Tag: Chris Gayle

  • ಚೋರ್ ಎಂದು ಕರೆಯುವುದನ್ನು ನಿಲ್ಲಿಸಿ: ನೆಟ್ಟಿಗರ ವಿರುದ್ಧ ಮಲ್ಯ ಕಿಡಿ

    ಚೋರ್ ಎಂದು ಕರೆಯುವುದನ್ನು ನಿಲ್ಲಿಸಿ: ನೆಟ್ಟಿಗರ ವಿರುದ್ಧ ಮಲ್ಯ ಕಿಡಿ

    ನವದೆಹಲಿ: ನನ್ನನ್ನು ಚೋರ್ ಎಂದು ಕರೆಯುವುದನ್ನು ನಿಲ್ಲಿಸಿ. ಮೊದಲು ಸತ್ಯ ಹಾಗೂ ವಾಸ್ತವ ಅರ್ಥ ಮಾಡಿಕೊಳ್ಳಿ ಎಂದು ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ನೆಟ್ಟಿಗರ ವಿರುದ್ಧ ಕಿಡಿಕಾರಿದ್ದಾರೆ.

    ನನ್ನ ನೆಚ್ಚಿನ ಗೆಳೆಯ ಹಾಗೂ ಯೂನಿವರ್ಸಲ್ ಬಾಸ್ ಎಂದು ವಿಜಯ್ ಮಲ್ಯ ವೆಸ್ಟ್ ಇಂಡೀಸ್‍ನ ಕ್ರಿಕೆಟರ್ ಕ್ರಿಸ್ ಗೇಲ್ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಕ್ರಿಸ್ ಗೇಲ್ ಅವರು ಕೂಡ ಅದೇ ಫೋಟೋವನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡು, ಬಿಗ್ ಬಾಸ್ ಗ್ರೇಟ್ ವಿಜಯ್ ಮಲ್ಯ ಅವರೊಂದಿಗಿನ ಅದ್ಭುತ ಕ್ಷಣ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋಗೆ ಅನೇಕ ನೆಟ್ಟಿಗರು ಚೋರ್ ಎಂದು ರೀ ಟ್ವೀಟ್ ಮಾಡಿದ್ದಾರೆ. ವಿಜಯ್ ಮಲ್ಯಗೆ ನಿಮ್ಮ ಖಾತೆಯ ಮಾಹಿತಿ ನೀಡಬೇಡಿ. ಅವರೊಂದಿಗೆ ಯಾವುದೇ ವಹಿವಾಟು ನಡೆಸಬೇಡಿ. ಭಾವನಾತ್ಮಕವಾಗಿ ನಿಮ್ಮ ಬಳಿಗೆ ಬಂದು ಸಾಲ ಕೇಳಿದರೆ ಕೊಡಬೇಡಿ ಎಂದು ಹಿರೆನ್ ಎಂಬವರು ರೀ ಟ್ವೀಟ್ ಮಾಡಿದ್ದಾರೆ.

    ವಿಜಯ್ ಮಲ್ಯ ಮೋಸಗಾರನೆಂದು ನಿಮಗೆ ತಿಳಿದಿದೆ. 9 ಸಾವಿರ ಕೋಟಿ ರೂ. ಸಾಲ ಮಾಡಿ ಭಾರತ ಬಿಟ್ಟು ಬಂದು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಿಗ್ ಬಾಸ್ ಎಂದು ಕರೆಯುವ ಮುನ್ನ ನಮ್ಮ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು ಸಮೀಂ ರಾಜಾ ಎಂಬವರು ಗೇಲ್ ಅವರನ್ನು ಕುಟುಕಿದ್ದಾರೆ.

    https://twitter.com/tige7r_/status/1150072213686476800

    ನೆಟ್ಟಿಗರ ಟ್ವೀಟ್‍ನಿಂದ ಬೇಸತ್ತು ರೀಟ್ವೀಟ್ ಮಾಡಿರುವ ವಿಜಯ್ ಮಲ್ಯ, ನನ್ನನ್ನು ಚೋರ್ ಎಂದು ಕರೆಯುವವರು ಮೊದಲು ಸತ್ಯ ಹಾಗೂ ವಾಸ್ತವತೆಯನ್ನು ಅರಿತು ಮಾತನಾಡಿದರೆ ಒಳ್ಳೆಯದು. ನಿಮ್ಮ ಬ್ಯಾಂಕುಗಳಿಗೆ ಪೂರ್ತಿ ಸಾಲ ಮರುಪಾವತಿ ಮಾಡುತ್ತೇನೆ ಎಂದು ಕಳೆದ ಒಂದು ವರ್ಷದಿಂದ ಹೇಳುತ್ತಾ ಬಂದಿದ್ದೇನೆ. ಆದರೆ ಅದನ್ನು ಅವರು ಪಡೆದುಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಬ್ಯಾಂಕ್‍ಗಳನ್ನು ಪ್ರಶ್ನಿಸಿ. ನಂತರ ಯಾರು ಚೋರ್ ಎಂದು ನಿರ್ಧರಿಸಿ ಎಂದು ಗುಡುಗಿದ್ದಾರೆ.

  • ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗೇಲ್ ವಿದಾಯ – ಭಾರತದ ವಿರುದ್ಧವೇ ಕೊನೆಯ ಪಂದ್ಯ

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಗೇಲ್ ವಿದಾಯ – ಭಾರತದ ವಿರುದ್ಧವೇ ಕೊನೆಯ ಪಂದ್ಯ

    ಲಂಡನ್: ತಮ್ಮ ಬಿರುಸಿನ ಹೊಡೆತಗಳ ಮೂಲಕವೇ ಕ್ರಿಕೆಟ್ ಅಂಗಳದಲ್ಲಿ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಭಾರತ ವಿರುದ್ಧ ನಡೆಯಲಿರುವ ಸರಣಿ ಗೇಲ್ ಅವರ ಅಂತಿಮ ಪಂದ್ಯವಾಗಲಿದೆ. ಭಾರತ ವಿರುದ್ಧದ ಸರಣಿ ಬಳಿಕ ಗೇಲ್ ನಿವೃತ್ತಿ ಪಡೆಯೋದು ಬಹುತೇಕ ಖಚಿತವಾಗಿದೆ.

    ಈ ಮೊದಲು ಗೇಲ್ ವಿಶ್ವಕಪ್ ಪಂದ್ಯಗಳಲ್ಲಿ ಕೊನೆಯದಾಗಿ ಆಡಲಿದ್ದೇನೆ ಎಂದು ತಿಳಿಸಿದ್ದರು. ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಸ್ ಗೇಲ್, ಇದೇ ಅಂತ್ಯವೇನಲ್ಲ. ನಾನು ಇನ್ನೂ ಕೆಲ ಪಂದ್ಯ ಆಡಲು ಸಮರ್ಥನಿದ್ದು, ಮುಂದಿನ ದಿನಗಳಲ್ಲಿಯೂ ಆಡಲಿದ್ದೇನೆ. ಬಹುಶಃ ಒಂದೇ ಸರಣಿ ಆಡಬಹುದು. ಭವಿಷ್ಯದಲ್ಲಿ ಏನಾಗುತ್ತೆ ಎಂಬುದನ್ನು ಯಾರು ತಿಳಿಯಲಾರರು. ಭಾರತ ವಿರುದ್ಧ ಟೆಸ್ಟ್ ಮತ್ತು ಏಕದಿನ ಪಂದ್ಯ ಮಾತ್ರ ಆಡಲಿದ್ದು, ಟಿ20 ಸಿರೀಸ್ ನಲ್ಲಿ ಆಡಲ್ಲ. ವಿಶ್ವಕಪ್ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸಲಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಮಾತನಾಡಿದ ವೆಸ್ಟ್ ಇಂಡೀಸ್ ಮಾಧ್ಯಮ ವ್ಯವಸ್ಥಾಪಕ ಫಿಲಿಪ್ ಸ್ಪೂನರ್, ಭಾರತದ ವಿರುದ್ಧದ ಸರಣಿಯೇ ಗೇಲ್ ಅವರ ಕೊನೆಯ ಪಂದ್ಯವಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ಸರಣಿ ಆಗಸ್ಟ್ ನಿಂದ ಸೆಪ್ಟೆಂಬರ್ ವರೆಗೆ ನಡೆಯಲಿದೆ. ಸರಣಿ ಆಗಸ್ಟ್ 3ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 3ಕ್ಕೆ ಅಂತ್ಯವಾಗಲಿದೆ.

    1999ರಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧವೇ ಗೇಲ್ ಕಣಕ್ಕಿಳಿದಿದ್ದರು. 39 ವರ್ಷದ ಎಡಗೈ ಬ್ಯಾಟ್ಸ್‍ಮ್ಯಾನ್ ಕ್ರಿಸ್ ಗೇಲ್ 103 ಟೆಸ್ಟ್ ಪಂದ್ಯಗಳನ್ನಾಡಿದ್ದು, 42.19ರ ಸರಾಸರಿಯಲ್ಲಿ 7,215 ರನ್ (3 ದ್ವಿಶತಕ, 15 ಶತಕ, 37 ಅರ್ಧಶತಕ) ಕಲೆಹಾಕಿದ್ದಾರೆ. 294 ಏಕದಿನ ಪಂದ್ಯದಲ್ಲಿ 10,345 ರನ್ (ದ್ವಿಶತಕ 1, 25 ಶತಕ, 53 ಅರ್ಧ ಶತಕ), 58 ಟಿಟ್ವೆಂಟಿ ಮ್ಯಾಚ್ ಗಳಲ್ಲಿ 1627 ರನ್ (2 ಶತಕ, 13 ಅರ್ಧ ಶತಕ) ಹೊಡೆದಿದ್ದಾರೆ.

  • ಐಪಿಎಲ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಿದ ಗೇಲ್

    ಐಪಿಎಲ್ ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಿಸಿದ ಗೇಲ್

    ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಟಾರ್ ಆಟಗಾರ ಕ್ರಿಸ್ ಗೇಲ್ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಐಪಿಎಲ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಐಪಿಎಲ್ ಲೀಗ್‍ನಲ್ಲಿ ಗೇಲ್ ಇದುವರೆಗೂ 302 ಸಿಕ್ಸರ್ ಗಳನ್ನು ಸಿಡಿಸಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸಿ ಸಂಖ್ಯೆಯನ್ನು 302ಕ್ಕೆ ಹೆಚ್ಚಳ ಮಾಡಿದರು.

    ಈ ಪಟ್ಟಿಯಲ್ಲಿ ಬೇರೆ ಯಾವುದೇ ಆಟಗಾರ ಸಮೀಪದ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ. 2ನೇ ಸ್ಥಾನದಲ್ಲಿರುವ ಎಬಿಡಿ ವಿಲಿಯರ್ಸ್ 192 ಸಿಕ್ಸರ್, 187 ಸಿಕ್ಸರ್ ಗಳೊಂದಿಗೆ ಧೋನಿ 3ನೇ ಸ್ಥಾನ ಪಡೆದಿದ್ದಾರೆ. 4ನೇ ಸ್ಥಾನದಲ್ಲಿ 186 ಸಿಕ್ಸರ್ ಗಳೊಂದಿಗೆ ಸುರೇಶ್ ರೈನಾ ಇದ್ದಾರೆ.

    ಗೇಲ್ ತಮ್ಮ ಮೊದಲ ಸಿಕ್ಸರ್ ಗಳ ಶತಕವನ್ನು 37 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದರು. ಆ ಬಳಿಕ 69ನೇ ಇನ್ನಿಂಗ್ಸ್ ವೇಳೆ ಸಿಕ್ಸರ್ ದ್ವಿಶತಕದ ಹಾಗೂ 144 ಇನ್ನಿಂಗ್ಸ್ ವೇಳೆಗೆ ಸಿಕ್ಸರ್ ಗಳ ತ್ರಿಶತಕ ದಾಖಲೆ ನಿರ್ಮಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗೇಲ್ 24 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 40 ರನ್ ಗಳಿಸಿ ಔಟಾದರು.

    ಕೆಎಲ್ ರಾಹುಲ್ ಅರ್ಧ ಶತಕ: ಮುಂಬೈ ಇಂಡಿಯನ್ಸ್ ನೀಡಿದ 177 ರನ್ ಗಳ ಸವಾಲಿನ ಗುರಿಯನ್ನು ಪಂಜಾಬ್ ಸುಲಭವಾಗಿ ಬೆನ್ನತ್ತಿ 18.4 ಓವರ್ ಗಳಲ್ಲಿ ಗೆಲುವು ಪಡೆಯಿತು. ಪಂಜಾಬ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೆಎಲ್ ರಾಹುಲ್ 6ಬೌಂಡರಿ, ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಸಿಡಿಸಿದರು. ಇತ್ತ ಮಯಾಂಕ್ ಕೂಡ 43 ರನ್ ಗಳಿಸಿ ಗಮನ ಸೆಳೆದರು.

  • ಸಿಕ್ಸರ್‌ಗಳ ಸುರಿಮಳೆ: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದ ಗೇಲ್

    ಸಿಕ್ಸರ್‌ಗಳ ಸುರಿಮಳೆ: ಒಂದೇ ಪಂದ್ಯದಲ್ಲಿ 3 ವಿಶ್ವದಾಖಲೆ ಬರೆದ ಗೇಲ್

    ಬ್ರಿಡ್ಜ್‌ಟೌನ್: ವೆಸ್ಟ್ಇಂಡೀಸ್ ಆರಂಭಿಕ ಆಟಗಾರ ಕ್ರಿಸ್ ಗೇಲ್ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದು 2 ವಿಶ್ವದಾಖಲೆ ಬರೆದಿದ್ದಾರೆ.

    ಈ ಪಂದ್ಯದಲ್ಲಿ 12 ಸಿಕ್ಸರ್ ಸಿಡಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ 3 ಬಾರಿ 10ಕ್ಕೂ ಹೆಚ್ಚು ಸಿಕ್ಸ್ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದರ ಜೊತೆಯಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆಯನ್ನ ತಮ್ಮ ಹೆಸರಿಗೆ ಗೇಲ್ ವರ್ಗಾಯಿಸಿಕೊಂಡಿದ್ದಾರೆ.

    39 ವರ್ಷದ ಗೇಲ್ ಕಳೆದ ವರ್ಷದ ಮಾರ್ಚ್ ನಲ್ಲಿ ಯುಎಇ ವಿರುದ್ಧ 11 ಸಿಕ್ಸ್ ಸಿಡಿಸಿದ್ದರೆ, 2015ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 16 ಸಿಕ್ಸ್ ಚಚ್ಚಿದ್ದರು.

    ಯಾರು ಎಷ್ಟು ಸಿಕ್ಸ್ ಹೊಡೆದಿದ್ದಾರೆ?
    ಏಕದಿನದಲ್ಲಿ ಗೇಲ್ 479 ಸಿಕ್ಸ್ ಹೊಡೆಯುವ ಮೂಲಕ ಈಗ ಅಗ್ರಸ್ಥಾನಕ್ಕೆ ಏರಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ 476, ನ್ಯೂಜಿಲೆಂಡಿನ ಬ್ರೆಂಡನ್ ಮೆಕ್ಕಲಂ 398 ಸಿಕ್ಸ್ ಹೊಡೆಯುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಟಿ20ಯಲ್ಲೂ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ. ಗೇಲ್ 905 ಸಿಕ್ಸ್ ಹೊಡೆದಿದ್ದರೆ, ವೆಸ್ಟ್ ಇಂಡೀಸಿನ ಕಿರಾನ್ ಪೊಲಾರ್ಡ್ 563, ಮೆಕ್ಕಲಂ 485 ಸಿಕ್ಸ್ ಚಚ್ಚಿದ್ದಾರೆ.

    ಇದರ ಜೊತೆಯಲ್ಲೇ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಗೇಲ್ ಇಂಗ್ಲೆಂಡ್ ವಿರುದ್ಧ 100 ಸಿಕ್ಸ್ ಹೊಡೆದಿದ್ದಾರೆ. 31 ಏಕದಿನದಲ್ಲಿ 57 ಸಿಕ್ಸ್, 11 ಟಿ20ಯಲ್ಲಿ 28 ಸಿಕ್ಸ್, 20 ಟೆಸ್ಟ್ ಪಂದ್ಯಗಳಲ್ಲಿ 15 ಸಿಕ್ಸ್ ಹೊಡೆದಿದ್ದಾರೆ. ಈ ಮೂಲಕ ತಂಡವೊಂದರ ವಿರುದ್ಧ 100 ಸಿಕ್ಸರ್ ಹೊಡೆದ ಮೊದಲ ಆಟಗಾರ ಎನ್ನುವ ಮತ್ತೊಂದು ದಾಖಲೆಗೆ ಪಾತ್ರರಾಗಿದ್ದಾರೆ.

    ಸಿಕ್ಸರ್‌ಗಳ ಸುರಿಮಳೆ:
    ಆರಂಭಿಕರಾಗಿ ಅಂಗಳಕ್ಕೆ ಇಳಿದ ಗೇಲ್ 76 ಎಸೆತಗಳಲ್ಲಿ 50 ರನ್(2 ಬೌಂಡರಿ, 3 ಸಿಕ್ಸ್) ಹೊಡೆದಿದ್ದರೆ ನಂತರ ಕೇವಲ 24 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ 50 ರನ್ ಚಚ್ಚಿದ್ದರು. 100 ರನ್(3 ಬೌಂಡರಿ, 9 ಸಿಕ್ಸ್) ಹೊಡೆದ ಬಳಿಕ ಅಂತಿಮವಾಗಿ 135 ರನ್(129 ಎಸೆತ, 3 ಬೌಂಡರಿ, 12 ಸಿಕ್ಸ್) ಗಳಿಸಿ ತಂಡದ ಮೊತ್ತ 317 ರನ್ ಆಗಿದ್ದಾಗ 6ನೇಯವರಾಗಿ ಔಟಾದರು.

    ಕ್ರಿಸ್ ಗೇಲ್ ಉತ್ತಮ ಆಟದಿಂದಾಗಿ ವೆಸ್ಟ್ ಇಂಡೀಸ್ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಿದ್ದರೂ ಇಂಗ್ಲೆಂಡ್ ಈ ಮೊತ್ತವನ್ನು ಚೇಸ್ ಮಾಡಿ 6 ವಿಕೆಟ್ ಗಳ ಜಯವನ್ನು ಗಳಿಸಿದೆ. ಆರಂಭಿಕ ಆಟಗಾರ ಜೇಸನ್ ರೇ 123 ರನ್(85 ಎಸೆತ, 15 ಬೌಂಡರಿ, 3 ಸಿಕ್ಸ್), ಜೋ ರೂಟ್ 102 ರನ್(97 ಎಸೆತ, 9 ಬೌಂಡರಿ) ಸಿಡಿಸಿದ ಪರಿಣಾಮ ಇಂಗ್ಲೆಂಡ್ 48.4 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 364 ರನ್ ಗಳಿಸಿ ಗುರಿಮುಟ್ಟಿತು. ಸ್ಫೋಟಕ ಶತಕ ಸಿಡಿಸಿದ ಜೇಸನ್ ರೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಸ್ಟ್ರೇಲಿಯಾ ಮಾಧ್ಯಮದ ವಿರುದ್ಧ ಕಾನೂನು ಸಮರ ಸಾರಿ ಗೆದ್ದ ಕ್ರಿಸ್ ಗೇಲ್

    ಆಸ್ಟ್ರೇಲಿಯಾ ಮಾಧ್ಯಮದ ವಿರುದ್ಧ ಕಾನೂನು ಸಮರ ಸಾರಿ ಗೆದ್ದ ಕ್ರಿಸ್ ಗೇಲ್

    ಸಿಡ್ನಿ : ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ರಿಸ್ ಗೇಲ್ ಆಸ್ಟ್ರೇಲಿಯಾ ಮಾಧ್ಯಮ ವಿರುದ್ಧ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಜಯ ಪಡೆದಿದ್ದು, ಈ ಕುರಿತು ತೀರ್ಪು ನೀಡಿರುವ ಕೋರ್ಟ್ ಗೇಲ್‍ಗೆ 3,00,000 ಆಸ್ಟ್ರೇಲಿಯನ್ ಡಾಲರ್ ಹಣ (ಸುಮಾರು 2.10 ಕೋಟಿ ರೂ.) ಪಾವತಿ ಮಾಡಬೇಕು ಎಂದು ಆದೇಶಿಸಿದೆ.

    2015ರಲ್ಲಿ ವಿಶ್ವಕಪ್ ವೇಳೆ ಕ್ರಿಸ್‍ಗೇಲ್ ತಂಗಿದ್ದ ಡ್ರೆಸ್ಸಿಂಗ್ ಕೊಠಡಿಗೆ ಆಗಮಿಸಿದ ಮಹಿಳಾ ಮಸಾಜ್ ಥೆರಪಿಸ್ಟ್ ನೊಂದಿಗೆ ಗೇಲ್ ಆಸಭ್ಯವಾಗಿ ವರ್ತಿಸಿದ್ದರು. ಅಲ್ಲದೇ ಮಹಿಳೆಗೆ ಗೇಲ್ ತಮ್ಮ ಜನನಾಂಗವನ್ನು ತೋರಿಸಿದ್ದರು ಎಂದು ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿತ್ತು.

    ತನ್ನ ಮೇಲಿನ ಈ ನಿರಾಕರಿಸಿದ್ದ ಗೇಲ್ ಯಾವುದೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿಲ್ಲ. ತಮ್ಮ ಡ್ರೆಸ್ಸಿಂಗ್ ಕೊಠಡಿಯಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ಮಾಧ್ಯಮಗಳು ನಮ್ಮ ಮೇಲೆ ಇಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದರು.

    ತಮ್ಮ ವಿರುದ್ಧ ವರದಿ ಮಾಡಿದ್ದ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದ ಗೇಲ್ ವಿಚಾರಣೆ ಎದುರಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಈ ಸುದ್ದಿಗೆ ಸಂಬಂಧಿಸಿದ ಸಾಕ್ಷ್ಯವನ್ನು ಒದಗಿಸುವಲ್ಲಿ ವಿಫಲವಾಗಿತ್ತು.

    ಪ್ರಕರಣದ ವಿಚಾರಣೆ ನಡೆಸಿದ ಆಸ್ಟ್ರೇಲಿಯಾದ ದಕ್ಷಿಣ ವೇಲ್ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಲ್ಯೂಸಿ ಮೆಕಲಮ್, ಮಾಧ್ಯಮ ವರದಿಗಳಿಂದ ಗೇಲ್ ಅವರ ಗೌರವಕ್ಕೆ ಧಕ್ಕೆಯಾಗಿದೆ ಎಂದು ತೀರ್ಪು ನೀಡಿ ಪರಿಹರವಾಗಿ 221,00 ಡಾಲರ್ ನೀಡಬೇಕೆಂದು ಆದೇಶಿಸಿದ್ದಾರೆ.

    ಆಸೀಸ್ ಮಾಧ್ಯಮಗಳು ವರದಿ ಮಾಡಿದ್ದ ಘಟನೆ ವೇಳೆ ಗೇಲ್‍ರ ಡ್ರೆಸ್ಸಿಂಗ್ ರೂಮಿನಲ್ಲಿ ದಕ್ಷಿಣ ಆಫ್ರಿಕಾದ ಡ್ವೇನ್ ಸ್ಮಿತ್ ಕೂಡ ತಂಗಿದ್ದರು. ಅಲ್ಲದೇ ಮಾಧ್ಯಮಗಳು ವರದಿ ಸುಳ್ಳು. ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಡ್ವೇನ್ ಸ್ಮಿತ್ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಎರಡು ದಾಖಲೆ ಮುರಿದ ರೋ`ಹಿಟ್’ ಶರ್ಮಾ

    ಇಂದೋರ್: 2018 ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಬಳಗ ಉತ್ತಮ ಆರಂಭ ಪಡೆದಿದ್ದರು, ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ.

    ಪಂಜಾಬ್ ವಿರುದ್ಧದ ಗೆಲುವುನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 300 ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೇ ಐಪಿಎಲ್ ಚೇಸಿಂಗ್ ವೇಳೆ ಗೆಲುವು ಪಡೆದ ತಂಡದ ಪರ 17 ಬಾರಿ ಔಟಾಗದೆ ಉಳಿದ ಆಟಗಾರ ಎಂಬ ದಾಖಲೆಯನ್ನು ಬರೆದರು.

    ರೋಹಿತ್ ಶರ್ಮಾ ಒಟ್ಟಾರೆ ಟಿ20 ಮಾದರಿಯಲ್ಲಿ 300 ಸಿಕ್ಸರ್ ಸಿಡಿಸಿದ್ದು, ಅಂತರಾಷ್ಟ್ರೀಯ ಹಾಗೂ ದೇಶಿಯ ಟೂರ್ನಿಗಳಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ಕ್ರಿಸ್ ಗೇಲ್ (844 ಸಿಕ್ಸರ್) ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಚೇಸಿಂಗ್ ವೇಳೆ 16 ಬಾರಿ ನಾಟೌಟ್ ಆಗಿ ಉಳಿದಿದ್ದ ಗೌತಮ್ ಗಂಭೀರ್ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ.

    ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ 9 ಪಂದ್ಯಗಳಿಂದ 6 ಅಂಕ ಪಡೆದು 5ನೇ ಸ್ಥಾನ ಪಡೆದಿದೆ. ಪಂಜಾಬ್ ವಿರುದ್ಧ ಕಣಕ್ಕೆ ಇಳಿಯಲು ಅವಕಾಶ ಪಡೆದ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಅರ್ಧ ಶತಕ ಸಿಡಿಸಿದ್ದರು. 47 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಮಿಂಚಿದರು.

  • ಆರ್‌ಸಿಬಿ ತಂಡದಿಂದ ಡ್ರಾಪ್ ಆದ ಸತ್ಯ ಬಿಚ್ಚಿಟ್ಟ ಕ್ರಿಸ್ ಗೇಲ್

    ಆರ್‌ಸಿಬಿ ತಂಡದಿಂದ ಡ್ರಾಪ್ ಆದ ಸತ್ಯ ಬಿಚ್ಚಿಟ್ಟ ಕ್ರಿಸ್ ಗೇಲ್

    ಮೊಹಾಲಿ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಯ್ಕೆಗಾರರು ಐಪಿಎಲ್ 11 ನೇ ಆವೃತ್ತಿಗೆ ತನ್ನನ್ನು ಉಳಿಸಿಕೊಳ್ಳುವ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಆದ್ರೆ ಬಳಿಕ ಅವರು ತನ್ನನ್ನು ಸಂಪರ್ಕಿಸಲಿಲ್ಲ. ಇದರಿಂದ ತನಗೆ ನಿರಾಸೆ ಅನುಭವ ಉಂಟಾಗಿತ್ತು ಎಂದು ಕಿಂಗ್ಸ್ ಇಲೆವೆನ್ ತಂಡ ಹಾಗೂ ಕೆರೆಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.

    ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಮೊದಲು ಆರ್‌ಸಿಬಿ ತಂಡದ ಆಯ್ಕೆ ಸಮಿತಿ ತನ್ನನ್ನು ಉಳಿಸಿಕೊಳ್ಳುವುದಾಗಿ ಮಾಹಿತಿ ನೀಡಿತ್ತು. ಆದರೆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಆದರೆ ಈ ಕುರಿತು ಯಾರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ತಾನು ಈ ಹಿಂದಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಇದಕ್ಕೆ ಸಾಕ್ಷಿ ಎಂಬಂತೆ 21 ಶತಕ ಹಾಗೂ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದೇನೆ ಎಂದರು.

    ಸೆಹ್ವಾಗ್ ಅಚ್ಚರಿ ಆಯ್ಕೆ: ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ವೇಳೆ ತನ್ನನ್ನು ಎರಡು ಬಾರಿಯೂ ಆಯ್ಕೆ ಮಾಡಿರಲಿಲ್ಲ. ಆದರೆ ಮೂರನೇ ಬಾರಿ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಅವಕಾಶ ನೀಡಿದ್ದರು. ಇದು ತನಗೆ ಅಚ್ಚರಿ ಮೂಡಿಸಿತ್ತು. ಈ ಮೊದಲು ತಾನು ಟೂರ್ನಿಗೆ ಅಗತ್ಯವಿಲ್ಲ `ಇಟ್ಸ್ ಫೈನ್’ ಎಂದು ಸಮಾಧಾನಗೊಂಡಿದ್ದೆ ಎಂದು ಹೇಳಿದರು.

    ಕಪ್ ಗೆಲ್ಲಬೇಕು: ಈ ಬಾರಿಯ ಟೂರ್ನಿಯಲ್ಲಿ ತಾನು ಕೇವಲ ಒಂದು ಉದ್ದೇಶ ಹೊಂದಿದ್ದೇನೆ. ಅದು ಪಂಜಾಬ್ ಕಪ್ ಗೆಲ್ಲುವಂತೆ ಮಾಡುವುದು. ತಂಡದ ಮಾಲೀಕರಾದ ಪ್ರೀತಿ ಜಿಂಟಾ ಅವರಿಗೆ ಕಪ್ ಗೆದ್ದು ನೀಡುತ್ತೇವೆ. ಇದಾದ ಬಳಿಕ 2019 ರ ವಿಶ್ವಕಪ್ ಅನ್ನು ತನ್ನ ದೇಶಕ್ಕೆ ಗೆಲ್ಲಿಸಿಕೊಡ ಬೇಕಿದೆ. ಆದ್ರೆ ವಿಶ್ವಕಪ್ ಗೆ ಆಯ್ಕೆಯಾಗಲು ಸಾಕಷ್ಟು ಹೋರಾಟ ನಡೆಸಬೇಕಾಯಿತು ಎಂದು ಹೇಳಿದರು.

    ಕಳೆದ 10 ಐಪಿಎಲ್ ಟೂರ್ನಿಗಳಲ್ಲಿ ಗೇಲ್ 6 ಶತಕಗಳನ್ನು ಒಳಗೊಂಡಂತೆ 3,878 ರನ್ ಗಳಿಸಿದ್ದಾರೆ. 11 ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿರುವ ಗೇಲ್ ಈಗಾಗಲೇ ಹೈದರಾಬಾದ್ ವಿರುದ್ಧ ಸ್ಫೋಟಕ ಶತಕ (106 ರನ್) ಸಿಡಿಸಿದ್ದು, ಇದುವರೆಗೂ ಆಡಿರುವ ಪಂದ್ಯಗಳಲ್ಲಿ 161.53 ಸ್ಟ್ರೈಕ್ ರೇಟ್ ನಲ್ಲಿ 252 ರನ್ ಸಿಡಿಸಿದ್ದಾರೆ.

  • ಕೊನೆ ಕ್ಷಣದಲ್ಲಿ ಗೇಲ್‍ರನ್ನು ಖರೀದಿಸಿದ ಸ್ವಾರಸ್ಯಕರ ಗುಟ್ಟು ಬಿಚ್ಚಿಟ್ಟ ಕಿಂಗ್ಸ್ ಇಲೆವೆನ್ 

    ಕೊನೆ ಕ್ಷಣದಲ್ಲಿ ಗೇಲ್‍ರನ್ನು ಖರೀದಿಸಿದ ಸ್ವಾರಸ್ಯಕರ ಗುಟ್ಟು ಬಿಚ್ಚಿಟ್ಟ ಕಿಂಗ್ಸ್ ಇಲೆವೆನ್ 

    ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆರಿಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ರನ್ನು ಖರೀದಿಸಲು ಅವರ ಬಳಿ ಹಣದ ಕೊರತೆ ಎದುರಾಗಿದ್ದ ಸಂಗತಿಯನ್ನು ತಂಡದ ಸಹ ಮಾಲೀಕರಾಗಿರುವ ನೆಸ್ ವಾಡಿಯಾ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಪಂಜಾಬ್ ತಂಡ ಕ್ರಿಸ್ ಗೇಲ್ ರನ್ನು ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿದ ಸಂಗತಿ ಎಲ್ಲರಿಗೂ ತಿಳಿದ ಸಂಗತಿ. ಆದರೆ ಪಂಜಾಬ್ ತಂಡ ಗೇಲ್ ರನ್ನು ಖರೀದಿಸುವ ಮುನ್ನ ಅವರನ್ನು ಎರಡು ಬಾರಿ ಯಾವ ತಂಡವೂ ಖರೀದಿಸಲಿಲ್ಲ. ಮೂರನೇ ಬಾರಿ ಅವರ ಹೆಸರನ್ನು ಕರೆದ ವೇಳೆ ನಾವು ಖರೀದಿಸಿದ್ದಾಗಿ ಹೇಳಿದ್ದಾರೆ.

    ಇದಕ್ಕೂ ಮುನ್ನವೇ ಬೇರೆ ಯಾವುದೇ ತಂಡ ಅವರನ್ನು ಖರೀದಿಸಿದ್ದರೆ ನಮ್ಮ ತಂಡ ಸೇರುವ ಅವಕಾಶ ಕೈ ತಪ್ಪುತ್ತಿತ್ತು. ಗೇಲ್ ರ ಮೂಲ ಬೆಲೆಗೆ ಅವರನ್ನು ಖರೀದಿಸಿದ ವೇಳೆ ನಮ್ಮ ಬಳಿ ಕೇವಲ 2.1 ಕೋಟಿ ರೂ ಮಾತ್ರ ಉಳಿದಿತ್ತು ಎಂಬ ಸತ್ಯವನ್ನು ತಿಳಿಸಿದ್ದಾರೆ. ಅಂದ ಹಾಗೇ ಪಂಜಾಬ್ ತಂಡ ಈ ಬಾರಿ ನಿಗದಿಪಡಿಸಿದ್ದ ಒಟ್ಟು ಮೊತ್ತ 67.5 ಕೋಟಿ ರೂ. ಪೈಕಿ ಕೇವಲ 10 ಲಕ್ಷವನ್ನು ಮಾತ್ರ ಹಾಗೇ ಉಳಿಸಿಕೊಂಡಿದೆ.

    ಪಂಜಾಬ್ ತಂಡ ತಮ್ಮನ್ನು ಆಯ್ಕೆ ಮಾಡಿರುವುದು ಸರಿ ಎಂದು ತೋರಿಸಿಕೊಟ್ಟಿರುವ ಗೇಲ್ ಈ ಟೂರ್ನಿಯಲ್ಲಿ ಈಗಾಗಲೇ ಒಂದು ಶತಕ ಹಾಗೂ ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಈ ಮೂಲಕ ತಮ್ಮನ್ನು ಖರೀದಿಸಲು ಹಿಂದೇಟು ಹಾಕಿದ್ದ ಫ್ರಾಂಚೈಸಿಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಪಂಜಾಬ್ ತಂಡಕ್ಕೆ ಆಯ್ಕೆಯಾಗಲು ಕಾರಣವಾಗಿದ್ದ ಸೆಹ್ವಾಗ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

    ತಂಡದ ಮೊತ್ತೊಬ್ಬ ಆಟಗಾರ ಯುವರಾಜ್ ಸಿಂಗ್ ಕುರಿತು ಪ್ರತಿಕ್ರಿಯೆ ನೀಡಿರುವ ವಾಡಿಯಾ, ಇದೂವರೆಗಿನ ಪಂದ್ಯಗಳಲ್ಲಿ ಯುವಿ ಉತ್ತಮ ಪ್ರದರ್ಶನ ನೀಡದೆ ಇದ್ದರೂ, ಮುಂದಿನ ಪಂದ್ಯಗಳಲ್ಲಿ ಮಿಂಚುವ ವಿಶ್ವಾಸವಿದೆ ಎಂದು ತಿಳಿಸಿದರು. ಅಲ್ಲದೇ ತಂಡಕ್ಕೆ ಭಾರತೀಯ ಆಟಗಾರ ನಾಯಕರಾಗುವ ಇಚ್ಛೆ ಇತ್ತು, ಅಶ್ವಿನ್ ಮೂಲಕ ಇದು ಸಾಧ್ಯವಾಗಿದೆ ಎಂದರು.

  • ಗೇಲ್ ಶತಕದ ಅಬ್ಬರಕ್ಕೆ ಯುವಿ ಗಂಗ್ನಮ್ ಡ್ಯಾನ್ಸ್ ಸಂಭ್ರಮ – ವಿಡಿಯೋ ನೋಡಿ

    ಗೇಲ್ ಶತಕದ ಅಬ್ಬರಕ್ಕೆ ಯುವಿ ಗಂಗ್ನಮ್ ಡ್ಯಾನ್ಸ್ ಸಂಭ್ರಮ – ವಿಡಿಯೋ ನೋಡಿ

    ಮೊಹಾಲಿ: ಇಲ್ಲಿನ ಪಂಜಾಬ್ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್ ಭರ್ಜರಿ ಶತಕ ಸಿಡಿಸಿದರೆ, ಪೆವಿಲಿಯನ್ ನಲ್ಲಿ ಕುಳಿತಿದ್ದ ಯುವರಾಜ್ ಗಂಗ್ನಮ್ ಸ್ಟೈಲ್ ನಲ್ಲಿ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

    ಪಂದ್ಯದಲ್ಲಿ 61ನೇ ಎಸೆತದಲ್ಲಿ 1 ರನ್ ಗಳಿಸುವ ಮೂಲಕ ಗೇಲ್ ಶತಕ ಪೂರೈಸಿದರು. ಈ ವೇಳೆ ಯುವಿ ಗಂಗ್ನಮ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಪಂಜಾಬ್ ತಂಡದ ಮಾಲೀಕರಾಗಿರುವ ನಟಿ ಪ್ರೀತಿ ಜಿಂಟಾ ಸಹ ವಿಐಪಿ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದರು. ಪಂದ್ಯದ ಬಳಿಕವೂ ಗೇಲ್ ರ ಶತಕದ ಸಂಭ್ರಮದ ಆಚರಣೆ ಮುಂದುವರೆದಿದ್ದು ಈ ಕುರಿತ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆರೆಬಿಯನ್ ಆಟಗಾರ ಗೇಲ್ ಶತಕ ಸಿಡಿಸುವ ಮೂಲಕ ತಮ್ಮನ್ನು ಟೀಕಿಸುತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಈ ಮೂಲಕ ತಮ್ಮಲ್ಲಿ ಇನ್ನು ಬ್ಯಾಟಿಂಗ್ ನಡೆಸುವ ಶಕ್ತಿ ಇದೆ ಎಂದು ಸಾಬೀತು ಪಡಿಸಿದ್ದಾರೆ. ಕೇವಲ 63 ಎಸೆತಗಳನ್ನು ಎದುರಿಸಿದ ಗೇಲ್ ಔಟಾಗದೆ 11 ಸಿಕ್ಸರ್, 1 ಬೌಂಡರಿ ಮೂಲಕ 104 ರನ್ ಸಿಡಿಸಿದ್ದರು. ಅಲ್ಲದೇ ಟೂರ್ನಿಯ ಮೊದಲ ಶತಕ ದಾಖಲಿಸಿದ್ದರು. ಇದನ್ನೂ ಓದಿ: ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ಕಳೆದ ಹಲವು ಆವೃತ್ತಿಗಳಲ್ಲಿ ಆರ್ ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಗೇಲ್ ರನ್ನು ಈ ಬಾರಿ ಪಂಜಾಬ್ ಖರೀದಿಸಿತ್ತು. ಆದರೆ ಗೇಲ್ ಅವರಿಗೆ ಆರಂಭದ ಎರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಕ್ಕೆ ಅವಕಾಶ ಪಡೆದ ಗೇಲ್ 62 ರನ್ ಸಿಡಿಸಿ ಭರವಸೆ ಮೂಡಿಸಿದ್ದರು. ಬಳಿಕ ಗುರುವಾರ ರಾತ್ರಿ ನಡೆದ ಹೈದರಾಬಾದ್ ವಿರುದ್ಧವೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

     

  • ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ಮೊಹಾಲಿ: ಐಪಿಎಲ್ 2018 ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಸ್ಯದ ಟ್ವೀಟ್ ಮಾಡಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ ಶತಕ ಸಿಡಿಸಿ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಸಂತೋಷ ಹಂಚಿಕೊಂಡ ಸೆಹ್ವಾಗ್ ಕ್ರಿಸ್ ಗೇಲ್‍ರನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ರಕ್ಷಣೆ ಮಾಡಿರುವುದಾಗಿ ಗೇಲ್ ರ ಕಾಲೆಳೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೇಲ್ ಹೌದು ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಎಲ್ಲರೂ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಲಹೆ ನೀಡಿದರು. ಆದರೆ ಇಲ್ಲಿ ನನ್ನ ಹೆಸರಿಗೆ ಗೌರವ ಗಳಿಸಲು ಮಾತ್ರ ಇರುವುದಾಗಿ ಹೇಳಿದ್ದಾರೆ.

    ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ರನ್ನು ತಂಡಕ್ಕೆ ಪಡೆಯಲು ಐಪಿಎಲ್ ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಈ ವೇಳೆ ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್ ಗೇಲ್‍ರನ್ನು ಮೂಲ ಬೆಲೆಗೆ 2ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಸ್ ಗೇಲ್ ಆಟದ ಕುರಿತು ಎಲ್ಲಾ ತಂಡದ ಬೌಲರ್ ಗಳಿಗೂ ಎಚ್ಚರಿಕೆ ನೀಡಿದ್ದರು.

    ಸದ್ಯ ಇದನ್ನು ಸಾಬೀತು ಪಡಿಸಿರುವ ಗೇಲ್ ಹೈದರಾಬಾದ್ ವಿರುದ್ಧ ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಶತಕ ಸಿಡಿಸಿದರು. ಈ ಮೂಲಕ 2018 ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ಅತೀಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ 279 ಸಿಕ್ಸರ್ ಮೂಲಕ ಗೇಲ್ ಮೊದಲ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ರೋಹಿತ್ ಶರ್ಮಾ(179), ರೈನಾ(174), ಎಬಿಡಿವಿಲಿಯರ್ಸ್(167), ಕೊಹ್ಲಿ(166) ಸ್ಥಾನ ಪಡೆದಿದ್ದಾರೆ.