Tag: christmas tree

  • ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ಕ್ರಿಸ್ಮಸ್ ಟ್ರೀ – ಏನಿದರ ಇತಿಹಾಸ, ಮಹತ್ವ?

    ಕ್ರಿಸ್ಮಸ್ ಹಬ್ಬ ಬಂತೆಂದರೆ ಸಾಕು ಅಲಂಕಾರಿಕ ವಸ್ತುಗಳು ನಮ್ಮನ್ನು ಎಲ್ಲೆಡೆಯೂ ಸೆಳೆಯುತ್ತಲಿರುತ್ತವೆ. ಹಾಗೆಯೇ ಕ್ರಿಸ್ಮಸ್ ಹಬ್ಬದ ಸಾಂಕೇತಿಕ ರೂಪವೆಂದರೆ ಅದು ಕ್ರಿಸ್ಮಸ್ ಟ್ರೀ

    ಸಾಮಾನ್ಯವಾಗಿ ಕ್ರಿಸ್ಮಸ್ ಹಬ್ಬದಲ್ಲಿ ಅಲಂಕಾರಿಕ ವಸ್ತುಗಳು, ಕೇಕ್ ಹಾಗೂ ಇನ್ನಿತರ ಸಿಹಿ ತಿಂಡಿಗಳು, ಕ್ರಿಸ್ಮಸ್ ಟ್ರೀ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತದೆ. ಈ ಹಬ್ಬದಲ್ಲಿ ಮುಖ್ಯವಾಗಿ ಆಕರ್ಷಣೆಗೊಳಪಡುವ ಕ್ರಿಸ್ಮಸ್ ಟ್ರೀಯ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

    ಕ್ರಿಸ್ಮಸ್ ಟ್ರೀ ಇತಿಹಾಸ:
    ಒಂದು ದಂತ ಕಥೆಯ ಪ್ರಕಾರ, ಒಮ್ಮೆ ಥರ್‌ದೇವರಿಗೆ ಮುಗ್ಧ ಮಗುವನ್ನು ಬಲಿಕೊಡಬೇಕೆಂದು ಗ್ರಾಮದ ಜನರೆಲ್ಲರೂ ನಿರ್ಧಾರ ಮಾಡಿ ಒಂದೇ ಸ್ಥಳದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ್ದರು. ಇದನ್ನು ನೋಡಿದ ಇಂಗ್ಲಿಷ್ ಸಂನ್ಯಾಸಿ ಸಂತ ಬೋನಿಫೇಸ್ ಮಗುವನ್ನು ರಕ್ಷಿಸಲು ಮರವೊಂದು ಕೆಳಗೆ ಬೀಳುವಂತೆ ಮಾಡುತ್ತಾನೆ. ಆಗ ಆ ಸ್ಥಳದಲ್ಲಿ ಒಂದು ಸಣ್ಣ ಮರವೊಂದು ಬೆಳೆಯುತ್ತದೆ.

    ಆ ಸಂತನ ಪ್ರಕಾರ ಅದೇ ಮರ ಕ್ರಿಸ್ತನ ಶಾಶ್ವತತೆಯನ್ನು ಸಂಕೇತಿಸುತ್ತದೆ ಮತ್ತು ಅದನ್ನು ‘ ಟ್ರೀ ಆಫ್ ಲೈಫ್’ ಎಂದು ಕರೆಯಲಾಗುತ್ತದೆ. ಬದುಕಿನ ಸಂಕೇತವಾಗಿ ಮರವನ್ನು ಹಿಂದಿನಿಂದಲೂ ಆಭರಣ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಇದನ್ನು ಬದುಕಿನ ಸಕಾರಾತ್ಮಕ ಮನೋಭಾವದ ಸಂಕೇತವಾಗಿ ಪೂಜಿಸಲಾಗುತ್ತದೆ. ಹೊಸ ವರ್ಷದ ಮುನ್ನುಡಿ ಬರೆಯುವ ಈ ಹಬ್ಬ ಸಂಭ್ರಮ, ಸಂತೋಷದ ಜೊತೆಗೆ ಎಲ್ಲೆಡೆ ಶಾಂತಿಯನ್ನು ಪಸರಿಸಲಿ ಎಂಬ ಸದಾಶಯದೊಂದಿಗೆ ಎಲ್ಲರೂ ಸೇರಿ ಈ ಭಗವಂತನಲ್ಲಿ ಪ್ರಾರ್ಥನೆ ಮಾಡಿ ನವವರ್ಷವನ್ನು ಬರಮಾಡಿಕೊಳ್ಳೋಣ.

    ಕ್ರಿಸ್ಮಸ್ ಟ್ರೀ ಮಹತ್ವ:
    ಕ್ರಿಸ್ಮಸ್ ಟ್ರೀಯನ್ನು ಶಾಶ್ವತ ಜೀವನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಂಪ್ರದಾಯವು ಮೊದಲು ಜರ್ಮನಿಯಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ನಂತರ ಅದು 1830ರ ದಶಕದಲ್ಲಿ ಇಂಗ್ಲೆಂಡ್‌ಗೆ ಪಸರಿಸಿತು. ದಂತಕಥೆಯ ಪ್ರಕಾರ ಚಳಿಗಾಲದಲ್ಲಿ ಯೇಸು ಕ್ರಿಸ್ತನ ಜನನದ ನಂತರ, ಹಿಮದಿಂದ ಕೂಡಿದ್ದ ಮರಗಳು ಹಸಿರು ಬಣ್ಣಕ್ಕೆ ತಿರುಗಿದವು. ಹೀಗಾಗಿ ಕ್ರಿಸ್ಮಸ್ ಟ್ರೀಯನ್ನು ಶಾಶ್ವತತೆ ಹಾಗೂ ಧನಾತ್ಮಕತೆಗೆ ಹೋಲಿಸಲಾಗುತ್ತದೆ.

    ಕ್ರಿಸ್ಮಸ್ ಟ್ರೀ ವಾತಾವರಣದಲ್ಲಿ ಉಲ್ಲಾಸ, ಸಕಾರಾತ್ಮಕತೆ ಮತ್ತು ಚೈತನ್ಯವನ್ನು ತರುತ್ತದೆ ಎಂದು ನಂಬಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಸಿರು ಬಿಟ್ಟುಕೊಡದೇ ಉಳಿಸುವ ಮನೋಭಾವನೆ ಕ್ರಿಸ್ಮಸ್ ಟ್ರೀ ಹೊಂದಿದೆ. ಈ ನಿತ್ಯಹರಿದ್ವರ್ಣ ಮರದಿಂದ ಹೊರಹೊಮ್ಮುವ ಸಿಹಿ ಸುವಾಸನೆಯು ದೈನಂದಿನ ಒತ್ತಡದಿಂದ ನಿಮ್ಮನ್ನು ವಿಶ್ರಾಂತಿಯಾಗಿರಿಸಲು ಸಹಾಯ ಮಾಡುತ್ತದೆ.

    ಆರಂಭದ ದಿನಗಳಲ್ಲಿ ಕ್ರಿಸ್ಮಸ್ ಟ್ರೀ ಟ್ರೀಗೆ ಜಿಂಜರ್ ಬ್ರೆಡ್, ಸೇಬು ಮುಂತಾದ ಆಹಾರ ಪದಾರ್ಥಗಳಿಂದ ಅಲಂಕಾರ ಮಾಡುತ್ತಿದ್ದರು. ಆದರೆ ಕಾಲಾನಂತರದಲ್ಲಿ ಸಂಪ್ರದಾಯಗಳು ವಿಕಸನಗೊಂಡು ಈಗ ವಿದ್ಯುತ್ ದೀಪಗಳು, ಮಿಠಾಯಿಗಳು, ಮಿನುಗುವ ನಕ್ಷತ್ರಗಳು, ಹಲವು ಬಣ್ಣದ ಕಾಗದಗಳಿಂದ ಕತ್ತರಿಸಿದ ಹಾಗೂ ಚಿನ್ನದ ಹಾಳೆಗಳು, ಬೆಳ್ಳಿಯ ತಂತಿಗಳು, ಸಾಂತಾ ಕ್ಲಾಸ್ ಬೊಂಬೆಗಳು, ಮತ್ತು ಸಣ್ಣ ಗೊಂಬೆಗಳನ್ನು ಅಲಂಕಾರಿಕ ವಸ್ತುಗಳಾಗಿ ಬಳಸುತ್ತಾರೆ.

  • ಶಾಂತಿ, ಪ್ರೀತಿಯ ಸಂದೇಶ ಸಾರುವ ಕ್ರಿಸ್ಮಸ್‌ ಹಬ್ಬ – ಬೆಂಗ್ಳೂರಿನಲ್ಲಿದೆ ದೇಶದ ಅತಿದೊಡ್ಡ ಕ್ರಿಸ್ಮಸ್‌ ಟ್ರೀ

    ಶಾಂತಿ, ಪ್ರೀತಿಯ ಸಂದೇಶ ಸಾರುವ ಕ್ರಿಸ್ಮಸ್‌ ಹಬ್ಬ – ಬೆಂಗ್ಳೂರಿನಲ್ಲಿದೆ ದೇಶದ ಅತಿದೊಡ್ಡ ಕ್ರಿಸ್ಮಸ್‌ ಟ್ರೀ

    – ಕ್ರಿಸ್ಮಸ್‌ ಹಬ್ಬದ ಮಹತ್ವವೇನು

    ಜಗತ್ತಿಗೆ ಶಾಂತಿ, ಪ್ರೀತಿಯ ಸಂದೇಶ ಸಾರಿದ ದೇವಪುತ್ರ ಯೇಸುವಿನ ಜನ್ಮದಿನದ ಆಚರಣೆಯೇ ಕ್ರಿಸ್ಮಸ್ (Christmas). ಮನುಷ್ಯ ಎಲ್ಲರಿಗೂ ಉಪಯುಕ್ತನಾಗಬೇಕು, ಎಲ್ಲರಲ್ಲಿಯೂ ಒಂದಾಗಿ ಬಾಳಬೇಕು ಮತ್ತು ಒಳ್ಳೆಯದನ್ನ ಕೇಳುವಂತವನಾಗಿರಬೇಕು ಎನ್ನುವುದೇ ಹಬ್ಬದ ಮುಖ್ಯ ಧ್ಯೇಯ.

    ಪ್ರತಿ ವರ್ಷ ಡಿಸೆಂಬರ್‌ 25ರಂದು ದೇಶಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್‌ ಹಬ್ಬವನ್ನು (Christmas Festival) ಆಚರಿಸುತ್ತಾರೆ. ವಿವಿಧ ಚರ್ಚ್‌ಗಳಲ್ಲಿ ಯೇಸುವಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆ ಭಾರೀ ಗಾತ್ರದ ಕೇಕ್‌ಗಳನ್ನು ಕತ್ತರಿಸುತ್ತಾರೆ. ಪ್ರಮುಖ ನಗರದ ಮಾಲ್‌ಗಳಲ್ಲಿಯೂ ವಿಶೇಷ ಕ್ರಿಸ್ಮಸ್‌ ದೀಪಾಲಂಕಾರ, ಕ್ರಿಸ್ಮಸ್‌ ಟ್ರೀ (Christmas Tree) ಸ್ಥಾಪಿಸಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಾರೆ. ಇದನ್ನೂ ಓದಿ: ಹೊಸವರ್ಷ ಆಚರಣೆ – ಮಹಿಳೆಯರ ರಕ್ಷಣೆಗೆ ಮುಂದಿನ ವಾರದಲ್ಲಿ ಗೈಡ್‌ಲೈನ್ಸ್‌: ಬೆಂಗ್ಳೂರು ಪೊಲೀಸ್‌

    ಈ ಬಾರಿ ಏನು ವಿಶೇಷ?
    ಈ ಬಾರಿಯ ಕ್ರಿಸ್ಮಸ್‌ ಹಬ್ಬಕ್ಕೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಫೀನಿಕ್ಸ್‌ ಮಾಲ್‌ ಆಫ್‌ ಏಷ್ಯಾದಲ್ಲಿ ದೇಶದಲ್ಲೇ ಅತಿದೊಡ್ಡ 100 ಅಡಿ ಎತ್ತರದ ಕ್ರಿಸ್ಮಸ್‌ ಟ್ರೀಯನ್ನು ಅನಾವರಣಗೊಳಿಸಲಾಗಿದೆ. ಇದರೊಂದಿಗೆ ನೀರು ಹಾಗೂ ಸಂಗೀತ ಕಾರಂಜಿಯನ್ನೂ ಆಯೋಜಿಸಲಾಗಿದೆ. ಇದರ ಪಕ್ಕದಲ್ಲೇ ಸಾಂತಾಕ್ರೂಸ್‌ ವೇಶದಲ್ಲಿರುವ ವ್ಯಕ್ತಿಗೆ ಕ್ರಿಸ್ಮಸ್‌ ವಿಶ್‌ ಮಾಡುವ ಮೂಲಕ ಜನರು ಸಂತಸ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಬೆಂಗಳೂರಿನ ವಿವಿಧೆಡೆ ಕೇಸ್‌ ಉತ್ಸವಗಳನ್ನೂ ಹಮ್ಮಿಕೊಳ್ಳಲಾಗಿದೆ.

    ಹೊಸ ವರ್ಷಕ್ಕೆ ಕೆಲವೇ ದಿನಗಳ ಮುನ್ನ ಬರುವ ಈ ಹಬ್ಬದಲ್ಲಿ ಸ್ಥಳೀಯರು ಹಾಗೂ ಯುವಸಮೂಹದ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ಕೋವಿಡ್ ಮೊದಲ ಅಲೆ ಅಪ್ಪಳಿಸಿದಾಗ, ಕರೋಲ್ ಸಂಗೀತ ಕಛೇರಿಗಳಿಗೂ ಬ್ರೇಕ್‌ ಹಾಕಲಾಗಿತ್ತು. ಸೀಮಿತ ಪೂಜೆ ಪ್ರಾರ್ಥನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದ್ರೆ ಕಳೆದ 2 ವರ್ಷಗಳಿಂದ ಅದ್ಧೂರಿಯಾಗಿ ಈ ಉತ್ಸವಗಳು ಸಾಗುತ್ತಿವೆ. ಇದನ್ನೂ ಓದಿ: ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್‌ ಜಾಮ್‌ – 3 ಕಿಮೀ ವರೆಗೆ ನಿಂತ ವಾಹನಗಳು; 2 ಗಂಟೆ ಪ್ರಯಾಣಿಕರ ಪರದಾಟ

    ಕ್ರಿಸ್ಮಸ್‌ ಹಬ್ಬದ ಪ್ರಾಮುಖ್ಯತೆ:
    ಒಂದು ಕಾಲದಲ್ಲಿ ಕ್ರಿಸ್ಮಸ್‌ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರಿಂದು ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಇದು ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು ಮತ್ತು ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸು ಕ್ರಿಸ್ತನು ತನ್ನ ಪ್ರಾಣ ತ್ಯಾಗ ಮಾಡಿದನು ಎಂಬ ನಂಬಿಕೆ ಇದೆ. ಈ ಎಲ್ಲ ನೆನಪಿನೊಂದಿಗೆ ಕ್ರಿಸ್ಮಸ್‌ ಹಬ್ಬವನ್ನು ಆಚರಿಸಲಾಗುತ್ತದೆ ಎನ್ನುತ್ತಾರೆ ಮೈಸೂರು ಸೇಂಟ್‌ ಫಿಲೋಮಿನಾ ಚರ್ಚ್‌ನ ಪಾದ್ರಿ ಸ್ಟ್ಯಾನಿ ಡಿ. ಅಲ್ಮೆಡಾ.

    ಕರೋಲ್‌ ಕಂಪು:
    ಪ್ರತಿವರ್ಷ ಡಿಸೆಂಬರ್‌ 24ರಂದು ರಾತ್ರಿ 12 ಗಂಟೆಯಿಂದ ಬಲಿಪೂಜೆಯೊಂದಿಗೆ ಕ್ರಿಸ್ಮಸ್‌ ಹಬ್ಬ ಆರಂಭವಾಗುತ್ತದೆ. ಬಲಿಪೂಜೆಯ ನಂತರ ಯೇಸುವಿನ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಾರೆ. ನಂತರ ರಾತ್ರಿಯಿಡೀ ಕರೋಲ್ ಗೀತಗಾಯನವಿರುತ್ತದೆ. ಹಬ್ಬಕ್ಕಿಂತ ಮೊದಲೇ ಆರಂಭವಾಗುವ ಈ ಸಂಪ್ರದಾಯದಲ್ಲಿ ಯುವಕರ ಗುಂಪುಗಳು ರಾತ್ರಿ ತಮ್ಮ ಸನಿಹದ ಪ್ರದೇಶದ ಮನೆ ಮನೆಗಳಿಗೆ ತೆರಳಿ ಕರೋಲ್ ಗಳನ್ನು (ಭಜನೆ ಅಥವಾ ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ಮಸ್ ಹಾಡುಗಳು) ಹಾಡುತ್ತಾರೆ. ಆ ಮೂಲಕ ಯೇಸುಕ್ರಿಸ್ತನು ಈ ಮನೆಯಲ್ಲಿ ಹುಟ್ಟಿದ್ದಾನೆ ಮತ್ತು ಈ ಮನೆಯಲ್ಲಿ ಜೀವಿಸುತ್ತಾನೆ ಎಂದು ಪವಿತ್ರ ಭಾವನೆ ಮೂಡಿಸುವ ಸಂದೇಶ ಸಾರಲಾಗುತ್ತದೆ ಎನ್ನುತ್ತಾರೆ ಅಲ್ಮೆಡಾ. ಇದನ್ನೂ ಓದಿ: ಹೊಸ ವರ್ಷಾಚರಣೆ – ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ

    ಕ್ರಿಸ್ಮಸ್‌ ಹಿನ್ನೆಲೆ ಏನು?
    ಕ್ರಿಸ್ಮಸ್‌ ಆಚರಣೆಯು ಹಲವು ಶತಮಾನಗಳ ಹಿಂದಿನದ್ದು. ಕ್ರಿಸ್ಮಸ್‌ ಅನ್ನು ಮೊದಲು ರೋಮ್‌ ದೇಶದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಕ್ರಿಸ್‌ಮಸ್‌ಗೆ ಮುನ್ನ ರೋಮ್‌ನಲ್ಲಿ ಡಿಸೆಂಬರ್ 25ರ ದಿನವನ್ನು ಸೂರ್ಯ ದೇವರ ಜನ್ಮದಿನವಾಗಿ ಆಚರಿಸಲಾಯಿತು. ಆ ಸಮಯದಲ್ಲಿ, ರೋಮ್‌ನ ಚಕ್ರವರ್ತಿಗಳು ಸೂರ್ಯದೇವನನ್ನು ತಮ್ಮ ಮುಖ್ಯ ದೇವರಾಗಿ ಪರಿಗಣಿಸುತ್ತಿದ್ದರು ಮತ್ತು ಸೂರ್ಯದೇವನನ್ನು ಪೂಜಿಸುತ್ತಿದ್ದರು. ನಂತರ ಕಾಲಘಟ್ಟದಲ್ಲಿ ರೋಮ್‌ನಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರವು ವೇಗವಾಗಿ ಬೆಳೆಯಲು ಪ್ರಾರಂಭಿಸಿತು. ರೋಮ್‌ನಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳ ಸಂಖ್ಯೆ ಹೆಚ್ಚಾಯಿತು. ಇದಾದ ನಂತರ ಕ್ರಿ.ಶ.336ರಲ್ಲಿ ಕ್ರೈಸ್ತ ಧರ್ಮದ ಅನುಯಾಯಿಗಳು ಯೇಸುಕ್ರಿಸ್ತನನ್ನು ಸೂರ್ಯದೇವನ ಅವತಾರವೆಂದು ಒಪ್ಪಿಕೊಂಡರು. ಅಂದಿನಿಂದ ಕ್ರಿಸ್ಮಸ್‌ ಹಬ್ಬವನ್ನು ಯೇಸುಕ್ರಿಸ್ತನ ಜನ್ಮದಿನವಾಗಿ ಆಚರಿಸುವ ಸಂಪ್ರದಾಯವು ಬೆಳೆದುಬಂದಿತು ಎನ್ನುತ್ತಾರೆ ಹಿರಿಯ ಪಾದ್ರಿಗಳು.

  • ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ

    ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ

    ಬೆಂಗಳೂರು: ಕ್ರಿಸ್ಮಸ್ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಕಲ ರೀತಿಯಿಂದಲೂ ಸಜ್ಜುಗೊಂಡಿದೆ. ಕ್ರಿಸ್ಮಸ್ ಅಂದಾಕ್ಷಣ ಎಲ್ಲರಿಗೂ ಸಾಂತಾ ಕ್ಲಾಸ್ ಹಾಗೂ ಕಲರ್‍ಫುಲ್ ಕ್ರಿಸ್ಮಸ್ ಟ್ರೀಗಳು ನೆನಪಾಗುತ್ತದೆ. ನಗರದ ವೈಟ್ ಫಿಲ್ಡ್ ನ ಖಾಸಗಿ ಮಾಲ್‍ನಲ್ಲಿ (ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ) ದೇಶದ ಅತಿ ಎತ್ತರದ ಕ್ರಿಸ್ಮಸ್ ಟ್ರೀ ಅನಾವರಣಗೊಳಿಸಲಾಗಿದೆ.

    ಇದು 75 ಅಡಿ ಎತ್ತರ ಹೊಂದಿದ್ದು, 50 ಸಾವಿರ ಮಿನುಗುವ ಲೈಟ್‍ಗಳನ್ನು ಹಾಕಿ ತಯಾರಿಸಿದ್ದಾರೆ. ಇದನ್ನು ಸ್ಪೇನ್ ನ ಖ್ಯಾತ ಕಲಾವಿದರು ಈ ಫೈಬರ್ ಗ್ಲಾಸ್ ನಿಂದ ಅದ್ಭುತ ಟ್ರೀಯನ್ನು ಫಲಾಸ್ ಡಿಸೈನ್ ಸ್ಟೈಲಿನಲ್ಲಿ ರೆಡಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಧರೆಗಿಳಿದ ಕೇಕ್‍ಗಳ ಲೋಕ

    ರಾತ್ರಿ ವೇಳೆಯಲ್ಲಿ ಹೊಳೆಯುವ ನಕ್ಷತ್ರಗಳ ಜೊತೆ ಈ ಕ್ರಿಸ್ಮಸ್ ಟ್ರೀಯನ್ನು ನೋಡುವುದೇ ಚೆಂದ. ಈ ಟ್ರೀ ಮುಂದೆ ಮಕ್ಕಳು, ಯುವಕರು, ವಯೋವೃದ್ಧರಾದಿಯಾಗಿ ಪ್ರತಿಯೊಬ್ಬರೂ ಸೆಲ್ಫಿ ತೆಗಿಸಿಕೊಳ್ಳುತ್ತಿದ್ದಾರೆ.

    ಈ ಕ್ರಿಸ್ಮಸ್ ಟ್ರೀ ಜೊತೆ ಕ್ರಿಸ್ಮಸ್ ಮಾರ್ಕೆಟ್ ಸಹ ಇದ್ದು, ಸಾಂತಾ ಕ್ಲಾಸ್, ಟೋಪಿಗಳು, ವಿವಿಧ ರೀತಿಯ ಲೈಟಿಂಗ್‍ಗಳು, ಸ್ಟಾರ್ ಗಳು ಸೇರಿದಂತೆ ಹಬ್ಬಕ್ಕೆ ಮತ್ತು ಕ್ರೀಬ್‍ಗೆ ಬೇಕಾಗುವ ವಿವಿಧ ಸಾಮಗ್ರಿಗಳನ್ನು ಮಾರಾಟಕ್ಕೆ ಇಡಲಾಗಿದೆ.

  • ಬೆಂಗಳೂರಿನಲ್ಲಿ ರಾತ್ರಿಯೇ ಮುಗಿಲು ಮುಟ್ಟಿದ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರಿನಲ್ಲಿ ರಾತ್ರಿಯೇ ಮುಗಿಲು ಮುಟ್ಟಿದ ಕ್ರಿಸ್‍ಮಸ್ ಸಂಭ್ರಮ

    ಬೆಂಗಳೂರು: ಕ್ರಿಸ್‍ಮಸ್ ಅಂದ್ರೆನೇ ಕಲರ್ ಫುಲ್. ಸಿಲಿಕಾನ್ ಸಿಟಿ ಸೇರಿದಂತೆ ನಾಡಿನ ಚರ್ಚ್, ಕ್ರೈಸ್ತ ಬಾಂಧವರ ಮನೆಗಳು ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿದೆ. ನಾಡಿನೆಲ್ಲೆಡೆ ಕ್ರಿಸ್‍ಮಸ್ ಸಂಭ್ರಮ ಜೋರಾಗಿದೆ.

    ಬೆಂಗಳೂರಿನಲ್ಲಿ ರಾತ್ರಿಯೇ ಕ್ರಿಸ್‍ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಿವಾಜಿನಗರದ ಸೆಂಟ್ ಮೇರಿಸ್ ಬಸೆಲಿಕಾ, ಶಾಂತಿ ನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದಲ್ಲಿ 80 ರಿಂದ 85 ಚರ್ಚ್ ಗಳಿದ್ದು, ಬಣ್ಣ ಬಣ್ಣದ ಬೆಳಕುಗಳಿಂದ ಕಂಗೊಳಿಸುತ್ತಿವೆ.

    ಕೋಲಾರದ ಕೆಜಿಎಫ್‍ನಲ್ಲಿ ಕ್ರಿಸ್‍ಮಸ್ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ನಗರವೊಂದರಲ್ಲಿ 200ಕ್ಕೂ ಹೆಚ್ಚು ಚರ್ಚ್‍ಗಳಿದ್ದು, 60 ಸಾವಿರಕ್ಕೂ ಅಧಿಕ ಕ್ರಿಶ್ಚಿಯನ್ನರು ಇಲ್ಲಿ ವಾಸಿಸುತ್ತಿದ್ದಾರೆ. ಹಾಗಾಗಿ ಕೆಜಿಎಫ್ ನಗರವನ್ನು ಮಿನಿ ಇಂಗ್ಲೆಂಡ್, ರೋಂ ನಗರಿ ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತೆ. ಇಲ್ಲಿ ಕ್ರಿಸ್‍ಮಸ್ ಹಬ್ಬವನ್ನು ವಿಭಿನ್ನ ಹಾಗೂ ವಿಶೇಷವಾಗಿ ಆಚರಣೆ ಮಾಡಲಾಗ್ತಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಂಧವ್ಯದ ಬೆಸುಗೆ ಕಂಡು ಬಂದಿದೆ. ಮೂಡುಬಿದಿರೆಯ ಪ್ರಸನ್ನ ಜೋಯೆಲ್ ಸಿಕ್ವೇರಾ, ಯತೀಶ್ ಕುಲಾಲ್, ಅಬ್ದುಲ್ ರವೂಫ್ ಎಂಬ ಮೂವರು ಯುವಕರು 15 ದಿನಗಳ ಕಾಲ ಶ್ರಮಿಸಿ 20 ಅಡಿ ಎತ್ತರ ಮತ್ತು 20 ಅಡಿ ಅಗಲದ ಅತಿ ದೊಡ್ಡ ಕ್ರಿಸ್‍ಮಸ್ ನಕ್ಷತ್ರವನ್ನು ರಚಿಸಿದ್ದಾರೆ. ಈ ನಕ್ಷತ್ರವನ್ನ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‍ನ ಆವರಣದಲ್ಲಿ ನಿಲ್ಲಿಸಲಾಗಿದ್ದು ಜನರ ಆಕರ್ಷಣೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬರೋಬ್ಬರಿ 186.5 ಕೋಟಿ ವೆಚ್ಚದಲ್ಲಿ ತಯಾರಾಯ್ತು ಕ್ರಿಸ್ಮಸ್ ಟ್ರೀ!

    ಬರೋಬ್ಬರಿ 186.5 ಕೋಟಿ ವೆಚ್ಚದಲ್ಲಿ ತಯಾರಾಯ್ತು ಕ್ರಿಸ್ಮಸ್ ಟ್ರೀ!

    ಬರ್ಲಿನ್: ಜರ್ಮನ್‍ನ ಚಿನ್ನದ ವ್ಯಾಪಾರ ನಡೆಸುವ ಪ್ರೋ ಔರಮ್ ಕಂಪನಿಯು ಬರೋಬ್ಬರಿ ಚಿನ್ನದ ನಾಣ್ಯಗಳನ್ನು ಬಳಸಿ 186.5 ಕೋಟಿ ರೂ ವೆಚ್ಚದಲ್ಲಿ ಕ್ರಿಸ್ಮಸ್ ಟ್ರೀಯೊಂದನ್ನು ನಿರ್ಮಿಸಿದೆ.

    ಯುರೋಪ್ ಖಂಡದಲ್ಲಿಯೇ ಇಷ್ಟೊಂದು ದುಬಾರಿ ವೆಚ್ಚದ ಕ್ರಿಸ್ಮಸ್ ಟ್ರೀ ಈವರೆಗೂ ತಯಾರಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸುಮಾರು 186.5 ಕೋಟಿ ರೂ. (2.3 ಮಿಲಿಯನ್ ಯುರೋ) ವೆಚ್ಚದಲ್ಲಿ, 63 ಕೆ.ಜಿಯ ಶುದ್ದ ಚಿನ್ನದಲ್ಲಿ ತಯಾರಿಸಿದ 2,018 ಚಿನ್ನದ ನಾಣ್ಯಗಳನ್ನು ಬಳಸಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಲಾಗಿದೆ. ಅಷ್ಟೇ ಅಲ್ಲದೆ ಕ್ರಿಸ್ಮಸ್ ಟ್ರೀಯ ತುದಿಯಲ್ಲಿ ಇಟ್ಟಿರುವ ನಕ್ಷತ್ರ ಆಕಾರದ ಚಿನ್ನದ ನಾಣ್ಯವೊಂದಕ್ಕೆ ಸುಮಾರು 17 ಲಕ್ಷ ರೂ. (21,000 ಯುರೋ) ಖರ್ಚಾಗಿದೆ

    ಈ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀ ಪಿರಾಮಿಡ್ ಆಕಾರದಲ್ಲಿದ್ದು, ಟ್ರೀ ತುದಿಯಲ್ಲಿ ಒಂದು ಚಿನ್ನದ ನಕ್ಷತ್ರವನ್ನು ಕೂಡ ಇರಿಸಲಾಗಿದೆ. ಯುರೋಪ್‍ನಲ್ಲಿಯೇ ಅತೀ ದುಬಾರಿ ಕ್ರಿಸ್ಮಸ್ ಟ್ರೀಯನ್ನು ತಯಾರಿಸಿದ ಹೆಗ್ಗಳಿಕೆಗೆ ಪ್ರೋ ಔರಮ್ ಕಂಪನಿ ಪಾತ್ರವಾಗಿದೆ.

    ಪ್ರೋ ಔರಮ್ ಕಂಪನಿಯ ಸಿಬ್ಬಂದಿ ಬೆಂಜಮಿನ್ ಸುಮ್ಮ ಮಾತನಾಡಿ, ಇತ್ತಿಚಿಗೆ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಇಳಿಮುಖವಾಗಿದೆ. ಇಲ್ಲದಿದ್ದರೆ ಈ ಕ್ರಿಸ್ಮಸ್ ಟ್ರೀ ಮೌಲ್ಯ ಇನ್ನೂ ಜಾಸ್ತಿಯಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಯುರೋಪ್‍ನಲ್ಲಿ ಹಣಕಾಸಿನ ಮುಗ್ಗಟ್ಟು ಹಾಗೂ ಸಾರ್ವಜನಿಕ ಸಾಲ ಹೆಚ್ಚಾಗಿದೆ. ಆದರಿಂದ ಜನರು ತಮ್ಮ ಉಳಿತಾಯದ ಹಣವನ್ನು ಚಿನ್ನದ ಮೇಲೆ ಹಾಕುತ್ತಿದ್ದಾರೆ. ಹೀಗಾಗಿ ಚಿನ್ನದ ಮೌಲ್ಯ ಕುಸಿದಿದೆ ಎಂದು ಹೇಳಿದರು.

    ಕಂಪನಿಯ ಮ್ಯೂನಿಚ್ ಶಾಖೆಯಲ್ಲಿ ಸುಮಾರು 10 ಅಡಿ ಎತ್ತರದ ಅತೀ ದುಬಾರಿ ಚಿನ್ನದ ನಾಣ್ಯಗಳ ಕ್ರಿಸ್ಮಸ್ ಟ್ರೀಯನ್ನು ಡಿ. 15 ರಿಂದ ಪ್ರದರ್ಶನಕ್ಕೆ ಇರಿಸಲಾಗುವುದು ಎಂದು ಪ್ರೋ ಔರಮ್ ಸಿಬ್ಬಂದಿ ತಿಳಿಸಿದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv