– ರಾಷ್ಟ್ರಧ್ವಜ ಹಿಡಿದು ಪಥಸಂಚಲನ ಮಾಡುವಂತೆ ದಲಿತ ಸಂಘಟನೆಗಳಿಂದ ಪಟ್ಟು
ಕಲಬುರಗಿ: ಚಿತ್ತಾಪುರ (Chittapur) ಆರ್‌ಎಸ್‌ಎಸ್ ಪಥಸಂಚಲನ (RSS Flag March) ಪ್ರಕರಣ ಸಂಬಂಧ ಕಲಬುರಗಿ (Kalaburagi) ಜಿಲ್ಲಾಡಳಿತ ನಡೆಸಿದ ಶಾಂತಿ ಸಭೆಯಲ್ಲಿಅಶಾಂತಿ ಮೂಡಿದೆ.
ಬೆಳಗ್ಗೆ 11:30ಕ್ಕೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ನೇತೃತ್ವದಲ್ಲಿ ಆರ್‌ಎಸ್‌ಎಸ್, ಭೀಮ್ ಆರ್ಮಿ (Bhim Army) ಸೇರಿದಂತೆ 10 ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಮೊದಲಿಗೆ ಡಿಸಿಗೆ ಲಿಖಿತ ಹೇಳಿಕೆ ಸಲ್ಲಿಸಿದ ಸಂಘಟನೆಗಳಿಗೆ ಸಭೆಯಲ್ಲಿ ಅನಿಸಿಕೆ ಹೇಳಲು ಸೂಚಿಸಲಾಯಿತು.
ಈ ವೇಳೆ ಆರ್‌ಎಸ್‌ಎಸ್ ಲಾಠಿ ಬಿಟ್ಟು ರಾಷ್ಟ್ರಧ್ವಜ ಹಿಡಿದು ಪಥಸಂಚಲನ ಮಾಡುವಂತೆ ದಲಿತ (Dalit) ಸಂಘಟನೆಗಳು ಪಟ್ಟು ಹಿಡಿದವು. ಇದಕ್ಕೆ ಲಾಠಿ ಹಿಡಿದು ಪಥಸಂಚಲನ ಮಾಡುವುದಾಗಿ ಆರ್‌ಎಸ್‌ಎಸ್ ಪರವಾಗಿ ಬಂದ ಬಿಜೆಪಿ ಮುಖಂಡ ಅಂಬಾರಾಯ್ ಅಷ್ಟಗಿ ಹೇಳಿದರು. ಎರಡು ಕಡೆ ವಾಗ್ವಾದ ಜೋರಾದ ಬೆನ್ನಲ್ಲೇ ಪರಿಸ್ಥಿತಿ ಅರಿತ ಜಿಲ್ಲಾಧಿಕಾರಿಗಳು ಶಾಂತಿ ಸಭೆಯನ್ನು ಅರ್ಧಕ್ಕೆ ಅಂತ್ಯಗೊಳಿಸಿದರು.
ಸಭೆಯ ಬಳಿಕ ಹೊರಬಂದ ಆರ್‌ಎಸ್‌ಎಸ್ ಮುಖಂಡರ ವಿರುದ್ಧ ಸಂಘಟನೆಗಳು ಧಿಕ್ಕಾರ ಕೂಗಿದರು. ಪೊಲೀಸರು ಮಧ್ಯಪ್ರವೇಶಿಸಿ ಆರ್‌ಎಸ್‌ಎಸ್ ಮುಖಂಡರನ್ನು ಕಾರಿನವರೆಗೆ ಕರೆದೊಯ್ದು ಕಳಿಸಿದರು. ಇದನ್ನೂ ಓದಿ: ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ., 25 ಲಕ್ಷ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ: ಬಿಹಾರಿಗಳಿಗೆ ಮಹಾಘಟಬಂಧನ್ ‘ಗ್ಯಾರಂಟಿ’
ಮಾಧ್ಯಮಗಳ ಜೊತೆ ಮಾತಾಡಿದ ದಲಿತ ಸಂಘಟನೆ ಮುಖಂಡರು, ಆರ್‌ಎಸ್‌ಎಸ್ ಪಥಸಂಚನಲದ ದಿನವೇ ನಾವೂ ಪಥಸಂಚಲನ ಮಾಡುತ್ತೇವೆ ಎಂದರು. ಇದಕ್ಕೆ ಕಿಡಿಕಾರಿದ ಆರ್‌ಎಸ್‌ಎಸ್ ಪರ ಬಿಜೆಪಿ ಮುಖಂಡ ಅಂಬಾರಾಯ್ ಅಷ್ಟಗಿ, ಪ್ರಿಯಾಂಕ್ ಖರ್ಗೆ (Priyank Kharge) ಜಿದ್ದಿಗೆ ಬಿದ್ದು ಈ ರೀತಿ ಮಾಡುತ್ತಿದ್ದಾರೆ ದೂರಿದರು.
ಅ.30 ರಂದು ಕಲಬುರಗಿ ಹೈಕೋರ್ಟ್ (Kalaburagi High Court) ಆದೇಶದತ್ತ ಎಲ್ಲರ ಚಿತ್ತ ಇದೆ. ನವೆಂಬರ್ 2ರಂದು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಮಾಡುತ್ತಾ ಎನ್ನುವ ಕುತೂಹಲ ಹೆಚ್ಚಾಗಿದೆ.
ಯಾರು ಏನು ಹೇಳಿದ್ದಾರೆ?
ನಾವು ಲಾಠಿ ಬಿಟ್ಟು ಪಥಸಂಚಲನ ಮಾಡಿ ಅಂತ ಹೇಳಿದ್ದೆವು. ಆದರೆ ಆರ್‌ಎಸ್‌ಎಸ್ ಒಪ್ಪಿಲ್ಲ. ಇಂದು ನಡೆದ ಸಭೆಯಲ್ಲಿ ಒಮ್ಮತ ಬಂದಿಲ್ಲ. ಆರ್‌ಎಸ್‌ಎಸ್ ಪಥಸಂಚಲನದ ದಿನವೇ ನಾವು ದಲಿತ ಸಂಘಟನೆಗಳಿಂದ ಪಥಸಂಚಲನ ಮಾಡುತ್ತೇವೆ.
– ರಾಜು, ದಲಿತ ಮುಖಂಡ
ಪ್ರಿಯಾಂಕ್ ಖರ್ಗೆ ಜಿದ್ದಿಗೆ ಬಿದ್ದು ಈ ರೀತಿ ಮಾಡುತ್ತಿದ್ದಾರೆ. ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಲು ಬಂದಿದ್ದಾರೆ. ನನ್ನ ಮೇಲೆ ಮತ್ತೆ ಏನಾದ್ರು ಆದ್ರೆ ಅದಕ್ಕೆ ಪ್ರಿಯಾಂಕ್ ಖರ್ಗೆ ಅವರೇ ಕಾರಣ.ಲಾಠಿ ಬಿಟ್ಟು ಪಥಸಂಚಲನ ಮಾಡಿ ಎನ್ನುತ್ತಿದ್ದಾರೆ. ನಮಗೆ ಹೇಳಲು ಇವರು ಯಾರು? ಸಭೆಗೆ ಬಂದವರಲ್ಲಿ ರೌಡಿ ಶೀಟರ್ ಗಳಿದ್ದಾರೆ
– ಅಂಬರಾಯ ಅಷ್ಟಗಿ, ಬಿಜೆಪಿ ಮುಖಂಡ









