Tag: CK nayudu trophy

  • 46 ಬೌಂಡರಿ, 12 ಸಿಕ್ಸರ್‌ – ಒಂದೇ ಇನ್ನಿಂಗ್ಸ್‌ನಲ್ಲಿ ಅಜೇಯ 426 ರನ್‌ ಚಚ್ಚಿ ಹೊಸ ದಾಖಲೆ ಸೃಷ್ಟಿ!

    46 ಬೌಂಡರಿ, 12 ಸಿಕ್ಸರ್‌ – ಒಂದೇ ಇನ್ನಿಂಗ್ಸ್‌ನಲ್ಲಿ ಅಜೇಯ 426 ರನ್‌ ಚಚ್ಚಿ ಹೊಸ ದಾಖಲೆ ಸೃಷ್ಟಿ!

    ಹರಿಯಾಣ: ಬರೋಬ್ಬರಿ 12 ಸಿಕ್ಸರ್‌, 46 ಬೌಂಡರಿಗಳೊಂದಿಗೆ ಅಜೇಯ 426 ರನ್‌ (463 ಎಸೆತ) ಸಿಡಿಸುವ ಮೂಲಕ ಹರಿಯಾಣದ ಬ್ಯಾಟರ್‌ ಯಶ್ವರ್ಧನ್ ದಲಾಲ್‌ (Yashvardhan Dalal) ಇನ್ನಿಂಗ್ಸ್‌ವೊಂದರಲ್ಲಿ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ.

    ಶುಕ್ರವಾರದಿಂದ ಆರಂಭಗೊಂಡಿರುವ ನಡೆದ ಕರ್ನಲ್ ಸಿಕೆ ನಾಯುಡು ಟ್ರೋಫಿ (CK Nayudu Trophy) ಅಂಗವಾಗಿ ಹರಿಯಾಣದ ಸುಲ್ತಾನ್ ಪುರದಲ್ಲಿರುವ ಗುರುಗ್ರಾಮ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಹರಿಯಾಣ ಹಾಗೂ ಮುಂಬೈ ತಂಡಗಳ ನಡುವಿನ ಪಂದ್ಯದಲ್ಲಿ ಆರಂಭಿಕ ಯಶ್ವರ್ಧನ್‌ ದಲಾಲ್‌ ಆರಂಭದಲ್ಲೇ ಭರ್ಜರಿ ಕಮಾಲ್‌ ಮಾಡಿದ್ದಾರೆ. ಮುಂಬೈ (Mumbai) ವಿರುದ್ಧ 92.03 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಯಶ್ವರ್ಧನ್‌ ದಲಾಲ್‌ 426 ರನ್‌ ಚಚ್ಚಿ ಕ್ರೀಸ್‌ನಲ್ಲಿ ಅಜೇಯರಾಗುಳಿದರು. ಇದರೊಂದಿಗೆ 2ನೇ ದಿನದ ಅಂತ್ಯಕ್ಕೆ ಹರಿಯಾಣ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ ನಷ್ಟಕ್ಕೆ 732 ರನ್‌ ಬಾರಿಸಿತು. ಇದನ್ನೂ ಓದಿ: ತವರಲ್ಲೇ ಆಸ್ಟ್ರೇಲಿಯಾ ಬಗ್ಗು ಬಡಿದ ಪಾಕ್‌ – 22 ವರ್ಷಗಳ ಬಳಿಕ ಸರಣಿ ಗೆಲುವು

    ದಲಾಲ್‌ ಈ ಇನ್ನಿಂಗ್ಸ್‌ನಲ್ಲಿ ಅಜೇಯ 426 ರನ್ ಗಳಿಸುವ ಮೂಲಕ ವೈಯಕ್ತಿಕ ಗರಿಷ್ಠ ರನ್‌ ಗಳಿಸಿದ ದಾಖಲೆ ಬರೆದರು. ಇದರೊಂದಿಗೆ ಕಳೆದ ವರ್ಷ ಇದೇ ಟೂರ್ನಿಯಲ್ಲಿ ಒಂದೇ ಇನಿಂಗ್ಸ್ ನಲ್ಲಿ 312 ರನ್ ಸಿಡಿಸಿ ಅತಿ ದೊಡ್ಡ ವೈಯಕ್ತಿಕ ಮೊತ್ತ ದಾಖಲೆ ಬರೆದಿದ್ದ ಉತ್ತರ ಪ್ರದೇಶ ಬ್ಯಾಟ್ಸ್‌ಮನ್‌ ಸಮೀರ್ ರಿಝ್ವಿಯವರ ದಾಖಲೆಯನ್ನು ನುಚ್ಚುನೂರು ಮಾಡಿದರು. ಇದನ್ನೂ ಓದಿ: ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ಐಸಿಸಿ ಟೂರ್ನಿಗಳಿಗೆ ಬಹಿಷ್ಕಾರ: ಪಾಕ್‌

    ಮೊದಲು ಟಾಸ್ ಗೆದ್ದಿದ್ದ ಮುಂಬೈ ತಂಡ, ಫೀಲ್ಡಿಂಗ್ ಆಯ್ದುಕೊಂಡೂ ಭೈಆಟಿಂಗ್‌ ಮಾಡುವ ಅವಕಾಶವನ್ನು ಹರಿಯಾಣಕ್ಕೆ ಬಿಟ್ಟುಕೊಟ್ಟಿತು. ಫೀಲ್ಡಿಂಗ್‌ ಆಯುಕ್ತಕೊಂಡ ಮುಂಬೈ ಎದುರಾಳಿ ಬ್ಯಾಟರ್‌ಗಳನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ವಿಶ್ವಾಸದಲ್ಲಿತ್ತು. ಆದ್ರೆ ಹರಿಯಾಣ ಬ್ಯಾಟರ್‌ಗಳ ಆರ್ಭಟಕ್ಕೆ ಲೆಕ್ಕಾಚಾರವೆಲ್ಲಾ ಉಲ್ಟಾ ಆಯಿತು. ಆರಂಭಿಕರಾದ ದಲಾಲ್ ಮತ್ತು ಅರ್ಶ್‌ ರಂಗಾ ಅವರ ಜೊತೆಯಾಟ ಮುಂಬೈ ಬೌಲರ್‌ಗಳನ್ನು ಕಂಗಾಲು ಮಾಡಿತ್ತು. ಇವರಿಬ್ಬರ ಜುಗಲ್ ಬಂದಿಯಲ್ಲಿ ಆಟ ಮೊದಲ ವಿಕೆಟ್‌ಗೆ 410 ರನ್‌ಗಳನ್ನು ಕಲೆಹಾಕಿತ್ತು.

    ರಂಗಾ ಅವರ ವಿಕೆಟ್ ಪತನವಾದ ನಂತರ ಇನ್ನುಳಿದ ಬ್ಯಾಟ್ಸ್ ಮನ್ ಗಳು ಹಾಗೆ ಬಂದು ಹೀಗೆ ಹೋದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ಬೇರೂರು ಆಡಿದ ದಲಾಲ್ ಶನಿವಾರದ ಆಟದಲ್ಲಿ ಅಕ್ಷರಶಃ ಅಬ್ಬರಿಸಿದರು. ಅವರ ಭರ್ಜರಿ ಅಜೇಯ ಆಟದಿಂದಾಗಿ ಹರ್ಯಾಣ ತಂಡ, ಪಂದ್ಯದ 2ನೇ ದಿನವಾದ ಶನಿವಾರದ ಅಂತ್ಯಕ್ಕೆ 8 ವಿಕೆಟ್ ಗೆ 732 ರನ್ ಗಳನ್ನು ಪೇರಿಸಿದೆ.ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರಲ್ಲ; ಹೊಸ ಷರತ್ತು ಮುಂದಿಟ್ಟ ಬಿಸಿಸಿಐ

    ಸಂಕ್ಷಿಪ್ತ ಸ್ಕೋರ್:
    ಹರ್ಯಾಣ ಮೊದಲ ಇನಿಂಗ್ಸ್ 732/8, ಯಶ್ ವರ್ದನ್ ದಲಾಲ್ ಅಜೇಯ 426 ರನ್‌ (463 ಎಸೆತ, 58 ಬೌಂಡರಿ, 12 ಸಿಕ್ಸರ್), ಅರ್ಶ್ ರಂಗಾ 151 ರನ್‌ (311 ಎಸೆತ, 18 ಬೌಂಡರಿ, 1 ಸಿಕ್ಸರ್), ಸರ್ವೇಶ್‌ ರೋಹಿಲಾ 48 ರನ್‌, ಪರ್ಥ್‌ ನಗಿಲ್‌ 25 ರನ್‌, ಪರ್ಥ್‌ ವಾಟ್ಸ್‌ 24 ರನ್‌.

  • 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಕನಸು ಕೈಚೆಲ್ಲಿಕೊಂಡಿದ್ದ ಇರ್ಫಾನ್ ಖಾನ್

    ಮುಂಬೈ: ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತ್ಯುತ್ತಮ ನಟರಲ್ಲಿ ಒಬ್ಬರಾದ ಇರ್ಫಾನ್ ಖಾನ್ ಅವರು ತಮ್ಮ 53ನೇ ವಯಸ್ಸಿನಲ್ಲಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ನೆನೆದು ಅಭಿಮಾನಿಗಳು ಕಣ್ಣೀರಾಗಿದ್ದಾರೆ.

    ಇರ್ಫಾನ್ ಖಾನ್ ಬಾಲಿವುಡ್‍ನಲ್ಲಿ ಮಹತ್ತರ ಕಾರ್ಯ ಮಾಡಿದ್ದರೂ ಅವರೊಳಗೆ ಒಬ್ಬ ಕ್ರಿಕೆಟಿಗನಿದ್ದ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಇರ್ಫಾನ್ ಖಾನ್ 600 ರೂ. ಇಲ್ಲದ್ದಕ್ಕೆ ಕ್ರಿಕೆಟ್ ಜಗತ್ತಿನಿಂದ ಹೊರ ಬಂದಿದ್ದ ಕಥೆ ನಿಮಗೆ ಗೊತ್ತಾ?

    ಹೌದು.. ಇರ್ಫಾನ್ 20ನೇ ವಯಸ್ಸಿನಲ್ಲಿ ಕ್ರಿಕೆಟಿಗನಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ತಕ್ಕಂತೆ ಅಭ್ಯಾಸ ನಡೆಸಿದ್ದ ಅವರು ಸಿಕೆ ನಾಯ್ಡು ಟ್ರೋಫಿಯಲ್ಲಿ ಆಡಲು ಆಯ್ಕೆಯಾಗಿದ್ದರು. ಆದರೆ ಹಣದ ಕೊರತೆಯಿಂದಾಗಿ ಕ್ರಿಕೆಟ್ ಕನಸಿನ ಮನೆಯಿಂದ ಹೊರ ನಡೆದು ಬಂದು ಬಿಟ್ಟರು.

    ಈ ವಿಚಾರವಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರ್ಫಾನ್ ಖಾನ್, “ನಾನು ಕ್ರಿಕೆಟ್ ಆಡಿದ್ದೇನೆ, ಕ್ರಿಕೆಟಿಗನಾಗಲು ಬಯಸಿದ್ದೆ. ಜೈಪುರ ತಂಡದಲ್ಲಿ ಕಿರಿಯ ಆಟಗಾರನಾಗಿದ್ದ ನಾನು ಆಲ್‍ರೌಂಡರ್ ಜವಾಬ್ದಾರಿ ನಿರ್ವಹಿಸಿದ್ದೆ. ಕ್ರಿಕೆಟ್‍ನಲ್ಲಿಯೇ ವೃತ್ತಿಜೀವನ ಆರಂಭಿಸಲು ಬಯಸಿದ್ದೆ. ಆದರೆ ಸಿ.ಕೆ.ನಾಯ್ಡು ಟೂರ್ನಿಗೆ ಆಯ್ಕೆಯಾದಾಗ 600 ರೂ. ಶುಲ್ಕ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ. ಆಗ ಯಾರನ್ನ ಕೇಳಬೇಕೆಂದು ತಿಳಿದಿರಲಿಲ್ಲ. ಅಂದಿನಿಂದ ಕ್ರಿಕೆಟ್ ಮನೆಯಿಂದ ಹೊರ ಬಂದುಬಿಟ್ಟೆ” ಎಂದು ಹೇಳಿದ್ದರು.

    ನಂತರದ ದಿನಗಳಲ್ಲಿ ಇರ್ಫಾನ್ ಪ್ರತಿಷ್ಠಿತ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‍ಎಸ್‍ಡಿ)ದಲ್ಲಿ ಪ್ರವೇಶ ಪಡೆದರು. ಅದಕ್ಕಾಗಿ ಅವರಿಗೆ 300 ರೂ. ಅಗತ್ಯವಿತ್ತು. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಸಹೋದರಿಯೇ ಹಣದ ವ್ಯವಸ್ಥೆ ಮಾಡಿದ್ದರು. 1994-98ರವರೆಗೆ ‘ಚಂದ್ರಕಾಂತ’ ಹಾಗೂ ‘ಬನೇಗಿ ಅಪ್ನಿ ಬಾತ್’ ನಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದ ಇರ್ಫಾನ್ ಖಾನ್, 1988ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ಆಗಿರುವಾಗಲೇ ‘ಸಲಾಮ್ ಬಾಂಬೆ’ ಚಿತ್ರದಲ್ಲಿ ನಟನೆಯ ಆಹ್ವಾನ ಪಡೆದುಕೊಂಡಿದ್ರು. ಅಂದಿನಿಂದ ಕ್ರಿಕೆಟ್ ವೃತ್ತಿ ಬದುಕಿನ ಕಡೆಗೆ ಅವರು ತಿರುಗಿ ನೋಡಲಿಲ್ಲ.

    “ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಕ್ಕೆ ನನಗೆ 300 ರೂ. ಬೇಕಿತ್ತು. ಅಷ್ಟು ಹಣವನ್ನು ಹೊಂದಿಸುವುದು ನನಗೆ ಕಷ್ಟಕರವಾಗಿತ್ತು. ನನ್ನ ತಂಗಿ ಅಂತಿಮವಾಗಿ ಹಣವನ್ನು ಹೊಂದಿಸಿ ಕೊಟ್ಟಿದ್ದಳು” ಎಂದು ಇರ್ಫಾನ್ ಖಾನ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.

    “ಕ್ರಿಕೆಟ್ ಬಿಟ್ಟುಕೊಡುವುದು ಪ್ರಜ್ಞಾಪೂರ್ವಕ ನಿರ್ಧಾರ. ಇಡೀ ದೇಶದಲ್ಲಿ ಕೇವಲ 11 ಆಟಗಾರರಿದ್ದಾರೆ. ನಟರ ವಿಚಾರಕ್ಕೆ ಬಂದ್ರೆ ಮಿತಿ ಎನ್ನುವುದೇ ಇಲ್ಲ. ನಟನೆಯಲ್ಲಿ ಯಾವುದೇ ವಯಸ್ಸಿನ ಮಿತಿಯಿಲ್ಲ? ಸಿನಿಮಾ ರಂಗದಲ್ಲಿ ನೀವೇ ನಿಮ್ಮ ಸ್ವಂತ ಆಯುಧ” ಎಂದು ತಮ್ಮ ಸಿನಿಮಾ ಬದುಕಿನ ಆಯ್ಕೆಯನ್ನು ಖಾನ್ ಸಮರ್ಥಿಸಿಕೊಂಡಿದ್ದರು.

    ಟಿ20 ಕ್ರಿಕೆಟ್‍ನ ಆಗಮನವು ಆಟವನ್ನು ಹಾಳು ಮಾಡಿದೆ ಎಂದು ಇರ್ಫಾನ್ ಖಾನ್ ವಿಮರ್ಶಾತ್ಮಕ ಹೇಳಿಕೆ ನೀಡಿದ್ದರು. ಅವರು ಸಾಂಪ್ರದಾಯಿಕ ಮಾದರಿ ಟೆಸ್ಟ್ ಪಂದ್ಯದ ದೊಡ್ಡ ಅಭಿಮಾನಿಯಾಗಿದ್ದರು.

    ”ಕ್ರಿಕೆಟ್ ಕಾ ಡೌನ್ ಹೋನಾ ಭೀ ಚಾಹಿಯೆ! ಕ್ರಿಕೆಟ್ ಸಮಯ ವ್ಯರ್ಥದ ಆಟವಾಗಿ ಪರಿಣಮಿಸಿದೆ. ಟೆಸ್ಟ್ ಪಂದ್ಯದ ಮೋಡಿ, ಆಟಕ್ಕೆ ಹೋಲಿಸಿದರೆ ಈ ಟಿ20 ಅಷ್ಟು ಅದ್ಬುತವಾಗಿಲ್ಲ. ಟಿ20 ಕ್ರಿಕೆಟ್ ಅತ್ಯಾಚಾರದಂತೆ ಕಾಣುತ್ತದೆ. ಎಲ್ಲಾ ರೀತಿಯ ಕೃತ್ಯಗಳು ಅಲ್ಲಿ ನಡೆಯುತ್ತಿವೆ” ಎಂದು ಹೇಳಿದ್ದರು.

  • ಹೈದರಾಬಾದ್ ವಿರುದ್ಧ ಘರ್ಜಿಸಿದ ಕರ್ನಾಟಕ ಬಾಯ್ಸ್- 7 ವಿಕೆಟ್‍ಗಳ ಗೆಲುವು

    ಹೈದರಾಬಾದ್ ವಿರುದ್ಧ ಘರ್ಜಿಸಿದ ಕರ್ನಾಟಕ ಬಾಯ್ಸ್- 7 ವಿಕೆಟ್‍ಗಳ ಗೆಲುವು

    ಬೆಳಗಾವಿ: ಶಿವಕುಮಾರ್ ಯು.ಬಿ. ಆಕರ್ಷಕ ಶತಕ ಹಾಗೂ ಎನ್.ಜಯೇಶ್ ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡವು ಆಂಧ್ರ ಪ್ರದೇಶದ ವಿರುದ್ಧ 7 ವಿಕೆಟ್‍ಗಳ ಗೆಲುವು ಸಾಧಿಸಿದೆ.

    ಇಲ್ಲಿನ ಕೆಎಸ್‍ಸಿಎ ಮೈದಾನದಲ್ಲಿ ಆಂಧ್ರ ಪ್ರದೇಶದ ವಿರುದ್ಧದ ನಡೆದ 23 ವರ್ಷದೊಳಗಿನ ಸಿ.ಕೆ.ನಾಯ್ಡು ಟ್ರೋಫಿಯ ‘ಎ’ ಗುಂಪಿನ ನಾಲ್ಕು ದಿನದ ಆಟದಲ್ಲಿ ಕರ್ನಾಟಕ ಭರ್ಜರಿ ಗೆಲುವು ಕಂಡಿದೆ.

    187 ರನ್‍ಗಳ ಮುನ್ನಡೆಯೊಂದಿಗೆ ಬುಧವಾರ ಬೆಳಗ್ಗೆ ನಾಲ್ಕನೇ ದಿನದಾಟ ಆರಂಭಿಸಿದ ಆಂಧ್ರ ಪ್ರದೇಶದ ತಂಡವು ಅಂತಿಮವಾಗಿ 228 ರನ್‍ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಆಂಧ್ರ ಪ್ರದೇಶ ನೀಡಿದ್ದ 242 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡವು ಆರಂಭಿಕ ಬ್ಯಾಟ್ಸ್‌ಮನ್‌ ಶಿವಕುಮಾರ್.ಯು.ಬಿ 111 ರನ್ ಹಾಗೂ ಎನ್.ಜಯೇಶ್ ಅಜೇಯ 57 ರನ್‍ಗಳ ಕಾಣಿಕೆ ನೀಡಿದರು. ಈ ಮೂಲಕ ಕರ್ನಾಟಕವು 60.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 247 ರನ್‍ಗಳಿಸಿ ಜಯ ಗಳಿಸಿ 6 ಅಂಕ ಸಂಪಾದಿಸಿದೆ.

    ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿವಕುಮಾರ್.ಯು.ಬಿ ಹಾಗೂ ಅಂಕಿತ್ ಉಡಪಾ ಮೊದಲ ವಿಕೆಟ್‍ಗೆ 81 ರನ್‍ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಎರಡನೇ ವಿಕೆಟ್‍ಗೆ ಶಿವಕುಮಾರ್ ಜೊತೆಯಾದ ಎನ್.ಜಯೇಶ್ ರಕ್ಷಾಣ್ಮಾತಕ ಆಟಕ್ಕೆ ಮೊರೆಹೋಗಿ ಒಂಟಿ ರನ್‍ಗಳನ್ನು ಕದಿಯುತ್ತಾ ಶಿವಕುಮಾರ್ ಅವರಿಗೆ ಸಾಥ್ ನೀಡಿದರು.

    ಶಿವಕುಮಾರ್ 49 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ನಂತರ 134 ಎಸೆತಗಳಲ್ಲಿ ಶತಕ ದಾಖಲಿಸಿದರು. ಬಳಿಕ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಅವರು 146 ಎಸೆತಗಳಲ್ಲಿ 111 ರನ್ (15 ಬೌಂಡರಿ) ಗಳಿಸಿ ಕೆ.ಮಹೀಪ್ ಕುಮಾರ್ ಅವರಿಗೆ ವಿಕೆಟ್ ಒಪ್ಪಿಸಿ, ಪೆವಿಲಿಯನ್ ಸೇರಿದರು. ಶಿವಕುಮಾರ್ ಹಾಗೂ ಎನ್.ಜಯೇಶ್ ಜೋಡಿಯು ಎರಡನೇ ವಿಕೆಟ್‍ಗೆ 30 ಓವರ್‍ಗಳಲ್ಲಿ 102 ರನ್‍ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಆಂಧ್ರ ಪ್ರದೇಶದ ಬಾಲರ್‍ಗಳು ಪರದಾಡಿದರು.

    ಗೆಲುವಿಗೆ 46 ರನ್‍ಗಳ ಅಗತ್ಯವಿದ್ದಾಗ ಮೈದಾಕ್ಕಿಳಿದ ಕರ್ನಾಟಕ ತಂಡದ ಉಪನಾಯಕ ಸುಜಯ ಸಾತೇರಿ ಬಿರುಸಿನ ಬ್ಯಾಂಟಿಂಗ್ ನಡೆಸಿದರು. 23 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 39 ರನ್ ಗಳಿಸಿದ ಎನ್. ಜಯೇಶ್ ಜೊತೆಗೆ 4ನೇ ವಿಕೆಟ್‍ಗೆ 51 ರನ್‍ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಆಂಧ್ರ ಪ್ರದೇಶದ ಬೌಲರ್ ಎ.ಪ್ರಣಯ್‍ಕುಮಾರ್ ಎರಡು ವಿಕೆಟ್ ಪಡೆದುಕೊಂಡರು.

    ಸ್ಕೋರ್ ವಿವರ:
    ಆಂಧ್ರ ಪ್ರದೇಶ 281 ರನ್ (ಮೊದಲ ಇನ್ನಿಂಗ್ಸ್), 228 (ಎರಡನೇ ಇನ್ನಿಂಗ್ಸ್)
    ಕರ್ನಾಟಕ 268 ರನ್ (ಮೊದಲ ಇನ್ನಿಂಗ್ಸ್), 247 (ಎರಡನೇ ಇನ್ನಿಂಗ್ಸ್)
    ಶಿವಕುಮಾರ್ ಯು.ಬಿ 111 ರನ್
    ಎನ್.ಜಯೇಶ್ ಅಜೇಯ 57 ರನ್
    ಸುಜಯ ಸಾತೇರಿ ಅಜೇಯ 39 ರನ್
    (ಎ.ಪ್ರಣಯ ಕುಮಾರ್ 30  ಓವರ್‌ಗೆ 2 ವಿಕೆಟ್ ಹಾಗೂ ಕೆ.ಮಹೀಪ್ ಕುಮಾರ್ 16 ಓವರ್‌ಗೆ 1 ವಿಕೆಟ್)