Tag: city corporation

  • ದಾವಣಗೆರೆ ಪಾಲಿಕೆ – ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೂ ಅಧಿಕಾರ ನಮಗೆ ಎಂದ ಬಿಜೆಪಿ

    ದಾವಣಗೆರೆ ಪಾಲಿಕೆ – ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೂ ಅಧಿಕಾರ ನಮಗೆ ಎಂದ ಬಿಜೆಪಿ

    – ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮಧ್ಯೆ ಪೈಪೋಟಿ
    – ಪಕ್ಷೇತರರು ಬೆಂಬಲ ನೀಡಿದ್ರೆ ಬಿಜೆಪಿ ಅಧಿಕಾರಕ್ಕೆ
    – ಕೈ ಬಂಡಾಯ ಅಭ್ಯರ್ಥಿ ಬೆಂಬಲ ನೀಡಿದ್ರೆ ಕಾಂಗ್ರೆಸ್ಸಿಗೆ ಪಾಲಿಕೆ

    ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆಯ ದಂಗಲ್ ತೆರೆಕಂಡಿದ್ದು, ಕಾಂಗ್ರೆಸ್ 22 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತಕ್ಕೆ ಒಂದು ಸ್ಥಾನ ಕಡಿಮೆ ಗಳಿಸಿದೆ.

    ಒಟ್ಟು 45 ವಾರ್ಡ್ ಗಳು ಇರುವ ಪಾಲಿಕೆ ಗದ್ದಿಗೆ ಹಿಡಿಯಲು ಇದೀಗ ಸೆಣಸಾಟ ಪ್ರಾರಂಭವಾಗಿದೆ. ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1 ಹಾಗೂ, ಐದು ಮಂದಿ ಪಕ್ಷೇತರರು ಗೆಲುವು ಪಡೆದಿದ್ದಾರೆ.

    ಪಾಲಿಕೆ ಅಧಿಕಾರ ಹಿಡಿಯಲು 23 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್‍ಗೆ ಅಧಿಕಾರ ವಹಿಸಿಕೊಳ್ಳಲು ಎಲ್ಲ ಅವಶಾಶಗಳು ಇವೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 45 ನೇ ವಾರ್ಡ್ ನ ಉದಯ್ ಕುಮಾರ್ ಗೆಲುವು ಸಾಧಿಸಿದ್ದು, ಇವರು ಕಾಂಗ್ರೆಸ್ ಗೆ ಬೆಂಬಲ ನೀಡಿದರೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಗೆ ಸುಲಭದ ದಾರಿಯಾಗಲಿದೆ. ಅಲ್ಲದೆ ಕಳೆದ ಬಾರಿಯೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹೀಗಾಗಿ ಶತಾಯ ಗತಾಯ ಅಧಿಕಾರ ಉಳಿಸಿಕೊಳ್ಳಬೇಕೆಂದು ಕಾಂಗ್ರೆಸ್ ಕಸರತ್ತು ನಡೆಸಿದೆ.

    ಕೇವಲ 17 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ. ಘಟಾನುಘಟಿಗಳು ಕಣಕ್ಕಿಳಿದಿದ್ದು ಈ ಬಾರಿ ಚುನಾವಣೆಯ ವಿಶೇಷವಾಗಿತ್ತು. ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ನವರ ಆಪ್ತ ದಿನೇಶ್.ಕೆ.ಶೆಟ್ಟಿ 17 ನೇ ವಾರ್ಡ್ ನಿಂದ ಸೋಲು ಅನುಭವಿಸಿದ್ದು, ಬಿಜೆಪಿಯ ಅಜಯ್ ಕುಮಾರ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಮಾಜಿ ಸಚಿವ ಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ 40ನೇ ವಾರ್ಡ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

    ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಪತಿ-ಪತ್ನಿ ಇಬ್ಬರೂ ಗೆಲುವು ಸಾಧಿಸಿದ್ದು, ಪತಿ 28 ನೇ ವಾರ್ಡ್ ಜೆ.ಎನ್.ಶ್ರೀನಿವಾಸ್ ಜಯ ಗಳಿಸಿದರೆ, ಅತ್ತ ಪತ್ನಿ ಶ್ವೇತಾ ಶ್ರೀನಿವಾಸ್ 37ನೇ ವಾರ್ಡ್ ನಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ಪುತ್ರ 26 ವರ್ಷದ ರಾಕೇಶ್ ಜಾಧವ್ ಜಯಗಳಿಸಿದ್ದಾರೆ. 10 ನೇ ವಾರ್ಡಿನಲ್ಲಿ ಮಾಜಿ ಮೇಯರ್ ಅನಿತಾಬಾಯಿ ಪತಿ ಮಾಲತೇಶ್ ರಾವ್ ಜಾಧವ್ ವಿರುದ್ಧ ಗೆಲುವು ಸಾಧಿಸಿ ಅತಿ ಚಿಕ್ಕ ವಯಸ್ಸಿನ ಪಾಲಿಕೆ ಸದಸ್ಯರಾಗಿದ್ದಾರೆ.

    ಇನ್ನು ಮೇಯರ್ ಪಟ್ಟಕ್ಕಾಗಿ ಎರಡು ಪಕ್ಷಗಳು ಕಸರತ್ತು ನಡೆಸುತ್ತಿವೆ. ಅಲ್ಲದೆ 17 ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಜಿ.ರವಿ ಕೇವಲ ಎರಡು ಮತಗಳನ್ನು ಪಡೆದ ಅಭ್ಯರ್ಥಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ರವಿ ಕೇವಲ ಎರಡು ಮತಗಳನ್ನು ಪಡೆಯುವ ಮೂಲಕ ಇಡೀ ಪಾಲಿಕೆ ಚುನಾವಣೆಯಲ್ಲಿ ಅತಿ ಕಡಿಮೆ ಮತ ಪಡೆದ ಅಭ್ಯರ್ಥಿಯಾಗಿದ್ದಾರೆ.

    ಮೇಯರ್ ಪಟ್ಟಕ್ಕಾಗಿ ಕಸರತ್ತು:
    ಮೇಯರ್ ಪಟ್ಟಕ್ಕಾಗಿ ಬಿಜೆಪಿ ಕಾಂಗ್ರೆಸ್ ನಡುವೇ ಪೈಪೋಟಿ ಜೋರಾಗಿದ್ದು, ಈ ಬಾರಿ ಮೇಯರ್ ಪಟ್ಟ ಬಿಜೆಪಿಗೆ ಸಿಗುವ ವಿಶ್ವಾಸವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದ್ದಾರೆ. 4 ಜನ ಪಕ್ಷೇತರರ ಬೆಂಬಲದಿಂದ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ 17, 4 ಪಕ್ಷೇತರರು ಹಾಗೂ ಮೂವರು ಶಾಸಕರು, ಒಬ್ಬ ಸಂಸದರ ಬಲಾಬಲ ಇಟ್ಟುಕೊಂಡು ಬಿಜೆಪಿ ಅಧಿಕಾರ ಹಿಡಯಲು ಕಸರತ್ತು ನಡೆಸಿದೆ.

    ಕಾಂಗ್ರೆಸ್‍ನಿಂದಲೂ ಪ್ರಯತ್ನ
    ಇತ್ತ ಪಾಲಿಕೆಯ ಆಡಳಿತ ನಡೆಸಲು ಕಾಂಗ್ರೆಸ್ ಸಹ ಸಿದ್ಧವಾಗಿದ್ದು, 22 ಸದಸ್ಯರು ಜಯಗಳಿಸಿದ್ದು, ಒಬ್ಬರು ಶಾಸಕರು, ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 24 ಸದಸ್ಯರ ಬಲ ಆಗುತ್ತದೆ. ಪಾಲಿಕೆ ಅಧಿಕಾರ ನಮ್ಮ ತೆಕ್ಕೆಗೆ ಬರಲಿದೆ ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ. ಅಲ್ಲದೆ ಇಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗಳು ಕಾಂಗ್ರೆಸ್ ಗೆ ಸಪೋರ್ಟ್ ಮಾಡುವ ಸಾಧ್ಯತೆ ಇದೆ. ಇಬ್ಬರೂ ಸಹ ಆಡಳಿತದ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿದ್ದು, ಯಾರು ಅಧಿಕಾರ ವಹಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.

  • ಗೆಲುವಿನ ಅಲೆಯಲ್ಲಿ ತೇಲಿದ ಬಿಜೆಪಿ- ‘ಕೈ’ ಕಚ್ಚಿದ ಮತದಾರ- ಮುಗ್ಗರಿಸಿದ ತೆನೆ ಹೊತ್ತ ಮಹಿಳೆ

    ಗೆಲುವಿನ ಅಲೆಯಲ್ಲಿ ತೇಲಿದ ಬಿಜೆಪಿ- ‘ಕೈ’ ಕಚ್ಚಿದ ಮತದಾರ- ಮುಗ್ಗರಿಸಿದ ತೆನೆ ಹೊತ್ತ ಮಹಿಳೆ

    ಶಿವಮೊಗ್ಗ: ಮಹಾನಗರ ಪಾಲಿಕೆಗೆ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. 35 ವಾರ್ಡ್ ಗಳ ಪೈಕಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲವು ಸಾಧಿಸಿದೆ. ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ. ಕಿಂಗ್ ಮೇಕರ್ ಆಗುವ ಆಸೆ ಇಟ್ಟುಕೊಂಡಿದ್ದ ಜೆಡಿಎಸ್ ಗೆ ಕೇವಲ ಎರಡು ಸ್ಥಾನಗಳು ಮಾತ್ರ ದೊರಕಿವೆ. ಪಕ್ಷೇತರರು ಐವರು ಗೆದ್ದಿದ್ದು, ಎಸ್ ಡಿಪಿಐ ಒಂದು ಸ್ಥಾನದಲ್ಲಿ ಗೆದ್ದಿದೆ. ಹಾಲಿ ಪಾಲಿಕೆಯಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿವೆ.

    ಸತತವಾಗಿ ಐದು ಬಾರಿ ಗೆದ್ದಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಬಿಜೆಪಿಯ ಗನ್ನಿ ಶಂಕರ್ ಎದರು ಸೋತಿದ್ದಾರೆ. ಕಾಂಗ್ರೆಸ್ ನ ನರಸಿಂಹಮೂರ್ತಿ, ಜೆಡಿಎಸ್ ನ ಮಾಜಿ ಮೇಯರ್ ಪತ್ನಿ ಗೀತಾ ಏಳುಮಲೈ, ಮಾಜಿ ಉಪಮೇಯರ್ ಪಾಲಾಕ್ಷಿ ಸೋಲಿನ ರುಚಿ ನೋಡುವಂತಾಗಿದೆ.

    15ನೇ ವಾರ್ಡ್ ನಲ್ಲಿ ಕಾಂಗ್ರೆಸ್ ನ ರಾಜಶೇಖರ್ ಹಾಗೂ ಜೆಡಿಎಸ್ ನ ಸತ್ಯನಾರಾಯಣ ಇಬ್ಬರೂ ಸಮ ಸಮ ಮತಗಳನ್ನು ಪಡೆದರು. ಅಂತಿಮವಾಗಿ ಚೀಟಿ ಮೂಲಕ ಆಯ್ಕೆ ಮಾಡಿದಾಗ ಜೆಡಿಎಸ್ ಸತ್ಯನಾರಾಯಣ ಅವರಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.

    35 ವಾರ್ಡ್ ಹಾಗೂ ಇಬ್ಬರು ಶಾಸಕರು ಹಾಗೂ ಮೂವರು ವಿಧಾನ ಪರಿಷತ ಸದಸ್ಯರು ಸೇರಿ ಒಟ್ಟು ಸದಸ್ಯರ ಸಂಖ್ಯೆ 40. ಪಾಲಿಕೆ ಅಧಿಕಾರ ಹಿಡಿಯಲು 21 ಸದಸ್ಯರ ಬೆಂಬಲ ಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆದ್ದ ಅಭ್ಯರ್ಥಿಗಳು 20 ಜನ ಹಾಗೂ ನಾಲ್ವರು ಶಾಸಕರು ಸೇರಿ ಸದಸ್ಯ ಬಲ 25 ತಲುಪಿದೆ. ಈ ಮೂಲಕ ಬಿಜೆಪಿ ನಿಚ್ಚಳ ಬಹುಮತ ಪಡೆದಿದೆ.

    ಕಾಂಗ್ರೆಸ್ ಹಿನ್ನಡೆಗೆ ಕಾರಣಗಳೇನು?
    ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್ ತಿದ್ದುಕೊಳ್ಳಲಿಲ್ಲ. ಪಕ್ಷದೊಳಗಿನ ಭಿನ್ನಮತ ಶಮನಗೊಳಿಸಲು ಹಿರಿಯ ನಾಯಕರು ದಿಟ್ಟ ಹೆಜ್ಜೆ ಇಡಲೇ ಇಲ್ಲ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಾಶಿ ವಿಶ್ವನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್ ಇನ್ನಿತರ ಮುಖಂಡರಿಗೆ ಕಾಂಗ್ರೆಸ್ ಟಿಕೆಟ್ ದೊರಕಲಿಲ್ಲ. ಇದು ಒಟ್ಟಾರೆಯಾಗಿ ಕಾಂಗ್ರೆಸ್ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿಸಿತು. ಇದಲ್ಲದೇ, ಪ್ರಚಾರ ವಿಷಯದಲ್ಲೂ ಕೂಡ ಒಗ್ಗಟ್ಟಾದ ಪ್ರಯತ್ನ ಕಾಂಗ್ರೆಸ್ ನಾಯಕರಲ್ಲಿ ಕಂಡು ಬರಲಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಇಲ್ಲಿಗೆ ಬಂದು ಪ್ರಚಾರ ಮಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

    ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿದ್ದ ಜೆಡಿಎಸ್!
    ಕಳೆದ ಬಾರಿ ಕೇವಲ ಐದು ಸ್ಥಾನದಲ್ಲಿ ಗೆದ್ದಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿ ಅಧಿಕಾರ ಹಿಡಿದಿತ್ತು. ಈ ಬಾರಿಯೂ ಸಹ 8-10 ಸ್ಥಾನ ಗೆದ್ದು ಕಿಂಗ್ ಮೇಕರ್ ಆಗುವ ಉಮೇದಿನಲ್ಲಿ ಜೆಡಿಎಸ್ ನಾಯಕರು ಇದ್ದರು. ಆದರೆ, ನಗರದಲ್ಲಿ ಜೆಡಿಎಸ್ ಒಟ್ಟಾರೆಯಾಗಿ ಶಿಥಿಲಗೊಂಡಿದೆ. ಮೂರು ವಾರ್ಡ್ ಗಳಲ್ಲಿ ಜೆಡಿಎಸ್ ಗೆ ಅಭ್ಯರ್ಥಿಗಳೇ ಸಿಕ್ಕಿಲ್ಲ. ಹಾಲಿ ಮೇಯರ್ ಆಗಿದ್ದ ಜೆಡಿಎಸ್ ನಾಗರಾಜ್ ಕಂಕಾರಿ ಹಾಗೂ ಚೀಟಿ ಮೂಲಕ ಆಯ್ಕೆ ಗೊಂಡ ಸತ್ಯನಾರಾಯಣ ಇಬ್ಬರೇ ಇಬ್ಬರು ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಇನ್ನುಳಿದ ಕಡೆ ತೆನೆಹೊತ್ತ ಮಹಿಳೆ ಹೀನಾಯ ಸೋಲು ಕಂಡಿದ್ದಾಳೆ.

    ಬಸವನಗುಡಿ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಹೆಗ್ಡೆ 2246 ಮತಗಳ ಅಂತರ ದಿಂದ ಗೆದ್ದಿದ್ದಾರೆ. ಇದು ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ದೊರಕಿರುವ ಅತ್ಯಧಿಕ ಅಂತರ. ಮೆಲ್ಲೇಶ್ವರ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಲ್ಲಾ ಬಜರಂಗದಳ ಸಂಚಾಲಕ ದೀನದಯಾಳು ಕಾಂಗ್ರೆಸ ಅಭ್ಯರ್ಥಿ ಎದುರು ಸೋತಿದ್ದಾರೆ.

    ಬಿಜೆಪಿ ಗೆದ್ದಿದ್ದು ಹೇಗೆ?
    ಮುಖ್ಯವಾಗಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರಿಗೆ ಒಂದು ಲಕ್ಷಕ್ಕೂ ಅಧಿಕ ಮತಗಳು ದೊರಕಿದ್ದವು. ಇದೇ ಹವಾ ಪಾಲಿಕೆ ಚುನಾವಣೆಯಲ್ಲಿ ಪುನಾರವರ್ತನೆ ಆಗಿದೆ. ಬಿಜೆಪಿಯಲ್ಲಿ ಅತೀ ಹೆಚ್ಚು ಬಂಡಾಯ ಅಭ್ಯರ್ಥಿಗಳೂ ಇದ್ದರು. ಅವರನ್ನು ಮನವೊಲಿಸಿ ಕಣದಿಂದ ನಿವೃತ್ತಿಗೊಳಿಸುವಲ್ಲಿ ಹಿರಿಯ ನಾಯಕರು ಸಫಲರಾಗಿದ್ದರು. ಆದರೂ, ಕಣದಲ್ಲಿ ಇದ್ದ ಬಿಜೆಪಿ ಅಭ್ಯರ್ಥಿಗಳೂ ಗೆಲವು ಸಾಧಿಸಿದ್ದಾರೆ. ಬಿಜೆಪಿ- ಕೆಜೆಪಿ ಭಿನ್ನತೆ ಈ ಚುನಾವಣೆಯಲ್ಲಿ ಕಂಡರೂ ಕೂಡ ಅದು ಗೆಲವಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

    ಮುಖ್ಯವಾಗಿ ಬಿಜೆಪಿಗೆ ಬಲ ತಂದು ಕೊಟ್ಟದ್ದು ಅವರ ನಾಯಕರು ಹೇಳುವ ಪ್ರಕಾರ ಹಿಂದುತ್ವದ ಅಂಶ. ಇದರೊಂದಿಗೆ ನಾಯಕರ ಸಂಘಟಿತ ಪ್ರಯತ್ನ. ಶಾಸಕರಾದ ಕೆ.ಎಸ್.ಈಶ್ವರಪ್ಪ, ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಆಯನೂರು ಮಂಜುನಾಥ ವಾರ್ಡ್ ಗಳನ್ನು ಹಂಚಿಕೊಂಡು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದರು. ಇವುಗಳ ಜೊತೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಸಮ್ಮಿಶ್ರ ಸರ್ಕಾರದ ಬಗ್ಗೆ ನಗರದ ಜನತೆಗೆ ಇರುವ ತಿರಸ್ಕಾರ ಮನೋಭಾವ ಕೂಡ ಬಿಜೆಪಿ ಪರವಾಗಿ ಕೆಲಸ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.

    ಇಷ್ಟೇ ಕಾರಣಗಳೇ?
    ಮೊಟ್ಟ ಮೊದಲ ಬಾರಿಗೆ ನಡೆದ ಮಹಾನಗರ ಪಾಲಿಕೆ ಚುನಾವಣೆ ಹಲವು ಅಂಶಗಳಿಂದ ಗಮನ ಸೆಳೆಯಿತು. ಮುಖ್ಯವಾಗಿ ಈ ಬಾರಿ ಪಕ್ಷಾತೀತವಾಗಿ ಮತದಾರರನ್ನು ಕೊಳ್ಳುವ ಪ್ರಯತ್ನಗಳು ನಡೆದವು. ಈ ಕಾರಣದಿಂದ ಮತ ಖರೀದಿ ಬಗ್ಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದರೂ ಯಾವುದೇ ದೂರು ದಾಖಲಾಗಿಲ್ಲ. ಪಕ್ಷಗಳ ತತ್ವ ಸಿದ್ಧಾಂತದ ಜೊತೆ ಹಣವೂ ಈ ಭಾರಿಯ ಚುನಾವಣೆಯಲ್ಲಿ ಪ್ರಾಮುಖ್ಯಗಳಿಸಿತು. ಹಣವಿಲ್ಲದೆ ಚುನಾವಣೆ ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಮೊಗ್ಗ ಕಾಂಗ್ರೆಸ್ ಕಚೇರಿಗೆ ಕಾರ್ಯಕರ್ತರಿಂದಲೇ ಕಲ್ಲು ತೂರಾಟ

    ಶಿವಮೊಗ್ಗ ಕಾಂಗ್ರೆಸ್ ಕಚೇರಿಗೆ ಕಾರ್ಯಕರ್ತರಿಂದಲೇ ಕಲ್ಲು ತೂರಾಟ

    ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಕಾಂಗ್ರೆಸ್ ಟಿಕೆಟ್ ಗಾಗಿ ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕೆಲ ಕಾರ್ಯಕರ್ತರು ಕಚೇರಿಗೆ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಗನಾಥ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಶಿ ವಿಶ್ವನಾಥ ಬೆಂಬಲಿಗರಿಂದ ಪ್ರತಿಭಟನೆ ನಡೆಸಲಾಗಿದ್ದು, ಈ ವೇಳೆ ಪ್ರತಿಭಟನಕಾರರು ಟಯರ್‍ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾರ್ಯಕರ್ತರು ಕಲ್ಲು ತೂರಾಟ ನಡೆಸುತ್ತಿದಂತೆ ಎಚ್ಚೆತ್ತ ಪೊಲೀಸರು ಇಬ್ಬರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕೆಲ ಸಮಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ, ಎಂಎಲ್‍ಸಿ ಪ್ರಸನ್ನ ಕುಮಾರ್, ಮಾಜಿ ಶಾಸಕ ಪ್ರಸನ್ನ ಕುಮಾರ್ ವಿರುದ್ಧ ಪ್ರತಿಭಟನಕಾರರು ಆಕ್ರೋಶ ಹೊರ ಹಾಕಿದ್ದಾರೆ.

    ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿದ್ದು, ಆದರೆ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಇದುವರೆಗೂ ಅಭ್ಯರ್ಥಿ ಘೋಷಣೆಯಾಗಿಲ್ಲ. ಸದ್ಯ ಪಾಲಿಕೆ ಟಿಕೆಟ್ ಪಡೆಯಲು ಸ್ಥಳೀಯ ಮುಖಂಡರ ಬೆಂಬಲಿಗರಿಂದ ಒತ್ತಡ ಹೆಚ್ಚಾಗಿದ್ದು, ಪಕ್ಷದ ಅಭ್ಯರ್ಥಿಯ ಕುರಿತು ಅಧಿಕೃತ ಪ್ರಕಟಣೆ ಹೊರಬಾರದ ಕಾರಣ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದ ಅಭ್ಯರ್ಥಿಗಳು ಪ್ರತಿಭಟನೆಯ ಮೊರೆ ಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾಲಿಕೆ ಅಧಿಕಾರಿಗಳ ವೇಷದಲ್ಲಿ ಬಂದು 280 ಗ್ರಾಂ ಚಿನ್ನಾಭರಣ, 8 ಸಾವಿರ ನಗದು ಕದ್ದು ಎಸ್ಕೇಪ್!

    ಪಾಲಿಕೆ ಅಧಿಕಾರಿಗಳ ವೇಷದಲ್ಲಿ ಬಂದು 280 ಗ್ರಾಂ ಚಿನ್ನಾಭರಣ, 8 ಸಾವಿರ ನಗದು ಕದ್ದು ಎಸ್ಕೇಪ್!

    ಮೈಸೂರ: ಮಹಾನಗರ ಪಾಲಿಕೆಯ ಅಧಿಕಾರಿಗಳ ವೇಷದಲ್ಲಿ ಬಂದು ಮನೆಗಳ್ಳತನ ಮಾಡಿದ ಘಟನೆ ಮೈಸೂರಿನ ಕುವೆಂಪು ನಗರದಲ್ಲಿ ನಡೆದಿದೆ.

    ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಬಂದ ಇಬ್ಬರು ಖದೀಮರು ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಾರೆ. ಲೀಲಾದೇವಿ ಎಂಬವರಿಗೆ ಸೇರಿದ ಮನೆಯಲ್ಲಿ ಚಿನ್ನದ ಓಲೆ, ಸರ ಹಾಗೂ ಉಂಗುರ ಸೇರದಂತೆ 280 ಗ್ರಾಂ ಚಿನ್ನಾಭರಣ ಹಾಗೂ 8 ಸಾವಿರ ರೂಪಾಯಿ ನಗದನ್ನು ಕದ್ದು ಪರಾರಿಯಾಗಿದ್ದಾರೆ.

    ನಾವು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳೆಂದು ಹೇಳಿಕೊಂಡು ಮನೆಗೆ ಬಂದ ಕಳ್ಳರು ಮನೆ ಅಳತೆ ಮಾಡಿ ಆಸ್ತಿ ಕಾರ್ಡ್ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಲೀಲಾದೇವಿಯವರನ್ನು ನಂಬಿಸಿ ಹಣ, ಒಡವೆ ಕದ್ದು ಪರಾರಿಯಾಗಿದ್ದಾರೆ.

    ಈ ಕುರಿತಂತೆ ಮನೆಯ ಮಾಲೀಕರಾದ ಲೀಲಾದೇವಿ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • 2 ವರ್ಷದ ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ

    2 ವರ್ಷದ ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ

    ವಿಜಯಪುರ: ಬಹಿರ್ದೆಸೆಗೆ ಹೋಗಿದ್ದ ಎರಡು ವರ್ಷದ ಮಗು ಮೇಲೆ ಹುಚ್ಚು ನಾಯಿಯೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

    ನಗರದ ಅಂಬೇಡ್ಕರ್ ನಗರದ ನಿವಾಸಿ ಕರೀಷ್ಮಾ ಎಂಬ ಬಾಲಕಿ ಹುಚ್ಚು ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿ. ಕರೀಷ್ಮಾ ಮನೆಯಿಂದ ಬಹಿರ್ದೆಸೆಗೆಂದು ಬಂದಿದ್ದಾಳೆ. ಈ ಸಂದರ್ಭದಲ್ಲಿ ಬಾಲಕಿ ಮೇಲೆ ಹುಚ್ಚು ನಾಯಿ ಎರಗಿ ಕೈ ಕಾಲು, ಹೊಟ್ಟೆ ಭಾಗ ಸೇರಿದಂತೆ ದೇಹದ ಹಲವು ಭಾಗಗಳಿಗೆ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಸ್ಥಳದಲ್ಲಿದ್ದ ಕೆಲವರು ಬಾಲಕಿಯ ಸಹಾಯಕ್ಕೆ ಬಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಅಂಬೇಡ್ಕರ್ ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ದಾಳಿಗೆ ನಗರದ ನಿವಾಸಿಗರು ಬೇಸತ್ತಿದ್ದಾರೆ. ಅಲ್ಲದೇ ಈಗಾಗಲೇ ಹುಚ್ಚು ನಾಯಿ ದಾಳಿಯಿಂದ ನಗರದ ನಾಲ್ಕು ಜನ ಗಾಯಗೊಂಡಿದ್ದಾರೆ. ಪದೇ ಪದೇ ನಾಯಿ ದಾಳಿ ಆಗುತ್ತಿರುವುದರ ಬಗ್ಗೆ ಮಹಾನಗರ ಪಾಲಿಕೆಗೆ ದೂರು ನೀಡಿದ್ದೇವೆ. ಆದರೆ ಪಾಲಿಕೆ ಅಧಿಕಾರಿಗಳು ಮಾತ್ರ ನಾಯಿಗಳ ದಾಳಿ ತಡೆಯುವಲ್ಲಿ ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗರು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.