Tag: CJI Gavai

  • ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್‌ ಕಿಶೋರ್‌

    ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್‌ ಕಿಶೋರ್‌

    ನವದೆಹಲಿ: ನನಗೆ ಯಾವುದೇ ಪಶ್ಚಾತ್ತಾಪವಿಲ್ಲ, ನನ್ನ ನಿರ್ಧಾರ ಸರಿಯಿದೆ ಎಂದು ಸುಪ್ರೀಂ ಕೋರ್ಟ್‌ (Supreme Court) ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ (CJI Gavai) ಅವರ ಮೇಲೆ ಶೂ ಎಸೆಯಲು ಮುಂದಾದ ವಕೀಲ ರಾಕೇಶ್ ಕಿಶೋರ್ (Rakesh Kishore) ಹೇಳಿದ್ದಾರೆ.

    ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಜೈಲು (Jail) ಶಿಕ್ಷೆ ಎದುರಿಸಲು ಸಿದ್ಧ. ಈ ಕೃತ್ಯಕ್ಕೆ ನಾನು ಕ್ಷಮೆಯಾಚಿಸಲ್ಲ. ಅಷ್ಟೇ ಅಲ್ಲದೇ ಯಾವುದೇ ರಾಜಕೀಯ ಪಕ್ಷದೊಂದಿಗೆ ನಾನು ಸಂಬಂಧ ಹೊಂದಿಲ್ಲ ಎಂದು ತಿಳಿಸಿದರು.

     

    ಶೂ ಎಸೆಯಲು ದೇವರೇ ಪ್ರಚೋದನೆ ನೀಡಿದ್ದಾನೆ. ಖಜುರಾಹೊ ಅರ್ಜಿ ವಿಚಾರಣೆ ವೇಳೆ ನ್ಯಾ. ಗವಾಯಿ ಹೇಳಿದ ಅಭಿಪ್ರಾಯದಿಂದ ನನಗೆ ರಾತ್ರಿ ನಿದ್ದೆಯೇ ಬರಲಿಲ್ಲ. ನಂತರ ಮಾರಿಷಸ್‌ನಲ್ಲಿ ಭಾರತೀಯ ಕಾನೂನು ವ್ಯವಸ್ಥೆಯು ಕಾನೂನಿನ ಆಳ್ವಿಕೆಯಿಂದ ನಿಯಂತ್ರಿಸಲ್ಪಡುತ್ತದೆಯೇ ಹೊರತು ಬುಲ್ಡೋಜರ್ ನಿಯಮದಿಂದ ಅಲ್ಲ ಎಂದು ಗವಾಯಿ ಹೇಳಿಕೆಯಿಂದ ನನಗೆ ಅಸಮಾಧಾನವಾಗಿತ್ತು ಎಂದು ಹೇಳಿದರು. ಇದನ್ನೂ ಓದಿ: ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

     

    ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಕೀಟಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಕಿಶೋರ್, ವಕೀಲ ವೃತ್ತಿ ಮಾಡುವ ಮೊದಲು ವಿಶ್ವ ಆರೋಗ್ಯ ಸಂಸ್ಥೆಗೆ ಸಲಹೆ ನೀಡಿದ್ದೇನೆ. ಮಾನಸಿಕವಾಗಿಯೂ ನಾನು ಸ್ಥಿಮಿತದಲ್ಲಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:  ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

    ನನ್ನ ಕೃತ್ಯದಿಂದ ಕುಟುಂಬದವರು ಅಸಮಾಧಾನಗೊಂಡಿದ್ದಾರೆ ಎನ್ನುವುದು ನನಗೆ ತಿಳಿದಿದೆ.  ಮುಂದೆ ಯಾವುದೇ ರೀತಿಯ ಪರಿಣಾಮ ಎದುರಿಸಲು ನಾನು ಸಿದ್ಧನಿದ್ದೇನೆ. ದೇವರ ಹೆಸರಿನಲ್ಲೇ ಎಲ್ಲವನ್ನೂ ಸಹಿಸುತ್ತೇನೆ ಎಂದು ಹೇಳಿದ್ದಾರೆ.

  • ಸುಪ್ರೀಂ ಸಿಜೆಐ ತಾಯಿ ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಕೃತ್ಯ: ಸಂತೋಷ್ ಲಾಡ್

    ಸುಪ್ರೀಂ ಸಿಜೆಐ ತಾಯಿ ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಕೃತ್ಯ: ಸಂತೋಷ್ ಲಾಡ್

    – ಸಿಜೆಐ ಗವಾಯಿ ಅವ್ರ ಮೇಲೆ ಶೂ ಎಸೆಯಲು ಯತ್ನಿಸಿರುವುದನ್ನು ನಾನು ಖಂಡಿಸುತ್ತೇನೆ

    ಬೆಂಗಳೂರು: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಗವಾಯಿ (CJI BR Gavai) ಅವರ ತಾಯಿ, ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಈ ಕೃತ್ಯ ಎಸಗಿರಬಹುದು ಎಂದು ಸಚಿವ ಸಂತೋಷ್ ಲಾಡ್ (Santosh Lad) ಶಂಕೆ ವ್ಯಕ್ತಪಡಿಸಿದ್ದಾರೆ.

    ಸಿಜೆಐ ಮೇಲೆ ಶೂ ಎಸೆಯಲು ಮುಂದಾದ ಘಟನೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ನಾಚಿಕೆಗೇಡಿನ ವಿಷಯ. ವೈಯಕ್ತಿಕವಾಗಿ ನಾನು ಇದನ್ನ ಧಿಕ್ಕರಿಸುತ್ತೇನೆ. ಭಾರತದಲ್ಲಿ ಎಲ್ಲಾ ಧರ್ಮಗಳು ಬಹಳ ವರ್ಷಗಳಿಂದ ಇವೆ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಯುವಕರು ಗಮನಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

    ನನ್ನ ಪ್ರಕಾರ ಸಿಜೆಐ ಅವರ ತಾಯಿ, ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಈ ಕೃತ್ಯ ಎಸಗಿರಬಹುದು. ದೇಶದ 25 ಸಾವಿರ ಹಿಂದೂ ಜನರು ಪಾಸ್‌ಪೋರ್ಟ್ ಸರಂಡರ್ ಮಾಡಿ ಹೋಗಿದ್ದಾರೆ. ಶೂ ಎಸೆಯಲು ಯತ್ನಿಸಿದಾತನನ್ನು ಹುಡುಕಿ ತಕ್ಕಪಾಠ ಕಲಿಸಬೇಕು ಎಂದು ಕಿಡಿಕಾರಿದ್ದಾರೆ.

    ಇದನ್ನ ಹೆಚ್ಚಾಗಿ ಪ್ರಚಾರ ಮಾಡೋದು ಸರಿಯಲ್ಲ. ರಾಜಕೀಯ ಲಾಭದ ಪ್ರಯತ್ನ ನಡೆಯುತ್ತಿದೆ. ಕಳೆದ 10 ವರ್ಷಗಳಿಂದ ಇದು ನಡೆಯುತ್ತಿದೆ. ಈ ಘಟನೆ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ಎಲ್ಲಾ ಸನಾತನ ಧರ್ಮದವರು ಈ ರೀತಿ ಇಲ್ಲ. ಇಡೀ ದೇಶದ ಯುವಜನತೆ ಇದನ್ನ ತಿಳಿಯಬೇಕು. ಎಲ್ಲಾ ಜಾತಿ ಜನಾಂಗ ಒಂದಾಗಬೇಕು. ಇಂತದಕ್ಕೆಲ್ಲ ಅವಕಾಶ ಕೊಡಬಾರದು ಅಂತ ಕರೆ ನೀಡಿದ್ದಾರೆ.

  • ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ-  ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

    ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

    ನವದೆಹಲಿ: ಸುಪ್ರೀಂ ಕೋರ್ಟ್‌ (Supreme Court)  ಹಿರಿಯ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ (CJI BR Gavai) ಅವರ ಮೇಲೆ ಶೂ ಎಸೆಯಲು ಮುಂದಾದ ಘಟನೆ ಇಂದು ನಡೆದಿದೆ.

    ಮಧ್ಯಪ್ರದೇಶದ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನಾ. ಬಿ ಆರ್ ಗವಾಯಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಟ್ಟಾಗಿ 71 ವರ್ಷದ ಕಿಶೋರ್‌ ರಾಕೇಶ್‌  ಶೂ ಎಸೆಯಲು ಮುಂದಾಗಿದ್ದರು.   ಇದನ್ನೂ ಓದಿ:  ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ: ಕಮೆಂಟ್‌ ವಿವಾದವಾದ ಬೆನ್ನಲ್ಲೇ ಸಿಜೆಐ ಗವಾಯಿ ಸ್ಪಷ್ಟನೆ

    ಕೋರ್ಟ್‌ ಹಾಲ್‌ನಲ್ಲಿ ಕಿಶೋರ್‌ ರಾಕೇಶ್‌ ಶೂ ತೆಗೆಯುತ್ತಿದ್ದಾಗ  ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ವಕೀಲರನ್ನು ತಡೆದು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಕರೆದುಕೊಂಡು ಹೋಗುವಾಗ ಸನಾತನ ಧರ್ಮಕ್ಕೆ ಅವಮಾನ ಮಾಡುವುದನ್ನು ನಾನು ಸಹಿಸುವುದಿಲ್ಲ ಎಂದು ಕೂಗಿಕೊಂಡು ಹೋಗಿದ್ದಾರೆ.

    ಈ ವೇಳೆ ಸಿಜೆಐ ಯಾವುದೇ ಯಾವುದೇ ಮುಜುಗರಕ್ಕೊಳಗಾಗದೇ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರಿಗೆ ತಮ್ಮ ವಾದಗಳನ್ನು ಮುಂದುವರಿಸುವಂತೆ ಕೇಳಿಕೊಂಡರು. ಈ ಘಟನೆಯಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿ ಕಲಾಪ ಮುಂದುವರಿಸಿದರು.

    ದೆಹಲಿ ಡಿಸಿಪಿ ಮತ್ತು ಸುಪ್ರೀಂ ಕೋರ್ಟ್ ಭದ್ರತಾ ಅಧಿಕಾರಿಗಳು ಕಿಶೋರ್‌ ರಾಕೇಶ್‌ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?
    ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಗೆ ಸೇರ್ಪಡೆಯಾಗಿರುವ ಖಜುರಾಹೊ ದೇವಾಲಯ ( Lord Vishnu Idol in Khajuraho) ಸಂಕೀರ್ಣದ ಭಾಗವಾಗಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ಗವಾಯಿ ನೇತೃತ್ವದ ಪೀಠ ಸೆ.16 ರಂದು ವಜಾಗೊಳಿಸಿತ್ತು.

    ಈ ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆಯ (ASI) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಏನೇ ಮಾಡುವುದರಿದ್ದರೂ ಎಎಸ್‌ಐ ಅನುಮತಿ ನೀಡಬೇಕಾಗಿದೆ. ಕ್ಷಮಿಸಿ ಎಂದು ತಿಳಿಸಿದ್ದರು.

    ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿಗಾಗಿ ಈ ಅರ್ಜಿಯನ್ನು ನೀವು ಸಲ್ಲಿಕೆ ಮಾಡಿದ್ದೀರಿ. ಹೋಗಿ ದೇವರಲ್ಲೇ ಏನಾದರೂ ಮಾಡುವಂತೆ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ ಮತ್ತು ಸ್ವಲ್ಪ ಧ್ಯಾನ ಮಾಡಿ ಎಂದು ಸಿಜೆಐ ಗವಾಯಿ ಹೇಳಿದ್ದರು.

    ಮೊಘಲ್ ಆಕ್ರಮಣದ ಸಮಯದಲ್ಲಿ ವಿಗ್ರಹವು ವಿರೂಪಗೊಂಡಿದ್ದು, ಅದನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅದು ಅದೇ ಸ್ಥಿತಿಯಲ್ಲಿದೆ ಎಂದು ರಾಕೇಶ್ ದಲಾಲ್ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.