Tag: City Ravi

  • ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ

    ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ ಬಿಡುಗಡೆ

    ಬೆಂಗಳೂರು: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಮಂಜೂರು ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

    ಗೃಹ ಕಚೇರಿ ಕೃಷ್ಣಾದಲ್ಲಿ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳು ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನೇತೃತ್ವದಲ್ಲಿ ಗೋವಾ ಕನ್ನಡ ಮಹಾಸಂಘ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು. ಈ ವೇಳೆ ಬೊಮ್ಮಾಯಿ ಅವರು ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಭಾರತ ಆಯೋಜಿಸಿದ್ದ, ಅಫ್ಘಾನಿಸ್ತಾನದ ಸಭೆಯಿಂದ ಹೊರಗುಳಿದ ಪಾಕಿಸ್ತಾನ, ಚೀನಾ 

    ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ಗೋವಾ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಬಹುತೇಕ ಜನರು ನೆಲೆಸಿದ್ದಾರೆ. ಅವರು ಹೊರನಾಡು ಗೋವಾದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ. ಅವರು ಕನ್ನಡ ಸಂಸ್ಕøತಿಯನ್ನು ಕಾಪಾಡುತ್ತಿದ್ದಾರೆ. ಆದರೆ ಕನ್ನಡಿಗರಿಗೆ ಅಲ್ಲಿ ನೆಲೆಯಿಲ್ಲ. ಹೀಗಾಗಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರ್ಕಾರ ಸಿದ್ಧವಿದೆ. ಇದಕ್ಕೆ ಸೂಕ್ತ ಭೂಮಿಯನ್ನು ಗುರುತಿಸಿ ಡಿಪಿಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಬೊಮ್ಮಾಯಿ ಅವರ ಈ ನಿರ್ಧಾರಕ್ಕೆ ಗೋವಾ ಕನ್ನಡ ಮಹಾಸಂಘದ ಗೌರವ ಅಧ್ಯಕ್ಷ ಸಿದ್ದಣ್ಣ ಮೇಟಿ ಹಾಗೂ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು. ಗೋವಾ ಕನ್ನಡ ಮಹಾ ಸಂಘದ ಅಧ್ಯಕ್ಷ ಹನುಮಂತರೆಡ್ಡಿ ಶಿರೂರ್, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಾದಾಮಿ, ಮಹೇಶ್ ಬಾಬು ಸುರ್ವೇ, ಅರುಣ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯವಿದ್ದರೆ ಕೋರ್ಟ್‍ಗೆ ಕೊಡುತ್ತೇನೆ: ಸಿದ್ದರಾಮಯ್ಯ

  • ಕಾಂಗ್ರೆಸ್ ಖಾಲಿ ಡಬ್ಬ ಹೆಚ್ಚು ಸಪ್ಪಳ ಮಾಡುತ್ತದೆ: ಸಿಟಿ ರವಿ

    ಕಾಂಗ್ರೆಸ್ ಖಾಲಿ ಡಬ್ಬ ಹೆಚ್ಚು ಸಪ್ಪಳ ಮಾಡುತ್ತದೆ: ಸಿಟಿ ರವಿ

    – ಸಾರಿಗೆ ಸಿಬ್ಬಂದಿ ರಾಜಕೀಯ ದಾಳವಾಗಬಾರದು
    – ಪಕ್ಷದಿಂದ ಹೊರ ಹೋದವರು ಅಸ್ತಿತ್ವ ಕಳೆದುಕೊಂಡಿದ್ದಾರೆ

    ಕಲಬುರಗಿ: ಮೂರು ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಆಗ ಕಾಂಗ್ರೆಸ್ ಖಾಲಿ ಡಬ್ಬ ಎಂದು ಸಾಬೀತು ಆಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಹೇಳಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಖಾಲಿ ಡಬ್ಬ ಹೆಚ್ಚು ಸಪ್ಪಳ ಮಾಡುತ್ತದೆ. ಹೀಗಾಗಿ ಕಾಂಗ್ರೆಸ್ ಡಬ್ಬ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿಂದೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಅಂತ ಸಿದ್ದರಾಮಯ್ಯನವರು ಹೇಳಿದ್ದರು. ಈ ಉಪ ಚುನಾವಣೆ ನಂತರ ಕಾಂಗ್ರೆಸ್ ಖಾಲಿ ಡಬ್ಬ ಅನ್ನೋದು ಸಾಬೀತಾಗುತ್ತದೆ. ಬೇಲಿ ಮೇಲೆ ಕೂತವರು ಬೇಲಿ ಹಾರಲಿಕ್ಕೆ ಸಿದ್ಧರಾಗಿರುತ್ತಾರೆ.ಇನ್ನು ಬಾಳ ಜನ ಬಿಜೆಪಿ ಸೇರಲು ಸಂಪರ್ಕದಲ್ಲಿದ್ದಾರೆ. ನಾವು ಈ ಹಿಂದೆ ಏನು ಹೇಳಿದ್ದೆವೋ ಅದು ನಡೆಯುತ್ತದೆ ಎಂದು ಕಾಂಗ್ರೆಸ್ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಸಿದ್ದರಾಮಯ್ಯ ಏನು ಹೇಳ್ತಾರೋ ಅದರ ವಿರುದ್ಧವಾಗಿ ನಡೆಯುತ್ತದೆ. ನಮ್ಮ ಪಕ್ಷದ ಮೂಲ ಸಿದ್ಧಾಂತದ ಜೊತೆ ಯಾವುದೇ ರಾಜಿ ಇಲ್ಲಾ. ಸಮುದ್ರದ ಅಲೆ ಬರುತ್ತದೆ. ಹಾಗಂತ ಸಮುದ್ರ ಖಾಲಿಯಾಗಲ್ಲಾ. ಯಾರು ಏನೇ ಮಾತನಾಡಿದ್ರು ಮರಳಿ ಸಮುದ್ರಕ್ಕೆ ಬರಲೇಬೇಕು. ಸಮುದ್ರವನ್ನು ಮೀರಿ ಅಲೆ ಹೋದ್ರೆ ಸಮುದ್ರಕ್ಕೆ ಯಾವುದೇ ಹಾನಿಯಾಗೋದಿಲ್ಲಾ. ಹಾಗೇ ಹೋದವರು ಅಸ್ತಿತ್ವ ಕಳೆದುಕೊಂಡ ಮರೆಯಾಗಿದ್ದಾರೆ ಎಂದಿದ್ದಾರೆ.

    ಯತ್ನಾಳ ಸೇರಿದಂತೆ ಕೆಲವರು ಪಕ್ಷದ ವಿರುದ್ಧ ಹೇಳಿಕೆ ವಿಚಾರವಾಗಿ ಅಶಿಸ್ತಿನ ವಿರುದ್ಧ ಕ್ರಮ ಕೈಗೊಳ್ಳಲು ಕಮಿಟಿ ಇದೆ. ರೋಗಿ ಡಾಕ್ಟರ್ ಮುಂದೆ ಬಂದಾಗ ಮೊದಲೇ ಪೇಶೆಂಟ್ ಉಳಿಸೋ ಉದ್ದೇಶ ಇರುತ್ತದೆ. ಹೀಗಾಗಿ ಮೊದಲು ಬಿಪಿ ಶುಗರ್ ಚೆಕ್ ಮಾಡ್ತಾರೆ. ಯಾವುದೇ ಆಗದೇ ಇದ್ದಾಗ ವೈದ್ಯರು ಆಪರೇಶನ್ ಮಾಡ್ತಾರೆ. ಶಿಸ್ತು ಸಮಿತಿ ಯತ್ನಾಳ ಅವರ ಬಗ್ಗೆ ನಿರ್ಧಾರ ಮಾಡುತ್ತಾರೆ. ಯತ್ನಾಳರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹೇಳಲ್ಲಾ. ಕೆಲ ಸಂಗತಿಗಳನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ಕೆಲ ವಿಷಯಗಳನ್ನು ಪಾರ್ಟಿ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ನಾನು ಮೇಲ್ಪಂಕ್ತಿಯನ್ನು ಹಾಕಬೇಕು ಅಂತ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಸಂವಿಧಾನದಲ್ಲಿ ಇಷ್ಟೇ ವರ್ಷಕ್ಕೆ ರಾಜಕೀಯ ಮಾಡಬಾರದು ಅಂತ ಇಲ್ಲಾ. ಆದರೆ ನಮ್ಮಷ್ಟಕ್ಕೆ ನಾವೇ ಮೇಲ್ಪಂಕ್ತಿಯನ್ನು ಹಾಕಬೇಕು. ಸಾರಿಗೆ ನೌಕರರ ಮುಷ್ಕರ ಸಂಬಂಧ ಪಟ್ಟಂತೆ ಸಾರಿಗೆ ಸಚಿವರ ಜೊತೆ ಮಾತನಾಡಿದ್ದೇನೆ. ಮೊದಲೇ ನಿಗಮಗಳು ನಷ್ಟದಲ್ಲಿ ನಡೆಯುತ್ತಿವೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಿಬ್ಬಂದಿ ಕೆಲಸಕ್ಕೆ ಹಾಜರಾಗಬೇಕು. ಸಿಬ್ಬಂದಿ ಯಾರದೇ ರಾಜಕೀಯ ದಾಳವಾಗಬಾರದು ಎಂದು ಹೇಳಿದ್ದಾರೆ.

  • ಈ ದಿನ ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಕುಟ್ಟಪ್ಪರಿಗೆ ಗೆಲುವು ಅರ್ಪಣೆ – ಸಿಟಿ ರವಿ

    ಈ ದಿನ ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಕುಟ್ಟಪ್ಪರಿಗೆ ಗೆಲುವು ಅರ್ಪಣೆ – ಸಿಟಿ ರವಿ

    ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತರಿಗೆ ಉಪಚುನಾವಣೆಯ ಗೆಲುವನ್ನು ಅರ್ಪಣೆ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಟ್ವೀಟ್ ಮಾಡಿದ್ದಾರೆ.

    ಶಿರಾ ಮತ್ತು ಆರ್‍ಆರ್ ನಗರ ಉಪಚುನಾವಣೆಯ ಫಲಿತಾಂಶದಲ್ಲಿ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಪಕ್ಷ ಜಯಭೇರಿ ಭಾರಿಸಿದೆ. ಈ ಗೆಲುವನ್ನು ಸಿಟಿ ರವಿಯವರು ಐದು ವರ್ಷದ ಹಿಂದೆ ಕೊಲೆಯಾದ ವಿಶ್ವ ಹಿಂದೂ ಪರಿಷತ್‍ನ (ವಿಪಿಹೆಚ್) ನಾಯಕ ಕುಟ್ಟಪ್ಪ ಮತ್ತು ಹಲವು ಹಿಂದೂ ಕಾರ್ಯಕರ್ತರಿಗೆ ಅರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಸಿಟಿ ರವಿಯವರು, ಐದು ವರ್ಷದ ಹಿಂದೆ ಇದೇ ದಿನದಲ್ಲಿ ಕಾಂಗ್ರೆಸ್ ಪ್ರಾಯೋಜಿತ ಟಿಪ್ಪು ಜಯಂತಿಯ ಆಚರಣೆ ವೇಳೆ ಇಸ್ಲಾಮಿಕ್ ಮೂಲವಾದಿಗಳಿಂದ ವಿಪಿಹೆಚ್ ನಾಯಕ ಕುಟ್ಟಪ್ಪ ಕೊಲ್ಲಲ್ಪಟ್ಟಿದ್ದರು. ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣೆಯ ಗೆಲುವನ್ನು ನಾವು ಕುಟ್ಟಪ್ಪ ಮತ್ತು ಕಾಂಗ್ರೆಸ್ ಆಡಳಿತದ ವೇಳೆ ಕೊಲೆಯಾದ ಹಲವಾರು ಹಿಂದೂ ಕಾರ್ಯಕರ್ತರಿಗೆ ಅರ್ಪಣೆ ಮಾಡುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಶಿರಾ ಮತ್ತು ಆರ್‍ಆರ್ ನಗರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಆರ್.ಆರ್. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಶಿರಾ ಕ್ಷೇತ್ರದಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಗೆದ್ದು ಬೀಗಿ ಇತಿಹಾಸ ಸೃಷ್ಟಿಸಿದ್ದಾರೆ.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಗೆ ರಾಜ್ಯಾದ್ಯಂತ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿತ್ತು. ಇದರ ನಡುವೆಯೇ ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಈ ವೇಳೆ 2015ರ ನವೆಂಬರ್ 10ರಂದು ಮಡಿಕೇರಿಯಲ್ಲಿ ಟಿಪ್ಪು ಜಯಂತಿಯಂದು ನಡೆದ ಘರ್ಷಣೆಯ ವೇಳೆ ಕುಟ್ಟಪ್ಪ ಮೃತಪಟ್ಟಿದ್ದರು.

  • ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಬಹುಶಃ ಬೆಂಗಳೂರು ಗಲಭೆಯ ಡೈರಕ್ಟ್ರು-ಪ್ರೊಡ್ಯೂಸರ್ ಜಮೀರ್ ಅನ್ಸುತ್ತೆ: ಸಿ.ಟಿ.ರವಿ

    ಚಿಕ್ಕಮಗಳೂರು: ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು. ಅವರೇ ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ರೆ ನಟರು ಯಾರೆಂದು ಗೊತ್ತೇ ಗೊತ್ತಿರುತ್ತೆ ಅದನ್ನು ಸ್ಪಷ್ಟಪಡಿಸಲಿ ಎಂದು ಹೇಳಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಮೀರ್ ಅಹಮದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಮೀರ್ ಅಹಮದ್ ಗೋಲಿಬಾರ್ ನಲ್ಲಿ ಮೃತರಾದವರ ಮನೆಗೆ ಹೋಗಿ ಚೆಕ್ ನೀಡಿ ಬಂದಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು ಎಂದು ಕಿಡಿಕಾರಿದ್ದಾರೆ. ಈಗ ಜಮೀರ್ ಅಹಮದ್ ಎಲ್ಲ ಜಿಪಿಎ ತೆಗೆದುಕೊಂಡಿರುವುದರಿಂದ ಏನ್ ನಷ್ಟ ಆಗಿದೆ ಅದನ್ನು ಜಮೀರ್ ಅಹಮದ್‍ರಿಂದ ವಸೂಲಿ ಕ್ರಮ ತೆಗೆದುಕೊಳ್ಳೋಣ ಎಂದರು.

    ನೀವು ಸಹಾಯ ಮಾಡುವುದು ಮಾನವೀಯ ಧರ್ಮ ಇರಬಹುದು. ಯಾವ ಸಂದರ್ಭದಲ್ಲಿ ಸಹಾಯ ಮಾಡ್ತಿದ್ದೀರಾ, ಯಾರಿಗೆ ಸಹಾಯ ಮಾಡ್ತಿದ್ದೀರಾ ಎಂಬುದು ಮುಖ್ಯವಾಗುತ್ತೆ. ಅದು ಕೊಡುವ ಮೆಸೇಜ್ ಮಾನವೀಯ ಮೆಸೇಜ್ ಕೊಡುವುದಿಲ್ಲ. ಯಾರು ಏನೇ ಮಾಡಿದರು, ನಾನು ನಿಮ್ಮ ಜೊತೆ ಇದ್ದೀನಿ ಎಂಬ ಮೇಸೆಜ್ ಕೊಡುತ್ತೆ. ಇದರ ಬಗ್ಗೆ ಅವರ ಪಕ್ಷ ಯೋಚಿಸಬೇಕು ಎಂದರು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರು ಜೈಲಿನಿಂದ ಬಂದರೆ ಅವರಿಗೆ ಹಾರ ಹಾಕಿ ಸನ್ಮಾನ ಮಾಡುತ್ತಾರೆ. ಅವರಿಗೆ ಪ್ರಚೋದಿಸುವ ಕೆಲಸವನ್ನು ಜಮೀರ್ ಮಾಡುತ್ತಿದ್ದಾರೆ ಎಂದರು.

    ಗೋಲಿಬಾರ್ ನಲ್ಲಿ ಸತ್ತವರು ಅಮಾಯಕರಲ್ಲ. ಅಮಾಯಕರಾಗಿದ್ದರೆ ಮನೆಯಲ್ಲಿ ಮಲಗಿರೋರು. 300ಕ್ಕೂ ಹೆಚ್ಚು ವಾಹನ ಸುಟ್ಟಿದ್ದಾರೆ. ಆ ವಾಹನ ಸುಟ್ಟವರು ಯಾರು ಹೇಳಲಿ ಹಾಗಾದರೆ. ಇವರು ಅಮಾಯಕರಾದರೆ ಆ ಕಿರಾತಕರು ಯಾರು. ಜಮೀರ್ ಅಹಮದ್ ಖಾನ್‍ಗೆ ಚೆನ್ನಾಗಿ ಗೊತ್ತಿರುತ್ತೆ ಎಂದಿದ್ದಾರೆ. ನಷ್ಟ ವಸೂಲಿ ಕೆಲಸ ಆಗಲೇಬೇಕು. ಈಗಿನ ಕಾಂಗ್ರೆಸ್ ಒಳ ರಾಜಕಾರಣ ನೋಡಿದರೆ ಅವರು ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸದರು.

    ಬೆಂಗಳೂರು ಗಲಭೆಯನ್ನು ಲೀಡ್ ಮಾಡಿರೋದು ಎಸ್.ಡಿ.ಪಿ.ಐ. ಅದರಲ್ಲಿ ನಟನೆ ಮಾಡಿ 300ಕ್ಕೂ ಹೆಚ್ಚು ವಾಹನ ಸುಟ್ಟಿರೋರು ಈ ಜನ. ಅವರಿಗೆ ಗೊತ್ತಿರುತ್ತೆ ಸ್ಪಷ್ಟಪಡಿಸಲಿ ಎಂದಿದ್ದಾರೆ. ನಾನು ಆರಂಭದಿಂದ ಹೇಳಿದ್ದೇನೆ. ಕಾಂಗ್ರೆಸ್ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟೋ ಕೆಲಸ ಮಾಡುತ್ತಿದೆ. ಜಮೀರ್ ಅಹಮದ್ ಮಾಡುತ್ತಿರುವುದು ಅದನ್ನೇ ಎಂದು ಕಾಂಗ್ರೆಸ್ ಹಾಗೂ ಜಮೀರ್ ಅಹಮದ್ ವಿರುದ್ಧ ಕಿಡಿಕಾರಿದ್ದಾರೆ.

  • ಪ್ರಧಾನಿಯವರೇ ನಾವು ನಿಮ್ಮ ಜೊತೆಗಿದ್ದೇವೆ ಪಾಕಿಸ್ತಾವನ್ನು ಮುಗಿಸಿಬಿಡಿ: ವಿ.ಎಸ್ ಉಗ್ರಪ್ಪ

    ಪ್ರಧಾನಿಯವರೇ ನಾವು ನಿಮ್ಮ ಜೊತೆಗಿದ್ದೇವೆ ಪಾಕಿಸ್ತಾವನ್ನು ಮುಗಿಸಿಬಿಡಿ: ವಿ.ಎಸ್ ಉಗ್ರಪ್ಪ

    _ ಬಿಎಸ್‍ವೈ, ಸಿಟಿ ರವಿಗೆ ನಾಚಿಕೆ ಆಗಬೇಕು

    ತುಮಕೂರು: ಪಾಕಿಸ್ತಾನ ನಮ್ಮ ಶತ್ರುರಾಷ್ಟ್ರ ಅನ್ನೋದರಲ್ಲಿ ಯಾವುದೇ ಪ್ರಶ್ನೆಯಿಲ್ಲ. ಪ್ರಧಾನಿ ಮೋದಿಯವರು ನಮ್ಮೆಲ್ಲರ ಬೆಂಬಲ ಪಡೆದು ಪಾಕಿಸ್ತಾನವನ್ನು ಮುಗಿಸಿ ಬಿಡಲಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಪ್ರಧಾನಿಯವರಿಗೆ ಬೆಂಬಲ ಸೂಚಿಸಿದ್ದಾರೆ.

    ಮೊದಲು ದೇಶ ಎಂಬ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಆದರೆ ಬಿಜೆಪಿಯ ದ್ವಂದ್ವ ನಿಲುವಿನಿಂದ ದೇಶದ ರಕ್ಷಣೆ ವಿಚಾರ ಕಗ್ಗಂಟಾಗಿ ಉಳಿದಿದೆ. 1971 ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಚಿತ್ರಾನ್ನ ಮಾಡಿದ್ದರು. ವಾಜಪೇಯಿ, ಎಲ್.ಕೆ ಅಡ್ವಾಣಿಯವರ ಸಹಕಾರ ಪಡೆದು ಪಾಕಿಸ್ತಾನಕ್ಕೆ ಬುದ್ಧಿ ಕಲಿಸಿ ದಿಟ್ಟತನ ತೋರಿದ್ದರು. ಪ್ರಧಾನಿ ಮೋದಿಯವರೂ ಈಗ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದರಲ್ಲಿ ನಮ್ಮ ಅಭ್ಯಂತರ ಇಲ್ಲ. ನಾವೂ ಅವರಿಗೆ ಬೆಂಬಲ ನೀಡುತ್ತೇವೆ ಎಂದರು.

    ರಾಜ್ಯದ ಪ್ರವಾಸಿ ತಾಣಗಳಲ್ಲಿ ಜೂಜು ಕೇಂದ್ರವನ್ನು ಸ್ಥಾಪಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಉಗ್ರಪ್ಪ ಖಂಡಿಸಿದ್ದಾರೆ. ಇದು ಬಿಜೆಪಿಯ ರಾಷ್ಟ್ರ ಪ್ರೇಮ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ. ಈ ರೀತಿಯ ಜೂಜು ಕೇಂದ್ರವನ್ನು ತೆರೆಯಲು ಹೊರಟಿರುವ ಸಿಎಂ ಯಡಿಯೂರಪ್ಪ ಹಾಗೂ ಸಚಿವ ಸಿ.ಟಿ ರವಿಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

  • ಹೌದು ಹುಲಿಯಾ ಎಂದು ಹೇಳಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದ ಸಿಟಿ ರವಿ

    ಹೌದು ಹುಲಿಯಾ ಎಂದು ಹೇಳಿ ಕ್ರೀಡಾಪಟುಗಳಿಗೆ ಹುರಿದುಂಬಿಸಿದ ಸಿಟಿ ರವಿ

    ಬಳ್ಳಾರಿ: ಹಂಪಿ ಉತ್ಸವ-2020 ನಿಮಿತ್ತ ಮಲಪನಗುಡಿಯ ವಿದ್ಯಾರಣ್ಯ ಪೀಠದ ಹೈಸ್ಕೂಲ್ ಮೈದಾನದಲ್ಲಿ ಎರಡನೇ ದಿನವಾದ ಇಂದು ನವಿರೇಳಿಸುವ ರೀತಿಯಲ್ಲಿ ಗುಂಡು ಎತ್ತುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲೋಳಿ ಗ್ರಾಮದ ಇಬ್ರಾಹಿಂ ಮಕ್ಬುಲ್‍ಸಾಬ್ ಅರಬ್ ಅವರು 160 ಕೆ.ಜಿ.ಭಾರದ ಕಲ್ಲನ್ನು ಎತ್ತಿ ಸತತ 8ನೇ ಬಾರಿಗೆ ಪ್ರಥಮ ಸ್ಥಾನ ಗಳಿಸಿದರು.

    ಇಬ್ರಾಹಿಂ ಅವರು ಕಲ್ಲು ಎತ್ತುವ ಅಂಗಳಕ್ಕೆ ಬರುತ್ತಲೇ ಜನರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಮೊಣಕಾಲವರೆಗೆ ಕಲ್ಲು ಎತ್ತುತ್ತಿದ್ದಂತೆ ಸಚಿವ ಸಿಟಿ ರವಿ ಅವರು ಹೌದೋ ಹುಲಿಯಾ ಹೌದೋ ಭೀಮ ಎಂದು ಕೂಗಿ ಪ್ರೋತ್ಸಾಹಿಸಿದರು. ಇದಾದ ಕೆಲವೇ ಸೆಕೆಂಡುಗಳಲ್ಲಿ ಬರೋಬ್ಬರಿ 160 ಕೆ.ಜಿ ಭಾರದ ಕಲ್ಲು ಇಬ್ರಾಹಿಂ ಅವರ ಭುಜದ ಮೇಲೆ ಬಂದಿತ್ತು. ಒಂದೇ ಒಂದ ಸಲವೂ ಕೆಳಗೆ ಒಗೆಯದೇ ಒಂದೇ ಪ್ರಯತ್ನದಲ್ಲಿ ಕಲ್ಲು ಎತ್ತಿದ ಇಬ್ರಾಹಿಂ ಮಕ್ಬುಲ್‍ಸಾಬ್ ಅರಬ್ ಅವರ ಸಾಹಸ ಕಂಡು ಜನರು ಚಪ್ಪಾಳೆ ತಟ್ಟಿದರು. ಆಧುನಿಕ ಭೀಮ ಖ್ಯಾತಿಗೆ ಭಾಜನವಾದರು.

    ಇಬ್ರಾಹಿಂ ಮಕ್ಬುಲ್‍ಸಾಬ್ ಅರಬ್ ಅವರ ವಯಸ್ಸು ಕೇವಲ 29. ಇವರು ಮನೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಕ್ರೀಡಾ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

  • ಕೆಆರ್‌ಎಸ್‌ನ ಡಿಸ್ನಿಲ್ಯಾಂಡ್ ಯೋಜನೆ ಇನ್ನೂ ಜೀವಂತ

    ಕೆಆರ್‌ಎಸ್‌ನ ಡಿಸ್ನಿಲ್ಯಾಂಡ್ ಯೋಜನೆ ಇನ್ನೂ ಜೀವಂತ

    ಮಂಡ್ಯ: ಕಳೆದ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಲ್ಲಿ ಒಂದಾದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆ ಇನ್ನೂ ಕೂಡ ಜೀವಂತವಾಗಿ ಇದೆ. ಈ ನಿಟ್ಟಿನಲ್ಲಿ ಇಂದು ಮಂಡ್ಯದಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ ಸರ್ಕಾರ ಬದಲಾದರೂ ಸಹ ಕೆಲವು ಒಳ್ಳೆಯ ಯೋಜನೆಗಳನ್ನು ಕೈ ಬಿಡುವುದಿಲ್ಲ. ಅಂತೆಯೇ ಕೆಆರ್‍ಎಸ್‍ನ ಡಿಸ್ನಿಲ್ಯಾಂಡ್ ಯೋಜನೆಯನ್ನು ಸಹ ನಾವು ಇನ್ನೂ ಕೈ ಬಿಟ್ಟಿಲ್ಲ ಎಂದು ಹೇಳಿದ್ದಾರೆ.

    ಕಳೆದ ಸಮ್ಮಿಶ್ರ ಸರ್ಕಾರ ಪ್ರವಾಸೋದ್ಯಮ ಸಚಿವರಾಗಿದ ಸಾ.ರಾ.ಮಹೇಶ್ ಕೆಆರ್‍ಎಸ್‍ನಲ್ಲಿ ಡಿಸ್ನಿಲ್ಯಾಂಡ್‍ನ್ನು ರೂಪಿಸುವುದಾಗಿ ಯೋಜನೆಯೊಂದನ್ನು ತಯಾರು ಮಾಡಲು ಮುಂದಾಗಿದ್ದರು. ಆದರೆ ಸಮ್ಮಿಶ್ರ ಸರ್ಕಾರ ಉರುಳಿದ ನಂತರ ಈ ಯೋಜನೆಯೂ ಸಹ ಮುಗಿದು ಹೋಯಿತು ಎನ್ನಲಾಗುತ್ತಿತ್ತು. ಆದರೆ ಇಂದು ಸಚಿವ ಸಿ.ಟಿ.ರವಿ ಈ ಯೋಜನೆ ಇನ್ನೂ ಜೀವಂತವಾಗಿ ಇದೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಬದಲಾಯ್ತು ಅಂದ್ರೆ ಅವರ ಅಲೋಚನೆಗಳನ್ನು ಅಲ್ಲಿಗೆ ಬಿಟ್ಟು ಹೋಗುವಂತಹ ಪದ್ಧತಿ ಇಲ್ಲ. ಅವರ ಒಳ್ಳೆಯ ಅಲೋಚನೆಗಳನ್ನು ಖಂಡಿತವಾಗಿಯೂ ಬಳಸಿಕೊಳ್ಳುತ್ತೇವೆ ಎಂದರು.

    ಈ ಡಿಸ್ನಿಲ್ಯಾಂಡ್ ಯೋಜನೆ ಪ್ರವಾಸೋದ್ಯಮ ಇಲಾಖೆಯಿಂದ ಪ್ಲಾನ್ ಮಾಡಿರಲಿಲ್ಲ. ಇದನ್ನು ನೀರಾವರಿ ಇಲಾಖೆಯಿಂದ ಮಾಡಿಸುತ್ತೇವೆ ಎಂದು ಸಾ.ರಾ.ಮಹೇಶ್ ಅವರು ಹೇಳಿದ್ದರು. ಸದ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ಡಿಸ್ನಿಲ್ಯಾಂಡ್ ಯೋಜನೆಗೆ ಬೇಕಾದ 2 ಸಾವಿರ ಕೋಟಿ ಹಣ ಇಲ್ಲ. ಈ ಬಗ್ಗೆ ಹಣ ಹೂಡಿಕೆ ಮಾಡಿದ್ದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಿಟಿ ರವಿ ಹೇಳಿದ್ದಾರೆ.

  • ಪಕ್ಷ ಬಿಟ್ಟು ಹೋದವರು ವಾಪಸ್ ಬರ್ತಾರೆ- ಬಿಜೆಪಿ ಬಂಡಾಯ ನಾಯಕರಿಗೆ ಸಿಟಿ ರವಿ ತಿರುಗೇಟು

    ಪಕ್ಷ ಬಿಟ್ಟು ಹೋದವರು ವಾಪಸ್ ಬರ್ತಾರೆ- ಬಿಜೆಪಿ ಬಂಡಾಯ ನಾಯಕರಿಗೆ ಸಿಟಿ ರವಿ ತಿರುಗೇಟು

    ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಬಿಟ್ಟು ಹೋಗುವ ನಾಯಕರು ಮತ್ತೆ ವಾಪಸ್ ಬರುತ್ತಾರೆ ಎಂದು ಸಚಿವ ಸಿಟಿ ರವಿ ಅವರು ಹೇಳಿದ್ದು, ಪಕ್ಷ ಬಿಟ್ಟು ಹೋದವರಿಗೆ ಕೆಟ್ಟ ಅನುಭವವಾಗಿ ವಾಪಸ್ ಬಂದಿರುವ ಹಲವು ಉದಾಹರಣೆಗಳು ನಮ್ಮ ಮುಂದಿದೆ ಎಂದು ಹೇಳಿದ್ದಾರೆ.

    ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ನಾಯಕರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ ಅವರು, ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಆ ಪಕ್ಷದ ನಾಯಕರೇ ಬಿಟ್ಟು ಹೊರಬರುತ್ತಿದ್ದಾರೆ. ಆದರೆ ಇಂದು ಕೆಲವರು ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಹೋಗುತ್ತಿದ್ದಾರೆ. ನಮ್ಮ ಪಕ್ಷ ಸಿದ್ಧಾಂತ ಮೇಲೆ ನಿಂತಿದ್ದು, ಎಲ್ಲರಿಗೂ ಸಮಾನ ಅವಕಾಶ ಲಭಿಸುತ್ತದೆ ಎಂದು ಪರೋಕ್ಷವಾಗಿ ರಾಜು ಕಾಗೆ ಅವರಿಗೆ ಟಾಂಗ್ ನೀಡಿದರು.

    ಇದೇ ವೇಳೆ ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬುಧವಾರ ಸುಪ್ರೀಂಕೋರ್ಟ್ ತೀರ್ಪು ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭ ಮಾಡುತ್ತೇವೆ. ಕೋರ್ಟ್ ತೀರ್ಪಿನ ಮೇಲೆ ಚುನಾವಣೆ ನಡೆಯುವುದು ನಿರ್ಧಾರವಾಗುತ್ತೆ. ಶರತ್ ಬಚ್ಚೇಗೌಡ ಮತ್ತು ಅವರ ಕುಟುಂಬಕ್ಕೆ ಪಕ್ಷ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನು ನನ್ನ ಕಿರಿಯ ಸಹೋದರನಂತಿರುವ ಶರತ್ ಅವರು ಚಿಂತಿಸಬೇಕಿದೆ. ಇಂದು ವೈಯಕ್ತಿಕ ಹಿನ್ನೆಲೆಯಲ್ಲಿ ಮಾಡಿದಂತಹ ತೀರ್ಮಾನ ಇರಬಾರದು. ಮುಂದಿನ 40 ವರ್ಷಗಳ ರಾಜಕೀಯ ಬದುಕಿನ ಬಗ್ಗೆಯೂ ಯೋಚನೆ ಮಾಡಬೇಕು. ಅವರು ಪಕ್ಷದ ನಿರ್ಧಾರ ಒಪ್ಪಬೇಕು ಎಂದು ಹಿರಿಯನಾಗಿ ಸಲಹೆ ನೀಡುತ್ತೇನೆ ಎಂದರು. ಇದನ್ನು ಓದಿ: ಆಪರೇಷನ್ ಸಕ್ಸಸ್ – ‘ಕೈ’ ಹಿಡಿದು ನಾನು ಚಿಕ್ಕಮಗುವಲ್ಲ, ಸ್ಪರ್ಧಿಸುತ್ತೇನೆ ಎಂದ ರಾಜು ಕಾಗೆ

    ನಮ್ಮ ಸರ್ಕಾರ ಬಂದು 100 ದಿನಗಳು ಮಾತ್ರ ಆಗಿದ್ದು, ಪೂರ್ಣ ಬಹುಮತ ಪಡೆದು ನಾವು ಅಧಿಕಾರಕ್ಕೆ ಬಂದಿಲ್ಲ. ಆದ್ದರಿಂದ ಪ್ರಣಾಳಿಕೆಯಲ್ಲಿ ನಾವು ನೀಡಿರುವ ಮಾತನ್ನು ಈಡೇರಿಸಲೇಬೇಕು. ಇದರಲ್ಲಿ ಯಾವುದೇ ಬದಲಾವಣೆ ಆಗಲ್ಲ. ಎಸಿಬಿ ವಿಚಾರವನ್ನೂ ನಾವು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

  • ರಾಹುಲ್ ರೀತಿ ಫುಲ್ ಟೈಮ್ ಕಾಮಿಡಿ ಮಾಡಲು ಹೊರಟಿದ್ದೀರಾ – ಎಂಬಿಪಿಗೆ ಸಿಟಿ ರವಿ ಟಾಂಗ್

    ರಾಹುಲ್ ರೀತಿ ಫುಲ್ ಟೈಮ್ ಕಾಮಿಡಿ ಮಾಡಲು ಹೊರಟಿದ್ದೀರಾ – ಎಂಬಿಪಿಗೆ ಸಿಟಿ ರವಿ ಟಾಂಗ್

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ ಎಂದಿದ್ದ ಗೃಹ ಸಚಿವ ಎಂಬಿ ಪಾಟೀಲ್ ಅವರ ಹೇಳಿಕೆಗೆ ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ.

    ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಸಿಟಿ ರವಿ ಅವರು, ‘ಅಯ್ಯೋ ಎಂ.ಬಿ.ಪಾಟೀಲ್ ರವರೆ, ನೀವು ಎಷ್ಟು ಅತ್ತು ಸುರಿದು ಮಂತ್ರಿ ಆದಿರಿ ಎಂದು ಜಗತ್ತಿಗೆ ತಿಳಿದಿದೆ. ಇನ್ನು ನೀವು ಶ್ರೀ ಬಿಎಸ್‍ವೈ ಬಿಜೆಪಿ ರವರನ್ನು ಮುಖ್ಯಮಂತ್ರಿ ಮಾಡುತ್ತೀರಾ? ನಿಮ್ಮ ನಾಯಕ ರಾಹುಲ್ ಗಾಂಧಿ ತರಹ ಫುಲ್ ಟೈಮ್ ಕಾಮಿಡಿ ಮಾಡಲು ಹೊರಟಿದ್ದೀರಾ? ಮೊದಲು ನಿಮ್ಮ ಪಕ್ಷದ ಲಿಂಗಾಯತ ನಾಯಕರಿಗೆ ಮಂತ್ರಿಗಿರಿ ಕೊಡಿಸಿ ನಿಮ್ಮ ಗೌರವ ಉಳಿಸಿಕೊಳ್ಳಿ ಎಂದು ಸವಾಲು ಎಸೆದಿದ್ದಾರೆ.

    ಅಂಗಡಿ ಬಗ್ಗೆ ಪಾಟೀಲ್ ಹೇಳಿದ್ದೇನು?
    ಮಾಧ್ಯಮಗಳ ಜೊತೆ ವಿಜಯಪುರದಲ್ಲಿ ಮಾತನಾಡಿದ್ದ ಪಾಟೀಲ್ ಅವರು, ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿಗೆ ಮಾನದಂಡ ಬೇರೆ-ಬೇರೆಯಾಗಿದೆ. ಇಬ್ಬರು ನಾಲ್ಕು ಬಾರಿ ಗೆದ್ದು ಬಂದಿದ್ದು, ಅನುಭವ ಹೊಂದಿದ್ದಾರೆ. ಆದರೆ ಪ್ರಹ್ಲಾದ್ ಜೋಶಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದರೆ ಸುರೇಶ್ ಅಂಗಡಿಯವರು ರಾಜ್ಯ ಸಚಿವರು. ಇಬ್ಬರು ಒಂದೇ ಸಮಾನವಾಗಿದ್ದರೂ ವ್ಯತ್ಯಾಸ ಮಾಡಿದ್ದಾರೆ. ಈ ವಿಚಾರವನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

    ಸುರೇಶ್ ಅಂಗಡಿಯವರಿಗೂ ಕ್ಯಾಬಿನೆಟ್ ದರ್ಜೆ ನೀಡಬೇಕಿತ್ತು. ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಇದು ಒಂದು ದೊಡ್ಡ ಅನ್ಯಾಯ. ಈ ಮೂಲಕ ಲಿಂಗಾಯತರಿಗೆ ಅಗೌರವ ತೋರಿಸಿದ್ದಾರೆ. ಪಾಪ ಸುರೇಶ್ ಅಂಗಡಿಯವರು ಕೇಂದ್ರದ ರಾಜ್ಯ ಸಚಿವರು. ಅದಕ್ಕಾಗಿ ಪ್ರಹ್ಲಾದ್ ಜೋಶಿ ಕಡೆಗೆ ಅಂಗಡಿ ನೋಡಬೇಕು. ಸ್ವಾಭಿಮಾನವಿದ್ದರೆ ಸುರೇಶ್ ಅಂಗಡಿ ಜಾಗದಲ್ಲಿ ನಾನು ಇದ್ದಿದ್ದರೆ ಸಚಿವ ಸ್ಥಾನ ತಿರಸ್ಕಾರ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು.

    ಸಿಟಿ ರವಿ ಹೇಳಿದ್ದು ಏನು?
    ಬಿಜೆಪಿ ಪಕ್ಷ ಲಿಂಗಾಯುತ ಸಮುದಾಯದ ನಾಯಕರರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ಧವಿದೆ. ಲಿಂಗಾಯುತ ಸಮುದಾಯದ ಮೇಲೆ ಕಾಳಜಿ ಇರುವ ನೀವು ಏಕೆ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಲಿಂಗಾಯುತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬಾರದು. ನಿಮ್ಮ ಕೈಯಲ್ಲಿ ಇಲ್ಲದ ಭವಿಷ್ಯ ಹೇಳುವುದನ್ನು ಬಿಟ್ಟು ವರ್ತಮಾನದ ಬಗ್ಗೆ ಮಾತನಾಡಿ. ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಲಿಂಗಾಯತ ಪರ ಕಾಳಜಿಯನ್ನು ಈಗ ತೋರಿಸಿ ಎಂದು ಬರೆದು ಕಾಲೆಳೆದಿದ್ದರು.

    ಈಶ್ವರಪ್ಪ ಹೇಳಿದ್ದು ಏನು?
    ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸಿಎಂ ಆಗಲು ಸಹಾಯ ಮಾಡುತ್ತೇನೆ ಎಂಬ ಎಂಬಿಪಿ ಹೇಳಿಕೆಗೆ ಈಶ್ವರಪ್ಪ ವಾಟ್ ಎ ಜೋಕ್ ಒಂದು ದೀಪದ ಹುಳ ಸೂರ್ಯನಿಗೆ ಬೆಳಕು ಕೊಡೋಕೆ ಸಹಾಯ ಮಾಡ್ತೀನಿ ಎಂದು ಹೇಳಿದಂತಿದೆ ಎಂದು ಬರೆದು ಟಾಂಗ್ ಕೊಟ್ಟಿದ್ದಾರೆ.

  • ಹಾಸನ, ಮೈಸೂರು, ಮಂಡ್ಯ ಬಜೆಟ್ – ಸಮಗ್ರ ಕರ್ನಾಟಕ ಅಭಿವೃದ್ಧಿ ಚಿಂತನೆ ಇಲ್ಲ: ಸಿಟಿ ರವಿ, ಹರೀಶ್ ಪೂಂಜ

    ಹಾಸನ, ಮೈಸೂರು, ಮಂಡ್ಯ ಬಜೆಟ್ – ಸಮಗ್ರ ಕರ್ನಾಟಕ ಅಭಿವೃದ್ಧಿ ಚಿಂತನೆ ಇಲ್ಲ: ಸಿಟಿ ರವಿ, ಹರೀಶ್ ಪೂಂಜ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗುತ್ತಿದ್ದಂತೆ ಬಿಜೆಪಿ ನಾಯಕರು ಬಜೆಟ್ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಶಾಸಕ ಸಿಟಿ ರವಿ. ಈ ಬಜೆಟ್ ನಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಇಲ್ಲ. ಸಮಗ್ರ ಕರ್ನಾಟಕಕ್ಕೆ ತೆರಿಗೆ ಹೊರಿಸಿ ಕೆಲ ಜಿಲ್ಲೆಗಳಿಗೆ ಮಾತ್ರ ವಿಶೇಷ ಕೊಡುಗೆಗಳನ್ನು ನೀಡಿದೆ. ಇದರಿಂದ ಒಂದು ಕಣ್ಣಿಗೆ ಸುಣ್ಣ ಹಾಗೂ ಒಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಅನುಸರಿಸಿದೆ. ಈ ಕುರಿತು ಬಿಜೆಪಿ ವಿಧಾನಸಭೆಯ ಹೊರಗೆ ಹಾಗೂ ಒಳಗೂ ಇದರ ವಿರುದ್ಧ ಧ್ವನಿ ಎತ್ತಿ ಹೋರಾಟ ಮಾಡುತ್ತದೆ ಎಂದರು.

    ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಜೆಟ್ ನಲ್ಲಿ ಕರಾವಳಿಯ ಜಿಲ್ಲೆಗಳನ್ನು ಮರೆತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರ ಬಗ್ಗೆ ಕುಮಾರಸ್ವಾಮಿ ಚಕಾರವೆತ್ತಿಲ್ಲ. ಅಲ್ಲದೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅವ್ಯಾಹತವಾಗಿ ಮಳೆ ಆಗಿದೆ. ಅಡಿಕೆ ಬೆಳೆಗಾರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಎಂಡೋ ಪೀಡಿತರಿ ಯಾವುದೇ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಟ್ಟಿಲ್ಲ. ಇದರಿಂದ ಕುಮಾರಸ್ವಾಮಿ ಸರ್ಕಾರ ಎಂಡೋಪೀಡಿತರ ಕುಟುಂಬದವರ ಶಾಪವನ್ನು ಎದುರಿಸಬೇಕಾಗುತ್ತದೆ. ಇದು ಕೇವಲ ಐದು ಜಿಲ್ಲೆಗೆ ಸೀಮಿತವಾಗಿರುವ ಬಜೆಟ್ ಎಂದು ಹೇಳಿದರು.

    ಕುಮಾರಸ್ವಾಮಿಯವರು ಉತ್ತರಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಭಾವ ಇಲ್ಲ ಎನ್ನುವ ಕಾರಣಕ್ಕೆ ಈ ಜಿಲ್ಲೆಗಳನ್ನು ತಮ್ಮ ಬಜೆಟ್ ನಲ್ಲಿ ಮರೆತಿದ್ದಾರೆ ಎಂದು ಆರೋಪಿಸಿದರು.

    ಈ ಸಂಬಂಧ ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿ ಹರೀಶ್ ಪೂಂಜಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಇಂದು ವಿಧಾನಸಭೆಯಲ್ಲಿ ಮಂಡನೆಯಾಗಿದ್ದು ರಾಜ್ಯ ಬಜೆಟ್ ಅಂದರೆ ಅದು ರಾಜ್ಯಕ್ಕೆ ಮಾಡುವ ಅವಮಾನ. ಇದು ಹಾಸನ, ಮಂಡ್ಯ, ಮೈಸೂರು ಭಾಗದ ಬಜೆಟ್, ಪ್ರಾದೇಶಿಕ ಅಸಮತೋಲನೆ ಹೆಚ್ಚಿಸುವ, ಜೆಡಿಎಸ್ ಪಕ್ಷಕ್ಕೆ ಮತ ನೀಡಿದವರಿಗಾಗಿ ಮಾತ್ರ ಮಾಡಿದ ಬಜೆಟ್. ಇದೊಂದು ಸಾಂದರ್ಭಿಕ ಶಿಶುವಿನ ಅಸ್ತವ್ಯಸ್ತ, ಅಸಮರ್ಥ, ಅಸಾಂದರ್ಭಿಕ ಹಾಗೂ ಅನ್ಯಾಯದ ಬಜೆಟ್.

    ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಕರಾವಳಿಯ ಅಭಿವೃದ್ಧಿಗೆ ಯಾವುದೇ ಯೋಜನೆಯನ್ನು ಮಾಡದ, ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚಿಸಿ, ವಿದ್ಯುತ್ತಿನ ಬೆಲೆಯನ್ನು ಏರಿಸಿ ಜನಸಾಮಾನ್ಯರ ಸಮಸ್ಯೆಗಳನ್ನು ಹೆಚ್ಚಿಸಲೆಂದೇ ಮಾಡಿದ ಬಜೆಟ್ ಇದು.

    ದಕ್ಷಿಣ ಕನ್ನಡದ ಬಹುವರ್ಷದ ಬೇಡಿಕೆಯಾದ ಎಂಡೋ ಪೀಡಿತರ ಪುನರ್ವಸತಿಗೆ, ಅಡಿಕೆ ಮತ್ತು ರಬ್ಬರ್ ಬೆಳೆಗಾರರ ಸಮಸ್ಯೆಗಳಿಗೆ, ಪ್ರಾಕೃತಿಕ ವಿಕೋಪಗಳಿಂದ ತೊಂದರೆಗೊಳಗಾದವರಿಗೆ ಪರಿಹಾರ ನೀಡುವ ಯಾವುದೇ ಯೋಜನೆಗಳು ಇಲ್ಲದ ಬಜೆಟ್. ದೂರದೃಷ್ಟಿ, ಸಮದೃಷ್ಟಿ ಇಲ್ಲದ ಅಸಮಾನತೆಯ ಬಜೆಟ್. ಇನ್ನು ಕರಾವಳಿ ಜಿಲ್ಲೆಗಳಿಗೆ ಕೈಗಾರಿಕೆ ಇನ್ನಿತರ ಅಭಿವೃದ್ಧಿ ಯೋಜನೆಗಳಂತೂ ಮರಿಚಿಕೆಯೇ ಆಗಿದೆ.

    ಇಂತಹ ಕರಾವಳಿ ವಿರೋಧಿ ಬಜೆಟ್ ಮಂಡನೆಯಾಗಿರುವುದು ರಾಜ್ಯದ ಇತಿಹಾಸದಲ್ಲಿ ಇದು ಮೊದಲ ಬಾರಿ. ಇಂಥಹ ಬಜೆಟ್ ಮಂಡನೆ ಆದ ಮೇಲೂ ಅಧಿಕಾರದಲ್ಲಿ ಇರಲು ಜಿಲ್ಲೆಯ ಉಸ್ತುವಾರಿ ಸಚಿವರಿಗೆ ನಾಚಿಗೆಯಾಗಲ್ಲವೇ? ನಿಮಗೆ ನಿಜವಾಗಿಯೂ ಕರಾವಳಿಯ ಮೇಲೆ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಮೇಲೆ ಒಂದಿನಿತು ಪ್ರೀತಿ ಗೌರವ ಇದ್ದರೆ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಸರಕಾರದಿಂದ ಹೊರಗೆ ಬನ್ನಿ ಉಸ್ತುವಾರಿ ಸಚಿವರೇ.

     

     

    https://www.facebook.com/100011886302170/posts/381618182244389/