Tag: chippu handi

  • ಚಾಮರಾಜನಗರದಲ್ಲಿ ಅಪರೂಪದ ಚಿಪ್ಪು ಹಂದಿ ರಕ್ಷಣೆ

    ಚಾಮರಾಜನಗರದಲ್ಲಿ ಅಪರೂಪದ ಚಿಪ್ಪು ಹಂದಿ ರಕ್ಷಣೆ

    ಚಾಮರಾಜನಗರ: ಜಿಲ್ಲೆಯಲ್ಲಿ ಅಪರೂಪದ ಚಿಪ್ಪುಹಂದಿ ಕಾಣಿಸಿಕೊಂಡಿದ್ದು, ಇದನ್ನು ಕಂಡ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.

    ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ ಚಿಪ್ಪುಹಂದಿ ಪತ್ತೆಯಾಗಿದ್ದು, ರಕ್ಷಣೆ ಮಾಡಲಾಗಿದೆ. ಮಂಗಲ ಗ್ರಾಮದ ಮಹೇಶ್ ಅವರ ಬಾಳೆ ತೋಟದಲ್ಲಿ ಈ ಅಪರೂಪದ ಚಿಪ್ಪುಹಂದಿ ಕಾಣಿಸಿಕೊಂಡಿದ್ದು, ಇದನ್ನು ಕಂಡ ಸ್ಥಳೀಯರು ಒಂದು ಕ್ಷಣ ಆಶ್ಚರ್ಯಗೊಂಡಿದ್ದಾರೆ. ನಂತರ ಅದಕ್ಕೆ ಯಾವುದೇ ರೀತಿಯ ತೊಂದರೆ ನೀಡದೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಹಿಡಿದು ಕೊಟ್ಟಿದ್ದಾರೆ.

    ಚಿಪ್ಪು ಹಂದಿ ಕಂಡ ತಕ್ಷಣ ತೋಟದ ಮಾಲೀಕ ಮಹೇಶ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಅಪರೂಪರದ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದಾರೆ. ಸೆರೆ ಹಿಡಿದ ಬಳಿಕ ಚಿಪ್ಪು ಹಂದಿಯನ್ನು ಕಾಡಿಗೆ ಬಿಟ್ಟಿದ್ದಾರೆ.

  • ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಪತ್ತೆ

    ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಪತ್ತೆ

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅಳಿವಿನ ಅಂಚಿನಲ್ಲಿರುವ ಚಿಪ್ಪುಹಂದಿ ಕಾಣಿಸಿಕೊಂಡಿದೆ.

    ಗುಂಡ್ಲುಪೇಟೆ ತಾಲೂಕಿನ ಹಂಗಳಪುರದ ಜಮೀನಿನಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ. ಹಂಗಳಪುರ ಗ್ರಾಮದ ಜಮೀನೊಂದರ ಟೊಮೆಟೊ ಬೆಳೆಗೆ ಹಾಕಲಾಗಿದ್ದ ಬಲೆಗೆ ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು.

    ಈ ವೇಳೆ ಅರಣ್ಯ ಇಲಾಖೆ ಮಾಹಿತಿ ಪಡೆದು ಸ್ಥಳಕ್ಕೆ ಬಂದು ಚಿಪ್ಪುಹಂದಿಯನ್ನು ರಕ್ಷಿಸಿ ಓಂಕಾರ್ ಅರಣ್ಯ ವಲಯಕ್ಕೆ ಬಿಟ್ಟಿದ್ದಾರೆ. ಪ್ರಾಣಿಗಳನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರಾಪ್ ಸೇರಿದಂತೆ ಇನ್ನಿತರ ಸಮೀಕ್ಷೆ ನಡೆಸಿದಾಗಲೂ ಚಿಪ್ಪುಹಂದಿ ಇರುವುದು ಪತ್ತೆಯಾಗಿರಲಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

    ಬಲೆಗೆ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು. ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ. ಹುಳ-ಹುಪ್ಪಟೆ, ಕೀಟಗಳನ್ನು ತಿಂದು ಬದುಕುವ ಈ ನಿಶಾಚಾರಿ ಪ್ರಾಣಿ ಬೇಟೆಗಾರರ ಕೆಂಗಣ್ಣಿಗೆ ಗುರಿಯಾಗಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯಾಧಿಕಾರಿ ಹೇಳಿದರು.

  • 20 ಕೆ.ಜಿ. ತೂಕದ ಚಿಪ್ಪು ಹಂದಿ ಪತ್ತೆ – ನಾಲ್ವರ ಬಂಧನ

    20 ಕೆ.ಜಿ. ತೂಕದ ಚಿಪ್ಪು ಹಂದಿ ಪತ್ತೆ – ನಾಲ್ವರ ಬಂಧನ

    ಚಿಕ್ಕಮಗಳೂರು: ತಾಲೂಕಿನ ಇಳೇಖಾನ್ ಗ್ರಾಮದಲ್ಲಿ ಚಿಪ್ಪು ಹಂದಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಾಫಿ ತೋಟದ ಮಾಲೀಕ ಮೋಹನ್, ರಾಜಶೇಖರ್, ಮಲ್ಲೇಶ್ ಮತ್ತು ಗಣೇಶ್ ಬಂಧಿತ ಆರೋಪಿಗಳು. ಚಿಕ್ಕಮಗಳೂರು ವಲಯ ಆರ್.ಎಫ್.ಓ ಶಿಲ್ಪಾ ನೇತೃತ್ವದಲ್ಲಿ ದಾಳಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ಜೀವಂತ ಚಿಪ್ಪು ಹಂದಿ, ಒಂದು ಬೈಕ್ ಮತ್ತು ಒಂದು ಓಮ್ನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

    20 ಕೆ.ಜಿ. ತೂಕದ ಚಿಪ್ಪು ಹಂದಿ ಇದಾಗಿದ್ದು, ಇಷ್ಟು ತೂಕದ ಚಿಪ್ಪು ಹಂದಿ ತುಂಬಾ ಅಪರೂಪವಾಗಿ ಕಂಡು ಬರುತ್ತವೆ ಎಂದು ಹೇಳಲಾಗುತ್ತಿದೆ. ಬಂಧಿತರು 40 ಲಕ್ಷ ಬೆಲೆ ಬಾಳುವ ಚಿಪ್ಪು ಹಂದಿಯನ್ನ ಬೇಟೆಯಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಬಳಿಕ ಖಚಿತ ಮಾಹಿತಿ ಮೇರೆಗೆ ಆರ್.ಎಫ್.ಓ ಶಿಲ್ಪಾ ದಾಳಿ ಮಾಡಿದ್ದಾರೆ

    ಈ ಚಿಪ್ಪು ಹಂದಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಸದ್ಯಕ್ಕೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, 40 ಲಕ್ಷ ಬೆಲೆ ಬಾಳುವ ಜೀವಂತ ಚಿಪ್ಪು ಹಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 18.5 ಕೆಜಿ ತೂಕದ ಚಿಪ್ಪು ಹಂದಿ ಪತ್ತೆ

    ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 18.5 ಕೆಜಿ ತೂಕದ ಚಿಪ್ಪು ಹಂದಿ ಪತ್ತೆ

    ಚಿಕ್ಕಮಗಳೂರು: ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ 18.5 ಕೆ.ಜಿ. ತೂಕದ ಎರಡು ಚಿಪ್ಪು ಹಂದಿ ಪತ್ತೆಯಾಗಿದೆ.

    ಸುಮಾರು ಎರಡರಿಂದ ಮೂರು ಲಕ್ಷ ಬೆಲೆಬಾಳುವ ಈ ಚಿಪ್ಪು ಹಂದಿಯನ್ನ ಬೇಟೆಯಾಡಿ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದ ಇಬ್ಬರಲ್ಲಿ ಓರ್ವ ಆರೋಪಿಯನ್ನ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಅರಣ್ಯ ಸಿಬ್ಬಂದಿಗಳು ಬಂಧಿಸಿದ್ದಾರೆ.

    ಹಲಸೂರು ಮೀಸಲು ಅರಣ್ಯದಲ್ಲಿ ಪ್ರದೀಪ್ ಹಾಗೂ ಪ್ರಕಾಶ್ ಇಬ್ಬರು ಯುವಕರು ಎರಡು ಚಿಪ್ಪು ಹಂದಿಯನ್ನ ಬೇಟೆಯಾಡಿದ್ದರು. ಬೇಟೆಯ ಬಳಿಕ ಹಂದಿಯನ್ನ ಬೇರೆಡೆ ಸಾಗಿಸಲು ಹೊಂಚು ಹಾಕುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬಾಳೆಹೊನ್ನೂರು ಎ.ಸಿ.ಎಫ್ ಲೋಹಿತ್ ಕುಮಾರ್, ಆರ್.ಎಫ್.ಓ ತನುಜಕುಮಾರ್ ಹಾಗೂ ಡಿ.ಆರ್.ಎಫ್.ಓ ಸುಂದ್ರೇಶ್ ನೇತೃತ್ವದಲ್ಲಿ ದಾಳಿ ನಡೆಸಿ ಪ್ರದೀಪ್ ಎಂಬಾತನನ್ನ ಬಂಧಿಸಿ ಎರಡು ಚಿಪ್ಪು ಹಂದಿಯನ್ನ ರಕ್ಷಿಸಿದ್ದಾರೆ.

    ಬಂಧಿತ ಆರೋಪಿಯಿಂದ 18.5 ಕೆ.ಜಿ.ತೂಕದ ಗಂಡು ಮತ್ತು ಹೆಣ್ಣು ಚಿಪ್ಪು ಹಂದಿ ಹಾಗೂ ಒಂದು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಈ ದಾಳಿಯಲ್ಲಿ ಮತ್ತೋರ್ವ ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಅರಣ್ಯಾಧಿಕಾರಿಗಳು ಪ್ರಕಾಶ್‍ಗಾಗಿ ಬಲೆ ಬೀಸಿದ್ದಾರೆ. ಈ ಚಿಪ್ಪು ಹಂದಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv