Tag: Chris Gayle

  • ಕೊಹ್ಲಿ, ರಾಹುಲ್, ಗೇಲ್ ಹೆಸರಿನಲ್ಲಿವೆ ಐಪಿಎಲ್ ಭರ್ಜರಿ ದಾಖಲೆಗಳು

    ಕೊಹ್ಲಿ, ರಾಹುಲ್, ಗೇಲ್ ಹೆಸರಿನಲ್ಲಿವೆ ಐಪಿಎಲ್ ಭರ್ಜರಿ ದಾಖಲೆಗಳು

    – ಯಾವ್ಯಾವ ಆಟಗಾರ ಹೆಸರನಲ್ಲಿವೆ ಬೆಸ್ಟ್ ರೆಕಾರ್ಡ್?

    ನವದೆಹಲಿ: ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ ಅಬುಧಾಬಿಯಲ್ಲಿ ಐಪಿಎಲ್ ಹಂಗಾಮಕ್ಕೆ ವೇದಿಕೆ ಸಜ್ಜಾಗಿದೆ.

    ಐಪಿಎಲ್ ಎಂಬುದು ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಹಬ್ಬವಿದ್ದಂತೆ. ಈ ಚುಟುಕು ಪಂದ್ಯದಲ್ಲಿ ಆಟಗಾರರು ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡುತ್ತಾರೆ. ಹೊಡಿಬಡಿ ಆಟದಲ್ಲಿ ವಿಕೆಟ್, ಸಿಕ್ಸರ್ ಸೇರಿದ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಈ ರೀತಿಯ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ ನೋಡಿ.

    ವಿರಾಟ್ ಕೊಹ್ಲಿ: ಭಾರತೀಯ ಕ್ರಿಕೆಟ್‍ನ ರನ್ ಮಷಿನ್ ವಿರಾಟ್, ಐಪಿಎಲ್‍ನಲ್ಲಿ ಅತೀ ಹೆಚ್ಚು ರನ್ ಭಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಬೆಂಗಳೂರು ತಂಡದ ನಾಯಕನಾಗಿರುವ ಕೊಹ್ಲಿ ಒಟ್ಟು 5,412 ಐಪಿಎಲ್ ರನ್ ಹೊಡೆದಿದ್ದಾರೆ. ಒಟ್ಟು 177 ಐಪಿಎಲ್ ಪಂದ್ಯವಾಡಿರುವ ವಿರಾಟ್ 5 ಶತಕ ಮತ್ತು 36 ಅರ್ಧಶತಕಗಳನ್ನು ಬಾರಿಸಿದ್ದಾರೆ.

    ಕೆಎಲ್ ರಾಹುಲ್: ಹಾಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕನಾಗಿರುವ ರಾಹುಲ್, ಈ ಬಾರಿಯ ಐಪಿಎಲ್‍ನಲ್ಲಿ ಸ್ಟಾರ್ ಆಟಗಾರನಾಗಿದ್ದಾರೆ. ರಾಹುಲ್ ಐಪಿಎಲ್‍ನಲ್ಲಿ ಅತಿ ವೇಗದಲ್ಲಿ ಅರ್ಧಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2018ರ ಐಪಿಎಲ್‍ನಲ್ಲಿ ದೆಹಲಿ ವಿರುದ್ಧದ ಪಂದ್ಯದಲ್ಲಿ ರಾಹುಲ್ 16 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಇದನ್ನು ಓದಿ: ಸುರೇಶ್ ರೈನಾ ಐಪಿಎಲ್ ದಾಖಲೆ ಮುರಿಯುವ ಸನಿಹದಲ್ಲಿ ಧೋನಿ

    ಗೌತಮ್ ಗಂಭೀರ್: ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಅವರು ನಾಯಕನಾಗಿ ದಾಖಲೆ ಬರೆದಿದ್ದಾರೆ. ನಾಯಕನಾಗಿ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಗೆಲುವು ತಂದು ಕೊಟ್ಟ ಕೀರ್ತಿ ಗಂಭೀರ್ ಅವರಿಗೆ ಸಲ್ಲುತ್ತದೆ. 2014 ಮತ್ತು 2015 ಐಪಿಎಲ್ ಆವೃತ್ತಿಯಲ್ಲಿ ಇವರು ತಮ್ಮ ತಂಡವನ್ನು ಸತತ 10 ಪಂದ್ಯದಲ್ಲಿ ನಾಯಕನಾಗಿ ಗೆಲುವಿನ ದಡ ಸೇರಿಸಿದ್ದಾರೆ.

    ಕ್ರಿಸ್ ಗೇಲ್: ಐಪಿಎಲ್ ದಾಖಲೆಗಳ ಸಾಲಿನಲ್ಲಿ ಕ್ರಿಸ್ ಗೇಲ್ ಹೆಮ್ಮರವಾಗಿ ಕಾಣುತ್ತಾರೆ. ಐಪಿಎಲ್‍ನಲ್ಲಿ ಪಂಜಾಬ್, ಕೋಲ್ಕತ್ತಾ, ಬೆಂಗಳೂರು ತಂಡದ ಪರವಾಗಿ 124 ಪಂದ್ಯಗಳನ್ನು ಆಡಿರುವ ಅವರು, ಒಟ್ಟು 326 ಸಿಕ್ಸರ್ ಗಳನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಅತೀ ಹೆಚ್ಚು ವೈಯಕ್ತಿಕ ರನ್ ಹೊಡೆದ ಆಟಗಾರ ಎನಿಸಿಕೊಂಡಿದ್ದಾರೆ. 2013 ಐಪಿಎಲ್ ಆವೃತ್ತಿಲ್ಲಿ ಗೇಲ್ ಪುಣೆ ವಿರುದ್ಧ 30 ಬಾಲಿಗೆ ಶತಕ ಸಿಡಿಸಿದ್ದರು. ಅಂದು ಗೇಲ್ ಒಟ್ಟು 175 ರನ್ ಪೇರಿಸಿದ್ದರು.

    ಲಸಿತ್ ಮಾಲಿಂಗ: ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ್ ಬೆಸ್ಟ್ ಬೌಲರ್ ಆಗಿ ಯಶಸ್ವಿಯಾಗಿದ್ದಾರೆ. ಇವರು ಐಪಿಎಲ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದು, ಒಟ್ಟು 170 ವಿಕೆಟ್ ಪಡೆದಿದ್ದಾರೆ. ಈ ಬಾರಿಯ ಐಪಿಎಲ್ ಅನ್ನು ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಬೇಕಿದ್ದ ಮಾಲಿಂಗ್ ಟೂರ್ನಿಯಿಂದ ಹೊರಬಂದಿದ್ದಾರೆ. ಇದನ್ನು ಓದಿ: ಐಪಿಎಲ್ ನಂ.1 ದಾಖಲೆಯ ಸನಿಹದಲ್ಲಿ ರವೀಂದ್ರ ಜಡೇಜಾ

    ಸುರೇಶ್ ರೈನಾ: ಐಪಿಎಲ್ ಐಕಾನ್ ಎಂದೇ ಖ್ಯಾತಿ ಗಳಿಸಿರುವ ಸುರೇಶ್ ರೈನಾ ಈ ಬಾರಿ ಐಪಿಎಲ್‍ನಿಂದ ಹೊರ ಬಂದಿದ್ದಾರೆ. ಆದರೆ ಐಪಿಎಲ್‍ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈವರೆಗೂ ರೈನಾ ಬರೋಬ್ಬರಿ 193 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಒಂದು ಪವರ್ ಪ್ಲೇನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ. ರೈನಾ ಒಂದೇ ಪವರ್ ಪ್ಲೇನಲ್ಲಿ 87 ರನ್ ಸಿಡಿಸಿದ್ದಾರೆ.

  • ಜ್ಯೂನಿಯರ್‌ ಕ್ರಿಸ್‌ ಗೇಲ್‌ – ಕಾಂಪೌಂಡ್‌ ಹೊರಗಡೆಗೆ ಸಿಕ್ಸ್‌

    ಜ್ಯೂನಿಯರ್‌ ಕ್ರಿಸ್‌ ಗೇಲ್‌ – ಕಾಂಪೌಂಡ್‌ ಹೊರಗಡೆಗೆ ಸಿಕ್ಸ್‌

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಜ್ಯೂನಿಯರ್‌ ಕ್ರಿಸ್‌ ಗೇಲ್‌ ಸಿಕ್ಸರ್‌ ಸಿಡಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

    ವೆಸ್ಟ್‌ ಇಂಡೀಸ್‌ ತಂಡದ ಎಡಗೈ ಬ್ಯಾಟ್ಸ್‌ಮನ್‌  ಕ್ರಿಸ್‌ಗೇಲ್‌ ಸಿಕ್ಸ್‌ ಎತ್ತುವುದರಲ್ಲಿ ಎತ್ತಿದ ಕೈ. ಈಗ ಅವರಂತೆ ಪುಟ್ಟ ಪೋರನೊಬ್ಬ ಬ್ಯಾಟ್‌ ಬೀಸಿದ್ದಾನೆ.

    ಪ್ಲಾಸ್ಟಿಕ್‌ ಬಾಲ್‌ನಲ್ಲಿ ಮೆಟ್ಟಿಲಿನಲ್ಲಿ ಆಟವಾಡಿದ್ದು ಬ್ಯಾಟ್‌ನಿಂದ ಭರ್ಜರಿ ಸಿಕ್ಸ್‌ ಸಿಡಿಸಿದ್ದಾನೆ. ಬಾಲಗಾಲನ್ನು ಎತ್ತಿ ಸಿಕ್ಸ್‌ ಸಿಡಿಸುತ್ತಿರುವ ಈ ವಿಡಿಯೋ ಈಗ ವೈರಲ್‌ ಆಗಿದೆ.

     

    View this post on Instagram

     

    How good is this young kid!!! #talented #aakashvani #feelitreelit #feelkaro

    A post shared by Aakash Chopra (@cricketaakash) on

    ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ ಇಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಈ ಸಣ್ಣ ಬಾಲಕ ಹೇಗೆ ಆಡುತ್ತಿದ್ದಾನೆ ನೋಡಿ ಎಂದು ಬರೆದಿದ್ದಾರೆ.

    ಈ ವಿಡಿಯೋಗೆ ಕೆಲವರು ಕ್ರಿಸ್‌ಗೇಲ್‌ ರೀತಿ ಆಡುತ್ತಿದ್ದಾನೆ ಕೆಲವರು ಯುವರಾಜ್‌ ಸಿಂಗ್‌ ರೀತಿ ಸಿಕ್ಸ್‌ ಸಿಡಿಸುತ್ತಿದ್ದಾನೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

  • ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್

    ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್

    ಜಮೈಕಾ: ಐಪಿಎಲ್‍ನಲ್ಲಿ ಭಾಗಹಿಸಲು ಯುಎಇಗೆ ಹಾರಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್ ಸಿಕಿದ್ದು, ತಂಡದ ಪ್ರಮುಖ ಆಟಗಾರ ಕ್ರಿಸ್ ಗೇಲ್ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ.

    ಸೋಮವಾರ ಜಮೈಕಾದ ದಿಗ್ಗಜ ಓಟಗಾರ ಉಸೇನ್ ಬೋಲ್ಟ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದಕ್ಕೂ ಮುನ್ನ ಉಸೇನ್ ಬೋಲ್ಟ್ ಅವರು ಅವರ ಹುಟ್ಟುಹಬ್ಬದ ಸಲುವಾಗಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಗೆ ಹಲವಾರು ಕ್ರೀಡಾಪಟುಗಳು ಆಗಮಿಸಿದ್ದರು. ಈ ಪಾರ್ಟಿಯಲ್ಲಿ ಗೇಲ್ ಅವರು ಕೂಡ ಭಾಗಹಿಸಿದ್ದರು.

    ಈ ಬಾರಿಯ ಐಪಿಎಲ್‍ನಲ್ಲಿ ಕ್ರಿಸ್ ಗೇಲ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಆಡಲಿದ್ದಾರೆ. ಒಂದೇ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದರೆ, ಅವರು ಯುಎಇಗೆ ಪ್ರಯಾಣ ಬೆಳೆಸಲು ಆಗುತ್ತಿರಲಿಲ್ಲ. ಈಗ ನೆಗೆಟಿವ್ ಬಂದಿದ್ದು, ಪಂಜಾಬ್ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ತನಗೆ ನೆಗೆಟಿವ್ ಬಂದ ಮಾಹಿತಿಯನ್ನು ಸ್ವತಃ ಗೇಲ್ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದು, ಎರಡು ಬಾರಿ ನಡೆಸಿದ ಟೆಸ್ಟ್ ನಲ್ಲೂ ನೆಗೆಟಿವ್ ಬಂದಿದೆ ಎಂದಿದ್ದಾರೆ.

    ಕಳೆದ ಅಗಸ್ಟ್ 21ರಂದು ಉಸೇನ್ ಬೋಲ್ಟ್ ಅವರ 34ನೇ ವರ್ಷದ ಹುಟ್ಟುಹಬ್ಬವಿತ್ತು. ಹೀಗಾಗಿ ಅವರು ಸ್ನೇಹಿತರೊಂದಿಗೆ ಭರ್ಜರಿ ಪಾರ್ಟಿ ಮಾಡಿದ್ದರು. ಇದರಲ್ಲಿ ವೆಸ್ಟ್ ಇಂಡೀಸ್‍ನ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್, ಫುಟ್‍ಬಾಲ್ ಆಟಗಾರ ರಹೀಮ್ ಸ್ಟೆರ್ಲಿಂಗ್ ಸೇರಿದಂತೆ ಹಲವು ಗಣ್ಯ ಕ್ರೀಡಾಪಟುಗಳು ಸಹ ಭಾಗಿಯಾಗಿದ್ದರು. ಪಾರ್ಟಿ ವೇಳೆ ಗಣ್ಯರು ಕುಣಿದು ಕುಪ್ಪಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

    ಕೊರೊನಾ ವೈರಸ್ ಕಾರಣದಿಂದ ಈ ಬಾರಿಯ ಐಪಿಎಲ್ ಯುಎಇಯಲ್ಲಿ ನಡೆಯಲಿದೆ. ಈಗಾಗಲೇ ಐಪಿಎಲ್ ತಂಡಗಳು ಯುಎಇಗೆ ತೆರಳಿ ಕ್ವಾರಂಟೈನ್‍ಗೆ ಒಳಗಾಗಿವೆ. ಕೊರೊನಾ ನೆಗೆಟಿವ್ ಬಂದ ಆಟಗಾರು ಮಾತ್ರ ಪಂದ್ಯಗಳಲ್ಲಿ ಭಾಗವಹಿಸಬಹುದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ತಂಡಗಳು ಪ್ರತ್ಯೇಕ ಹೋಟೆಲ್‍ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಸೆಪ್ಟಂಬರ್ 19ರಿಂದ ಐಪಿಎಲ್ ಆರಂಭವಾಗಲಿದೆ.

  • ಸಚಿನ್ ಟೆಸ್ಟ್ ವಿದಾಯದ ಪಂದ್ಯ ನೆನೆದು ಕಣ್ಣೀರಾಗಿದ್ದ ವಿಂಡೀಸ್ ಆಟಗಾರರು

    ಸಚಿನ್ ಟೆಸ್ಟ್ ವಿದಾಯದ ಪಂದ್ಯ ನೆನೆದು ಕಣ್ಣೀರಾಗಿದ್ದ ವಿಂಡೀಸ್ ಆಟಗಾರರು

    ಮುಂಬೈ: ಕ್ರಿಕೆಟ್ ದಿಗ್ಗಜ, ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ವಿದಾಯದ ಪಂದ್ಯವು ಅವರ ಶತಕೋಟಿ ಭಾರತೀಯ ಅಭಿಮಾನಿಗಳಿಗೆ ಹಾಗೂ ಕ್ರೀಡಾಂಗಣದಲ್ಲಿ ಹಾಜರಿದ್ದವರಿಗೆ ಮಾತ್ರವೇ ಭಾವನಾತ್ಮಕ ಕ್ಷಣವಲ್ಲ. ಅಂದು ಭಾರತದ ವಿರುದ್ಧ ಆಡಿದ ತಂಡದ ಕೆಲವು ಆಟಗಾರರಿಗೂ ಸಹ ಇದೊಂದು ಭಾವನಾತ್ಮಕ ಕ್ಷಣವಾಗಿದೆ.

    ಮಾಸ್ಟರ್ ಬ್ಲಾಸ್ಟರ್ ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ವೃತ್ತಿಜೀವನದ 200ನೇ ಟೆಸ್ಟ್ ಮತ್ತು ವಿದಾಯದ ಪಂದ್ಯವನ್ನು 2013ರ ನವೆಂಬರ್ 14-16ರ ನಡುವೆ ತವರು ಮೈದಾನ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ್ದರು. ಸಚಿನ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಾಗ ಮೈದಾನದಲ್ಲಿದ್ದ ವಿಂಡೀಸ್ ಆಟಗಾರರು ಮತ್ತು ಇಬ್ಬರು ಅಂಪೈರ್ ಗಳು ಗೌರವ ಸೂಚಿಸಿ ಅವರನ್ನು ಸ್ವಾಗತಿಸಿದ್ದರು. ಬಳಿಕ ಬ್ಯಾಟಿಂಗ್ ಮಾಡಿದ ತೆಂಡೂಲ್ಕರ್ ತಮ್ಮ ಅಂತಿಮ ಇನ್ನಿಂಗ್ಸ್ ನಲ್ಲಿ 74 ರನ್ ಗಳಿಸಿದ್ದರು.

    ಈ ವೇಳೆ ವಿಂಡೀಸ್ ವಿರುದ್ಧದ ಭಾರತವು ಇನ್ನಿಂಗ್ಸ್ ಮತ್ತು 126 ರನ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ನಂತರ ಸಚಿನ್ ತಮ್ಮ ಪ್ರಸಿದ್ಧ ನಿವೃತ್ತಿ ಭಾಷಣ ಮಾಡಿದರು. ಇದು ನೋಡಿವರೆಲ್ಲರೂ ಕಣ್ಣೀರು ಸುರಿಸಿದರು.

    ಈ ಕ್ಷಣವನ್ನು ನೆನೆದು ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಕಿರ್ಕ್ ಎಡ್ವರ್ಡ್ಸ್ ಮತ್ತು ಸ್ಟಾರ್ ಓಪನರ್ ಕ್ರಿಸ್ ಗೇಲ್, ಅಂದು ನಮ್ಮ ಕಣ್ಣೀರನ್ನು ತಡೆಹಿಡಿಯುವುದು ಕಷ್ಟಕರವಾಗಿತ್ತು. ಸಚಿನ್ ಕ್ರಿಕೆಟ್ ಮೈದಾನದಲ್ಲಿ ಕಾಣುವುದು ಇದು ಅಂತಿಮ ಸಮಯ ಎಂದು ತಿಳಿದು ಭಾವುಕರಾಗಿದ್ದೇವು ಎಂದು ಹೇಳಿಕೊಂಡಿದ್ದಾರೆ.

    “ಸಚಿನ್ ಅವರ ಟೆಸ್ಟ್ ವಿದಾಯದ ಪಂದ್ಯದ ವೇಳೆ ನಾನು ವೆಸ್ಟ್ ಇಂಡೀಸ್ ತಂಡದಲ್ಲಿದ್ದೆ. ಆ ಗಳಿಗೆ ನನಗೆ ತುಂಬಾ ಭಾವನಾತ್ಮಕವಾಗಿತ್ತು. ಸಚಿನ್ ಅವರನ್ನು ಸ್ವಾಗತಿಸುವಾಗ ಗೇಲ್ ಪಕ್ಕದಲ್ಲಿ ನಾನು ಇದ್ದೆ. ಇಬ್ಬರೂ ಕಣ್ಣೀರು ಹಾಕಿದ್ದೇವು” ಎಂದು ಕಿರ್ಕ್ ಎಡ್ವರ್ಡ್ಸ್  ಹೇಳಿದ್ದಾರೆ.

    ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ 1989ರ ನವೆಂಬರ್ 15ರಂದು ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂಲಕ ಸಚಿನ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಲಿಟಲ್ ಮಾಸ್ಟರ್ ಭಾರತ ಪರ ದಾಖಲೆಯ 200 ಟೆಸ್ಟ್, 463 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ. ಸುದೀರ್ಘ ಸಮಯದಲ್ಲಿ ಟೆಸ್ಟ್ ನಲ್ಲಿ 15,921 ರನ್ ಮತ್ತು ಏಕದಿನ ಕ್ರಿಕೆಟ್‍ನಲ್ಲಿ 18,426 ರನ್ ಗಳಿಸಿದ್ದಾರೆ. ಇವೆರಡೂ ವಿಶ್ವ ದಾಖಲೆಗಳಾಗಿವೆ. ಜೊತೆಗೆ ಸಚಿನ್ ಅವರು ಟೆಸ್ಟ್ ನಲ್ಲಿ 51 ಹಾಗೂ ಏಕದಿನ ಪಂದ್ಯದಲ್ಲಿ 49 ಶತಕ ಸಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 100 ಶತಕಗಳನ್ನು ಗಳಿಸಿದ ಅದ್ಭುತ ದಾಖಲೆಯನ್ನು ಮಾಸ್ಟರ್ ಬ್ಲಾಸ್ಟರ್ ಹೊಂದಿದ್ದಾರೆ.

  • ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    ಟಿಕ್‍ಟಾಕ್‍ನಲ್ಲಿ ನಾನು ನಿನ್ನನ್ನ ಬ್ಲಾಕ್ ಮಾಡ್ತೀನಿ: ಗೇಲ್

    – ನಿಜ ನೀನು ತುಂಬ ಕಿರಿಕಿರಿ ಮಾಡ್ತಿಯಾ

    ನವದೆಹಲಿ: ನೀನು ತುಂಬ ಕಿರಿಕಿರಿ ಮಾಡುತ್ತೀಯಾ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಭಾರತದ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರನ್ನು ಟೀಕಿಸಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿರುವ ಚಹಲ್ ಅವರು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇರುತ್ತಾರೆ. ಎಲ್ಲರನ್ನೂ ಕಾಲೆಳೆಯುವ ಕೆಲಸ ಮಾಡುತ್ತಾರೆ. ಹೀಗಾಗಿ ಗೇಲ್ ನೀನು ಸೋಶಿಯಲ್ ಮೀಡಿಯಾದಲ್ಲಿ ಕಿರಿಕಿರಿ ಮಾಡುತ್ತಿದ್ದೀಯ ನಾನು ನಿನ್ನ ಬ್ಲಾಕ್ ಮಾಡುತ್ತೇನೆ ಎಂದು ಚಹಲ್‍ಗೆ ವ್ಯಂಗ್ಯವಾಡಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ 60 ವರ್ಷದ ನಂತರ ಕ್ರಿಕೆಟ್ ತನ್ನೆಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಹೀಗಾಗಿ ಮನೆಯಲ್ಲೇ ಕುಳಿತಿರುವ ಕ್ರಿಕೆಟ್ ಆಟಗಾರರು ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತಯೇ ಒಂದು ಕಾಲದ ಆರ್.ಸಿ.ಬಿ ಸಹ ಆಟಗಾರರಾದ ಚಹಲ್ ಮತ್ತು ಗೇಲ್ ಲೈವ್ ಬಂದು ಮಾತನಾಡಿದ್ದಾರೆ.

    https://www.instagram.com/p/B_HyhuGhfbn/

    ಈ ವೇಳೆ ಗೇಲ್, ನಾನು ಟಿಕ್‍ಟಾಕ್ ಕಂಪನಿಯವರಿಗೆ ನಿನ್ನನ್ನು ಬ್ಲಾಕ್ ಮಾಡಲು ಮನವಿ ಮಾಡುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ನೀನು ಸಖತ್ ಕಿರಿಕಿರಿಯನ್ನು ಉಂಟು ಮಾಡುತ್ತಿದ್ದೀಯಾ. ನೀನು ಈಗಲೇ ಸಾಮಾಜಿಕ ಜಾಲತಾಣದಿಂದ ಹೊರಗೆ ಹೋಗಬೇಕು. ನಮಗೆ ಸಾಕಾಗಿದೆ ಚಹಲ್ ಮತ್ತೆ ನಿನ್ನನ್ನು ನನ್ನ ಜೀವನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೋಡಲು ಇಷ್ಟವಿಲ್ಲ. ನಾನು ನಿನ್ನನ್ನು ಬ್ಲಾಕ್ ಮಾಡುತ್ತೇನೆ ಎಂದು ಚಹಲ್ ಅವರನ್ನು ಟೀಕಿಸಿದ್ದಾರೆ.

    ಕ್ರಿಸ್ ಗೇಲ್ ಮತ್ತು ಚಹಲ್ ಅವರು ಒಂದು ಕಾಲದಲ್ಲಿ ಆರ್.ಸಿ.ಬಿ ಸಹ ಆಟಗಾರಗಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಮೈದಾನದಲ್ಲಿ ಮತ್ತು ಮೈದಾನದಿಂದ ಆಚೆಗೆ ಫನ್ನಿಯಾಗಿ ಆಡುತ್ತಿದ್ದ ಗೇಲ್ ಮತ್ತು ಚಹಲ್ ಜೋಡಿ ನೋಡುಗರಿಗೆ ಉತ್ತಮ ಮನರಂಜನೆ ನೀಡುತ್ತಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸದಾ ಸಕ್ರಿಯವಾಗಿ ಇರುತ್ತಿದ್ದರು.

  • ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇಂದು ಮರೆಯಲಾಗದ ದಿನ ಏಕೆಂದರೆ 7 ವರ್ಷದ ಹಿಂದೆ ಇದೇ ಏಪ್ರಿಲ್ 23ರಂದು ಕ್ರಿಸ್ ಗೇಲ್ ಅವರು ಇತಿಹಾಸವನ್ನು ಸೃಷ್ಟಿ ಮಾಡಿದ್ದರು.

    2013ರ ಐಪಿಎಲ್ 6ರ ಅವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್‍ನ ದೈತ್ಯ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ವೈಯಕ್ತಿಯ ಅತೀ ಹೆಚ್ಚು ರನ್ ಸಿಡಿಸಿದ್ದರು. 2013ರ ಐಪಿಲ್ 6ನೇ ಅವೃತ್ತಿಯ 31ನೇ ಪಂದ್ಯದಲ್ಲಿ ಪುಣೆ ಬೌಲರ್ಸ್‍ಗಳು ಕಾಡಿದ್ದ ಗೇಲ್, ಅಂದು ಕೇವಲ 66 ಎಸೆತಗಳಲ್ಲಿ 175 ರನ್ (17 ಸಿಕ್ಸ್ 13 ಬೌಂಡರಿ) ಸಿಡಿಸಿ ಹೊಸ ದಾಖಲೆ ಬರೆದಿದ್ದರು.

    ಪುಣೆ ಬೌಲರ್ ಗಳ ಮೇಲೆ ಸವಾರಿ ಮಾಡಿದ್ದ ಗೇಲ್, ಚಿನ್ನಸ್ವಾಮಿ ಕ್ರೀಡಾಂಗಣದ ಮೂಲೆ ಮೂಲೆಗೆ ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ 30 ಎಸೆತದಲ್ಲಿ ವೇಗದ ಸೆಂಚೂರಿ ಸಿಡಿಸಿದ್ದರು. ಜೊತೆಗೆ ಒಂದು ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 17 ಸಿಕ್ಸರ್ ಸಿಡಿಸಿದ ದಾಖಲೆಯನ್ನು ಮಾಡಿದ್ದರು ಹಾಗೂ 175 ರನ್ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ವೈಯಕ್ತಿಕ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮುಂಚೆ ಬ್ರೆಂಡನ್ ಮೆಕಲಮ್ ಅವರು 158 ರನ್ ಸಿಡಿಸಿದ್ದು ವೈಯಕ್ತಿಕ ಅತೀ ಹೆಚ್ಚು ರನ್ ಆಗಿತ್ತು.

    ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಪುಣೆ ತಂಡ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್‍ಗೆ ಅಹ್ವಾನ ಮಾಡಿತ್ತು. ಅಂತೆಯೇ ಕ್ರಿಸ್ ಗೇಲ್ ಮತ್ತು ದಿಲ್ಶನ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದರು. ಆದರೆ ಒಂದು ಓವರ್ ಮುಗಿದ ನಂತರ ಮಳೆ ಬಂದು ಪಂದ್ಯ ಅರ್ಧ ಗಂಟೆ ನಿಂತು ಹೋಗಿತ್ತು. ನಂತರ ಬ್ಯಾಟಿಂಗ್ ಇಳಿದ ಗೇಲ್ ಪುಣೆ ಬೌಲರ್ಸ್ ಗಳನ್ನು ಅಕ್ರಮಣಕಾರಿಯಾಗಿ ದಂಡಿಸಿದ್ದರು. ಗೇಲ್ ಅವರ 175 ರನ್, ದಿಲ್ಶನ್ ಅವರ 33 ರನ್ ಹಾಗೂ ಎಬಿಡಿ ವಿಲಿಯರ್ಸ್ ಸ್ಫೋಟಕ 8 ಬಾಲಿಗೆ 31 ರನ್‍ಗಳ ನೆರವಿನಿಂದ ಆರ್‍ಸಿಬಿ ಒಟ್ಟು 263 ರನ್ ಗಳಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ತಂಡವಾಗಿ ದಾಖಲೆ ಬರೆದಿತ್ತು.

    ನಂತರ ಬ್ಯಾಟಿಂಗ್‍ಗೆ ಬಂದ ಪುಣೆ ವಾರಿಯರ್ಸ್ ತಂಡ ಬೆಂಗಳೂರು ತಂಡದ ಬಿಗು ಬೌಲಿಂಗ್ ದಾಳಿಗೆ ನಲುಗಿ ಹೋಗಿತ್ತು. ರವಿ ರಮ್‍ಪಾಲ್ ಮತ್ತು ಜೈದೇವ್ ಉನಾದ್ಕತ್ ಅವರ ಮಾರಕ ದಾಳಿಗೆ ತತ್ತರಿಸಿದ ಪುಣೆ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 133 ರನ್ ಗಳಿಸಿತ್ತು. ಈ ಮೂಲಕ ಬೆಂಗಳೂರು ತಂಡ 130 ರನ್‍ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಪುಣೆ ಪರ ಸ್ಟೀವ್ ಸ್ಮಿತ್ ಅವರು 42 ರನ್ ಹೊಡೆದಿದದ್ದರು.

    ಆಲ್‍ರೌಂಡರ್ ಆಟ ಪ್ರದರ್ಶಸಿದ್ದ ಗೇಲ್
    ಅಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರದಿದ್ದ ಜನರಿಗೆ ಗೇಲ್ ಉತ್ತಮ ಮನರಂಜನೆ ನೀಡಿದ್ದರು. ಬ್ಯಾಟಿಂಗ್ ನಲ್ಲಿ ಸಿಕ್ಸ್ ಮೇಲೆ ಸಿಕ್ಸ್ ಭಾರಿಸಿ ಅಭಿಮಾನಿಗಳು ಹುಚ್ಚೆಂದು ಕುಣಿಯುವಂತೆ ಮಾಡಿದ್ದ ಗೇಲ್, ನಂತರ ಬೌಲಿಂಗ್‍ನಲ್ಲೂ ಕಮಾಲ್ ಮಾಡಿದ್ದರು. ಪಂದ್ಯದ ಕೊನೆಯ ಓವರ್ ಅನ್ನು ಬೌಲ್ ಮಾಡಿದ್ದ ಗೇಲ್ 5 ರನ್ ನೀಡಿ ಎರಡು ವಿಕೆಟ್‍ಗಳನ್ನು ಪಡೆದಿದ್ದರು. ಆ ಓವರ್ ನಲ್ಲಿ ವಿಕೆಟ್ ಪಡೆದು ಗೇಲ್ ಸಂಭ್ರಮಿಸಿದ್ದ ರೀತಿ ಮತ್ತು ಆಂಪೈರ್ ಗೆ ಔಟ್ ಎಂದು ಮನವಿ ಮಾಡಿದ್ದ ಶೈಲಿ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು.

  • ವೆಲ್ ಸೇಡ್, ಕಾಕಾ- ಗೇಲ್ ವಿಡಿಯೋ ಹಂಚಿಕೊಂಡ ಯುವಿ

    ವೆಲ್ ಸೇಡ್, ಕಾಕಾ- ಗೇಲ್ ವಿಡಿಯೋ ಹಂಚಿಕೊಂಡ ಯುವಿ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಫನ್ನಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಯುವರಾಜ್ ಸಿಂಗ್, ಇಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗೇಲ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕ್ರಿಸ್ ಗೇಲ್ ಹಿಂದಿ ಮಾತನಾಡಲು ಕಷ್ಟಪಡುತ್ತಿರುವುದನ್ನು ಕಾಣಬಹುದು. ಇದರಲ್ಲಿ ಗೇಲ್ “ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ” ಎಂದು ಹಿಂದಿ ಡೈಲಾಗ್ ಹೇಳಿದ್ದಾರೆ.

    https://twitter.com/YUVSTRONG12/status/1239111700659318786

    ಕೇವಲ 17 ಸೆಕೆಂಡ್ ಇರುವ ವಿಡಿಯೋವನ್ನು ಹಂಚಿಕೊಂಡಿರುವ ಯುವಿ, ಕಾನ್ಫಿಡೆನ್ಸ್ ಮೇರಾ, ಕಬರ್ ಬನೇಗಿ ತೇರಿ, ಚೆನ್ನಾಗಿ ಹೇಳಿದ್ದೀರಾ ಕ್ರಿಸ್ ಗೇಲ್ ಕಾಕಾ ಎಂದು ಬರೆದುಕೊಂಡಿದ್ದಾರೆ. ಇದರಲ್ಲಿ ಕಾನ್ಫಿಡೆನ್ಸ್ ಮೇರಾ ಎಂದು ಸರಿಯಾಗಿ ಹೇಳುವ ಗೇಲ್, ಮುಂದಿನ ಪದವನ್ನು ಹೇಳಲು ಕಷ್ಟಪಡುತ್ತಾರೆ. ಯುವಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ ಯುವಿ, ಈಗ ಕೆಲ ವಿದೇಶಿ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸದ್ಯ ಯುವರಾಜ್ ಸಿಂಗ್, ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ಪರವಾಗಿ ಆಡುತ್ತಿದ್ದಾರೆ. ಆದರೆ ಕೆಲ ಪಂದ್ಯಗಳು ಮಾತ್ರ ನಡೆದಿದ್ದ ಈ ಟೂರ್ನಿ ವಿಶ್ವದದ್ಯಾಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

    ಟಿ-20 ಮಾದರಿಯ ಕ್ರಿಕೆಟ್‍ನಲ್ಲಿ ಒಂದು ದೈತ್ಯ ಪ್ರತಿಭೆ ಹೊಡಿಬಡಿ ಆಟಕ್ಕೆ ಹೇಳಿಮಾಡಿಸಿದಂತೆ ಬ್ಯಾಟ್ ಬೀಸುವ ಗೇಲ್, ಈ ಮಾದರಿಯ ಕ್ರಿಕೆಟ್‍ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ಗೇಲ್ ಇಲ್ಲಿಯವರೆಗೆ ಟಿ-20 ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಇದರ ಜೊತೆಗೆ ಚುಟುಕು ಮಾದರಿ ಪಂದ್ಯದಲ್ಲಿ ಅತಿ ಹೆಚ್ಚು ಸೆಂಚುರಿ ಬಾರಿಸಿದ ಆಟಗಾರನಾಗಿದ್ದು, ಗೇಲ್ ಇಲ್ಲಿಯವರೆಗೆ ಟಿ-20ಯಲ್ಲಿ 22 ಶತಕ ದಾಖಲಿಸಿದ್ದಾರೆ.

    ಈಗ ಗೇಲ್ ವಿವಿಧ ವಿದೇಶಿ ಟಿ-20 ಟೂರ್ನಿಯನ್ನು ಆಡುತ್ತಿದ್ದಾರೆ. ಈಗ ಮುಂಬರುವ ಐಪಿಎಲ್ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಗೇಲ್ ಆಡಲಿದ್ದಾರೆ. ಐಪಿಎಲ್‍ನಲ್ಲಿ ಪಂಜಾಬ್ ತಂಡ ಇಲ್ಲಿಯವರೆಗೂ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಈ ಬಾರಿ ಕನ್ನಡಿಗ ಕೆ.ಎಲ್. ರಾಹುಲ್ ಪಂಜಾಬ್ ತಂಡವನ್ನು ಮುನ್ನೆಡೆಸುತ್ತಿದ್ದು, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ.

    ಈ ಬಾರಿಯ ಐಪಿಎಲ್‍ಗೂ ಕೂಡ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಇದೇ ತಿಂಗಳ 29 ರಂದು ಆರಂಭವಾಗಬೇಕಿದ್ದ ಟೂರ್ನಿಯನ್ನು ಮುಂದೂಡಲಾಗಿದೆ. ಜೊತೆಗೆ ದೆಹಲಿ ಸರ್ಕಾರ ನಮ್ಮ ರಾಜ್ಯದಲ್ಲಿ ಈಗ ಇರುವ ಪರಿಸ್ಥಿತಿಗೆ ಯಾವುದೇ ಕ್ರಿಕೆಟ್ ಪಂದ್ಯ ನಡೆಸಲು ಅನುಮತಿ ಕೊಡುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಬಿಸಿಸಿಐ ಜನರ ಆರೋಗ್ಯದ ಹಿತದೃಷ್ಠಿಯಿಂದ ಐಪಿಎಲ್ ಅನ್ನು ಮುಂದೂಡಿದೆ.

  • ನಾನು ಏನೂ ಹೇಳಿಲ್ಲ – ಅಂತೆ ಕಂತೆ ಸುದ್ದಿಗಳಿಗೆ ಬ್ರೇಕ್ ಹಾಕಿದ ಗೇಲ್

    ನಾನು ಏನೂ ಹೇಳಿಲ್ಲ – ಅಂತೆ ಕಂತೆ ಸುದ್ದಿಗಳಿಗೆ ಬ್ರೇಕ್ ಹಾಕಿದ ಗೇಲ್

    ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳುತ್ತಾರೆ ಎನ್ನುವ ಸುದ್ದಿಗೆ ಬ್ರೇಕ್ ಬಿದ್ದಿದೆ.

    ಭಾರತದ ವಿರುದ್ಧ ಬುಧವಾರ ಮೂರನೇ ಏಕದಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಕ್ರಿಸ್ ಗೇಲ್ ಕೇವಲ 41 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿ 72 ರನ್ ಗಳಿಸಿದ್ದರು. ಆದರೆ ಖಲೀಲ್ ಅಹ್ಮದ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದ ಗೇಲ್ ಅವರು ಬ್ಯಾಟ್‍ಗೆ ಹೆಲ್ಮೆಟ್ ಹಾಕಿಕೊಂಡು ಮೈದಾನದಿಂದ ಹೊರ ನಡೆದರು. ಈ ವೇಳೆ ಟೀಂ ಇಂಡಿಯಾ ಆಟಗಾರರು ವಿಕೆಟ್ ಪಡೆದ ಖುಷಿಯಲ್ಲಿ ಸಂಭ್ರಮಿಸುವ ಬದಲು, ಗೇಲ್‍ಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದರು.

    ಕ್ರಿಸ್ ಗೇಲ್ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 301 ನಂಬರ್ ಜೆರ್ಸಿ ಧರಿಸಿ ಆಡಿದ್ದರು. ಹೀಗಾಗಿ ಗೇಲ್ ಅವರು ಈ ಪಂದ್ಯದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಗೇಲ್ ವಿದಾಯವನ್ನು ತಳ್ಳಿ ಹಾಕಿದ್ದಾರೆ.

    ವಿದಾಯದ ಕುರಿತು ನಾನು ಯಾವುದೇ ರೀತಿಯ ಪ್ರಕಟಣೆ ಹೊರಡಿಸಿಲ್ಲ. ಪ್ರಕಟಣೆ ಹೊರಡಿಸುವವರೆಗೂ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮುಂದುವರಿಯುತ್ತೇನೆ ಎಂದು ಕ್ರಿಸ್ ಗೇಲ್ ಸ್ಪಷ್ಟನೆ ನೀಡಿದ್ದಾರೆ. ಗೇಲ್ ಸ್ಪಷ್ಟನೆಯ ವಿಡಿಯೋವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.

    ವಿಂಡೀಸ್ ಪರ ಏಕದಿನ ಕ್ರಿಕೆಟ್‍ನಲ್ಲಿ ಗರಿಷ್ಠ ರನ್ ಗಳಿಸಿದ್ದ ಬ್ರಿಯನ್ ಲಾರಾ ದಾಖಲೆಯನ್ನು ಇತ್ತೀಚೆಗಷ್ಟೆ ಗೇಲ್ ಮುರಿದಿದ್ದರು. ಲಾರಾ 299 ಇನ್ನಿಂಗ್ಸ್ ಗಳಲ್ಲಿ 10,348 ರನ್ ಬಾರಿಸಿದ್ದರು. ಸದ್ಯ ಗೇಲ್ ಎರಡನೇ ಏಕದಿನ ಪಂದ್ಯದಲ್ಲಿ 7 ರನ್ ಗಳಿಸುತ್ತಿದ್ದಂತೆ ವಿಂಡೀಸ್ ಪರ ಗರಿಷ್ಠ ರನ್ ಕಲೆಹಾಕಿದ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲದೆ ಗೇಲ್ ವಿಂಡೀಸ್ ಪರ 300 ಏಕದಿನ ಪಂದ್ಯಗಳನ್ನು ಆಡಿದ ಮೊದಲ ಬ್ಯಾಟ್ಸ್ ಮನ್ ಆಗಿದ್ದಾರೆ.

    ಕ್ರಿಸ್ ಗೇಲ್ ಈವರೆಗೆ ಒಟ್ಟು 301 ಏಕದಿನ ಪಂದ್ಯಗಳನ್ನು ಆಡಿದ್ದು, 10,480 ರನ್ ಕಲೆಹಾಕಿದ್ದಾರೆ. ಇದರಲ್ಲಿ 54 ಅರ್ಧಶತಕ ಹಾಗೂ 25 ಶತಕ ಸೇರಿವೆ. 215 ಗ್ರೆಲ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ನಲ್ಲಿ 182 ಇನ್ನಿಂಗ್ಸ್ ಆಡಿದ್ದು 7,214 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 37 ಅರ್ಧಶತಕ ಹಾಗೂ 15 ಅರ್ಧಶತಕ ಸೇರಿವೆ. ಟೆಸ್ಟ್ ನಲ್ಲಿ ಗೇಲ್ ಅವರು ಗಳಿಸಿದ ಗರಿಷ್ಠ ಸ್ಕೋರ್ 333 ಆಗಿವೆ.

     

  • ಕ್ರಿಸ್ ಗೇಲ್ ಆಸೆಗೆ ತಣ್ಣೀರೆರಚಿದ ವಿಂಡೀಸ್ ಕ್ರಿಕೆಟ್ ಬೋರ್ಡ್

    ಕ್ರಿಸ್ ಗೇಲ್ ಆಸೆಗೆ ತಣ್ಣೀರೆರಚಿದ ವಿಂಡೀಸ್ ಕ್ರಿಕೆಟ್ ಬೋರ್ಡ್

    ಜಮೈಕಾ: ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ್ದು, ನಿವೃತ್ತಿ ಟೆಸ್ಟ್ ಪಂದ್ಯ ಆಡಲು ಬಯಸಿದ್ದ ವಿಂಡೀಸ್‍ನ ದೈತ್ಯ ಆಟಗಾರ ಕ್ರಿಸ್ ಗೇಲ್‍ರನ್ನು ಆಯ್ಕೆ ಸಮಿತಿ ಕಡೆಗಣಿಸಿದೆ.

    ವಿಶ್ವಕಪ್ ಟೂರ್ನಿಯ ವೇಳೆಯೇ ತಮ್ಮ ನಿವೃತ್ತಿ ಬಗ್ಗೆ ಸ್ಪಷ್ಟಪಡಿಸಿದ್ದ ಗೇಲ್, ಭಾರತದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳುವುದಾಗಿ ತಿಳಿಸಿದ್ದರು. ಆದರೆ ಇದೇ ತಿಂಗಳು 22 ರಿಂದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡಕ್ಕೆ ಕ್ರಿಸ್ ಗೇಲ್ ಆಯ್ಕೆಯಾಗಿಲ್ಲ.

    ಈ ಮೊದಲು 2019ರ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತೇನೆ ಎಂದು ಕ್ರಿಸ್ ಗೇಲ್ ಹೇಳಿದ್ದರು. ಆದರೆ ನಂತರ ನಿವೃತ್ತಿಯನ್ನು ಮುಂದಕ್ಕೆ ಹಾಕಿ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯ ನಂತರ ನಿವೃತ್ತಿ ಹೊಂದುತ್ತೇನೆ ಎಂದಿದ್ದರು. ನಾನು ಇನ್ನೂ ಕೆಲವು ಪಂದ್ಯವನ್ನು ಆಡಬೇಕಿದೆ. ಹೀಗಾಗಿ ನಾನು ಇನ್ನೂ ಒಂದು ಸರಣಿಯನ್ನು ಆಡುತ್ತೇನೆ. ನಾನು ಭಾರತದ ವಿರುದ್ಧ ಟಿ-20 ಆಡುವುದಿಲ್ಲ. ಏಕದಿನ ಪಂದ್ಯವನ್ನು ಆಡುತ್ತೇನೆ. ಆದರೆ ನಾನು ಭಾರತದ ವಿರುದ್ಧ ಟೆಸ್ಟ್ ಸರಣಿ ಆಡಿ ನಿವೃತ್ತಿ ಹೊಂದಲು ತೀರ್ಮಾನ ಮಾಡಿದ್ದೇನೆ. ನೋಡೋಣ ಮುಂದೆ ಏನಾಗುತ್ತದೆ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದರು.

    ವೆಸ್ಟ್ ಇಂಡೀಸ್ ಪರ 2019ರ ವಿಶ್ವಕಪ್ ಆಡಿದ 39 ವರ್ಷದ ಕ್ರಿಸ್ ಗೇಲ್, ಆಡಿದ 8 ಪಂದ್ಯಗಳಲ್ಲಿ 30 ರ ಸರಾಸರಿಯಲ್ಲಿ ಕೇವಲ 242 ರನ್ ಗಳಿಸಿದ್ದರು. ಭಾರತದ ವಿರುದ್ಧ ಏಕದಿನ ಸರಣಿಗೆ ಆಯ್ಕೆ ಆಗಿದ್ದ ಗೇಲ್ 3 ಪಂದ್ಯಗಳಲ್ಲಿ ಕೇವಲ 4 ರನ್ ಹೊಡೆದಿದ್ದರು. ಈಗ ಈ ಟೆಸ್ಟ್ ಸರಣಿಗೆ 13 ಆಟಗಾರರನ್ನು ಆಯ್ಕೆ ಮಾಡಿರುವ ವೆಸ್ಟ್ ಇಂಡೀಸ್ ಗೇಲ್ ಅವರಿಗೆ ಕೊಕ್ ಕೊಟ್ಟು ಹೊಸ ಆಟಗಾರ ಆಫ್-ಸ್ಪಿನ್ನರ್ ರಹಕೀಮ್ ಕಾರ್ನ್‍ವಾಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ಹಂತದಲ್ಲಿ ಗೇಲ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅಂದಹಾಗೇ ಗೇಲ್, 5 ವರ್ಷಗಳ ಹಿಂದೆ ತಮ್ಮ ಅಂತಿಮ ಟೆಸ್ಟ್ ಪಂದ್ಯವನ್ನು ಆಡಿದ್ದರು. ಆ ಬಳಿಕ ಟೆಸ್ಟ್ ಸರಣಿಗೆ ಆಯ್ಕೆ ಆಗಿಲ್ಲ.

    ಟೆಸ್ಟ್ ತಂಡ ಇಂತಿದೆ: ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾಥ್‍ವೈಟ್, ಡ್ಯಾರೆನ್ ಬ್ರಾವೊ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್‍ಬೆಲ್, ರೋಸ್ಟನ್ ಚೇಸ್, ರಖೀಮ್ ಕಾರ್ನ್‍ವಾಲ್, ಶೇನ್ ಡೌರಿಚ್, ಶಾನನ್ ಗೇಬ್ರಿಯಲ್, ಶಿಮ್ರಾನ್ ಹೆಟ್ಮೆಯರ್, ಶೈ ಹೋಪ್, ಕೀಮೊ ಪಾಲ್, ಕೇಮಾರ್ ರೋಚ್.

  • ಔಟಾಗದಿದ್ದರೂ ಪೆವಿಲಿಯನ್‍ಗೆ ತೆರಳಿದ ಯುವಿ – ವಿಡಿಯೋ

    ಔಟಾಗದಿದ್ದರೂ ಪೆವಿಲಿಯನ್‍ಗೆ ತೆರಳಿದ ಯುವಿ – ವಿಡಿಯೋ

    ಟೊರೊಂಟೊ: ಅಂತರಾಷ್ಟ್ರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಟೊರೊಂಟೊ ನ್ಯಾಷನಲ್ಸ್ ತಂಡದ ಪರ ಯುವಿ ಆಡುತ್ತಿದ್ದಾರೆ.

    ಟೂರ್ನಿಯಲ್ಲಿ ಕ್ರಿಸ್ ಗೇಲ್ ನಾಯಕತ್ವದ ವ್ಯಾಂಕೋವರ್ ನೈಟ್ಸ್ ತಂಡದ ವಿರುದ್ಧ ಗುರುವಾರ ಟೊರೊಂಟೊ ನ್ಯಾಷನಲ್ಸ್ ತಂಡ ಮೊದಲ ಪಂದ್ಯವನ್ನು ಆಡಿತ್ತು. ಪಂದ್ಯದಲ್ಲಿ ಯುವಿ 27 ಎಸೆಗಳಲ್ಲಿ ಕೇವಲ 17 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಆದರೆ ಯುವಿ ಪಂದ್ಯದಲ್ಲಿ ಔಟಾಗದೆ ಇದ್ದರೂ ಕೂಡ ಔಟ್ ಎಂದು ಭಾವಿಸಿ ಪೆವಿಲಿಯನ್ ಕಡೆ ನಡೆದಿದ್ದರು.

    ರಿಜ್ವಾನ್ ಬೌಲಿಂಗ್ ನಲ್ಲಿ ಯುವಿ ಔಟಾಗುತ್ತಿದಂತೆ ಪೆವಿಲಿಯನ್ ಕಡೆ ನಡೆದರು. ಆದರೆ ವಿಡಿಯೋ ರಿಪ್ಲೈ ಸಂದರ್ಭದಲ್ಲಿ ನಾಟೌಟ್ ಆಗಿದ್ದು ಕಂಡು ಬಂತು. ಆದರೆ ಈ ವೇಳೆಗಾಗಲೇ ಯುವಿ ಪೆವಿಲಿಯನ್ ಸೇರಿದ್ದರು. ರಿಜ್ವಾನ್ ಎಸೆದ ಚೆಂಡು ಬ್ಯಾಟ್‍ಗೆ ತಾಗಿ ಕೀಪರ್ ಕೈ ಸೇರಿದ್ದರು ಕೂಡ ಕ್ಯಾಚ್ ಪಡೆಯಲು ವಿಫಲರಾದ ಪರಿಣಾಮ ವಿಕೆಟ್‍ಗೆ ಬಡಿದಿತ್ತು. ಚೆಂಡು ಕೀಪರಿಗೆ ತಾಗಿ ವಿಕೆಟ್‍ಗೆ ತಾಗಿದರು ಕೂಡ ಯುವಿ ಕ್ರೀಸ್‍ನಲ್ಲೇ ಇದ್ದು, ಬಳಿಕ ಮುಂದೇ ಸಾಗಿದ್ದರು. ಇದನ್ನು ಗಮನಿಸದ ಯುವಿ ತಾನು ಔಟಾಗಿದ್ದೇನೆ ಎಂದು ಭಾವಿಸಿ ಹೊರ ನಡೆದಿದ್ದರು.

    ಪಂದ್ಯದಲ್ಲಿ ಗೇಲ್ ನಾಯಕತ್ವದ ವ್ಯಾಂಕೋವರ್ ನೈಟ್ಸ್ ತಂಡ 8 ವಿಕೆಟ್ ಗೆಲುವು ಪಡೆದಿದೆ. ಮೊದಲು ಬ್ಯಾಟಿಂಗ್ ನಡೆಸಿದ ಟೊರೊಂಟೊ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. 160 ರನ್ ಗುರಿ ಬೆನ್ನತ್ತಿದ್ದ ವ್ಯಾಂಕೋವರ್ ನೈಟ್ಸ್ 17.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 162 ಸಿಡಿಸಿ ಗೆಲುವು ಪಡೆಯಿತು. ಚಾಡ್ವಿಕ್ ವಾಲ್ಟನ್ 59 ರನ್, ರಾಸಿ ವ್ಯಾನ್ ಡೇರ್ ದುಸ್ಸೇನ್ 65 ರನ್ ಸಿಡಿಸಿದ ಪರಿಣಾಮ ವ್ಯಾಂಕೋವರ್ ನೈಟ್ಸ್ ಗೆಲುವು ಪಡೆಯಿತು.