ಚಿಕ್ಕೋಡಿ: ಸ್ವಾತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ ಹುಟ್ಟು ಹಬ್ಬದ ನಿಮಿತ್ತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳಿಗೆರೆ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸುಭಾಷ್ ಚಂದ್ರ ಬೋಸರು ಬ್ರಿಟಿಷರ್ ವಿರುದ್ಧ ಸ್ವಾತಂತ್ರಕ್ಕಾಗಿ ಹೋರಾಟದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸುಭಾಷ್ ಚಂದ್ರ ಬೋಸ್ ಅವರ ಫೋಟೋ ಪೂಜಾ ಕಾರ್ಯಕ್ರಮ ನೆರವೇರಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದನ್ನೂ ಓದಿ:ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿ: ಮಮತಾ ಬ್ಯಾನರ್ಜಿ
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಶಿಕ್ಷಕ ಸಿ.ಎಸ್.ಬುರ್ಲಿ ಅವರು ದೇಶ ಕಂಡ ಅಪ್ರತಿಮ ಹೋರಾಟಗಾರರಲ್ಲಿ ಸುಭಾಷ್ ಚಂದ್ರ ಬೋಸ್ ಆಗಿದ್ದರು. ಅವರ 125 ನೇ ಜಯಂತಿ ಉತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆ ಎನಿಸುತ್ತಿದ್ದು, ಅವರ ಹೋರಾಟವನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದರು. ಗ್ರಾಮಸ್ಥರಾದ ಹೈದರ್ ಬಾಲದಾರ್, ವಿಜಯಕುಮಾರ್ ಪವಾರ್,ಸಂಜು ಕಾಂಬಳೆ, ಕೃಷ್ಣ ದೊಡ್ಡಮನಿ, ಶಾಲೆ ವಿದ್ಯಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು. ಇದನ್ನೂ ಓದಿ:ಸುಭಾಷ್ ಚಂದ್ರ ಬೋಸ್ ದೇಶಕ್ಕೆ ನೀಡಿದ ಕೊಡುಗೆ ಅಪಾರ: ಪ್ರಧಾನಿ ಮೋದಿ
ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರಿನಲ್ಲಿ ಗ್ರಾಮಪಂಚಾಯ್ತಿ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸ್ವಚ್ಛತಾ ಕಾರ್ಯದಲ್ಲಿ ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀ, ಮಾಸೂರಿನ ಮಹಾಂತ ಶ್ರೀ ಹಾಗೂ ಕೂಡಲಮಠದ ಶ್ರೀಗಳು ಪೂರಕೆ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಮಾಸೂರಿನ ವರಕವಿ ಸರ್ವಜ್ಞನ ಪ್ರತಿಮೆ ಸುತ್ತಮುತ್ತವಿರುವ ಕಸ ತೆಗೆದು ಸ್ವಚ್ಛಗೊಳಿಸಲಾಯಿತು. ಹುಕ್ಕೇರಿ ಮಠದ ಶ್ರೀಗಳಿಗೆ ತಿಪ್ಪಾಯಿಕೊಪ್ಪದ ಮಹಂತದೇವರು, ಹಾವೇರಿ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿಗಳು ಸ್ವಚ್ಛತಾ ಕಾರ್ಯಕ್ಕೆ ಸಾಥ್ ನೀಡಿದರು. ಅಲ್ಲದೆ ಈ ಕಾರ್ಯದಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಕೆಲ ಜನರು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.
ಮಂಗಳೂರು: ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಯುವ ಬ್ರಿಗೇಡ್ ಸಂಘಟನೆಯ ಸ್ವಯಂ ಸೇವಕರು ಕುಮಾರಧಾರ ನದಿಯ ದರ್ಪಣ ತೀರ್ಥದಲ್ಲಿ ಸ್ವಚ್ಫತಾ ಕಾರ್ಯ ನಡೆಸಿದ್ದು, ಈ ವೇಳೆ ಬೆಚ್ಚಿ ಬೀಳುವ ಮಟ್ಟದಲ್ಲಿ ತ್ಯಾಜ್ಯದ ರಾಶಿ ಪತ್ತೆಯಾಗಿದೆ.
ಕುಮಾರಧಾರಾ ನದಿಯಲ್ಲಿ ಶೇಖರಗೊಂಡಿದ್ದ 20ಕ್ಕೂ ಹೆಚ್ಚು ಟ್ರಾಕ್ಟರ್ ಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಸುಮಾರು 10 ಸಾವಿರ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ನದಿಯಿಂದ ಎತ್ತಲಾಗಿದ್ದು, ಇವುಗಳಲ್ಲಿ 3 ಸಾವಿರಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಸಿಕ್ಕಿವೆ. ಸುಬ್ರಹ್ಮಣ್ಯ ಕ್ಷೇತ್ರ ಪರಿಸರದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಇದ್ದರೂ ಯಾತ್ರಾರ್ಥಿಗಳು ಮೋಜಿಗಾಗಿ ಕ್ಷೇತ್ರಕ್ಕೆ ಬಂದು ಕುಡಿದು ಬಾಟಲಿಗಳನ್ನು ಎಸೆದಿರುವುದು ಸಾಬೀತಾಗಿದೆ.
ಸುಬ್ರಹ್ಮಣ್ಯದಲ್ಲಿ 12 ಕೋಟಿ ವೆಚ್ಚದಲ್ಲಿ ಶುದ್ಧೀಕರಣ ಘಟಕ ತೆರೆದಿದ್ದರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದೀಗ ಯುವ ಬ್ರಿಗೇಡ್ ಸಂಘಟನೆಯ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಸಿದ್ದು ಯಾತ್ರಿಗಳು ಇವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಸೂಲಿಬೆಲೆಯವರು ಫೇಸ್‍ಬುಕ್ ನಲ್ಲಿ ದೀರ್ಘವಾದ ಪೋಸ್ಟ್ ಪ್ರಕಟಿಸಿ ನಡೆಸಿದ ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಎರಡು ದಿನಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಬಳಿಯಿರುವ ಕುಮಾರಧಾರ ನದಿ ಸ್ವಚ್ಛತೆಯಲ್ಲಿ ಭಾಗಿಯಾಗಿ ಮನಸ್ಸು ವಿಹ್ವಲಗೊಂಡಿದೆ. ದೇವಸ್ಥಾನದ ಹಿಂಬದಿಯಲ್ಲಿ ದರ್ಪಣ ತೀರ್ಥವೆಂದು ಕರೆಯಲ್ಪಡುವ ಈ ನದಿ ಅಕ್ಷರಶಃ ಚರಂಡಿಯಾಗಿಬಿಟ್ಟಿದೆ. ಕಸ, ತ್ಯಾಜ್ಯವಲ್ಲದೇ ಮಲ ವಿಸರ್ಜನೆಗೂ ಇದೇ ಜಾಗವನ್ನು ಬಳಸುತ್ತಿರುವುದು ದುರದೃಷ್ಟಕರ. ನದಿ ಸ್ವಚ್ಛತೆಯಲ್ಲಿ ಇಷ್ಟು ಕೊಳಕು ರಾಡಿಯನ್ನು ಕಂಡು ಬೇಸರಗೊಳ್ಳುತ್ತಿರುವುದು ಬಹುಶಃ ಇದು ಮೊದಲನೇ ಬಾರಿ ಎನಿಸುತ್ತದೆ.
ಸ್ನಾನಘಟ್ಟದ ಪರಿಸ್ಥಿತಿ ಭಿನ್ನವಲ್ಲ. ಸುಮಾರು 20ಕ್ಕೂ ಹೆಚ್ಚು ಟ್ರಾಕ್ಟರುಗಳಷ್ಟು ತ್ಯಾಜ್ಯವನ್ನು ನದಿಯಿಂದ ಹೊರಗೆಸೆದಿದ್ದೇವೆ. 2.5 ಕಿ.ಮೀ ಉದ್ದದ ರಸ್ತೆಯ ಇಕ್ಕೆಲಗಳನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಪ್ರಯತ್ನ ಮಾಡಿದ್ದೇವೆ. ಕನಿಷ್ಠ 10,000 ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳನ್ನು ಸಂಗ್ರಹಿಸಿದ್ದೇವೆ. ಇವುಗಳಲ್ಲಿ 3,000ಕ್ಕೂ ಹೆಚ್ಚು ಹೆಂಡದ ಬಾಟಲಿಗಳೇ ಇವೆ.
ಸ್ಥಳೀಯ ವರ್ತಕರಿಗೆ ಈ ಕುರಿತಂತೆ ಮಾಹಿತಿ ಕೊಟ್ಟು ಪರಿಸರ ಕಾಪಾಡಿಕೊಳ್ಳುವಂತೆ ಹೇಳಿದರೆ ಮುಕ್ಕಾಲು ಪಾಲು ಜನ ಅತ್ಯಂತ ಕೆಟ್ಟದಾಗಿಯೇ ನಡೆದುಕೊಂಡಿದ್ದಾರೆ. ಮುಜರಾಯಿ ಇಲಾಖೆಗೆ ದೇವಸ್ಥಾನ ಕೊಟ್ಟಿದ್ದೇ ತಪ್ಪಾಯ್ತೇನೋ ಎಂದೆನಿಸುವಷ್ಟು ಅಸಹನೆ ಇದು.
12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶುದ್ಧೀಕರಣ ಘಟಕ ಕೆಲಸ ಮಾಡುತ್ತಿಲ್ಲ. ನೀವು ತೀರ್ಥವೆಂದು ಸ್ನಾನ ಮಾಡುವ ಕುಮಾರಧಾರ ಸ್ನಾನಘಟ್ಟದಲ್ಲಿಯೇ ಚರಂಡಿಯಾಗುವುದನ್ನು ಕಣ್ಣಾರೆ ನೋಡಬಹುದು. ಕುಕ್ಕೆ ಸುಬ್ರಹ್ಮಣ್ಯದ ಉಳಿವಿಗಾಗಿ ನಾವು ಈಗ ಮಹತ್ವದ ಪ್ರಯಾಣ ಮಾಡಬೇಕಾಗಿದೆ. ದಯಮಾಡಿ ಎಲ್ಲರೂ ಕೈಜೋಡಿಸಿ.
ನವದೆಹಲಿ: ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಮೋರಿಯನ್ನು ಸ್ವಚ್ಛಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಹಾಯ್ ಸೇವಾ ಯೋಜನೆಗೆ ಕಳೆದ ತಿಂಗಳು ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿದರು.
ಈ ವಿಡಿಯೋದಲ್ಲಿ ಪುದುಚೇರಿಯ ಮುಖ್ಯಮಂತ್ರಿ ಬಿಳಿ ಬಟ್ಟೆ ಮತ್ತು ಪಂಚೆಯನ್ನು ತೊಟ್ಟಿದ್ದು, ರಸ್ತೆಯ ಬದಿಯಿದ್ದ ಮೋರಿಯಲ್ಲಿರುವ ಕೊಳೆ ನೀರನ್ನು ಸಲ್ಕೆಯಿಂದ ಹೊರತೆಗೆಯುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿದರು.
ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಮತ್ತು ಸಮರ್ಪಿತ ಪ್ರಯತ್ನಗಳನ್ನು ನೋಡಿದಾಗ ನಿಜವಾಗಿಯೂ ಸಂತೋಷವಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೀವು ಮಾದರಿಯಾಗಿದ್ದೀರಿ. ನಮ್ಮ ದೇಶಕ್ಕೆ ಹೆಚ್ಚು ಸೇವೆ ನೀಡಲು ದೇವರು ನಿಮಗೆ ಹೆಚ್ಚಿನ ಶಕ್ತಿ ನೀಡಲಿ ಎಂದು ಟ್ವಿಟರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬರೆದುಕೊಂಡಿದ್ದರು.
ಕಳೆದ ನಾಲ್ಕು ವರ್ಷಗಳಲ್ಲಿ ಒಂಬತ್ತು ಕೋಟಿ ಶೌಚಾಲಯಗಳನ್ನು ಕಟ್ಟಲಾಗಿದೆ ಮತ್ತು 4.5 ಲಕ್ಷಕ್ಕಿಂತ ಹೆಚ್ಚು ಹಳ್ಳಿಗಳನ್ನು ತೆರೆದ ಮಲವಿಸರ್ಜನೆ ಮುಕ್ತ ಮಾಡಲಾಗಿದೆ ಎಂದು ಘೋಷಿಸಿದರು.
ಮೈಸೂರು: ಜನರು ರಸ್ತೆಗಳಲ್ಲಿ ಕಸ ಹಾಕುವುದನ್ನು ತಡೆಯುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಗಾಂಧಿಗಿರಿ ಶುರು ಮಾಡಿದ್ದಾರೆ.
ವಾರ್ಡ್ ನಂಬರ್ 10ರ ಪಾಲಿಕೆ ಸದಸ್ಯ ಸುನೀಲ್ ಎಂಬವರು ಜನರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ರಾತ್ರಿ-ಹಗಲು ಕುಳಿತು ಗಾಂಧಿಗಿರಿಯನ್ನು ಆರಂಭಿಸಿದ್ದಾರೆ. ಚೆನ್ನಾಗಿರುವ ಸ್ಥಳವನ್ನೇ ಕಸ ಹಾಕುವ ಜಾಗ ಮಾಡಿಕೊಂಡಿದ್ದ ಸ್ಥಳೀಯರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಸ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದರಿಂದ ಗಾಂಧಿಗಿರಿ ಶುರು ಮಾಡಿದೆ ಎಂದು ಪಾಲಿಕೆ ಸದಸ್ಯ ಸುನೀಲ್ ಅವರು ಹೇಳಿದ್ದಾರೆ.
ನಗರದ ವಿದ್ಯಾರಣ್ಯಪುರಂನಲ್ಲಿ ಸಿಕ್ಕ-ಸಿಕ್ಕಲ್ಲಿ ಕಸ ಹಾಕುವ ಸ್ಥಳವನ್ನು ಸದಸ್ಯರೇ ಸಂಪೂರ್ಣವಾಗಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸಿದ್ದಾರೆ. ನಂತರ ಅದೇ ಸ್ಥಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತಿದ್ದಾರೆ. ಸುನೀಲ್ ಅವರಿಗೂ ಕೆಲವು ಸ್ಥಳೀಯರು ಸಾಥ್ ನೀಡಿ ಜೊತೆಗೆ ಕುಳಿತಿದ್ದಾರೆ. ಬೆಳಗ್ಗೆಯಿಂದ ಅದೇ ಸ್ಥಳದಲ್ಲಿ ಕುಳಿತು ಜನರು ಕಸ ಹಾಕುವುದನ್ನು ತಪ್ಪಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ಪ್ರಯತ್ನ ಮಧ್ಯರಾತ್ರಿವರೆಗೂ ಮುಂದುವರಿಯಲಿದೆ.