Tag: Cinema Actors

  • ಕಾರವಾರಕ್ಕೆ ದಿಢೀರ್ ಭೇಟಿ ನೀಡಿದ ಅಮಿತ್ ಶಾ, ಅಮಿತಾಬ್ ಬಚ್ಚನ್- ಸಮೋಸ ನೀಡಿ ಸ್ವಾಗತಿಸಿದ ಸರ್ವರ್ ರಾಮು

    ಕಾರವಾರಕ್ಕೆ ದಿಢೀರ್ ಭೇಟಿ ನೀಡಿದ ಅಮಿತ್ ಶಾ, ಅಮಿತಾಬ್ ಬಚ್ಚನ್- ಸಮೋಸ ನೀಡಿ ಸ್ವಾಗತಿಸಿದ ಸರ್ವರ್ ರಾಮು

    ಕಾರವಾರ: ರಾತ್ರೋ ರಾತ್ರಿ ಅಮಿತ್ ಶಾ, ಅಮಿತಾಬ್ ಬಚ್ಚನ್, ಸುದೀಪ್, ಪುನೀತ್ ರಾಜ್ ಕುಮಾರ್ ಕಾರವಾರದ ನಗರದ ಮಾರುತಿ ಗಲ್ಲಿಯ ಬೀದಿಯಲ್ಲಿ ಬಂದು ನಿಂತಿದ್ದರು. ಇವರನ್ನು ನೋಡಲು ಸಾವಿರಾರು ಜನರು ಮುಗಿಬಿದ್ದು, ಇವರ ಜೊತೆ ಸೆಲ್ಫಿ ತಗೆದುಕೊಂಡರು. ಅರೇ ಒಂದೊಂದು ದಿಕ್ಕಿನಲ್ಲಿರುವ ಈ ಗಣ್ಯರು ಒಟ್ಟಿಗೆ ಕಾರವಾರದಲ್ಲಿ ಬಂದಿದ್ದು ಏಕೆ ಅಂತೀರಾ? ಕನ್ಫ್ಯೂಸ್ ಆಗಬೇಡಿ ಇಲ್ಲಿದೆ ವಿಶೇಷ.

    ಪ್ರತಿವರ್ಷ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಕಾರವಾರ ನಗರದ ಮಾರುತಿ ದೇವಸ್ಥಾನದ ಜಾತ್ರೋತ್ಸವ ನಡೆಯುತ್ತದೆ. ಈ ಜಾತ್ರೋತ್ಸವ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ. ಕಾರವಾರ ನಗರದಲ್ಲಿಯೇ ಈ ಜಾತ್ರೆ ವಿಶೇಷ ಮಹತ್ವ ಹೊಂದಿದ್ದು, ಜಾತ್ರೆಯ ದಿನ ರಾತ್ರಿ ದೇವರ ಪಲ್ಲಕ್ಕಿ ಮಾರುತಿ ಗಲ್ಲಿ ಹಾಗೂ ಬ್ರಾಹ್ಮಣ ಗಲ್ಲಿಗಳಲ್ಲಿ ಪ್ರದಕ್ಷಿಣೆ ಹಾಕುತ್ತದೆ. ಈ ವೇಳೆ ತಳಿರು ತೋರಣ ಹಾಗೂ ರಂಗೋಲಿ ಬಿಡಿಸಿ ಅನಾದಿಕಾಲದಿಂದಲೂ ದೇವರನ್ನು ಬರಮಾಡಿಕೊಳ್ಳುವುದು ವಾಡಿಕೆ. ಆದರೇ ಇದರ ಜೊತೆಗೆ ಪ್ರತಿ ಮನೆಯ ಮುಂದೆಯೇ ಆಂಜನೇಯನ ಸೇವೆ ರೂಪದಲ್ಲಿ ಒಬ್ಬರಿಗಿಂತ ಒಬ್ಬರು ವಿಶೇಷ ರಂಗೋಲಿ ಬಿಡಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ.

    ಹೀಗೆ ಬೆಳೆದುಕೊಂಡು ಬಂದ ಸಂಪ್ರದಾಯವನ್ನು ಉಳಿಸಿಕೊಳ್ಳಲು ದೇವಸ್ಥಾನದ ಆಡಳಿತ ವರ್ಗವೇ ರಂಗೋಲಿ ಸ್ಪರ್ಧೆಯನ್ನಿಡುತ್ತದೆ. ರಂಗೋಲಿ ಹಾಕುವುದು, ಸ್ಪರ್ದೆಯಲ್ಲಿ ಗೆಲ್ಲುವುದು ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಇರುವ ಗಲ್ಲಿಯ ಜನರ ಪ್ರತಿಷ್ಠೆಯಾಗಿ ಬದಲಾಯಿತು.

    ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತೆ ರಂಗೋಲಿ:
    ಕಾರವಾರದ ಮಾರುತಿ ಗಲ್ಲಿಯಲ್ಲಿ ರಂಗೋಲಿ ನೋಡುವುದೇ ಒಂದು ಹಬ್ಬದ ಸಂಭ್ರಮ. ಸಂಪ್ರದಾಯಿಕ ರಂಗೋಲಿ ಜೊತೆ ಕೆಲವರು ತಮಗೆ ಇಷ್ಟವಾದ ಚಲನಚಿತ್ರ ನಟ, ರಾಜಕಾರಣಿಗಳ ಚಿತ್ರ ಬಿಡಿಸಿದರೆ, ಇನ್ನೂ ಕೆಲವರು ಸಾಮಾಜಿಕ ಕಳಕಳಿ ಬಿಂಬಿಸುವ ಚಿತ್ರಗಳನ್ನು ಬಿಡಿಸುತ್ತಾರೆ. ಜೊತೆಗೆ ರಂಗೋಲಿ ಬಿಡಿಸುವವರಿಗೆ ಇಷ್ಟವಾದ ಜನರು ಕೂಡ ಈ ಜಾತ್ರೆಯ ದಿನ ಈ ಬೀದಿಯಲ್ಲಿ ರಂಗೋಲಿಯಲ್ಲಿ ಮೂಡುತ್ತಾರೆ.

    ಕಾರವಾರದ ಹೊಟಲ್ ಸರ್ವರ್ ರಂಗೋಲಿಯಲ್ಲಿ:
    ಕಾರವಾರದಲ್ಲಿರುವ ಉಡುಪಿ ಮೂಲದ ಹೋಟಲ್ ಒಂದರಲ್ಲಿ 40 ವರ್ಷಗಳಿಂದ ಸರ್ವರ್ ಆಗಿ ಕೆಲಸ ಮಾಡುತ್ತಿರುವ ರಾಮು ಎಂಬವರ ನಿಸ್ವಾರ್ಥ ಸೇವೆಯನ್ನು ನೋಡಿದ ಕಾರವಾರ ನಗರದ ಮಾರುತಿ ಗಲ್ಲಿಯ ವಸಂತ್ ವಾಡ್ಕರ್‍ರವರು ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ಮೂಡಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದಾರೆ. ಆದರೆ ವಾಡ್ಕರ್ ಹೋಟೆಲ್ ಮಾಲೀಕರಲ್ಲ. ಈ ಹೋಟೆಲ್ ಗೆ ಗ್ರಾಹಕರು. ಆದರೂ ಸರ್ವರ್ ಒಬ್ಬರ ನಿಸ್ವಾರ್ಥ ಸೇವೆಯನ್ನು ಇಲ್ಲಿ ಸ್ಮರಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗುವ ಜೊತೆಗೆ ಸರ್ವರ್ ರಾಮು ಸೆಲಬ್ರಿಟಿಯಾಗಿಬಿಟ್ಟಿದ್ದಾರೆ.

    ಈ ಜಾತ್ರೆಯು ರಾತ್ರಿಯಿಂದ ಮುಂಜಾನೆವರೆಗೆ ನಡೆಯುತ್ತದೆ. ಒಂದೆಡೆ ಈ ಬಾರಿ ದುಬಾರಿಯಾದ ಈರುಳ್ಳಿಯಿಂದ ಮಾಡಿದ ಕಲಾಕೃತಿ, ಧಾನ್ಯ ಕಲಾಕೃತಿ, ಹೂವುಗಳ ರಂಗೋಲಿ ಚಿತ್ರಗಳು ಎಲ್ಲರ ಗಮನ ಸೆಳೆಯಿತು. ಇನ್ನೊಂದೆಡೆ ಯಕ್ಷಗಾನ, ಸಿನಿಮಾ ನಟರ ರಂಗೋಲಿ ಚಿತ್ರಗಳು ಕಲಾವಿದನ ಕೈನಲ್ಲಿ ಅರಳಿ ಎದ್ದು ಬಂದಂತೆ ಭಾಸವಾಗುತಿತ್ತು. ಜಾತ್ರೆ ನೋಡಲು ಕೇವಲ ಕಾರವಾರಿಗರು ಮಾತ್ರ ಇರದೇ ನೆರೆಯ ಗೋವಾ, ಮಹರಾಷ್ಟ್ರ, ರಾಜಸ್ತಾನನಿಂದ ಸಹ ಇಲ್ಲಿಗೆ ಜನರು ಬಂದು ಈ ವಿಶೇಷ ರಂಗೋಲಿ ಜಾತ್ರೆಯನ್ನು ನೋಡಿ ಕಣ್ತುಂಬಿಕೊಂಡರು.

  • ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ಬೆಳಗಾವಿ: ನಾವು ನಿಮ್ಮ ಸಿನಿಮಾ ನೋಡ್ತೀವಿ ನಮ್ಮ ಸಮಸ್ಯೆಗೂ ಸ್ಪಂದಿಸಿ ಎಂದು ಬೆಳಗಾವಿಯ ಪ್ರವಾಹ ಪೀಡಿತ ಜನರು ಕನ್ನಡ ಸಿನಿಮಾ ಕಲಾವಿದರಲ್ಲಿ ಮನವಿ ಮಾಡಿದ್ದಾರೆ.

    ಚಿತ್ರರಂಗದವರು ದಕ್ಷಿಣ ಕರ್ನಾಟಕದಲ್ಲಿ ಸಮಸ್ಯೆ ಆದಾಗ ಎಲ್ಲರೂ ನೆರವಾಗುತ್ತಾರೆ. ಕಾವೇರಿ ನೀರು ಸಂಬಂಧ ಎಲರೂ ಹೋರಾಡುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಏನೇ ಸಮಸ್ಯೆ ಆದರೂ ಬರುವುದಿಲ್ಲ. ನಮ್ಮ ನದಿ ನೀರು ಸಂಬಂಧ ಯಾರು ಹೋರಾಟ ಮಾಡುವುದಿಲ್ಲ ಎಂದು ಹುಕ್ಕೇರಿ ತಾಲೂಕಿನ ಚಿಕಲಗುಡ ಗ್ರಾಮಸ್ಥರು ಕೂಡಲೇ ಬಂದು ಸಮಸ್ಯೆಗೆ ಸ್ಪಂದಿಸುವಂತೆ ಸಿನಿಮಾ ಮಂದಿಗೆ ಆಹ್ವಾನ ನೀಡಿದ್ದಾರೆ.

    ನಮ್ಮ ಉತ್ತರ ಕರ್ನಾಟಕದಲ್ಲಿ ಸುದೀಪ್, ದರ್ಶನ್, ಯಶ್ ಮತ್ತು ಧ್ರುವ ಸರ್ಜಾಗೆ ಬಹಳ ಮಂದಿ ಅಭಿಮಾನಿಗಳಿದ್ದಾರೆ. ನಾವು ಅವರ ಎಲ್ಲಾ ಸಿನಿಮಾಗಳನ್ನು ನೋಡುತ್ತೇವೆ. ನಮಗೆ ಈ ರೀತಿಯ ಪರಿಸ್ಥಿತಿ ಬಂದಾಗ ಅವರು ಈ ಕಡೆ ಬರಬೇಕು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಅವರ ಯಶೋಮಾರ್ಗದ ಕೇವಲ ಕೊಪ್ಪಳ ಮಾತ್ರ ಸೀಮಿತ ಅಲ್ಲ. ಉತ್ತರ ಕರ್ನಾಟಕದ ಕಡೆಗೂ ಬನ್ನಿ ಎಂದು ಹೇಳಿದ್ದಾರೆ.

    ಇದೇ ವೇಳೆ ಸ್ಥಳೀಯ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ರೆಸಾರ್ಟ್ ರಾಜಕೀಯ ಮಾಡುತ್ತಾ ನಮ್ಮ ಕಡೆ ಗಮನಹರಿಸಿಲ್ಲ. ನಾವು ನಿಮಗೆ ವೋಟ್ ಹಾಕಿದ್ದೇವೆ ನಮ್ಮ ಕಡೆ ಸ್ವಲ್ಪ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.