Tag: clean water

  • ಈ ಊರಿನ ಜನ್ರಿಗೆ ಚಿಕೂನ್ ಗುನ್ಯಾ- ಚುನಾವಣೆಯಲ್ಲಿ ವೋಟ್ ಕೊಡಿ, ನೀರು ಕೊಡ್ತೀವಿ ಎಂದ ಕಾಂಗ್ರೆಸ್ ನಾಯಕರು ನಾಪತ್ತೆ

    ಈ ಊರಿನ ಜನ್ರಿಗೆ ಚಿಕೂನ್ ಗುನ್ಯಾ- ಚುನಾವಣೆಯಲ್ಲಿ ವೋಟ್ ಕೊಡಿ, ನೀರು ಕೊಡ್ತೀವಿ ಎಂದ ಕಾಂಗ್ರೆಸ್ ನಾಯಕರು ನಾಪತ್ತೆ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಸುಮಾರು 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ. ಇದುವರೆಗೂ ಯಾವ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.

    ಕಲುಷಿತ ನೀರಿನ ಸೇವನೆಯಿಂದ ಗ್ರಾಮಸ್ಥರು ಚಿಕೂನ್ ಗುನ್ಯಾದಿಂದ ಬಳಲುವಂತಾಗಿದೆ. ಗುಂಡ್ಲುಪೇಟೆ ಉಪಚುನಾವಣೆಯ ವೇಳೆಯಲ್ಲಿ ಗ್ರಾಮಕ್ಕೆ ಬಂದಿದ್ದ ಎಲ್ಲ ರಾಜಕೀಯ ನಾಯಕರು ನಮಗೆ ವೋಟ್ ಕೊಡಿ, ನಾವು ನಿಮಗೆ ನೀರು ಕೊಡ್ತೀವಿ ಅಂತಾ ಭರವಸೆಗಳನ್ನು ನೀಡಿದ್ದರು. ಆದ್ರೆ ಚುನಾವಣೆ ಗೆಲುವಿನ ಬಳಿಕ ಯಾವ ಕಾಂಗ್ರೆಸ್ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

    ಚಿಕೂನ್ ಗುನ್ಯಾ ಬಂದಿದ್ದು ಯಾಕೆ?: ಭೀಮನಬೀಡು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಊರಿಗೆ ಒಂದು ಮೇಲ್ಮಟ್ಟದ ನೀರಿನ ಟ್ಯಾಂಕ್ ಇದೆ. ಆದರೆ ಸ್ವಚ್ಛ ನೀರು ಬರುವುದಿಲ್ಲ. ಹೀಗಾಗಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಕೆರೆಯ ಮೊರೆ ಹೋಗಿದ್ದಾರೆ. ಆದರೆ ಕೆರೆಯಲ್ಲಿನ ನೀರು ಕಲುಷಿತಗೊಂಡಿದ್ದರಿಂದ ಕುಡಿಯಲು ಯೋಗ್ಯವಾಗಿಲ್ಲ. ಆದ್ರೂ ಗ್ರಾಮಸ್ಥರು ವಿಧಿಯಿಲ್ಲದೇ ಕೆರೆಯ ನೀರನ್ನು ಬಳಸುತ್ತಿದ್ದಾರೆ. ದೀರ್ಘ ಕಾಲದಿಂದ ಕಲುಷಿತವಾಗಿರೋ ನೀರನ್ನು ಕುಡಿಯುವುದರಿಂದ ಗ್ರಾಮದಲ್ಲಿನ 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದಾರೆ.

    ಉಪಚುನಾವಣೆ ಪ್ರಚಾರದ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪ್ರದರ್ಶನ ಮಾಡಿದ್ದರು. ತೀವ್ರ ಮುಜುಗುರಕ್ಕೊಳಗಾದ ಸಿಎಂ ನಮ್ಮ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್‍ರಿಗೆ ಮತ ನೀಡಿ ನಿಮಗೆ ನೀರು ಕೊಡ್ತೇವೆ ಎಂದು ಭರವಸೆ ನೀಡಿದ್ದರು.

  • ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು ನಗರ ಸಭೆಯಿಂದ ಜನರಿಗೆ ಪಾಚಿಗಟ್ಟಿದ ಕೊಳಚೆ ನೀರು ಪೂರೈಕೆ

    ರಾಯಚೂರು: ಹಸಿರು ಬಣ್ಣದ ಪಾಚಿಗಟ್ಟಿದ ಕೊಳಚೆ ನೀರನ್ನ ಕನಿಷ್ಠ ಪ್ರಮಾಣದ ಶುದ್ಧೀಕರಣವನ್ನೂ ಮಾಡದೇ ನಗರ ಸಭೆ ಕೊಳಾಯಿಗೆ ನೇರವಾಗಿ ಬಿಡುಗಡೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ರಾಂಪುರ ಕೆರೆಯಿಂದ ನಗರಕ್ಕೆ ಹರಿಸುವ ನೀರನ್ನ ಶುದ್ದೀಕರಿಸುವ ಕನಿಷ್ಠ ಕೆಲಸವನ್ನೂ ನಗರಸಭೆ ಮಾಡುತ್ತಿಲ್ಲ. ಶುದ್ಧೀಕರಣ ಘಟಕ ಕೆಟ್ಟು ಹೋಗಿ ಸುಮಾರು ವರ್ಷಗಳೇ ಕಳೆದು ಹೋಗಿದೆ. ಇಲ್ಲಿನ ಯಂತ್ರೋಪಕರಗಳು ತುಕ್ಕು ಹಿಡಿದಿದ್ದು ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ಕೆಲಸದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಕೊಳಚೆ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.

    ನೀರಿನಲ್ಲಿ ಹುಳು, ಕಸಕಡ್ಡಿ ಬರುವುದರಿಂದ ವಯಸ್ಸಿನ ಭೇದವಿಲ್ಲದೆ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜಲ ಮೂಲದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿ ಕೃಷ್ಣ, ತುಂಗಾಭದ್ರ ಎರಡು ನದಿಗಳಿದ್ದರೂ ಕೊಳಚೆ ನೀರನ್ನ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ. ಈಗಾಗಲೇ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ವತಃ ವೈದ್ಯರಾಗಿದ್ದರೂ ಜನರಿಗೆ ಶುದ್ಧ ನೀರನ್ನ ಕೊಡುವ ಕೆಲಸ ಮಾಡುತ್ತಿಲ್ಲ. ಹೀಗಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ನಾಯಿಕೊಡೆಯಂತೆ ತಲೆಎತ್ತಿಕೊಳ್ಳುತ್ತಿವೆ.

    ಒಟ್ನಲ್ಲಿ ರಾಯಚೂರಿನ ಜನತೆ ನಿತ್ಯ ನರಕವನ್ನ ನೋಡುತ್ತಿದ್ದು, ಇದೇ ಸ್ವರ್ಗ ಅಂತ ಆಸ್ಪತ್ರೆಯ ಬಿಲ್ಲು ಕಟ್ಟುತ್ತಾ ಬದುಕುತ್ತಿದ್ದಾರೆ. ಇಲ್ಲಿನ ಜನ ಇನ್ನೂ ಬದುಕಿದ್ದಾರೆ ಅಂತ ನಗರಸಭೆ ಹಾಗೂ ಜಿಲ್ಲಾಡಳಿತ ಮಲೀನವಾದ ನೀರನ್ನೇ ಕುಡಿಯಲು ಸರಬರಾಜು ಮಾಡುತ್ತಿವೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ. ನಗರದ ಜನತೆಗೆ ಶುದ್ಧ ಕುಡಿಯುವ ನೀರನ್ನ ಒದಗಿಸಬೇಕಿದೆ.

     

  • ಕೊಳಚೆ ದಾಟಲು ಹಿಂಜರಿದ ಅಧಿಕಾರಿಯನ್ನು ಹೊತ್ಕೊಂಡು ಹೋದ ಗ್ರಾಮಸ್ಥರು!

    ಕೊಳಚೆ ದಾಟಲು ಹಿಂಜರಿದ ಅಧಿಕಾರಿಯನ್ನು ಹೊತ್ಕೊಂಡು ಹೋದ ಗ್ರಾಮಸ್ಥರು!

    -ಇದು ರಾಯಚೂರು ಜಿಲ್ಲೆಯ ಜಿ.ಪಂ.ಸಿಇಓ ರ `ಕೂರ್ಮಾ’ವತಾರ

    ರಾಯಚೂರು: ಬರಗಾಲದಿಂದ ತತ್ತರಿಸಿರುವ ರಾಯಚೂರಿನ ಜನತೆಗೆ ಬಿರು ಬೇಸಿಗೆ ಜಲಕ್ಷಾಮದ ಬರೆ ಎಳೆದಿದೆ. ರಾಯಚೂರು ತಾಲೂಕಿನ ಆತ್ಕೂರು ಗ್ರಾಮದ ಜನ ತಮ್ಮ ಕಷ್ಟವನ್ನ ಮನವರಿಕೆ ಮಾಡಿಕೊಡಲು ಅಧಿಕಾರಿಯನ್ನ ಹೊತ್ತುಕೊಂಡು ಕರೆದೊಯ್ದು ಸಮಸ್ಯೆಗಳನ್ನ ತೋರಿಸಿದರು. ಕುಡಿಯುವ ನೀರಿನ ಟ್ಯಾಂಕ್‍ಗೆ ನೀರು ಹೋಗದೆ ಎಲ್ಲೆಂದರಲ್ಲಿ ಹರಿದ ಪರಿಣಾಮ ಕೊಳಚೆ ದಾಟಲು ಹಿಂದು-ಮುಂದು ನೋಡಿದ ಜಿಲ್ಲಾ ಪಂಚಾಯ್ತಿ ಸಿಇಓ ಕೂರ್ಮರಾವ್ ಅವರನ್ನ ಗ್ರಾಮಸ್ಥರೇ ಹೊತ್ತುಕೊಂಡು ಟ್ಯಾಂಕ್ ಬಳಿ ಕರೆದೊಯ್ದರು. ಈ ಮೂಲಕ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನ ಕೊಟ್ಟರೆ ತಲೆ ಮೇಲೆ ಬೇಕಾದ್ರು ಹೊತ್ತುಕೊಳ್ಳಲು ಗ್ರಾಮಸ್ಥರು ಸಿದ್ಧರಿದ್ದಾರೆ ಎನ್ನುವುದು ಸತ್ಯ.

    ಯಾವುದೇ ಗ್ರಾಮಕ್ಕೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಹೋಗಲು ಹೆದರುತ್ತಿದ್ದಾರೆ. ಗ್ರಾಮಸ್ಥರ ತಾಳ್ಮೆ ಮಿತಿ ಮೀರಿದ್ದು ಅವರ ಆಕ್ರೋಶ, ಸಿಟ್ಟಿಗೆ ಆಡಳಿತ ವರ್ಗ ಅಂಜುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆಯ ಪರಿಶೀಲನೆಗಾಗಿ ರಾಯಚೂರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನ ಗ್ರಾಮಸ್ಥರೇ ತರಾಟೆ ತೆಗೆದುಕೊಂಡು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೆಗಲ ಮೇಲೆ ಹೊತ್ತುಕೊಂಡು ಪರಿಹಾರ ಕೊಡಿ ಅಂತ ಆಗ್ರಹಿಸಿದ್ದಾರೆ.

    ಇದು ಒಂದೆಡೆಯಾದ್ರೆ ಬೂರ್ದಿಪಾಡ ಗ್ರಾಮದಲ್ಲಿ ಜನ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ಒಳಪಡಿಸಿದರು. ಕಾಟಾಚಾರಕ್ಕೆ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಬೋರ್‍ವೆಲ್, ಪೈಪ್‍ಲೈನ್ ಎಲ್ಲಾ ಇದ್ರೂ ಟ್ಯಾಂಕ್‍ಗೆ ನೀರು ಹರಿಸುವ ವ್ಯವಸ್ಥೆಯಿಲ್ಲ ಅಂತ ಕಿಡಿಕಾರಿದ್ರು. ದೇವಸುಗೂರು ಗ್ರಾಮದಲ್ಲಿ ಮಹಿಳೆಯರು ಕೊಡಗಳನ್ನ ಹಿಡಿದು ನೀರು ಕೊಡಿ ಅಂತ ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೂರ್ಮರಾವ್‍ಗೆ ಮುತ್ತಿಗೆ ಹಾಕಿದ್ರು.

    ಜನರ ಆಕ್ರೋಶ ಹಾಗೂ ನೀರಿನ ಸಮಸ್ಯೆಯನ್ನ ಕಣ್ಣಾರೆ ಕಂಡ ಅಧಿಕಾರಿಗಳು ಒಂದು ಸ್ಥಳದಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲಾ. ಈಗಾಗಲೇ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದೇವೆ, ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಗ್ರಾಮಸ್ಥರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಪೂರ್ಣ ಕಾಮಗಾರಿಗಳನ್ನ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸುವುದಾಗಿ ಕೂರ್ಮರಾವ್ ಹೇಳಿ ಅಲ್ಲಿಂದ ತೆರಳಿದರು.

    ಒಟ್ನಲ್ಲಿ, ಜನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ. ಕೇವಲ ಭರವಸೆಗಳನ್ನ ನೀಡುತ್ತಾರೆ ಹೊರತು ಶುದ್ಧ ಕುಡಿಯುವ ನೀರನ್ನ ಯಾರೂ ಕೊಡುತ್ತಿಲ್ಲ ಅಂತ ಕೆಂಡಾಮಂಡಲವಾಗಿದ್ದಾರೆ. ಈಗಲಾದ್ರೂ ಜಿಲ್ಲಾಪಂಚಾಯ್ತಿ ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕಿದೆ.

     

  • ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ಕೂಗಾಟ, ಹಾರಾಟದಲ್ಲಿಯೇ ರಾಯಚೂರು ಸಾಮಾನ್ಯ ಸಭೆ ಅಂತ್ಯ

    ರಾಯಚೂರು: ರಾಯಚೂರು ನಗರಸಭೆ ಸಭಾಂಗಣದಲ್ಲಿ ನಡೆದ ಮಹಾ ಸಾಮಾನ್ಯ ಸಭೆ ಸದಸ್ಯರ ಕೂಗಾಟ, ಹಾರಾಟಗಳಿಗೆ ಬಲಿಯಾಯಿತು. ಸಭೆ ಆರಂಭದಿಂದಲೂ ವೈಯಕ್ತಿಕ ಸಮಸ್ಯೆಗಳನ್ನು ತೋಡಿಕೊಂಡ ಸದಸ್ಯರು ಅಧಿಕಾರಿಗಳು ಮಾತು ಕೇಳ್ತಿಲ್ಲಾ ಎಂದು ಹರಿಹಾಯ್ದರು. ನಗರಸಭೆಯಲ್ಲಿ ಸದಸ್ಯರನ್ನು ಕೇಳುವವರಿಲ್ಲ ಅಂತ ತಮ್ಮ ಗೋಳು ತೋಡಿಕೊಂಡರು.

    ಸದಸ್ಯೆ ಸೀಮಾ ನದಾಫ್ ತಮ್ಮ ವಾರ್ಡಿನ ಕಬರಸ್ತಾನದಲ್ಲಿ ತಮಗೇ ತಿಳಿಯದಂತೆ ಶೌಚಾಲಯ ನಿರ್ಮಿಸಿದ್ದಾರೆ ಅಂತ ಕೂಗಾಡಿದರು. ಇತರೆ ಸದಸ್ಯರು ಬೆಂಬಲ ಕೊಡದಿದ್ದಕ್ಕೆ ಖುರ್ಚಿಯಿಂದ ಎದ್ದು ಅಧ್ಯಕ್ಷೆ, ಉಪಾಧ್ಯಕ್ಷ, ಪೌರಾಯುಕ್ತರ ವಿರುದ್ಧ ಆರೋಪಿಸಿ ಪ್ರತಿಭಟನೆ ನಡೆಸಿದರು. ಗೊತ್ತುವಳಿಗಳು ಚರ್ಚಿಸದೇ ಎಸ್ ಪಾಸ್ ಆಗುತ್ತಿವೆ ಅಂತ ಸದಸ್ಯ ನರಸಪ್ಪ ಟೇಬಲ್ ಹಾರಿ ಸಭಾಂಗಣದ ಬಾವಿಗೆ ಇಳಿದು ನಗರಸಭೆ ಉಪಾಧ್ಯಕ್ಷ ಜಯಣ್ಣ ವಿರುದ್ಧ ಕೂಗಾಡಿ ಗೊಂದಲ ಸೃಷ್ಟಿ ಮಾಡಿದರು.

    ಇನ್ನೂ ಸದಸ್ಯ ಮೆಹಬೂಬ್ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೀಪಾಲಂಕಾರಕ್ಕೆ ನಗರಸಭೆಯಿಂದ ನೀಡಲಾದ 3 ಲಕ್ಷ 90 ಸಾವಿರ ರೂಪಾಯಿ ಲೆಕ್ಕ ತೋರಿಸುವಂತೆ ಆಗ್ರಹಿಸಿ ಕಳ್ಳಲೆಕ್ಕಗಳಲ್ಲಿ ನಗರಸಭೆ ಮುಳುಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರೆಲ್ಲರೂ ಪಕ್ಷಭೇದ ಮರೆತು ನಗರಸಭೆ ಸದಸ್ಯರಿಗೆ ಬೆಲೆ ಸಿಗುತ್ತಿಲ್ಲ ಅಂತ ಕೂಗಾಡಿದರು. ಗದ್ದಲ, ಗಲಾಟೆಯಲ್ಲಿ 41 ಗೊತ್ತುವಳಿಗಳನ್ನು ಎಸ್ ಪಾಸ್ ಮೂಲಕ ಅಂಗೀಕರಿಸಲಾಯಿತು.

    ನಗರದಲ್ಲಿ ದಿನೇ ದಿನೇ ಗಂಭೀರವಾಗುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತಾಗಲಿ, ಅಸಮರ್ಪಕವಾಗಿ ಸಾಗಿರುವ ಒಳಚರಂಡಿ ಕಾಮಗಾರಿಯ ತೊಂದರೆ, ರಸ್ತೆ, ಶೌಚಾಲಯ, ವಿದ್ಯುತ್ ದೀಪದ ಬಗ್ಗೆ ಗಂಭೀರ ಚರ್ಚೆ ನಡೆಯದೇ ಬರೀ ಗಲಾಟೆಯಲ್ಲಿ ಸಭೆ ಮುಕ್ತಾಯಗೊಂಡಿತು.

     

  • ಯಾದಗಿರಿ: ಜನತೆಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

    ಯಾದಗಿರಿ: ಜನತೆಗೆ ಮರೀಚಿಕೆಯಾದ ಶುದ್ಧ ಕುಡಿಯುವ ನೀರು

    – 3 ತಿಂಗಳಿನಿಂದ ಕಲುಷಿತ ನೀರು ಕುಡಿಯುತ್ತಿರೋ ಜನ

    ಯಾದಗಿರಿ: ನಗರದ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಶುದ್ಧ ನೀರು ಪೂರೈಸಿ ಜನರ ಆರೋಗ್ಯ ಕಾಪಾಡಬೇಕಾದ ನಗರಸಭೆ ಮಾತ್ರ ನಿಷ್ಕಾಳಜಿ ವಹಿಸಿದೆ. ನಗರಸಭೆ ಕಲುಷಿತ ನೀರು ಪೂರೈಸುತ್ತಿರುವ ಪರಿಣಾಮ ಜನತೆ ಅನಾರೋಗ್ಯದಿಂದ ಬಳಲುವಂತಾಗಿದೆ.

    ನಗರದ ಜನರಿಗೆ ಯಾದಗಿರಿ ನಗರಸಭೆ ಗಲೀಜು ನೀರು ಪೂರೈಸುತ್ತಿದೆ. ಕಳೆದ 3 ತಿಂಗಳಿನಿಂದ ಗಲೀಜು ನೀರನ್ನೇ ಜನತೆ ಸೇವನೆ ಮಾಡುತ್ತಿದ್ದಾರೆ. ನೀರು ಪೂರೈಸುವ ಪೈಪ್ ಲೈನ್ ಚರಂಡಿ ನೀರಿನಲ್ಲಿ ಸೇರಿಕೊಂಡ ಪರಿಣಾಮ ಚರಂಡಿ ನೀರು ನಲ್ಲಿಯ ಮೂಲಕ ಹರಿದುಬರುತ್ತಿದೆ.

    ವಾರ್ಡ್ 6ರ ಸವಿತಾ ನಗರ, ಮೈಲಾಪುರ ಅಗಸಿ ಹಾಗೂ ಇನ್ನಿತರೆ ಬಡಾವಣೆಯಲ್ಲಿ ಕಳೆದ ಮೂರು ತಿಂಗಳಿನಿಂದ ಮಲಿನವಾದ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಣವಾಗಿ ಗಲೀಜು ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದ ಹಿನ್ನಲೆಯಲ್ಲಿ ಹಾಗೂ ನೀರಿನ ಕೊರತೆಯಿಂದಾಗಿ ನಗರದ ನಿವಾಸಿಗಳು ಇದೇ ನೀರನ್ನ ಸ್ವಲ್ಪಮಟ್ಟಿಗೆ ಶುದ್ಧೀಕರಿಸಿ ದಾಹ ತಣಿಸಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ನಗರದ ನಿವಾಸಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಭರವಸೆ ನೀಡುವ ಕೆಲಸ ಮಾಡಿದ್ದಾರೆ. ಈಗಾಗಲೇ ನಗರದ ಜನತೆ ನೀರಿಗಾಗಿ ಹಾಹಾಕರ ಪಡುತ್ತಿದ್ದಾರೆ. ಇದ್ದಷ್ಟಾದರೂ ನಮಗೆ ಶುದ್ಧವಾದ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಅಳಲು ತೊಡಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರು ನಗರಸಭೆ ಎಚ್ಚೆತ್ತುಕೊಂಡು ಸಮಸ್ಯೆಗಳನ್ನು ಬಗೆಹರಿಸಿ ನಗರದ ನಿವಾಸಿಗಳಿಗೆ ಶುದ್ಧವಾದ ನೀರು ಪೂರೈಸುವ ಕೆಲಸ ಮಾಡಬೇಕಿದೆ.

     

  • ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    ರಾಯಚೂರಿನ 50% ಜನರಿಗೆ ಮೂತ್ರಪಿಂಡ ಸಮಸ್ಯೆ: ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣ

    -ಹೆಚ್ಚು ನೀರು ಕುಡಿಯದ ಜನರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ

    -ಬಿಸಿಲು ಹಾಗೂ ಅಶುದ್ಧ ನೀರು ಕಾಯಿಲೆಗೆ ಕಾರಣ

    -ಬೇಕರಿ, ಹೋಟೆಲ್ ಅಡುಗೆಮನೆ ಕೆಲಸಗಾರರು ಹಾಗೂ ರೈತರು ಹೆಚ್ಚು ಬಾಧಿತರು

    ರಾಯಚೂರು: ಕರ್ನಾಟಕ ರಾಜ್ಯದ ಬಿಸಿಲನಾಡು ಎಂದು ರಾಯಚೂರು ಜಿಲ್ಲೆಯನ್ನು ಕರೆಯುತ್ತಾರೆ. ನಿಜ, ಆದ್ರೆ ಆ ಬಿಸಿಲು ರಾಯಚೂರಿನ ಜನರ ಮೇಲೆ ಏನೆಲ್ಲಾ ಪರಿಣಾಮಗಳನ್ನ ಬೀರುತ್ತಿದೆ ಗೊತ್ತಾ? ಇಲ್ಲಿನ ಬಿಸಿಲಿನಿಂದಾಗಿಯೇ ಜನ ಮೂತ್ರಪಿಂಡದ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಯ ಮೂರು ತಿಂಗಳಲ್ಲಿ ಸಾವಿರಾರು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ರೋಗಿಗಳಲ್ಲಿ ರೈತರ ಸಂಖ್ಯೆಯೇ ಹೆಚ್ಚಾಗಿರುವುದು ದುರಂತ.

    ವೈದ್ಯರೇ ಹೇಳುವ ಹಾಗೇ ಬೇಸಿಗೆಯಲ್ಲಿ ರೋಗಿಗಳ ಸಂಖ್ಯೆ ಇತರೆ ದಿನಗಳಿಗಿಂದ ಶೇಕಡಾ 100 ರಷ್ಟು ಹೆಚ್ಚಾಗಿರುತ್ತದೆ. ಜಿಲ್ಲೆಯ ಶೇಕಡಾ 50 ರಷ್ಟು ಜನರಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಹದ ನಿರ್ಜಲೀಕರಣ. ಬೇಸಿಗೆಯಲ್ಲಿ ದೇಹದಿಂದ ಬೆವರು, ಮೂತ್ರ, ಉಸಿರಾಟದ ಮೂಲಕ ಹೆಚ್ಚು ನೀರು ಹೊರಹೋಗುತ್ತದೆ. ಹೆಚ್ಚೆಚ್ಚು ನೀರು ಕುಡಿಯದೇ ಇರುವುದು ಸಮಸ್ಯೆಗೆ ಕಾರಣವಾಗಿದೆ. ಬೇಸಿಗೆ ಆರಂಭದಿಂದ ಪ್ರತೀ ವರ್ಷ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಸರಿಸುಮಾರು ಮೂರದಿಂದ ನಾಲ್ಕು ಸಾವಿರ ಜನ ಮೂತ್ರಪಿಂಡ ಸಮಸ್ಯೆ ಹಾಗೂ ಕಿಡ್ನಿ ಸ್ಟೋನ್‍ನಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ರಾಯಚೂರು ಸೇರಿದಂತೆ ಹೈದ್ರಬಾದ್ ಕರ್ನಾಟಕ ಭಾಗದಲ್ಲಿ ಈ ಸಮಸ್ಯೆ ವಿಪರೀತ ಮಟ್ಟಕ್ಕೆ ಮುಟ್ಟಿದೆ.

    ಹೊಲದಲ್ಲಿ ಕೆಲಸ ಮಾಡುವ ರೈತರು, ಕೃಷಿ ಕೂಲಿ ಕಾರ್ಮಿಕರು, ಬೇಕರಿಗಳಲ್ಲಿ, ಹೋಟೆಲ್ ಅಡುಗೆ ಕೋಣೆಯಲ್ಲಿ ಕೆಲಸ ಮಾಡುವವರಲ್ಲಿ ಹಾಗೂ ಹೆಚ್ಚು ಮಾಂಸ ಪದಾರ್ಥ ಸೇವೆನೆ ಮಾಡುವವರನ್ನ ಮೂತ್ರಪಿಂಡ ಸಮಸ್ಯೆ ಕಾಡುತ್ತಿದೆ. ಕಾಲ್ಶಿಯಂ ಹಾಗೂ ಯೂರಿಕ್ ಆಸಿಡ್ ಸ್ಟೋನ್‍ಗಳು ಮೂತ್ರಪಿಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಿರ್ಲಕ್ಷ್ಯ ಮಾಡುವವರು ಮೂತ್ರಪಿಂಡಗಳನ್ನೇ ಕಳೆದುಕೊಳ್ಳುತ್ತಿದ್ದಾರೆ.

    ಬಿಸಿಲಿನ ಜೊತೆ ಗ್ರಾಮೀಣ ಭಾಗದಲ್ಲಿನ ಶುದ್ಧ ಕುಡಿಯುವ ನೀರಿನ ಕೊರತೆ ಸಹ ಕಿಡ್ನಿ ಸ್ಟೋನ್‍ಗೆ ಕಾರಣವಾಗಿದೆ. ಕೆಲ ರೋಗಿಗಳಿಗೆ ಹೊಟ್ಟೆ ನೋವು, ಜ್ವರದಂತ ಲಕ್ಷಣಗಳು ಕಾಣಿಸಿಕೊಂಡರೆ, ಇನ್ನೂ ಕೆಲವರಲ್ಲಿ ಯಾವುದೇ ಲಕ್ಷಣಗಳು ಗೋಚರಿಸದೇ ಮೂತ್ರಪಿಂಡಗಳ ಗಂಭೀರ ಸಮಸ್ಯೆ ಒಮ್ಮೆಲೆ ಎದುರಾಗುತ್ತಿದೆ ಎಂದು ಮೂತ್ರಪಿಂಡ ತಜ್ಞ ಡಾ.ತಾನಾಜಿ ಕಲ್ಯಾಣಕರ್ ಹೇಳಿದ್ದಾರೆ.

    ಅಷ್ಟೇ ಅಲ್ಲದೆ ಬಿಸಿಲೂರ ಜನರಿಗೆ ಬಿಸಿಲಿನಿಂದ ಕಿಡ್ನಿ ಸ್ಟೋನ್ ಜೊತೆ ಜೊತೆಗೆ ಸನ್ ಸ್ಟ್ರೋಕ್, ರಕ್ತದೊತ್ತಡ ಸಮಸ್ಯೆಗಳು ಇನ್ನಿಲ್ಲದಂತೆ ಕಾಡುತ್ತಿವೆ. ಬಿಸಿಲಿನ ತಾಪ ಹಾಗೂ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹೆಚ್ಚೆಚ್ಚು ನೀರು, ತಂಪು ಪಾನೀಯ, ಎಳನೀರು ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ.

     

  • ಯಾದಗಿರಿ: ಜಿಲ್ಲಾಸ್ಪತ್ರೆಗೆ ದಾಖಲಾಗಬೇಕಾದ್ರೆ ಊರಿಂದ ನೀರು ತರಬೇಕು!

    ಯಾದಗಿರಿ: ಜಿಲ್ಲಾಸ್ಪತ್ರೆಗೆ ದಾಖಲಾಗಬೇಕಾದ್ರೆ ಊರಿಂದ ನೀರು ತರಬೇಕು!

    ಯಾದಗಿರಿ: ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಕೋಟಿ ಕೋಟಿ ಹಣವನ್ನು ಬಿಡುಗಡೆ ಮಾಡುತ್ತದೆ. ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದಕ್ಕೆ ಯಾದಗಿರಿಯ ಜಿಲ್ಲಾಸ್ಪತ್ರೆಗೆ ನೀವು ಎಂಟ್ರಿ ಕೊಟ್ಟು ನೀಡಬಹುದು.

    ಹೌದು. ಊರಿನಿಂದ ರೋಗಿಗಳು ನೀರು ತರಬೇಕಾದ ದುಸ್ಥಿತಿ ಯಾದಗಿರಿಯ ಜಿಲ್ಲಾಸ್ಪತ್ರೆಗೆ ಬಂದೊದಗಿದೆ. ನಿತ್ಯವು ನೂರಾರು ಬಡ ರೋಗಿಗಳು ಹಣವಿಲ್ಲದೇ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದ್ರೆ ಈ ಆಸ್ಪತ್ರೆಯಲ್ಲಿ ದಾಖಲಾಗಬೇಕಾದರೆ ನೀರಿಗಾಗಿ ನಿತ್ಯವು ನೂರಾರು ರೂಪಾಯಿ ಖರ್ಚು ಮಾಡಬೇಕಾಗಿದೆ.

    ಜಿಲ್ಲಾಸ್ಪತ್ರೆಯಲ್ಲಿ ಎರಡು ಕೊಳವೆ ಬಾವಿ ಮೂಲಕ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಎರಡೂ ಕೊಳವೆ ಬಾವಿಗಳ ನೀರು ಕುಡಿಯಲು ಯೋಗ್ಯವಿಲ್ಲ. ಬಳಕೆಗೆ ಮಾತ್ರ ಈ ನೀರನ್ನು ಬಳಸಬಹುದಾಗಿದೆ. ಕೊಳವೆ ಬಾವಿ ನೀರನ್ನೇ ಶುದ್ಧೀಕರಿಸಿ ರೋಗಿಗಳಿಗೆ ಸಮರ್ಪಕವಾಗಿ ನೀರು ಪೂರೈಸಬೇಕು. ಆದರೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಆಸ್ಪತ್ರೆ ಕಟ್ಟಡದ ಮೇಲೆ ನೀರು ಶುದ್ಧಿಕರಣ ಘಟಕ ಅಳವಡಿಸಿದ್ದರೂ 15-20 ದಿನಗಳಿಗೊಮ್ಮೆ ಬಳಕೆ ಮಾಡಲಾಗುತ್ತಿದೆ. ಆದ್ದರಿಂದ ಅಗತ್ಯ ಪ್ರಮಾಣದ ಶುದ್ಧ ನೀರು ಸರಬರಾಜು ಆಗುತ್ತಿಲ್ಲ.

    ಆಸ್ಪತ್ರೆ ಕಟ್ಟಡದ ಮೇಲೆ ನೀರು ಶುದ್ಧಿಕರಣ ಘಟಕ ಅಳವಡಿಸಿದ್ರು 15-20 ದಿವಸಕ್ಕೊಮೆ ಬಳಕೆ ಮಾಡುತ್ತಿದ್ದಾರೆ. ಅದರಿಂದ ರೋಗಿಗಳಿಗೆ ಪೂರೈಸಬೇಕಾದಷ್ಟು ನೀರು ಶುದ್ಧಿಕರಣ ಮಾಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ತಳಭಾಗದಲ್ಲಿ ಚಿಕ್ಕದಾದ ನೀರು ಶುದ್ಧಿಕರಣ ಘಟಕ ಹಾಕಿ ಕೈತೊಳೆದುಕೊಂಡಿದ್ದಾರೆ. ಇದರಿಂದ ಕೂಡ ಒಂದು ಹನಿ ನೀರು ಸರಿಯಾಗಿ ಸಿಗುತ್ತಿಲ್ಲ.

    ಬೇಸಿಗೆ ಆರಂಭವಾಗಿದ್ದು ದಾಹ ಹೆಚ್ಚಾಗುತ್ತಿದೆ. ಸರ್ಕಾರ ಮಾತ್ರ ಆಸ್ಪತ್ರೆಗೆ ಬರುವ ಜನರಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡುತ್ತಿಲ್ಲ. ಹಗಲು ಸಮಯದಲ್ಲಿ ಬಡ ರೋಗಿಗಳು ಹಾಗೂ ಅವರ ಸಂಬಂಧಿಕರು ಆಸ್ಪತ್ರೆ ಮುಂಭಾಗದ ಅಂಗಡಿಗಳಲ್ಲಿ ನೀರನ್ನು ಖರೀದಿ ಮಾಡುತ್ತಾರೆ. ರಾತ್ರಿ ವೇಳೆಯಲ್ಲಿ ದಾಹವಾದ್ರೆ ರೋಗಿಗಳು ನೀರಿಲ್ಲದೇ ನರಕಯಾತನೆ ಅನುಭವಿಸುವಂತಾಗಿದೆ. ಇನ್ನು ಮುಂದಾದರು ಸಂಬಂಧಪಟ್ಟ ಅಧಿಕಾರಿಗಳು, ಉಸ್ತುವಾರಿ ಸಚಿವರು ಇತ್ತ ಕಾಳಜಿ ವಹಿಸಿ ಬಡ ರೋಗಿಗಳಿಗೆ ಶುದ್ಧ ನೀರು ಪೂರೈಸುವ ಕೆಲಸ ಮಾಡಬೇಕಾಗಿದೆ.

     

  • ಕುಡಿಯುವ ನೀರಲ್ಲಿ ಮೀನು, ಹುಳಗಳ ಸರಬರಾಜು-ರಾಯಚೂರಲ್ಲಿ ನೀರಿಲ್ಲದೆ ನರಕಯಾತನೆ

    ಕುಡಿಯುವ ನೀರಲ್ಲಿ ಮೀನು, ಹುಳಗಳ ಸರಬರಾಜು-ರಾಯಚೂರಲ್ಲಿ ನೀರಿಲ್ಲದೆ ನರಕಯಾತನೆ

    -ನಗರಸಭೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪರದಾಟ

    -ಸಾಲಮಾಡಿ ನೀರು ಕೊಳ್ಳಲು ಮುಂದಾಗುತ್ತಿರುವ ಜನ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀರಿಗಾಗಿ ಜನ ನಿತ್ಯ ಪರದಾಡುತ್ತಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಒಂದು ರೀತಿಯ ಸಮಸ್ಯೆಯಾದ್ರೆ ನಗರ ಪಟ್ಟಣಗಳಲ್ಲಿ ಇನ್ನೊಂದು ರೀತಿಯ ಸಮಸ್ಯೆಗಳು ತಲೆದೂರಿವೆ. ಬಡವರು ಸಹ ಅನಿವಾರ್ಯವಾಗಿ ದುಡ್ಡು ಕೊಟ್ಟೆ ನೀರು ಕುಡಿಯಬೇಕಾದ ಪರಸ್ಥಿತಿ ಎದುರಾಗಿದೆ.

    ರಾಯಚೂರಿನ ಗಾಜಗಾರಪೇಟೆ, ವಾಸವಿನಗರ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳು ನಗರ ಪ್ರದೇಶದಲ್ಲಿದ್ದರೂ ಇವರಿಗೆ ನಾಲ್ಕು ದಿನಕ್ಕೆ ಒಂದು ಬಾರಿ ಕುಡಿಯುವ ನೀರು ಸಿಗುತ್ತಿದೆ. ಆ ನೀರು ಸಹ ಕೊಳಚೆ ವಾಸನೆಯಿದ್ದು, ಸಣ್ಣ ಮೀನು, ಹುಳಗಳು, ಕಸಕಡ್ಡಿ ನೀರಿನಲ್ಲಿ ಬರುತ್ತಿವೆ. ಅನಿವಾರ್ಯವಾಗಿ ಜನ ಇದೇ ನೀರನ್ನ ಸೋಸಿ ಕುಡಿಯುತ್ತಿದ್ದರು. ಆದ್ರೆ ಕಳೆದ ಒಂದು ತಿಂಗಳಿಂದ ಈ ನೀರನ್ನ ಕುಡಿದು ಮಕ್ಕಳು ಆಸ್ಪತ್ರೆ ಸೇರುತ್ತಿರುವುದರಿಂದ ಅನಿವಾರ್ಯವಾಗಿ ದುಡ್ಡು ಕೊಟ್ಟು ಶುದ್ಧ ಕುಡಿಯುವ ನೀರನ್ನ ತರುತ್ತಿದ್ದಾರೆ. ನೀರಿನ ಶುದ್ಧೀಕರಣ ಘಟಕದಲ್ಲಿ ಒಂದು ಕೊಡಕ್ಕೆ 7 ರೂಪಾಯಿ, ಒಂದು ಕ್ಯಾನ್‍ಗೆ 8 ರೂಪಾಯಿ ಕೊಡುತ್ತಿದ್ದಾರೆ. ಇಲ್ಲೂ ನೀರು ಸಿಗದಿದ್ದರೆ ಕಿರಾಣಿ ಅಂಗಡಿಗಳಲ್ಲಿ 35 ರಿಂದ 40 ರೂ. ಕೊಟ್ಟು ಒಂದು ಕ್ಯಾನ್ ನೀರನ್ನು ಪಡೆಯುತ್ತಿದ್ದಾರೆ.

    ರಾಯಚೂರು ನಗರಸಭೆ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ಜನ ನೀರಿನ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ನೀರಿನ ಸಮಸ್ಯೆ ಒಂದೆಡೆಯಾದ್ರೆ ಶುದ್ಧ ಕಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ನಾಲ್ಕು ದಿನಕ್ಕೆ ಒಂದು ಬಾರಿ ನೀರು ಬಿಡುವ ನಗರಸಭೆ ಕನಿಷ್ಠ ಶುದ್ಧೀಕರಣವನ್ನೂ ಮಾಡದೇ ಕುಡಿಯುವ ನೀರು ಅಂತ ಸರಬರಾಜು ಮಾಡುತ್ತಿದೆ. ಇದರಿಂದ ಬೇಸತ್ತಿರುವ ಜನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನೂ ಗ್ರಾಮೀಣ ಭಾಗದಲ್ಲಿ ಬೋರ್‍ವೆಲ್ ನೀರಿನಲ್ಲಿ ಲವಣಾಂಶಗಳು ಹೆಚ್ಚಾಗಿರುವುದರಿಂದ ಪದೇ ಪದೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

    ಒಟ್ನಲ್ಲಿ, ಬೇಸಿಗೆ ಬಂದ್ರೆ ರಾಯಚೂರು ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ. ಈಗಾಗಲೇ ಜಿಲ್ಲಾಡಳಿತ ತೀವ್ರ ನೀರಿನ ಸಮಸ್ಯೆಗಳಿರುವ 68 ಗ್ರಾಮಗಳನ್ನ ಗುರುತಿಸಿದೆ. ಕೂಡಲೇ ಶುದ್ಧ ಕುಡಿಯುವ ಹಾಗೂ ದಿನಬಳಕೆ ನೀರನ್ನ ಸರಬರಾಜು ಮಾಡದಿದ್ದರೆ ನೀರಿಗಾಗೇ ಜನ ಸಾಲ ಮಾಡಬೇಕಾಗುತ್ತದೆ.

     

  • ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರಿನ ಜನ ಶುದ್ಧ ನೀರಿನ ಬದಲು ಕುಡಿಯುತ್ತಿದ್ದಾರೆ ಡ್ರೈನೇಜ್ ನೀರು!

    ಮಂಗಳೂರು: ನಗರದ ಜನರು ನೀರು ಕುಡಿಯೋ ಮೊದ್ಲು ಇನ್ಮುಂದೆ ಸ್ವಲ್ಪ ಯೋಚಿಸಬೇಕು. ಯಾಕಂದ್ರೆ ಮಂಗಳೂರು ನಗರವಾಸಿಗಳಿಗೆ ಶುದ್ದ ಕುಡಿಯುವ ನೀರಿಗೆ ಬದಲಾಗಿ ಡ್ರೈನೇಜ್ ನೀರನ್ನು ಕುಡಿಯುತ್ತಿದ್ದಾರೆ. ಪಾಲಿಕೆ ಡ್ರೈನೇಜ್ ನೀರು ಕುಡಿಸೋದರ ಜಾಡು ಹಿಡಿದು ಹೋದ ಪಬ್ಲಿಕ್ ಟಿವಿಗೆ ನಿಜ ಸಂಗತಿ ಗೊತ್ತಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಬೆ ಡ್ಯಾಂನಿಂದ ಮಂಗಳೂರು ನಗರಕ್ಕೆ ಶುದ್ಧ ಕುಡಿಯೋ ನೀರು ಪೂರೈಕೆಯಾಗುತ್ತೆ. ಆದ್ರೆ ಇತ್ತೀಚೆಗೆ ನಗರದ ಜನರಿಗೆ ಹಲವು ರೋಗಗಳು ಕಾಣಿಸಿಕೊಂಡ ಪರಿಣಾಮ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಕೊಲಿಫಾರಂ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇದಕ್ಕೆಲ್ಲಾ ಕೊಳಚೆ ನೀರು ಡ್ಯಾಂಗೆ ಸೇರುತ್ತಿರೋದೇ ಕಾರಣ ಎಂಬ ವಿಷಯ ಗೊತ್ತಾಗಿದೆ.

    ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕ್ಷೇತ್ರವಾಗಿರುವ ಬಂಟ್ವಾಳದಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕ ಇಲ್ಲ. ಅಲ್ಲದೇ 38 ಕೋಟಿ ರೂಪಾಯಿ ವೆಚ್ಚದಲ್ಲಿ 2003ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿ ಇನ್ನೂ ಪೂರ್ತಿಯಾಗದೇ ಇರೋದು ಸಮಸ್ಯೆಗೆ ಕಾರಣ. ಈ ಬಗ್ಗೆ ಪಾಲಿಕೆಗೆ ಗೊತ್ತಿದ್ರೂ ಬಾಯಿ ಮುಚ್ಚಿ ಕುಳಿತಿದೆ. ಸಮಸ್ಯೆ ಬಗ್ಗೆ ಕೇಳಿದ್ರೆ ಇದೇನು ಹೊಸತಲ್ಲ ಅಂತ ಮೇಯರ್ ಹರಿನಾಥ್ ಬೇಜವಾಬ್ದಾರಿಯ ಉತ್ತರ ಕೊಡ್ತಿದ್ದಾರೆ.

    ಒಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಗಳ ಜಾಣ ಕುರುಡುತನದಿಂದಾಗಿ ಮಂಗಳೂರಿನ ಜನ ಡ್ರೈನೇಜ್ ನೀರನ್ನ ಕುಡಿಯುವಂತಾಗಿದೆ. ಇನ್ನಾದ್ರು ಸಮಸ್ಯೆ ಬಗೆಹರಿಸದಿದ್ರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ.