Tag: cinema

  • ಸತ್ಯದೇವ್ ಐಪಿಎಸ್ ರಿಲೀಸ್: 902 ಸೀಟಿನ ಮಂಗಳೂರು ಥಿಯೇಟರ್‍ನಲ್ಲಿ 16 ಮಂದಿ ಪ್ರೇಕ್ಷಕರು!

    ಸತ್ಯದೇವ್ ಐಪಿಎಸ್ ರಿಲೀಸ್: 902 ಸೀಟಿನ ಮಂಗಳೂರು ಥಿಯೇಟರ್‍ನಲ್ಲಿ 16 ಮಂದಿ ಪ್ರೇಕ್ಷಕರು!

    ಬೆಂಗಳೂರು: ಕರ್ನಾಟಕದಲ್ಲಿ ಡಬ್ಬಿಂಗ್ ಪರ-ವಿರೋಧ ಹೋರಾಟ ಮತ್ತೆ ತೀವ್ರಗೊಂಡಿದ್ದು, ತಮಿಳಿನ ನಟ ಅಜಿತ್ ಅಭಿನಯದ `ಸತ್ಯದೇವ್ ಐಪಿಎಸ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ ಮಂಗಳೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಇಂದು ರಿಲೀಸ್ ಆಗಬೇಕಿದ್ದ ಈ ಸಿನೆಮಾ ಸ್ಯಾಂಡಲ್‍ವುಡ್ ಮಂದಿಯ ಡಬ್ಬಿಂಗ್ ವಿರೋಧಕ್ಕೆ ಕೇವಲ ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಮಂಗಳೂರು ಚಿತ್ರಮಂದಿರಗಳಲ್ಲಿ ಮಾತ್ರ ತೆರೆಕಾಣಲು ಸಿದ್ಧತೆಯಾಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ದಾವಣಗೆರೆ, ಚಿತ್ರದುರ್ಗದಲ್ಲಿ ಸಿನಿಮಾ ಪ್ರದರ್ಶನ ರದ್ದಾಗಿದೆ.

    ಮಂಗಳೂರಿನ ಸುಚಿತ್ರ ಚಿತ್ರಮಂದಿರದಲ್ಲಿ ಚಿತ್ರ ನೋಡಲು ಪ್ರೇಕ್ಷಕರೇ ಇಲ್ಲದಂತಾಗಿದೆ. ಈ ಚಿತ್ರ ಮಂದಿರದಲ್ಲಿ 902 ಸೀಟ್‍ಗಳಿದ್ದು, ಅದರಲ್ಲಿ 16 ಮಂದಿ ಮಾತ್ರ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ. ಒಟ್ಟಿನಲ್ಲಿ ಇದರಿಂದ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಕ್ಕೆ ಪ್ರೇಕ್ಷಕರ ಬೆಂಬಲವೇ ಇಲ್ಲ ಎಂಬಂತಾಗಿದೆ.

    ಹುಬ್ಬಳ್ಳಿಯಲ್ಲಿ ಯಾವುದೇ ಭಾಷೆಯ ಚಿತ್ರ ಬರಲಿ ಜನ ನೋಡ್ತಾರೆ. ಆದ್ರೆ ಸತ್ಯದೇವ್ ಡಬ್ಬಿಂಗ್ ಚಿತ್ರವನ್ನು ಮಾತ್ರ ಯಾರೂ ಕೂಡ ನೋಡಲು ಇಚ್ಚಿಸುತ್ತಿಲ್ಲ. ಕನ್ನಡ ಪರ ಸಂಘಟನೆ ಹಾಗೂ ಫಿಲ್ಮ್ ಛೇಂಬರ್ ಆಫ್ ಕಾಮರ್ಸ್ ಈ ಡಬ್ಬಿಂಗ್ ಚಿತ್ರಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಚಿತ್ರದ ಪೋಸ್ಟರ್‍ಗಳನ್ನು ತೆಗೆದುಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ನಟ ಅಜಿತ್ ಅಭಿನಯದ ಸತ್ಯಜಿತ್ ಐಪಿಎಸ್ ಡಬ್ಬಿಂಗ್ ಸಿನಿಮಾ ಸುಮಾರು 60 ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಡಬ್ಬಿಂಗ್ ವಾಣಿಜ್ಯ ಮಂಡಳಿ ಆಧ್ಯಕ್ಷರಾದ ಕೃಷ್ಣೆಗೌಡರು ಗುರುವಾರ ತಿಳಿಸಿದ್ದರು.

  • ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಮಹೇರ್ಶಲಾ ಆಲಿ

    ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಮಹೇರ್ಶಲಾ ಆಲಿ

    ಲಾಸ್ ಏಂಜಲೀಸ್: ಸಿನಿಮಾ ರಂಗದ ಬಹುದೊಡ್ಡ ಪ್ರಶಸ್ತಿ ಅಂದ್ರೆ ಆಸ್ಕರ್ ಅವಾರ್ಡ್. ಈ ಅವಾರ್ಡ್‍ನ 89ನೇ ಕಾರ್ಯಕ್ರಮ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ನಡೆದಿದ್ದು, ಇದೇ ಮೊದಲ ಬಾರಿಗೆ ಮುಸ್ಲಿಂ ನಟರೊಬ್ಬರಿಗೆ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ.

    ಮಹೇರ್ಶಲಾ ಆಲಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂನ್ ಲೈಟ್ ಚಿತ್ರದಲ್ಲಿನ ನಟನೆಗಾಗಿ ಆಲಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಮುಸ್ಲಿಂ ನಟ ಎಂಬ ಹೆಗ್ಗಳಿಕೆಗೆ ಅಲಿ ಪಾತ್ರರಾಗಿದ್ದಾರೆ.

    ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ `ಮೂನ್ ಲೈಟ್’ ಅತ್ಯತ್ತಮ ಚಿತ್ರ ಪ್ರಶಸ್ತಿ ಪಡೆದಿದೆ. ಅಂತೆಯೇ `ಮ್ಯಾಂಚೆಸ್ಟರ್ ಬೈ ದಿ ಸೀ’ ಚಿತ್ರದ ಅಮೋಘ ಅಭಿನಯಕ್ಕಾಗಿ ನಟ ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ. ಲಾಲಾ ಲ್ಯಾಂಡ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟಿ ಎಮಾ ಸ್ಟೋನ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲಾಲಾ ಲ್ಯಾಂಡ್ ಚಿತ್ರಕ್ಕಾಗಿ ಯುವ ನಿರ್ದೇಶಕ ಡ್ಯಾಮಿಯೆನ್ ಚಾಝೆಲ್ಲೆ ಅತ್ಯತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.

    ಇನ್ನು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಲಿಯಾಸ್ ಪಿಗ್ಗಿ ಚಾಪ್ಸ್ ಕೂಡ ತನ್ನ ವಿಭಿನ್ನ ಗೆಟಪ್‍ನಿಂದ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ವೇದಿಕೆಗೆ ನಮಸ್ತೆ ಎಂದು ಹೇಳಿದ ಪ್ರಿಯಾಂಕಾ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದ ಫೋಟೋಗಳನ್ನ ಪ್ರಿಯಾಂಕಾ ಚೋಪ್ರಾ ತನ್ನ ಇನ್‍ಸ್ಟ್ರಾಗ್ರಾಮ್ ಅಕೌಂಟ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

     

  • 3 ಈಡಿಯಟ್ಸ್ ಚಿತ್ರ ಕನ್ನಡದಲ್ಲಿ ರೀಮೇಕ್- ಆಮೀರ್ ಪಾತ್ರಕ್ಕೆ ಈ ನಟ ಬಣ್ಣ ಹಚ್ಚಲಿದ್ದಾರೆ

    3 ಈಡಿಯಟ್ಸ್ ಚಿತ್ರ ಕನ್ನಡದಲ್ಲಿ ರೀಮೇಕ್- ಆಮೀರ್ ಪಾತ್ರಕ್ಕೆ ಈ ನಟ ಬಣ್ಣ ಹಚ್ಚಲಿದ್ದಾರೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ರಿಮೇಕ್ ಚಿತ್ರಗಳಿಗೇನು ಕಮ್ಮಿಯಿಲ್ಲ. ಯಾವ ಭಾಷೆಯದ್ದೇಯಾಗಲಿ ಸಿನಿಮಾ ಚೆನ್ನಾಗಿದ್ರೆ ಕನ್ನಡದ ಮಂದಿ ರಿಮೇಕ್ ಮಾಡುತ್ತಾರೆ. ಆ ಲಿಸ್ಟ್‍ಗೆ ಈಗ ಬಾಲಿವುಡ್‍ನ ಸೂಪರ್ ಡೂಪರ್ ಹಿಟ್ ಚಿತ್ರ ಸಿರ್ಪಡೆಯಾಗಲಿದೆ.

    2009ರಲ್ಲಿ ಬಿ-ಟೌನ್ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದ 3 ಈಡಿಯೆಟ್ಸ್ ಸಿನಿಮಾ ಈಗ ಕನ್ನಡಕ್ಕೆ ರಿಮೇಕ್ ಆಗುತ್ತಿದೆ. ರಾಜಕುಮಾರ್ ಇರಾನಿ ನಿರ್ದೇಶನದ ತ್ರೀ ಈಡಿಯೆಟ್ಸ್ ಸಿನಿಮಾ ಈಗ ಕನ್ನಡಕ್ಕೆ ರಿಮೇಕ್ ಆಗಲಿದೆಯಂತೆ. ಸ್ಯಾಂಡಲ್‍ವುಡ್‍ನ ಸೂಪರ್ ಸ್ಟಾರ್ ಉಪೇಂದ್ರ ಅಮೀರ್ ಖಾನ್ ಮಾಡಿದ ರಾಂಚು ಪಾತ್ರವನ್ನ ಮಾಡಲಿದ್ದರಂತೆ. ಓ ಮೈ ಗಾಡ್ ಚಿತ್ರದ ರಿಮೇಕ್ ಮುಕುಂದ ಮುರಾರಿ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಕೊಂಡ ಉಪ್ಪಿ ಈಗ ಅಮಿರ್ ಖಾನ್ ನಟಿಸಿದ ಪಾತ್ರವನ್ನ ಹೇಗೆ ನಿಭಾಯಿಸುವರು ಎಂದು ಕಾದುನೋಡಬೇಕು.

    ತ್ರೀ ಈಡಿಯೆಟ್ಸ್ ಸಿನಿಮಾ ಈ ಮೊದಲು ತಮಿಳಿನಲ್ಲಿಯು 2012ರಲ್ಲಿ ನನ್ ಬನ್ ಹೆಸರಿನಲ್ಲಿ ರಿಮೇಕ್ ಆಗಿತ್ತು. ಕಾಲಿವುಡ್‍ನ ಖ್ಯಾತ ನಿರ್ದೇಶಕ ಎಸ್.ಶಂಕರ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿತ್ತು. ಇಳಯದಳಪತಿ ವಿಜಯ್ ಹಾಗೂ ಇಲಿಯಾನ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಕೊಂಡಿದ್ರು. ಆದ್ರೆ ಈ ಸಿನಿಮಾ ಕಾಲಿವುಡ್ ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿತ್ತು.

    ಸ್ಯಾಂಡಲ್‍ವುಡ್‍ನಲ್ಲಿ ಗಜ, ರಾಮ್, ಹುಡುಗರು, ಪವರ್, ಬೃಂದವನಗಳಂತ ರಿಮೇಕ್ ಚಿತ್ರಗಳನ್ನ ನಿರ್ದೇಶಿಸಿ ಸೈ ಅನ್ನಿಸಿಕೊಂಡಿರು ಕೆ.ಮಾದೇಶ್ ಪರಿಕಲ್ಪನೆಯಲ್ಲಿ ಕನ್ನಡದ ತ್ರೀ ಈಡಿಯೆಟ್ಸ್ ಬರಲಿದೆ.

    ಉಪ್ರೇಂದ್ರಗೆ ಜೋಡಿಯಾಗಿ ರಚಿತಾ: ರಿಯಲ್ ಸ್ಟಾರ್ ಉಪೇಂದ್ರ ಜೊತೆ ಡ್ಯೂಯೆಟ್ ಹಾಡಲು ರಚಿತಾ ರಾಮ್ ಫಿಕ್ಸ್ ಆಗಿದ್ದಾರೆ. ಕೆಲದಿನಗಳ ಹಿಂದೆ ಕೆ.ಮಾದೇಶ್ ನಿರ್ದೇಶನದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ನಟನೆ ಸಿನಿಮಾವೊಂದರ ಮುಹೂರ್ತವಾಗಿತ್ತು. ಈಗ ಅದರ ಬೆನ್ನಲೆ 3 ಈಡಿಯೆಟ್ಸ್ ಸಿನಿಮಾವನ್ನ ಕೈಗೆತ್ತಿಕೊಂಡಿದ್ದಾರೆ ಕೆ.ಮಾದೇಶ್.

    ಕನ್ನಡದ ಈ 3 ಈಡಿಯೆಟ್ಸ್ ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಜೊತೆಗೆ ಮಾಧವನ್ ಹಾಗೂ ಬೊಮನ್ ಇರಾನಿ ಪಾತ್ರವನ್ನ ಕನ್ನಡದಲ್ಲಿ ಯಾರ ಕೈಯಲ್ಲಿ ಮಾಡಿಸೋದು ಎಂಬುದಕ್ಕೆ ಚಿತ್ರತಂಡ ತಲೆಕೆಡಿಸಿಕೊಂಡಿದೆ. ಸಾಧುಕೋಕಿಲಾ ಈ ಚಿತ್ರಕ್ಕೆ ಸಂಗೀತ ಸಂಯೊಜನೆ ಮಾಡಲಿದ್ದು, ಇದೇ ತಿಂಗಳ 28ಕ್ಕೆ ಕೊಲ್ಲಾಪುರದಲ್ಲಿ ಚಿತ್ರದ ಮುಹೂರ್ತವಾಗಲಿದೆ.

    ಬೇರೆ ಭಾಷೆಯ ಸಿನಿಮಾಗಳನ್ನ ಕನ್ನಡಕ್ಕೆ ರಿಮೇಕ್ ಮಾಡುವುದರಲ್ಲಿ ಸಿದ್ದಹಸ್ತರು ಕೆ.ಮಾದೇಶ್. ಬಾಲಿವುಡ್‍ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದ ತ್ರಿ ಈಡಿಯೆಟ್ಸ್ ಕನ್ನಡದಲ್ಲಿ ಸೂಪರ್‍ಹಿಟ್ ಆಗುತ್ತಾ ಅನ್ನೋದನ್ನ ಕಾದು ನೊಡ್ಬೇಕು.

  • ರಜನಿಯ ಎಂದಿರನ್ 2.0 ಚಿತ್ರಕ್ಕೆ ದಾಖಲೆ ಮೊತ್ತದ ಇನ್ಶುರೆನ್ಸ್- ವಿಮೆಯ ಮೊತ್ತ ಎಷ್ಟು ಗೊತ್ತಾ?

    ರಜನಿಯ ಎಂದಿರನ್ 2.0 ಚಿತ್ರಕ್ಕೆ ದಾಖಲೆ ಮೊತ್ತದ ಇನ್ಶುರೆನ್ಸ್- ವಿಮೆಯ ಮೊತ್ತ ಎಷ್ಟು ಗೊತ್ತಾ?

    ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಎಂದಿರನ್ 2.0 ಚಿತ್ರಕ್ಕೆ 350 ಕೋಟಿ ರೂ. ವಿಮೆ ಮಾಡಿಸಲಾಗಿದ್ದು ಹೊಸ ದಾಖಲೆ ಬರೆದಿದೆ.

    2010ರಲ್ಲಿ ಬಿಡುಗಡೆಗೊಂಡಿದ್ದ ಎಂದಿರನ್ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಭಾರೀ ಮೊತ್ತದ ವಿಮೆ ಹೊಂದಿದ ಭಾರತೀಯ ಚಿತ್ರ ಎನಿಸಿಕೊಂಡಿದೆ. 400 ಕೋಟಿ ರೂ. ಬಜೆಟ್‍ನ ಈ ಚಿತ್ರದ ಚಿತ್ರೀಕರಣ ರದ್ದಾದರೆ, ಚಿತ್ರತಂಡದಲ್ಲಿರುವವರಿಗೆ ಅವಘಢವಾದ್ರೆ, ಚಿತ್ರೀಕರಣಕ್ಕೆ ಬಳಸಲಾಗುವ ಉಪಕರಣಗಳಾದ ಕ್ರೇನ್, ಕ್ಯಾಮೆರಾ, ಫ್ಲಡ್ ಲೈಟ್, ರೆಕಾರ್ಡರ್‍ಗಳಿಗೆ ಹಾನಿಯಾದ್ರೆ ವಿಮೆಯ ಸೌಲಭ್ಯ ಪಡೆಯಬಹುದಾಗಿದೆ.

    ನ್ಯೂ ಇಂಡಿಯಾ ಅಶ್ಯೂರೆನ್ಸ್ ಸೇರಿದಂತೆ 6ಕ್ಕೂ ಹೆಚ್ಚು ಸಂಸ್ಥೆಗಳ ಒಕ್ಕೂಟದಿಂದ ಲೈಕಾ ಪ್ರೊಡಕ್ಷನ್ಸ್ ಈ ವಿಮಾ ಸೌಲಭ್ಯ ಪಡೆದಿದೆ.

    ಈ ಹಿಂದೆ ಬಾಹುಬಲಿ ಚಿತ್ರಕ್ಕೆ 110 ಕೋಟಿ ರೂ. ಇನ್ಶುರೆನ್ಸ್ ಮಾಡಿಸಲಾಗಿತ್ತು. ಶಾರೂಖ್ ಖಾನ್ ಅಭಿನಯದ ರಯೀಸ್ ಚಿತ್ರಕ್ಕೆ 80 ಕೋಟಿ ರೂ., ದಂಗಲ್ ಚಿತ್ರಕ್ಕೆ 62 ಕೋಟಿ ರೂ. ಹಾಗೂ ಉಡ್ತಾ ಪಂಜಾಬ್ ಚಿತ್ರಕ್ಕೆ 35 ಕೋಟಿ ರೂ. ಮೊತ್ತದ ವಿಮೆ ಮಾಡಿಸಲಾಗಿತ್ತು.

    ಎಂದಿರನ್ 2.0 ಚಿತ್ರದಲ್ಲಿ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಇದೇ ವರ್ಷ ಅಕ್ಟೋಬರ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಜಾಕಿ ಖ್ಯಾತಿಯ ನಟಿ ಭಾವನಾ ಕಿಡ್ನ್ಯಾಪ್ – ಕಾರಿನಲ್ಲೇ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳ

    ಜಾಕಿ ಖ್ಯಾತಿಯ ನಟಿ ಭಾವನಾ ಕಿಡ್ನ್ಯಾಪ್ – ಕಾರಿನಲ್ಲೇ ದುಷ್ಕರ್ಮಿಗಳಿಂದ ಲೈಂಗಿಕ ಕಿರುಕುಳ

    ಬೆಂಗಳೂರು: ಖ್ಯಾತ ಬಹುಭಾಷಾ ನಟಿ ಭಾವನಾರನ್ನು ಅಪಹರಿಸಿ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ

    ಕೇರಳದ ಎರ್ನಾಕುಲಂನಲ್ಲಿ ಶೂಟಿಂಗ್ ಮುಗಿಸಿ ರಾತ್ರಿ 1.30ರ ವೇಳೆ ಮನೆಗೆ ಮರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ಅಪರಿಚಿತರು ಭಾವನಾ ಅವರನ್ನ ಅಪಹರಿಸಿದ್ದಾರೆ. ಮಾಜಿ ಕಾರು ಡ್ರೈವರ್‍ನಿಂದಲೇ ಅಪಹರಣ ನಡೆದಿದೆ ಎಂದು ಹೇಳಲಾಗಿದೆ.

    ನಡೆದಿದ್ದೇನು?: ಈ ಹಿಂದೆ ಭಾವನಾ ಕಾರಿನ ಚಾಲಕನಾಗಿದ್ದ ಮಾರ್ಟಿನ್ ಎಂಬಾತ ಐವರು ಸ್ನೇಹಿತರ ಜೊತೆ ಸೇರಿ ತನ್ನನ್ನು ಅಪಹರಿಸಿದ್ದಾಗಿ ಭಾವನಾ ಪೊಲೀಸರಿಗೆ ಕೊಟ್ಟ ದುರಿನಲ್ಲಿ ತಿಳಿಸಿದ್ದಾರೆ. ತ್ರಿಶೂರ್‍ನಿಂದ ಎರ್ನಾಕುಲಂಗೆ ಭಾವನಾ ಬರುತ್ತಿದ್ದ ವೇಳೆ ಅಂಗಮಾಲಿ ಎಂಬಲ್ಲಿ ಟೆಂಪೋ ಟ್ರಾವೆಲರ್‍ನಲ್ಲಿ ಬಂದ ಐವರು, ಭಾವನಾ ಕಾರಿಗೆ ಅಡ್ಡಹಾಕಿ ಕಾರು ನಿಲ್ಲಿಸಿದ್ದಾರೆ. ನಂತರ ಡ್ರೈವರ್‍ನನ್ನು ಹೊರಕ್ಕೆ ಎಳೆದು ಕಾರಿನಲ್ಲಿದ್ದ ಭಾವನಾರನ್ನು ನಗರದಲ್ಲಿ ಸುತ್ತಾಡಿಸಿದ್ದಾರೆ. 1 ಗಂಟೆಗಳ ಕಾಲ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಭಾವನಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕಾಕ್ಕನಾಡ್‍ನಲ್ಲಿ ಭಾವನಾರನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಿರ್ದೇಶಕ ಲಾಲ್‍ಗೆ ಫೋನ್ ಮಾಡಿ ಅವರ ನೆರವಿನಿಂದ ಈಗ ಭಾವನಾ ದೂರು ದಾಖಲಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಭಾವನಾ ಕನ್ನಡದ ಜಾಕಿ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಅಭಿನಯಿಸಿದ್ದಾರೆ. ಅಲ್ಲದೆ ಯಾರೆ ಕೂಗಾಡಲಿ, ಬಚ್ಚನ್, ಮೈತ್ರಿ ಹೀಗೆ ಹಲವಾರು ಕನ್ನಡ ಸಿನಿಮಾದಲ್ಲಿ ಭಾವನಾ ನಟಿಸಿದ್ದಾರೆ.

  • ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಜಯಲಲಿತಾ, ಶಶಿಕಲಾ ಸಂಬಂಧದ ಸಿನಿಮಾ ಮಾಡ್ತಾರಂತೆ ಆರ್‍ಜಿವಿ!

    ಚೆನ್ನೈ: ತಮಿಳುನಾಡಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ದೇಶಾದ್ಯಂತ ಸುದ್ದಿ ಮಾಡ್ತಿದೆ. ಈ ನಡುವೆ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಹೊಸ ಚಿತ್ರ ಮಾಡಲು ಹೊರಟಿದ್ದಾರೆ.

    ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜಯಲಲಿತಾ ಹಾಗೂ ಶಶಿಕಲಾ ಸಂಬಂಧವನ್ನಿಟ್ಟುಕೊಂಡು ರಾಮಗೋಪಾಲ್ ವರ್ಮಾ ಚಿತ್ರ ಮಾಡಲು ರೆಡಿಯಾಗಿದ್ದಾರೆ. ಚಿತ್ರಕ್ಕೆ `ಶಶಿಕಲಾ’ ಅಂತಾ ಟೈಟಲ್ ಇಡಲು ತೀರ್ಮಾನಿಸಲಾಗಿದ್ದು, ಚಿತ್ರ ಸಂಪೂರ್ಣವಾಗಿ ಕಾಲ್ಪನಿಕವಾಗಿದೆಯಂತೆ. ದಿವಂಗತ ಜಯಲಲಿತಾರ ಬಗ್ಗೆ ನನಗೆ ಅಪಾರ ಗೌರವವಿದೆ. ಅದಕ್ಕಿಂತಲೂ ಹೆಚ್ಚಾಗಿ ಶಶಿಕಲಾರ ಪ್ರಾಮಾಣಿಕತೆ ಬಗ್ಗೆ ನನಗೆ ಹೆಚ್ಚು ಗೌರವ ಇದೆ. ಹಾಗಾಗಿ ನಾನು ಚಿತ್ರಕ್ಕೆ ಶಶಿಕಲಾ ಅಂತಾ ಹೆಸರಿಟ್ಟಿದ್ದೇನೆ ಅಂತಾ ರಾಮ್‍ಗೋಪಾಲ್ ವರ್ಮಾ ಹೇಳಿದ್ದಾರೆ.

    ಈ ಚಿತ್ರಕ್ಕೆ ರಾಜಕೀಯದ ಟಚ್ ಇಲ್ಲ. ಶಶಿಕಲಾ ತಮಿಳಿಗರ ಪಾಲಿಗೆ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದಾರೆ. ಹಾಗಾಗಿ ಚಿತ್ರ ರಾಜಕೀಯೇತರವಾಗಿದ್ದು ಕಾಲ್ಪನಿಕ ಕಥೆ ಒಳಗೊಂಡಿದೆ ಅಂತಾ ನಿರ್ಮಾಪಕ ರಾಮ್‍ಗೋಪಾಲ್ ವರ್ಮಾ ಟ್ವಿಟ್ಟರ್‍ನಲ್ಲಿ ಬರೆದುಕೊಂಡಿದ್ದಾರೆ. ಈ ಹಿಂದೆ ಕೂಡ ವರ್ಮಾ ರಕ್ತಚರಿತ, ಕಿಲ್ಲಿಂಗ್ ವೀರಪ್ಪನ್, 26/11ರ ಮುಂಬೈ ದಾಳಿ ಕುರಿತ ಚಿತ್ರ್ರಗಳನ್ನು ಮಾಡಿದ್ದರು.

  • ಬೇಲೂರು ದೇವಸ್ಥಾನದೊಳಗೆ ತೆಲುಗು ದರ್ಬಾರ್- ವಾರದಿಂದ ನಡೀತಿದೆ ಅಲ್ಲು ಅರ್ಜುನ್ ಶೂಟಿಂಗ್

    ಬೇಲೂರು ದೇವಸ್ಥಾನದೊಳಗೆ ತೆಲುಗು ದರ್ಬಾರ್- ವಾರದಿಂದ ನಡೀತಿದೆ ಅಲ್ಲು ಅರ್ಜುನ್ ಶೂಟಿಂಗ್

    ಹಾಸನ: ಬೇಲೂರು ಅಂದ್ರೆ ಥಟ್ಟನೇ ನೆನಪಿಗೆ ಬರೋದು ಶಿಲ್ಪಕಲೆಯೊಂದಿಗೆ ವೈಭವಯುತವಾದ ಚನ್ನಕೇಶವನ ಪ್ರತಿರೂಪ. ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಈ ದೇವಾಲಯ ವಿಶ್ವಪ್ರಸಿದ್ಧ. ಹಲವು ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಸಾಮಾನ್ಯರಿಗೆ ಮೊಬೈಲ್ ಹಾಗೂ ಕ್ಯಾಮೆರಾದಲ್ಲಿ ಚಿತ್ರೀಕರಣ ನಿಷೇಧವಿದೆ. ಚಿತ್ರೀಕರಣಕ್ಕೆ ಅವಕಾಶವಿದ್ದರೂ ಸಹ ಹಲವು ಮಿತಿಗಳಿವೆ. ಆದ್ರೆ ತೆಲುಗು ಚಿತ್ರ ತಂಡವೊಂದಕ್ಕೆ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲಾಗಿದ್ದು ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಜಿಲ್ಲೆಯ ಬೇಲೂರು ಹಳೇಬೀಡು ವಿಶ್ವವಿಖ್ಯಾತ ದೇವಾಲಯಗಳು. ಹೋಯ್ಸಳರ ದೊರೆ ವಿಷ್ಣುವರ್ಧನನ ಕಾಲದಲ್ಲಿ ನಿರ್ಮಾಣವಾಗಿರುವ ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆ ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಇವರಲ್ಲಿ ಸಾಕಷ್ಟು ಮಂದಿ ವಿದೇಶಿಯರೂ ಸೇರಿರುತ್ತಾರೆ. ಸಾಮಾನ್ಯ ಜನರಿಗೆ ಈ ದೇವಾಲಯದಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿಲ್ಲ. ಕೇಂದ್ರ ಸರ್ಕಾರ ಅಧೀನದ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿ ಇದಕ್ಕಿದೆ. ಇಲ್ಲಿ ಯಾವುದೇ ಚಿತ್ರೀಕರಣ ಮಾಡುವುದಾದರೆ ಪ್ರಾಚ್ಯ ವಸ್ತು ಇಲಾಖೆಯಿಂದ ಅನುಮತಿ ಪಡೆಯಬೇಕು. ಜೊತೆಗೆ ಕೆಲವು ನಿಬಂಧನೆಗೆ ಒಳಪಟ್ಟ ಅನುಮತಿ ಮಾತ್ರ ನೀಡಬೇಕು. ಹೀಗಿದ್ದಾಗ ಇಲ್ಲಿ ಕಳೆದ ಮೂರು ದಿನಗಳಿಂದ ತೆಲುಗು ಚಲನಚಿತ್ರವೊಂದರ ಶೂಟಿಂಗ್‍ಗೆ ಅನುಮತಿ ನೀಡಲಾಗಿದೆ. ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ನಾಯಕತ್ವದ ಈ ಚಿತ್ರದ ಚಿತ್ರೀಕರಣ ಇಲ್ಲಿ ನಡೆಯುತ್ತಿದೆ. ಒಟ್ಟು 7 ದಿನಗಳ ಚಿತ್ರೀಕರಣದಲ್ಲಿ ಈಗಾಗಲೇ ಮೂರು ದಿನಗಳ ಚಿತ್ರೀಕರಣ ಮುಗಿದಿದೆ.

    ಕೇವಲ ಚಿತ್ರೀಕರಣಕ್ಕೆ ಅನುಮತಿ ಪಡೆದಿರುವ ಚಿತ್ರತಂಡ, ದೇವಸ್ಥಾನದ ಒಳ ಆವರಣದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿಲ್ಲದಿದ್ದರೂ ಸಹ ಹಲವು ಬದಲಾವಣೆಗಳನ್ನು ಮಾಡಿದೆ. ವಿಷ್ಣುವನ್ನ ಆರಾಧಿಸಲ್ಪಡುವ ದೇವಾಲಯದಲ್ಲಿ ಶಿವಲಿಂಗ ಮೂರ್ತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಇದರಿಂದಾಗಿ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ.

    ದೇವಸ್ಥಾನಕ್ಕೆ ಉಗ್ರರ ಉಪಟಳವೂ ಇದ್ದು ಭದ್ರತೆಯೂ ಸಾಕಷ್ಟಿದೆ. ಜೊತೆಗೆ ಈ ದೇವಸ್ಥಾನ ವಿಶ್ವ ಪ್ರಸಿದ್ದವಾಗಿದ್ದು ಪ್ರತಿದಿನ ವಿದೇಶಿ ಪ್ರವಾಸಿಗರೂ ಸಹ ಇಲ್ಲಿಗೆ ಬರುತ್ತಾರೆ. ಆವರಣದಲ್ಲಿ ಚಿತ್ರೀಕರಣ ನಡೆಯೋದ್ರಿಂದ ಸಂಪೂರ್ಣ ದೇವಾಲಯವನ್ನು ಸುತ್ತು ಹಾಕುವುದು ಸಾಧ್ಯವಿಲ್ಲ. ಇದ್ರಿಂದಾಗಿ ವಿದೇಶಿಯರಿಗೂ ಸಹ ಇಲ್ಲಿ ಕೊಂಚ ನಿರಾಸೆಯಾಗಿದೆ.

    ಕೇಂದ್ರ ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಗಳು ಇವರಿಗೆ ಅನುಮತಿ ನೀಡಿದ್ದರೂ ಸಹ ಯಾವುದೇ ನಿಬಂಧನೆಗಳನ್ನು ತಿಳಿಸಲಿಲ್ಲವೆ? ಅಥವಾ ಯಾರ ಪ್ರಭಾವ ಇಲ್ಲಿ ಕೆಲಸ ಮಾಡಿದೆ ಎನ್ನುವ ಪ್ರಶ್ನೆ ಈಗ ಎದ್ದಿದೆ. ಸಾಮಾನ್ಯ ಜನರಿಗೆ ಒಂದು ಕಾನೂನು, ಉಳಿದವರಿಗೆ ಒಂದು ಕಾನೂನು ಆದ್ರೆ ಹೇಗೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಸ್ಯಾಂಡಲ್‍ವುಡ್ ಪ್ರೇಕ್ಷಕರಿಗೆ ಡಬಲ್ ಕಾಮಿಡಿ ಧಮಾಕ

    – ಮಂಜನ ಗೆಟಪ್‍ನಲ್ಲಿ ನವರಸ ನಾಯಕ
    – `ಸ್ಮೈಲ್ ಪ್ಲೀಸ್’ ಅಂತಿದ್ದಾರೆ First Rank ರಾಜು

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಸಿನಿಸಂತೆಗೆ ಎರಡು ಮಸ್ತ್ ಕಾಮಿಡಿ ಎಂಟರ್‍ಟೈನರ್ ಸಿನಿಮಾಗಳು ಬರಲಿವೆ. ಒಂದು ನವರಸ ನಾಯಕ ಜಗ್ಗೇಶ್ ನಟನೆಯ ಮೇಲುಕೋಟೆ ಮಂಜ ಇನ್ನೊಂದು First Rank ರಾಜು ಖ್ಯಾತಿ ಗುರುನಂದನ್ ಅಭಿನಯದ ಸ್ಮೈಲ್ ಪ್ಲೀಸ್.

    ನವರಸ ನಾಯಕ ಜಗ್ಗೇಶ್ ಮತ್ತೊಮ್ಮೆ `ಮಂಜ’ನ ಗೆಟಪ್‍ನಲ್ಲಿ ಕಾಮಿಡಿ ಮಜಾ ನೀಡಲು ಬರ್ತಿದ್ದಾರೆ. ಅದು ಮೇಲು ಕೋಟೆ ಮಂಜನ ಹೆಸರಿನಲ್ಲಿ. ಈ ಮೇಲುಕೋಟೆ ಮಂಜನ ಕರ್ತ ನವರಸನಾಯಕ ಜಗ್ಗೇಶ್. ನಟನೆಯ ಜೊತೆಗೆ ತಾವೇ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ.

    ಗಿರಿದರ್ ದಿವಾನ್ ಸ್ವರಸಂಯೋಜನೆಯ ಹಾಡುಗಳು ಈಗಾಗಲೆ ಕೇಳುಗರನ್ನ ತಲುಪಿದೆ. ಇನ್ನೇನಿದ್ರು ಚಿತ್ರಮಂದಿರದಲ್ಲಿ ಪ್ರೇಕ್ಷಕರು ಮೇಲುಕೋಟೆ ಮಂಜನ್ನ ಸ್ವೀಕರಿಸುವುದೊಂದೆ ಬಾಕಿ.

    First Rank ರಾಜು ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದ ಗುರುನಂದನ್ ಈಗ ಸ್ಮೈಲ್ ಪ್ಲೀಸ್ ಎನ್ನುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಇಷ್ಟಕಾಮ್ಯಾದ ಬೆಡಗಿ ಕಾವ್ಯ ಶೆಟ್ಟಿ ಸಾಥ್ ನೀಡಿದ್ದಾರೆ. ಟಿ.ಎನ್.ಸೀತಾರಾಮ್ ಶಿಷ್ಯ ರಘು ಸಮರ್ಥ ನಿರ್ದೇಶನದ ಸ್ಮೈಲ್ ಪ್ಲೀಸ್ ಈ ವಾರದ ಸ್ಯಾಂಡಲ್‍ವುಡ್ ಸಿನಿಸಂತೆಗೆ ಲಗ್ಗೆ ಇಟ್ಟಿದೆ.

    ಜೆ.ಅನೂಪ್ ಸೀಳಿನ್ ಸಂಗೀತ ಸಂಯೋಜನೆಯ ಹಾಡುಗಳು ಚಿತ್ರಪ್ರೇಮಿಗಳನ್ನ ಇಂಪ್ರೆಸ್ ಮಾಡಿದೆ. ಅದ್ರಲೂ ಸ್ಮೈಲ್ ಪ್ಲೀಸ್ ಸಿನಿಮಾದ ಟ್ರೇಲರ್‍ಗಳು ಪ್ರೇಕ್ಷರಲ್ಲಿ ಭರವಸೆ ಮೂಡಿಸಿವೆ. ಕೆ.ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ಚಿತ್ರ ಮೂಡಿಬಂದಿದ್ದು ಥಿಯೇಟರ್‍ನಲ್ಲಿ ಸದ್ದು ಮಾಡಲಿದೆ.

    ಒಟ್ಟಾರೆಯಾಗಿ ಈ ವಾರದ ಸ್ಯಾಂಡಲ್‍ವುಡ್ ಬೆಳ್ಳಿಪರದೆ ಮೇಲೆ ಹಾಸ್ಯರಸದೌತಣವುಳ್ಳ ಸಿನಿಮಾಗಳು ಬೆಳಕು ಚೆಲ್ಲಲಿವೆ.