Tag: chinese food

  • ಟೇಸ್ಟಿ ಚೈನೀಸ್‌ ಪಾಸ್ತಾ ಮಂಚೂರಿಯನ್‌ ನೀವೂ ಟ್ರೈ ಮಾಡಿ

    ಟೇಸ್ಟಿ ಚೈನೀಸ್‌ ಪಾಸ್ತಾ ಮಂಚೂರಿಯನ್‌ ನೀವೂ ಟ್ರೈ ಮಾಡಿ

    ಪಾಸ್ತಾ ಅಂತಾ ಹೇಳಿದ್ರೆ ಎಲ್ಲರಿಗೂ ಇಷ್ಟ. ಇತ್ತೀಚಿನ ಮಕ್ಕಳಂತೂ ಪಾಸ್ತಾದ ಹೆಸರು ಕೇಳಿದ ಕೂಡಲೇ ಬಾಯಲ್ಲಿ ನೀರೂರಿಸುತ್ತಾರೆ. ಪಾಸ್ತಾದಲ್ಲೂ (Pasta) ವಿಧವಿಧವಾದ ರೆಸಿಪಿಗಳಿವೆ. ವೈಟ್‌ ಸಾಸ್‌ ಪಾಸ್ತಾ, ರೆಡ್‌ ಸಾಸ್‌ ಪಾಸ್ತಾ ಅಂತಾ ಹಲವು ವೆರೈಟಿಗಳಿವೆ. ಸಾಸೇಜ್‌ ರೀತಿಯ ಪಾಸ್ತಾವನ್ನು ಇಷ್ಟಪಡುವವರಿಗೆ ಇಲ್ಲಿದೆ ಚೈನೀಸ್‌ ಪಾಸ್ತಾ ಮಂಚೂರಿಯನ್‌ (Chinese Pasta Manchurian). ಇದನ್ನು ಒಮ್ಮೆ ತಿಂದ್ರೆ ಮತ್ತೆ ಮತ್ತೆ ತಿನ್ಬೇಕು ಅನ್ಸೋದಂತು ಪಕ್ಕಾ. ಹೌದು, ನಾವಿವತ್ತು ಚೈನೀಸ್‌ ಪಾಸ್ತಾ ಮಂಚೂರಿಯನ್‌ ಮಾಡೋದು ಹೇಗೆ ಅಂತಾ ಹೇಳ್ಕೊಡ್ತೀವಿ..

    ಬೇಕಾಗಿರುವ ಸಾಮಾಗ್ರಿಗಳು:
    ಪಾಸ್ತಾ – 1½ ಕಪ್
    ಮೈದಾ – ¾ ಕಪ್
    ಕಾರ್ನ್ ಹಿಟ್ಟು – 1 ½ ಕಪ್
    ಮೆಣಸಿನ ಪುಡಿ – 1 ಟೀಸ್ಪೂನ್
    ಉಪ್ಪು
    ಎಣ್ಣೆ
    ಹಸಿಮೆಣಸು – 2
    ಬೆಳ್ಳುಳ್ಳಿ – 2 ಎಸಳು
    ಶುಂಠಿ
    ಈರುಳ್ಳಿ – ½
    ಕ್ಯಾಪ್ಸಿಕಂ – ½
    ಟೊಮೆಟೊ ಸಾಸ್ – 2 ಚಮಚ
    ವಿನೆಗರ್ – 2 ಟೀಸ್ಪೂನ್
    ಸೋಯಾ ಸಾಸ್ – 2 ಟೀಸ್ಪೂನ್
    ಕಾಳುಮೆಣಸಿನ ಪುಡಿ – ½ ಟೀಸ್ಪೂನ್
    ಮೆಣಸಿನ ಪುಡಿ – ½ ಟೀಸ್ಪೂನ್
    ಎಲೆಕೋಸು – ½ ಕಪ್‌
    ಕ್ಯಾರೆಟ್ – ½ ಕಪ್‌
    ಸ್ಪ್ರಿಂಗ್ ಆನಿಯನ್‌ – ಸ್ವಲ್ಪ

    ಮಾಡುವ ವಿಧಾನ:
    ಮೊದಲನೆಯದಾಗಿ ಒಂದು ದೊಡ್ಡ ಪಾತ್ರೆಯಲ್ಲಿ ನೀರು ತೆಗೆದುಕೊಂಡು 1 ಟೀಸ್ಪೂನ್ ಉಪ್ಪು ಸೇರಿಸಿ ಪಾಸ್ತಾವನ್ನು 4 ನಿಮಿಷ ಕುದಿಸಬೇಕು. ಪಾಸ್ತಾ ಸರಿಯಾಗಿ ಬೆಂದ ಬಳಿಕ ನೀರನ್ನು ಬಸಿದು ತಣ್ಣೀರಿನಿಂದ ಪಾಸ್ತಾವನ್ನು ತೊಳೆಯಬೇಕು.

    ನಂತರ ಒಂದು ದೊಡ್ಡ ಬಟ್ಟಲಿನಲ್ಲಿ ¾ ಕಪ್ ಮೈದಾ, ½ ಕಪ್ ಕಾರ್ನ್ ಹಿಟ್ಟು, 1 ಟೀಸ್ಪೂನ್ ಮೆಣಸಿನ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ತೆಗೆದುಕೊಳ್ಳಬೇಕು. ಇದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ, ಹಿಟ್ಟು ಗಂಟು ಕಟ್ಟದಂತೆ ನೋಡಿಕೊಳ್ಳಬೇಕು. ಬಳಿಕ ಬೇಯಿಸಿದ ಪಾಸ್ತಾವನ್ನು ಬ್ಯಾಟರ್‌ಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

    ನಂತರ ಸ್ಟವ್‌ ಅನ್ನು ಮಧ್ಯಮ ಉರಿಯಲ್ಲಿಟ್ಟು ಪಾಸ್ತಾವನ್ನು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಬೇಕು. ಪಾಸ್ತಾ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಎಣ್ಣೆಯಲ್ಲಿ ಹುರಿಯಬೇಕು. ಈಗ ಹುರಿದ ಪಾಸ್ತಾವನ್ನು ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಿ.

    ಇನ್ನು ಒಂದು ದೊಡ್ಡ ಬಾಣಲೆಯಲ್ಲಿ 2 ಟೇಬಲ್‌ಸ್ಪೂನ್‌ ಎಣ್ಣೆ ಬಿಸಿ ಮಾಡಿ ಅದಕ್ಕೆ 2 ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸು, ಹೆಚ್ಚಿಕೊಂಡ 2 ಬೆಳ್ಳುಳ್ಳಿ ಎಸಳು ಹಾಗೂ ಶುಂಠಿಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ನಂತರ ಹೆಚ್ಚಿಕೊಂಡ ½ ಈರುಳ್ಳಿ, ½ ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಫ್ರೈ ಮಾಡಬೇಕು. ಇದಕ್ಕೆ 2 ಟೇಬಲ್‌ಸ್ಪೂನ್‌ ಟೊಮೆಟೊ ಸಾಸ್, 2 ಟೇಬಲ್‌ಸ್ಪೂನ್‌ ವಿನೆಗರ್, 2 ಟೇಬಲ್‌ಸ್ಪೂನ್‌ ಸೋಯಾ ಸಾಸ್, ½ ಟೀಸ್ಪೂನ್ ಮೆಣಸಿನ ಪುಡಿ, ½ ಟೀಸ್ಪೂನ್ ಮೆಣಸಿನ ಪುಡಿ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಬೇಕು.

    ಮುಂದೆ ಸ್ಲರಿ ತಯಾರಿಸಲು, 1 ಚಮಚ ಕಾರ್ನ್ ಫ್ಲೋರ್ ಅನ್ನು ಅರ್ಧ ಕಪ್ ನೀರಿನಲ್ಲಿ ಮಿಶ್ರಣ ಮಾಡಬೇಕು. ಸ್ಲರಿ ಹೊಳಪು ಬರುವವರೆಗೆ ಬೇಯಿಸಿಕೊಳ್ಳಬೇಕು. ನಂತರ ಹುರಿದ ಪಾಸ್ತಾ, ಹೆಚ್ಚಿಕೊಂಡ ಎಲೆಕೋಸು, ½ ಕ್ಯಾರೆಟ್ ಮತ್ತು ಸ್ಪಲ್ಪ ಸ್ಪ್ರಿಂಗ್ ಆನಿಯನ್ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಬೇಕು. ಇದಕ್ಕೆ ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ ಹಾಗೂ ಸ್ಪ್ರಿಂಗ್ ಆನಿಯನ್‌ ಹಾಕಿ ಅಲಂಕರಿಸಬಹುದು. ಈಗ ಟೇಸ್ಟಿ ಹಾಗೂ ಸ್ಪೈಸಿ ಚೈನೀಸ್‌ ಪಾಸ್ತಾ ಮಂಚೂರಿಯನ್ನು ಸವಿಯಲು ರೆಡಿ.

  • ಊಟ ಚೆನ್ನಾಗಿಲ್ಲ ಎಂದು ದೂರಿದ್ದಕ್ಕೆ ಮುಖದ ಮೇಲೆ ಬಿಸಿ ಎಣ್ಣೆ ಎರಚಿದ

    ಊಟ ಚೆನ್ನಾಗಿಲ್ಲ ಎಂದು ದೂರಿದ್ದಕ್ಕೆ ಮುಖದ ಮೇಲೆ ಬಿಸಿ ಎಣ್ಣೆ ಎರಚಿದ

    ಮುಂಬೈ: ಚೈನೀಸ್ ಉಪಹಾರ ಗೃಹದಲ್ಲಿ ನೀಡಿದ ಊಟದ ರುಚಿ ಹಾಗೂ ಅದರ ಬೆಲೆಯ ವಿಚಾರವಾಗಿ ಮಾಲೀಕ ಮತ್ತು ಗ್ರಾಹಕನ ನಡುವೆ ವಾಗ್ವಾದ ನಡೆದು, ಅಲ್ಲಿನ ಸಿಬ್ಬಂದಿ ಗ್ರಾಹಕನ ಸಹೋದರನ ಮೇಲೆ ಬಿಸಿ ಎಣ್ಣೆ ಎರಚಿರುವ ಘಟನೆ ಮುಂಬೈನ ಉಲ್ಲಾಸ್‍ನಗರದ ವೀನಸ್ ಚೌಕ್‍ನಲ್ಲಿ ನಡೆದಿದೆ.

    ಇಲ್ಲಿನ ಮನೋಜ್ ಕೋಳಿವಾಡಾ ಚೈನೀಸ್ ಕಾರ್ನರ್ ಸಿಬ್ಬಂದಿ ದೀಪಕ್ ಎಂಬವರ ಮೇಲೆ ಬಿಸಿಯಾದ ಎಣ್ಣೆ ಎರಚಿದ್ದಾರೆ. ಪರಿಣಾಮ ದೀಪಕ್‍ಗೆ ಸುಟ್ಟ ಗಾಯಗಳಾಗಿವೆ.

    ಏನಿದು ಘಟನೆ: ಮಂಗಳವಾರ ರಾತ್ರಿ ಸುಮಾರು 11.30ರ ವೇಳೆಯಲ್ಲಿ ವಿಕ್ಕಿ ಮಾಸ್ಕೆ ತನ್ನ ಮೂವರು ಸ್ನೇಹಿತರೊಂದಿಗೆ ಊಟಕ್ಕೆಂದು ಹೋಗಿದ್ದರು. ಊಟ ಮುಗಿಸಿದ ನಂತರ ವಿಕ್ಕಿ ಮೊದಲು ಊಟದ ರುಚಿಯ ಬಗ್ಗೆ ಮಾಲೀಕನಿಗೆ ದೂರಿದ್ದರು. ನಂತರ ಬಿಲ್ ವಿಷಯವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ನಂತರ ವಿಕ್ಕಿ ತನ್ನ ಸಹೋದರ ದೀಪಕ್ ಮಾಸ್ಕೆಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿಯೊಬ್ಬ ದೀಪಕ್ ಮುಖದ ಮೇಲೆ ಬಿಸಿ ಎಣೆ ಎರಚಿದ್ದಾನೆ. ದೀಪಕ್ ಸ್ನೇಹಿತ ವಿಜಯ್ ಪಗಾರೆ ಎಂಬವರಿಗೂ ಹೊಟ್ಟೆಯ ಮೇಲೆ ಸುಟ್ಟ ಗಾಯಗಳಾಗಿದೆ. ಕೂಡಲೇ ಇಬ್ಬರನ್ನೂ ಉಲ್ಲಾಸ್‍ನಗರದ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವಿಠಲ್‍ವಾಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಉಪಹಾರ ಗೃಹದ ಮಾಲೀಕನ ವಿರುದ್ಧ ಹಾಗೂ ಸಿಬ್ಬಂದಿಯ ವಿರುದ್ಧ ಐಪಿಸಿ ಸೆಕ್ಷನ್ 323, 324, 504 ಹಾಗೂ 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯನ್ನು ವಶಪಡಿಸಿಕೊಂಡಿದ್ದೇವೆ. ಸಂತ್ರಸ್ತ ವ್ಯಕ್ತಿಯ ಮೇಲೆ ಬಿಸಿ ಎಣ್ಣೆ ಎರಚಿರುವುದನ್ನ ವಿಡಿಯೋದಲ್ಲಿ ಕಾಣಬಹುದು ಎಂದು ಪೊಲೀಸರು ಹೇಳಿದ್ದಾರೆ.

  • ಬೆಂಗ್ಳೂರಿನ ಶಾಲೆಯಲ್ಲಿ ಚೀನಾ ನ್ಯೂ ಇಯರ್ ಆಚರಣೆ- ಚೀನಾ ಬಟ್ಟೆ ಹಾಕ್ಬೇಕು, ಚೈನೀಸ್ ಫುಡ್ ತರ್ಬೇಕೆಂದು ಮಕ್ಕಳಿಗೆ ಆದೇಶ

    ಬೆಂಗ್ಳೂರಿನ ಶಾಲೆಯಲ್ಲಿ ಚೀನಾ ನ್ಯೂ ಇಯರ್ ಆಚರಣೆ- ಚೀನಾ ಬಟ್ಟೆ ಹಾಕ್ಬೇಕು, ಚೈನೀಸ್ ಫುಡ್ ತರ್ಬೇಕೆಂದು ಮಕ್ಕಳಿಗೆ ಆದೇಶ

    ಬೆಂಗಳೂರು: ಸಿಕ್ಕಿಂ ಗಡಿಯಲ್ಲಿ ಚೀನಾ ಗಡಿಕ್ಯಾತೆ ಮುಂದುವರಿಸುತ್ತಲೇ ಇದೆ. ಅಲ್ಲದೇ ಇಡೀ ದೇಶವೇ ಚೀನಾದ ವಿರುದ್ಧ ತಿರುಗಿಬಿದ್ದಿದೆ. ಆದ್ರೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್‍ಗೆ ಮಾತ್ರ ಚೀನಾ ಮೇಲೆ ಎಲ್ಲಿಲ್ಲದ ಪ್ರೀತಿ.

    ಶುಕ್ರವಾರ ಚೀನಾ ನ್ಯೂ ಇಯರ್ ಸೆಲೆಬ್ರೇಷನ್‍ಗಾಗಿ ಮಕ್ಕಳಿಗೆ ಚೀನಾ ಡ್ರೆಸ್ ಹಾಕಿಕೊಂಡು ಬರಬೇಕೆಂದು ಹೇಳಿದೆ. ಅಷ್ಟೇ ಅಲ್ಲದೇ ಊಟಕ್ಕೆ ನೂಡಲ್ಸ್, ಫ್ರೈಡ್ ರೈಸ್, ಮಂಚೂರಿಯಂತಹ ಚೈನೀಸ್ ಫುಡ್ ತರಬೇಕು ಎಂದು ಆಗಸ್ಟ್ ಮೂರನೇ ತಾರೀಕಿನಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ಸುತ್ತೋಲೆ ಹೊರಡಿಸಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಉತ್ತರ ವಲಯ 4 ಬಿಇಓ ನಾರಾಯಣ, ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ನಾಳಿನ ಚೀನಾ ನ್ಯೂ ಇಯರ್ ಕ್ರಾರ್ಯಕ್ರಮವನ್ನ ರದ್ದು ಮಾಡಿಸ್ತೀವಿ. ಕಾರ್ಯಕ್ರಮ ನಡೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ಗೊತ್ತಾಗಿದೆ. ಶಾಲೆ ಹೊರಡಿಸಿರುವ ಸುತ್ತೋಲೆ ಗಮನಿಸಿದ್ದೇನೆ. ಕೂಡಲೇ ಕಾರ್ಯಕ್ರಮವನ್ನು ರದ್ದು ಮಾಡಿಸ್ತೀನಿ ಅಂತ ಹೇಳಿದ್ರು.