Tag: Citizens

  • ಸಿಯಾಚಿನ್‍ನಲ್ಲಿ ಹಿಮಪಾತ – ನಾಲ್ವರು ಯೋಧರು, ಇಬ್ಬರು ನಾಗರಿಕರು ಬಲಿ

    ಸಿಯಾಚಿನ್‍ನಲ್ಲಿ ಹಿಮಪಾತ – ನಾಲ್ವರು ಯೋಧರು, ಇಬ್ಬರು ನಾಗರಿಕರು ಬಲಿ

    ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಉತ್ತರ ಭಾಗದಲ್ಲಿ ಸಂಭವಿಸಿದ ಹಿಮಪಾತಕ್ಕೆ ನಾಲ್ವರು ಯೋಧರು ಹಾಗೂ ಇಬ್ಬರು ನಾಗರಿಕರು ಬಲಿಯಾಗಿದ್ದಾರೆ.

    ಸಿಯಾಚಿನ್‍ನಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಹಿಮಪಾತದಲ್ಲಿ ಸುಮಾರು 8ಕ್ಕೂ ಹೆಚ್ಚು ಯೋಧರು ಸಿಲುಕಿದ್ದಾರೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದ್ದವು. ಈ ವೇಳೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಹಿಮದಡಿಯಲ್ಲಿ ಸಿಲುಕಿದವರನ್ನು ರಕ್ಷಿಸಿ, ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿತ್ತು.

    ಯೋಧರು ಎಂದಿನಂತೆ ಗಸ್ತಿನಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು, ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಘಟನೆ ನಡೆದಿತ್ತು. ತಕ್ಷಣ ಸೈನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಹಿಮದಡಿ ಸಿಲುಕಿದ ದುರ್ಗ ರೆಜಿಮೆಂಟ್‍ನ 6 ಯೋಧರು ಮತ್ತು ಇಬ್ಬರು ನಾಗರಿಕರನ್ನು ಹೊರ ತೆಗೆದು ಹತ್ತಿರದ ಮಿಲಟರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅದರಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದ ಕಾರಣ ಮೃತಪಟ್ಟಿದ್ದಾರೆ.

    2016ರಲ್ಲೂ ಹೀಗೆಯೇ ಆಗಿತ್ತು!: 2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಅವರು ವೀರ ಮರಣ ಹೊಂದಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    1984 ರಲ್ಲೂ ಇದೇ ರೀತಿ ಹಿಮಪಾತವಾಗಿ ಭಾರತ ಸೇನೆಯ ಸಾವಿರಕ್ಕೂ ಹೆಚ್ಚಿನ ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ 35 ಜನ ಮಿಲಿಟರಿ ಆಫೀಸರ್ ಗಳು ಇದ್ದರು.

  • ಅಕ್ರಮವಾಗಿ ನೆಲೆಸಿದ್ದ 21 ಆಫ್ರಿಕಾ ಪ್ರಜೆಗಳ ಬಂಧನ

    ಅಕ್ರಮವಾಗಿ ನೆಲೆಸಿದ್ದ 21 ಆಫ್ರಿಕಾ ಪ್ರಜೆಗಳ ಬಂಧನ

    ಬೆಂಗಳೂರು: ಆಫ್ರಿಕಾ ಖಂಡದಿಂದ ಬಂದು ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ 21 ಆಫ್ರಿಕಾ ಪ್ರಜೆಗಳನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಪ್ರಜೆಗಳೆಲ್ಲರೂ ವಿದ್ಯಾಭ್ಯಾಸ, ಟೂರಿಸ್ಟ್ ಹಾಗು ಬಿಸಿನೆಸ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು. ಆರೋಪಿಗಳು ವೀಸಾ ಅವಧಿ ಮುಗಿದಿದ್ದರೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಾಡಿಗೆ ಮನೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದರು.

    ಈ ವಿಷಯ ತಿಳಿದು ವಿದೇಶಿ ಪ್ರಜೆಗಳ ಮೇಲೆ ಕಣ್ಣಿಟ್ಟದ್ದ ಪೊಲೀಸರು ಇಂದು ಎಫ್‍ಆರ್‍ಆರ್‍ಒ ಮತ್ತು ಬೆಂಗಳೂರು ಈಶಾನ್ಯ ವಿಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಬಂಧಿತ ವಿದೇಶಿ ಪ್ರಜೆಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.