Tag: chilly

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಡಿಕೇರಿ ಮಂಜು

    ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಒಂದು ತಿಂಗಳಿನಿಂದ ಎಡೆಬಿಡದೆ ಮಳೆ ಸುರೊಯುತ್ತಿದೆ.  ವರುಣ ದೇವನ ಆರ್ಭಟ ಸ್ವಲ್ಪ ಪ್ರಮಾಣದಲ್ಲಿ  ಕಡಿಮೆಯಾಗಿದ್ದು, ಕರ್ನಾಟಕದ ಕಾಶ್ಮೀರ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಮಲೆನಾಡಿನ ವಾತಾವರಣವನ್ನು ಅನುಭವಿಸಬೇಕು ಎಂದು ಪ್ಲಾನ್ ಮಾಡುವರು ಮಡಿಕೇರಿ ಸುತ್ತಮುತ್ತದ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಇನ್ನು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಇಬ್ಬನಿಯ ಸಿಂಚನದಲ್ಲಿ ಮನಸೋಲುತ್ತಿದ್ದಾರೆ. ಟ್ರಾಫಿಕ್, ಧೂಳಿನ ನಡುವೆ ಇದ್ದವರು ಮನತಣಿಸುವ ತಂಪಾದ ಪರಿಸರಕ್ಕೆ ಮೂಕವಿಸ್ಮಿತರಾಗುತ್ತಿದ್ದಾರೆ.

    ವೀಕೆಂಡ್‍ಗಳಲ್ಲಂತೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮಂಜಿನ ವೈಭವದಿಂದ ಭೂಲೋಕದಲ್ಲಿ ಸ್ವರ್ಗ ಸೃಷ್ಠಿಯಾದಂತೆ ಭಾಸವಾಗುತ್ತಿದೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ.

    ಮಂಜಿನ ಕಣ್ಣಾಮುಚ್ಚಾಲೆ, ಮಳೆಯ ಅರ್ಭಟ, ಮೈಕೊರೆಯುವ ಚಳಿ, ಜೊತೆಗೆ ಅಬ್ಬರಿಸುವ ಗಾಳಿಗೆ ಕೂರ್ಗ್ ಸ್ಪೆಷಲ್ ಟೇಸ್ಟಿ ಕಾಫಿ ಹಿತ ಅನುಭವ ನೀಡುತ್ತಿದ್ದು ಟೂರಿಸ್ಟ್ ಗಳು ಇವೆಲ್ಲದಕ್ಕೆ ಮನಸೋಲ್ತಿದ್ದಾರೆ. ಬೆಟ್ಟ ಪ್ರದೇಶಗಳಾದ ಮಾಂದಲ್ ಪಟ್ಟಿಯಲ್ಲಂತೂ ಮಂಜಿನ ಮಾಯಲೋಕ ಸೃಷ್ಠಿಯಾಗಿದೆ. ಗಿರಿಕಂದಕಗಳ ನಡುವೆ ಮಂಜಿನ ಥಕಧಿಮಿತ ನೋಡಲು 2 ಕಣ್ಣುಗಳು ಕೂಡ ಸಾಲುತ್ತಿಲ್ಲ. ಮಂಜಿನ ಸ್ಪರ್ಶ ಸವಿಯುತ್ತ ಎಂಜಾಯ್ ಮಾಡುವ ಪ್ರವಾಸಿಗರಿಗೆ ಕೊಡಗಿನಿಂದ ಹೋಗಲು ಮನಸೇ ಬರ್ತಿಲ್ಲ ಅಂತಾ ಹೇಳುತ್ತಿದ್ದಾರೆ.

    ಒಟ್ಟಾರೆಯಾಗಿ ಮಂಜಿನ ನಗರಿ ಪ್ರವಾಸಿಗರನ್ನು ಒಂದೆಡೆ ಸೆಳೆಯುತ್ತಿದ್ರೆ. ಅಬ್ಬರಿಸಿ ಬೊಬ್ಬರೆಯುತ್ತಿರುವ ಮಳೆಯಿಂದ ಕೊಡಗಿನ ಜನ ಮಾತ್ರ ತತ್ತರಗೊಂಡಿದ್ದಾರೆ. ಮನತಣಿಸುವ ಮಂಜಿಗೆ ಪ್ರವಾಸಿಗರು ಈಗಾಗ್ಲೇ ಮನಸೋತಿದ್ದಾರೆ. ಕೊಡಗನ್ನು ಮತ್ತೇ ಮತ್ತೇ ನೋಡಬೇಕಾನುವ ಮಟ್ಟಿಗೆ ಮಂಜಿನ ಲೋಕ ಹುಚ್ಚು ಹಿಡಿಸಿದೆ. ಮಳೆಗಾಲದಲ್ಲಿ ಕಂಗೊಳಿಸುವ ಶ್ವೇತಸುಂದರಿ ಇಡೀ ಕೊಡಗನ್ನು ಆವರಿಸಿ ಹಿತವಾದ ಅನುಭವ ನೀಡ್ತಿದ್ದು ಪ್ರವಾಸಿಗರು ಟೆನ್ಷನ್ ಮರೆತು ರಿಫ್ರೆಶ್ ಆಗುತ್ತಿದ್ದಾರೆ. ನೀವು ಕೂಡ ಕೊಡಗಿಗೊಮ್ಮೆ ಆಗಮಿಸಿ ಸೂಪರ್ ವೆದರ್ ನ ಫೀಲ್ ಮಾಡಿ.

  • 68 ಸೆಕೆಂಡ್‍ನಲ್ಲಿ 50 ಮೆಣಸಿನಕಾಯಿ ತಿಂದ ಚೀನಾದ ಶೂರ!

    68 ಸೆಕೆಂಡ್‍ನಲ್ಲಿ 50 ಮೆಣಸಿನಕಾಯಿ ತಿಂದ ಚೀನಾದ ಶೂರ!

    ಬೀಜಿಂಗ್: ಚೀನಾದಲ್ಲಿ ನಡೆದ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯಲ್ಲಿ ಯುವಕನೊಬ್ಬ ಒಂದು ನಿಮಿಷದಲ್ಲಿ ಸುಮಾರು 50 ಮೆಣಸಿನಕಾಯಿ ತಿಂದು ಗೆಲುವನ್ನು ಸಾಧಿಸಿದ್ದಾನೆ.

    ಟ್ಯಾಂಗ್ ಶುಯಿಹುಯಿ ಸ್ಪರ್ಧೆ ಗೆದ್ದ ಸ್ಥಳೀಯ ಯುವಕ. ನಿಂಗ್ಕ್ಸಿಯಾಂಗ್‍ನ ಕೌಂಟೀಯ ಸ್ಥಳೀಯ ಉದ್ಯಾನವನದಲ್ಲಿ ನಡೆದ ಎರಡನೇ ವರ್ಷದ ವಾರ್ಷಿಕ ಕಾರ್ಯಕ್ರಮದಲ್ಲಿ ಮೆಣಸು ತಿನ್ನುವ ಸ್ಪರ್ಧೆಯಲ್ಲಿ ಗೆದ್ದು ಟ್ಯಾಂಗ್ 3 ಗ್ರಾಂ ಚಿನ್ನದ ನಾಣ್ಯವನ್ನು ತನ್ನದಾಗಿಸಿಕೊಂಡನು.

    ಸ್ಪರ್ಧೆಯನ್ನು ವೈದ್ಯರ ಸಮ್ಮುಖದಲ್ಲಿ, ಪ್ರತಿ ಸ್ಪರ್ಧಿಗಳಿಗೆ ತಲಾ 50 ಟಬಾಸ್ಕೋ ಮೆಣಸಿನಕಾಯಿಗಳನ್ನು ಪ್ಲೇಟ್‍ನಲ್ಲಿ ಕೊಟ್ಟಿದ್ದರು. ಯಾರು ಮೊದಲು ಎಲ್ಲವನ್ನು ತಿಂದು ಮುಗಿಸುತ್ತಾರೋ ಅವರು ಜಯಶಾಲಿಯಾಗುತ್ತಾರೆ ಎಂದು ಘೋಷಿಸಲಾಗಿತ್ತು.

    ಬರೋಬ್ಬರಿ ಮೂರು ಟನ್‍ಗಳಷ್ಟು ತೇಲುತ್ತಿದ್ದ ಮೆಣಸಿನಕಾಯಿಗಳ ಕೊಳದಲ್ಲಿ ಸ್ಪರ್ಧಿಗಳು ಕುಳಿತು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಟ್ಯಾಂಗ್ ಕೇವಲ 68 ಸೆಕೆಂಡ್‍ಗಳಲ್ಲಿ ಪೂರ್ತಿ ಪ್ಲೇಟ್ ಕಾಲಿ ಮಾಡಿದ್ದಾನೆ.  ದಾಖಲೆಯ ವೇಗದಲ್ಲಿ ಸ್ಪರ್ಧೆಯನ್ನು ಟ್ಯಾಂಗ್ ಮುಗಿಸಿದ್ದಾನೆ ಎಂದು ತಾನ್ಹೆ ಉದ್ಯಾನವನದ ಸಿಬ್ಬಂದಿ ಸನ್ ಮಿನಿಯಾಂಗ್ ಹೇಳಿದರು.

    ಮೆಣಸಿನ ಖಾರವನ್ನು ಅಳೆಯುವ ಮಾಪನವಾದ ಸ್ಕೋವಿಲ್ಲೆಯಲ್ಲಿ ಈ ಮೆಣಸಿನಕಾಯಿ 30,000- 50,000 ಹೀಟ್ ಯೂನಿಟ್ ಹೊಂದಿದೆ. ಸ್ಪರ್ಧಿಗಳಿಗೆ ತೊಂದರೆ ಆಗಬಾರದು, ಸ್ಪರ್ಧಿಗಳ ಚರ್ಮಕ್ಕೆ ಯಾವುದೇ ಹಾನಿ ಆಗಬಾರದು ಎಂದು ಕಡಿಮೆ ಗುಣಮಟ್ಟದ ಮೆಣಸುಗಳನ್ನು ಕೊಳದಲ್ಲಿ ಹಾಕಲಾಗಿತ್ತು.

    ಹುನಾನ್ ಕಸೀನ್ ಮಾರುಕಟ್ಟೆಯ ಮೆಣಸಿನಕಾಯಿಗಳನ್ನು ಚೀನಾದ 8 ವಿವಿಧ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಸಿಚೌನ್, ಕ್ಯಾಂಟೋನಿಸ್ ಸೇರಿದಂತೆ ಹಲವು ಆಹಾರ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಈ ಮೆಣಸಿನಕಾಯಿಗಳು ಗುಣಮಟ್ಟತೆಯನ್ನು ಹೊಂದುವದರ ಜೊತೆಗೆ ಬಣ್ಣವನ್ನು ಸಹ ಹೊಂದಿರುತ್ತವೆ.

    ಈ ಉತ್ಸವವು ಆಗಸ್ಟ್ ತಿಂಗಳ ಅಂತ್ಯದವರೆಗೂ ನಡೆಯಲಿದ್ದು, ಪ್ರತಿ ದಿನವು ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗುತ್ತದೆ.

  • ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    ಮೆಣಸಿನಕಾಯಿ ಬೆಲೆ ಕುಸಿತ: ನಷ್ಟದಲ್ಲಿ ರಾಯಚೂರು ರೈತರು

    -ಎಕರೆಗೆ 30 ಸಾವಿರ ರೂಪಾಯಿ ನಷ್ಟ

    -ಮಳೆ, ನೀರಿಲ್ಲದೆ ಇಳುವರಿ ಕುಂಠಿತ

    ರಾಯಚೂರು: ಜಿಲ್ಲೆಯ ಸಾವಿರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದ ರೈತರಿಗೆ ಈ ಬಾರಿ ಖಾರ ತಟ್ಟಿದೆ. ನದಿ, ಕಾಲುವೆಗಳಲ್ಲಿ ನೀರು ಬತ್ತಿರುವುದು ಒಂದೆಡೆಯಾದ್ರೆ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ದೊಡ್ಡ ಹೊಡೆತ ನೀಡಿದೆ. ಪ್ರತಿಯೊಬ್ಬ ರೈತ ಕೂಡ ಲಕ್ಷಾಂತರ ರೂಪಾಯಿ ನಷ್ಟ ಹೊಂದಿ ಬೀದಿಗೆ ಬಂದಿದ್ದಾನೆ.

    ರಾಯಚೂರು ಜಿಲ್ಲೆಯ ಜೀವಜಲದ ಮೂಲಗಳಾದ ತುಂಗಾಭದ್ರ, ಕೃಷ್ಣ ನದಿಗಳು ಈಗ ರೈತರನ್ನ ಕೈ ಬಿಟ್ಟಿವೆ. ಇನ್ನು ಅಂತರ್ಜಲದ ಮಟ್ಟ ಕೂಡ ಕುಸಿಯುತ್ತಿದೆ. ಹೀಗಾಗಿ ಜಿಲ್ಲೆಯ ಸುಮಾರು 60 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆಗೆ ನೀರಿಲ್ಲದೆ ಇಳುವರಿ ಕುಗ್ಗಿದೆ. ಪ್ರತೀ ವರ್ಷ ಎಕರೆಗೆ 25 ರಿಂದ 30 ಕ್ವಿಂಟಾಲ್‍ನಷ್ಟು ಬರುತ್ತಿದ್ದ ಬೆಳೆ ಈ ವರ್ಷ ಕೇವಲ 10 ರಿಂದ 13 ಕ್ವಿಂಟಾಲ್ ಬಂದಿದೆ. ಅಲ್ಲಿಗೆ ಎಕರೆಗೆ ಒಂದು ಲಕ್ಷದ ರೂ.ವರೆಗೆ ಖರ್ಚು ಮಾಡಿರುವ ರೈತರಿಗೆ ಎಕರೆಗೆ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿದೆ.

    ಮಾರುಕಟ್ಟೆಯಲ್ಲಿ ಕ್ವಿಂಟಾಲ್‍ಗೆ 12 ಸಾವಿರ ರೂಪಾಯಿಯಿದ್ದ ಬೆಲೆ ಈಗ 3 ರಿಂದ 5 ಸಾವಿರ ರೂಪಾಯಿಯಿದೆ. ಅಂದ್ರೆ ಪ್ರತಿ ಕ್ವಿಂಟಾಲ್‍ಗೆ ಸುಮಾರು 7 ಸಾವಿರ ರೂಪಾಯಿ ಇಳಿದಿದೆ. ಒಂದೆಡೆ ಮಳೆ ಕೈಕೊಟ್ಟರೆ, ಮತ್ತೊಂದೆಡೆ ಬೋರ್‍ವೆಲ್‍ನಿಂದ ನೀರು ಹಾಯಿಸಲು ರೈತರಿಗೆ ವಿದ್ಯುತ್ ಸಮಸ್ಯೆ ಕೂಡ ಇದೆ.

    ಕಳೆದ ಎಂಟತ್ತು ವರ್ಷಗಳಲ್ಲಿ ಅನುಭವಿಸದ ನಷ್ಟವನ್ನ ಮೆಣಸಿನಕಾಯಿ ಬೆಳೆಗಾರರು ಈ ವರ್ಷ ಅನುಭವಿಸಿದ್ದಾರೆ. ಬೆಲೆ ಪಾತಾಳಕ್ಕೆ ಕುಸಿದಿದ್ದರೂ ಸರ್ಕಾರ ಇದುವರೆಗೂ ಬೆಂಬಲ ಬೆಲೆ ಘೋಷಿಸಿಲ್ಲ. ಅಲ್ಲದೆ ಇತ್ತೀಚಿಗೆ ಸುರಿದ ಮಳೆಗೆ ಒಣಗಲು ಬಿಟ್ಟಿದ್ದ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಹೀಗಾಗಿ ಮೆಣಸಿನಕಾಯಿ ಸಂಗ್ರಹಕ್ಕೆ ಗೋದಾಮುಗಳ ವ್ಯವಸ್ಥೆ ಮಾಡಬೇಕು ಹಾಗೂ ಬೆಳೆ ನಷ್ಟ ಪರಿಹಾರ ನೀಡಬೇಕು ಅಂತ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಒಟ್ನಲ್ಲಿ, ಬರಗಾಲದ ನಡುವೆಯೂ ಅಷ್ಟೋ ಇಷ್ಟೋ ಲಾಭದ ನಿರೀಕ್ಷೆಯಲ್ಲಿದ್ದ ಮೆಣಸಿನಕಾಯಿ ಬೆಳೆಗಾರರು ಭಾರೀ ನಷ್ಟವನ್ನೇ ಅನುಭವಿಸಿದ್ದಾರೆ. ಈಗಲಾದ್ರೂ ಸರ್ಕಾರ ರೈತರ ಕಡೆ ಗಮನಹರಿಸಬೇಕಿದೆ.