Tag: church

  • ಜೂನ್ 8 ರಿಂದ ದೇವಾಲಯ, ಮಸೀದಿ, ಚರ್ಚ್ ಓಪನ್ – ಷರತ್ತುಗಳು ಅನ್ವಯ

    ಜೂನ್ 8 ರಿಂದ ದೇವಾಲಯ, ಮಸೀದಿ, ಚರ್ಚ್ ಓಪನ್ – ಷರತ್ತುಗಳು ಅನ್ವಯ

    ಬೆಂಗಳೂರು: ಕೇಂದ್ರ ಸರ್ಕಾರ ಜೂನ್ 30 ವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ್ದು, ಹಲವು ವಿನಾಯಿತಿಗಳನ್ನು ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿ ಅನ್ವಯ ಜೂನ್ 8 ರಿಂದ ದೇವಸ್ಥಾನಗಳು, ಚರ್ಚ್, ಮಸೀದಿಗಳು ಸೇರಿದಂತೆ ಧಾರ್ಮಿಕ ಸ್ಥಳಗಳನ್ನ ತೆರೆಯಲು ಅವಕಾಶ ನೀಡಲಾಗಿದೆ.

    ರಾಜ್ಯ ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಜೂನ್ 1ಕ್ಕೆ ದೇವಾಲಯ ತೆರೆಯಲು ದೇವಾಲಯಗಳ ಸಿಬ್ಬಂದಿ ಸಿದ್ಧವಾಗಿದ್ದರು. ದೇವಸ್ಥಾನಗಳನ್ನ ಸ್ವಚ್ಛ ಮಾಡಿ ಅರ್ಚಕರು ಕೂಡ ಸಿದ್ಧರಾಗಿದ್ದರು. ಆದರೆ ಜೂನ್ 1 ಅಲ್ಲ ಜೂನ್ 8 ರಿಂದ ದೇವಾಲಯಗಳನ್ನು ಓಪನ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಈ ವಾರವೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಲಿದೆ. ಮಸೀದಿ, ಮಂದಿರ, ಚರ್ಚ್‍ಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿದೆ.

    ಷರತ್ತುಗಳು ಏನಿರಬಹುದು?
    * ಪ್ರತಿದಿನ ದೇವಾಲಯದ ಒಳಗೆ, ಹೊರಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಬೇಕು
    * ಭಕ್ತರು ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವಂತೆ ನೋಡಿಕೊಳ್ಳಬೇಕು
    * ಪ್ರತಿಯೊಬ್ಬರಿಗೂ ಥರ್ಮಲ್ ಸ್ಯ್ಕಾನಿಂಗ್ ಮಾಡಬೇಕು
    * ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ ಕಾಪಡಬೇಕು
    * ಜನರನ್ನ ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿ ಬೇಕಾದ್ರೆ ದೇವಸ್ಥಾನದ ಖರ್ಚಿನಲ್ಲಿ ನೇಮಕಾತಿ ಮಾಡಿಕೊಳ್ಳಬೇಕು
    * ದೇವಸ್ಥಾನಗಳನ್ನು ತೆರೆಯಲು ಸಮಯ ನಿಗದಿ ಸಾಧ್ಯತೆ
    * ಅರ್ಚಕರು, ಸಿಬ್ಬಂದಿ ಅಗತ್ಯಕ್ಕಿಂತ ಹೆಚ್ಚಿಗಿದ್ದರೆ, ಶೇ.50 ರಷ್ಟು ಹಾಜರಿ
    * ಭಕ್ತರು ಕೊಡುವ ಕಾಣಿಕೆ, ಹರಕೆ ವಸ್ತು, ಹೂ ಹಣ್ಣು ಸ್ವೀಕಾರಕ್ಕೆ ಪ್ರತ್ಯೇಕ ಸ್ಥಳ
    * ದಿನಕ್ಕೆ ಎರಡರಿಂದ ಮೂರು ಸಲ ಇಡೀ ದೇವಸ್ಥಾನ ಸ್ಯಾನಿಟೈಸ್

    ಮಸೀದಿಯಲ್ಲಿ ಷರತ್ತುಗಳು ಏನಿರಬಹುದು?
    * ಮುಸ್ಲಿಂ ಬಾಂಧವರು ಸಾಧ್ಯವಾದಷ್ಟು ಮನೆಗಳಲ್ಲೇ ವಝೂ ಅಂದ್ರೆ ಮುಖ ಕೈ ಕಾಲು ಶುಚಿಗೊಳಿಸಿ ಮಸೀದಿಗೆ ಬರಬೇಕು
    * ಮಸೀದಿಗಳಲ್ಲಿ ಕೈಕಾಲು ಶುಚಿಗೊಳಿಸುವ ಕೊಳವನ್ನು ಮುಚ್ಚಬೇಕು. ಅದರ ಬದಲು ಟ್ಯಾಪ್ ಬಳಸಬೇಕು
    * ಮಸೀದಿಗಳಲ್ಲಿ ಒಂದೇ ಆಗಮನ, ನಿರ್ಗಮನ ದ್ವಾರ ಇರಬೇಕು
    * ಪ್ರತಿ ಪ್ರಾರ್ಥನೆ ಮುನ್ನ ಮಸೀದಿಯ ಹಾಲ್ ಅನ್ನು ಶುಚಿಗೊಳಿಸಬೇಕು
    * ಮಸೀದಿಗೆ ಬರುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಬೇಕು

    * ಪ್ರಾರ್ಥನೆ ವೇಳೆ 1 ರಿಂದ 2 ಮೀಟರ್ ಅಂತರ ಕಾಯಬೇಕು
    * ಪ್ರತಿ ವ್ಯಕ್ತಿ ತನ್ನ ಸ್ವಂತ ಪ್ರಾರ್ಥನಾ ಚಾಪೆಯನ್ನು ತರಬೇಕು
    * ಫರ್ಜ್ ನಮಾಜನ್ನು 10-15 ನಿಮಷಕ್ಕೆ ಸೀಮಿತಗೊಳಿಸಬೇಕು
    * ನಮಾಜ್ ಮಾಡಲು ಅತಿ ಹೆಚ್ಚು ಜನರಿದ್ದರೆ, ಎರಡು ಜಮಾತ್‍ಗೆ ವ್ಯವಸ್ಥೆ ಕಲ್ಪಿಸಬೇಕು


    * ಸುನ್ನತ್ ಮತ್ತು ನಫೀಸ್ ಪ್ರಾರ್ಥನೆಯನ್ನು ಮನೆಯಲ್ಲೇ ಮಾಡಬೇಕು
    * ಶುಕ್ರವಾರದ ಪ್ರಾರ್ಥನೆ 15-20 ನಿಮಿಷಕ್ಕೆ ಸೀಮಿತವಾಗಿರಬೇಕು
    * ಮಸೀದಿ, ದರ್ಗಾಗಳ ಬಳಿ ಭಿಕ್ಷಾಟನೆಗೆ ನಿಷೇಧ
    * ಮಸೀದಿ ಬಳಿ ಪ್ರಸಾದ ಹಂಚುವುದಕ್ಕೆ ನಿರ್ಬಂಧ
    * ದರ್ಗಾದಲ್ಲಿನ ಸಮಾಧಿಗಳೆದುರು ಕೂತು ಪ್ರಾರ್ಥನೆ ಮಾಡಬಾರದು
    * ಆಲಿಂಗನ, ಹಸ್ತಲಾಘವಕ್ಕೆ ನಿರ್ಬಂಧ

    ಚರ್ಚ್ ತೆರೆಯಲು ಷರತ್ತು ಏನಿರಬಹುದು?
    * ಚರ್ಚ್‍ನಲ್ಲಿ ಭಕ್ತರ ಸಂಖ್ಯೆಗೆ ಮಿತಿ ಹೇರಿಕೆ ಸಾಧ್ಯತೆ
    * ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ
    * ಇನ್ನೂ ದಿನದ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಚರ್ಚ್ ತೆರೆಯಲು ಅವಕಾಶ ಸಾಧ್ಯತೆ
    * ಪ್ರಾರ್ಥನೆ ಬಳಿಕ ಚರ್ಚ್ ಒಳಗೆ ಸ್ವಚ್ಛಗೊಳಿಸೋದು ಕಡ್ಡಾಯ
    * ಯಾವುದೇ ಕಾರಣಕ್ಕೂ ಜನಜಾತ್ರೆ ಆಗದಂತೆ ಕಟ್ಟುನಿಟ್ಟಿನ ಕ್ರಮ

  • ಫೋಟೋದಿಂದ ಫಾದರ್‌ನ ಕಾಮದಾಟ ಬಯಲು – ಅಮಾನತು

    ಫೋಟೋದಿಂದ ಫಾದರ್‌ನ ಕಾಮದಾಟ ಬಯಲು – ಅಮಾನತು

    – ಚರ್ಚ್‌ನಲ್ಲಿ 2 ಮಕ್ಕಳ ತಾಯಿಯೊಂದಿಗೆ ಸೆಕ್ಸ್
    – ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಲೀಕ್

    ತಿರುವಂತನಪುರಂ: ಫಾದರ್ ಓರ್ವ ಚರ್ಚ್‌ನಲ್ಲಿಯೇ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದು, ಆ ಅಶ್ಲೀಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಫಾದರ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಇಡುಕ್ಕಿ ಜಿಲ್ಲೆಯ ಕ್ಯಾಥೊಲಿಕ್ ಚರ್ಚ್ ನ ಪಾದ್ರಿ ಜೇಮ್ಸ್ ಮಂಗಲಾಶೇರಿಯ ಅಶ್ಲೀಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೇರಳದ ಇಡುಕ್ಕಿ ಜಿಲ್ಲೆಯ ಮೊಬೈಲ್ ಫೋನ್ ಅಂಗಡಿಯೊಂದರಿಂದ ಈ ಫೋಟೋಗಳು ಆನ್‍ಲೈನ್‍ನಲ್ಲಿ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ. ಆದರೆ ಅಂಗಡಿಯ ಮಾಲೀಕ ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

    ಫಾದರ್ ತನ್ನ ಮೊಬೈಲ್ ಫೋನ್ ಅನ್ನು ರಿಪೇರಿಗಾಗಿ ಮೊಬೈಲ್ ಅಂಗಡಿಗೆ ಕೊಡಲಾಗಿದೆ. ಆಗ ಅಶ್ಲೀಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದೆ. ಆದರೆ ಅಂಗಡಿ ಮಾಲೀಕ ನಮ್ಮ ಅಂಗಡಿಯಿಂದ ಫೋಟೋಗಳು ಲೀಕ್ ಆಗಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.

    ಈಗಾಗಲೇ ಫಾದರ್ ವಿರುದ್ಧ ಚರ್ಚ್ ಕ್ರಮ ಕೈಗೊಂಡಿದೆ. “ಮಾರ್ಚ್ 24, 2020 ರಂದು ಮಂಗಲಾಶೇರಿಯನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಈ ಕುರಿತು ತನಿಖೆ ಕೂಡ ನಡೆಯುತ್ತಿದೆ” ಎಂದು ಚರ್ಚ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

    ಫಾದರ್ ಜೊತೆಗಿದ್ದ ಮಹಿಳೆ ಎರಡು ಮಕ್ಕಳ ತಾಯಿ ಎಂದು ತಿಳಿದುಬಂದಿದೆ. ಸುಮಾರು ಎರಡು ತಿಂಗಳಿನಿಂದ ಈ ಇಬ್ಬರು ಸಂಬಂಧ ಹೊಂದಿದ್ದರು. ಆದರೆ ಈಗ ಇವರ ಕಾಮದಾಟ ಬಯಲಾಗಿದೆ. ಫೋಟೋಗಳು ಲೀಕ್ ಆಗುವ ಮೊದಲೇ ಫಾದರ್ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಎರ್ನಾಕುಲಂ ಜಿಲ್ಲೆಯೊಂದರ ಆಶ್ರಮಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

    ಇದರುವರೆಗೂ ಫಾದರ್ ಅಥವಾ ಮಹಿಳೆಯಿಂದ ಯಾವುದೇ ದೂರು ಬಂದಿಲ್ಲ. ಮೊಬೈಲ್ ಫೋನ್ ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಹೇಳಿದರು.

  • ಪಡುಕೋಣೆ ಚರ್ಚಿನಲ್ಲಿ ಪ್ರಾರ್ಥನೆ- ಧರ್ಮಗುರು ಸೇರಿ 7 ಮಂದಿ ಮೇಲೆ ಕೇಸ್

    ಪಡುಕೋಣೆ ಚರ್ಚಿನಲ್ಲಿ ಪ್ರಾರ್ಥನೆ- ಧರ್ಮಗುರು ಸೇರಿ 7 ಮಂದಿ ಮೇಲೆ ಕೇಸ್

    ಉಡುಪಿ: ಗುಡ್ ಫ್ರೈಡೇ ದಿನವೇ ಚರ್ಚಿನ ಧರ್ಮಗುರು ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡವರ ಮೇಲೆ ಕೇಸು ದಾಖಲಾಗಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

    ಪಡುಕೋಣೆಯಲ್ಲಿ ಗುಡ್ ಫ್ರೈಡೇ ಹಿನ್ನೆಲೆಯಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ನಡೆದಿದೆ. ಧರ್ಮಗುರು ಮತ್ತು ಆರು ಜನರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಪಡುಕೋಣೆಯ ಸಂತ ಅಂತೋನಿ ಚರ್ಚ್‍ನಲ್ಲಿ ಇಂದು ಗುಡ್ ಫ್ರೈಡೇ ಪ್ರಾರ್ಥನೆ ನಡೆದಿತ್ತು. ಬೈಂದೂರು ತಾಲೂಕು ನಾಡ ಗ್ರಾಮದಲ್ಲಿರುವ ಚರ್ಚ್ ಧರ್ಮಗುರು ಮತ್ತು ಆರು ಮಂದಿ ಬೆಳಗ್ಗಿನ ಪ್ರಾರ್ಥನೆಯನ್ನು ಚರ್ಚ್ ಹಾಲ್ ನಲ್ಲಿ ನೆರವೇರಿಸಿದ್ದರು.

    ಸಾರ್ವಜನಿಕವಾಗಿ ಬಂದ ದೂರಿನ ಹಿನ್ನೆಲೆಯಲ್ಲಿ ಫಾದರ್ ಫ್ರೆಡ್ ಮಸ್ಕರೇನಸ್ ಹಾಗೂ ಆರು ಮಂದಿ ಪ್ರಾರ್ಥನೆ ಮಾಡಿದವರ ಮೇಲೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಯಾರೂ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಬಿಷಪ್ ಅವರು ಕೂಡ ಆದೇಶಿಸಿದ್ದರು. ಈ ನಡುವೆಯೂ ಪ್ರಾರ್ಥನೆ ನೆರವೇರಿಸಿದ್ದಕ್ಕೆ ಉಡುಪಿಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊರೊನಾ ವಿರುದ್ಧ ಸಮರ ಸಾರಿದ ಉಡುಪಿ ಬಿಷಪ್ – ಪೂಜೆಯ ವೇಳೆ ಕೊರೊನಾ ಕ್ಲಾಸ್

    ಕೊರೊನಾ ವಿರುದ್ಧ ಸಮರ ಸಾರಿದ ಉಡುಪಿ ಬಿಷಪ್ – ಪೂಜೆಯ ವೇಳೆ ಕೊರೊನಾ ಕ್ಲಾಸ್

    – ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ ಗಳಲ್ಲಿ ಕಾರ್ಯಾಗಾರ

    ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಉಡುಪಿ ಬಿಷಪ್ ಸಮರ ಸಾರಿದ್ದಾರೆ. ಕೊರೊನಾ ವೈರಸ್ ಕರ್ನಾಟಕಕ್ಕೆ ಕಾಲಿಟ್ಟುರುವುದರಿಂದ ಸರ್ಕಾರ ಒಂದು ವಾರ ಹೈ ಅಲರ್ಟ್ ಘೋಷಿಸಿದೆ. ಸರ್ಕಾರ ಒಂದು ಕಡೆ ಜನರಲ್ಲಿ ಜನಜಾಗೃತಿ ಮಾಡಿಸುತ್ತಿದ್ದರೆ, ಧಾರ್ಮಿಕ ಕೇಂದ್ರಗಳಲ್ಲೂ ಕೊರೊನಾ ವೈರಸ್ ಬಗ್ಗೆ ಎಚ್ಚರಿಕೆಯ ಮಂತ್ರ ಜಪಿಸಲಾಗುತ್ತಿದೆ.

    ಉಡುಪಿಯ ಕ್ರೈಸ್ತ ಧರ್ಮ ಪ್ರಾಂತ್ಯದಲ್ಲಿ ಬರುವ ಎಲ್ಲಾ ಚರ್ಚ್ ಗಳಲ್ಲಿ ಕೊರೊನಾ ಜಾಗೃತಿ ಮೂಡಿಸಬೇಕೆಂದು ಜೆರಾಲ್ಡ್ ಐಸಾಕ್ ಲೋಬೊ ಆದೇಶ ಹೊರಡಿಸಿದ್ದಾರೆ. ಶನಿವಾರ ಮತ್ತು ಭಾನುವಾರದ ವಿಶೇಷ ಪ್ರಾರ್ಥನೆಯ ವೇಳೆ ಧರ್ಮಗುರುಗಳು ಚರ್ಚ್ ನಲ್ಲಿ ಕೊರೊನಾ ಸೋಂಕಿನ ಬಗ್ಗೆ ಮತ್ತು ಜನ ಜಾಗೃತಿಯ ಬಗ್ಗೆ ಕಿವಿಮಾತು ಹೇಳಿದ್ದಾರೆ. ಚರ್ಚ್ ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಗಳಲ್ಲಿ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಪಾಠ ಮಾಡಿದ್ದಾರೆ.

    ಗಲ್ಫ್ ರಾಷ್ಟ್ರಗಳಲ್ಲಿ ಇರುವ ಕ್ರೈಸ್ತ ಧರ್ಮೀಯರು ಕೆಲ ಕಾಲ ಅಲ್ಲೇ ಇದ್ದು, ವೈರಸ್ ಭೀತಿ ನಿವಾರಣೆಯಾದ ಮೇಲೆ ಭಾರತಕ್ಕೆ ವಾಪಸ್ ಬರುವಂತೆ ಕರೆ ನೀಡಿದ್ದಾರೆ. ಕೊರೊನಾ ವಿರುದ್ಧ ಮನುಷ್ಯರಿಗೆ ಹೋರಾಡಲು ವಿಶೇಷ ಶಕ್ತಿ ಬರುವಂತೆ ಬೈಬಲ್‍ನ ಕೆಲ ಅಧ್ಯಾಯಗಳ ಪಾಠವನ್ನು ಭಾನುವಾರದ ಪಾರ್ಥನೆಯ ಸಂದರ್ಭದಲ್ಲಿ ಮಾಡಲಾಯಿತು.

    ಕಲ್ಮಾಡಿ ವೆಲಂಕಣಿ ಚರ್ಚ್ ನಲ್ಲಿ, ನಾವು ಪೂಜೆ ಸಂದರ್ಭ ಜಾಗೃತಿ ಮೂಡಿಸಿದ್ದೇವೆ. ಭಕ್ತರು ಕೈಕುಲುಕದೆ ನಮಸ್ಕಾರ ಮಾಡುವಂತೆ ಸಲಹೆ ನೀಡಿದ್ದೇವೆ. ಸರ್ಕಾರಗಳ ಮಾರ್ಗದರ್ಶಿ ಸೂತ್ರ ಅನುಸರಿಸುತ್ತೇವೆ. ವಿದೇಶದಲ್ಲಿ ಇರುವವರಿಗೂ ಧೈರ್ಯ ತುಂಬಿದ್ದೇವೆ ಎಂದು ಧರ್ಮಗುರು ಫಾ. ಆಲ್ಬನ್ ಡಿಸೋಜಾ ಹೇಳಿದರು.

    ಸ್ವತಃ ಉಡುಪಿಯ ಬಿಷಪ್ ಕೆಲ ಚರ್ಚ್ ಗಳಿಗೆ ಭೇಟಿ ಕೊಟ್ಟು ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸಿದ್ದಾರೆ. ಮುಂದಿನ ಶುಕ್ರವಾರ ಒಂದು ದಿನ ನಿರಂತರವಾಗಿ ಕೊರೊನಾ ವೈರಸ್‍ನ ಬಗ್ಗೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಭಕ್ತರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಚರ್ಚ್ ಗಳಲ್ಲಿ ಕ್ರೈಸ್ತ ಸಂಸ್ಥೆಗಳಲ್ಲಿ ಕಾರ್ಯಾಗಾರವನ್ನು ನಡೆಸಲು ಧರ್ಮಪ್ರಾಂತ್ಯ ತೀರ್ಮಾನಿಸಿದೆ.

    ಜಾನ್ ಪೌಲ್ ಡಿಸೋಜಾ, ಅನಿತಾ, ರುಫೀನಾ, ಸುಷ್ಮಾ ಎಂಬವರು ಚರ್ಚ್ ಪ್ರಾರ್ಥನೆ ಮುಗಿನ ಮೇಲೆ ಭಕ್ತರ ಜೊತೆ ಸಮಾಲೋಚನೆ ಮಾಡಿದರು. ಧರ್ಮಗುರುಗಳು, ಸರ್ಕಾರದ ಆದೇಶ ಪಾಲಿಸುವುದಾಗಿ ಹೇಳಿದರು.

  • ಚರ್ಚ್, ದೇವಸ್ಥಾನದಲ್ಲಿ ಗಳಗಳನೆ ಕಣ್ಣೀರಿಟ್ಟ ಜನಾರ್ದನ ಪೂಜಾರಿ

    ಚರ್ಚ್, ದೇವಸ್ಥಾನದಲ್ಲಿ ಗಳಗಳನೆ ಕಣ್ಣೀರಿಟ್ಟ ಜನಾರ್ದನ ಪೂಜಾರಿ

    ಮಂಗಳೂರು: ಕಾಂಗ್ರೆಸ್‍ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವರಾದ ಜನಾರ್ದನ ಪೂಜಾರಿ ಇಂದು ದೇವಸ್ಥಾನ ಹಾಗೂ ಚರ್ಚ್ ನಲ್ಲಿ ಗಳಗಳನೆ ಅತ್ತುಬಿಟ್ಟರು.

    ಜನಾರ್ದನ ಪೂಜಾರಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ಚರ್ಚ್ ಗೆ ತೆರಳಿದ್ದರು. ಈ ವೇಳೆ ಅಲ್ಲಿ ಆಸ್ಕರ್ ಅವರನ್ನು ಕಂಡು ಪೂಜಾರಿ ಅವರು ಬೇಸ್ತು ಬಿದ್ದರು.

    ಆಸ್ಕರ್ ಫೆರ್ನಾಂಡಿಸ್ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನುವ ಮಾಹಿತಿ ತಿಳಿದ ಪೂಜಾರಿಯವರು ದಿಢೀರನೆ ದೇವಸ್ಥಾನ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆಗೆ ತೆರಳಿದ್ದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಪ್ರಾರ್ಥನೆ ನೆರವೇರಿಸಿದ ಪೂಜಾರಿ, ಅಲ್ಲಿ ಆಸ್ಕರ್ ನೆನೆದು ಗಳಗಳನೆ ಅತ್ತಿದ್ದೂ ಆಗಿತ್ತು. ಬಳಿಕ ನಗರದ ರೊಸಾರಿಯೋ ಚರ್ಚ್ ಗೆ ಪ್ರಾರ್ಥನೆಗಾಗಿ ತೆರಳಿದ ಸಂದರ್ಭದಲ್ಲಿ ಸ್ವತಃ ಆಸ್ಕರ್ ಫೆರ್ನಾಂಡಿಸ್ ಚರ್ಚ್ ನಲ್ಲಿರುವುದನ್ನು ಕಂಡು ಪೂಜಾರಿ ಒಂದು ಕ್ಷಣ ವಿಚಲಿತರಾದರು.

    ಬಳಿಕ ಆಸ್ಕರ್ ಜೊತೆಗೆ ಚರ್ಚ್ ನಲ್ಲಿ ಪ್ರಾರ್ಥನೆ ನಡೆಸಿದ ಪೂಜಾರಿ ಅವರು ಪರಸ್ಪರ ಆಲಿಂಗಿಸಿಕೊಂಡರು. ಆಸ್ಕರ್ ಅವರಿಗೆ ಹುಷಾರಿಲ್ಲ ಎಂದು ಪೂಜಾರಿಯವರಿಗೆ ಯಾರೋ ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ವತಃ ಅನಾರೋಗ್ಯದಿಂದ ಬಳಲುತ್ತಿರುವ ಪೂಜಾರಿ, ದೇವರಲ್ಲಿ ಪ್ರಾರ್ಥನೆ ನೆರವೇರಿಸಲು ಮಂಗಳೂರಿಗೆ ಆಗಮಿಸಿದ್ದರು. ಎದ್ದು ನಡೆಯಲಾಗದ ಸ್ಥಿತಿಯಲ್ಲಿರುವ ಜನಾರ್ದನ ಪೂಜಾರಿ ಅವರು, ತಮಗಿಂತ ಕಿರಿಯರಾಗಿರುವ ಆಸ್ಕರ್ ಆರೋಗ್ಯಕ್ಕಾಗಿ ಪ್ರಾರ್ಥಿಸಲು ತೆರಳುವಂತೆ ಮಾಡಿದ್ದು ಯಾರೆಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

  • ಬೆಂಗಳೂರಿನಲ್ಲಿ ಮಧ್ಯರಾತ್ರಿ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರಿನಲ್ಲಿ ಮಧ್ಯರಾತ್ರಿ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರು: ಕ್ರಿಸ್‍ಮಸ್ ಅಂದ್ರೆನೇ ಕಲರ್ ಫುಲ್. ಸಿಲಿಕಾನ್ ಸಿಟಿ ಸೇರಿದಂತೆ ನಾಡಿನ ಚರ್ಚ್, ಕ್ರೈಸ್ತ ಬಾಂಧವರ ಮನೆಗಳು ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿದೆ. ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ.

    ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೇಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.

    ಶಿವಾಜಿನಗರದ ಸೇಂಟ್ ಮರಿಯಾ ಚರ್ಚ್ ನಲ್ಲಿಯೂ ಕೂಡ ಕ್ರಿಸ್ ಮಸ್ ಸಡಗರ ತುಸು ಜೋರಾಗೆ ಇತ್ತು. ಶಾಂತಿ, ಸೌಹಾರ್ದತೆಗೆ ಸಂಕೇತವಾಗಿ ಕ್ರಿಸ್‍ಮಸ್ ಅನ್ನು ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಪಟಾಕಿ ಸಿಡಿಸುವ ಮೂಲಕ ಕ್ರೈಸ್ತ ಬಾಂಧವರು ಬರಮಾಡಿಕೊಂಡ್ರು.

    ಚರ್ಚ್ ನಲ್ಲಿ ಕ್ರೈಸ್ತಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿ ಯೇಸುವಿಗೆ ನಮನ ಸಲ್ಲಿಸಿದ್ರು. ಜೊತೆಗೆ ಈ ಕ್ರಿಸ್ ಮಸ್ ಹಬ್ಬದಲ್ಲಿ ಬೇರೆ ಧರ್ಮದವರೂ ಭಾಗಿಯಾಗಿ ಕ್ರಿಸ್ ಮಸ್ ಹಬ್ಬವನ್ನ ಸಂಭ್ರಮಿಸಿದ್ದು, ಸಾವಿರಾರು ಜನ ತಡ ರಾತ್ರಿಯೇ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹಬ್ಬದ ವಿಶೇಷವಾಗಿ ಚರ್ಚ್ ನಲ್ಲಿ ಇಟ್ಟಿದ್ದ ಸ್ಯಾಂತ ಹಾಗೂ ಆತನ ಕುದುರೆಗಳು, ಕರ್ತನಾದ ಯೇಸು, ತಾಯಿ ಮೇರಿ ಸೇರಿದಂತೆ ಹಲವಾರು ಗೊಂಬೆಗಳಿದ್ದು ಬಂದವರ ಕಣ್ಮನ ಸೆಳೆಯಿತು.

  • ಬಾಂಬ್ ದಾಳಿಯ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಮೋದಿ

    ಬಾಂಬ್ ದಾಳಿಯ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಮೋದಿ

    ಕೊಲಂಬೊ: ಈಸ್ಟರ್ ಭಾನುವಾರದ ವೇಳೆ ಭಯೋತ್ಪಾದಕರು ದಾಳಿ ಮಾಡಿದ್ದ ಶ್ರೀಲಂಕಾದ ಚರ್ಚ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಭೇಟಿ ನೀಡಿ ಮೃತರಿಗೆ ಗೌರವ ನಮನ ಸಲ್ಲಿಸಿದ್ದಾರೆ.

    ಚರ್ಚ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಏಪ್ರಿಲ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 11 ಭಾರತೀಯರು ಸೇರಿದಂತೆ ಸುಮಾರು 250 ಜನರು ಸಾವನ್ನಪ್ಪಿದ್ದರು. ಈ ದಾಳಿಯ ಬಳಿಕ ಶ್ರೀಲಂಕಾಗೆ ಭೇಟಿ ನೀಡಿದ ಮೊದಲ ವಿದೇಶಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ.

    ಶ್ರೀಲಂಕಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಬಂಡಾರನಾಯಿಕೆ ಅವರು ಸಕಲ ಸರ್ಕಾರಿ ಗೌರವದೊಂದಿಗೆ ಸ್ವಾಗತಿಸಿದರು. ಅಲ್ಲಿಂದ ಕೊಚ್ಚಿಕಾಡ್‍ನ ಸೈಂಟ್ ಆಂಥೊನಿ ಚರ್ಚ್ ಗೆ ಭೇಟಿ ನೀಡುವ ಮೂಲಕ ಮೋದಿ ಅವರು ಶ್ರೀಲಂಕಾ ಪ್ರವಾಸವನ್ನು ಆರಂಭಿಸಿದ್ದಾರೆ.

    ಉಗ್ರರ ದಾಳಿಗೆ ಮೃತಪಟ್ಟ ನಾಗರಿಕರಿಗೆ ಚರ್ಚ್ ನಲ್ಲಿ ಹೂಗುಚ್ಛ ಇಟ್ಟು, ನಮನ ಸಲ್ಲಿಸಿದರು. ಟ್ವೀಟ್ ಮೂಲಕವೂ ಮೃತರ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದ್ದಾರೆ. ಬಳಿಕ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿ ನೀಡಿ, ಮಾತುಕತೆ ನಡೆಸಿದರು.

    ಈ ಮಧ್ಯೆ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಮೂರು ವರ್ಷದಲ್ಲಿ ಶ್ರೀಲಂಕಾಗೆ ಇದು ನನ್ನ ಮೂರನೇ ಭೇಟಿ. ನಿಮ್ಮ ಅಭೂತಪೂರ್ವ ಸ್ವಾಗತಕ್ಕೆ ನಾನು ಮಾರುಹೋಗಿದ್ದೇನೆ. ನಿಮ್ಮ ಸ್ನೇಹವನ್ನು ಭಾರತವು ಎಂದಿಗೂ ಮರೆಯುವುದಿಲ್ಲ. ನಿಮ್ಮೊಂದಿಗೆ ಭಾರತ ಸದಾಕಾಲ ಇರುತ್ತದೆ ಎಂದು ಹೇಳಿದ್ದಾರೆ.

    ಕಳೆದ 10 ದಿನಗಳಲ್ಲಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಜೊತೆಗಿನ ಎರಡನೇ ಭೇಟಿ ಇದಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಅವರು ಬೆಂಬಲ ನೀಡಿದ್ದಾರೆ. ಒಟ್ಟಾಗಿ ಉಗ್ರರನ್ನು ಮಟ್ಟ ಹಾಕುವ ನಿರ್ಧಾರಕ್ಕೆ ಮುಂದಾಗಿದ್ದೇವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    ಶ್ರೀಲಂಕಾಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮೈತ್ರಿಪಾಲ ಸಿರಿಸೇನ ಅವರು ಮೊದಲು ಆಹ್ವಾನ ನೀಡಿದ್ದರು. ಮಾಜಿ ಅಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕ ಮಹೀಂದ್ರ ರಾಜಪಕ್ಸೆ ಅವರನ್ನು ಮೋದಿ ಭೇಟಿ ಮಾಡಿದ್ದಾರೆ.

  • ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ

    ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ

    ಕೊಲಂಬೋ: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಮೂರು ಚರ್ಚ್, ಮೂರು ಫೈವ್‍ಸ್ಟಾರ್ ಹೋಟೆಲ್‍ಗಳು ಸೇರಿದಂತೆ ಒಟ್ಟು 6 ಕಡೆ ಸರಣಿ ಬಾಂಬ್ ಸ್ಫೋಟಕ್ಕೆ 160 ಮಂದಿ ಮಂದಿ ಮೃತಪಟ್ಟು, 400ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ಕ್ಕೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಕೊಚ್ಚಿಕೇಡ್‍ನ ಸೆಂಟ್ ಅಂಟೋನಿ ಚರ್ಚ್, ನೆಗೊಂಬೆ ಚರ್ಚ್ ನಲ್ಲಿ ಬಾಂಬ್ ಸ್ಫೋಟಗೊಂಡಿದೆ.

    ಬಾಂಬ್ ಸ್ಫೋಟದ ತೀವ್ರತೆಗೆ ಚರ್ಚ್ ಗಳ ಮೇಲ್ಛಾವಣಿ ಕಿತ್ತು ಹಾರಿಹೋಗಿದೆ. ಚರ್ಚ್ ಒಳಗಡೆಯಿದ್ದ ಬೆಂಚ್‍ಗಳು ಮುರಿದು ಹೋಗಿದೆ. ಚರ್ಚ್ ಒಳಗಡೆ ಎಲ್ಲಿ ನೋಡಿದರಲ್ಲಿ ರಕ್ತವೇ, ಛಿದ್ರ ಛಿದ್ರ ಮೃತದೇಹಗಳೇ ಕಾಣಸಿಗುತ್ತಿದೆ. ಈ ನಡುವೆ ಗಾಯಳುಗಳ ನರಳಾಟ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂಧನ ಮುಗಿಲು ಮುಟ್ಟಿದೆ.

    ಶಾಂಗ್ರಿಲಾ ಹಾಗೂ ಸಿನಾಮೊನ್ ಗ್ರ್ಯಾಂಡ್ ಹೋಟೆಲ್‍ಗಳಲ್ಲಿ ಸ್ಫೋಟ ನಡೆದಿದೆ. ಭಾರತೀಯರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಈ ದಾಳಿಯನ್ನು ಖಂಡಿಸಿದ್ದು, ಭಯಪಡಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ಈ ಸಮಯದಲ್ಲಿ ನಮಗೆ ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇಂದು ನಮ್ಮ ಜನರ ಮೇಲೆ ನಡೆದಿರುವ ಹೇಡಿತನದ ದಾಳಿಗಳನ್ನು ಬಲವಾಗಿ ಖಂಡಿಸುತ್ತಿದ್ದೇನೆ. ಈ ದುರ್ಘಟನೆಯ ಸಮಯದಲ್ಲಿ ಎಲ್ಲಾ ಶ್ರೀಲಂಕಾದ ನಾಗರಿಕರು ಒಟ್ಟಾಗಿದ್ದು ನಮಗೆ ಸಹಕರಿಸಬೇಕು. ದಯವಿಟ್ಟು ಸುಳ್ಳು ವರದಿಗಳು ಹಾಗೂ ಊಹಾಪೋಹಗಳನ್ನು ಪ್ರಚಾರ ಮಾಡುವುದನ್ನು ತಪ್ಪಿಸಿ, ಈ ಪರಿಸ್ಥಿತಿಯನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ. ಅಲ್ಲದೆ ಸ್ಫೋಟ ಸಂಭವಿಸಿರುವ ಸ್ಥಳಗಳಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು ಈ ಬಗ್ಗೆ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಟ್ವೀಟ್ ಮಾಡಿದೆ.

    ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ್ದು, ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ನಾನು ಕೊಲಂಬೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಡನೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಲ್ಲಿನ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಶ್ರೀಲಂಕಾದಲ್ಲಿರುವ ಭಾರತೀಯರ ಬಗ್ಗೆ ಮಾಹಿತಿ ಬೇಕಾದಲ್ಲಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಹಾಯವಾಣಿ ಸಂಖ್ಯೆಯನ್ನು ಟ್ವೀಟ್ ಮಾಡಿದ್ದಾರೆ.

    https://www.youtube.com/watch?v=Kp4p-WCXmmg

    https://www.youtube.com/watch?v=toEBKqvDA3c&feature=youtu.be

  • ಈಸ್ಟರ್ ಹಬ್ಬದಂದೇ ಸರಣಿ ಬಾಂಬ್ ಸ್ಫೋಟ- 139 ಮಂದಿ ದುರ್ಮರಣ

    ಈಸ್ಟರ್ ಹಬ್ಬದಂದೇ ಸರಣಿ ಬಾಂಬ್ ಸ್ಫೋಟ- 139 ಮಂದಿ ದುರ್ಮರಣ

    ಕೊಲಂಬೋ: ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿ ಮೂರು ಚರ್ಚ್, ಮೂರು ಫೈವ್‍ಸ್ಟಾರ್ ಹೋಟೆಲ್‍ಗಳು ಸೇರಿದಂತೆ 6 ಕಡೆ ಸರಣಿ ಬಾಂಬ್ ಸ್ಫೋಟ ನಡೆದಿದ್ದು, ಈಸ್ಟರ್ ಹಬ್ಬದ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಸೇರಿದ್ದ 139 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಚರ್ಚ್ ಗಳಲ್ಲಿ ಕ್ರಿಶ್ಚಿಯನ್ನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ವೇಳೆಯೇ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಕೊಲಂಬೋ ಬಂದರು ಸಮೀದ ಸೆಬಾಸ್ಟಿಯನ್ ಚರ್ಚ್ ರಕ್ತಸಿಕ್ತವಾಗಿದೆ.

    ಕೊಚ್ಚಿಕೇಡ್‍ನ ಸೆಂಟ್ ಅಂಟೋನಿ ಚರ್ಚ್, ನೆಗೊಂಬೆ ಚರ್ಚ್ ನಲ್ಲಿ ಬಾಂಬ್ ಸ್ಫೋಟವಾಗಿದ್ದು, ಈವರೆಗೆ 139 ಮಂದಿ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಭಾರತೀಯರು ಸೇರಿ ಹಲವು ವಿದೇಶಿಯರು ಇರುವ ಸಾಧ್ಯತೆಯಿದೆ.

    ನಗರದಲ್ಲಿರುವ 3 ಫೈವ್ ಸ್ಟಾರ್ ಹೋಟೆಲ್​ಗಳಲ್ಲೂ ಬಾಂಬ್ ಸ್ಪೋಟ ಸಂಭವಿಸಿರುವ ಕುರಿತಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಇಲ್ಲಿನ ಶಾಂಗ್ರಿ ಲಾ ಹಾಗೂ ಸಿನಾಮೊನ್ ಗ್ರ್ಯಾಂಡ್ ಹೋಟೆಲ್​ಗಳಲ್ಲಿ ಸ್ಫೋಟ ನಡೆದಿದೆ. ಭಾರತೀಯರನ್ನು ಗುರಿಯಾಗಿಸಿಕೊಂಡು ಇಸಿಸ್ ಉಗ್ರರು ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಹಾಗೆಯೇ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

  • ದೇವರ ಆದೇಶದಂತೆ ರೇಪ್ ಮಾಡಿದ್ದೇನೆ ಎಂದಿದ್ದ ದೇವಮಾನವನಿಗೆ 15 ವರ್ಷ ಜೈಲು

    ದೇವರ ಆದೇಶದಂತೆ ರೇಪ್ ಮಾಡಿದ್ದೇನೆ ಎಂದಿದ್ದ ದೇವಮಾನವನಿಗೆ 15 ವರ್ಷ ಜೈಲು

    ಸಿಯೋಲ್: ಚರ್ಚ್‍ನಲ್ಲಿ 8 ಜನ ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದ ಧರ್ಮ ಗುರುವಿಗೆ ದಕ್ಷಿಣ ಕೊರಿಯಾ ಕೋರ್ಟ್ 15 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಸಿಯೋಲ್‍ನ ಮಮಿನ್ ಸೆಂಟ್ರಲ್ ಚರ್ಚ್‍ನ ಲೀ ಜೇ ರಾಕ್ (75) ಜೈಲು ಶಿಕ್ಷೆಗೆ ಗುರಿಯಾದ ಧರ್ಮಗುರು. ಇತನು ಕ್ರಿಶ್ಚಿಯನ್ನರು ನಡೆಸುತ್ತಿದ್ದ ಸಂಸ್ಥೆಯ ಮುಖ್ಯಸ್ಥನಾಗಿದ್ದು, 1.30 ಲಕ್ಷ ಅನುಯಾಯಿಗಳನ್ನು ಹೊಂದಿದ್ದ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಆರೋಪದಡಿ ಮೇ ತಿಂಗಳಿನಲ್ಲಿ ಬಂಧಿಸಲಾಗಿದ್ದ ಲೀ ಜೇ ರಾಕ್‍ಗೆ ಬುಧವಾರ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

    ಕೆಲಸ ಮಾಡುವಂತೆ ದೇವರಿಂದ ಆದೇಶ ಬಂದಿತ್ತು. ನಾನು ದೇವಮಾನವನಾಗಿದ್ದು ಹೀಗಾಗಿ ಮಾಡಿರುವೆ ಎಂದು ಲೀ ಜೇ ರಾಕ್, ಕೋರ್ಟ್ ಆದೇಶ ಬಳಿಕ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾನೆ.

    ಏನಿದು ಪ್ರಕರಣ?:
    ಲೀ ಜೇ ರಾಕ್ ತನ್ನ ಅಪಾರ್ಟಮೆಂಟ್‍ಗೆ ಬರುವಂತೆ ಹಾಗೂ ಲೈಂಗಿಕ ಕ್ರಿಯೆಗೆ ಒಳಗಾಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಮೂರು ಜನರ ಮಹಿಳೆ ದೂರು ನೀಡಿದ್ದರು. ನಾನು ಅವನ ವಿರುದ್ಧ ನಿಲ್ಲಲು ಸಾಧ್ಯವಾಗುತ್ತಿಲ್ಲ. ಅವನು ರಾಜ, ದೇವರು ಇದ್ದಂತೆ ಎಂದು ಸಂತ್ರಸ್ತ ಮಹಿಳೆಯೊಬ್ಬಳು ಭಯದಿಂದಲೇ ಮಾಧ್ಯಮಗಳ ಮುಂದೆ ತನ್ನ ಅಳಲು ತೋಡಿಕೊಂಡಿದ್ದಳು. ಈ ಮಹಿಳೆ ಹುಟ್ಟಿನಿಂದಲೇ ಚರ್ಚ್‍ನಲ್ಲಿ ವಾಸ್ತವ್ಯ ಪಡೆದಿದ್ದಳು.

    ಒಟ್ಟು 8 ಜನ ಸಂತ್ರಸ್ತ ಮಹಿಳೆಯರು ಲೀ ಜೇ ರಾಕ್ ವಿರುದ್ಧ ಧ್ವನಿ ಎತ್ತಿದ್ದರು. ಆರೋಪ ಬಂದ ಹಿನ್ನೆಲೆಯಲ್ಲಿ ಆತನನ್ನು ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು. ಆರೋಪಿಯು ಸಂತ್ರಸ್ತ ಮಹಿಳೆಯರ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ ಹಾಗೂ ಕಿರುಕುಳ ನೀಡಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಕೋರ್ಟ್ ವಿಚಾರಣೆ ವೇಳೆ ಧರ್ಮಗುರುವಿನ ಮೇಲಿನ ಆರೋಪ ಸಾಬೀತಾಗಿತ್ತು.

    ನಾನು ದೇವಮಾನವ, ಪವಿತ್ರವಾದ ವ್ಯಕ್ತಿ, ಪರಿಶುದ್ಧ ಆತ್ಮ, ದೈವಿಕ ಶಕ್ತಿಯನ್ನು ಹೊಂದಿರುವುದಾಗಿ ಹೇಳಿಕೊಂಡು ಚರ್ಚ್ ಪ್ರಾರ್ಥನೆಗೆ ಬಂದು ಭಕ್ತರಿಗೆ ಮೋಸ ಮಾಡುತ್ತಿದ್ದ ಎಂದು ವರದಿಯಾಗಿದೆ.

    ಮಹಿಳೆಯ ಚರ್ಚ್ ಪ್ರವೇಶವನ್ನು ತಡೆದಿದ್ದಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ಹಾಕಲಾಗಿದೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಆದರೆ ಆರೋಪ ಸಾಬೀತು ಆಗುತ್ತಿದ್ದಂತೆ ಕೋರ್ಟ್ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv