Tag: Chinnaswamy Stampede

  • ಆರ್‌ಸಿಬಿ ಐತಿಹಾಸಿಕ ಗೆಲುವಿನ ಸಂತೋಷದ ಕ್ಷಣ ದುರಂತವಾಯ್ತು – ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಟ್ವೀಟ್

    ಆರ್‌ಸಿಬಿ ಐತಿಹಾಸಿಕ ಗೆಲುವಿನ ಸಂತೋಷದ ಕ್ಷಣ ದುರಂತವಾಯ್ತು – ಚಿನ್ನಸ್ವಾಮಿ ಕಾಲ್ತುಳಿತದ ಬಗ್ಗೆ ಕೊಹ್ಲಿ ಟ್ವೀಟ್

    – ಘಟನೆಯಾದ 3 ತಿಂಗಳ ಬಳಿಕ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಸಂದೇಶ

    ಬೆಂಗಳೂರು: ಯಾವ ದಿನ ಆರ್‌ಸಿಬಿ (RCB) ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತದ ಕ್ಷಣವಾಯಿತು ಎಂದು ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ನೆನೆದು ವಿರಾಟ್ ಕೊಹ್ಲಿ ದುಃಖಿಸಿದ್ದಾರೆ. ದುರಂತವಾದ 3 ತಿಂಗಳ ಬಳಿಕ ಆರ್‌ಸಿಬಿ ಆಟಾಗಾರ ವಿರಾಟ್ ಕೊಹ್ಲಿ (Virat Kohli) ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.ಇದನ್ನೂ ಓದಿ: ಕೇರಳ ಮೂಲದ ಅರ್ಚಕನ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌ – ಪ್ರತಿದೂರು; ದೂರುದಾರೆ ಸೇರಿ ಐವರ ಬಂಧನ

    ಆರ್‌ಸಿಬಿ ಅಧಿಕೃತ ಎಕ್ಸ್ (RCB Official) ಖಾತೆಯ ಮೂಲಕ ಸಂದೇಶ ನೀಡಿರುವ ಕೊಹ್ಲಿ, ಜೂ.4ರಂದು ನಡೆದ ಘಟನೆಯನ್ನು ಎದುರಿಸಲು ಜೀವನದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಯಾವ ದಿನ ಆರ್‌ಸಿಬಿ ಫ್ರ್ಯಾಂಚೈಸಿಯ ಇತಿಹಾಸದಲ್ಲಿಯೇ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತೋ, ಅದು ದುರಂತವಾಗಿ ಬದಲಾಯ್ತು. ಆ ಸಮಯದಲ್ಲಿ ಜೀವ ಕಳೆದುಕೊಂಡವರು ಮತ್ತು ಗಾಯಾಳುಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸಿದ್ದೇನೆ. ನೀವೆಲ್ಲರೂ ಇದೀಗ ನಮ್ಮ ಕಥೆಯ ಭಾಗವಾಗಿದ್ದೀರಿ. ಇನ್ಮುಂದೆ ನಾವು ಒಟ್ಟಾಗಿ ಕಾಳಜಿ, ಜವಾಬ್ದಾರಿ ಹಾಗೂ ಗೌರವದೊಂದಿಗೆ ಮುಂದುವರಿಯೋಣ ಎಂದು ಬರೆದುಕೊಂಡಿದ್ದಾರೆ.

    ಜೂ.3ರಂದು ನಡೆದ ಐಪಿಎಲ್ 2025ರ (IPL 2025) ಫಿನಾಲೆಯಲ್ಲಿ ಆರ್‌ಸಿಬಿ ತಂಡ 18 ವರ್ಷಗಳ ಬಳಿಕ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಜೂ.4ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಹಲವರು ಆರ್‌ಸಿಬಿ ಅಭಿಮಾನಿಗಳು ಗಾಯಗೊಂಡಿದ್ದರು.ಇದನ್ನೂ ಓದಿ: ಸಚಿವ ಹೆಚ್‌.ಸಿ ಮಹದೇವಪ್ಪ ಹೆಸರಿನಲ್ಲಿ ಬರೋಬ್ಬರಿ 27 ಲಕ್ಷ ರೂ. ವಂಚಿಸಿದ ಮಹಿಳೆ

  • ಚಿನ್ನಸ್ವಾಮಿ ಕಾಲ್ತುಳಿತದಿಂದ ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟ ಘಟನೆ – ಸಿಎಂ ಭಾವುಕ

    ಚಿನ್ನಸ್ವಾಮಿ ಕಾಲ್ತುಳಿತದಿಂದ ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟ ಘಟನೆ – ಸಿಎಂ ಭಾವುಕ

    – ಕಾಲ್ತುಳಿತದಲ್ಲಿ ಸರ್ಕಾರದ ತಪ್ಪಿಲ್ಲ, ತಪ್ಪು ಮಾಡಿದವರ ವಿರುದ್ಧ ಕ್ರಮ ವಹಿಸಿದ್ದೇವೆ ಎಂದ ಸಿದ್ದರಾಮಯ್ಯ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತದಿಂದ (Chinnaswamy Stampede) ತುಂಬಾ ಡಿಸ್ಟರ್ಬ್ ಆಗಿದ್ದೇನೆ, ನನ್ನ ರಾಜಕೀಯ ಬದುಕಿನಲ್ಲೇ ಬಹಳ ದು:ಖ ಕೊಟ್ಟಂತಹ ಘಟನೆಯಿದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭಾವುಕರಾದರು.

    ಮುಂಗಾರು ಅಧಿವೇಶನದ ಕೊನೆಯ ದಿನವಾದ ಶುಕ್ರವಾರ (ಆ.22) ವಿಧಾನಸಭೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣ ಪ್ರತಿಧ್ವನಿಸಿತು. ಈ ಬಗ್ಗೆ ನಡೆದ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸಿ, ಪ್ರಕರಣದಲ್ಲಿ ಸರ್ಕಾರದ ಪಾತ್ರ ಇಲ್ಲ, ಇದಕ್ಕೆ ಸರ್ಕಾರ ಕಾರಣ ಅಲ್ಲ, ಯಾರೂ ರಾಜೀನಾಮೆ ಕೊಡಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟರು. ಬಿಜೆಪಿಯವರ (BJP) ಸಾರ್ವಜನಿಕ ಕ್ಷಮಾಪಣೆಯ ಆಗ್ರಹ ತಳ್ಳಿಹಾಕಿದ ಸಿಎಂ ಸದನದಲ್ಲಿ ಮತ್ತೊಮ್ಮೆ ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಇದೇ ವೇಳೆ ಆರ್.ಅಶೋಕ್ (R.Ashok) ಮಾತನಾಡಿ, ನಿಮಗೆ ಹೃದಯ, ಮನುಷ್ಯತ್ವ ಇದ್ದಿದ್ರೆ ಕ್ಷಮೆ ಕೇಳಬೇಕಿತ್ತು ಎಂದಿದ್ದಾರೆ.ಇದನ್ನೂ ಓದಿ: ಹೈದ್ರಾಬಾದ್‌ನಲ್ಲಿ ಕಲಬುರಗಿ ಮೂಲದ ಒಂದೇ ಕುಟುಂಬದ ಐವರ ನಿಗೂಢ ಸಾವು

    ಸಿಎಂ ಅವರು, ನನಗೆ ಈ ಘಟನೆ ತುಂಬಾ ಡಿಸ್ಟರ್ಬ್ ಮಾಡಿದೆ. ಇಂಥ ದುರಂತ ಆಗಬಾರದಿತ್ತು, ಆಗಿಹೋಗಿದೆ. ನಾನು ಘಟನೆ ನಡೆದ ದಿನವೇ ವಿಷಾದ ವ್ಯಕ್ತಪಡಿಸಿದ್ದೆ. ನನ್ನ ರಾಜಕೀಯ ಜೀವನದಲ್ಲಿ ಇಂಥ ಕಹಿ ಘಟನೆ ಯಾವತ್ತೂ ಆಗಿರಲಿಲ್ಲ. ಕಾಲ್ತುಳಿತದಿಂದ 11 ಜನರ ಸಾವನ್ನು ನಾನು ನೋಡೇ ಇರಲಿಲ್ಲ. ದುರ್ಘಟನೆಗೆ ನಾನು ತುಂಬಾ ದು:ಖಪಟ್ಟಿದ್ದೇನೆ. ವಿಷಾದ ವ್ಯಕ್ತಪಡಿಸಿದ್ದೇನೆ. ಮನುಷ್ಯತ್ವ ಇರೋರಿಗೆ ದು:ಖ ಆಗೇ ಆಗುತ್ತೆ, ನನಗೂ ಆಗಿದೆ ಎಂದು ಭಾವುಕರಾಗಿ ನುಡಿದರು.

    ಇನ್ನೂ ನಾವು ಪ್ರಕರಣದಲ್ಲಿ ಕ್ರಮ ತಗೊಂಡಿದ್ದೇವೆ, ಐವರು ಅಧಿಕಾರಿಗಳ ಅಮಾನತು ಮಾಡಿದ್ದೇವೆ. ಆರ್‌ಸಿಬಿ, ಕೆಎಸ್‌ಸಿಎ, ಡಿಎನ್‌ಎ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಅವರನ್ನು ಅರೆಸ್ಟ್ ಮಾಡಿಸಿದ್ದೀವಿ. ಮ್ಯಾಜಿಸ್ಟ್ರಿಯಲ್, ಕುನ್ಹಾ ನೇತೃತ್ವದಲ್ಲಿ ತನಿಖೆ ಮಾಡಿಸಿದ್ದೇವೆ. ಕಾಲ್ತುಳಿತ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ತಗೊಂಡಿದ್ದೀವಿ. ನ್ಯಾಯ ಕೊಡುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಿದ್ದೀವಿ. ನಾವು ಏನೆಲ್ಲ ಕ್ರಮ ತೆಗೊಳ್ಳಬೇಕೋ ಅದೆಲ್ಲವನ್ನು ಮಾಡಿದ್ದೇವೆ. ಹೈಕೋರ್ಟ್‌ನವರು ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಕೋರ್ಟ್ ಹೇಳಿದ ಕೂಡಲೇ ಜಾರ್ಜ್ಶೀಟ್ ಸಲ್ಲಿಕೆ ಮಾಡ್ತೀವಿ ಎಂದು ತಿಳಿಸಿದರು. ಮುಂದುವರೆದು, ಕಾಲ್ತುಳಿತ ಘಟನೆ ನಡೆಯಬಾರದಾಗಿತ್ತು, ನಡೆದುಹೋಗಿದೆ. ಇದಕ್ಕೆ ಸರ್ಕಾರ ಕಾರಣ, ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್ ಕಾರಣ, ರಾಜೀನಾಮೆ ಕೊಡಬೇಕು ಎಂದು ಹೇಳೋದು ಸರಿಯಲ್ಲ. ನಿಮ್ಮ ಅವಧಿಯಲ್ಲಿ ಆದ ಘಟನೆಗಳಿಗೆ ನೀವು ಕ್ಷಮೆ ಕೇಳಿಲ್ಲ, ವಿಷಾದ ವ್ಯಕ್ತಪಡಿಸಲಿಲ್ಲ, ರಾಜೀನಾಮೆ ಕೊಡಲಿಲ್ಲ, ತನಿಖೆಯೂ ಮಾಡಿಸಲಿಲ್ಲ ಅಂತ ಸಿಎಂ ಕೌಂಟರ್ ಕೊಟ್ಟರು.

    ಕಾಲ್ತುಳಿತ ಪ್ರಕರಣ ನಡೆದಾಗ ಸಿಎಂ ಜನಾರ್ದನ ಹೊಟೇಲ್‌ಗೆ ಹೋಗಿದ್ದರು ಎಂಬ ಬಿಜೆಪಿ ಆರೋಪಕ್ಕೂ ಪ್ರತಿಕ್ರಿಯೆ ನೀಡಿ, ನಾನು ಜನಾರ್ದನ ಹೊಟೇಲ್‌ಗೆ ಆ ದಿನ 5:30ಕ್ಕೆ ಹೋಗಿದ್ದು ನಿಜ, ನಾನು ಸುಳ್ಳು ಹೇಳಲ್ಲ. ನನ್ನ ಮೊಮ್ಮಗ ಹಿಂದಿನ ದಿನ ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದ. ಗ್ರ‍್ಯಾಂಡ್ ಸ್ಟೆಪ್ಸ್‌ಗೆ ಅವನೂ ಬಂದಿದ್ದ, ದೋಸೆ ತಿನ್ನೋಣ ಅಂದಿದ್ದಕ್ಕೆ ಜನಾರ್ದನ ಹೊಟೇಲ್‌ಗೆ ಹೋಗಿದ್ವಿ. ಆ ದಿನ 5:30ರವರೆಗೂ ನನಗೆ ಕಾಲ್ತುಳಿತ ಸಾವು ಬಗ್ಗೆ ಗೊತ್ತಾಗಿರಲಿಲ್ಲ. ಪೊನ್ನಣ್ಣ ಹೇಳೋವರೆಗೂ ನನಗೆ ಗೊತ್ತಾಗಿರಲಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಟೀಂ ಇಂಡಿಯಾಗೆ ಅಯ್ಯರ್ ಒನ್‌ಡೇ ಕ್ಯಾಪ್ಟನ್? – ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ

    ಬಿಜೆಪಿ ಅವಧಿಯಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ದುರಂತಗಳನ್ನು ಅಂಕಿಅಂಶದೊಂದಿಗೆ ಸಿಎಂ ಉಲ್ಲೇಖಿಸಿದರು. ಕಾಲ್ತುಳಿತ ಪ್ರಕರಣಗಳಲ್ಲಿ ಯಾವ ಸಿಎಂ ಸಹ ರಾಜೀನಾಮೆ ಕೊಟ್ಟಿಲ್ಲ. ಪ್ರಯಾಗ್‌ರಾಜ್ ಕಾಲ್ತುಳಿತಕ್ಕೆ (Prayagraj Stampede) ಯೋಗಿ ಆದಿತ್ಯನಾಥ್ (Yogi Adityanath) ರಾಜೀನಾಮೆ ಕೊಟ್ರಾ? ಅಹಮದಾಬಾದ್ ವಿಮಾನ ದುರಂತಕ್ಕೆ (Ahmedabad Plane Crash) ಗುಜರಾತ್ (Gujarat) ಸಿಎಂ ರಾಜೀನಾಮೆ ಕೊಟ್ರಾ? ಹಾವೇರಿ ಗೋಲಿಬಾರ್‌ಗೆ ಯಡಿಯೂರಪ್ಪ (Yediyurappa) ರಾಜೀನಾಮೆ ಕೊಟ್ರಾ? 2006ರಲ್ಲಿ ಡಾ.ರಾಜ್ ನಿಧನ ವೇಳೆ 7 ಜನ ಸಾವನ್ನಪ್ಪಿದ್ದರು. ಹೆಚ್‌ಡಿಕೆ ಆಗ ಸಿಎಂ, ಬಿಎಸ್‌ವೈ ಡಿಸಿಎಂ. ಆಗ ಕುಮಾರಸ್ವಾಮಿ (HD Kumaraswamy) ರಾಜೀನಾಮೆ ಕೊಟ್ರಾ? ರಾಜೀನಾಮೆ ಕೇಳಿದ್ರಾ? ಗೋಲಿಬಾರ್‌ನಲ್ಲಿ ಸತ್ತ ರೈತರ ಬಗ್ಗೆ ವಿಷಾದ ವ್ಯಕ್ತಪಡಿಸಿಲ್ಲ, ಕ್ಷಮೆ ಕೋರಲಿಲ್ಲ, ರಾಜೀನಾಮೆ ಕೊಡಲಿಲ್ಲ. ಸುರೇಶ್ ಕುಮಾರ್ ನಮ್ಮನ್ನೇ ಕುಮ್ಮಕ್ಕು ಕೊಟ್ಟವರು ಅಂದುಬಿಟ್ಟಿದ್ದಾರೆ. ಕೊರೋನಾ ಇದ್ದಾಗ ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೇ 36 ಜನ ಸಾವನ್ನಪ್ಪಿದ್ದರು. ಆಗ ಸುಧಾಕರ್ ಆರೋಗ್ಯ ಮಂತ್ರಿ, ಬೊಮ್ಮಾಯಿ ಸಿಎಂ. ಆಗ ನೀವು ಅಬೇಟ್ಟರ್ (ಪ್ರೇರಣೆ) ಅಂತ ಸುಧಾಕರ್‌ಗೆ, ಬೊಮ್ಮಾಯಿಗೆ ಕರೆದ್ರಾ? ಇಲ್ಲ. ಈಗ ನನಗೆ ಮಾತ್ರ ಅಬೇಟ್ಟರ್ ಅಂತ ಕರೆಯುತ್ತಿದ್ದೀರಿ. ಕಾಲ್ತುಳಿತ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಇಂಥ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ನಾಯಕರಿಗೆ ಸಿಎಂ ತಿವಿದರು.

    ಆರ್‌ಸಿಬಿ ಆಟಗಾರರ ತೆರೆದ ವಾಹನ ಮೂಲಕ ಮೆರವಣಿಗೆ ಸಂಬಂಧ ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದನ್ನೂ ಉಲ್ಲೇಖಿಸಿ ಸಿಎಂ ಟಾಂಗ್ ಕೊಟ್ಟರು. ನಾವು ಸಂಭ್ರಮಕ್ಕೆ ಅವಕಾಶ ಕೊಡದೇ ಇದ್ದಿದ್ರೆ ಬಿಜೆಪಿಯವ್ರು ಅದನ್ನೇ ದೊಡ್ಡದಾಗಿ ಬಿಂಬಿಸಿ ಚಳುವಳಿ ಮಾಡ್ತಿದ್ರು ಎಂದು ಟಕ್ಕರ್ ಕೊಟ್ಟರು. ಜು.3ರಂದೇ ಸಂಭ್ರಮಾಚರಣೆಗೆ ಕೆಎಸ್‌ಸಿಎ ಪತ್ರ ಕೊಡ್ತಾರೆ. ಇನ್ಸ್ಪೆಕ್ಟರ್ ಗಿರೀಶ್ ಪರ್ಮಿಶನ್ ಕೊಡಲಿಲ್ಲ. ಮಧ್ಯಾಹ್ನ 1 ಗಂಟೆಗೆ ಆರ್‌ಸಿಬಿ, ಕೆಎಸ್‌ಸಿಎ ಟ್ವೀಟ್ ಮಾಡ್ತಾರೆ. ಅವರ ಟ್ವೀಟ್‌ನ್ನು ಲಕ್ಷಾಂತರ ಜನ ನೋಡ್ತಾರೆ. ಇಷ್ಟೆಲ್ಲಾ ಇದ್ರೂ ಪೊಲೀಸರು ಕ್ರಮವೇಕೆ ತೆಗೆದುಕೊಳ್ಳಲಿಲ್ಲ. ಟ್ವೀಟ್‌ಗಳನ್ನು ಡೀಲಿಟ್ ಮಾಡಿಸಲಿಲ್ಲ ಎಂದು ದುರಂತಕ್ಕೆ ಸರ್ಕಾರ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದರು.

    ಸಿಎಂ ಉತ್ತರಕ್ಕೆ ಒಪ್ಪದೇ ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಕಾಲ್ತುಳಿತಕ್ಕೆ, 11 ಜನರ ಸಾವಿಗೆ ಸರ್ಕಾರವೇ ಕಾರಣ. ಸಿಎಂ ಇನ್ನೂ ಕ್ಷಮಾಪಣೆ ಕೇಳಿಲ್ಲ. ಸಿಎಂ ಉತ್ತರ ಖಂಡಿಸಿ ಸಭಾತ್ಯಾಗ ಮಾಡ್ತೇವೆ ಎಂದು ಅಶೋಕ್ ಹೇಳಿದರು.

    ಒಟ್ಟಿನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಮಣಿಸುವ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆ ಆಗಿದೆ. ಸರ್ಕಾರದ ತಪ್ಪು ಯಾವತ್ತೂ ಒಪ್ಪಿಕೊಳ್ಳುವಂತೆ ಕಾಣದ ಸಿಎಂ ಬಿಜೆಪಿಯನ್ನೇ ತಮ್ಮ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಯಶಸ್ವಿಯಾದರು.ಇದನ್ನೂ ಓದಿ: ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ದಸರಾ ಉದ್ಘಾಟನೆ: ಸಿಎಂ ಘೋಷಣೆ

  • ಪೊಲೀಸ್ ಆಯುಕ್ತರ ಮನವಿ ಮೇರೆಗೆ ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮಕ್ಕೆ ಹೋಗಿದ್ದೆ: ಡಿಕೆಶಿ

    ಪೊಲೀಸ್ ಆಯುಕ್ತರ ಮನವಿ ಮೇರೆಗೆ ಚಿನ್ನಸ್ವಾಮಿ ಸ್ಟೇಡಿಯಂ ಕಾರ್ಯಕ್ರಮಕ್ಕೆ ಹೋಗಿದ್ದೆ: ಡಿಕೆಶಿ

    ಬೆಂಗಳೂರು: ಆರ್‌ಸಿಬಿ (RCB) ತಂಡದವರಿಗೆ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿ ಎಂದು ಪೊಲೀಸ್ ಆಯುಕ್ತರು ನನಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ನಾನು ಆ ಕಾರ್ಯಕ್ರಮಕ್ಕೆ ಹೋಗಿ ಸೂಚನೆ ನೀಡಿದ್ದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

    ವಿಧಾನಸಭೆಯಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R.Ashok) ಮಾತನಾಡಿ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲವಾದರೆ ಉಪಮುಖ್ಯಮಂತ್ರಿಗಳು ಹೋಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: Video | RCB ನಮ್ಮ ಟೀಮೇ ಅಲ್ಲ, ಅವ್ರು ಕರ್ನಾಟಕದವ್ರೇ ಅಲ್ಲ, ಕಾರ್ಯಕ್ರಮಕ್ಕೆ ಬರಲ್ಲ ಅಂದಿದ್ದೆ: ಸಿಎಂ

    ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿ, ನನ್ನನ್ನು ಪದೇ ಪದೇ ನೆನೆಯದಿದ್ದರೆ ನಿಮಗೆ ಸಮಾಧಾನ ಆಗುವುದಿಲ್ಲ, ನಿಮ್ಮ ಪಕ್ಷದವರಿಗೆ ಖುಷಿ ಪಡಿಸಲೂ ಆಗುವುದಿಲ್ಲ. ನಿಮಗೆ ಖುಷಿ ಆಗುವಂತೆ ಉತ್ತರ ಕೊಡಲೂ ಆಗುವುದಿಲ್ಲ ಎಂದು ಛೇಡಿಸಿದರು.

    ಆರ್‌ಸಿಬಿ ವಿಜಯೋತ್ಸವದಂದ ವಿಧಾನಸೌಧದ ಎದುರು ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಎಸ್‌ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದೇ ಹತಾಶರಾಗಿದ್ದರು. ಇನ್ನೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುವಂತೆ ನೀವೇ ಬಂದು ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ನನ್ನ ಬಳಿ ಮನವಿ ಮಾಡಿದರು. ನಾನು ಕಾರ್ಯಕ್ರಮಕ್ಕೆ ಹೋಗಿದ್ದೂ ನಿಜ, ಅಲ್ಲಿ ಇದ್ದಿದ್ದೂ ನಿಜ, ಆರ್‌ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ನಿಜ. 10 ನಿಮಿಷಗಳಲ್ಲಿ ಈ ಕಾರ್ಯಕ್ರಮ ಮುಗಿಸುವಂತೆ ಅವರಿಗೆ ಸೂಚನೆ ಕೊಟ್ಟಿದ್ದೂ ನಿಜ. ಇದೇ ಮಾತನ್ನು ನಾನು ನ್ಯಾ.ಕುನ್ಹಾ ಅವರ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದೂ ನಿಜ. ನಾನು ಅಲ್ಲಿಗೆ ಹೋಗಿಲ್ಲ ಎಂದು ಹೇಳುತ್ತಿಲ್ಲ. ಅಲ್ಲಿಗೆ ಹೋಗಲು ನಿಮ್ಮ ಅನುಮತಿಯ ಅಗತ್ಯವೂ ನನಗಿಲ್ಲ. ಪೊಲೀಸರ ಮನವಿ ಮೇಲೆ ನನ್ನ ಜವಾಬ್ದಾರಿಯಿಂದ ನಾನು ಹೋಗಿ ಅವರಿಗೆ ಸೂಚನೆ ನೀಡಿದ್ದೇನೆ. ಕಪ್‌ಗೆ ಮುತ್ತು ನೀಡಿದ್ದೇನೆ, ಆಟಗಾರರಿಗೆ ಅಭಿನಂದಿಸಿದ್ದೇನೆ ಎಂದರು.ಇದನ್ನೂ ಓದಿ: ಸುದೀಪ್ ಕನಸಿನ ವಿಷ್ಣು ಸ್ಮಾರಕ – ಪುತ್ಥಳಿ ನಿರ್ಮಾಣಕ್ಕೆ ಚಾಲನೆ

  • ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ – ಪೊಲೀಸರ ಮೇಲೆ ತಪ್ಪು ಹೊರಿಸಿ ನುಣುಚಿಕೊಳ್ಳುವ ಯತ್ನ: ವಿಜಯೇಂದ್ರ

    ಕಾಲ್ತುಳಿತಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ – ಪೊಲೀಸರ ಮೇಲೆ ತಪ್ಪು ಹೊರಿಸಿ ನುಣುಚಿಕೊಳ್ಳುವ ಯತ್ನ: ವಿಜಯೇಂದ್ರ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆದ ಕಾಲ್ತುಳಿತಕ್ಕೆ (Chinnaswamy Stampede) ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ ಎಂದು ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ದೂರಿದ್ದಾರೆ.

    ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka), ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಜೆಡಿಎಸ್ ವಿರೋಧ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿಜಯೇಂದ್ರ ಅವರು ಮಾತನಾಡಿದರು. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಬಿಪಿಎಲ್ ಕಾರ್ಡ್ ಇರೋದು ಕರ್ನಾಟಕದಲ್ಲೇ, ಮತ್ತೆ ಪರಿಷ್ಕರಣೆ ಮಾಡ್ತೀವಿ: ಸಚಿವ ಮುನಿಯಪ್ಪ

    ಅಮಾಯಕ ಪೊಲೀಸರ ಮೇಲೆ ಕ್ರಮ ಏಕೆ?
    ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವ ಸಂಪುಟ ಮತ್ತು ಈ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆದ ಕಾಲ್ತುಳಿತ ಪ್ರಕರಣದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹಸಚಿವರು, ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಅಮಾಯಕ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು. ಇವರ ಹುಳುಕು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡರು ಎಂದು ವಿಜಯೇಂದ್ರ ಆರೋಪಿಸಿದರು.

    ರಸಗೊಬ್ಬರ ಕೊರತೆಯಿಂದ ರೈತರು ರಾಜ್ಯದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಪರಿಹಾರ ನೀಡುತ್ತಿಲ್ಲ. ಇದರ ಕುರಿತು ಚರ್ಚೆಯೂ ಆಗುತ್ತಿಲ್ಲ. ಈ ಎಲ್ಲ ವಿಷಯಗಳನ್ನು ಸದನದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಿದ್ದೇವೆ. ಸಾಂಕೇತಿಕವಾಗಿ ಎರಡೂ ಪಕ್ಷಗಳ ಶಾಸಕರು ಹೋರಾಟ ಮಾಡಿದ್ದೇವೆ ಎಂದು ವಿವರಿಸಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಕೆಲವೊಂದಷ್ಟು ಖಾಲಿ ಟ್ರಂಕುಗಳಿವೆ, ಕೇವಲ ಶಬ್ದ ಮಾತ್ರ ಮಾಡುತ್ತವೆ: ಡಿಕೆಶಿ

    ಇವೆಲ್ಲ ವಿಷಯಗಳನ್ನು ಸದನದ ಒಳಗೆ ಪ್ರಸ್ತಾಪಿಸುತ್ತೇವೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಹೊಣೆಗೇಡಿ ಸರಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | SIT ಭೇಟಿಯಾದ ಪದ್ಮಲತಾ ಕುಟುಂಬ – 38 ವರ್ಷಗಳ ಹಳೆಯ ಕೇಸ್ ತನಿಖೆಗೆ ಒತ್ತಾಯ

  • ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ

    ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ನಿವೃತ್ತ ನ್ಯಾ.ಕುನ್ಹಾ ಆಯೋಗದ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ (State Govt) ಹೈಕೋರ್ಟ್ (High Court) ಸೂಚನೆ ನೀಡಿದೆ.

    ನಿವೃತ್ತ ನ್ಯಾ. ಕುನ್ಹಾ ಆಯೋಗದ ವರದಿ ಪ್ರಶ್ನಿಸಿ ಡಿಎನ್‌ಎ ಮ್ಯಾನೇಜ್ಮೆಂಟ್ (DNA Management) ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ (ಆ.5) ಹೈಕೋರ್ಟ್ನಲ್ಲಿ ನಡೆಯಿತು. ಈ ವೇಳೆ ಹೈಕೋರ್ಟ್, ನಿವೃತ್ತ ನ್ಯಾ.ಕುನ್ಹಾ ಆಯೋಗದ ವರದಿಯನ್ನ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.ಇದನ್ನೂ ಓದಿ: ಪರಮೇಶ್ವರ್ ಪರ ಆಂಧ್ರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಂದ ಮುಂದಿನ ಸಿಎಂ ಘೋಷಣೆ

    ಡಿಎನ್‌ಎ ಪರವಾಗಿ ಹಿರಿಯ ವಕೀಲ ಸಂಪತ್ ಕುಮಾರ್ ವಾದ ಮಂಡಿಸಿ, ನ್ಯಾ.ಕುನ್ಹಾ ವರದಿ ಸಲ್ಲಿಕೆ ಹಾಗೂ ಕಾಲ್ತುಳಿತ ಘಟನೆಯ ಬಗ್ಗೆ ಪೀಠಕ್ಕೆ ವಿವರಣೆ ನೀಡಿದರು. ಇದೇ ವೇಳೆ ಕುನ್ಹಾ ಆಯೋಗಕ್ಕೆ ವಿಚಾರಣಾ ವ್ಯಾಪ್ತಿ ನಿಗದಿಗೊಳಿಸಿರಲಿಲ್ಲ. ನಮಗೆ ನ್ಯಾ.ಕುನ್ಹಾ ವರದಿ ಸಿಕ್ಕಿಲ್ಲ. ಹೀಗಾಗಿ ಮಾಧ್ಯಮಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ನಮ್ಮ ಎರಡು ಮೆಮೊಗಳಿಗೆ (ಜ್ಞಾಪಕ ಪತ್ರ) ನ್ಯಾ.ಕುನ್ಹಾ ಅವರು ಪ್ರತಿಕ್ರಿಯಿಸಿಲ್ಲ. ಮಾಧ್ಯಮಗಳ ವರದಿಯಿಂದ ಇದೆಲ್ಲಾ ಸಿಕ್ಕಿದೆ. ಮಾಹಿತಿ ಹಕ್ಕು ಕಾಯಿದೆ ಅಡಿಯೂ ಅರ್ಜಿ ಸಲ್ಲಿಸಿದ್ದೇವೆ. ಇದುವರೆಗೂ ವರದಿ ಸಿಕ್ಕಿಲ್ಲ ಎಂದು ವಾದಿಸಿದರು.

    ಈ ವೇಳೆ ಅಡ್ವಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಮ್ಮ ಆಕ್ಷೇಪವಿಲ್ಲ. ಆದರೆ ಅರ್ಜಿದಾರರಿಗೆ ನೀಡಲ್ಲ ಎಂದು ವಾದ ಮಂಡಿಸಿದರು. ಬಳಿಕ ಹೈಕೋರ್ಟ್ ವಿಚಾರಣೆಯನ್ನು ಆ.7ಕ್ಕೆ ಮುಂದೂಡಿದೆ.

    2025ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಗೆಲುವು ಸಾಧಿಸಿತ್ತು. ಈ ಹಿನ್ನೆಲೆ ಜೂ.4ರಂದು ಆರ್‌ಸಿಬಿಯ ತವರು ಬೆಂಗಳೂರಿನಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು. ಈ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನೂಕುನುಗ್ಗಲು ಉಂಟಾಗಿ 11 ಜನ ಸಾವನ್ನಪ್ಪಿದ್ದರು. 30ಕ್ಕೂ ಅಧಿಕ ಜನ ಗಾಯಗೊಂಡಿದ್ದರು.ಇದನ್ನೂ ಓದಿ: ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

  • ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ

    ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣ | ಆರ್‌ಸಿಬಿ A1, ಡಿಎನ್‌ಎ A2 – ಮ್ಯಾಜಿಸ್ಟ್ರೇಟ್ ತನಿಖಾ ವರದಿ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ‌ ಪ್ರಕರಣದ (Chinnaswamy Stampede) ಮ್ಯಾಜಿಸ್ಟ್ರೇಟ್ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

    ಬೆಂಗಳೂರು (Bengaluru) ನಗರ ಜಿಲ್ಲಾಧಿಕಾರಿ ಜಗದೀಶ್ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ಕಾಲ್ತುಳಿತಕ್ಕೆ ಆರ್‌ಸಿಬಿಯೇ (RCB) ಕಾರಣ ಎಂದು ಉಲ್ಲೇಖಿಸಲಾಗಿದೆ. ಆರ್‌ಸಿಬಿ ಮ್ಯಾನೇಜ್ಮೆಂಟ್ ಪೊಲೀಸರ ಅನುಮತಿ ಪಡೆಯದೇ ಫ್ರೀ ಪಾಸ್‌ ಎಂದು ಘೋಷಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

    ಘಟನೆಗೆ ನಾಲ್ವರು ಕಾರಣರಾಗಿದ್ದಾರೆ. ನಾಲ್ವರಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ ನಿರ್ಧಾರವೇ ದೊಡ್ಡ ತಪ್ಪು. ಮೊದಲನೇ ಸ್ಥಾನದಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್, ಎರಡನೇ ಸ್ಥಾನದಲ್ಲಿ ಡಿಎನ್‌ಎ , ಮೂರನೇ ಸ್ಥಾನದಲ್ಲಿ ಕೆಎಸ್‌ಸಿಎ ಹಾಗೂ ನಾಲ್ಕನೇ ಸ್ಥಾನದಲ್ಲಿ ಪೊಲೀಸರದ್ದು ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್‌ – ಪೊಲೀಸರನ್ನ ಸಂಪರ್ಕಿಸದೇ ವಿಕ್ಟರಿ ಪೆರೇಡ್‌ ಘೋಷಿಸಿದ್ದ RCB ಫ್ರಾಂಚೈಸಿ

    ಏನಿದು ಪ್ರಕರಣ?
    ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಚಾಂಪಿಯನ್ ಪಟ್ಟವನ್ನೇನೋ ಅಲಂಕರಿಸಿದೆ. ಆದರೆ, ಆರ್‌ಸಿಬಿ ಫ್ಯಾನ್ಸ್ ಐತಿಹಾಸಿಕ ಕ್ಷಣದ ಸಂಭ್ರಮದಲ್ಲಿ ದುರಂತ ಸಂಭವಿಸಿದೆ. 10ಕ್ಕೂ ಹೆಚ್ಚು ಅಭಿಮಾನಿಗಳು ಸಾವನ್ನಪ್ಪಿ ಸೂತಕವಾಗಿ ಆಗಿಬಿಟ್ಟಿದೆ. ಪಂಜಾಬ್ ವಿರುದ್ಧ ಬೆಂಗಳೂರು 6 ರನ್‌ಗಳ ಭರ್ಜರಿ ಜಯ ಸಾಧಿಸ್ತಿದ್ದಂತೆಯೇ ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿಯೇ ದೀಪಾವಳಿಯಂಥಹ ಸಂಭ್ರಮ ಇತ್ತು. ಇವತ್ತು ಇಡೀ ದಿನ ಹೆಚ್‌ಎಎಲ್ ಏರ್‌ಪೋರ್ಟ್ ರೋಡ್, ತಾಜ್ ವೆಸ್ಟ್ ಎಂಡ್ ಹೊಟೇಲ್ ರೋಡ್, ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ ಸುತ್ತ ಮುತ್ತ ರೆಡ್ ಆರ್ಮಿ ಎಲ್ಲಾ ಕಡೆ ಆರ್‌ಸಿಬಿ ತಂಡಕ್ಕೆ ತಮ್ಮ ಅಭಿಮಾನ ತೋರಿದರು.

    ಇವತ್ತು ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ಸುನಾಮಿಯೇ ಸೃಷ್ಟಿ ಆಯ್ತು… ಉಚಿತ ಪ್ರವೇಶ ಆಗಿದ್ದರಿಂದ ಕ್ರೀಡಾಂಗಣಕ್ಕೆ ಫ್ಯಾನ್ಸ್ ಹರಿದುಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ಅಭಿಮಾನಿ ಸಾಗರ ತಡೆಯಲು ಪೊಲೀಸರು ಹೈರಾಣಾಗಿ ಹೋದರು. ಒಂದು ಹಂತದಲ್ಲಿ ಲಾಠಿಯನ್ನೂ ಬೀಸಿದರು. ಕ್ಷಣ ಕ್ಷಣಕ್ಕೂ ಆರ್‌ಸಿಬಿ ಅಭಿಮಾನಿಗಳ ಸುನಾಮಿ ಹೆಚ್ಚುತ್ತಲೇ ಇತ್ತು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೀತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡೋಕೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ (ಮಲ್ಯ ರಸ್ತ್ರೆ), ಮಣಿಪಾಲ್‌ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 6, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

  • ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

    ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ತನಿಖಾ ವರದಿ ಸಲ್ಲಿಸಿದ ನ್ಯಾ. ಮೈಕೆಲ್ ಡಿ ಕುನ್ಹಾ

    ಬೆಂಗಳೂರು: ಮೈಕೆಲ್ ಡಿ ಕುನ್ಹಾ (Michael Cunha) ನೇತೃತ್ವದ ಏಕಸದಸ್ಯ ತನಿಖಾ ಆಯೋಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ (Chinnaswamy Stampede) ಪ್ರಕರಣದ ತನಿಖಾ ವರದಿಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಸಲ್ಲಿಸಿದೆ.

    ಚಿನ್ನಸ್ವಾಮಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಗೆ ಏಕ ಸದಸ್ಯ ಅಯೋಗ ರಚನೆ ಮಾಡಲಾಗಿತ್ತು. ಈಗ ಕುನ್ಹಾ ಅವರು, ಸಿಎಂಗೆ ವರದಿ ಕೊಟ್ಟಿದ್ದಾರೆ. ವರದಿಯಲ್ಲಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‍ಗೆ ಸಮಿತಿ ಶಿಫಾರಸು ಮಾಡಿದೆ. ಹೆಚ್ಚುವರಿ ತನಿಖೆಗೂ ಸಲಹೆ ನೀಡಿದೆ. ಘಟನೆಗೆ ಪೊಲೀಸರ ವೈಫಲ್ಯವೂ ಇದೆ. ಜೊತೆಗೆ, ಕಾರ್ಯಕ್ರಮದ ಆಯೋಜಕರು ಕಾರಣಕರ್ತರು ಅಂತ ವರದಿಯಲ್ಲಿ ಹೇಳಲಾಗಿದೆ ಅಂತ ತಿಳಿದು ಬಂದಿದೆ.

    ಈ ವರದಿಯ ಬಗ್ಗೆ ವಿಧಾನಸೌಧದಲ್ಲಿ ಸಿಎಂ ಸುದ್ದಿಗಾರರೊಂದಿಗೆ ಮಾತನಾಡಿದರು. 2 ವಾಲ್ಯೂಮ್‌ನಲ್ಲಿ ವರದಿ ಕೊಟ್ಟಿದ್ದಾರೆ. ನನಗೆ ಪೂರ್ಣ ವರದಿ ಓದಲು ಆಗಿಲ್ಲ. ವರದಿಯಲ್ಲಿ ಏನಿದೆ ಎಂದು ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಕೇಸ್‌; IPS ಅಧಿಕಾರಿ ವಿಕಾಸ್‌ ಕುಮಾರ್‌ಗೆ ರಿಲೀಫ್‌ – ಅಮಾನತು ರದ್ದಿಗೆ CAT ಆದೇಶ

    ಮುಂದಿನ ಕ್ಯಾಬಿನೆಟ್‌ನಲ್ಲಿ ವರದಿ ಮಂಡಿಸುತ್ತೇವೆ. ಕ್ಯಾಬಿನೆಟ್‌ನಲ್ಲಿ ವರದಿ ಶಿಫಾರಸು ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ಜೂನ್ 4ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ, 11 ಆರ್‌ಸಿಬಿ ಫ್ಯಾನ್ಸ್ ಬಲಿಯಾಗಿದ್ದರು. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಕೇಸ್‌ – ಪೊಲೀಸರನ್ನ ಸಂಪರ್ಕಿಸದೇ ವಿಕ್ಟರಿ ಪೆರೇಡ್‌ ಘೋಷಿಸಿದ್ದ RCB ಫ್ರಾಂಚೈಸಿ

  • ಚಿನ್ನಸ್ವಾಮಿ ಕಾಲ್ತುಳಿತ | CAT ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ – ಸಿಎಂ

    ಚಿನ್ನಸ್ವಾಮಿ ಕಾಲ್ತುಳಿತ | CAT ಆದೇಶಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ – ಸಿಎಂ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ (IPS) ಅಧಿಕಾರಿಗಳ ಅಮಾನತು ಆದೇಶವನ್ನು ರದ್ದು ಮಾಡಿರುವ ಸಿಎಟಿಗೆ (ಕೇಂದ್ರೀಯ ಆಡಳಿತ ನ್ಯಾಯಮಂಡಳಿ) ಮೇಲ್ಮನವಿ ಸಲ್ಲಿಸುವ ಅವಕಾಶವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

    ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿ ವಾರ್ತಾ ಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿಗಳ ಅಮಾನತು ಆದೇಶವನ್ನು ರದ್ದು ಮಾಡಿರುವ ಕೇಂದ್ರೀಯ ಆಡಳಿತ ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದು, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಇದನ್ನೂ ಓದಿ: ಸಿದ್ದು ಫುಲ್ ಟರ್ಮ್ ಸಿಎಂ ಅಸ್ತ್ರಕ್ಕೆ ಡಿಕೆಶಿ ನೆಕ್ಸ್ಟ್ ಸಿಎಂ ಬ್ರಹ್ಮಾಸ್ತ್ರ: ಸಂಖ್ಯಾಬಲ ಡಿಸಿಎಂಗೆ ಇದೆ – ಇಕ್ಬಾಲ್ ಹುಸೇನ್

    ಶಾಸಕ ಬಿ.ಆರ್.ಪಾಟೀಲ್ (BR Patil) ಅವರ ಸಿದ್ದರಾಮಯ್ಯನವರು ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ಅವರ ಹೇಳಿಕೆ ಬಗ್ಗೆ ಮಾಹಿತಿಯಿಲ್ಲ. ಬಿ.ಆರ್.ಪಾಟೀಲ್ ಹಾಗೂ ನಾನು ಒಟ್ಟಿಗೆ ಶಾಸಕರಾಗಿದ್ದರಿಂದ ಹಾಗೂ ನನಗೆ ಮುಖ್ಯಮಂತ್ರಿಯಾಗಲು ಅವಕಾಶ ದೊರೆತಿದ್ದರಿಂದ, ಬಿ.ಆರ್.ಪಾಟೀಲ್‌ರವರು ಈ ರೀತಿ ಹೇಳಿಕೆ ನೀಡಿರಬಹುದು ಎಂದರು.

    ಇದೇ ವೇಳೆ ಜಾತಿಗಣತಿ (Caste Census) ನಡೆಸಲಾಗಿದೆ ಎಂಬ ಪೋಸ್ಟರ್‌ಗಳನ್ನು ಮನೆಗಳಿಗೆ ಭೇಟಿ ನೀಡದೇ, ಮನೆಯ ಮುಂದೆ ಅಂಟಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸುವ ಬಗ್ಗೆ, ಜಾತಿಗಣತಿ ನಡೆಸಲು ಹಲವು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆನ್‌ಲೈನ್ ಮೂಲಕವೂ ಜಾತಿವಿವರಗಳನ್ನು ನೀಡಬಹುದು ಅಥವಾ ಮನೆಗಳಿಗೆ ಭೇಟಿ ನೀಡಿ ವಿವರಗಳನ್ನು ಪಡೆಯಬಹುದು. ಈ ಬಗ್ಗೆ ಸತ್ಯಾಸತ್ಯತೆ ತಿಳಿದು ಮಾಧ್ಯಮದವರು ಪ್ರಶ್ನಿಸಬೇಕು ಎಂದರು.ಇದನ್ನೂ ಓದಿ: ಪ್ರಾಥಮಿಕ ಶಾಲಾ ಶಿಕ್ಷಕರನ್ನು ಬಿಎಲ್‌ಓಗಳಾಗಿ ನೇಮಿಸದಂತೆ ಚುನಾವಣೆ ಆಯೋಗಕ್ಕೆ ಶಿಕ್ಷಣ ‌ಇಲಾಖೆ ಪತ್ರ

  • ಚಿನ್ನಸ್ವಾಮಿ ಕಾಲ್ತುಳಿತ – ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

    ಚಿನ್ನಸ್ವಾಮಿ ಕಾಲ್ತುಳಿತ – ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ಆದೇಶ ಅಂಗೀಕರಿಸಿದ ಕೇಂದ್ರ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಮೂವರು ಐಪಿಎಸ್ ಅಧಿಕಾರಿಗಳನ್ನು (IPS Officers) ಅಮಾನತುಗೊಳಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

    ಆರ್‌ಸಿಬಿ (RCB) ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ ಹಿನ್ನೆಲೆ ಕರ್ತವ್ಯ ಲೋಪ ಆರೋಪದಡಿ ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಿತ್ತು. ಇದನ್ನೂ ಓದಿ: ಭದ್ರಾ ಬಲದಂಡೆ ಕಾಲುವೆ ಸೀಳಿ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿ – ಇಂದು ದಾವಣಗೆರೆ ಬಂದ್

    ಇದೀಗ ರಾಜ್ಯ ಸರ್ಕಾರದ ವರದಿಯನ್ನು ಅಂಗೀಕರಿಸಿದ ಕೇಂದ್ರ ಡಿಪಿಎಆರ್‌ಗೆ ಮಾಹಿತಿ ರವಾನೆ ಮಾಡಿದೆ. ದಯಾನಂದ್, ವಿಕಾಸ್ ಕುಮಾರ್ ಮತ್ತು ಶೇಖರ್ ಎಂಬ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಇದನ್ನೂ ಓದಿ: ವಿಮಾನ ದುರಂತವಾಗಿ ದಿನಗಳೂ ಕಳೆದಿರಲಿಲ್ಲ – ಪಾರ್ಟಿ ಮೂಡ್‌ನಲ್ಲಿದ್ದ ಉದ್ಯೋಗಿಗಳ ವಜಾಗೊಳಿಸಿದ Air India ವೆಂಚರ್‌

  • ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಐಪಿಎಸ್ ಅಧಿಕಾರಿ ದಯಾನಂದ್ ವಿಚಾರಣೆಗೆ ಹಾಜರು

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ – ಐಪಿಎಸ್ ಅಧಿಕಾರಿ ದಯಾನಂದ್ ವಿಚಾರಣೆಗೆ ಹಾಜರು

    – ಒಂದು ಗಂಟೆಗಳ ಕಾಲ ಜಿಲ್ಲಾಧಿಕಾರಿ ಜಗದೀಶ್‌ರಿಂದ ದಯಾನಂದ್ ವಿಚಾರಣೆ

    ಬೆಂಗಳೂರು: ಚಿನ್ನಸ್ವಾಮಿ ಕಾಲ್ತುಳಿತ (Chinnaswamy Stampede) ಪ್ರಕರಣ ಸಂಬಂಧ ಅಮಾನತು ಆದ ಐಪಿಎಸ್ ಅಧಿಕಾರಿ ದಯಾನಂದ್ (B Dayanand) ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಎರಡು ನೋಟಿಸ್‌ಗಳ ಜಾರಿ ಬಳಿಕ ಇಂದು ದಯಾನಂದ್ ವಿಚಾರಣೆಗೆ ಹಾಜರಾಗಿದ್ದರು

    ಒಂದು ಗಂಟೆಗೂ ಹೆಚ್ಚು ಕಾಲ ಜಿಲ್ಲಾಧಿಕಾರಿ ಜಗದೀಶ್ ದಯಾನಂದ್ ಅವರ ಹೇಳಿಕೆಯನ್ನು ದಾಖಲು ಮಾಡಿಕೊಂಡರು. ಭದ್ರತಾ ಲೋಪ, ಕರ್ತವ್ಯ ಲೋಪ ಸಂಬಂಧ ಪ್ರಶ್ನೆಗಳ ಸುರಿಮಳೆಗೈದರು. ಡಿಸಿಪಿ ವಿಧಾನಸೌಧ ಕರಿ ಬಸವನಗೌಡ ಪತ್ರದ ಬಗ್ಗೆಯೂ ಜಿಲ್ಲಾಧಿಕಾರಿ ಮಾಹಿತಿ ಕೇಳಿದರು. ಇದನ್ನೂ ಓದಿ: ಮಂಗಳೂರು| ಹೆತ್ತ ತಾಯಿಯನ್ನೇ ಕೊಲೆಗೈದು ಸುಟ್ಟು ಹಾಕಿದ ಪಾಪಿ ಮಗ

    ಆರ್‌ಸಿಬಿ ಹಾಗೂ ಡಿಎನ್‌ಎ ಅಧಿಕಾರಿಗಳಿಗೆ ನೀವೇನಾದರೂ ಇವೆಂಟ್ ಮಾಡಲು ತಿಳಿಸಿದ್ದೀರಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನಿಮಗೆ ಮಾಹಿತಿ ನೀಡಿದ್ದಾರಾ? ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಬರುತ್ತಾರೆ ಎಂದು ನಿರೀಕ್ಷೆ ಇತ್ತಾ? ಒಂದು ವೇಳೆ ನಿರೀಕ್ಷೆ ಇಟ್ಟಿದ್ದರೆ ಯಾಕೆ ನೀವು ಸರಿಯಾದ ರೀತಿ ಬಂದೋಬಸ್ತ್ ಮಾಡಲಿಲ್ಲ? ನೀವು ಆರ್‌ಸಿಬಿ ತಂಡಕ್ಕೆ ಅಥವಾ ಡಿಎನ್‌ಎ ತಂಡಕ್ಕೆ ನೋಟಿಸ್ ನೀಡಿದ್ದೀರಾ? ನಿಮಗೆ ಸಾವಿನ ಬಗ್ಗೆ ಯಾವಾಗ ತಿಳಿಯಿತು? ಮಧ್ಯಾಹ್ನ ಮೂರು ಗಂಟೆಗೆ ಇರುವ ಕಾರ್ಯಕ್ರಮಕ್ಕೆ ಬೆಳಗ್ಗೆ ಯಾಕೆ ಬಂದೋಬಸ್ತ್ ಮಾಡಲು ತಡವಾಯಿತು ಎಂಬ ಪ್ರಶ್ನೆಗಳನ್ನು ಕೇಳಲಾಯಿತು. ಈ ಎಲ್ಲಾ ಪ್ರಶ್ನೆಗಳಿಗೆ ದಯಾನಂದ್ ಉತ್ತರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಜೀವನ ತುಂಬಾ ಆಕರ್ಷಕ: ವರ್ಗಾವಣೆ ವಿರೋಧಿಸಿ ವೈದ್ಯರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

    ಈಗಾಗಲೇ 65 ಗಾಯಾಳುಗಳು, ಮೃತರಾದ 11 ಕುಟುಂಗಳ ಜೊತೆಗೆ ಭದ್ರತೆಗೆ ಇದ್ದ ಎಸಿಪಿ, ಡಿಸಿಪಿ, ಇನ್ಸ್ಪೆಕ್ಟರ್ ಸೇರಿ 60ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿಚಾರಣೆ ಮುಕ್ತಾಯ ಆಗಿದ್ದು, ಏನಾದ್ರು ಸ್ಪಷ್ಟನೆ ಬೇಕಿದ್ದರೆ ಕೆಲ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಈ ವಾರ ಅಥವಾ ಮುಂದಿನ ವಾರದಲ್ಲಿ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ವರದಿ ಸಲ್ಲಿಕೆ ಮಾಡಲಿದ್ದಾರೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾದ ಎನ್‌ವಿಡಿಯಾ