Tag: Citizenship

  • ನಾಗರಿಕತ್ವ ಕೊಡ್ತಿವಿ ಎಂದು ಮನೆಗೆ ಪೆಟ್ರೋಲ್ ಬಾಂಬ್ ಎಸೆದ್ರು- ಯೋಧನ ಕುಟುಂಬದ ಕಣ್ಣೀರು

    ನಾಗರಿಕತ್ವ ಕೊಡ್ತಿವಿ ಎಂದು ಮನೆಗೆ ಪೆಟ್ರೋಲ್ ಬಾಂಬ್ ಎಸೆದ್ರು- ಯೋಧನ ಕುಟುಂಬದ ಕಣ್ಣೀರು

    ನವದೆಹಲಿ: ಗಡಿ ಕಾಯುವ ಸೈನಿಕನ ಮನೆಯೂ ಬಿಡದೇ ದುಷ್ಕರ್ಮಿಗಳು ಬೆಂಕಿ ಹೊತ್ತಿಸಿದ್ದಾರೆ. ಮಂಗಳವಾರ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಬಿಎಸ್‍ಎಫ್ ಯೋಧ ಮಹಮ್ಮದ್ ಅನೀಸ್ ನಿವಾಸಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿದ್ದರು. ಕಜೋರಿ ಖಾಸ್‍ನಲ್ಲಿರುವ ಅನೀಸ್ ಮನೆಗೆ ಬೆಂಕಿ ಹಾಕಿದ್ದು ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.

    ಮಹಮ್ಮದ್ ಅನೀಸ್ ಒಡಿಶಾದಲ್ಲಿ ಸದ್ಯ ಕರ್ತವ್ಯ ನಿರ್ವಹಿಸಿದ್ದು, ಅನೀಸ್ ಪೋಷಕರು ಕಜೋರಿ ಖಾಸ್‍ನ ಗಲ್ಲಿ ನಂಬರ್ ಐದರಲ್ಲಿ ವಾಸವಾಗಿದ್ದರು. ಚಾಂದ್ ಬಾಗ್‍ನಲ್ಲಿ ಆರಂಭವಾಗಿದ್ದ ದುಷ್ಕಕೃತ್ಯಗಳು ಕಜೋರಿ ಖಾಸ್‍ಗೂ ತಲುಪಿತ್ತು. ಗಲ್ಲಿಯಲ್ಲಿದ್ದ ವಾಹನಗಳಿಗೆ ಮೊದಲು ಬೆಂಕಿ ಹೊತ್ತಿಸಿದ್ದ ದುಷ್ಕರ್ಮಿಗಳು ಬಳಿಕ ಮನೆಗಳಿಗೆ ಪೆಟ್ರೋಲ್ ಬಾಂಬ್‍ಗಳನ್ನು ಎಸೆದಿದ್ದರು. ಘಟನೆಯಲ್ಲಿ ಯೋಧ ಅನೀಸ್ ಅವರ ಮನೆಯೂ ಸುಟ್ಟು ಭಷ್ಮವಾಗಿದೆ.

    ಘಟನೆ ವೇಳೆ ಮನೆಯಲ್ಲಿ ಅನೀಸ್ ತಂದೆ ತಾಯಿ ಮತ್ತು ಅತ್ತೆ ಇದ್ದರು. ಘೋಷಣೆಗಳನ್ನು ಕೂಗುತ್ತಾ ಬರುತ್ತಿದ್ದ ಗುಂಪುಗಳಿಗೆ ಮನೆಯ ಕಿಟಕಿಯಿಂದಲೆ ಅನೀಸ್ ಅತ್ತೆ ಕೈ ಮುಗಿದು ಬೇಡಿಕೊಂಡಿದ್ದರು. ಮನೆಗೆ ಬೆಂಕಿ ಇಡದಂತೆ ಮನವಿ ಮಾಡಿಕೊಂಡಿದ್ದು. ಆದರೆ ಉದ್ರಿಕ್ತ ಗುಂಪು ಇವರ ಮಾತುಗಳನ್ನು ಕೇಳಿಸಿಕೊಳ್ಳದೇ ಇಡೀ ಗಲ್ಲಿಯಲ್ಲಿರುವ ಮನೆ ಮತ್ತು ವಾಹನಗಳಿಗೆ ಬೆಂಕಿ ಇಟ್ಟಿತ್ತು.

    ಗ್ರೌಂಡ್ ರಿಪೋರ್ಟ್ ನಡೆಸುತ್ತಿರುವ ಪಬ್ಲಿಕ್ ಟಿವಿ ಜೊತೆಗೆ ಮಾತಮಾಡಿದ ಅನೀಸ್ ಅತ್ತೆ ಮೆಹೆರೋಮ್, ನಾಗರಿಕತ ಕೊಡುತ್ತೇವೆ ಪಾಕ್ ನಾಕರಿಕತ ಎಂದು ಪೆಟ್ರೋಲ್ ಬಾಂಬ್ ಎಸೆದರು ಎಂದು ಹೇಳಿಕೊಂಡರು. ಈ ಪ್ರದೇಶದಲ್ಲಿ ಹಿಂದೂ ಮುಸ್ಲಿಂ ನಾವೆಲ್ಲ ಚೆನ್ನಾಗಿದ್ದೇವೆ ಅಂತ ಉದ್ರಿಕ್ತ ಗುಂಪುಗಳಿಗೆ ಬೇಡಿಕೊಂಡರು ಬಿಡದೆ ಬೆಂಕಿ ಇಟ್ಟರು ಎಂದು ತಮ್ಮ ಸಂಕಟ ಹಂಚಿಕೊಂಡರು. ಹೀಗೆ ಸುಡುವ ಬದಲು ದೊಡ್ಡ ಬಾಂಬ್ ಹಾಕಿ ಒಮ್ಮೆಲೆ ಸುಟ್ಟು ಬಿಡಿ. ಈ ರೀತಿ ಸುಟ್ಟ ಪರಿಸ್ಥಿತಿ ನೋಡುಲು ನಮ್ಮಗೆ ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು. ಅಳಿಯ ದೇಶದ ಗಡಿ ಕಾಯುತ್ತಾನೆ ಅವರ ಮನೆಗೆ ರಕ್ಷಣೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಅನೀಸ್ ತಂದೆ ಮುಸ್ತಾಫ್ ರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಗೃಹಿಣಿ. ಅತ್ತೆ ಮೆಹರೋಮ್ ತರಕಾರಿ ವ್ಯಾಪಾರ ಮಾಡಿಕೊಂಡು ಅನೀಸ್ ನಿವಾಸಲ್ಲಿ ವಾಸವಾಗಿದ್ದಾರೆ. ಅನೀಸ್ ಬಿಎಸ್‍ಎಫ್‍ನಲ್ಲಿದ್ದು ಕಾಶ್ಮೀರ, ಪಂಜಾಬ್‍ನಲ್ಲಿ ಸೇವೆ ಸಲ್ಲಿಸಿ ಈಗ ಒಡಿಶಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  • ಪೌರತ್ವ ಗಲಾಟೆ ಬಳಸಿ ಉಗ್ರರ ನೇಮಕಕ್ಕೆ ನಡೆದಿತ್ತು ಫ್ಲಾನ್!

    ಪೌರತ್ವ ಗಲಾಟೆ ಬಳಸಿ ಉಗ್ರರ ನೇಮಕಕ್ಕೆ ನಡೆದಿತ್ತು ಫ್ಲಾನ್!

    ಬೆಂಗಳೂರು: ಸಿಸಿಬಿ ಪೊಲೀಸರಿಂದ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ರೆಡಿಯಾಗಿದ್ದ ಸ್ಕೆಚ್ ಹೊರಗೆಡವಿದ್ದಾರೆ.

    ಪೌರತ್ವ ಕಾಯ್ದೆಯ ಗಲಾಟೆಯನ್ನೇ ಬಳಸಿಕೊಂಡು ಉಗ್ರರ ನೇಮಕ ಮಾಡಲು ಸ್ಕೆಚ್ ರೆಡಿಯಾಗಿದ್ದನ್ನ ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದಾರೆ. ವಿಧ್ವಂಸಕ ಕೃತ್ಯದ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾ ಎಂದು ತಿಳಿದು ಬಂದಿದೆ.

    ಅಲ್ಪ ಸಂಖ್ಯಾತರನ್ನು ಜಿಹಾದ್‍ಗೆ ಸೆಳೆಯಲು ಸ್ಕೆಚ್ ಮಾಡಿದ್ದ ಮೆಹಬೂಬ್ ಪಾಷಾ, ಬೆಂಗಳೂರಿನ ಸದ್ದು ಗುಂಟೆಪಾಳ್ಯದಲ್ಲಿ ವಾಸವಾಗಿದ್ದನು. ಅಲ್ಲದೆ ಬೆಂಗಳೂರು ಜಿಹಾದಿ ಗ್ಯಾಂಗ್‍ನ ಕಮಾಂಡರ್ ಕೂಡ ಆಗಿದ್ದ. ಮೂರು ದಿನಗಳ ಹಿಂದೆ ಸಿಕ್ಕ ಜಿಹಾದಿ ಗ್ಯಾಂಗ್ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ವೇಳೆಯಲ್ಲಿ ಸಿಸಿಬಿಯಿಂದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

    ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಐಸಿಸ್ ನೇಮಕಾತಿಗೆ ಸ್ಕೆಚ್ ಕೂಡ ನಡೆದಿತ್ತು. ಮೆಹಬೂಬ್ ಪಾಷಾ ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿದ್ದನು. ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ಕೊಡಿಸಿದ್ದನು. ಅಲ್ಲದೇ ರಾಜ್ಯದಲ್ಲಿ ಸರಣಿ ವಿಧ್ವಂಸಕ ಕೃತ್ಯ ಮಾಡಲು ಸ್ಕೆಚ್ ಮಾಡಿದ್ದ ಮೆಹಬೂಬ್ ಪಾಷಾ, ತನ್ನ ಸಹಚರರ ಬಂಧನದ ಬಳಿಕ ತಲೆಮರೆಸಿಕೊಂಡಿದ್ದಾನೆ.

    ಮೆಹಬೂಬ್ ಪಾಷಾಗಾಗಿ ಸಿಸಿಬಿ ಪೊಲೀಸರ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ವರ್ಷ ಕರ್ನಾಟಕದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಸ್ಕೆಚ್ ಮಾಡಿದ್ದ ಜಿಹಾದಿ ಗ್ಯಾಂಗ್ ಹೆಡೆ ಮುರಿಕಟ್ಟಿ ಮುಂದಾಗಬಹುದಾದ ಬಹುದೊಡ್ಡ ಅಪಾಯ ತಪ್ಪಿಸಿದ್ದಾರೆ.

  • ಸಿಎಎ ರದ್ದುಗೊಳಿಸಿ : ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್

    ಸಿಎಎ ರದ್ದುಗೊಳಿಸಿ : ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್

    ತಿರುವನಂತಪುರಂ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರದ್ದುಗೊಳಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ.

    ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಎಸ್‍ಸಿ ಮತ್ತು ಎಸ್‍ಟಿಗಳಿಗೆ ಮೀಸಲಾತಿಯನ್ನು ಮತ್ತೊಂದು ದಶಕಗಳವರೆಗೆ ವಿಸ್ತರಿಸುವುದನ್ನು ಅಂಗೀಕರಿಸಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಇದೇ ವೇಳೆ ಸಿಎಎ ವಿಚಾರದಲ್ಲಿ ಸಾರ್ವಜನಿಕರಲ್ಲಿ ವ್ಯಾಪಕವಾದ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಸಿಎಎ ವಿರುದ್ಧದ ನಿರ್ಣಯವನ್ನು ಸಹ ಕೈಗೊಳ್ಳಲಾಗಿದೆ.

    ಸಿಎಎ ವಿರುದ್ಧ ನಿರ್ಣಯವನ್ನು ಮಂಡಿಸುವಾಗ ಸಿಎಂ ಪಿಣರಾಯಿ ವಿಜಯನ್ ಸಿಎಎ ದೇಶದ ‘ಜಾತ್ಯಾತೀತ’ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಮತ್ತು ಪೌರತ್ವ ನೀಡುವಲ್ಲಿ ಧರ್ಮ ಆಧಾರಿತ ತಾರತಮ್ಯ ಸರಿಯಲ್ಲ ಈ ಕಾಯ್ದೆಯು ಸಂವಿಧಾನದ ಮೂಲ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಜನರಲ್ಲಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಸಿಎಎಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು ಸಂವಿಧಾನದ ಜಾತ್ಯಾತೀತ ದೃಷ್ಟಿಕೋನವನ್ನು ಎತ್ತಿಹಿಡಿಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೇ ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳು ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಸಿಎಎ ವಿರುದ್ಧ ನಿರ್ಣಯ ಮಂಡಿಸುವ ಸಂಬಂಧ ಬಿಜೆಪಿ ಏಕೈಕ ಸದಸ್ಯ ಓ ರಾಜಗೋಪಾಲ್ ವಿರೋಧ ವ್ಯಕ್ತಪಡಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಸಿಎಎ ಕಾಯ್ದೆಯನ್ನು ಅಂಗೀಕರಿಸಿದ್ದರಿಂದ ಇದು ‘ಕಾನೂನುಬಾಹಿರ’ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಷಯದ ಬಗ್ಗೆ ಚರ್ಚಿಸಲು ಸಿಎಂ ಪಿಣರಾಯಿ ವಿಜಯನ್ ಡಿಸೆಂಬರ್ 29 ರಂದು ಕರೆದ ಸರ್ವಪಕ್ಷ ಸಭೆಯಲ್ಲಿ ವಿಶೇಷ ಅಧಿವೇಶನ ನಡೆಸಿ ಸಿಎಎ ವಿರುದ್ಧ ನಿರ್ಣಯ ಮಂಡಿಸುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎಡ ಸರ್ಕಾರಕ್ಕೆ ಒತ್ತಾಯಿಸಿತ್ತು.

  • ‘ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ’- 16 ವರ್ಷದ ಹಿಂದಿನ ಮನಮನೋಹನ್ ಸಿಂಗ್ ವಿಡಿಯೋ ವೈರಲ್

    ‘ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ’- 16 ವರ್ಷದ ಹಿಂದಿನ ಮನಮನೋಹನ್ ಸಿಂಗ್ ವಿಡಿಯೋ ವೈರಲ್

    ನವದೆಹಲಿ: ಪೌರತ್ವದ ಕಾಯ್ದೆ ಜಾರಿಗೆ ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮಧ್ಯೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಂತೆ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಜೆಪಿ, 2003ರ ಡಿಸೆಂಬರ್ 15 ರಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಮನಮೋಹನ್ ಸಿಂಗ್ ಮಾತನಾಡುತ್ತಾ, ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಕಿರುಕುಳವನ್ನು ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವಲ್ಲಿ ಉದಾರವಾದಿ ಮಾರ್ಗವನ್ನು ಅನುಸರಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈಗ ಪೌರತ್ವ ಕಾಯ್ದೆ ಜಾರಿಗೆ ತರುವ ಮೂಲಕ ಅವರಿಗೆ ನೆರವಾಗುತ್ತಿದ್ದೇವೆ ಎಂದು ಬರೆದುಕೊಂಡಿದೆ.

    ಮಾಜಿ ಪ್ರಧಾನಿ ಹೇಳಿದ್ದೇನು?
    ಮೇಡಂ (ಅಂದಿನ ಸ್ಪೀಕರ್ ನಜ್ಮಾ ಹೆಪ್ತುಲ್ಲಾ), ನಾನು ಪೌರತ್ವ ಕಾಯ್ದೆ ವಿಷಯವಾಗಿ ಮಾತನಾಡಲು ಬಯಸುತ್ತೇನೆ. ನಮ್ಮ ದೇಶ ವಿಭಜನೆಯ ನಂತರ ಬಾಂಗ್ಲಾದೇಶದಂತಹ ದೇಶಗಳಲ್ಲಿನ ಅಲ್ಪಸಂಖ್ಯಾತರು ಕಿರುಕುಳವನ್ನು ಎದುರಿಸಿದ್ದಾರೆ. ಅವರು ನಮ್ಮ ದೇಶದಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಿದ್ದಾರೆ. ಅಂತವರಿಗೆ ಪೌರತ್ವ ನೀಡುವಲ್ಲಿ ದೇಶವು ಉದಾರವಾಗಿರಬೇಕು ಎಂಬುದು ನಮ್ಮ ನೈತಿಕ ಬಾಧ್ಯತೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು.

    ಅಂದಿನ ಉಪ ಪ್ರಧಾನಿ ಮತ್ತು ಗೃಹ ಸಚಿವರಾಗಿದ್ದ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಮನಮೋಹನ್ ಸಿಂಗ್ ಅವರು, ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಭವಿಷ್ಯದ ಕ್ರಮಗಳನ್ನು ರೂಪಿಸುವಲ್ಲಿ ಗೌರವಾನ್ವಿತ ಉಪ ಪ್ರಧಾನಿ ಅವರು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು.

    ಪೌರತ್ವ ಕಾಯ್ದೆ ವಿರುದ್ಧ ಆಕ್ರಮಣಕಾರಿಯಾಗಿ ಪ್ರತಿಭಟಿಸುತ್ತಿರುವ ನಮ್ಮ ತಡೆಯಲು ಬಿಜೆಪಿ ಈ ವಿಡಿಯೋವನ್ನು ಬಳಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಪೌರತ್ವ ಕಾಯ್ದೆಯ ಸಾಂವಿಧಾನಿಕಾ ಮಾನ್ಯತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿವೆ.

    ಪೌರತ್ವ ಮಸೂದೆಯ ಚರ್ಚೆಯ ವೇಳೆ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಕಾಂಗ್ರೆಸ್ ನಾಯಕರೇ ಈ ಮೂರು ದೇಶಗಳ ಅಲ್ಪಸಂಖ್ಯಾತರ ರಕ್ಷಣೆ ಮಾಡಲು ಪೌರತ್ವ ಕಾಯ್ದೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ವೇಳೆ ಮನಮೋಹನ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿ ಇಲ್ಲಿಯವರೆಗಿದ್ದ ಸರ್ಕಾರ ಪೌರತ್ವ ಕಾಯ್ದೆ ತರಲು ಧೈರ್ಯ ತೋರಲಿಲ್ಲ. ಆದರೆ ಈಗ ಮೋದಿ ಸರ್ಕಾರ ಧೈರ್ಯ ಮಾಡಿ ಪೌರತ್ವ ಕಾಯ್ದೆ ಜಾರಿಗೆ ತರುತ್ತಿದೆ. ಕಾಂಗ್ರೆಸ್ ನಾಯಕರ ಆಶಯದಂತೆ ನಾವು ನಡೆದುಕೊಂಡಿದ್ದೇವೆ. ಆದರೆ ಯಾಕೆ ನಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಕಾಂಗ್ರೆಸ್ಸಿನವರು ಏನೇ ಮಾಡಿದರೂ ಅದು ಜಾತ್ಯಾತೀತತೆ ಆಗುತ್ತದೆ. ಆದರೆ ನಾವು ಜಾರಿಗೆ ತಂದರೆ ಕೋಮುವಾದಿಗಳಾಗುತ್ತೇವೆ ಎಂದು ಹೇಳಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

  • ಪೌರತ್ವ ತಿದ್ದುಪಡಿ- ಉಡುಪಿಯ ಮಸೀದಿಗಳಲ್ಲಿ ಸರಣಿ ಪ್ರತಿಭಟನೆ

    ಪೌರತ್ವ ತಿದ್ದುಪಡಿ- ಉಡುಪಿಯ ಮಸೀದಿಗಳಲ್ಲಿ ಸರಣಿ ಪ್ರತಿಭಟನೆ

    ಉಡುಪಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಉಡುಪಿಯ ಹಲವು ಮಸೀದಿಗಳಲ್ಲಿ ಪ್ರತಿಭಟನೆ ನಡೆಯಿತು. ಮಧ್ಯಾಹ್ನದ ಸಾಮೂಹಿಕ ನಮಾಜಿನ ಬಳಿಕ ಮುಸ್ಲಿಮರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರದ ಕ್ರಮವನ್ನು ಖಂಡಿಸಿದರು.

    ಮಸೂದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಉಡುಪಿ ಜಾಮಿಯಾ ಮಸೀದಿ, ದೊಡ್ಡಣಗುಡ್ಡೆ ಮಸೀದಿ, ನೇಜಾರು ಮತ್ತಿತರೆಡೆಗಳಲ್ಲಿ ನಮಾಜಿನ ಬಳಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಮಸೂದೆ ದೇಶದ ಹಿತಾಸಕ್ತಿ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದೇಶದ ಜಾತ್ಯಾತೀತ ಹಂದರವನ್ನು ನಾಶ ಮಾಡುವ ಮಸೂದೆಯನ್ನು ಯಾವುದೇ ಮುಸ್ಲಿಮರೂ ಬೆಂಬಲಿಸುವುದಿಲ್ಲ ಎಂಬ ಧಿಕ್ಕಾರ ಕೇಳಿಬಂತು. ಇದನ್ನೂ ಓದಿ: ರಾಜ್ಯಸಭೆಯಲ್ಲಿಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರ

    ಪ್ರಜೆಗಳನ್ನು ಧರ್ಮ, ನಂಬಿಕೆಗಳ ನೆಲೆಯಲ್ಲಿ ವಿಭಜಿಸುವ ಮಸೂದೆಗೆ ನಮ್ಮ ವಿರೋಧ ಇದೆ. ಇಂದು ಸಾಂಕೇತಿಕ ಪ್ರತಿಭಟನೆಯಷ್ಟೇ ಮಾಡುತ್ತಿದ್ದೇವೆ. ಈ ವಿವಾದಾತ್ಮಕ ಮಸೂದೆ ವಾಪಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ಮುಸ್ಲಿಮರು ಸರ್ಕಾರಕ್ಕೆ ನೀಡಿದರು. ಇದನ್ನೂ ಓದಿ: ನಾಗರಿಕತ್ವ ಮಸೂದೆಗೆ ರಾಷ್ಟ್ರಪತಿ ಸಹಿ, ದೇಶಾದ್ಯಂತ ಜಾರಿ

  • ಭಾರತ ಮುಸ್ಲಿಮರಿಗೆ ಸೂಕ್ತ ಸ್ಥಳವಲ್ಲ- ಮೆಹಬೂಬಾ ಮುಫ್ತಿ ಪುತ್ರಿ

    ಭಾರತ ಮುಸ್ಲಿಮರಿಗೆ ಸೂಕ್ತ ಸ್ಥಳವಲ್ಲ- ಮೆಹಬೂಬಾ ಮುಫ್ತಿ ಪುತ್ರಿ

    ನವದೆಹಲಿ: ನೆರೆಯ ರಾಷ್ಟ್ರಗಳ ಮುಸ್ಲಿಮೇತರರಿಗೆ ಮಾತ್ರ ಪೌರತ್ವ ನೀಡುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪುತ್ರಿ ಸನಾ ಇಲ್ತಿಜಾ ಜವೇದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವಿವಾದಿತ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ. ಇದಕ್ಕೆ ಮೆಹಬೂಬಾ ಮುಫ್ತಿ ಪುತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಯವರ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ಭಾರತ-ಮುಸ್ಲಿಮರಿಗಾಗಿ ಇರುವ ದೇಶವಲ್ಲ ಎಂದು ಬರೆದಿದ್ದಾರೆ.

    ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸುತ್ತಿದ್ದಂತೆ ಈ ಕುರಿತು ಟ್ವೀಟ್ ಮಾಡಲಾಗಿದ್ದು, ಸರ್ಕಾರ ಮುಸ್ಲಿಮರನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಆಗಸ್ಟ್ 5ರಂದು ಮೆಹಬೂಬಾ ಮುಫ್ತಿಯವರನ್ನು ಬಂಧನಕ್ಕೊಳಪಡಿಸಿದಾಗಿನಿಂದ ಸನಾ ಇಲ್ತಿಜಾ ಜವೇದ್ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಹ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸನಾ, ಮುಸ್ಲಿಮರು ಹೆಚ್ಚಿರುವ ದೇಶದಲ್ಲಿ ಅವರು ಎರಡನೇ ದರ್ಜೆಯ ಪ್ರಜೆಗಳಾಗುತ್ತಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಸಂದರ್ಭದಲ್ಲಿ ಬಂಧಿಸಲಾಗಿದ್ದ ಮೆಹಬೂಬಾ ಮುಫ್ತಿ, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಹಾಗೂ ಮಗ ಒಮರ್ ಅಬ್ದುಲ್ಲಾ ಅವರನ್ನು ಇನ್ನೂ ಸಹ ಬಿಡುಗಡೆ ಮಾಡಿಲ್ಲ. ಅಲ್ಲದೆ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಸಹ ಸ್ಪಷ್ಟತೆ ಇಲ್ಲ.

    ಇಂದು ಸಚಿವ ಸಂಪುಟ ಸಭೆಯಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ಥಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಲಾಗಿದೆ.

    ಈ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್, ಜೈನರು, ಬೌದ್ಧರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯ ಕಿರುಕುಳ ಅನುಭವಿಸುತ್ತಿದೆ. ಹೀಗಾಗಿ ಇವರಿಗೆ ಭಾರತದ ಪೌರತ್ವ ನೀಡುವ ಅವಶ್ಯಕತೆ ಇದೆ ಎನ್ನುವುದು ಕೇಂದ್ರದ ವಾದ. ಆದರೆ ಮುಸ್ಲಿಮರನ್ನು ಹೊರಗಡೆ ಇಟ್ಟಿರುವುದು ಸಂವಿಧಾನ ವಿರೋಧಿ ನಡೆ ಎನ್ನುವುದು ವಿಪಕ್ಷಗಳ ಪ್ರತಿವಾದ.

    ಭಾರತದ ಪೌರತ್ವ ಪಡೆಯಬೇಕಾದರೆ 12 ವರ್ಷಕ್ಕಿಂತ ಹೆಚ್ಚು ಕಾಲ ದೇಶದಲ್ಲಿ ನೆಲೆಸಿರಬೇಕು ಎನ್ನುವ ನಿಯಮವನ್ನು 6 ವರ್ಷಕ್ಕೆ ಈ ಮಸೂದೆ ಇಳಿಸಿದೆ. ಸೂಕ್ತ ದಾಖಲೆಯ ಅಗತ್ಯತೆಯೂ ಇಲ್ಲದಿದ್ದರೂ ಕೂಡ ಪೌರತ್ವ ಸಿಗಲಿದೆ.

    2016ರಲ್ಲಿ ಈ ಮಸೂದೆ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಈ ವೇಳೆ ಕೋಲಾಹಲ ನಡೆದು ಜಂಟಿ ಸಂಸದೀಯ ಸಮಿತಿ ಪರಾಮರ್ಶೆಗೆ ಹೋಗಿತ್ತು. ಈ ಸಮಿತಿ ಈ ವರ್ಷದ ಜನವರಿಯಲ್ಲಿ ವರದಿ ನೀಡಿದ ಬಳಿಕ ಮಸೂದೆ ಮಂಡನೆಯಾಗಿತ್ತು. ಲೋಕಸಭೆಯಲ್ಲಿ ಪಾಸ್ ಆದರೂ ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಮಸೂದೆ ಪಾಸ್ ಆಗಿರಲಿಲ್ಲ. ಈ ಸಂದರ್ಭದಲ್ಲಿ 16ನೇ ಲೋಕಸಭೆಯ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಈಗ ತಿದ್ದುಪಡಿ ಮಾಡಿ ಮಂದಿನ ಮಂಗಳವಾರ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗುತ್ತಿದೆ.

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವಷ್ಟೇ ಮಹತ್ವದ ಮಸೂದೆ ಇದಾಗಿದೆ. ಹೀಗಾಗಿ ಎಲ್ಲ ಸಂಸದರು ಸದನದಲ್ಲಿ ಹಾಜರಿರಬೇಕು ಎಂದು ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ.

  • ಪಾಕಿನಿಂದ ವಲಸೆ ಬಂದ 21 ಜನರಿಗೆ ರಾಜಸ್ಥಾನ ಸರ್ಕಾರದಿಂದ ಭಾರತದ ಪೌರತ್ವ

    ಪಾಕಿನಿಂದ ವಲಸೆ ಬಂದ 21 ಜನರಿಗೆ ರಾಜಸ್ಥಾನ ಸರ್ಕಾರದಿಂದ ಭಾರತದ ಪೌರತ್ವ

    ಜೈಪುರ: ಪಾಕಿಸ್ತಾನದಿಂದ ವಲಸೆ ಬಂದು ಸುಮಾರು 19 ವರ್ಷದಿಂದ ಭಾರತದಲ್ಲಿ ವಾಸಿಸುತ್ತಿದ್ದ 21 ಮಂದಿಗೆ ರಾಜಸ್ಥಾನ ಸರ್ಕಾರ ಬುಧವಾರ ಭಾರತೀಯ ಪೌರತ್ವ ನೀಡಿದೆ.

    ಈ ಜನರು ಪಾಕಿಸ್ತಾನದಿಂದ ಸ್ಥಳಾಂತರಗೊಂಡ ನಂತರ ಇಲ್ಲಿ ಹಲವಾರು ವರ್ಷದಿಂದ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಭಾರತೀಯ ಪೌರತ್ವವಿಲ್ಲದ ಕಾರಣ, ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಮತ್ತು ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜೈಪುರದ ಜಿಲ್ಲಾಧಿಕಾರಿ ಜಗ್ರೂಪ್ ಸಿಂಗ್ ಯಾದವ್ ಹೇಳಿದ್ದಾರೆ.

    ಕಳೆದ ಎರಡು ತಿಂಗಳಲ್ಲಿ 35 ಪಾಕ್ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇನ್ನೂ 28 ಪೌರತ್ವದ ಅರ್ಜಿಗಳು ಪರಿಶೀಲನೆ ನಡೆಯುತ್ತಿದೆ. 68 ಪೌರತ್ವದ ಅರ್ಜಿಗಳು ತನಿಖಾ ಹಂತದಲ್ಲಿ ಇದೆ. ಅವರಿಗೂ ಪೌರತ್ವ ನೀಡಲಾಗುವುದು. ಪಾಕ್ ವಲಸಿಗರ ಎಲ್ಲಾ ಪೌರತ್ವದ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಆನ್‍ಲೈನ್ ಪ್ರಕ್ರಿಯೆ ಮೂಲಕ ಅವರಿಗೆ ಪೌರತ್ವದ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

    ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜುಲೈ ತಿಂಗಳಿನಲ್ಲಿ ಒಟ್ಟು 1,310 ವಲಸಿಗರಿಗೆ ರಾಜಸ್ಥಾನ ಸರ್ಕಾರ ಪೌರತ್ವವನ್ನು ನೀಡಿದೆ. ಜೋಧಪುರ್, ಜೈಸಲ್ಮೇರ್ ಮತ್ತು ಜೈಪುರ ಜಿಲ್ಲಾಧಿಕಾರಿಗಳಿಗೆ ಪೌರತ್ವ ಪತ್ರವನ್ನು ನೀಡುವ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.

    ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಹಿಂದೂಗಳು, ಸಿಖ್ಖ, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ಸಮುದಾಯದ ವಲಸಿಗರಿಗೆ ಸೂಕ್ತ ತನಿಖೆ ನಂತರ ಭಾರತೀಯ ಪೌರತ್ವ ನೀಡಲು ರಾಜಸ್ಥಾನದ ಜೋಧ್ ಪುರ, ಜೈಸಲ್ಮೇರ್ ಮತ್ತು ಜೈಪುರದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.

  • ರಾಹುಲ್ ಗಾಂಧಿ ‘ಪೌರತ್ವ ವಿವಾದ’ – ವಿವರಣೆ ಕೇಳಿ ಗೃಹ ಇಲಾಖೆಯಿಂದ ನೋಟಿಸ್

    ರಾಹುಲ್ ಗಾಂಧಿ ‘ಪೌರತ್ವ ವಿವಾದ’ – ವಿವರಣೆ ಕೇಳಿ ಗೃಹ ಇಲಾಖೆಯಿಂದ ನೋಟಿಸ್

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ‘ಪೌರತ್ವ ವಿವಾದ’ಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ರಾಹುಲ್ ಅವರಿಗೆ ನೋಟಿಸ್ ನೀಡಿದ್ದು, 15 ದಿನಗಳ ಒಳಗೆ ಉತ್ತರಿಸಬೇಕೆಂದು ಸೂಚಿಸಿದೆ.

    ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯಣ್ ಸ್ವಾಮಿ ಅವರು ನೀಡಿದ ದೂರಿನ ಅನ್ವಯ ಈ ನೋಟಿಸ್ ಜಾರಿ ಮಾಡಲಾಗಿದ್ದು, ಹಲವು ವರ್ಷಗಳ ಹಿಂದೆಯೇ ರಾಹುಲ್ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು. ಅಲ್ಲದೇ ಸ್ವತಃ ರಾಹುಲ್ ಗಾಂಧಿ ಅವರೇ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದ್ದರು.

    ರಾಹುಲ್ ಗಾಂಧಿ ಅವರು ಇಂಗ್ಲೆಂಡ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಯುಕೆ ಕಂಪನಿಯ ಪ್ರಮಾಣ ಪತ್ರದಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆ. ಭಾರತೀಯರಲ್ಲದವರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶವಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಪರಿಶೀಲನೆ ನಡೆಸಬೇಕು ಎಂದು ದೂರಿನಲ್ಲಿ ಸುಬ್ರಮಣಿಯನ್ ಸ್ವಾಮಿ ಮನವಿ ಮಾಡಿದ್ದಾರೆ.

    ಸುಬ್ರಮಣಿಯನ್ ಸ್ವಾಮಿ ದೂರು ಸ್ವೀಕರಿಸಿರುವ ಗೃಹ ಇಲಾಖೆ, ನೋಟಿಸ್ ನೀಡಿ ‘ಇಂಗ್ಲೆಂಡ್ ನಲ್ಲಿ ನೀವು ಬ್ಯಾಕೋಪ್ಸ್ ಲಿಮಿಟೆಡ್ ಹೆಸರಿನ ಕಂಪನಿಯನ್ನು 2003ರಂದು ನೋಂದಾಯಿಸಿದ್ದೀರಿ. 51 ಸೌತ್ ಗೇಟ್ ಸ್ಟ್ರೀಟ್, ವಿನ್ ಚೆಸ್ಟರ್, ಹಂಪ್ ಶಿರ್ ಎಸ್‍ಒ239 ಇಎಚ್ ವಿಳಾಸದಲ್ಲಿ ಈ ಕಂಪನಿ ಇದೆ. ಮತ್ತು ಈ ಕಂಪನಿ ನಿರ್ದೇಶಕರಲ್ಲಿ ನೀವು ಒಬ್ಬರು ಹಾಗೂ ಕಾರ್ಯದರ್ಶಿಯಾಗಿದ್ದೀರಿ” ಎಂದು ತಿಳಿಸಿದೆ. ಅಲ್ಲದೇ ದೂರಿನಲ್ಲಿ ಹೇಳಿರುವಂತೆ ಕಂಪನಿ ವಾರ್ಷಿಕ ಆದಾಯವನ್ನು 2005 ಅಕ್ಟೋಬರ್ 10 ರಂದು ಮತ್ತು 2006ರ ಅಕ್ಟೋಬರ್ 31ರಂದು ಸಲ್ಲಿಸಲಾಗಿದೆ. ಅಲ್ಲಿ ನಿಮ್ಮ ಜನ್ಮ ದಿನಾಂಕ 1970 ಜೂನ್ 19 ಎಂದು ಹಾಗೂ ನೀವು ಬ್ರಿಟಿಷ್ ನಾಗರಿಕರು ಎಂದು ಘೋಷಿಸಿದ್ದಿರಿ. 2009ರ ಫೆಬ್ರವರಿ 17 ರಂದು ಕಂಪನಿ ವಿಸರ್ಜಿಸುವ ಅರ್ಜಿಯಲ್ಲೂ ಬ್ರಿಟಿಷ್ ನಾಗರಿಕ ಎಂದು ಹೇಳಿದ್ದೀರಿ’. ಈ ಬಗ್ಗೆ ವಾಸ್ತವ ಸ್ಥಿತಿಯನ್ನು 15 ದಿನದೊಳಗೆ ತಿಳಿಸುವಂತೆ ವಿವರಣೆ ಕೇಳಿದೆ.

    ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಸುದ್ದಿಗೋಷ್ಠಿ ನಡೆಸಿ ರಾಹುಲ್ ಬ್ರಿಟಿಷ್ ಪ್ರಜೆಯೇ? ಬ್ರಿಟಿಷ್ ಕಂಪನಿಯೊಂದರ ದಾಖಲೆಗಳಲ್ಲಿ ರಾಹುಲ್ ಬ್ರಿಟಿಷ್ ಪ್ರಜೆ ಎಂದು ಉಲ್ಲೇಖ ಆಗಿರುವುದು ಅಚ್ಚರಿ ತಂದಿದೆ. ಹೀಗಾಗಿ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ.

    ಕೇಂದ್ರ ಸರ್ಕಾರದ ಈ ನೋಟಿಸ್ ಲೋಕಸಭಾ ಚುನಾವಣೆ ಪ್ರಕ್ರಿಯೆ ನಡೆಯುವ ವೇಳೆಯೇ ಜಾರಿಯಾಗಿದ್ದು, ರಾಹುಲ್ ಉತ್ತರ ಪ್ರದೇದ ಅಮೇಥಿ ಹಾಗೂ ಕೇರಳದ ವಯನಾಡು ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧೆ ಮಾಡುತ್ತಿದ್ದಾರೆ.

    ಪೌರತ್ವದ ವಿಚಾರಕ್ಕೆ ಸಂಬಂಧಿದಂತೆ ರಾಹುಲ್ ಗಾಂಧಿ ತಮ್ಮ ಅಫಿಡವಿಟ್ ಸಲ್ಲಿಸುವ ವೇಳೆ ಮಾಹಿತಿಯನ್ನ ಮುಚ್ಚಿಟ್ಟಿದ್ದು, ಅವರ ನಾಮಪತ್ರ ತಿರಸ್ಕರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಅಮೇಠಿಯ ಪಕ್ಷೇತರ ಅಭ್ಯರ್ಥಿಯೊಬ್ಬರು ದೂರು ನೀಡಿದ್ದರು. ರಾಹುಲ್ ಬ್ರಿಟಿಷ್ ಪೌರತ್ವ ಹೊಂದಿರುವುದಿಂದ ಅವರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ಅಮೇಥಿ ಪಕ್ಷೇತರ ಅಭ್ಯರ್ಥಿಯೂ ಕೂಡ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿಗೆ ಚುನಾವಣಾ ಅಧಿಕಾರಿ ಪೌರತ್ವ ಪರಿಶೀಲನೆ ನಮ್ಮ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿ ನಾಮಪತ್ರವನ್ನು ಪುರಸ್ಕರಿಸಿದ್ದರು.

  • ಬಿನ್ ಲಾಡೆನ್ ಪುತ್ರನ ಪೌರತ್ವ ರದ್ದುಗೊಳಿಸಿದ ಸೌದಿ ಅರೇಬಿಯಾ!

    ಬಿನ್ ಲಾಡೆನ್ ಪುತ್ರನ ಪೌರತ್ವ ರದ್ದುಗೊಳಿಸಿದ ಸೌದಿ ಅರೇಬಿಯಾ!

    ರಿಯಾದ್: ಅಲ್-ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ವಿರುದ್ಧ ಅಮೆರಿಕ ನಿಂತಿರುವ ಬೆನ್ನೆಲ್ಲೇ ಸೌದಿ ಅರೇಬಿಯಾ ಸರ್ಕಾರ ಕೂಡ ಆತನ ಸೌದಿ ಪೌರತ್ವವನ್ನು ರದ್ದುಗೊಳಿಸಿದೆ.

    ಭಯೋತ್ಪಾದನೆಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದೆಡೆ ಅಮೆರಿಕ ಸರ್ಕಾರ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‍ನನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದೆ. ಇನ್ನೊಂದೆಡೆ ಸೌದಿ ಸರ್ಕಾರ ಹಮ್ಜಾ ಬಿನ್ ಲಾಡೆನ್ ಹೊಂದಿದ್ದ ಸೌದಿ ಪೌರತ್ವವನ್ನು ರದ್ದುಗೊಳಿಸುವ ಮೂಲಕ ಭಯೋತ್ಪಾದನೆಯನ್ನು ಹೊಡಿದೊಡಿಸಲು ತೀರ್ಮಾನಿಸಿದೆ.

    ಈ ಹಿಂದೆ, ಅಮೆರಿಕ ಪಾಕ್‍ನಲ್ಲಿ ಕಾರ್ಯಾಚರಣೆ ನಡೆಸಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್‍ನನ್ನು ಹೊಸಕಿ ಹಾಕಿತ್ತು. ಇದೀಗ ಅವನ ಪುತ್ರ ಹಮ್ಜಾ ಬಿನ್ ಲಾಡೆನ್ ಮೇಲೆಯೂ ಅಮೆರಿಕ ಕಣ್ಣು ಹಾಕಿದೆ. ಹೌದು ಶತಾಯಗತಾಯ ಲಾಡೆನ್ ಸಂತತಿಯನ್ನು ನಿರ್ನಾಮಗೊಳಿಸಬೇಕು, ಆಗ ಭಯೋತ್ಪಾದನೆ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಅಮೆರಿಕ ಮನಸ್ಸು ಮಾಡಿದ್ದು, ಆತನ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದೆ.

    ಈಗ ಇದೇ ದಾರಿಯಲ್ಲಿ ಸೌದಿ ಕೂಡ ಕಾಲಿಟ್ಟಿದೆ. ಒಸಾಮ ಬಿನ್ ಲಾಡೆನ್ ನಂತರ ಅಲ್- ಖೈದಾ ನಾಯಕನಾಗಿ ಹಮ್ಜಾ ಬೆಳೆಯುತ್ತಿದ್ದಾನೆ. ಅವನಿಂದ ಹಲವು ರಾಷ್ಟ್ರಗಳಿಗೆ ತೊಂದರೆ ಇದೆ. ಆತ ಹಲವು ಉಗ್ರ ದಾಳಿಯಲ್ಲೂ ಕೂಡ ಭಾಗಿಯಾಗಿದ್ದನು. ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಆತನ ಪೌರತ್ವವನ್ನು ರದ್ದುಮಾಡಿದ್ದು, ಆತ ಇನ್ಮುಂದೆ ಸೌದಿಯಲ್ಲಿ ವಾಸಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 11,400 ಕೋಟಿ ರೂ. ವಂಚಿಸಿದ್ದ ನೀರವ್ ಮೋದಿ ಕುಟುಂಬ ಕೆರಿಬಿಯನ್ ದ್ವೀಪಕ್ಕೆ ಓಡಿದ್ದು ಯಾಕೆ?

    11,400 ಕೋಟಿ ರೂ. ವಂಚಿಸಿದ್ದ ನೀರವ್ ಮೋದಿ ಕುಟುಂಬ ಕೆರಿಬಿಯನ್ ದ್ವೀಪಕ್ಕೆ ಓಡಿದ್ದು ಯಾಕೆ?

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿ ನೀರವ್ ಮೋದಿ ಬಂಧನದ ಭೀತಿಯಿಂದ ಪಾರಾಗಲು ಕೆರಿಬಿಯನ್ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    11,400 ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ವಜ್ರಾಭರಣಗಳ ಉದ್ಯಮಿಯಾಗಿರುವ ನೀರವ್ ಕುಟುಂಬ ಪ್ರಕರಣ ಬೆಳಕಿಗೆ ಬರುವ ಮುನ್ನವೇ ದೇಶ ತೊರೆದು ಅಮೆರಿಕಕ್ಕೆ ಹಾರಿತ್ತು. ಈಗ ಭಾರತದ ವಿದೇಶಾಂಗ ಸಚಿವಾಲಯ ಅವರನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿರುವಾಗ ನೀರವ್ ಮೋದಿ ಕುಟುಂಬ ಸೇಂಟ್ ಕೀಟ್ಸ್ ಮತ್ತು ನೇವಿಸ್ ದ್ವೀಪದಲ್ಲಿ ಆಶ್ರಯ ಪಡೆಯಲು ಮುಂದಾಗಿದೆ.

    ವಿದೇಶಾಂಗ ಸಚಿವಾಲಯ ಶನಿವಾರ ನೀರವ್ ಹಾಗೂ ಅವರ ಕುಟುಂಬ ಸದಸ್ಯರ ಪಾಸ್‍ಪೋರ್ಟ್ ರದ್ದು ಮಾಡಿತ್ತು. ಅಷ್ಟೇ ಅಲ್ಲದೇ ಅಮೆರಿಕದೊಂದಿಗೆ ಭಾರತದ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮಗೊಂಡಿರುವ ಕಾರಣ ಅಮೆರಿಕ ಸರ್ಕಾರ ಯಾವ ಸಮಯದಲ್ಲಿ ಆದರೂ ನಮ್ಮನ್ನು ಭಾರತದ ವಶಕ್ಕೆ ನೀಡಬಹುದು ಎನ್ನುವ ಭೀತಿಯಿಂದ ನೀರವ್ ಕೆರೆಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆಯಲು ಪ್ರಯತ್ನಿಸಿದ್ದಾರೆ.

    ನೀರವ್ ಕುಟುಂಬ ಈಗಾಗಲೇ ಅಮೆರಿಕದ ನ್ಯೂಯಾರ್ಕ್‍ನಿಂದ ಸೇಂಟ್ಸ್ ಕಿಟ್ಸ್ ಮತ್ತು ನೇವಿಸ್ ಐಲ್ಯಾಂಡ್‍ಗೆ ವಾಸಸ್ಥಳ ಬದಲಿಸಿ ಅಲ್ಲಿ ಐಷಾರಾಮಿ ಬಂಗಲೆಯನ್ನೂ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಪೌರತ್ವ ಪಡೆಯುವುದು ಹೇಗೆ?
    ಕೆರಿಬಿಯನ್ ದ್ವೀಪ ರಾಷ್ಟಗಳ ಪೌರತ್ವ ಪಡೆಯುವುದು ಅತ್ಯಂತ ಸರಳ ಪ್ರಕ್ರಿಯೆಯಾಗಿದೆ. ಈ ರಾಷ್ಟ್ರಗಳ ಪೌರತ್ವ ಪಡೆಯಲು ಅಲ್ಲಿನ ಶುಗರ್ ಇಂಡಸ್ಟ್ರಿ ಡೈವರ್ಸಿಫಿಕೇಷನ್ ಫೌಂಡೇಶನ್‍ಗೆ 1.6 ಕೋಟಿ ರೂ. ದೇಣಿಗೆ ಅಥವಾ ಪೂರ್ವ ನಿಗದಿತ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ 2.8 ಕೋಟಿ ರೂ. ಹಣ ಹೂಡಿಕೆ ಮಾಡಿದರೆ ಆ ದೇಶದ ಪೌರತ್ವ ಪಡೆಯಬಹುದು.

    ದ್ವೀಪ ರಾಷ್ಟ್ರದ ಪೌರತ್ವವೇ ಏಕೆ?
    ಭಾರತೀಯ ನಾಗರಿಕರಿಗೆ ಈ ರಾಷ್ಟ್ರದಲ್ಲಿ ಉಳಿದುಕೊಳ್ಳಲು 30 ದಿನಗಳ ವರೆಗೆ ಯಾವುದೇ ಪ್ರವಾಸಿ ವೀಸಾದ ಅಗತ್ಯವಿಲ್ಲ. ಈ ಎಲ್ಲಾ ನಿಯಮಗಳನ್ನು ಚೆನ್ನಾಗಿ ತಿಳಿದಿರುವ ನೀರವ್ ಪ್ರಸ್ತುತ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ ಈ ದ್ವೀಪ ರಾಷ್ಟ್ರ ಕೇವಲ 50 ಸಾವಿರ ಜನಸಂಖ್ಯೆ ಮಾತ್ರ ಹೊಂದಿದ್ದು, ಈ ರಾಷ್ಟ್ರಗಳ ಜೊತೆಗೆ ಭಾರತ ಯಾವುದೇ ಒಪ್ಪಂದ ಇದುವರೆಗೂ ಮಾಡಿಕೊಂಡಿಲ್ಲ. ಈ ಕಾರಣಗಳಿಂದ ಇದು ಸುರಕ್ಷಿತ ಸ್ಥಳವಾಗಿರುವ ಹಿನ್ನೆಲೆಯಲ್ಲಿ ನೀರವ್ ಕುಟುಂಬ ಇಲ್ಲಿಗೆ ವಾಸಸ್ಥಳ ಬದಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ನಿಯಮಗಳು ಏನು ಹೇಳುತ್ತೆ?
    ಕಾಮನ್‍ವೆಲ್ತ್ ಮತ್ತು ಸ್ನೇಹ ರಾಷ್ಟ್ರದ ಭಾಗವಾಗಿ ಸೇಂಟ್ ಕಿಟ್ಸ್ ಮತ್ತು ನೇವಿಸ್ ದ್ವೀಪ ಭಾರತದ ಜತೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲ. ಒಂದು ವೇಳೆ ಈ ದೇಶದ ಪೌರತ್ವ ಪಡೆದರೆ ನೀರವ್ ಅಲ್ಲಿಂದಲೇ ಸಿಂಗಾಪುರ ಮತ್ತು ಹಾಂಕಾಂಗ್‍ನಲ್ಲಿ ವಜ್ರಾಭರಣಗಳ ವಹಿವಾಟನ್ನು ಮತ್ತೆ ಆರಂಭಿಸಬಹುದಾಗಿದೆ. ಅಲ್ಲದೇ ಈ ದ್ವೀಪ ರಾಷ್ಟ್ರಗಳ ಹಕ್ಕನ್ನು ಪಡೆದಿರುವವರನ್ನ ಭಾರತಕ್ಕೆ ಹಸ್ತಾಂತರ ಮಾಡುವ ಹಕ್ಕನ್ನು ಸಿಂಗಾಪುರ ಹಾಗೂ ಹಾಂಕಾಂಗ್ ಹೊಂದಿಲ್ಲ. ಹೀಗಾಗಿ ಈ ದ್ವೀಪ ಸದ್ಯಕ್ಕೆ ಸುರಕ್ಷಿತ ತಾಣವೆನಿಸಿದೆ. ಇದನ್ನೂ ಓದಿ: ನೀರವ್ ಮೋದಿಗೆ ಸೇರಿದ 10,000ಕ್ಕೂ ಹೆಚ್ಚು ವಾಚ್‍ಗಳನ್ನ ಜಪ್ತಿ ಮಾಡಿದ ಇಡಿ

    ಜತಿನ್ ಮೆಹ್ತಾ ವರ್ಶನ್ 2:
    ಎಂಟು ವರ್ಷಗಳ ಹಿಂದೆ ಉದ್ಯಮಿ ಜತಿನ್ ಮೆಹ್ತಾ ಮಾಲೀಕತ್ವದ ವಿನ್‍ಸಮ್ ಡೈಮಂಡ್ಸ್ ಅಂಡ್ ಜ್ಯುವೆಲ್ಲರಿ ಕಂಪನಿ ಎಸ್‍ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾಗೆ ವಂಚನೆ ಮಾಡಿತ್ತು. ಸುಮಾರು 4,686 ಕೋಟಿ ರೂ. ವಂಚಿಸಿದ್ದ ಜತಿನ್ ಮೆಹ್ತಾ 2013 ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದರು. ಅವರು ಸಹ ಸೇಂಟ್ ಕಿಟ್ಸ್ ಮತ್ತು ನೇವಿಸ್ ರಾಷ್ಟ್ರದ ಪೌರತ್ವ ಪಡೆದು ರಕ್ಷಣೆ ಪಡೆದಿದ್ದರು. ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗಳ ಹಸ್ತಾಂತರಕ್ಕೆ ಸತತ ಪ್ರಯತ್ನ ನಡೆಸುತ್ತಿದ್ದರೂ ಇದುವರೆಗೆ ಅವರನ್ನು ಭಾರತದ ವಶಕ್ಕೆ ಪಡೆಯಲು ಸಾಧ್ಯವಾಗಿಲ್ಲ.

    ಸೂರತ್‍ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉದ್ಯಮಿ ಜತಿನ್ ಮೆಹ್ತಾ ಗೆ ಸಂಬಂಧಿಸಿದ ಆಸ್ತಿಯನ್ನು ವಶಕ್ಕೆ ಪಡೆದ ನಂತರ ಕೇವಲ 120 ಕೋಟಿ ರೂ. ಹಣವನ್ನಷ್ಟೇ ಪಡೆಯಲು ಸಾಧ್ಯವಾಯಿತು. ಪ್ರಸ್ತುತ ನೀರವ್ ಮೋದಿ ಸಹ ಇದೇ ಹಾದಿಯನ್ನು ತುಳಿದಿದ್ದು, ಒಂದು ವೇಳೆ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಪೌರತ್ವ ಪಡೆದರೆ ಮತ್ತೆ ಭಾರತಕ್ಕೆ ಕರೆತರುವುದು ಕಷ್ಟ ಸಾಧ್ಯವಾಗಲಿದೆ. ಇದನ್ನೂ ಓದಿ: ನೀರವ್ ಮೋದಿಗೆ ಬೈ ಬೈ ಹೇಳಿದ ಪ್ರಿಯಾಂಕಾ ಚೋಪ್ರಾ