ಕಂಬಗಳಿಗೆ ಬಲವಾದ ವೈರ್‌ಗಳನ್ನು ಬಿಗಿದು ಮನೆಗೆ ಕಟ್ಟಲಾಗಿರುತ್ತದೆ. ಪ್ರವಾಹ ಬಂದಾಗ ಮೇಲೇಳುವ ಮನೆ, ಪ್ರವಾಹ ಹೋದಾಗ ಅದೇ ಸ್ಥಳದಲ್ಲಿ ನೆಲಕ್ಕಿಳಿಯುತ್ತದೆ.

    Live Tv

  • ವಾತಾವರಣದಲ್ಲಿ ದಿಢೀರ್ ಬದಲಾವಣೆ- ಹತ್ತಿ, ಮೆಣಸಿನಕಾಯಿ ಬೆಳೆದ ರೈತರಿಗೆ ದಿಗಿಲು

    ವಾತಾವರಣದಲ್ಲಿ ದಿಢೀರ್ ಬದಲಾವಣೆ- ಹತ್ತಿ, ಮೆಣಸಿನಕಾಯಿ ಬೆಳೆದ ರೈತರಿಗೆ ದಿಗಿಲು

    ರಾಯಚೂರು: ರಾಜ್ಯದ ಕೆಲವೆಡೆ ವಾತಾವರಣ ಏಕಾಏಕಿ ದ್ವಂದ್ವ ನಿಲುವು ತಳೆದಿದ್ದು, ರೈತರನ್ನು ಆತಂಕಕ್ಕೆ ಎಡೆಮಾಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲು ಹೆಚ್ಚಾಗುತ್ತಿದ್ದಂತೆ ವಾತಾವರಣವೂ ಬದಲಾಗಿದೆ. ಬೆಳಗ್ಗೆ ಒಂದು ರೀತಿ ಮಧ್ಯಾಹ್ನ ಇನ್ನೊಂದು ರೀತಿ ರಾತ್ರಿ ಮತ್ತೊಂದು ರೀತಿಯಂತೆ ವಾತಾವರಣ ಬದಲಾಗುತ್ತಿದೆ.

    ಬಿಸಿಲನಾಡು ಎಂದೇ ಕರೆಸಿಕೊಳ್ಳುವ ರಾಯಚೂರು ಈಗ ಬೆಳಗ್ಗೆಯಾದ್ರೆ ಸಾಕು ಮೋಡಗಳಿಂದ ತುಂಬಿ, ಜಿಟಿ ಜಿಟಿ ಮಳೆಗೆ ಸಾಕ್ಷಿಯಾಗುತ್ತಿದೆ. ಗುಮ್ಮಟ ನಗರಿ ವಿಜಯಪುರದಲ್ಲಿಯೂ ಬಿರುಬೇಸಿಗೆಯಲ್ಲಿ ಮಳೆರಾಯ ಬೆಳ್ಳಂಬೆಳಗ್ಗೆ ದರ್ಶನ ಕೊಡುತ್ತಿದ್ದಾನೆ. ಆದರೆ ಮಧ್ಯಾಹ್ನವಾದರೆ ಮತ್ತೆ ಎಂದಿನಂತೆ ಬಿರುಬಿಸಿಲು ಮುಂದುವರಿಯುತ್ತದೆ. ರಾಯಚೂರು ಜಿಲ್ಲೆಯಲ್ಲಿ ಈಗಾಗಲೇ 36 ಡಿಗ್ರಿ ಸೆಲ್ಸಿಯಸ್‍ಗಿಂತಲೂ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಬೆಳಗ್ಗೆ ಮಾತ್ರ ಮೋಡ, ಜಿಟಿ ಜಿಟಿ ಮಳೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ ಬಿಸಿಲು, ಮತ್ತೆ ರಾತ್ರಿ ಆದ್ರ್ರತೆಯಿಂದ ಶೆಕೆ ಶಕೆ ಎನ್ನುವಂತಾಗಿದೆ.

    ಇದಕ್ಕೆಲ್ಲ ವಾತಾವರಣದ ವೈಪರಿತ್ಯವೇ ಕಾರಣ ಎನ್ನಲಾಗುತ್ತಿದೆ. ವಾತಾವರಣದಲ್ಲಿ ತಾಪಾಮಾನ ಹೆಚ್ಚಾಗಿರುವುದರಿಂದ ಆವಿ ಪ್ರಮಾಣ ಹೆಚ್ಚಾಗಿ ಬಿಸಿಲು ಹೆಚ್ಚು ಇರುವ ಪ್ರದೇಶದಲ್ಲಿ ದಟ್ಟ ಮೋಡ ಆವರಿಸಿ ಅಲ್ಪ ಪ್ರಮಾಣದ ಮಳೆ ಬರುತ್ತಿದೆ. ಇದು ತಾತ್ಕಾಲಿಕ ವಾತಾವರಣ ಬದಲಾವಣೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಈ ವಾತಾವರಣ ಸೂರ್ಯಕಾಂತಿ, ಭತ್ತ ಬೆಳೆಗೆ ಉತ್ತಮ ಸಹ ಹೌದಾಗಿದೆ.

    ಆದರೆ ವಾತಾವರಣದ ಧಿಡೀರ್ ಬದಲಾವಣೆ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆಗಾರರಲ್ಲಿ ಭಾರೀ ಆತಂಕ ಸೃಷ್ಠಿ ಮಾಡಿದೆ. ಕಟಾವಿಗೆ ಬಂದ ಮೆಣಸಿನಕಾಯಿ, ಮಳೆ ಬಂದರೆ ಸಂಪೂರ್ಣ ಹಾನಿಯಾಗುವ ಭೀತಿಯಿದೆ. ಈಗಾಗಲೇ ಕಟಾವು ಮಾಡಿ ಜಮೀನುಗಳಲ್ಲಿ ಮೆಣಸಿನಕಾಯಿ ಒಣಗಲು ಬಿಟ್ಟ ರೈತರಿಗೂ ವಾತಾವರಣದ ಭಯ ಶುರುವಾಗಿದೆ. ಮಳೆಯಿಂದಾಗಿ ಹತ್ತಿ ಬೆಳೆ ಸಹ ಗುಣಮಟ್ಟ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಸರ್ಕಾರ ಖರೀದಿ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ಉತ್ತಮ ಬೆಳೆಯಿಂದ ಲಾಭದ ನಿರೀಕ್ಷೆಯಲ್ಲಿರುವ ರೈತರನ್ನು ಬದಲಾಗುತ್ತಿರುವ ವಾತಾವರಣ ಆತಂಕಕ್ಕೀಡು ಮಾಡಿದೆ. ಫಸಲು ಕೈಗೆ ಬಂದು ಮಾರಾಟವಾಗುವವರೆಗೆ ಮಳೆ ಬಾರದಿದ್ದರೆ ಸಾಕು ಎಂದು ರೈತರು ಉಸಿರು ಬಿಗಿಹಿಡಿದಿದ್ದಾರೆ. ಸರ್ಕಾರ ಸಹ ಖರೀದಿ ಕೇಂದ್ರಗಳಲ್ಲಿ ಚುರುಕಾಗಿ ರೈತರ ಬೆಳೆಗಳನ್ನು ಖರೀದಿಸಬೇಕಿದೆ.