Tag: Chinese Prime Minister

  • ಚೀನಾ-ಭಾರತ ಸಂಘರ್ಷ: ಕಿಮ್ ಜಾಂಗ್ ಉನ್ ಪ್ರತಿಮೆ ಸುಟ್ಟು ಬಿಜೆಪಿಗರು ಟ್ರೋಲ್

    ಚೀನಾ-ಭಾರತ ಸಂಘರ್ಷ: ಕಿಮ್ ಜಾಂಗ್ ಉನ್ ಪ್ರತಿಮೆ ಸುಟ್ಟು ಬಿಜೆಪಿಗರು ಟ್ರೋಲ್

    ಕೋಲ್ಕತ್ತಾ: ಚೀನಾ-ಭಾರತದ ಸಂಘರ್ಷದಲ್ಲಿ 20 ಸೈನಿಕರು ಹುತಾತ್ಮರಾದ ಹಿನ್ನೆಲೆ ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಪ್ರತಿಮೆ ಸುಟ್ಟುಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಿಜೆಪಿ ಕಾರ್ಯಕರ್ತರನ್ನು ಟ್ರೋಲ್ ಮಾಡುತ್ತಿದ್ದಾರೆ.

    ಬಿಜೆಪಿ ಕಾರ್ಯಕರ್ತರು ಚೀನಾ-ಭಾರತ ಸಂಘರ್ಷವನ್ನು ಖಂಡಿಸಿ ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಪ್ರತಿಮೆಯನ್ನು ಸುಟ್ಟುಹಾಕಬೇಕಿತ್ತು. ಹೊರತಾಗಿ ಕಿಮ್ ಜಾಂಗ್ ಉನ್ ಅವರ ಪ್ರತಿಮೆ ಹಿಡಿದು ಪ್ರತಿಭಟನೆ ಮಾಡಿ, ಸುಟ್ಟುಹಾಕಿದ್ದು ಟ್ರೋಲ್ ಆಗುತ್ತಿದೆ. ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಾಮೆಂಟ್ ಮಾಡಿ ಬಿಜೆಪಿ ಕಾರ್ಯಕರ್ತರ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ: ಇಬ್ಬರು ಮೇಜರ್ ಸೇರಿ 10 ಮಂದಿ ಯೋಧರನ್ನು ಬಿಡುಗಡೆಗೊಳಿಸಿದ ಚೀನಾ

    ಈ ಘಟನೆ ಜೂನ್ 18ರಂದು ನಡೆದಿದ್ದು, ವಿಡಿಯೋದಲ್ಲಿ ಮಾತನಾಡಿದ ಬಿಜೆಪಿಯ ಮುಖಂಡ ಗಣೇಶ್ ಮಟ್ಟಿ, ಲಡಾಖ್‍ನಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಹೀಗಾಗಿ ಚೀನಾ ವಿರುದ್ಧ ನಾವು ಪ್ರತಿಭಟನೆ ನಡೆಸಿದ್ದು, ಅಲ್ಲಿನ ಪ್ರಧಾನಿ ಕಿಮ್ ಜಾಂಗ್ ಉನ್ ಅವರ ಪ್ರತಿಮೆ ಸುಟ್ಟು ಹಾಕುತ್ತಿದ್ದೇವೆ. ಚೀನಾದ ವಸ್ತಗಳನ್ನು ಬಳಸಬೇಡಿ ಎಂದು ಹೇಳಿದ್ದಾರೆ.

    ದೇಶದಲ್ಲಿ ಏನು ನಡೆದಿದೆ ಎನ್ನುವುದನ್ನು ದಯವಿಟ್ಟು ಅವರಿಗೆ ತಿಳಿಸಿ ಎಂದು ನೆಟ್ಟಿಗರೊಬ್ಬರು ಬಿಜೆಪಿ ಕಾರ್ಯಕರ್ತರ ಕಾಲೆಳೆದಿದ್ದಾರೆ. ನೀವು ಚೀನಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅನ್ನೋದೆ ಆದ್ರೆ ನಾವು ಭಾರತದ ಪ್ರಧಾನಿ ರಾಹುಲ್ ಗಾಂಧಿ ಎಂದು ಭಾವಿಸಬೇಕಾಗುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಗೇಲಿ ಮಾಡಿದ್ದಾರೆ.