ರಜನಿಕಾಂತ್ (Rajanikanth) ಅಂದರೆ ಕ್ರೇಜ್ ಕಾ ಬಾಪ್. ಅವರ ಚಿತ್ರಗಳು ಮಾಸ್. ಟ್ರೆಂಡ್‌ಗೆ ತಕ್ಕಂತೆ ಸಿನಿಮಾ (Cinema) ಮಾಡಿ ಸೈ ಅನ್ನಿಸಿಕೊಂಡು ಅದನ್ನ ಗೆಲ್ಲಿಸುವ ತಾಕತ್ತು ಹೊಂದಿರೋ ವಿಶ್ವ ಮೆಚ್ಚಿದ ಸೂಪರ್ ಸ್ಟಾರ್. ಇದೀಗ ರಜನಿಕಾಂತ್ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸದ್ಯಕ್ಕೆ ಇವರ ಕೈಯಲ್ಲಿ ನೂರಾರು ಕೋಟಿಯ ನಾಲ್ಕು ಪ್ರಾಜೆಕ್ಟ್‌ಗಳಿವೆ. `ಜೈಲರ್ 2′ ಸಿನಿಮಾವನ್ನೂ ಪೂರ್ಣಗೊಳಿಸಿದ್ದಾರೆ. ಕಮಲ್ ಹಾಸನ್ ಜೊತೆಗಿನ ಕಾಂಬೋ ಚಿತ್ರ ಘೋಷಣೆಯಾಗಿದೆ. ಡೈರೆಕ್ಟರ್ ನೆಲ್ಸನ್ ಜೊತೆ ಇನ್ನೊಂದು ಚಿತ್ರವೂ ಫಿಕ್ಸ್ ಆಗಿದೆ. ಇಷ್ಟೇ ಅಲ್ಲ ನಿರ್ಮಾಪಕ ಸಿ ಸುಂದರ್ ಜೊತೆಯೂ ರಜನಿಕಾಂತ್ ಡೇಟ್ ಇದೆ. ಹೀಗೆ ಸದ್ಯಕ್ಕೆ ರಜನಿಕಾಂತ್ ಇನ್ನೂ 2027ರವರೆಗೆ ಶೂಟಿಂಗ್ ಮಾಡಿದರೂ ಮುಗಿಯದಷ್ಟು ಪ್ರಾಜೆಕ್ಟ್‌ಗಳನ್ನ ಇಟ್ಟುಕೊಂಡಿದ್ದಾರೆ. ಆದರೆ ಈ ಹೊತ್ತಲ್ಲೇ ರಜನಿಕಾಂತ್ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿರುವುದರ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

ಸೂಪರ್‌ಸ್ಟಾರ್ ಕುರಿತು ನಿವೃತ್ತಿ ಮಾತು ಕೇಳಿಬರ್ತಿರೋದು ಇದೇ ಮೊದಲಲ್ಲ. ರಜನಿಕಾಂತ್ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ವಿಚಾರ ಬಂದಾಗ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ನಿರ್ಧಾರ ಮಾಡಿದ್ದರು. ಆದರೆ ಅನಾರೋಗ್ಯ ಕಾರಣಕ್ಕೆ ರಾಜಕೀಯ ಪ್ರವೇಶಿಸದಿರಲು ನಿರ್ಧರಿಸಿ ಮತ್ತೆ ನಟನೆಯನ್ನು ಕಂಟಿನ್ಯೂ ಮಾಡಿದ್ರು. ಹಾಗಂತ ಈ ಬಾರಿ ವಿದಾಯಕ್ಕೆ ತೀರ್ಮಾನಿಸೋಕೆ ಕಾರಣ ರಾಜಕೀಯ ಪ್ರವೇಶವಂತೂ ಅಲ್ಲ. ಅದಕ್ಕೊಂದು ವಿಶೇಷ ಕಾರಣವಿದೆ.

ರಜನಿಕಾಂತ್ ತಮ್ಮ ಮನೆಗೆ ಕಥೆ ಪಟ್ಟಿ ಹಿಡ್ಕೊಂಡು ಬರುವ ನಿರ್ದೇಶಕ ಹಾಗೂ ಚೆಕ್‌ಬುಕ್ ಹಿಡ್ಕೊಂಡು ಬರುವ ನಿರ್ಮಾಪಕರನ್ನ ವಾಪಸ್ ಕಳುಹಿಸುತ್ತಿದ್ದಾರಂತೆ. ಇದೇ ವಿಚಾರಕ್ಕೆ ರಜನಿಕಾಂತ್ ವಿದಾಯ ಹೇಳುವ ಸುದ್ದಿ ಗುಲ್ಲಾಗಿದೆ. ಆದರೆ ರಜನಿಕಾಂತ್ ಸಿನಿಮಾ ನಿರಾಕರಿಸುತ್ತಿರುದಕ್ಕೆ ಕಾರಣ ಮಾತ್ರ ಬೇರೆಯೇ ಇದೆ. ರಜನಿಕಾಂತ್ ವಯಸ್ಸು ಏರುತ್ತಿದೆ. 70 ವರ್ಷ ವಯಸ್ಸು ದಾಟಿದ ಬಳಿಕ ಸಹಜವಾಗೇ ದೇಹ ಕ್ವೀಣಿಸುತ್ತದೆ, ಸುಸ್ತೂ ಜಾಸ್ತಿ ಆಗುತ್ತದೆ. ಹಾಗಂತ ಇದುವೇ ವಿದಾಯಕ್ಕೆ ರೀಸನ್ ಅಲ್ವೇ ಅಲ್ಲ.
ರಜನಿಕಾಂತ್ ಮನಸ್ಸು ಆಧ್ಯಾತ್ಮದತ್ತ ಹೆಚ್ಚಾಗಿ ವಾಲುತ್ತಿದೆ. ಸರಳವಾಗಿ ಬದುಕೋದನ್ನ ಜೀವನದಲ್ಲಿ ರೂಢಿಸಿಕೊಂಡು ಬಂದವರು ರಜನಿ. ಹೀಗಾಗಿ ವರ್ಷಕ್ಕೊಮ್ಮೆಯಾದ್ರೂ ಆಧ್ಯಾತ್ಮಿಕ ಪ್ರವಾಸ ಮಾಡ್ತಾರೆ. ಮನಸ್ಸಾದಾಗೆಲ್ಲ ಕಾರು ಹತ್ತಿ, ಹುಟ್ಟೂರು ಬೆಂಗಳೂರಿಗೆ ಬಂದು ಯಾರಿಗೂ ಗೊತ್ತಾಗದಂತೆ ಇದ್ದುಬಿಡ್ತಾರೆ. ಇಂಥಹ ರಜನಿಕಾಂತ್ ಎಲ್ಲಾ ಮೋಹಗಳನ್ನೂ ತ್ಯಜಿಸಿ ಜೀವಿಸುತ್ತಿರುವ ವ್ಯಕ್ತಿ. ವಯಸ್ಸು ಮಾಗಿದಂತೆ ಮನಸ್ಸೂ ಮಾಗುತ್ತಿದೆ. ಹೀಗಾಗಿ ಕೈಯಲ್ಲಿದ್ದ ಪ್ರಾಜೆಕ್ಟ್‌ಗಳನ್ನ ಮುಗಿಸಿಕೊಟ್ಟು, ಬಳಿಕ ನೋಡಿದ್ರಾಯ್ತು ಎಂದು ಯಾವುದೇ ಪ್ರಾಜೆಕ್ಟ್‌ಗಳನ್ನ ರಜನಿ ಒಪ್ಪಿಕೊಳ್ತಿಲ್ಲ. ಹೀಗಾಗಿ ರಜನಿಕಾಂತ್ ಚಿತ್ರರಂಗಕ್ಕೆ ವಿದಾಯದ ಸುದ್ದಿ ಚರ್ಚೆಯಾಗುತ್ತಿದೆ.










