Tag: chip

  • ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

    ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಅವರ ನ್ಯೂರಾಲಿಂಕ್ (Neuralink) ಕಂಪನಿ ಮಾನವರ ಮೆದುಳಿಗೆ ಅಳವಡಿಸಬಹುದಾದ ರೋಬೋಟ್ ಚಿಪ್ (Chip) ಅನ್ನು ಶೀಘ್ರವೇ ಪರೀಕ್ಷಿಸಲಿದೆ ಎಂದು ತಿಳಿಸಿದ್ದಾರೆ. ಈ ತಂತ್ರಜ್ಞಾನದ ಪರೀಕ್ಷೆಯ ಬಳಿಕ ಮಸ್ಕ್ ಸ್ವತಃ ಈ ಚಿಪ್ ಅನ್ನು ಹೊಂದಲು ಬಯಸಿರುವುದಾಗಿ ಹೇಳಿದ್ದಾರೆ.

    ಮಸ್ಕ್‌ನ ಸ್ಟಾರ್ಟ್ಅಪ್ ನ್ಯೂರಾಲಿಂಕ್ ನಿರ್ಮಿಸಿರುವ ಈ ಚಿಪ್ ಮನುಷ್ಯನಿಗೆ ಅಳವಡಿಸಲಾದಲ್ಲಿ ಆತ ತನ್ನ ಆಲೋಚನೆಗಳ ಮೂಲಕ ನೇರವಾಗಿ ಕಂಪ್ಯೂಟರ್‌ಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಈ ಚಿಪ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ನಾವು ಎಫ್‌ಡಿಎಗೆ (ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸಲ್ಲಿಸಿದ್ದೇವೆ. ಅಲ್ಲಿಂದ ಅನುಮತಿ ಪಡೆದರೆ, ಇನ್ನು ಕೇವಲ 6 ತಿಂಗಳುಗಳಲ್ಲಿ ನಾವು ಮಾನವರಲ್ಲಿ ಮೊದಲ ಬಾರಿಗೆ ಚಿಪ್ ಅಳವಡಿಸಲು ಸಾಧ್ಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    2019ರ ಜುಲೈನಲ್ಲಿ ನ್ಯೂರಾಲಿಂಕ್ 2020ರಲ್ಲಿಯೇ ಮಾನವರ ಮೇಲೆ ಈ ಚಿಪ್‌ನ ಮೊದಲ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಈಗಾಗಲೇ ಈ ನಾಣ್ಯದ ಗಾತ್ರದ ಚಿಪ್‌ಗಳನ್ನು ಪ್ರಾಣಿಗಳ ತಲೆಬುರುಡೆಗಳಲ್ಲಿ ಅಳವಡಿಸಿ ಪರೀಕ್ಷೆ ನಡೆಸಲಾಗಿದೆ.

    ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಒಂದು ವೇಳೆ ಯಶಸ್ವಿಯಾದರೆ, ಇದು ಮಾನವನ ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಸ್ನಾಯುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರದ ವ್ಯಕ್ತಿಗಳೂ ಸಕ್ರಿಯರಾಗುತ್ತಾರೆ. ಮಾನವನ ಬೆನ್ನುಹುರಿ ತುಂಡಾಗಿದ್ದರೂ ಆತನ ದೇಹ ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಿಸುವ ಸಾಮರ್ಥ್ಯ ಇದೆ. ಆ ವ್ಯಕ್ತಿ ಮೆದುಳಿನಿಂದಲೇ ಯಂತ್ರಗಳ ಜೊತೆ ಸಂವಹಿಸಬಹುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟ್ವಿಟ್ಟರ್‌ ಅಕ್ಷರ ಮಿತಿ 280ರಿಂದ 1,000ಕ್ಕೆ ಏರಿಕೆ – ಸುಳಿವು ನೀಡಿದ ಮಸ್ಕ್‌

    Live Tv
    [brid partner=56869869 player=32851 video=960834 autoplay=true]

  • ಜಾಧವ್ ಪತ್ನಿಯ ಶೂನಲ್ಲಿ ಚಿಪ್ ಇರಬಹುದು ಎಂದ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ಜಾಧವ್ ಪತ್ನಿಯ ಶೂನಲ್ಲಿ ಚಿಪ್ ಇರಬಹುದು ಎಂದ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ನವದೆಹಲಿ: ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಕುಟುಂಬವನ್ನು ಪಾಕಿಸ್ತಾನ ನಡೆಸಿಕೊಂಡ ರೀತಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಾಧವ್ ಪತ್ನಿ ಚೇತನಾ ಅವರ ಶೂನಲ್ಲಿ ಚಿಪ್ ಇರಬಹುದು ಎಂಬ ಪಾಕಿಸ್ತಾನದ ಹೇಳಿಕೆಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಜಾಧವ್ ಪತ್ನಿ ಹಾಗೂ ತಾಯಿ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನ ಏರಿ ಪಾಕಿಸ್ತಾನ ತಲುಪಿದ್ರು. ಚಿಪ್‍ನಂತಹ ವಸ್ತು ಇದ್ದಿದ್ದರೆ ವಿಮಾನ ನಿಲ್ದಾಣದಲ್ಲೇ ಡಿಟೆಕ್ಟ್ ಆಗುತ್ತಿತ್ತು ಎಂದು ಹೇಳಿದ್ರು.

    ಇಬ್ಬರೂ ಮಹಿಳೆಯರು ಪಾಕಿಸ್ತಾನ ತಲುಪಲು ಏರ್ ಇಂಡಿಯಾ ವಿಮಾನ ಹಾಗೂ ಎಮಿರೇಟ್ಸ್ ವಿಮಾನ ಏರಿದ್ರು. ಒಂದು ವೇಳೆ ಅನುಮಾನಾಸ್ಪದ ವಸ್ತು ಶೂನಲ್ಲಿ ಇದ್ದಿದ್ರೆ ಭದ್ರತಾ ತಪಾಸಣೆ ದಾಟಿ ಹೇಗೆ ಬಂದ್ರು. ನಮಗೆ ಏರ್ ಇಂಡಿಯಾ ಮೇಲೆ ನಿಯಂತ್ರಣವಿದೆ ಎಂದು ಅವರು ಹೇಳಿದ್ರೂ ಎಮಿರೇಟ್ಸ್ ಮೇಲೆ ನಮಗೆ ನಿಯಂತ್ರಣವಿಲ್ಲ. ಹೀಗಿರುವಾಗ ಅವರು ಭದ್ರತಾ ತಪಾಸಣೆಯನ್ನು ದಾಟಿ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ರು.

    ಯಾವುದೇ ವಿಷಯವಿಲ್ಲದೆ ಪಾಕಿಸ್ತಾನ ಈ ರೀತಿ ಹೇಳಿಕೆ ನೀಡಿ ಸೀನ್ ಕ್ರಿಯೇಟ್ ಮಾಡಿದ್ದನ್ನು ಸುಷ್ಮಾ ಖಂಡಿಸಿದ್ರು. ಸತತ ಪ್ರಯತ್ನದ ನಂತರವೂ ಕುಲಭೂಷಣ್ ಜಾಧವ್ ಅವರ ಶೂಗಳನ್ನ ಹಿಂದಿರುಗಿಸಲಿಲ್ಲ. ಇದೊಂದು ಮಿತಿಮೀರಿದ ಅಸಂಬದ್ಧತೆ ಎಂದು ಹೇಳಿದ್ರು.

    ಪಾಕಿಸ್ತಾನ ಈ ಭೇಟಿಯನ್ನ ಅಣಕಿಸಿದ್ದು, ಪ್ರಚಾರಕ್ಕಾಗಿ ಮಾತ್ರ ಇದನ್ನ ಬಳಸಿಕೊಳ್ತು. ಜಾಧವ್ ಅವರ ತಾಯಿಗೆ ಮರಾಠಿಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಇಬ್ಬರು ಪಾಕಿಸ್ತಾನ ಅಧಿಕಾರಿಗಳು ಹಾಜರಿದ್ದು, ಜಾಧವ್ ಅವರ ತಾಯಿಯನ್ನ ಪದೇ ಪದೇ ತಡೆದರು. ಆದ್ರೆ ಅವರು ಅದನ್ನು ಮುಂದುವರಿಸಿದಾಗ ಇಂಟರ್‍ಕಾಮ್ ಸ್ವಿಚ್ ಆಫ್ ಮಾಡಿದ್ರು ಎಂದು ಸುಷ್ಮಾ ಸ್ವರಾಜ್ ಪಾಕಿಸ್ತಾನದ ನಡವಳಿಕೆಯನ್ನ ನೆನಪಿಸಿದ್ರು.

    ಕುಲಭೂಷಣ್ ಜಾಧವ್ ಅವರ ಪತ್ನಿಯ ಶೂನಲ್ಲಿ ಲೋಹದ ವಸ್ತು ಇದೆ ಎಂದು ಹೇಳಿ ಪಾಕಿಸ್ತಾನ ಅವರು ಶೂಗಳನ್ನ ಕಸಿದುಕೊಂಡಿದೆ. ಶೂನೊಳಗೆ ಇದೆ ಎನ್ನಲಾದ ಅನುಮಾನಾಸ್ಪದ ವಸ್ತುವಿನ ಸ್ವರೂಪದ ಬಗ್ಗೆ ತಿಳಿಯಲು ಶೂಗಳನ್ನ ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದೆ.

    ಜಾಧವ್ ಬಂಧನದ 21 ತಿಂಗಳ ನಂತರ ಪಾಕಿಸ್ತಾನ ಸರ್ಕಾರ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸಿತ್ತು. ಇಸ್ಲಾಮಾಬಾದ್ ನಲ್ಲಿರುವ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಸೇನೆ, ಪೊಲೀಸ್, ಶಾರ್ಪ್ ಶೂಟರ್ಸ್ ಗಳ ಬಿಗಿಭದ್ರತೆ ನಡುವೆ ಪತ್ನಿ ಚೇತನ್ ಕುಲ್ ಹಾಗೂ ತಾಯಿ ಆವಂತಿ ಅವರು ಜಾಧವ್ ಅವರನ್ನು ಭೇಟಿ ಮಾಡಿದರು.

    ಮಧ್ಯಾಹ್ನ 1.35ರಿಂದ ಅರ್ಧ ಗಂಟೆ ಕಾಲ ಪತ್ನಿ ಮತ್ತು ತಾಯಿ ಭೇಟಿ ಮಾಡಿ ಮಾತನಾಡಿದರು. ಒಂದು ಕೋಣೆಯಲ್ಲಿ ಜಾಧವ್ ಕುಳಿತಿದ್ದರೆ ಮತ್ತೊಂದು ಕೋಣೆಯಲ್ಲಿ ಚೇತನ್ ಕುಲ್ ಹಾಗೂ ತಾಯಿ ಆವಂತಿ ಕುಳಿತಿದ್ದರು. ಮೂವರು ನೇರವಾಗಿ ಮಾತನಾಡಲು ಪಾಕ್ ಸರ್ಕಾರ ಅವಕಾಶ ಕೊಡಲಿಲ್ಲ. ಬದಲಾಗಿ ಗಾಜಿನ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಕೋಣೆಯಲ್ಲಿ ಇಂಟರ್ ಕಾಮ್ ಮೂಲಕ ಮಾತನಾಡಿದರು.

    ಪಾಕಿಸ್ತಾನದ ರಾಷ್ಟ್ರಪಿತ ಮೊಹಮ್ಮದ್ ಅಲಿ ಜಿನ್ನಾ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾಕ್ ಸರ್ಕಾರ ಮಾನವೀಯತೆ ಆಧಾರದ ಮೇಲೆ ಜಾಧವ್ ಕುಟುಂಬದವರ ಭೇಟಿಗೆ ಅನುಮತಿ ನೀಡಿತ್ತು. ಭೇಟಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದುಬೈ ಮೂಲಕ ಇಸ್ಲಾಮಾಬಾದ್‍ಗೆ ಜಾಧವ್ ಪತ್ನಿ ಮತ್ತು ತಾಯಿ ಬಂದಿದ್ದರು.

    ಭಾರತ ಸರ್ಕಾರ ಈ ಹಿಂದೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡಬೇಕೆಂದು ಪಾಕ್ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಪಾಕಿಸ್ತಾನ ಭಾರತದ ಮನವಿಯನ್ನು ತಿರಸ್ಕರಿಸಿತ್ತು. ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಭಾರತ ನೆದರ್ ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಿತ್ತು. ಭಾರತದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿತ್ತು.

    ಏನಿದು ಪ್ರಕರಣ?
    ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಜಾಧವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನ್ಯಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್ ನಲ್ಲಿ ಭಾರತ ವಾದ ಮಂಡಿಸಿತ್ತು.

  • ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

    ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

    ನವದೆಹಲಿ: ಮಾನವರಹಿತ ಲೆವೆಲ್ ಕ್ರಾಸಿಂಗ್ ನಿಂದಾಗಿ ರೈಲಿಗೆ ಸಿಕ್ಕಿ ಅಪಘಾತವಾಗುವುದನ್ನು ತಡೆಯಲು ರೈಲ್ವೇ ಸಚಿವಾಲಯ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೆರವನ್ನು ಪಡೆದುಕೊಂಡಿದೆ.

    ಹೌದು. ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು ಪರೀಕ್ಷಾರ್ಥ ಪ್ರಯೋಗವಾಗಿ ಮುಂಬೈ ಮತ್ತು ಅಸ್ಸಾಂ ರಾಜಧಾನಿ ಗುವಾಹಟಿ ಮಧ್ಯೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಅಳವಡಿಸಲಾಗಿದೆ.

    ಏನಿದು ಹೊಸ ವ್ಯವಸ್ಥೆ?
    ಮಾನವರಹಿತ ಲೆವೆಲ್ ಕ್ರಾಸಿಂಗ್ ಬಳಿ ಹೂಟರ್ಸ್ ಗಳನ್ನು ರೈಲ್ವೇ ಈಗ ಅಳವಡಿಸಿದೆ. ರೈಲು ಸಿಗ್ನಲ್ ಬಳಿ ಬರುತ್ತಿದ್ದಾಗ ರೈಲಿನಲ್ಲಿ ಅಳವಡಿಸಲಾಗಿರುವ ಇಂಟಿಗ್ರೇಟೆಡ್ ಸರ್ಕ್ಯೂಟ್(ಐಸಿ) ಚಿಪ್‍ನಿಂದ ಸಿಗ್ನಲ್ ರವಾನೆಯಾಗಿ ಹೂಟರ್ಸ್ ಜೋರಾಗಿ ಶಬ್ಧ ಮಾಡುವ ಮೂಲಕ ಜನರನ್ನು ಎಚ್ಚರಿಸುತ್ತದೆ.

    ಈಗಾಗಲೇ 20 ಹೂಟರ್ಸ್ ಗಳನ್ನು ಮುಂಬೈ – ಗುವಾಹಟಿ ಮಧ್ಯೆ ಇರುವ ಮಾನವರಹಿತ ಲೆವೆಲ್ ಕ್ರಾಸಿಂಗ್ ಬಳಿ ಅಳವಡಿಸಲಾಗಿದೆ ಎಂದು ಈ ಯೋಜನೆಯಲ್ಲಿ ತೊಡಗಿಕೊಂಡಿರುವ ರೈಲ್ವೇ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಷ್ಟು ದೂರದಲ್ಲಿದ್ರೆ ಶಬ್ಧ?
    500 ಮೀಟರ್ ದೂರದಿಂದ ರೈಲು ಬರುತ್ತಿದ್ದಾಗ ಹೂಟರ್ಸ್ ಎಚ್ಚರಿಕೆಯ ಶಬ್ಧ ಮೊಳಗಿಸಲು ಆರಂಭಿಸುತ್ತದೆ. ರೈಲು ಹತ್ತಿರ ಹತ್ತಿರ ಬರುತ್ತಿದ್ದಂತೆ ಸಿಗ್ನಲ್‍ನಲ್ಲಿ ಶಬ್ಧ ಜೋರಾಗುತ್ತದೆ. ರೈಲು ಸಂಪೂರ್ಣವಾಗಿ ಲೆವೆಲ್ ಕ್ರಾಸಿಂಗ್ ದಾಟಿದ ಮೇಲೆ ಹೂಟರ್ಸ್ ತಾನಾಗಿಯೇ ನಿಲ್ಲುತ್ತದೆ.

    ಯೋಜನೆ ಪ್ರಕಾರ ಮುಂದಿನ ದಿನಗಳಲ್ಲಿ ಉಳಿದ ರೈಲುಗಳು ಸಂಚರಿಸುವ ಮಾರ್ಗಗಳಲ್ಲಿ ಹೂಟರ್ಸ್ ಗಳನ್ನು ಅಳವಡಿಸಲು ಇಲಾಖೆ ಮುಂದಾಗಿದೆ. ಜನರನ್ನು ಎಚ್ಚರಿಸುವುದು ಮಾತ್ರವಲ್ಲದೇ ಉಪಗ್ರಹ ಆಧಾರಿತ ಈ ವ್ಯವಸ್ಥೆ ರೈಲಿನ ಚಲನೆಯ ಮಾಹಿತಿಯನ್ನು ರಿಯಲ್ ಟೈಂನಲ್ಲಿ ತೋರಿಸುತ್ತದೆ.

    ಪ್ರಸ್ತುತ ದೇಶದಲ್ಲಿ 9,340 ಮಾನವ ರಹಿತ ಲೆವೆಲ್ ಕ್ರಾಸಿಂಗ್ ಗಳು ಇದೆ ಎಂದು ರೈಲ್ವೇಯ ರಾಜ್ಯ ಸಚಿವ ಮನೋಜ್ ಸಿನ್ಹಾ ಎಂದು 2016ರ ಜುಲೈನಲ್ಲಿ ರಾಜ್ಯಸಭೆಗೆ ತಿಳಿಸಿದ್ದರು. ಪ್ರತಿ ವರ್ಷ ದೇಶದಲ್ಲಿ ಸಂಭವಿಸುವ ರೈಲ್ವೇ ಅಪಘಾತಲ್ಲಿ ಮಾನವ ರಹಿತ ಕ್ರಾಸಿಂಗ್ ನಿಂದಾಗಿ ಶೇ.40 ರಷ್ಟು ಅಪಘಾತಗಳು ಆಗುತ್ತಿದೆ.

    2014-15ರಲ್ಲಿ 1,148, 2015-16ರಲ್ಲಿ 1,253 ಮಾನವ ರಹಿತ ಕ್ರಾಸಿಂಗ್ ತೆಗೆಯಲಾಗಿತ್ತು. ಮುಂದಿನ 2-3 ವರ್ಷದಲ್ಲಿ ಸಂಪೂರ್ಣವಾಗಿ ಎಲ್ಲ ಮಾನವ ರಹಿತ ಲೆವೆಲ್ ಕ್ರಾಸಿಂಗ್ ತೆಗೆಯಲು ಸಚಿವಾಲಯ ಗುರಿಯನ್ನು ಹಾಕಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ:ಗೋವಾದಿಂದ ಮುಂಬೈಗೆ ಮರಳಿದ ತೇಜಸ್ ರೈಲಿನ ಸ್ಥಿತಿ ನೋಡಿ ಅಧಿಕಾರಿಗಳಿಗೆ ಶಾಕ್!