Tag: Chris Gayle

  • ಕ್ರಿಸ್ ಗೇಲ್, ಅಜರುದ್ದೀನ್ ಸಾಧನೆಯನ್ನು ಹಿಂದಿಕ್ಕಿದ ಕೊಹ್ಲಿ

    ಕ್ರಿಸ್ ಗೇಲ್, ಅಜರುದ್ದೀನ್ ಸಾಧನೆಯನ್ನು ಹಿಂದಿಕ್ಕಿದ ಕೊಹ್ಲಿ

    ಜೋಹನ್ಸ್ ಬರ್ಗ್: ಇಲ್ಲಿನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 75 ರನ್ ಸಿಡಿಸಿ ಏಕದಿನದಲ್ಲಿ 9,423 ರನ್ ಪೂರ್ಣಗೊಳಿಸಿದರು. ಈ ಮೂಲಕ ವಿಂಡಿಸ್ ಆಟಗಾರರ ಕ್ರಿಸ್ ಗೇಲ್ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಅಜರುದ್ದೀನ್ ರನ್ನು ಹಿಂದಿಕ್ಕಿದ್ದಾರೆ.

    ವಿಶ್ವ ಕ್ರಿಕೆಟ್ ನಲ್ಲಿ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಈಗ 16 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾರತದ ಪರ 5 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 29 ವರ್ಷದ ಕೊಹ್ಲಿ 206 ಪಂದ್ಯಗಳಲ್ಲಿ 9,423 ರನ್ ಗಳಿಸಿ ಈ ಸಾಧನೆಯನ್ನು ಏರಿದ್ದಾರೆ.

    ಕ್ರಿಸ್ ಗೇಲ್ 9,420 ರನ್ ಗಳಿಸಿದ್ದರೆ, ಅಜರುದ್ದೀನ್ 9,378 ರನ್ ಗಳಿಸಿದ್ದರು. ಭಾರತದ ಪರ ಮೊದಲ ಸ್ಥಾನ ಪಡೆರುವ ಸಚಿನ್ 18,426 ರನ್, ನಂತರದಲ್ಲಿ ಸೌರವ್ ಗಂಗೂಲಿ 11,363 ರನ್, ದ್ರಾವಿಡ್ 10,889 ಮತ್ತು ಮಹೇಂದ್ರ ಸಿಂಗ್ ಧೋನಿ 9,954 ರನ್ ಗಳಿಸಿದ್ದಾರೆ.

    ಈ ಪಂದ್ಯದಲ್ಲಿ 83 ಎಸೆತಗಳ ಮೂಲಕ 75 ರನ್ ಸಿಡಿಸಿದ ಕೊಹ್ಲಿ ತಮ್ಮ 46 ನೇ ಅರ್ಧ ಶತಕವನ್ನು ಪೂರ್ಣಗೊಳಿದರು. ಅಲ್ಲದೇ ಆಫ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ವಿಶೇಷವಾಗಿ ಆಫ್ರಿಕಾ ನೆಲದಲ್ಲಿ ಎಬಿಡಿ ವಿಲಿಯರ್ಸ್ ನಂತರ ಏಕದಿನ ಪಂದ್ಯಗಳಲ್ಲಿ 350 ಪ್ಲಸ್ ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 2013 ರಲ್ಲಿ ಎಬಿಡಿ ಪಾಕ್ ವಿರುದ್ಧದ ಸರಣಿಯಲ್ಲಿ 367 ರನ್ ಸಿಡಿಸಿದ್ದರು.

    ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 34 ಶತಕಗಳನ್ನು ಗಳಿಸಿದ್ದು, ಭಾರತ ಪರ ಸಚಿನ್(49) ಅತಿ ಹೆಚ್ಚು ಶತಕ ಹೊಡೆದಿದ್ದಾರೆ.

     

  • ಕೊನೆಗೂ ಸೇಲಾದ ಗೇಲ್, ಉನಾದ್ಕತ್‍ಗೆ 11. 6 ಕೋಟಿ..!

    ಕೊನೆಗೂ ಸೇಲಾದ ಗೇಲ್, ಉನಾದ್ಕತ್‍ಗೆ 11. 6 ಕೋಟಿ..!

    ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್‍ನ 11ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಸಿಲಿಕಾನ್ ಸಿಟಿಯಲ್ಲಿ ತೆರೆ ಬಿದ್ದಿದೆ. ಕಳೆದೆರಡು ದಿನಗಳಿಂದ ಚರ್ಚೆಯಲ್ಲಿದ್ದ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಎರಡನೇ ದಿನ ನಡೆದ ಮೂರನೇ ಬಾರಿಯ ಬಿಡ್ಡಿಂಗ್‍ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್‍ಗೆ ಸೇಲ್ ಆಗಿದ್ದಾರೆ.

    ಮೂಲ ಬೆಲೆ 2 ಕೋಟಿ ನಿಗದಿಯಾಗಿದ್ದ ಸಿಕ್ಸರ್ ಕಿಂಗ್‍ರನ್ನು ಬಿಡ್ಡಿಂಗ್ ನಲ್ಲಿ ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಿಟೆನ್ಶನ್ ಹಾಗೂ ರೈಟ್ ಟು ಮ್ಯಾಚ್ ಕಾರ್ಡ್‍ನಲ್ಲಿಯೂ ಗೇಲ್‍ರನ್ನು ಉಳಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಮನಸ್ಸು ಮಾಡಿರಲಿಲ್ಲ. ಆದರೆ 3ನೇ ಹಾಗೂ ಅಂತಿಮ ಬಾರಿ ಹರಾಜಿನಲ್ಲಿ ಮತ್ತೆ ಗೇಲ್ ಹೆಸರು ಬಂದಾಗ ಪ್ರೀತಿ ಜಿಂಟಾ ಮೂಲ ಬೆಲೆಗೆ ಗೇಲ್‍ರನ್ನು ತಂಡಕ್ಕೆ ಸೇರಿಸಿಕೊಂಡರು.

    ಕುತೂಹಲಕಾರಿ ಅಂಶವೆಂದರೆ ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್, ಕಿಂಗ್ಸ್ ಪಂಜಾಬ್ ಬೌಲರ್ ಗಳನ್ನು ಅತಿಹೆಚ್ಚು ದಂಡಿಸಿದ ದಾಖಲೆ ಹೊಂದಿದ್ದಾರೆ. ಆದರೆ ಈ ಬಾರಿ ಗೇಲ್ ಅದೇ ತಂಡದ ಪರ ಬ್ಯಾಟ್ ಬೀಸಲಿದ್ದಾರೆ. ಜೊತೆಗೆ ಆರ್ ಸಿಬಿ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ಕೆ.ಎಲ್. ರಾಹುಲ್ ಹಾಗೂ ಕ್ರಿಸ್ ಗೇಲ್ ಈ ಬಾರಿ ಪಂಜಾಬ್ ಪರ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆ ಮೂಲಕ ಹರಾಜಿನಲ್ಲಿ ತಮ್ಮನ್ನು ನಿರ್ಲಕ್ಷಿಸಿದ ಫ್ರಾಂಚೈಸಿಗಳಿಗೆ ಗೇಲ್ ಯಾವ ರೀತಿಯಲ್ಲಿ ಬ್ಯಾಟ್ ಮೂಲಕ ಉತ್ತರಿಸುತ್ತಾರೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಗರಿಗೆದರಿದೆ.

    https://twitter.com/IPLCricket/status/957561761762291712

    ಐಪಿಎಲ್‍ನಲ್ಲಿ ಗೇಲ್ ಬ್ಯಾಟಿಂಗ್ ಸಾಧನೆ:
    ಇನ್ನಿಂಗ್ಸ್ – 100
    ರನ್ – 3626
    ಅತಿಹೆಚ್ಚು ಮೊತ್ತ – 175*
    ಶತಕ – 5
    ಸಿಕ್ಸರ್ – 263
    ಬೌಂಡರಿ – 293
    ಬ್ಯಾಟಿಂಗ್ ಸರಾಸರಿ – 41.20
    ಸ್ಟ್ರೈಕ್‍ರೇಟ್ – 151.21

    ಹರಾಜಿಗೆ ತೆರೆ.. ಉನಾದ್ಕತ್‍ಗೆ ಬಂಪರ್..!
    ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಆರಂಭವಾದ ಐಪಿಎಲ್ ಹರಾಜು ಪ್ರಕ್ರಿಯೆಗೆ ಇಂದು ತೆರೆ ಬಿದ್ದಿದೆ. ಒಟ್ಟು 578 ಆಟಗಾರರ ಹೆಸರಿದ್ದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ 182 ಗರಿಷ್ಠ ಆಟಗಾರರನ್ನು ಸೇರಿಸಿಕೊಳ್ಳಲು 8 ಫ್ರಾಂಚೈಸಿಗಳಿಗೆ ಅವಕಾಶವಿತ್ತು. ಆದರೆ ಕೇವಲ 169 ಆಟಗಾರರಷ್ಟೇ ಎರಡು ದಿನಗಳ ಕಾಲ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಬಿಕರಿಯಾಗಿದ್ದಾರೆ.

    169 ಆಟಗಾರರಲ್ಲಿ 113 ಇಂಡಿಯನ್ ಪ್ಲೇಯರ್ಸ್, 56 ವಿದೇಶಿ ಆಟಗಾರರು, 91 ಅಂತರಾಷ್ಟ್ರೀಯ ಪಂದ್ಯ ಆಡಿದ ಆಟಗಾರರು, 77 ದೇಶಿ ಟೂರ್ನಿಗಳಲ್ಲಿ ಆಡಿ ಗಮನ ಸೆಳೆದಿರುವ ಆಟಗಾರರು, ಓರ್ವ ಐಸಿಸಿ ಸಹ ಸದಸ್ಯ ರಾಷ್ಟ್ರಗಳ ಆಟಗಾರ, ಹಾಗೂ 19 ಮಂದಿ ಆಟಗಾರರನ್ನು ಫ್ರಾಂಚೈಸಿಗಳು ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಂಡಿವೆ.

    169 ಆಟಗಾರರಿಗೆ ಫ್ರಾಂಚೈಸಿಗಳು 2 ದಿನದಲ್ಲಿ ಒಟ್ಟು 431. 4 ಕೋಟಿ ರೂ. ವೆಚ್ಚ ಮಾಡಿವೆ. ಇದರಲ್ಲಿ ಕಳೆದ ಬಾರಿಯಂತೆ ಇಂಗ್ಲೆಂಡ್‍ನ ಬೆನ್ ಸ್ಟೋಕ್ಸ್ ದುಬಾರಿ ಆಟಗಾರನಾಗಿ ಹೊರ ಹೊಮ್ಮಿದ್ದು, 12. 5 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಭಾರತೀಯ ಆಟಗಾರರಲ್ಲಿ ವೇಗದ ಬೌಲರ್ ಜಯದೇವ್ ಉನಾದ್ಕತ್‍ಗೆ ಬಂಪರ್ ಮೊತ್ತ ಲಭಿಸಿದೆ. 11. 5 ಕೋಟಿಗೆ ಉನಾದ್ಕತ್ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಇದೇ ಮೊದಲ ನೇಪಾಳಿ ಆಟಗಾರನೊಬ್ಬ ಐಪಿಎಲ್‍ಗೆ ಎಂಟ್ರಿ ಪಡೆದಿದ್ದಾರೆ.

    ವೇಗದ ಬೌಲರ್ ಸಂದೀಪ್ ಲಮಿಚ್ಚಾನೆಗೆ ಮೂಲ ಬೆಲೆ 20 ಲಕ್ಷ ಕೊಟ್ಟು ಡೆಲ್ಲಿ ಡೇರ್‍ಡೆವಿಲ್ಸ್ ತಂಡಕ್ಕೆ ಸೇರಿಸಿಕೊಂಡಿದೆ. ಅದೇ ರೀತಿ ನಾಲ್ವರು ಅಫ್ಘನ್ ಆಟಗಾರರು ಇದೇ ಮೊದಲ ಬಾರಿಗೆ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಈ ಬಾರಿ ಅತಿ ಹೆಚ್ಚು ಬೆಲೆಗೆ ಮಾರಾಟವಾದವರ ಪಟ್ಟಿಯನ್ನು ನೋಡೋದಾದ್ರೆ..
    1. ಬೆನ್ ಸ್ಟೋಕ್ಸ್ – ರಾಜಸ್ಥಾನ ರಾಯಲ್ಸ್ – 12. 50 ಕೋಟಿ ರೂ.
    2. ಜಯದೇವ್ ಉನಾದ್ಕತ್ – ರಾಜಸ್ಥಾನ ರಾಯಲ್ಸ್ – 11. 50 ಕೋಟಿ ರೂ.
    3. ಮನೀಶ್ ಪಾಂಡೆ – ಸನ್‍ರೈಸರ್ಸ್ ಹೈದ್ರಾಬಾದ್ – 11 ಕೋಟಿ ರೂ.
    4. ಕೆ. ಎಲ್ ರಾಹುಲ್ – ಕಿಂಗ್ಸ್ ಇಲೆವೆನ್ ಪಂಜಾಬ್ – 11 ಕೋಟಿ ರೂ.
    5. ಕ್ರಿಸ್ ಲಿನ್ – ಕೋಲ್ಕತ್ತಾ ನೈಟ್ ರೈಡರ್ಸ್ – 9. 6 ಕೋಟಿ ರೂ.
    6. ಮಿಚೆಲ್ ಸ್ಟಾರ್ಕ್ – ಕೋಲ್ಕತ್ತಾ ನೈಟ್ ರೈಡರ್ಸ್ – 9.4 ಕೋಟಿ ರೂ.
    7. ಗ್ಲೇನ್ ಮ್ಯಾಕ್ಸ್ ವೆಲ್ – ಡೆಲ್ಲಿ ಡೇರ್‍ಡೆವಿಲ್ಸ್ – 9 ಕೋಟಿ ರೂ.
    8. ರಶೀದ್ ಖಾನ್ – ಸನ್‍ರೈಸರ್ಸ್ ಹೈದ್ರಾಬಾದ್ – 9 ಕೋಟಿ ರೂ.
    9. ಕೃನಾಲ್ ಪಾಂಡ್ಯ – ಮುಂಬೈ ಇಂಡಿಯನ್ಸ್ – 8.8 ಕೋಟಿ ರೂ.
    10. ಸಂಜು ಸ್ಯಾಮ್ಸನ್ – ರಾಜಸ್ಥಾನ ರಾಯಲ್ಸ್ – 8 ಕೋಟಿ ರೂ.
    11. ಕೇದಾರ್ ಜಾಧವ್ – ಚೆನ್ನೈ ಸೂಪರ್ ಕಿಂಗ್ಸ್ – 7.8 ಕೋಟಿ ರೂ.
    12. ಕೃಷ್ಣಪ್ಪ ಗೌತಮ್ – ರಾಜಸ್ಥಾನ ರಾಯಲ್ಸ್ – 6. 20 ಕೋಟಿ ರೂ.

    ಆಟಗಾರರ ಸಂಖ್ಯೆ – ತಂಡ – ವ್ಯಯಿಸಿದ ಮೊತ್ತ (ಕೋಟಿ ರೂ.ಗಳಲ್ಲಿ )
    25 – ಚೆನ್ನೈ ಸೂಪರ್ ಕಿಂಗ್ಸ್ – 73.5 ಕೋಟಿ ರೂ.
    25 – ಡೆಲ್ಲಿ ಡೇರ್‍ಡೆವಿಲ್ಸ್ – 78.4 ಕೋಟಿ ರೂ.
    25 – ಮುಂಬೈ ಇಂಡಿಯನ್ಸ್ – 79.35 ಕೋಟಿ ರೂ.
    25 – ಸನ್‍ರೈಸರ್ಸ್ ಹೈದ್ರಾಬಾದ್ – 79.35 ಕೋಟಿ ರೂ.
    24 – ರಾಯಲ್ ಚಾಲೆಂಜರ್ಸ್ – ಬೆಂಗಳೂರು 79.85 ಕೋಟಿ ರೂ.
    23 – ರಾಜಸ್ಥಾನ ರಾಯಲ್ಸ್ – 78.35 ಕೋಟಿ ರೂ.
    21 – ಕಿಂಗ್ಸ್ ಇಲೆವನ್ ಪಂಜಾಬ್ – 79.80 ಕೋಟಿ ರೂ.
    19 – ಕೋಲ್ಕತ್ತಾ ನೈಟ್ ರೈಡರ್ಸ್ – 80 ಕೋಟಿ ರೂ.

    ಒಬ್ಬ ಆಟಗಾರನಿಗೆ ಯಾವ ತಂಡ ಎಷ್ಟು ಲಕ್ಷ ರೂ. ಹಣ ಖರ್ಚು ಮಾಡಿದೆ?

  • ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಢಾಕಾ : ವೆಸ್ಟ್ ಇಂಡೀಸ್‍ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ತಮ್ಮ ಆಟದ ಮೂಲಕ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಹಲವು ಹೊಸ ವಿಶ್ವದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಫೈನಲ್ ಪಂದ್ಯದಲ್ಲಿ 18 ಸಿಕ್ಸರ್‍ಗಳನ್ನು ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೆ ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರನೆಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಈ ಹಿಂದೆ 2013ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಪರ ಕಣಕ್ಕಿಳಿದು ಪುಣೆ ವಾರಿಯರ್ಸ್ ವಿರುದ್ಧ 17 ಸಿಕ್ಸರ್ ಸಿಡಿಸಿ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ನಿರ್ಮಿಸಿದ್ದರು.

    ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ನಲ್ಲಿ ರಂಗ್ಪುರ್ ರೈಡರ್ಸ್ ಪರ ಕಣಕ್ಕಿಳಿದ ಗೇಲ್, ಕೇವಲ 69 ಎಸೆತಗಳಲ್ಲಿ 5 ಬೌಂಡರಿ ಮತ್ತು 18 ಸಿಕ್ಸರ್‍ಗಳ ನೆರವಿನಿಂದ 146 ರನ್ ಬಾರಿಸಿದ್ದಾರೆ. ಈ ಮೂಲಕ ಟಿ20 ಯಲ್ಲಿ 20 ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಗೇಲ್ ದಾಖಲೆಗಳು :
    – ಟಿ20 ಪಂದ್ಯದ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು 18 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ
    – ಟಿ20 ಮಾದರಿ ಫೈನಲ್ ಪಂದ್ಯದಲ್ಲಿ ಹೆಚ್ಚು ರನ್ (146 ರನ್, 69 ಎಸೆತ)ಹೊಡೆದ ಬ್ಯಾಟ್ಸ ಮನ್
    – ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರ
    – ಟಿ20 ಕ್ರಿಕೆಟ್‍ನಲ್ಲಿ 20 ಶತಕಗಳನ್ನು ಹೊಡೆದ ಮೊದಲ ಆಟಗಾರ
    – ಐಪಿಲ್, ಸಿಪಿಲ್, ಬಿಪಿಲ್ ಮತ್ತು ಟಿ20 ಮಾದರಿಯ ಲೀಗ್‍ಗಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಆಟಗಾರ.

    https://www.youtube.com/watch?v=D4bwutxZSk8

  • ಟಿ20 ಕ್ರಿಕೆಟ್ ಆಯ್ತು, ಬರ್ತಿದೆ ಟೆನ್-10 ಕ್ರಿಕೆಟ್!

    ಟಿ20 ಕ್ರಿಕೆಟ್ ಆಯ್ತು, ಬರ್ತಿದೆ ಟೆನ್-10 ಕ್ರಿಕೆಟ್!

    ಬೆಂಗಳೂರು: ಟೆಸ್ಟ್ ಕ್ರಿಕೆಟ್, 50 ಓವರ್ ಮ್ಯಾಚ್ ಗಳಂತೆ ಟಿ20 ಕ್ರಿಕೆಟ್ ಯುಗವೂ ಬೇಗನೇ ಮುಗಿಯುತ್ತಾ ಗೊತ್ತಿಲ್ಲ. ಆದರೆ ಈ ವರ್ಷಾಂತ್ಯಕ್ಕೆ ಟೆನ್-10 ಕ್ರಿಕೆಟ್ ಆಟ ಶುರುವಾಗಲಿದೆ. ಟೆನ್10 ಕ್ರಿಕೆಟ್ ಪಂದ್ಯದಲ್ಲಿ ದಿಗ್ಗಜರಾದ ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಶಾಹಿದ್ ಆಫ್ರಿದಿ ಮುಂತಾದವರೆಲ್ಲಾ ಬ್ಯಾಟ್ ಬೀಸಲಿದ್ದಾರೆ.

    ಯುಎಇಯಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕರ ಅವರು ಕೂಡಾ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

    ಟೆನ್ 10 ಮೊದಲ ಸೀಸನ್ ಕೇವಲ 4 ದಿನದ ಆಟದಲ್ಲಿ ಮುಗಿಯಲಿದೆ. ಡಿಸೆಂಬರ್ 21ರಿಂದ 24ರವರೆಗೆ ಈ ಪಂದ್ಯಾವಳಿ ನಡೆಯಲಿದ್ದು ಸುಮಾರು 20ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಇದು ಐಸಿಸಿ ಆಯೋಜಿಸಿರುವ ಟೂರ್ನಿ ಅಲ್ಲದಿದ್ದರೂ ಸದ್ಯ ಖ್ಯಾತಿ ಪಡೆದಿರುವ ಬಹುಪಾಲು ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿರೋದರಿಂದ ಜನರಿಗೆ ಮನರಂಜನೆ ಅಂತೂ ತಪ್ಪಿದ್ದಲ್ಲ.

    ಇದನ್ನೂ ಓದಿ: ನಾಳೆ ನಡೆಯಲಿರುವ ಭಾರತ, ಶ್ರೀಲಂಕಾ ಪಂದ್ಯಕ್ಕೆ ರಾಷ್ಟ್ರಗೀತೆ ಮೊಳಗಲ್ಲ ಯಾಕೆ?

  • ಗೇಲ್ 10 ಸಾವಿರ ರನ್- ಹೋಟೆಲ್‍ನಲ್ಲಿ ಆರ್‍ಸಿಬಿ ಸಂಭ್ರಮಾಚರಣೆ ಹೀಗಿತ್ತು: ವಿಡಿಯೋ ನೋಡಿ

    ಗೇಲ್ 10 ಸಾವಿರ ರನ್- ಹೋಟೆಲ್‍ನಲ್ಲಿ ಆರ್‍ಸಿಬಿ ಸಂಭ್ರಮಾಚರಣೆ ಹೀಗಿತ್ತು: ವಿಡಿಯೋ ನೋಡಿ

    ರಾಜ್‍ಕೋಟ್‍: ಟಿ 20 ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್‍ನ ಟಾಪ್ ಆಟಗಾರ, ಆರ್‍ಸಿಬಿಯ ಓಪನಿಂಗ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಐತಿಹಾಸಿಕ ಮೇಲಿಗಲ್ಲನ್ನು ಬರೆದಿದ್ದಾರೆ. ಚುಟುಕು ಕ್ರಿಕೆಟ್‍ನಲ್ಲಿ 10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕಿಗೆ ಗೇಲ್ ಈಗ ಪಾತ್ರರಾಗಿದ್ದಾರೆ.

    ಮಂಗಳವಾರ ಗುಜರಾತ್ ಲಯನ್ಸ್ ವಿರುದ್ಧ ರಾಜ್‍ಕೋಟ್‍ನಲ್ಲಿ ನಡೆದ ಪಂದ್ಯದಲ್ಲಿ 63 ರನ್ ಗಳಿಸಿದ ವೇಳೆ ಗೇಲ್ ಈ ಮೈಲಿಗಲ್ಲನ್ನು ಬರೆದಿದ್ದಾರೆ. ಈ ಪಂದ್ಯವನ್ನು ಆರ್‍ಸಿಬಿ 21 ರನ್‍ಗಳಿಂದ ಗೆದ್ದುಕೊಂಡಿದ್ದು, 38 ಎಸೆತದಲ್ಲಿ 77 ರನ್(5 ಬೌಂಡರಿ, 7 ಸಿಕ್ಸರ್) ಚಚ್ಚಿದ್ದ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಈ ಪಂದ್ಯಕ್ಕೂ ಮೊದಲು ನಡೆದ ಪಂದ್ಯಗಳಲ್ಲಿ ಗೇಲ್ 32, 6, 22 ರನ್‍ಗಳನ್ನು ಹೊಡೆದಿದ್ದರು. ಎರಡು ಪಂದ್ಯಗಳಿಂದ ಹೊರಗಡೆ ಉಳಿದಿದ್ದ ಕಾರಣ ಈ ಮೈಲಿಗಲ್ಲನ್ನು ಬರೆಯಲು ವಿಳಂಬವಾಗಿತ್ತು.

    ಗೇಲ್ ನಂತರದ ಸ್ಥಾನದಲ್ಲಿ 7,596 ರನ್ ಹೊಡೆದ ನ್ಯೂಜಿಲೆಂಡಿನ ಬ್ರೆಂಡಮ್ ಮೆಕ್ಕಲಂ ಇದ್ದರೆ 7,338 ರನ್‍ಗಳಿಸುವ ಮೂಲಕ ಬ್ರಾಡ್ ಹಾಡ್ಜ್ ಮೂರನೇ ಸ್ಥಾನದಲ್ಲಿ ಇದ್ದಾರೆ.

    ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕಗೆ ಸಚಿನ್ ಪಾತ್ರವಾಗಿದ್ದರೆ, ಟೆಸ್ಟ್ ನಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಸುನೀಲ್ ಗವಾಸ್ಕರ್ ಭಾಜನರಾಗಿದ್ದಾರೆ.

    10 ಸಾವಿರ ರನ್‍ಗಳ ಗಡಿಯನ್ನು ದಾಟಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಆರ್‍ಸಿಬಿ ತಂಗಿದ್ದ ಹೊಟೇಲ್‍ನಲ್ಲಿ ಸಂಭ್ರಮ ಮನೆ ಮಾಡಿತ್ತು. ಗೇಲ್ ಕೇಕ್ ಕತ್ತರಿಸಿ ಈ ಸಂಭ್ರಮವನ್ನು ಆಚರಿಸಿದರು.

    https://www.youtube.com/watch?v=nbJmczErrtM

  • ಮಂಗಳೂರಿನಲ್ಲಿ ಕ್ರಿಸ್ ಗೇಲ್ ಜೊತೆ ಸೆಲ್ಫೀಗೆ ಮುಗಿಬಿದ್ದ ಜನ!

    ಮಂಗಳೂರು: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಭಾನುವಾರ ಮಂಗಳೂರಿಗೆ ಆಗಮಿಸಿದ್ರು. ಸ್ಮಿರ್ನ್ ಆಫ್ ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆಗಾಗಿ ಮಂಗಳೂರಿನ ಜ್ಯೋತಿ ಸರ್ಕಲ್ ಬಳಿಯ ಬಲ್ಮಠದಲ್ಲಿರುವ ವೈನ್ ಗೇಟ್‍ಗೆ ಆಗಮಿಸಿದ ಸ್ಟಾರ್ ಆಟಗಾರ ಗೇಲ್‍ರನ್ನು ಮಂಗಳಾರತಿ ಎತ್ತಿ ತಿಲಕವಿಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ತದನಂತರ ಹೊಡಿಬಡಿ ಆಟಗಾರನಿಗೆ ಎಳನೀರು ನೀಡಿ ಸತ್ಕರಿಸಲಾಯಿತು. ವೈನ್ ಗೇಟ್ ಮುಖ್ಯಸ್ಥ ರಮೇಶ್ ನಾಯಕ್ ಹೂಗುಚ್ಛ ನೀಡಿ ಸ್ವಾಗತಿಸಿದರು.

    ಸ್ಮಿರ್ನ್ ಆಫ್ ಸಂಸ್ಥೆಯ ಕೆಂಪು ಬಣ್ಣದ ಟೀ ಶರ್ಟ್ ತೊಟ್ಟು ಆಗಮಿಸಿದ ಗೇಲ್, ಸ್ಮಿರ್ನ್ ಆಫ್ ಸಂಸ್ಥೆಯ ನೂತನ ಉತ್ಪನ್ನವೊಂದನ್ನು ಬಿಡುಗಡೆಗೊಳಿಸಿದ್ರು. ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಐಪಿಎಲ್ ಆಟಗಾರ ಗೇಲ್‍ರನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಮುಗಿಬಿದ್ದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಲು ಹರಸಾಹಸ ಪಟ್ಟುಕೊಂಡರು. ಅಭಿಮಾನಿಗಳು ಗೇಲ್ ಅವರಿಂದ ಬ್ಯಾಟ್‍ಗಳ ಮೇಲೆ ಆಟೋಗ್ರಾಫ್ ಪಡೆದರು. ಈ ವೇಳೆ ಖಾಸಗಿ ಹಾಗೂ ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಯಿತು.